”ಬೆಂಗಳೂರಿನ ಜನತೆ ನೀರಿನ ಸಮಸ್ಯೆ ಬಗ್ಗೆ ಯಾವುದೇ ಆತಂಕ ಪಡುವುದು ಬೇಡ. ಏಕೆಂದರೆ, ನಮ್ಮ ಬಳಿ ಇರುವ ನಾಲ್ಕು ಜಲಾಶಯಗಳಲ್ಲಿ 34 ಟಿಎಂಸಿ ನೀರು ಸಂಗ್ರಹವಿದೆ” ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಹೇಳಿದ್ದಾರೆ.
ಮಾರ್ಚ್ 9ರಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ”ಇತ್ತೀಚೆಗೆ ಕೆಲ ಸುದ್ದಿಗಳು ಹರಿದಾಡುತ್ತಿದೆ. ಅದರಲ್ಲಿ ಕೆಲವು ಸತ್ಯವಾಗಿದ್ದು, ಕೆಲವು ಸುಳ್ಳು ಇರಬಹುದು. ಅದರ ಬಗ್ಗೆ ಸ್ಪಷ್ಟನೆ ಕೊಡಲು ಸುದ್ದಿಗೋಷ್ಠಿ ಕರೆದಿದ್ದೇವೆ” ಎಂದರು.
“ಜನರು ನೀರನ್ನು ಮಿತವ್ಯಯವಾಗಿ ಬಳಸಬೇಕು. ನಗರದಲ್ಲಿರುವ ಹಲವು ಅಪಾರ್ಟ್ಮೆಂಟ್ಗಳು ಬೋರ್‌ವೆಲ್ ನೀರನ್ನೇ ಅವಲಂಬಿಸಿವೆ. ಈ ಅಪಾರ್ಟ್‌ಮೆಂಟ್‌ಗಳು ಕಾವೇರಿ ನೀರು ಅವಲಂಬಿಸಿಲ್ಲ. ಈಗ ಅಂತರ್ಜಲ ಮಟ್ಟ ಕುಸಿದ ಕಾರಣ ಬೋರ್‌ವೆಲ್ ಬತ್ತಿ ಹೋಗಿವೆ. ಇದೀಗ ಕಾವೇರಿ ನೀರಿನ ಮೇಲೆ ಅವಲಂಬಿತವಾಗಿವೆ. ಇದರಿಂದ, ಬೆಂಗಳೂರು ನಗರದ ಹೊರವಲಯದಲ್ಲಿ ಹೆಚ್ಚಾಗಿ ನೀರಿನ ಸಮಸ್ಯೆ ಉಂಟಾಗುತ್ತಿದೆ. ಸದ್ಯ ಅಂತರ್ಜಲ ಮಟ್ಟ ಹೆಚ್ಚಿಸುವುದಕ್ಕೆ ತಜ್ಞರ ಜತೆಗೆ ಚರ್ಚಿಸಿದ್ದೇವೆ” ಎಂದರು.
”ನಮ್ಮ ಬಳಿ ಇರುವ ನಾಲ್ಕು ಜಲಾಶಯಗಳಲ್ಲಿ 34 ಟಿಎಂಸಿ ನೀರು ಸಂಗ್ರಹವಿದೆ. ಇನ್ನು 1470 ಎಂಎಲ್ಡಿ ನೀರು ಪಂಪ್ ಮಾಡಲು ಅವಕಾಶವಿದೆ. ನಮ್ಮ ಸಾಮರ್ಥ್ಯಕ್ಕಿಂತ 20 ಟಿಎಂಸಿ ನೀರು ಹೆಚ್ಚಿಗೆ ಪಂಪ್ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಡ್ಯಾನ್ಸ್ ಮಾಡುವಾಗ ಮೈ ತಾಗಿದಕ್ಕೆ ಯುವಕನ ಕೊಲೆ: ಬಂಧನ
”1992 ರಿಂದ ಕಾವೇರಿ ನೀರು ತರಲು 4 ಹಂತದ ಪ್ರಾಜೆಕ್ಟ್ ಮಾಡಿದ್ದೇವೆ. 1450 ಮಿಲಿಯನ್ ಲೀಟರ್ ನೀರು ಪಂಪ್ ಮಾಡುತ್ತಿದ್ದೇವೆ. ಜುಲೈವರೆಗೆ 8 ಟಿಎಂಸಿ ನೀರಿನ ಅವಶ್ಯಕತೆಯಿದೆ. 1.54 ಟಿಎಂಸಿ ಪ್ರತಿ ತಿಂಗಳು ಅವಶ್ಯಕತೆಯಿದೆ. ಜುಲೈ ತಿಂಗಳವರೆಗೆ 17 ಟಿಎಂಸಿ ಅವಶ್ಯಕತೆ ಇದೆ” ಎಂದರು.