ಮಹಿಳೆಯ ಮೇಲೆ ಆಕೆಯ ಸ್ನೇಹಿತನೇ ಒಂದು ವಾರ ನಿರಂತರ ಅತ್ಯಾಚಾರ ಎಸಗಿ, ಆಕೆಯ ಮೇಲೆ ಬಿಸಿ ಬೇಳೆ ಸಾರು ಸುರಿದು ಚಿತ್ರಹಿಂಸೆ ನೀಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಸಂತ್ರಸ್ತೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದವರಾಗಿದ್ದು, ನವದೆಹಲಿಯಲ್ಲಿಆರೋಪಿ ಸ್ನೇಹಿತನೊಂದಿಗೆ ಕಳೆದ ಒಂದು ತಿಂಗಳಿನಿಂದ ವಾಸಿಸುತ್ತಿದ್ದರು. ಕಳೆದ ಒಂದು ವಾರದಿಂದ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಆರೋಪಿ ಕಾಮುಕ, ಆಕೆಗೆ ಚಿತ್ರಹಿಂಸೆ ನೀಡಿದ್ದಾನೆ. ಆಕೆಯ ದೇಹದ ಮೇಲೆ 20ಕ್ಕೂ ಹೆಚ್ಚು ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
28 ವರ್ಷದ ಆರೋಪಿ ಪರಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಅತ್ಯಾಚಾರ, ಕಿರುಕುಳ, ಹಲ್ಲೆ ಆರೋಪಗಳ ಮೇಲೆ ಐಪಿಸಿ ಸೆಕ್ಷನ್ 323, 376, ಮತ್ತು 37 ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಮಹಿಳೆಗೆ ಆರೋಪಿ ಪರಾಸ್ ನಾಲ್ಕು ತಿಂಗಳ ಹಿಂದೆ ಪರಿಚಿತನಾಗಿದ್ದ. ದಕ್ಷಿಣ ದೆಹಲಿಯ ನೆಬ್ ಸರೈ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಕಳೆದ ಒಂದು ತಿಂಗಳಿನಿಂದ ಮಹಿಳೆ ಪರಾಸ್‌ನೊಂದಿಗೆ ವಾಸಿಸುತ್ತಿದ್ದರು.
ಜನವರಿ 30ರಂದು ತನ್ನ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಮಹಿಳೆ ನೆಬ್ ಸರೈ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಮಹಿಳೆಯನ್ನು ರಕ್ಷಿಸಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದೆ.
“ಜನವರಿ ಆರಂಭದಲ್ಲಿ ಮನೆಗೆಲಸದ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಲು ನಿರ್ಧರಿಸಿದ್ದೆ. ಉದ್ಯೋಗವನ್ನು ಹುಡುಕಲು ಪರಾಸ್ ನೆರವು ನೀಡಿದ್ದ. ಹೀಗಾಗಿ, ಆತನನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದೆ. ಆತನ ದೆಹಲಿಯಲ್ಲಿಯೇ ಉಳಿಯುವಂತೆ ಒತ್ತಾಯಿಸಿದ್ದ. ಕಾಲಾನಂತರ, ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿ ಕೂಡಿ ಹಾಕಿದ್ದ” ಎಂದು ಸಂತ್ರಸ್ತೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.