ಯುಎಇಯಲ್ಲಿರುವ ಭಾರತೀಯ, ಪಾಕಿಸ್ತಾನ, ಬ್ರಿಟನ್ ವಲಸಿಗರ ಸ್ಮಾರ್ಟ್‌ಫೋನ್‌ಗಳಿಗೆ ಕಳೆದ ವಾರಾಂತ್ಯದಲ್ಲಿ ಭಾರತೀಯ ಸಂಖ್ಯೆಯಿಂದ ವಾಟ್ಸಾಪ್ ಸಂದೇಶ ಬಂದಿದ್ದು, ವಲಸಿಗರು ಆಶ್ಚರ್ಯಗೊಂಡಿದ್ದಾರೆ. ಸಂದೇಶದಲ್ಲಿ ಭಾರತ ಸರ್ಕಾರದ ಯೋಜನೆಗಳು ಮತ್ತು ಉಪಕ್ರಮಗಳ ಕುರಿತು ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಕೋರಲಾಗಿದೆ. ಇದರೊಂದಿಗೆ ಪಿಡಿಎಫ್ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಪತ್ರವು ಕೂಡಾ ಇದೆ!
ಯುಎಇಯಲ್ಲಿರುವ ವಿದೇಶದಲ್ಲಿರುವ ಭಾರತೀಯ ವಲಸಿಗರಿಗೆ ಈ ಸಂದೇಶ ತಲುಪಿದರೆ ಅಚ್ಚರಿಯೇನಿಲ್ಲ. ಆದರೆ ಪಾಕಿಸ್ತಾನ ಮತ್ತು ಬ್ರಿಟನ್ ವಲಸಿಗರಿಗೂ ಭಾರತ ಸರ್ಕಾರದ ಈ ಸಂದೇಶ ತಲುಪಿರುವುದು ಚರ್ಚೆಗೆ ಗ್ರಾಸವಾಗಿದೆ. ಇನ್ನು ಯುಎಇ ನಿವಾಸಿಗಳಿಗೂ ಈ ಪತ್ರ ತಲುಪಿದ್ದು ವಿದೇಶಿಗರ ವೈಯಕ್ತಿಕ ದಾಖಲೆಗಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿದೆ.
ಲೋಕಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸುವ ಮುನ್ನಾದಿನದಂದು ಬಿಡುಗಡೆ ಮಾಡಿದ ಪತ್ರದಲ್ಲಿ, ಸಮೃದ್ಧ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಈಡೇರಿಸುವಲ್ಲಿ ಸಲಹೆಗಳು ಮತ್ತು ಬೆಂಬಲವನ್ನು ಪ್ರಧಾನಿ ಮೋದಿ ಕೋರಿದ್ದಾರೆ. ಭಾರತೀಯರಿಗೆ ಈ ಸಂದೇಶ ಆಶ್ಚರ್ಯವೆನಿಸದಿದ್ದರೂ ಭಾರತೀಯರಲ್ಲದವರಿಗೂ ಈ ಸಂದೇಶ ತಲುಪಿರುವುದು ಭಾರತ ಸರ್ಕಾರವನ್ನು ವಿದೇಶಿಗರು ಅನುಮಾನದಿಂದ ನೋಡುವಂತೆ ಮಾಡಿದೆ.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ | ಕೇಂದ್ರದ ‘ಪ್ರಧಾನಮಂತ್ರಿ ಹಫ್ತಾ ವಸೂಲಿ ಯೋಜನೆ’ ಎಂದ ಕಾಂಗ್ರೆಸ್
ದುಬೈ ಮೂಲದ ಪಾಕಿಸ್ತಾನಿ ಪತ್ರಕರ್ತೆ ಅಸ್ಮಾ ಝೈನ್ ತನಗೆ ಭಾರತ ಸರ್ಕಾರದಿಂದ ಬಂದ ಸಂದೇಶದ ಬಗ್ಗೆ ಮಾತನಾಡುತ್ತಾ “ನನಗೆ ಮಧ್ಯರಾತ್ರಿ ಈ ಸಂದೇಶ ಬಂದಿದೆ. ಇದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಸನ್ಮಾನ್ಯ ಮೋದಿ ಅವರಿಗೆ ನನ್ನಿಂದ ಯಾವ ರೀತಿಯ ಸಲಹೆಗಳು ಬೇಕಾಗಬಹುದು? ಅದಕ್ಕಿಂತ ಮುಖ್ಯವಾಗಿ ನಾನು ಆ ಸಲಹೆಗಳನ್ನು ನೀಡಬೇಕೆ? ಎಂಬ ಪ್ರಶ್ನೆ ಮೂಡಿತು” ಎಂದಿದ್ದಾರೆ. ಯುಎಇಯಲ್ಲಿರುವ ಇನ್ನೋರ್ವ ಪಾಕಿಸ್ತಾನಿ ಫಹಾದ್ ಸಿದ್ದಿಕಿ “ಇದು ತುಂಬಾ ವಿಚಿತ್ರವಾಗಿದೆ” ಎಂದು ಟೀಕಿಸಿದರು.
ದುಬೈನ ಬ್ರಿಟಿಷ್ ನಿವಾಸಿ, ಇತ್ತೀಚೆಗೆ ಕೆಲಸಕ್ಕಾಗಿ ಭಾರತಕ್ಕೆ ಪ್ರಯಾಣಿಸಿದ್ದು ಅವರಿಗೂ ಈ ಸಂದೇಶ ಬಂದಿದೆ. ಆರಂಭದಲ್ಲಿ ಇದೊಂದು ದೇಶದ ವೃತ್ತಿಪರತೆ ಅಂದುಕೊಂಡರು. “ಆದರೆ ಭಾರತ ಸರ್ಕಾರಕ್ಕೆ ನಮ್ಮ ಮೊಬೈಲ್ ಸಂಖ್ಯೆ ಸಿಗಲು ಹೇಗೆ ಸಾಧ್ಯ? ಎಂದು ನನಗೆ ಕುತೂಹಲವಿದೆ” ಎಂದಿದ್ದಾರೆ.
ಪ್ರಧಾನಿ ಮೋದಿ ಮೂರನೇ ಬಾರಿಗೆ ಗದ್ದುಗೆಯನ್ನು ಏರುವ ತಯಾರಿಯಲ್ಲಿದ್ದು, ಮುಂಬರುವ ಚುನಾವಣೆಯಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವುದಾಗಿ ಘೋಷಿಸಿಕೊಂಡಿದ್ದಾರೆ. ಆದರೆ ಮತದಾರರಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸುತ್ತಿರುವುದು ವಿಪಕ್ಷಗಳಿಂದ ಟೀಕೆಗೆ ಒಳಗಾಗಿದೆ. ಅದರಲ್ಲೂ ವಿದೇಶಿಗರ ಸಂಖ್ಯೆಗೆ ಭಾರತ ಸರ್ಕಾರದಿಂದ ವಾಟ್ಸಾಪ್ ಸಂದೇಶ ತಲುಪಿರುವುದು ವಿದೇಶಗರಿಗೆ ತಮ್ಮ ಗೌಪ್ಯ ದಾಖಲೆಗಳ ಸುರಕ್ಷತೆಯ ಬಗ್ಗೆ ಸಂದೇಹ ಹುಟ್ಟಿಸಿದೆ. “ನಾವು ಪಾಕಿಸ್ತಾನ, ಬ್ರಿಟನ್, ಯುಎಇ ನಾಗರಿಕರು. ನಮ್ಮ ವೈಯಕ್ತಿಕ ಸಂಖ್ಯೆ ಭಾರತ ಸರ್ಕಾರಕ್ಕೆ ಹೇಗೆ ಲಭಿಸಿದೆ?” ಎಂದು ಈ ಸಂದೇಶ ಪಡೆದವರು ಪ್ರಶ್ನಿಸಿದ್ದಾರೆ.
