ದೇಶದ ಹಲವು ರಾಜ್ಯಗಳಲ್ಲಿರುವ ರಜಪೂತ ಸಮುದಾಯ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶಗೊಂಡಿದೆ. ಮೋದಿ ಸಂಪುಟದ ಕೇಂದ್ರ ಮೀನುಗಾರಿಕೆ ಸಚಿವ ಹಾಗೂ ರಾಜ್‌ಕೋಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ್ಷೋತ್ತಮ ರೂಪಾಲ ಅವರ ವಿವಾದಾತ್ಮಕ ಹೇಳಿಕೆಯಿಂದ ಕೇಸರಿ ಪಕ್ಷದ ವಿರುದ್ಧ ರಜಪೂತ ಸಮುದಾಯ ಬಂಡೆದ್ದಿದೆ.
ಕೆಲವು ವಾರಗಳ ಹಿಂದೆ ಚುನಾವಣಾ ಪ್ರಚಾರದಲ್ಲಿ ‘ರಜಪೂತ ದೊರೆಗಳು ಬ್ರಿಟಿಷರಿಗೆ ಸಹಕರಿಸಿದ್ದರು. ಅವರ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದರು’ಎಂದು ಪರಶೋತ್ತಮ್ ರೂಪಾಲಾ ಹೇಳಿದ್ದು ಇವೆಲ್ಲ ಘಟನೆಗಳಿಗೆ ಪ್ರಮುಖ ಕಾರಣ.
ಈಗಾಗಲೇ ಎರಡು ಹಂತಗಳಲ್ಲಿ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ರಜಪೂತ ಸಮುದಾಯವು ತಮ್ಮ ಆವೇಶವನ್ನು ಮತದಾನದ ಮೂಲಕ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಂಡಿರುವುದಾಗಿ ಸಮುದಾಯದ ಪ್ರಮುಖ ನಾಯಕರಿಂದ ವ್ಯಕ್ತವಾಗಿದೆ. ಮುಂದಿನ ಐದು ಹಂತಗಳಲ್ಲಿಯೂ ತಮ್ಮ ಆಕ್ರೋಶ ಮುಂದುವರಿಯಲಿದೆ ಎನ್ನುತ್ತಿದ್ದಾರೆ ಈ ಸಮುದಾಯದ ನಾಯಕರು.
ಕಳೆದ ಕೆಲವು ವಾರಗಳಿಂದ ಗುಜರಾತ್, ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಸಮುದಾಯದಿಂದ ಜ್ವಾಲಾಮುಖಿಯ ರೀತಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದು ಈಗಾಗಲೇ ಎರಡು ಹಂತಗಳ ಚುನಾವಣೆಯಲ್ಲಿ ಪರಿಣಾಮ ಬೀರಿದ್ದು, ಮುಂದಿನ 5 ಹಂತಗಳ ಮತದಾನದಲ್ಲಿಯೂ ರಜಪೂತರ ಆಕ್ರೋಶ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
ಪ್ರತಿಭಟನೆಯ ಕಾವು ಜೋರಾಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಹೆಚ್ಚು ಅನುಕೂಲವಾಗಲಿದ್ದು, ಇದರ ಲಾಭ ಗಳಿಸುವ ವಿಶ್ವಾಸ ಸಹ ವಿಪಕ್ಷಗಳಲ್ಲಿ ಮೂಡಿದೆ.
ದೇಶಾದ್ಯಂತ ರಜಪೂತರು ಜನಸಂಖ್ಯೆ ಶೇ.8ಕ್ಕಿಂತ ಹೆಚ್ಚಿದ್ದು, ಸರಿಸುಮಾರು 20 ಕೋಟಿಯಷ್ಟಿದ್ದಾರೆ. ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ,ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಪ್ರಭಾವಿ ಎಂದು ಪರಿಗಣಿಸಲಾಗಿರುವ ಈ ಸಮುದಾಯ ಸದ್ಯದ ಪರಿಸ್ಥಿತಿಯಲ್ಲಿ ಸಂಪೂರ್ಣವಾಗಿ ಬಿಜೆಪಿ ವಿರುದ್ಧವಾಗಿ ನಿಂತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳುಗಾರರನ್ನು ಸೋಲಿಸುವ ಸಮಯ ಬಂದಿದೆ; ಮತದಾರರೇ ಮುಂದಾಗಬೇಕಿದೆ
ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಪರ್ಷೋತ್ತಮ ರೂಪಾಲ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖ ನಾಯಕರು ಹಲವು ಬಾರಿ ಕ್ಷಮೆಯಾಚಿಸಿ ಸಂಧಾನ ಸಭೆ ನಡೆಸಿದರೂ, ಸಮುದಾಯದ ಕೋಪ ಮಾತ್ರ ತಣ್ಣಗಾಗುತ್ತಿಲ್ಲ.
ಗುಜರಾತ್‌ನಲ್ಲಿ ಆರಂಭದಲ್ಲಿ ರಜಪೂತ ಸಮುದಾಯ ಅಹಮದಾಬಾದ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗಳ ಮೇಲೆ ರಾಜ್ಯ ಸರ್ಕಾರ ನಿರ್ಬಂಧ ಹೇರಿತ್ತು. ಆಗ ಸಮುದಾಯದ ಸದಸ್ಯರು ತಮ್ಮ ತೋಳುಗಳಲ್ಲಿ ಕಪ್ಪು ಪಟ್ಟಿಗಳನ್ನು ಧರಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರು. ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿರುವ ಸಮುದಾಯದ ಕಾರ್ಯಕರ್ತರು ಬಿಜೆಪಿ ವಿರುದ್ಧ ಮತದಾನ ಮಾಡಲು ಪ್ರತಿಜ್ಞೆ ಮಾಡಿದ್ದಾರೆ.
ರಜಪೂತರು ಮಾತ್ರವಲ್ಲ, ಹಲವಾರು ಇತರ ಸಮುದಾಯಗಳು ಸಹ ಬಿಜೆಪಿ ವಿರುದ್ಧ ಕೋಪಗೊಂಡಿವೆ. ಈ ಬಾರಿ ಆಡಳಿತ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿವೆ ಎನ್ನುತ್ತಿದ್ದಾರೆ ವಿವಿಧ ರಾಜ್ಯಗಳಲ್ಲಿರುವ ಸ್ಥಳೀಯ ನಾಯಕರು.
ಉತ್ತರ ಪ್ರದೇಶದಲ್ಲೂ ಬಿಜೆಪಿ ವಿರುದ್ಧ ಹೆಚ್ಚಾದ ಸಿಟ್ಟು
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಬಿಜೆಪಿಯ ಅಭ್ಯರ್ಥಿ, ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರನ್ನು ಸೋಲಿಸಲು ರಜಪೂತರು ಒಗ್ಗಟ್ಟಾಗಿದ್ದಾರೆ. ಬಲ್ಯಾನ್ ಅವರು ಕಳೆದ ಕೆಲವು ವರ್ಷಗಳಿಂದ ತಮ್ಮ ಸಮುದಾಯಕ್ಕಾಗಿ ಕೆಲಸ ಮಾಡುತ್ತಾ ನಮ್ಮನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯ ರಜಪೂತ ನಾಯಕರು ಆರೋಪಿಸಿದ್ದಾರೆ.
ದೇಶದ ಹಲವು ಕಡೆಗಳಂತೆ ಉತ್ತರ ಪ್ರದೇಶದಲ್ಲಿಯೂ ರಜಪೂತರ ಕೋಪವು ಕಳೆದ ಕೆಲವು ವರ್ಷಗಳಿಂದ ಕುದಿಯುತ್ತಿರುವಾಗ, ಇತ್ತೀಚಿಗೆ ಬಿಜೆಪಿಯ ಕೇಂದ್ರ ಸಚಿವ ಪರ್ಷೋತ್ತಮ ರೂಪಾಲ ನೀಡಿದ ಹೇಳಿಕೆಯ ನಂತರ ಮತ್ತಷ್ಟು ಹೆಚ್ಚಾಗಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ರಜಪೂತ ಸಮುದಾಯದ ಮುಖಂಡರು ನಡೆಸುವ ಸಣ್ಣ ಸಭೆಗಳು ಮತ್ತು ಪಂಚಾಯತ್‌ಗಳಲ್ಲಿ ಬಿಜೆಪಿ ವಿರುದ್ಧದ ಘೋಷಣೆಗಳು ಪ್ರಮುಖವಾಗಿರುತ್ತವೆ.
2014 ರಲ್ಲಿ ಕೇಂದ್ರದಲ್ಲಿ ಮತ್ತು 2017 ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ರಜಪೂತರನ್ನು ಕಡೆಗಣಿಸಲಾಗುತ್ತಿದೆ. “ಕೇಸರಿ ಪಕ್ಷದ ನಾಯಕರು ನಮ್ಮ ಸಮುದಾಯದ ಕಡೆ ಗಮನ ಕೊಡುತ್ತಿಲ್ಲ. ಅವರು ನಮ್ಮನ್ನು ನಿರಂತರವಾಗಿ ಅಭಿವೃದ್ಧಿಯಿಂದ ದೂರ ಮಾಡುತ್ತಿದ್ದಾರೆ. ಉದ್ಯೋಗ ಶಿಕ್ಷಣ ಸೇರಿ ಹಲವು ಕ್ಷೇತ್ರಗಳಲ್ಲಿ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುತ್ತಿಲ್ಲ. ಪೊಲೀಸ್ ಮತ್ತು ಸೈನ್ಯದ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಯಲ್ಲಿ ರಜಪೂತರು ಇತರ ಸಮುದಾಯಗಳಿಗಿಂತ ಕಡಿಮೆ ಸಂಖ್ಯೆಯಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ” ಎಂದು ಹಲವು ಸ್ಥಳೀಯ ನಾಯಕರು ದೂರುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಗಾಜಿಯಾಬಾದ್, ಕೈರಾನಾ ಸೇರಿದಂತೆ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ರಜಪೂತ್ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ.
ಪಶ್ಚಿಮ ಉತ್ತರ ಪ್ರದೇಶದ ಕೇಂದ್ರಬಿಂದುವಾಗಿರುವ ಸಹರಾನ್ಪುರ, ಮೀರತ್, ಶಾಮ್ಲಿ, ಮುಜಾಫರ್‌ನಗರ, ಬಾಗ್ಪತ್, ಗೌತಮ್ ಬುದ್ಧ ನಗರ ಮತ್ತು ಗಾಜಿಯಾಬಾದ್ ಜಿಲ್ಲೆಗಳ 34 ಸ್ಥಾನಗಳಲ್ಲಿ ಕೇವಲ ಇಬ್ಬರು ಮಾತ್ರ ರಜಪೂತ ಶಾಸಕರಿದ್ದಾರೆ. ಇವೆಲ್ಲವೂ ರಜಪೂತರ ಆಕ್ರೋಶಕ್ಕೆ ಕಾರಣವಾಗಿದ್ದು ಮುಂದಿನ ಹಂತದ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡುವುದು ಖಡಾಖಂಡಿತವಾಗಿದೆ.
