ದಾವಣಗೆರೆ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ಬೇಸಿಗೆಯ ರಣ ಬಿಸಿಲಿನ ಧಗೆ ದಿನೇ ದಿನೆ ಏರುತ್ತಿದ್ದು, ಅದರ ಜೊತೆ ನೀರಿನ ಸಮಸ್ಯೆಯೂ ಹೆಚ್ಚಿದೆ. ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಹೆಚ್ಚು ಬರದಿಂದ ಬಾದಿತವಾಗಿದೆ. ಈ ಭಾಗದ ಜನರ ಜೀವನಾಡಿ ಶಾಂತಿಸಾಗರ (ಸೂಳೆಕೆರೆ) ಕೂಡ ಬರಿದಾಗುತ್ತಿದ್ದು, ನೀರಿನ ಅಭಾವ ಹೆಚ್ಚಾಗಿದೆ.
ಸ್ಥಳೀಯರು ತಮ್ಮ ತೋಟ ಉಳಿಸಿಕೊಳ್ಳಲೂ ಕೆರೆಯ ನೀರಿಗೆ ಮುಗಿಬಿದ್ದಿದ್ದಾರೆ. ಇದರಿಂದ ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ಎಂಬ ಖ್ಯಾತಿಯ ಶಾಂತಿಸಾಗರ ಕೆರೆ ಶೀಘ್ರದಲ್ಲಿ ಬರಿದಾಗುವ ಆತಂಕ ಎದುರಾಗಿದೆ.
ರೈತರು ತೋಟಗಳನ್ನು ಉಳಿಸಿಕೊಳ್ಳಲು ಶಾಂತಿಸಾಗರದ ಹಿನ್ನೀರು ಭಾಗದಲ್ಲಿ ನೂರಾರು ಪಂಪ್‌ಸೆಟ್‌ಗಳನ್ನು ಅಳವಡಿಸಿ, ನಿರಂತರ ತೋಟಗಳಿಗೆ ನೀರು ಹಾಯಿಸುತ್ತಿದ್ದಾರೆ. ಅಂತರ್ಜಲ ಕುಸಿದು, ಕೊಳವೆಬಾವಿಗಳು ಬರಿದಾಗಿರುವ ರೈತರು ಈ ಕೆರೆಯ ನೀರನ್ನೇ ಅವಲಂಭಿಸುವುದು ಅನಿವಾರ್ಯವಾಗಿದೆ. ಲಕ್ಷಾಂತರ ರೂ. ಖರ್ಚುಮಾಡಿ ಬೆಳೆದ ತೋಟ ನೀರಿಲ್ಲದೆ ಒಣಗುತ್ತಿರುವುದನ್ನು ನೋಡಲು ಚಿಂತೆಯಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಳ್ಳುವ ಇಲ್ಲಿನ ರೈತರು. ಬೆಳೆ ಉಳಿಸಿಕೊಳ್ಳಲು ರಾತ್ರಿ-ಹಗಲು ಕೆರೆಯಿಂದ ನೀರನ್ನು ಹಾಯಿಸಿಕೊಳ್ಳುತ್ತಿದ್ದಾರೆ.
ಕೊಂಡದಹಳ್ಳಿ, ಹಿರೇಉಡ, ದೇವರಹಳ್ಳಿ, ಚೆನ್ನಾಪುರ, ಕಗತೂರು, ಬುಳುಸಾಗರ, ಮಂಟರಘಟ್ಟ, ಹಟ್ಟಿ, ಆಕಳಕಟ್ಟೆ, ಇಟಗಿ, ಚಿಕ್ಕದೇವರಹಳ್ಳಿ, ಬನ್ನಿಹಟ್ಟಿ, ಗುಳ್ಳಳ್ಳಿ ಗ್ರಾಮಗಳ ಸುಮಾರು 200 ಪಂಪ್‌ಸೆಟ್‌ಗಳು ಕೆರೆಯ ಹಿನ್ನೀರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇರುವ ಕೊಳವೆಬಾವಿಗಳು ಬತ್ತಿವೆ. ಹೊಸದಾಗಿ ಕೊರೆಯಿಸಿರುವ ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ. ಕೆರೆಯ ಹಿನ್ನೀರಿಗೆ ಮೋಟಾರ್ ಅಳವಡಿಸಿಕೊಂಡು ತೋಟ ಉಳಿಸಿಕೊಳ್ಳುತ್ತಿದ್ದೇವೆ. ಭದ್ರಾ ನಾಲೆಯ ನೀರನ್ನು ಶಾಂತಿಸಾಗರಕ್ಕೆ ಬಿಟ್ಟರೆ, ಇದರಿಂದ ಕೊಂಚ ನಿರಾತಂಕವಾಗುತ್ತದೆ ಎನ್ನುತ್ತಾರೆ ರೈತರು.
ಸಂತೇಬೆನ್ನೂರು ಸೇರಿದಂತೆ ಚನ್ನಗಿರಿ ತಾಲೂಕಿನ ನೂರಾರು ಗ್ರಾಮಗಳಿಗೆ ಕುಡಿಯುವ ನೀರಿನ ಆಗರ ಈ ಕೆರೆ. ಚಿತ್ರದುರ್ಗ, ಹೊಳಲ್ಕೆರೆ ಭಾಗಗಳಿಗೂ ಇಲ್ಲಿಂದ ಕುಡಿಯುವ ನೀರು ಪೂರೈಕೆಯಾಗುತ್ತದೆ. ಸದ್ಯ ಸಂಗ್ರಹದಲ್ಲಿರುವ ನೀರು 30 ದಿನಗಳಿಗಾಗೂವುದು ಅನುಮಾನ. ಜೂನ್‌ವರೆಗೆ ಕುಡಿಯುವ ನೀರು ಪೂರೈಸಲು 0.54 ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ. ಭದ್ರಾ ನಾಲೆಯಿಂದ ಕೆರೆಗೆ ನೀರು ಹರಿಸಿದರೆ ಕುಡಿಯುವ ನೀರು ಸಿಗಲಿದೆ. ಇಲ್ಲವಾದರೆ ಕುಡಿಯುವ ನೀರಿಗಾಗಿ ತೀವ್ರ ಸಂಕಷ್ಟ ಅನುಭವಿಸುವ ದಿನಗಳು ಎದುರಾಗಲಿವೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಬಿಎನ್ ಲೋಹಿತ್ ಮಾದ್ಯಮದೆದುರು ಆತಂಕ ವ್ಯಕ್ತಪಡಿಸಿದ್ದಾರೆ.