ಮೋದಿ ನೇತೃತ್ವದ ಬಿಜೆಪಿ ಸರಕಾರ ಜನ ಸಾಮಾನ್ಯರ ಆಶೋತ್ತರಗಳನ್ನೆಲ್ಲಾ ಕಡೆಗಣಿಸಿ ಚುನಾವಣಾ ಬಾಂಡ್ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ. ಅಕ್ರಮ ದಾರಿಗಳ ಮೂಲಕ ವಿರೋಧ ಪಕ್ಷಗಳನ್ನು ವ್ಯವಸ್ಥಿತವಾಗಿ ಮುಗಿಸುವ ಸಂಚನ್ನು ರೂಪಿಸಿ, ದೇಶದಲ್ಲಿ ಅಕ್ರಮಗಳನ್ನೇ ನೀತಿಯನ್ನಾಗಿಸಿರುವ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಸೋಲಿಸಬೇಕೆಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ ಕರೆ ನೀಡಿದರು.
ಅವರು ಭಾನುವಾರ ಮಂಗಳೂರಿನ ನಾಸಿಕ್ ಬಂಗೇರ ಸಭಾಭವನದಲ್ಲಿ ನಡೆದ ಪ್ರಜಾಪ್ರಭುತ್ವ ಜಾತ್ಯಾತೀತತೆಯ ಉಳಿವಿಗಾಗಿ ಮತ್ತು ದ.ಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಡೆದ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ ಮಟ್ಟದ ರಾಜಕೀಯ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಬಂಡವಾಳಶಾಹಿಗಳ ಜೊತೆ ಅಪವಿತ್ರ ಮೈತ್ರಿಯ ಮೂಲಕ ದೇಶದ ಸಾರ್ವಜನಿಕ ಸಂಪತ್ತುಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಿದ್ದಲ್ಲದೆ, ಇದ್ದ ಕಾರ್ಮಿಕ ಪರ ನೀತಿಗಳನ್ನು ರದ್ದುಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆಗಳನ್ನು ಜಾರಿಗೊಳಿಸಿದೆ ಎಂದರು.
ವರ್ಷಕ್ಕೆರಡು ಕೋಟಿ ಉದ್ಯೋಗಗಳ ಸೃಷ್ಟಿಸುವ ಭರವಸೆಯನ್ನು ಈವರೆಗೂ ಈಡೇರಿಸಲು ಸಾಧ್ಯವಾಗಿಲ್ಲ. ಉದ್ಯೋಗಳನ್ನು ಕಳಕೊಂಡು ಬೀದಿಗೆ ಬರುವಂತಹ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿರುವುದೇ ಬಿಜೆಪಿ ಆಡಳಿತದ ಸಾಧನೆ. ದೇಶ ದಿವಾಳಿಗೊಂಡು ಜನ ಬದುಕಲು ಸಂಕಷ್ಟಪಡುತ್ತಿರುವ ಈ ಕಾಲದಲ್ಲಿ ಬಿಜೆಪಿಗೆ ಈ ಚುನಾವಣೆಯಲ್ಲೂ ಸೋಲಾಗದಿದ್ದಲ್ಲಿ, ಈ ದೇಶದ ಜನಸಾಮಾನ್ಯರ ಬದುಕು ಸೋಲಲಿದೆ, ಜನರ ಬದುಕು ಅವರ ಆಶೋತ್ತರಗಳು ಗೆಲ್ಲಬೇಕಾದರೆ ಬಿಜೆಪಿ ಸೋಲಲೇ ಬೇಕಾಗಿದೆ ಎಂದರು.
ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡುತ್ತಾ, ದೇಶದಲ್ಲಿ ದ್ವೇಷವನ್ನೇ ಬಿತ್ತುವ ಮೂಲಕ ಮತೀಯ ರಾಜಕಾರಣ ಮಾಡಿದ್ದಲ್ಲದೆ, ದಲಿತ, ಆದಿವಾಸಿ ಹಾಗೂ ಹಿಂದುಳಿದ ವರ್ಗಗಳ ವಿರೋಧಿಯಾಗಿ ವರ್ತಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ದೀರ್ಘಾವಧಿಯಿಂದ ಗೆಲ್ಲುತ್ತಾ ಬರುತ್ತಿರುವ ಬಿಜೆಪಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಯಾವೊಂದು ಕೊಡುಗೆ ನೀಡಲೂ ಸಾಧ್ಯವಾಗಿಲ್ಲ ಎಂದರು.
ಜಿಲ್ಲೆಯ ಅಭಿವೃದ್ಧಿಯ ಕಡೆಗಣನೆಗೆ ಹಿಂದಿನ ಸಂಸದ ನಳಿನ್ ಕುಮಾರ್ ಕಟೀಲೊಬ್ಬರೇ ಹೊಣೆಯಲ್ಲ ಅದಕ್ಕೆಲ್ಲಾ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಪೂರ್ಣ ಹೊಣೆಹೊರಬೇಕು. ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಯುವಜನರನ್ನು ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿನಿಂದ ವಂಚಿಸಿದ್ದಲ್ಲದೆ ಮತೀಯ ರಾಜಕಾರಣದ ಕಾಲಾಳುಗಳಾಗಿ ಬಳಸಿ ಬಲಿಪಡೆದಿರುವುದು ಈ ಜಿಲ್ಲೆಯ ಬಿಜೆಪಿ ಪಕ್ಷ ಮತ್ತು ಆರ್‌ಎಸ್‌ಎಸ್ ಎಂದು ಹೇಳಿದರು.
ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ರಾಜಕೀಯ ಸಮಾವೇಶದ ಅಧ್ಯಕ್ಷತೆಯನ್ನು ಭಾರತಿ ಬೋಳಾರ ವಹಿಸಿದ್ದರು. ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ರಾಜಕೀಯ ಸಮಾವೇಶದ ನೇತೃತ್ವ ವಹಿಸಿ ನಿರೂಪಿಸಿದರು ಹಾಗೂ ಪ್ರದೀಪ್ ಕುಲಾಲ್ ವಂದಿಸಿದರು.
