ಕೊನೆ ಭಾಗದ ರೈತರಿಗಾಗಿ ನಾಲೆಗೆ ಭದ್ರಾ ನೀರು ಹರಿಸುವಂತೆ ಆಗ್ರಹಿಸಿ ರೈತ ಮುಖಂಡ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ಅಚ್ಚುಕಟ್ಟಿನ ರೈತರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಾರಿಗನೂರು ಕ್ರಾಸ್ ಮತ್ತು ಕುಕ್ಕವಾಡದಲ್ಲಿ ಖಾಲಿ ನಾಲೆಯಲ್ಲಿ ನಿಂತು ಪ್ರತಿಭಟನೆ ನಡೆಸಿದರು.
ಕಾರಿಗನೂರು ಕ್ರಾಸ್ ಜೆಚ್ ಪಟೇಲ್ ವೃತ್ತದಲ್ಲಿ ಜಮಾಯಿಸಿದ ಕುಕ್ಕವಾಡ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ನಾನಾ ರೈತ ಒಕ್ಕೂಟದ ಕಾರ್ಯಕರ್ತರು, ಅಧಿಕಾರಿಗಳ ವಿರುದ್ಧ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ತೇಜಸ್ವಿ ಪಟೇಲ್, ನೀರು ಹರಿಸಲು ಶುರುವಾಗಿ ನಾಲೈದು ದಿನಗಳಾದರೂ ದಾವಣಗೆರೆ ಎರಡನೇ ಶಾಖಾ ನಾಲೆಗೆ ಒಂದು ಹನಿ ನೀರು ಹರಿದಿಲ್ಲ. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಕೊನೆ ಭಾಗದ ರೈತರಿಗೆ ನೀರು ತಲುಪಿಸುತ್ತೀರಿ ಎನ್ನುವುದು ಯಾವ ಖಾತ್ರಿ, ದಿನೇ ದಿನೇ ರೈತರ ತಾಳ್ಮೆ ಪರೀಕ್ಷಿಸುತ್ತಿದ್ದೀರಿ, ಸಹನೆ ಕಳೆದುಕೊಂಡ ರೈತರ ಪರಿಸ್ಥಿತಿ ಯಾರಿಂದಲೂ ನಿಭಾಯಿಸಲಾಗಲ್ಲ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.
ದಿನದಿನಕ್ಕೂ ಬೆಳೆಗಳು ಒಣಗುತ್ತಿರುವುದು ರೈತರನ್ನು ಮತ್ತಷ್ಟು ಆತಂಕಕ್ಕೆ ನೂಕುತ್ತಿದೆ. ನೀರಾವರಿ ಇಲಾಖೆ, ಜಿಲ್ಲಾಡಳಿತಗಳು ರೈತರ ತಾಳ್ಮೆಯನ್ನು ಮತ್ತಷ್ಟು ಪರೀಕ್ಷಿಸಬಾರದು. ಮಕ್ಕಳಿಗಿಂತಲೂ ಹೆಚ್ಚಾಗಿ ತೋಟಗಳನ್ನು ರೈತರು ನೋಡಿಕೊಂಡು ಬಂದಿದ್ದಾರೆ. ಸಾಲ ಮಾಡಿ, ಕೊಳವೆ ಬಾವಿ ಕೊರೆಸಿದರೂ ಒಂದು ಹನಿ ನೀರು ಸಿಗುತ್ತಿಲ್ಲ. ಈ ಹಿಂದೆ ನೀರು ನೀಡುತ್ತಿದ್ದ ಕೊಳವೆ ಬಾವಿಗಳು ಅಂತರ್ಜಲ ಖಾಲಿಯಾಗಿ ಬರಿದಾಗುತಿಗೆವೆ. ಭದ್ರಾ ನಾಲೆಗೆ ನೀರು ಹರಿಸಿದರೆ ರೈತರ ಈ ಎಲ್ಲಾ ಸಮಸ್ಯೆಗಳು ಒಂದಿಷ್ಟು ಕೊನೆಗಾಣಬಹುದು ಎಂದು ಅವರು ಹೇಳಿದರು. ನೀರಿನ ಸಮಸ್ಯೆಯೆಂಬುದು ಇದ್ದಕ್ಕಿದ್ದಂತೆಯೇ ಸೃಷ್ಟಿಯಾಗುವಂತಹದ್ದಲ್ಲ ಎಂದರು.
ಭದ್ರಾ ಆಣೆಕಟ್ಟೆಯ ನೀರು ಸಂಗ್ರಹ ಅವಲಂಬಿಸಿ, ಲೆಕ್ಕಾಚಾರ ಮಾಡಿಯೇ ಮಳೆಗಾಲ ಮತ್ತು ಬೇಸಿಗೆ ಕಾಲದ ನೀರಾವರಿ ವೇಳಾಪಟ್ಟಿಯನ್ನು ನಿಗದಿಪಡಿಸ ಬೇಕಾಗುತ್ತದೆ. ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರಾವರಿ ಇಲಾಖೆಯ ಇಂಜಿನಿಯರ್‌ಗಳು ಮೌನವಹಿಸಿದ್ದರಿಂದಲೇ ಇಂದು ಆಚ್ಚುಕಟ್ಟು ರೈತರು ಸಂಕಷ್ಟ ಎದುರಿಸುವಂತಾಗಿದೆ, ಆದ್ದರಿಂದ ಕೃಷಿ ಟ್ರಾಕ್ಟರ್ಗಳೊಂದಿಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಮಾತನಾಡಿ, ಸಂವಿಧಾನ ಚೌಕಟ್ಟಿನಲ್ಲಿ ಬೇಡಿಕೆ ಪ್ರಸ್ತಾಪಕ್ಕೆ ಬೆಲೆನೇ ಇಲ್ಲದಂತಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಅರಿವು ಇಲ್ಲದಂತೆ ದಿವ್ಯವೌನಕ್ಕೆ ಶರಣಾಗಿದ್ದಾರೆ. ರೈತರು ಉಗ್ರ ಸ್ವರೂಪದ ಹೋರಾಟ ಮಾಡದಿದ್ದರೆ ನೀರು ನಾಲೆಗೆ ಬರುವುದಿಲ್ಲ ಎಂದರು.
ಉಪಾಧ್ಯಕ್ಷ ಕೆ.ಎನ್.ಮಂಜುನಾಥ್ ಕುಕ್ಕವಾಡ ಮಾತನಾಡಿ, ಕಬ್ಬು ಬೆಳೆಗಾರರ ಸಂಘ, ರೈತರ ಶಾಂತಿಯುತ ಧರಣಿ ದೌರ್ಬಲ್ಯವಲ್ಲ, ಮುಂದಿನ ದಿನಗಳಲ್ಲಿ ಕಾದುನೋಡಿ ಎಂದರು.
ಪ್ರತಿಭಟನೆಯಲ್ಲಿ ಷಣ್ಮುಖಸ್ವಾಮಿ, ಡಿ.ಬಿ.ಅರವಿಂದ್, ಜಿ.ಬಿ.ಜಗದೀಶ್, ಕುಮಾರಸ್ವಾಮಿ ಮುದಹದಡಿ, ದಿಳ್ಳಪ್ಪ, ಜಡಗನಹಳ್ಳಿ ಚಿಕ್ಕಪ್ಪ, ಕಲ್ಲೇಶಪ್ಪ, ಮಂಜುನಾಥ್ ಪಟೇಲ್, ಡಿ.ಮಲ್ಲೇಶಪ್ಪ, ಮಹೇಶ್ವರಪ್ಪ, ಗೋಪಾಲ, ಕಲ್ಲೇಶಪ್ಪ, ಅರವಿಂದ್, ದಿನೇಶ್, ನಿರಂಜನ್ ಮೂರ್ತಿ, ಸಿರಿಗೆರೆ ಪ್ರಭು, ಕಿರಣ್, ಹರೀಶ್, ಜಿ.ಸಿ.ಮಂಜುನಾಥ್, ಗಂಗಾಧರ ಇತರ ರೈತರು ಭಾಗವಹಿಸಿದ್ದರು.