ಜೆಡಿಎಸ್ ಪಕ್ಷದ ಇಬ್ಬರು ಶಾಸಕರೇ ಈ ಬೆಳವಣಿಗೆಯನ್ನು ಖಂಡಿಸಿದರು. ಆದರೆ ಒಬ್ಬನೇ ಒಬ್ಬ ಬಿಜೆಪಿ ನಾಯಕ, ಸೂಲಿಬೆಲೆಯಂತಹ ಒಬ್ಬನೇ ಒಬ್ಬ ಪುಂಗ್ಲಿಗಳು, ಬಿಜೆಪಿಯ ನಾಯಕಿಯರಲ್ಲಿ ಕನಿಷ್ಠ ಒಬ್ಬರು, ಬಿಜೆಪಿ ಪರವಾಗಿ ಬ್ಯಾಟಿಂಗ್ ಮಾಡುವ ಕೆಲವು ನಟಿಯರು – ಯಾರೊಬ್ಬರೂ ಪ್ರಜ್ವಲ್ ವಿಚಾರದಲ್ಲಿ ಖಂಡನಾ ಹೇಳಿಕೆ ನೀಡಿಲ್ಲ. ಯಾಕೆ?
ದೇಶಾದ್ಯಂತ ವಿಕೃತ ಕಾಮ ಮೆರೆದವರು, ಅತ್ಯಾಚಾರಿಗಳು, ಅಧಿಕಾರದ ಮದದಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದವರು ಹೆಚ್ಚೆಚ್ಚು ಬಿಜೆಪಿಯಲ್ಲಿರುವುದು ಎಲ್ಲರಿಗೂ ಗೊತ್ತು; ಬಿಜೆಪಿಗೂ ಈ ವಿಕೃತ ಕಾಮ ಮತ್ತು ಮಹಿಳೆಯರ ಶೋಷಣೆಗೂ ದೊಡ್ಡ ಸಂಬಂಧವಿದೆ. ಇದಕ್ಕೆ ಪ್ರಜ್ವಲ್ ಪ್ರಕರಣದಲ್ಲಿ ಆಗುತ್ತಿರುವ ಈ ಆಶ್ಚರ್ಯಕರ ಬೆಳವಣಿಗೆಗಳನ್ನು ನೋಡಿ.
ಸ್ವತಃ ಪ್ರಜ್ವಲ್ ಚಿಕ್ಕಪ್ಪ ಕುಮಾರಸ್ವಾಮಿ: ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಅನ್ನುತ್ತಾರೆ. ಆದರೆ, ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ – ಈ ಪ್ರಕರಣ ರಾಜಕೀಯ ಪ್ರೇರಿತ ಎನ್ನುತ್ತಾರೆ.
ಸ್ವತಃ ಪ್ರಜ್ವಲ್ ತಾತ ದೇವೇಗೌಡರು, ಪ್ರಜ್ವಲ್ ನನ್ನು ಪಕ್ಷದಿಂದ ಉಚ್ಛಾಟಿಸುತ್ತಾರೆ. ಆದರೆ, ಬೊಮ್ಮಾಯಿಯವರು ಇದು ಫೇಕ್, ಈಗ ಡೀಪ್ ಫೇಕ್ ಎಲ್ಲಾ ಇದೆ ಎನ್ನುತ್ತಾರೆ.
ಗಮನಿಸಿ: ಜೆಡಿಎಸ್ ಪಕ್ಷದ ಇಬ್ಬರು ಶಾಸಕರೇ ಈ ಬೆಳವಣಿಗೆಯನ್ನು ಖಂಡಿಸಿದರು. ಜೆಡಿಎಸ್ ಕೋರ್ ಸಮಿತಿ ಅಧ್ಯಕ್ಷ ಜಿ.ಟಿ.ದೇವೇಗೌಡರು ಎಲ್ಲರೂ ಬಹಿರಂಗವಾಗಿ ಖಂಡಿಸಿದರು. ಆದರೆ ಒಬ್ಬನೇ ಒಬ್ಬ ಬಿಜೆಪಿ ನಾಯಕ, ಚಕ್ರವರ್ತಿ ಸೂಲಿಬೆಲೆಯಂತಹ ಒಬ್ಬನೇ ಒಬ್ಬ ಪುಂಗ್ಲಿಗಳು, ಬಿಜೆಪಿಯ ನಾಯಕಿಯರಲ್ಲಿ ಕನಿಷ್ಠ ಒಬ್ಬರು, ಬಿಜೆಪಿ ಪರವಾಗಿ ಬ್ಯಾಟಿಂಗ್ ಮಾಡುವ ಕೆಲವು ನಟಿಯರು – ಯಾರೊಬ್ಬರೂ ಪ್ರಜ್ವಲ್ ವಿಚಾರದಲ್ಲಿ ಖಂಡನಾ ಹೇಳಿಕೆ ನೀಡಿಲ್ಲ. ಯಾಕೆ?
ಯಾಕೆಂದರೆ – ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದು, ಅತ್ಯಾಚಾರ ಮಾಡುವುದು, ವಿಕೃತ ಕಾಮ ನಡೆಸುವುದಕ್ಕೆ ಬಿಜೆಪಿ ಅಥವಾ ಆರೆಸ್ಸೆಸ್ಸಿಗೆ ಎಂದೂ ವಿರೋಧವಿಲ್ಲ. ನಿಜ ಹೇಳಬೇಕೆಂದರೆ, ಅತ್ಯಾಚಾರವನ್ನು ಒಂದು ಅಸ್ತ್ರವನ್ನಾಗಿ ಬಳಸುವುದು ಅವರ ತಂತ್ರಗಳಲ್ಲಿ ಒಂದು. ಇದಕ್ಕೆ ಇರುವ ಪುರಾವೆಗಳನ್ನು ಗಮನಿಸಿ.
ಮೊದಲಿಗೆ ಸಾವರ್ಕರ್ ಇಂದ ಶುರು ಮಾಡೋಣ. ತನ್ನ ಬದುಕಿನ ಕೊನೆಯ ವರ್ಷಗಳಲ್ಲಿ ಸಾವರ್ಕರ್ ಬರೆದ ‘ಹಿಂದೂಗಳ ವೈಭವಯುತ ಇತಿಹಾಸದ ಆರು ಯುಗಗಳುʼ ಪುಸ್ತಕದಲ್ಲಿ, ಮುಸ್ಲಿಂ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಬೇಕೆಂದು ಬರೆಯುತ್ತಾರೆ. ತೀರಾ ಇತ್ತೀಚೆಗೆ ಹಿಂದೂ ಯುವ ವಾಹಿನಿ ಎಂಬ ಹೆಸರಿನ (ಹಿಂದೂ ಧರ್ಮಕ್ಕೂ ಇವರಿಗೂ ಯಾವ ಸಂಬಂಧವೂ ಇಲ್ಲ. ಹೆಸರಿನಲ್ಲಿ ಹಿಂದೂ ಎಂದಿಟ್ಟುಕೊಂಡು ಧರ್ಮಕ್ಕೆ ಅಪಕೀರ್ತಿ ತರುತ್ತಾರೆ) ಸಂಘಟನೆಯ ವತಿಯಿಂದ ಸಂಘಟಿಸಲಾದ ಕಾರ್ಯಕ್ರಮದಲ್ಲಿ, ʼಸತ್ತ ಮುಸ್ಲಿಂ ಹೆಣ್ಣುಮಕ್ಕಳನ್ನು ಗೋರಿಯಿಂದ ತೆಗೆದು ಅತ್ಯಾಚಾರ ಮಾಡಬೇಕುʼ ಎಂದು ಹೇಳಲಾಯಿತು. ಅದನ್ನು ಯೋಗಿ ಆದಿತ್ಯನಾಥರೇ ಹೇಳಿದರೆಂದು ಬಿಂಬಿಸಲಾಯಿತಾದರೂ, ವಾಸ್ತವದಲ್ಲಿ ಅವರು ಹೇಳಿರಲಿಲ್ಲ. ಆದರೆ, ಅವರ ಸಮ್ಮುಖದಲ್ಲಿ ಅವರದ್ದೇ ಸಂಘಟನೆಯ ಸದಸ್ಯರು ಹೇಳಿದ ಮಾತದು.
ಇದಲ್ಲದೇ ಜಮ್ಮುವಿನ ಕಥುವಾದಲ್ಲಿ ಬಾಲಕಿಯೊಬ್ಬಳನ್ನು ದೇವಸ್ಥಾನದಲ್ಲೇ ಸತತವಾಗಿ ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಇದನ್ನು ಮಾಡಿದವರ ಪರವಾಗಿ ಇಡೀ ಬಿಜೆಪಿಯ ಯಂತ್ರಾಂಗವೇ ತೊಡೆ ತಟ್ಟಿ ನಿಂತಿತ್ತು. ಆ ಪ್ರಕರಣದಲ್ಲಿ ಅತ್ಯಾಚಾರಿಗಳ ವಿರುದ್ಧ ಯಾರೂ ವಾದಿಸಬಾರದು ಎಂದು ಬಿಜೆಪಿಯ ವಕೀಲರ ವೃಂದ ಗಲಭೆ ನಡೆಸಿತ್ತು. ಅದೂ ಆದ ನಂತರದ ಇತ್ತೀಚಿನ ಘಟನೆ ನೋಡೋಣ. ಗುಜರಾತಿನ ಹತ್ಯಾಕಾಂಡದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಮನೆಯವರನ್ನು ಕೊಂದು, ಆಕೆಯ ಮೇಲೆ ಅತ್ಯಾಚಾರವೆಸಗಿದವರಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಆ ಅತ್ಯಾಚಾರಿಗಳನ್ನು ಕಳೆದ ವರ್ಷ ಗುಜರಾತಿನ ಬಿಜೆಪಿ ಸರ್ಕಾರವು ಅವಧಿಪೂರ್ವವಾಗಿ ಬಿಡುಗಡೆ ಮಾಡಿತ್ತು. ನಂತರ ಸುಪ್ರೀಂಕೋರ್ಟು ಛೀಮಾರಿ ಹಾಕಿ ಮತ್ತೆ ಅವರನ್ನು ಜೈಲಿಗೆ ತಳ್ಳಿತು.
ಮುಸ್ಲಿಂ ಮಹಿಳೆಯರ ಮೇಲೆ ಇಂತಹ ಅತ್ಯಾಚಾರ ನಡೆಸುವುದು, ನಡೆಸಲು ಕರೆ ಕೊಡುವುದು ಮತ್ತು ನಡೆಸಿದವರನ್ನು ಅಭಿನಂದಿಸಿ ವೈಭವೀಕರಿಸುವುದು ಮಾತ್ರವಲ್ಲಾ – ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವುದರಲ್ಲೂ ಬಿಜೆಪಿಯ ಅಧಿಕಾರಸ್ಥರ ಒಂದು ಶಾಮೀಲುದಾರಿಕೆ ಇದೆ. ಅಂತಹ ಪ್ರಕರಣ ನಡೆದಿದ್ದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ. ಘಟನೆಯಲ್ಲಿ ಪಾಲ್ಗೊಂಡಿದ್ದು ಬಿಜೆಪಿಯ ನಾಯಕರಲ್ಲವಾದರೂ, ಅತ್ಯಾಚಾರ ಮತ್ತು ಕೊಲೆಯಲ್ಲಿ ಭಾಗಿಯಾದವರ ಪರವಾಗಿ ಬಿಜೆಪಿಯ ಮಾಜಿ ಶಾಸಕ ರಾಜವೀರ ಸಿಂಗ್ ಪೆಹಲ್ವಾನ್ ಒಂದು ದೊಡ್ಡ ರ್ಯಾಲಿಯನ್ನು ಸಂಘಟಿಸಿದ. ಆ ರ್ಯಾಲಿಯಲ್ಲಿ ಅತ್ಯಾಚಾರದ ಆರೋಪಿಗಳ ಕುಟುಂಬದವರು, ಆರೆಸ್ಸೆಸ್, ಕರ್ನಿ ಸೇನಾ ಮತ್ತು ಭಜರಂಗದಳದ ಸದಸ್ಯರು ಪಾಲ್ಗೊಂಡಿದ್ದರು. ಬಿಜೆಪಿಯ ಶಾಸಕ ಸುರೇಂದ್ರನಾಥ ಸಿಂಗ್ ಈ ವಿದ್ಯಮಾನದಲ್ಲಿ ಮೃತ ಯುವತಿಯ ವಿರುದ್ಧವೇ ಮಾತನಾಡಿ ಛೀಮಾರಿ ಹಾಕಿಸಿಕೊಂಡಿದ್ದ. ಬಿಜೆಪಿಯ ದೊಡ್ಡ ದೊಡ್ಡ ನಾಯಕರೇ, ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿ ಕೃಷ್ಣ ಶರ್ಮನಂಥವರು ಅತ್ಯಾಚಾರಕ್ಕೆ ಮಹಿಳೆಯರೇ ಕಾರಣವೆನ್ನುವ ಹೇಳಿಕೆಗಳನ್ನು ಸಾಕಷ್ಟು ನೀಡಿದ್ದಾರೆ.

ಮುಸ್ಲಿಂ ಮಹಿಳೆಯರು ಮತ್ತು ದಲಿತ ಮಹಿಳೆಯರ ಮೇಲೆ ನಡೆಸುವ ಇಂತಹ ಅತ್ಯಾಚಾರಗಳ ವಿಚಾರದಲ್ಲಿ ಬಿಜೆಪಿ, ಆರೆಸ್ಸೆಸ್ ನಾಯಕರು ಹೀಗೆ ವರ್ತಿಸುತ್ತಾರೆಂದೂ, ಇದಕ್ಕೆ ಕೋಮುವಾದಿ ನಿಲುವು ಮತ್ತು ಜಾತಿವಾದ ಕಾರಣವೇ ಹೊರತು ಮಹಿಳೆಯರ ವಿರುದ್ಧದ ಧೋರಣೆ ಕಾರಣವಲ್ಲವೆಂದುಕೊಳ್ಳಬೇಡಿ. ಬಿಜೆಪಿಯ ದೊಡ್ಡ ನಾಯಕರಲ್ಲೊಬ್ಬನಾದ ಬ್ರಿಜ್ ಭೂಷಣ್ ಸಿಂಗ್ ಕುಸ್ತಿ ಫೆಡರೇಷನ್ ಅಧ್ಯಕ್ಷನಾಗಿ ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದರ ಬಗ್ಗೆ ದೊಡ್ಡ ವಿವಾದವಾಯಿತು. ಬಿಜೆಪಿಯ ಬೆಂಬಲಿಗರೇ ಆಗಿದ್ದ ಮೇಲ್ಜಾತಿ ಕುಸ್ತಿಪಟುಗಳು ಈ ಆರೋಪವನ್ನು ಮಾಡಿದರು. ಬಿಜೆಪಿಯ ಬ್ರಿಜ್ ಸಿಂಗನ ವಿರುದ್ಧ ನಿಲುವು ತೆಗೆದುಕೊಳ್ಳಲೇಇಲ್ಲ. ಉದ್ದಕ್ಕೂ ಆತನನ್ನೇ ಬೆಂಬಲಿಸಿದರು.
ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ, 17 ವರ್ಷದ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿದ್ದ ಪ್ರಕರಣದಲ್ಲಿ ಶಿಕ್ಷೆಯಾಗಿದ್ದು ಬಿಜೆಪಿಯ ಎಂಎಲ್‌ಎ ಕುಲದೀಪ್ ಸಿಂಗ್ ಸೆಂಗಾರ್ ಎಂಬ ವ್ಯಕ್ತಿಗೆ. ಅದೇ ರೀತಿ ದುದ್ದಿ ಕ್ಷೇತ್ರದ ಬಿಜೆಪಿ ಎಂಎಲ್‌ಎ ರಾಮದುಲಾರ್ ಗೌರ್ ಎಂಬಾತನೂ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದಾನೆ.
ಇವೆಲ್ಲವೂ ಕೆಲವು ಉದಾಹರಣೆಗಳಷ್ಟೇ. ಹೆಣ್ಣನ್ನು ಮತ್ತು ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದೆಲ್ಲಾ ಜಾತಿಗಳವರನ್ನು ತುಚ್ಛವಾಗಿ ನೋಡುವ ಮನುಸ್ಮೃತಿಯನ್ನು ಈ ದೇಶದ ಅಧಿಕೃತ ಸಂವಿಧಾನವಾಗಿ ಸ್ವೀಕರಿಸಬೇಕೆಂಬ ಮಾತುಗಳನ್ನು ಆರೆಸ್ಸೆಸ್ಸಿನ ಸರ್ವೋಚ್ಚ ನಾಯಕ ಗೋಳ್ವಾಲ್ಕರ್ ಅವರು ಆರ್ಗನೈಸರ್ ಪತ್ರಿಕೆಯಲ್ಲಿ ಬರೆದಿದ್ದರು. ಇದೇ ವಾಸ್ತವ.

ಹೆಣ್ಣು ಅಡಿಯಾಳು, ಭೋಗದ ವಸ್ತು, ಎರಡನೇ ದರ್ಜೆ ಪ್ರಜೆ, ಗಂಡು ಹೇಳಿದ ಹಾಗೆ ಕೇಳಿಕೊಂಡು ಬಿದ್ದಿರಬೇಕೆಂಬ ಮನೋಭಾವವೇ ನಂತರ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಿಗೆ ಪ್ರೇರೇಪಿಸುತ್ತದೆ. ಅದು ಬಿಜೆಪಿ ಮತ್ತು ಆರೆಸ್ಸಿಸ್ಸಿನ ಡಿಎನ್‌ಎ ಒಳಗಿದೆ. ಹೀಗಾಗಿ ಇಂತಹ ಪ್ರಕರಣವು ತಮ್ಮ ಪಕ್ಷದಲ್ಲಿ ನಡೆದಾಗ ಹೋಗಲಿ, ಬೇರೆ ಪಕ್ಷದಿಂದ ನಡೆದಾಗಲೂ ಅವರು ಖಂಡಿಸುವುದಿಲ್ಲ. ಆ ಬೇರೆ ಪಕ್ಷದವರೇ ಖಂಡಿಸಿದಾಗಲೂ, ಇವರು ಖಂಡಿಸಲು ಸಿದ್ಧರಿಲ್ಲ. ಹಿಂದೂ ಹೆಣ್ಣುಮಕ್ಕಳ ಮೇಲೆ ಯಾವ ಕಾಳಜಿಯೂ ಅವರಿಗಿಲ್ಲ. 10000 ಅಂತಹ ಪ್ರಕರಣ ನಡೆದಾಗಲೂ ಅವರು ಸುಮ್ಮನಿರುತ್ತಾರೆ ಅಥವಾ ಅತ್ಯಾಚಾರಿಗಳನ್ನು ಬೆಂಬಲಿಸುತ್ತಾರೆ. ಆದರೆ, ಅದೇ ಸಂದರ್ಭದಲ್ಲಿ ಎಲ್ಲಿಯೋ ಯಾವುದಾದರೂ ಕಾರಣಕ್ಕೆ ಮುಸ್ಲಿಂ ಒಬ್ಬ ಅಂತಹ ಕೃತ್ಯದಲ್ಲಿದ್ದ ಎಂಬ ಸುಳಿವು ಸಿಕ್ಕರೆ, ರಣಹದ್ದುಗಳಂತೆ ಹಾರಾಡುತ್ತಾರೆ. ಇದು ಬಿಜೆಪಿ ಆರೆಸ್ಸೆಸ್ ಸಂಘಟನೆಯವರಿಗೆ ಮಾತ್ರ ಸೀಮಿತವಲ್ಲ; ಇದೊಂದು ಮನಸ್ಥಿತಿ. ಈ ಮನಸ್ಥಿತಿಯನ್ನು ಹೋಗಲಾಡಿಸಲು ಪ್ರಜ್ಞಾಪೂರ್ವಕ, ಸಂಘಟಿತ ಪ್ರಯತ್ನ ನಡೆಯಬೇಕಿದೆ.