ವಂಚನೆ ಪ್ರಕರಣದಲ್ಲಿ ‘ಸರ್ಚ್ ವಾರೆಂಟ್’ ಇಲ್ಲದೇ ಶೋಧ ನಡೆಸಿದ್ದ ನಾಲ್ಕು ಪೇದೆಗಳನ್ನು ಅಮಾನತು ಮಾಡಿ ದಾವಣಗೆರೆ ಜಿಲ್ಲಾ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಆದೇಶಿಸಿದ್ದಾರೆ. ಲಂಚ ಅಥವಾ ಹಣಕ್ಕೆ ಬೇಡಿಕೆ ಇಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಪೊಲೀಸ್ ಠಾಣೆಯ ಪೇದೆ ಧರ್ಮಪ್ಪ ಹಾಗೂ ಕೊಟ್ರೇಶ್, ಹೊನ್ನಾಳಿ ಪೊಲೀಸ್ ಠಾಣೆ ಜಿ.ಕೆ.ರಾಮಚಂದ್ರಪ್ಪ ಹಾಗೂ ದೊಡ್ಡಬಸಪ್ಪ ಅಮಾನತುಗೊಂಡವರು.
ನ್ಯಾಮತಿ ತಾಲೂಕಿನ ದಾನಿಹಳ್ಳಿ ಗ್ರಾಮದಲ್ಲಿನ ಕೊರಚರ ಕಾಲೋನಿಯ ರೂಪ ಎಂಬುವರ ಮನೆಗೆ ಈ ನಾಲ್ವರು ಪೇದೆಗಳು ‘ಸರ್ಚ್ ವಾರೆಂಟ್’ ಇಲ್ಲದೇ ಮನೆಗೆ ನುಗ್ಗಿ, ಶೋಧ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ರೂಪ ಅವರು ಎಸ್‌ಪಿಗೆ ದೂರು ನೀಡಿದ್ದರು. ದೂರಿನಲ್ಲಿ, “ನಮ್ಮ ಮನೆಗೆ ಮಧ್ಯರಾತ್ರಿಯಲ್ಲಿ ಅಕ್ರಮವಾಗಿ ನುಗ್ಗಿ, ಅವಾಚ್ಯಶಬ್ದಗಳಿಂದ ನಿಂಧಿಸಿ, ಜಾತಿನಿಂದನೆ ಮಾಡಿ, ನನ್ನ ಹಾಗೂ ನನ್ನ ಕುಟುಂಬದವರ ಮೇಲೆ ದೌರ್ಜನ್ಯವೆಸಗಿ, ಅಕ್ರಮ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ನನಗೆ ಹಾಗೂ ನನ್ನ ಕುಟುಂಬದವರಿಗೆ ಪೇದೆಗಳು ಜೀವ ಬೆದರಿಕೆ ಹಾಕಿದ್ದಾರೆ” ಎಂದು ವಿವರಿಸಿದ್ದರು.
“ಹಣ ನೀಡಿದರೆ ಮಾತ್ರ ನಿನ್ನ ಮೇಲೆ ಕೇಸು ಮಾಡುವುದಿಲ್ಲ ಎಂದು ನನ್ನ ಮಗನಿಗೆ ಬೆದರಿಕೆ ಹಾಕಿದ್ದರು. ತದನಂತರ ದಿನಾಂಕ 13/01/2024ರಂದು ಬೆಳ್ಳಂಬೆಳಗ್ಗೆ 7 ಗಂಟೆ ಸುಮಾರಿಗೆ ನಾಲ್ವರು ಕಾರಿನಲ್ಲಿ ನಮ್ಮ ಮನೆಗೆ ಬಂದು ನಿನ್ನ ಮಗ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಅದರ ಕುರಿತು 30 ಲಕ್ಷ ಸೆಟಲ್ಮೆಂಟ್ ಮಾಡಬೇಕು ಕೂಡಲೇ ಮಗನನ್ನು ಸ್ಟೇಷನ್‌ಗೆ ಕರೆದುಕೊಂಡು ಹೋಗುತ್ತೇವೆ. ನಿಮ್ಮ ಮಗ ಎಲ್ಲಿದ್ದಾನೆಂದು ಹುಡುಕಾಡಿದರು” ಎಂದು ತಿಳಿಸಿದ್ದಾರೆ.
“ಆ ಸಮಯದಲ್ಲಿ ನನ್ನ ಮಗ ಮನೆಯಲ್ಲಿರಲಿಲ್ಲ. ನಾವು ಯಾವ ಕೇಸು, ಯಾರಿಗೆ ಮೋಸ ಆಗಿದೆ, ಸಂಪೂರ್ಣ ವಿಚಾರವನ್ನು ತಿಳಿಸಿ. ಏಕಾಏಕಿ ನೀವು ಕರೆದರೆ, ನನ್ನ ಮಗನನ್ನು ಕಳುಹಿಸಲು ಆಗುವುದಿಲ್ಲ ಎಂದು ತಿಳಿಸಿದೆ. ಆಗ ಪೊಲೀಸರು ಅಪ್ಪನನ್ನು ಕರೆದುಕೊಂಡು ಹೋದರೆ ಮಗ ಜಯಂತ್ ಎಲ್ಲಿದ್ದರು ಸ್ಟೇಷನ್‌ಗೆ ಹುಡುಕಿಕೊಂಡು ಬರುತ್ತಾನೆ ಎಂದ ನನ್ನ ಪತಿ ನಾಗರಾಜಪ್ಪನ್ನು ಕಾರಿನಲ್ಲಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದರು. ಸುಮಾರು 8:30 ರಿಂದ 9:00 ಗಂಟೆಯವರೆಗೆ ಪೊಲೀಸರು ಹೊನ್ನಾಳಿಯ ಲಾಡ್ಜ್‌ನಲ್ಲಿ ನನ್ನ ಗಂಡನನ್ನು ಕೂಡಿಹಾಕಿ ಚಿತ್ರಹಿಂಸೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ.
ಅವರ ದೂರಿನ ಆಧಾರ ಮೇಲೆ ತನಿಖೆ ನಡೆಸಿದ ಡಿವೈಎಸ್ಪಿ ಪ್ರಶಾಂತ್ ಮನೋಳಿ, ಎಸ್‌ಪಿಗೆ ವರದಿ ಸಲ್ಲಿಸಿದ್ದರು. ವರದಿ ಬಂದ ಬೆನ್ನಲ್ಲೇ, ನಾಲ್ವರು ಪೇದೆಗಳನ್ನೂ ಅಮಾನತು ಮಾಡಿ, ಅದೇಶ ಹೊರಡಿಸಿದ್ದಾರೆ.
