ಆಮ್ ಆದ್ಮಿ ಪಕ್ಷದೊಂದಿಗಿನ ಮೈತ್ರಿ ವಿರೋಧಿಸಿ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರವಿಂದರ್ ಸಿಂಗ್ ಲವ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಮೈತ್ರಿಯಿಂದ ಅಸಮಾಧಾನಗೊಂಡ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ದಿವಂಗತ ಶೀಲಾ ದೀಕ್ಷಿತ್ ನೇತೃತ್ವದ ದೆಹಲಿ ಸರ್ಕಾರದಲ್ಲಿ ಸಚಿವರೂ ಆಗಿದ್ದ ಅರವಿಂದರ್ ಸಿಂಗ್ ಲವ್ಲಿ ಅವರನ್ನು 2023ರ ಆಗಸ್ಟ್ 31ರಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಿಸಲಾಗಿತ್ತು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದ ಲವ್ಲಿ ಅವರು, “ದೆಹಲಿಯ ಹಿರಿಯ ಕಾಂಗ್ರೆಸ್ ನಾಯಕರು ತೆಗೆದುಕೊಂಡ ಎಲ್ಲ ಒಮ್ಮತದ ನಿರ್ಧಾರಗಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ (ದೆಹಲಿ ಉಸ್ತುವಾರಿ) ಏಕಪಕ್ಷೀಯವಾಗಿ ವೀಟೋ ಮಾಡಿದ್ದಾರೆ” ಎಂದು ಹೇಳಿದ್ದಾರೆ.
“ನನ್ನನ್ನು ಡಿಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದಾಗಿನಿಂದ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ದೆಹಲಿ ಉಸ್ತುವಾರಿ) ಡಿಪಿಸಿಸಿಯಲ್ಲಿ ಯಾವುದೇ ಹಿರಿಯ ನೇಮಕಾತಿಗಳನ್ನು ಮಾಡಲು ನನಗೆ ಅವಕಾಶ ನೀಡಿಲ್ಲ. ಡಿಪಿಸಿಸಿಯ ಮಾಧ್ಯಮ ಮುಖ್ಯಸ್ಥರಾಗಿ ಹಿರಿಯ ನಾಯಕನನ್ನು ನೇಮಿಸಬೇಕೆಂಬ ನನ್ನ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ (ದೆಹಲಿ ಉಸ್ತುವಾರಿ) ನಗರದ ಎಲ್ಲಾ ಬ್ಲಾಕ್ ಅಧ್ಯಕ್ಷರನ್ನು ನೇಮಿಸಲು ಡಿಪಿಸಿಸಿಗೆ ಅವಕಾಶ ನೀಡಿಲ್ಲ. ಪರಿಣಾಮವಾಗಿ ದೆಹಲಿಯ 150ಕ್ಕೂ ಹೆಚ್ಚು ಬ್ಲಾಕ್‌ಗಳು ಪ್ರಸ್ತುತ ಬ್ಲಾಕ್ ಅಧ್ಯಕ್ಷರನ್ನು ಹೊಂದಿಲ್ಲ”ಎಂದು ಅವರು ತಿಳಿಸಿದ್ದಾರೆ.
“ಇದಲ್ಲದೆ, ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದರೂ, ಪಕ್ಷವು ಅವರೊಂದಿಗೆ ಮೈತ್ರಿ ಮಾಡಿಕೊಂಡಿದೆ” ಎಂದು ಅವರು ಹೇಳಿದರು.
“ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು, ಕಪೋಲಕಲ್ಪಿತ ಮತ್ತು ದುರುದ್ದೇಶಪೂರಿತ ಭ್ರಷ್ಟಾಚಾರ ಆರೋಪಗಳನ್ನು ಹೊರಿಸುವ ಏಕೈಕ ಆಧಾರದ ಮೇಲೆ ರಚಿಸಲಾದ ಪಕ್ಷದೊಂದಿಗಿನ ಮೈತ್ರಿಗೆ ದೆಹಲಿ ಕಾಂಗ್ರೆಸ್ ಘಟಕವು ವಿರುದ್ಧವಾಗಿತ್ತು. ಸಂಪುಟದ ಅರ್ಧದಷ್ಟು ಸಚಿವರು ಭ್ರಷ್ಟಾಚಾರದ ಆರೋಪದಲ್ಲಿ ಪ್ರಸ್ತುತ ಜೈಲಿನಲ್ಲಿದ್ದಾರೆ. ಅದರ ಹೊರತಾಗಿಯೂ ದೆಹಲಿಯಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಪಕ್ಷ ನಿರ್ಧರಿಸಿದೆ” ಎಂದು ಲವ್ಲಿ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಿವಿ ಕೇಳಿಸದ, ಮಾತು ಬಾರದ ಮಹಿಳೆಯ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ದೂರು ದಾಖಲು
“ಮೈತ್ರಿಯ ಅನುಸಾರವಾಗಿ, ಪ್ರಸ್ತುತ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ದೆಹಲಿ ಕಾಂಗ್ರೆಸ್‌ಗೆ ಮೂರು ಸಂಸದೀಯ ಸ್ಥಾನಗಳನ್ನು ನೀಡಿದೆ. ಪಕ್ಷದ ಕಾರ್ಯಕರ್ತರ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯವಾಗದ ಕಾರಣ, ಈ ಹುದ್ದೆಯಲ್ಲಿ ಮುಂದುವರಿಯಲು ಯಾವುದೇ ಕಾರಣವಿಲ್ಲ” ಎಂದು ತಿಳಿಸಿದ್ದಾರೆ.
ದೆಹಲಿ ಕಾಂಗ್ರೆಸ್‌ನ ಶಿಸ್ತು ಸಮಿತಿ ಸಭೆಯ ನಂತರ ದೆಹಲಿಯ ಮಾಜಿ ಸಚಿವ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯ ರಾಜ್‌ಕುಮಾರ್ ಚೌಹಾಣ್ ಪಕ್ಷಕ್ಕೆ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ ನೀಡಿದ್ದಾರೆ.