ಹೊಸ ವರದಿಯ ಪ್ರಕಾರ ಭಾರತದ ರಾಜಧಾನಿ ದೆಹಲಿಯು ಮತ್ತೊಮ್ಮೆ ಕಳಪೆ ಗಾಳಿಯ ಗುಣಮಟ್ಟವನ್ನು ಹೊಂದಿರುವ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎನಿಸಿಕೊಂಡಿದೆ. ಹಾಗೆಯೇ ಬಿಹಾರದ ಬೇಗುಸರಾಯ್ ವಿಶ್ವದ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿ ಹೊರಹೊಮ್ಮಿದೆ. ಆದರೆ ಐಕ್ಯೂಆರ್ ಸಂಸ್ಥೆ 2022ರಲ್ಲಿ ನೀಡಿದ್ದ ವರದಿಯಲ್ಲಿ ಬೇಗುಸರಾಯ್ ಯಾವುದೇ ಸ್ಥಾನವನ್ನು ಪಡೆದಿರಲಿಲ್ಲ.
ಸ್ವಿಸ್ ಸಂಸ್ಥೆ IQAirನ ವಿಶ್ವ ವಾಯು ಗುಣಮಟ್ಟ ವರದಿ 2023 ಪ್ರಕಾರ ಬಾಂಗ್ಲಾದೇಶದಲ್ಲಿರುವ ತಲಾ ಒಂದು ಕ್ಯೂಬಿಕ್ ಮೀಟರ್ ಗಾಳಿಯಲ್ಲಿ 79.9 ಮೈಕ್ರೋಗ್ರಾಂಗಳಷ್ಟು ಪಿಎಂ (Particulate Matter) ಪ್ರಮಾಣ ಕಂಡು ಬಂದಿದ್ದು, ಪಾಕಿಸ್ತಾನದಲ್ಲಿ 73.7 ಮೈಕ್ರೋಗ್ರಾಂಗಳಷ್ಟು ಪಿಎಂ ಕಂಡು ಬಂದಿದೆ. ಭಾರತದಲ್ಲಿನ ತಲಾ ಒಂದು ಕ್ಯೂಬಿಕ್ ಮೀಟರ್ ಗಾಳಿಯಲ್ಲಿ 53.3 ಮೈಕ್ರೋಗ್ರಾಂಗಳಷ್ಟು ಪಿಎಂ (Particulate Matter) ಪ್ರಮಾಣವನ್ನು ಗುರುತಿಸಲಾಗಿದ್ದು ಭಾರತ ವಿಶ್ವದಲ್ಲೇ ಮೂರನೇ ಅತೀ ಕಲುಷಿತ ದೇಶವಾಗಿದೆ.
ಇದನ್ನು ಓದಿದ್ದೀರಾ? ಮೋದಿಯಿಂದ ಯುಎಇಯಲ್ಲಿರುವ ಭಾರತೀಯ, ಪಾಕ್, ಬ್ರಿಟನ್ ವಲಸಿಗರಿಗೆ ಅಚ್ಚರಿಯ ವಾಟ್ಸಾಪ್ ಸಂದೇಶ!
IQAir ಸಂಸ್ಥೆ ಜಾಗತಿಕವಾಗಿ ಸುಮಾರು ಮೂವತ್ತು ಸಾವಿರ ವಾಯುಗುಣಮಟ್ಟ ತಪಾಸಣಾ ಕೇಂದ್ರಗಳು, ಮಾಲಿನ್ಯಕ್ಕೆ ಸಂಬಂಧಿಸಿತ ಸರ್ಕಾರಿ ಸಂಸ್ಥೆಗಳು, ಎನ್‌ಜಿಒ ಹಾಗೂ ವಿಶ್ವವಿದ್ಯಾಲಯಗಳ ಸಂಶೋಧನಾ ಕೇಂದ್ರಗಳನ್ನು ಬಳಸಿಕೊಂಡು ವರದಿ ಸಿದ್ಧಪಡಿಸಿದೆ. ಇನ್ನು ಕಳಪೆ ವಾಯುಗುಣವು ಇತ್ತೀಚೆಗೆ ಜನರ ಸಾವಿಗೆ ಪ್ರಮುಖ ಕಾರಣವಾಗಿದೆ. ಈ ಕಾರಣದಿಂದಾಗಿ ಜಾಗತಿಕವಾಗಿ ಪ್ರತಿ ವರ್ಷ ಸುಮಾರು 70 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿ ಹೇಳುತ್ತದೆ.
2022ರಲ್ಲಿ ಭಾರತ ವಿಶ್ವದಲ್ಲೇ ಅತೀ ಕುಷಿತ ದೇಶಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿತ್ತು. ಆದರೆ ಈಗ ಮೂರನೇ ಸ್ಥಾನಕ್ಕೆ ಏರಿದೆ. 118.9 ಮೈಕ್ರೋಗ್ರಾಮ್ ಪಿಎಂ ಪ್ರಮಾಣದೊಂದಿಗೆ ಬೇಗುಸರಾಯ್ ವಿಶ್ವದಲ್ಲೇ ಅತೀ ಕಳಪೆ ವಾಯುಗುಣವನ್ನು ಹೊಂದಿರುವ ನಗರ ಎಂಬ ಕುಖ್ಯಾತಿಯನ್ನು ಪಡೆದುಕೊಂಡರೆ, ದೆಹಲಿಯು 89.1 ಮೈಕ್ರೋಗ್ರಾಮ್ ಪಿಎಂ ಪ್ರಮಾಣದೊಂದಿಗೆ ವಿಶ್ವದಲ್ಲೇ ಅತೀ ಕಳುಷಿತ ರಾಜಧಾನಿ ಎನಿಸಿಕೊಂಡಿದೆ. ಅಷ್ಟು ಮಾತ್ರವಲ್ಲದೆ 2018ರಿಂದ ಈವರೆಗೆ ನಾಲ್ಕು ವರ್ಷಗಳಿಂದ ಅತೀ ಕಳಪೆ ವಾಯುಗುಣ ಹೊಂದಿರುವ ರಾಜಧಾನಿ ನಗರವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ ಪ್ರಕಾರ ಅತ್ಯಂತ ಉತ್ತಮ ವಾಯುಗುಣ ಪಿಎಂ ಪ್ರಮಾಣ 2.5 ಮೈಕ್ರೋಗ್ರಾಮ್ ಆಗಿದೆ. ಭಾರತದಲ್ಲಿ ಶೇಕಡ 66ರಷ್ಟು ನಗರಗಳು ಸರಾಸರಿ 35 ಮೈಕ್ರೋಗ್ರಾಮ್ ಪಿಎಂ ಪ್ರಮಾಣವನ್ನು ಹೊಂದಿದೆ.