ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಬಾಂಕ್ ಅಧಿಕಾರಿಗಳು ದೌರ್ಜನ್ಯ ವೆಸದಿದ್ದಾರೆ ಎಂದು ಆರೋಪಿಸಲಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಬಸ್ರೂರು ನಿವಾಸಿ ದಿನೇಶ್ ಎಂಬುವವರು ಮೇಲೆ ಅಲ್ಲಿನ ಕೆನರಾ ಬ್ಯಾಂಕ್ ಅಧಿಕಾರಿ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಮೀನು ವ್ಯಾಪಾರಿಯಾಗಿರುವ ದಿನೇಶ್ ಅವರು 2006ರಲ್ಲಿ ಕೆನರಾ ಬ್ಯಾಂಕ್‌ನಲ್ಲಿ ತಮ್ಮ ಮನೆಯ ದಾಖಲೆಗಳನ್ನು ಅಡವಿಟ್ಟು 11 ಲಕ್ಷ ಸಾಲವನ್ನು ಪಡೆದುಕೊಂಡಿದ್ದರು. 2006ರಿಂದ ನಿರಂತರವಾಗಿ ಸಮಯಕ್ಕೆ ಸರಿಯಾಗಿ ಸಾಲದ ಕಂತು ಮತ್ತು ಬಡ್ಡಿಯನ್ನು ಕಟ್ಟುತ್ತಿದ್ದರು. 2020ರಲ್ಲಿ ಕೊರೊನಾ ಆಕ್ರಮಣದಿಂದಾಗಿ ಆರ್ಥಿಕ ಹೊರೆಯಿಂದ ಸಾಲದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಸಾಲ ನವೀಕರಣ ಮಾಡುವಂತೆ ಬ್ಯಾಂಕ್‌ಗೆ ಮನವಿ ಮಾಡಿದ್ದರು. ಆದರೂ, ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ, ಯಾವುದೇ ಮುನ್ಸೂಚನೆ ನೀಡದೆ, ಬ್ಯಾಂಕ್ ಆಧಿಕಾರಿಗಳು ದಿನೇಶ್ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಈದಿನ.ಕಾಮ್ ಜೊತೆ ಮಾತನಾಡಿದ ಸಂತ್ರಸ್ತ ದಿನೇಶ್, “2006ರಿಂದ ನಿರಂತವಾಗಿ ಕ್ರಮಬದ್ಧವಾಗಿ ಸಾಲದ ಕಂತು ಕಟ್ಟಿದ್ಧೇನೆ. ಆದರೆ, ಕೊರೊನಾ ಸಮಯದಲ್ಲಿ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಉಳಿದಿದ್ದ ಸಾಲವನ್ನು ನವೀಕರಣ ಮಾಡಿಕೊಡುವಂತೆ ಬ್ಯಾಂಕ್‌ಗೆ ಮನವಿ ಸಲ್ಲಿಸಿದ್ದೆ ಅದರೆ, ಅವರು ಮಾಡಿಕೊಡಲಿಲ್ಲ. ಈಗ ನೋಡಿದರೆ, ಕಾನೂನು ಪ್ರಕಾರ ನಮ್ಮ ಮನೆಗೆ ನೋಟೀಸ್ ಹಚ್ಚಲು ಬಂದಿದ್ದಾರೆ. ಆದರೆ ನಾವು ಅವರಿಗೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ. ವಿಚಾರಣೆಗೆ ಕೋರ್ಟ್‌ಗೆ ಹೋದಾಗ, ಅಧಿಕಾರಿಗಳು ನಮ್ಮ ವಿರುದ್ಧವೇ ಜಾತಿ ನಿಂದನೆ ಆರೋಪ ಮಾಡಿದ್ದಾರೆ” ಎಂದು ಅಳಲು ತೋಡಿಕೊಂಡರು.

ದಿನೇಶ್ ಮೇಲಿನ ದೌರ್ಜನ್ಯದ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅಮೃತ್ ಶೆಣೈ, “ದೇಶದ ಕಾನೂನಿನಲ್ಲಿ ‘ಸರ್ಫೇಸಿ ಅಕ್ಟ್’ ಇದೆ. ಅದರ ಮೂಲಕ ಸಾಲವು ಮರುಪಾವತಿ ಆಗಬೇಕು ಮತ್ತು ಸಾಲಗಾರರಿಗೂ ತೊಂದರೆ ಆಗಬಾರದು. ಆತನಿಗೂ ಬೇಕಾದಷ್ಟು ಅವಕಾಶಗಳು ಸಿಗಬೇಕು. ಆದರೆ, ದಿನೇಶ್ ಅವರು ದಲಿತ ಅನ್ನೊ ಕಾರಣಕ್ಕೆ ಕೆನರಾ ಬ್ಯಾಂಕ್ ಅಧಿಕಾರಿಗಳು ದೌರ್ಜನ್ಯ ಮಾಡುತ್ತಿದ್ದಾರೆ. ದಲಿತ ಎನ್ನುವ ಕಾರಣಕ್ಕೆ ಯಾವುದೇ ನೋಟೀಸ್ ಕೊಡದೆ, ನೇರವಾಗಿ ಕೋರ್ಟ್‌ಗೆ ಕರೆದಿದ್ದಾರೆ. ಕೋರ್ಟ್‌ನಲ್ಲಿ ನ್ಯಾಯಾಧೀಶರು ಕೇಳಿದಾಗ, ಅಧಿಕಾರಿಗಳು ಉಲ್ಟಾ ಹೊಡೆದಿದ್ದಾರೆ. ‘ದಿನೇಶ್ ಅವರೇ ಅಟ್ರಾಸಿಟಿ ಕೇಸು ದಾಖಲಿಸುತ್ತೇನೆಂದು ನಮಗೆ ಬೆದರಿಸಿದರು. ಹಾಗಾಗಿ, ಮನೆಗೆ ಹೋಗಿಲ್ಲ’ವೆಂದು ಕತೆ ಕಟ್ಟಿದ್ದಾರೆ. ಒಬ್ಬ ವ್ಯಕ್ತಿಯ ಜಾತಿಯ ಕಾರಣಕ್ಕಾಗಿ ಹೀಗೆ ನಡೆದುಕೊಳ್ಳಲಾಗಿದೆ. ಇದು ದಲಿತ ದೌರ್ಜನ್ಯವಾಗಿದೆ. ದಿನೇಶ್‌ಗೆ ನ್ಯಾಯ ದೊರೆಯಬೇಕು” ಎಂದು ಆಗ್ರಹಿಸಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ನರೇಂದ್ರ ಬಾಬು, “ದಿನೇಶ್ ಮೇಲಿನ ದೌರ್ಜನ್ಯದ ಬಗ್ಗೆ ಗೃಹ ಸಚಿವರು ಮತ್ತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದಿದ್ದು, ದೂರು ನೀಡಿದ್ದೇವೆ. ದಿನೇಶ್ ಅವರಿಗೆ ಆದ ಅನ್ಯಾಯವು ‘ಸರ್ಫೇಸಿ ಆಕ್ಟ್’ ಅಡಿಯಲ್ಲಿ ಬರುತ್ತದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸಿ ಕೊಡಬೇಕು” ಎಂದರು.
ಪ್ರಕರಣ ಸಂಬಂಧ ಈದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್, “ದಲಿತ ಎಂಬ ಕಾರಣಕ್ಕಾಗಿ ಕೆನರಾ ಬ್ಯಾಂಕ್ ಅಧಿಕಾರಿಗಳು ಸರಿಯಾದ ನಿಯಮಾವಳಿಗಳನ್ನು ಅನುಸರಿಸದೆ, ಅನ್ಯಾಯ ಮಾಡಿದ್ದಾರೆ ಎಂಬ ದೂರು ಬಂದಿದೆ. ಇದರ ಬಗ್ಗೆ ನಾವು ಕಾನೂನಾತ್ಮಕವಾಗಿ ಮಾಹಿತಿ ಪಡೆಯುತ್ತೇವೆ. ಬ್ಯಾಂಕ್ ನಿಯಮಗಳನ್ನು ಮತ್ತು ನ್ಯಾಯಾಲಯ ಯಾವ ತೀರ್ಪು ನೀಡಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.