ಡೊನಾಲ್ಡ್ ಟ್ರಂಪ್, ಒಂದು ಕಡೆ ನಾನೇ ಬಿಳಿಯರ ರಕ್ಷಕ, ಅಮೆರಿಕಾದ ಉದ್ದಾರಕನೆಂದು ಆತ್ಮಸ್ತುತಿಯಲ್ಲಿ ತೊಡಗಿಕೊಂಡರೆ ಮತ್ತೊಂದೆಡೆ ಅನ್ಯರ ಬಗ್ಗೆ ಉಗುಳುವ ದ್ವೇಷ ಆತನ ಸಮರ್ಥಕರ ಸಂಖ್ಯೆಯನ್ನು ವೃದ್ಧಿಸಿದೆ. ಟ್ರಂಪ್ ಲಂಪಟತನವನ್ನು, ಹಗೆಭರಿತ ದುರಾಡಳಿತವನ್ನು ಕಡೆಗಣಿಸುವಂತೆ ಮಾಡಿದೆ. ಈ ಕುರುಡು ಸಮರ್ಥಕರು ಸಂತ್ರಸ್ತರ ಪರವಾಗಿ, ಸತ್ಯದ ಪರವಾಗಿ ಎಂದಿಗೂ ನಿಲ್ಲಲಾರರು ಎಂಬದು ಟ್ರಂಪ್ಗೆ ತಿಳಿದಿದೆ.
ಇದು ಲೈಂಗಿಕ ಹಗರಣಗಳ ಕಾಲ. ಬಲಿಷ್ಠರ ಕಾಮಕೇಳಿಗಳನ್ನು ನೋಡಿ ಜನ ದಿಗ್ಬ್ರಾಂತರಾಗಿದ್ದಾರೆ. ಆದರೆ ಈ ಹಗರಣಗಳು ಬಲಿಷ್ಠರ ಬಲ ಕುಗ್ಗಿಸುವುದೇ? ಈ ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡ ಬಲಿಷ್ಠ ನಾಯಕರನ್ನು ಜನ ಗ್ರಹಿಸುವ ಬಗೆ ಹೇಗೆ? ಒಮ್ಮೆ ನೋಡುವ…
“ನನಗೆ ಸುಂದರ ಹುಡುಗಿಯರೆಂದರೆ ಇಷ್ಟ. ಅವರ ಸೆಳೆತಕ್ಕೆ ನಾ ಒಳಗಾಗುತ್ತೇನೆ. ಸುಂದರಿಯರು ಅಯಸ್ಕಾಂತದಂತೆ. ಅವರನ್ನಿಡಿದು ಚುಂಬಿಸುತ್ತೇನೆ. ಅವರ ಸಮ್ಮತಿಗಾಗಿ ಕಾಯುವುದಿಲ್ಲ. ನೀನೊಬ್ಬ ಪ್ರಖ್ಯಾತ ವ್ಯಕ್ತಿಯಾಗಿದ್ದಾಗ, ತಾರೆಯಾಗಿದ್ದಾಗ ನೀವು ಏನು ಬೇಕಾದರೂ ಮಾಡಬಹುದು. ಅವರು ಮಾಡಲು ಬಿಡುತ್ತಾರೆ. ನೇರ ಅವರ …..ಗೆ ಕೈ ಹಾಕಿಬಿಡಿ, ನೀವು ಏನು ಬೇಕಾದರೂ ಮಾಡಿ, ಅವರು ಸುಮ್ಮನಿರುತ್ತಾರೆ.”
ಈ ಮೇಲಿನ ಮಾತುಗಳನ್ನೋದಿ ಬೆಚ್ಚಿಬೀಳಬೇಡಿ. ಈ ಮಾತುಗಳನ್ನು ಯಾವ ಮಾನಸಿಕ ಅಸ್ವಸ್ಥ ಹೇಳಿರಬಹುದೆಂದು ಯೋಚನೆಯಲ್ಲಿ ಮುಳುಗಬೇಡಿ. 2005ರಲ್ಲಿ ಪ್ರಖ್ಯಾತ ವ್ಯಕ್ತಿಯೊಬ್ಬ “ಆಕ್ಸೆಸ್ ಹಾಲಿವುಡ್” ಎಂಬ ಟಿವಿ ಷೋ ನಡೆಸಿಕೊಡುತ್ತಿದ್ದವನಿಗೆ ಹೇಳಿದ ಮಾತುಗಳಿವು. ಆ ವ್ಯಕ್ತಿ ಬೇರಾರು ಅಲ್ಲ- ಡೊನಾಲ್ಡ್ ಟ್ರಂಪ್! ಈ ವಿಕೃತ ಹೇಳಿಕೆ ನೀಡಿದ ಹತ್ತುವರುಷಗಳ ನಂತರ ಟ್ರಂಪ್ ಅಮೆರಿಕಾದ ರಾಷ್ಟ್ರಪತಿಯಾದ!
ಒಮ್ಮೆ ಟ್ರಂಪ್ ವಿಮಾನದಲ್ಲಿ ಪ್ರಯಾಣ ಮಾಡುವಾಗ ಸಹಯಾತ್ರಿ ಜೆಸ್ಸಿಕಾ ಲೀಡ್ಸ್ಳನ್ನು ಚುಂಬಿಸಿ ಅಸಭ್ಯವಾಗಿ ವರ್ತಿಸಿದನಂತೆ. ಆ ಸಹಯಾತ್ರಿ ಜಾಗ ಬದಲಾಯಿಸಿದಳಂತೆ. ಹಲವು ವರ್ಷಗಳ ನಂತರ ಅವಳ ಮುಖಾಮುಖಿಯಾದಾಗ- ”ಆ ನಿನ್ನ ನೆನಪು ನನಗಿದೆ- You’re the cunt from the airplane?” ಅಲ್ವಾ ಎಂದನಂತೆ.
ಡೊನಾಲ್ಡ್ ಟ್ರಂಪ್ ಮೂಲತಃ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿ. ಅವನ ಮದುವೆಗಳು ಮುರಿದು ಬಿದ್ದಿವೆ, ಮಾಡುತ್ತಿದ್ದ ವ್ಯಾಪಾರ ದಿವಾಳಿಯಾಗಿವೆ. ಇಷ್ಟಾದರೂ ಬಾಯಿ ತೆರೆದರೆ ಅನ್ಯರ ಬಗ್ಗೆ ದ್ವೇಷ ಉಗುಳುವ, ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಬೆಂಕಿಯಂತಹ ಮಾತುಗಳನ್ನಾಡುವ ಚಾತುರ್ಯದಿಂದ ಬಲಪಂಥೀಯರ, ಬಿಳಿಯರ ಕಣ್ಮಣಿಯಾಗಿರುವ ಡೊನಾಲ್ಡ್ ಟ್ರಂಪ್ ಮುಂದಿನ ಬಾರಿಯು ಅಮೆರಿಕಾದ ರಾಷ್ಟ್ರಪತಿಯಾಗುವ ಎಲ್ಲಾ ಸಾಧ್ಯತೆಗಳಿವೆ.
ಟ್ರಂಪ್ 2016ರಲ್ಲಿ ರಿಪಬ್ಲಿಕನ್ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿಯಾದಾಗ ಆತ ಮೊದಲು ಮಾಡಿದ ಕೆಲಸ ಕ್ಯಾರೆನ್ ಮೆಕ್ಡೊಗಲ್ ಮತ್ತು ಸ್ಟಾರ್ಮೀ ಡೇನಿಯೆಲ್ಸ್ ಅವರಿಂದ NDA- Non disclosure agreement ಒಪ್ಪಂದಕ್ಕೆ ಸಹಿಮಾಡಿಸಿಕೊಂಡ. ವೈಯಕ್ತಿಕ ಸಂಬಂಧಗಳ ಕುರಿತಾದ ವಿಷಯ ಮತ್ತಿತರ “ಸೂಕ್ಶ್ಮ” ವಿಚಾರಗಳನ್ನು ಬಯಲು ಮಾಡದಂತೆ ಮಾಡಿಕೊಳ್ಳುವ ಒಪ್ಪಂದವೇ NDA. ಕ್ಯಾರೆನ್ ಮತ್ತು ಡೇನಿಯೆಲ್ಸ್, ಡೊನಾಲ್ಡ್ ಟ್ರಂಪ್ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು. ಕ್ಯಾರೆನ್ ಮತ್ತು ಡೇನಿಯೆಲ್ಸ್ ಮೌನಕ್ಕೆ ಶರಣಾಗುವಂತೆ ಮಾಡಲು ಟ್ರಂಪ್ 280,000$ ಅವರಿಗೆ ನೀಡಿದ್ದ.
ರೋಮನ್ ದೊರೆ ಕಾಲಿಗುಲ ತನ್ನ ಅರಮನೆಯಲ್ಲಿ ಆಗಾಗ ಔತಣಕೂಟ ಏರ್ಪಡಿಸುತ್ತಿದ್ದನಂತೆ. ಆ ಕೂಟಕ್ಕೆ ಮಂತ್ರಿಗಳಿಗೆ ಆಹ್ವಾನ ನೀಡುತ್ತಿದ್ದನಂತೆ. ಮಂತ್ರಿಗಳಿಗೋ ಆ ಔತಣಕೂಟಕ್ಕೆ ಆಹ್ವಾನ ಬಂತೆಂದರೆ ಪ್ರಾಣ ಹೋದಂತಾಗುತ್ತಿತ್ತು. ಏಕೆ ಅಂತೀರಾ. ಮಂತ್ರಿಗಳು ಔತಣಕೂಟಕ್ಕೆ ಒಬ್ಬರೇ ಹೋಗವಂತಿರಲಿಲ್ಲ. ಜೊತೆಗೆ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋಗಬೇಕಿತ್ತು. ಆ ಔತಣಕೂಟದಲ್ಲಿ ಕಾಲಿಗುಲನ ಕಣ್ಣು ಯಾವ ನಾರಿಯರ ಮೇಲೆ ಬೀಳುತ್ತಿತ್ತೋ ಅವರು ಕಾಲಿಗುಲನ ಜೊತೆಗೆ ಹೋಗಬೇಕಿತ್ತು. ನಿರಾಕರಿಸುವ ಆಯ್ಕೆ ಯಾರಿಗೂ ಇರಲಿಲ್ಲ. ಅದು ಜೀವನ್ಮರಣದ ಪ್ರಶ್ನೆಯಾಗಿತ್ತು. ಹೀಗೆ ಪರನಾರಿಯರೊಡನೆ ಸಮಯ ಕಳೆದ ಕಾಲಿಗುಲ ಅದರ ವಿವರ ನೀಡುತ್ತಿದ್ದನಂತೆ. ಕೆಲ ಸಾರಿ ಎಲ್ಲರ ಸಮ್ಮುಖದಲ್ಲೇ ಕ್ರಿಯೆ ನಡೆದದ್ದಿದೆ! ನಾರಿಯರನ್ನು ಶಾಶ್ವತವಾಗಿ ತನ್ನ ಬಳಿಯೇ ಉಳಿಸಿಕೊಂಡದ್ದು ಇದೆ! ಡೊನಾಲ್ಡ್ ಟ್ರಂಪ್ ಕಾಮ ಕೇಳಿಗಳು ರೋಮನ್ ದೊರೆಗಿಂತ ವಿಭಿನ್ನವಾಗೇನಿಲ್ಲ.

ಇಷ್ಟೆಲ್ಲಾ ಹಗರಣಗಳಿದ್ದರು ಅಮೆರಿಕನ್ನರು ಡೊನಾಲ್ಡ್ ಟ್ರಂಪ್ನಂತಹವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ಮುಂದಾಗುತ್ತಿರುವುದೇಕೆ ಎಂಬ ಪ್ರಶ್ನೆ ನಮ್ಮಲಿ ಮೂಡಬಹುದು. ಟ್ರಂಪ್ ಗೆಲುವಿನ ರಹಸ್ಯ ಆತ ನಿರಂತರವಾಗಿ ಉಗುಳುವ ದ್ವೇಷದಲ್ಲಿದೆ.
“ಮೆಕ್ಸಿಕನ್ ವಲಸಿಗರು ಅಮೆರಿಕ ದೇಶಕ್ಕೆ ಮಾರಕ. ಅವರು ಇಲ್ಲಿಗೆ ಮಾದಕವಸ್ತುಗಳನ್ನು ತರುತ್ತಾರೆ, ಇಲ್ಲಿ ಅಪರಾಧವೆಸಗುತ್ತಾರೆ, ಅತ್ಯಾಚಾರ ಮಾಡುತ್ತಾರೆ, ಆದರೂ ಕೆಲವರು ಇವರ ಬೆಂಬಲಕ್ಕೆ ನಿಲ್ಲುತ್ತಾರೆ” ಎಂದು 2015ರಲ್ಲಿ ಡೆಮೋಕ್ರಾಟ್ ಅಭ್ಯರ್ಥಿಯನ್ನು ಆಡಿಕೊಂಡಿದ್ದ ಟ್ರಂಪ್. ಮೆಕ್ಸಿಕನ್ ವಲಸಿಗರ ಮೇಲೆ ಕಾರುವ ಹಗೆಯನ್ನೇ ಟ್ರಂಪ್ ಆಫ್ರೋ ಅಮೆರಿಕನ್ನರ ಮೇಲೆ, ಮುಸ್ಲಿಮರ ಮೇಲೆ ಕಾರುತ್ತಾನೆ. ಮೆಕ್ಸಿಕೋ ಅಮೆರಿಕಾದ ಗಡಿಯಲ್ಲಿ ದೈತ್ಯ ಗೋಡೆಗಳನ್ನು ಕಟ್ಟಿ ಮೆಕ್ಸಿಕನ್ನರ ಉಪಟಳವನ್ನು ತಡೆದಿದ್ದೇನೆ ಎಂದು ಹೇಳಿಕೊಳ್ಳುತ್ತಾನೆ ಟ್ರಂಪ್. ಅಮೆರಿಕಕ್ಕೆ ಸೇರಿದ ಹವಾಯಿ ದ್ವೀಪದಲ್ಲಿ ಒಬಾಮ ಜನಿಸಿದರು ಎಂಬ ಸ್ಪಷ್ಟ ಪುರಾವೆಗಳಿದ್ದರೂ ಬರಾಕ್ ಒಬಾಮ ಅಮೆರಿಕಾದಲ್ಲಿ ಹುಟ್ಟಿದವರೇನು ಎಂದು ಕೇಳುವಷ್ಟು ಭಂಡ ಧೈರ್ಯ ಟ್ರಂಪಿಗಿದೆ. ಇಂತಹ ಭಂಡ ಧೈರ್ಯದಿಂದ, ಅನ್ಯರ ಬಗೆಗಿನ ಹಗೆಯನ್ನು ಯಾವುದೇ ಫಿಲ್ಟರ್ ಇಲ್ಲದೆ ಹೇಳಿಕೊಳ್ಳುವ ಮೂಲಕ, ದೇಶವನ್ನು ಮೆಕ್ಸಿಕನ್ ದಾಳಿಯಿಂದ ರಕ್ಷಿಸಲು ಟ್ರಂಪ್ಗೆ ಮಾತ್ರ ಸಾಧ್ಯವೆಂಬ ಸುಳ್ಳು ಸುದ್ದಿಯನ್ನು ಜನರ ತಲೆಯಲ್ಲಿ ಬಿತ್ತಿದ ಟ್ರಂಪ್ ಬಿಳಿಯರ ಕಣ್ಮಣಿಯಾಗಿದ್ದಾನೆ!
ಟ್ರಂಪಿಗಿರುವ ಮತ್ತೊಂದು ಗುಣವೆಂದರೆ ತನ್ನ ವಿಕೃತಿಯ ಬಗ್ಗೆ ಯಾವುದೇ ಪಶ್ಚಾತ್ತಾಪ ಅಥವಾ ನಾಚಿಕೆ ಇಲ್ಲದಿರುವುದು. ಹಿ ಈಸ್ ಶೇಮ್ ಲೆಸ್. 2016 ರಾಷ್ಟ್ರಪತಿ ಚುನಾವಣೆಯ ವೇಳೆಗೆ ಹೊರಬಂದ ಹಗರಣವನ್ನು ರಾಜಕೀಯ ಪ್ರೇರಿತ, ಸತ್ಯಕ್ಕೆ ದೂರವಾದ ಮಾಹಿತಿಗಳೆಂದು ನಿರಾಕರಿಸಿದ ಟ್ರಂಪ್, ಹಗರಣದಲ್ಲಿ ಪ್ರಸ್ತಾಪವಾದ ಹೆಣ್ಣುಮಕ್ಕಳನ್ನು “ದೇ ಆರ್ ನಾಟ್ ಮೈ ಟೈಪ್- They are not my type” ಎಂದೇಳಿದ!
ಹಲವಾರು ಬಲಿಷ್ಠರು ತಪ್ಪೊಪ್ಪಿಕೊಳ್ಳಬಹುದು, ಪಶ್ಚಾತ್ತಾಪ ಪಡಬಹುದು, ಹೊಣೆಗಾರಿಕೆ ತೆಗೆದುಕೊಳ್ಳಬಹುದು, ಕಣ್ಣೀರಿಡುತ್ತಾ ಕ್ಷಮೆಯಾಚಿಸಬಹುದು, ರಾಜೀನಾಮೆ ನೀಡಬಹುದು. ಆದರೆ ಟ್ರಂಪ್ಗೆ ಎಂದಿಗೂ ಈ ಪಶ್ಚಾತ್ತಾಪದ ಬೇಗೆ ತಟ್ಟಲಾರದು. He is immune to such feelings. (ಹಗರಣದ ದಿನಗಳಲ್ಲಿ ಬಿಲ್ ಕ್ಲಿಂಟನ್ ಮೊದಮೊದಲಿಗೆ ಮೋನಿಕಾ ಲೆವಿನ್ಸ್ಕಿ ಆಪಾದನೆ ನಿರಾಕರಿಸಿದರು, ನಂತರ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದರು.)
ಟ್ರಂಪ್ ಜನಾಭಿಪ್ರಾಯ, ಜನಮನ್ನಣೆ ಎಂದೂ ನಿರೀಕ್ಷಿಸಿಲ್ಲ. ಆತನಿಗೆ ತನ್ನ ಅಂಧ ಭಕ್ತರ ಕುರಿತು ಅಷ್ಟು ನಂಬಿಕೆಯಿದೆ. ಯಾವುದೇ ಹಗರಣಗಳಲ್ಲಿ ಸಿಕ್ಕಿಕೊಂಡರು ಸಮರ್ಥಕರು ತನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ. ಕಳೆದ ಬಾರಿ ಬಂದ ಚುನಾವಣಾ ಫಲಿತಾಂಶವನ್ನೂ ಒಪ್ಪದ ಟ್ರಂಪ್ ಸಮರ್ಥಕರು ಅಮೆರಿಕಾದ ಶಾಸನ ಮಂದಿರ- ಕ್ಯಾಪಿಟಲ್ಗೆ ನುಗ್ಗಿ ದಾಂಧಲೆ ನಡೆಸಿದ್ದು ನೆನಪಿಸಿಕೊಳ್ಳಿ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ರಜ್ವಲ್ ಪ್ರಕರಣ, ಒಕ್ಕಲಿಗರ ನಾಯಕತ್ವ ಮತ್ತು ಮನುಷ್ಯತ್ವ
ಟ್ರಂಪ್ ಒಂದು ಕಡೆ ನಾನೇ ಬಿಳಿಯರ ರಕ್ಷಕ, ಅಮೆರಿಕಾದ ಉದ್ದಾರಕನೆಂದು ಆತ್ಮಸ್ತುತಿಯಲ್ಲಿ ತೊಡಗಿಕೊಂಡರೆ ಮತ್ತೊಂದೆಡೆ ಅನ್ಯರ ಬಗ್ಗೆ ಉಗುಳುವ ದ್ವೇಷ ಆತನ ಸಮರ್ಥಕರ ಸಂಖ್ಯೆಯನ್ನು ವೃದ್ಧಿಸಿದೆ. ಟ್ರಂಪ್ ಲಂಪಟತನವನ್ನು, ಹಗೆಭರಿತ ದುರಾಡಳಿತವನ್ನು ಕಡೆಗಣಿಸುವಂತೆ ಮಾಡಿದೆ. ಈ ಕುರುಡು ಸಮರ್ಥಕರು ಸಂತ್ರಸ್ತರ ಪರವಾಗಿ, ಸತ್ಯದ ಪರವಾಗಿ ಎಂದಿಗೂ ನಿಲ್ಲಲಾರರು ಎಂಬದು ಟ್ರಂಪ್ಗೆ ತಿಳಿದಿದೆ. ದೇಶ, ಸಮುದಾಯ, ಜಾತಿಯ ವಿಷಯ ಸತ್ಯ ಅಸತ್ಯಗಳ ಪ್ರಶ್ನೆ ಗೌಣವಾಗುತ್ತದೆ. ಮನುಷ್ಯರನ್ನು ಎಷ್ಟರಮಟ್ಟಿಗೆ ಮ್ಯಾನಿಪುಲೆಟ್ ಮಾಡಬಹುದು ಎಂಬುದನ್ನು ಈ ಸತ್ಯೋತ್ತರ ಕಾಲದ ಬಲಿಷ್ಠರು ಅರಿತಿದ್ದಾರೆ.
ಅಮೆರಿಕಾದ ದೇಶದ ಪಿತಾಮಹ, ಕ್ರಾಂತಿಕಾರಿ ಯುದ್ಧಗಳಲ್ಲಿ ಭಾಗವಹಿಸಿ ಬ್ರಿಟಿಷರಿಂದ ಅಮೆರಿಕಾವನ್ನು ಬಿಡುಗಡೆಗೊಳಿಸಿ ಪ್ರಖ್ಯಾತ ಅಮೆರಿಕಾದ ಸ್ವಾತಂತ್ರ್ಯ ಘೋಷಣೆಗೆ ಸಹಿ ಹಾಕಿದ ಮಹಾನ್ ನಾಯಕ ಮತ್ತು ಅಮೆರಿಕಾದ ಮೂರನೇ ರಾಷ್ಟ್ರಪತಿ ಥಾಮಸ್ ಜಾಫರ್ಸನ್ ತನ್ನ ಮನೆಯಾಳು ಸ್ಯಾಲಿ ಹೆಮಿಂಗ್ಸ್ ಎನ್ನುವಾಕೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದನಂತೆ. ಸ್ಯಾಲಿ ಹೆಮಿಂಗ್ಸ್ ಕಪ್ಪು ವರ್ಣದವಳಾಗಿದ್ದರಿಂದ ಹೊರ ಬಂದು ದೂರು ನೀಡುವ ಅವಕಾಶವಿರಲಿಲ್ಲ.
ಕಪ್ಪು ವರ್ಣದವರಿರುವುದೇ ಬಿಳಿಯರ ಬಳಕೆಗೆ ಎಂದು ನಂಬಿರುವ ಜನ ಸಮೂಹದ ನಡುವೆ, ಆ ಕರಾಳ ಕಾಲದಲ್ಲಿ ಸ್ಯಾಲಿ ಹೆಮಿಂಗ್ಸ್ ಅನುಭವಿಸಿದ ಯಾತನೆ ಹೇಗಿದ್ದಿರಬಹುದು? ಆಕೆ ದೂರು ನೀಡಿದ್ದರೆ ದೂರು ಸ್ವೀಕೃತಿಯಾಗುತಿತ್ತೇ, ಬಿಳಿಯ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಜಾಫರ್ಸನ್ ಅವರನ್ನು ಬಂಧಿಸುತ್ತಿದ್ದರೆ, ದೂರು ನೀಡಿ ಸ್ಯಾಲಿ ಬದುಕುಳಿಯುವ ಸಾಧ್ಯತೆ ಎಷ್ಟಿತ್ತು, ಜಾಫರ್ಸನ್ ಕರಾಳ ಮುಖವನ್ನು ಮರೆಮಾಚಿ ಬೇರೆಯದೇ ಇತಿಹಾಸವನ್ನು ಮಕ್ಕಳಿಗೆ ದಾಟಿಸುತ್ತಿರುವ ಈ ಪೀಳಿಗೆಯ ಬೇಜವಾಬ್ದಾರಿ ಎಂತದ್ದು, ಟ್ರಂಪ್ನನ್ನು ಮತ್ತೊಮ್ಮೆ ಆಯ್ಕೆ ಮಾಡಲು ಸಜ್ಜಾಗಿರುವ ಬಿಳಿಯರ ಮನಸ್ಥಿತಿ ಹೇಗಿದೆ ಎಂಬ ಪ್ರಶ್ನೆಗಳು ಒಮ್ಮೆ ಮನದಲ್ಲಿ ಸುಳಿದು ಹೋದವು.

“ಬೀದಿಯಲ್ಲಿ ಮಾಡುತ್ತಾ, ಓಡಾಡುವ ಕುದುರೆಗಳನ್ನು ಬೆದರಿಸದೆಯಿದ್ದರೆ ನನಗೆ ಯಾರದೇ ಲೈಂಗಿಕ ಜೀವನದ ಬಗ್ಗೆ ತಕರಾರಿಲ್ಲ” ಎಂದು ಆಸ್ಕರ್ ವೈಲ್ಡ್ ಹೇಳಿದ್ದನಂತೆ. (I have no objection to anyone’s sex life as long as they don’t practice it in the street and frighten the horses.) ನಾಲ್ಕು ಗೋಡೆಗಳ ಮಧ್ಯೆ, ಸಮ್ಮತಿಯಿಂದ ನಡೆಯುವ ಮಿಲನಗಳ ಬಗ್ಗೆ ಆಸ್ಕರ್ ಮಾತನಾಡುತ್ತಿದ್ದ ಅನ್ನಿಸುತ್ತೆ. ಆದರೆ ಇಂದು ಅಧಿಕಾರದ ದುರ್ಬಳಕೆಯಿಂದ, ಹಣ, ಜಾತಿಯ ಅಹಮ್ಮಿನಿಂದ, ಕಾನೂನಿನ ನ್ಯೂನತೆಗಳನ್ನು ಅರಿತು, ಅಂಧ ಸಮರ್ಥಕರ ಬೆಂಬಲ ಹೇಗಿದ್ದರೂ ಸಿಗಲಿದೆ ಎಂಬ ಮದದಲ್ಲಿ, ವ್ಯಕ್ತಿಯ ಅಸಹಾಯಕತೆಯನ್ನು ಬಳಸಿಕೊಂಡು ಎಸಕಲಾಗುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ತಿಳಿದಿದ್ದರೆ ಆಸ್ಕರ್ ಈ ಸಾಲುಗಳನ್ನು ಬರೆಯುವಾಗ ಹತ್ತು ಬಾರಿ ಯೋಚಿಸುತ್ತಿದ್ದ ಅನ್ನಿಸುತ್ತೆ.
ನಾವು ಬದುಕಿರುವ ಸತ್ಯೋತ್ತರ ಕಾಲದಲ್ಲಿ ಒಂದು ಘಟನೆಗೆ ಹಲವು ಆಯಾಮಗಳಿರುತ್ತವೆ, ಒಂದು ಪರಿಪೂರ್ಣ ಸತ್ಯವಿಲ್ಲದೆ ಹತ್ತಾರು ಸತ್ಯಗಳಿರುತ್ತವೆ. ಗಂಟೆ ಗಂಟೆಗೂ ಬಿತ್ತರಿಸಲಾಗುವ ಸುದ್ದಿಗಳು ನಮ್ಮಲ್ಲಿ ಗೊಂದಲ ಮೂಡಿಸುತ್ತವೆ. “ಇಲ್ಲಿ ಯಾರು ಸಾಚಾ ಅಲ್ಲ” ಎಂಬ ನಿರ್ಧಾರಕ್ಕೆ ನಮ್ಮನ್ನು ದೂಡುತ್ತದೆ. ಆಗ ಜನಸಾಮಾನ್ಯರು ಅಧಿಕಾರ ಬಲ ಮತ್ತು ಹಣ ಬಲ ಯಾರ ಬಳಿಯಿದೆ, ಸಂಸ್ಥೆಗಳ ದುರ್ಬಳಕೆ ಯಾರು ಮಾಡಬಲ್ಲರು, ಸಮುದಾಯ, ದೇಶದ ಹಿತಾಸಕ್ತಿಯ ಸೋಗಿನಲ್ಲಿ ಯಾರು ಲಾಭ ಪಡೆಯುತ್ತಿದ್ದಾರೆ ಎಂಬುದರ ವಿವೇಕ ನಾವು ಬೆಳೆಸಿಕೊಂಡು ಸಂತ್ರಸ್ತರ ಪರವಾಗಿ ನಿಲ್ಲಲಾಗದಿದ್ದರೂ “ಇವರೇನು ಕಮ್ಮಿ ಇಲ್ಲ” ಎಂಬ ನಿಲುವಿಗೆ ಬರದ ಹಾಗೆ ಎಚ್ಚರ ವಹಿಸಬೇಕಿದೆ.

ಹರೀಶ್ ಗಂಗಾಧರ್
ಲೇಖಕ, ಪ್ರಾಧ್ಯಾಪಕ