- ಆರು ಪಂದ್ಯಗಳಲ್ಲಿ ನಾಲ್ಕು ಸೋತು ಎರಡರಲ್ಲಿ ಜಯ ದಾಖಲಿಸಿರುವ ಕೆಕೆಆರ್
- ನಾಲ್ಕು ಗೆಲುವು ಸಾಧಿಸಿ ವಿಶ್ವಾಸದಲ್ಲಿರುವ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್
ಸತತ 3 ಪಂದ್ಯಗಳಲ್ಲಿ ಸೋತು ಒತ್ತಡಕ್ಕೆ ಸಿಲುಕಿರುವ ನಿತೀಶ್ ರಾಣಾ ನೇತೃತ್ವದ ಕೆಕೆಆರ್ ತಂಡ ಭಾನುವಾರ (ಏ.23) ಐಪಿಎಲ್ 16ನೇ ಆವೃತ್ತಿಯ 33ನೇ ಪಂದ್ಯದಲ್ಲಿ ತವರು ಕ್ರೀಡಾಂಗಣ ಈಡನ್ ಗಾರ್ಡನ್ನಲ್ಲಿ ಬಲಿಷ್ಠ ಚೆನ್ನೈ ತಂಡವನ್ನು ಎದುರಿಸಲಿದೆ.
ಕೆಕೆಆರ್ ಈ ಆವೃತ್ತಿಯಲ್ಲಿ 6 ಪಂದ್ಯಗಳನ್ನಾಡಿದೆ. ಮೊದಲ ಪಂದ್ಯ ಪಂಜಾಬ್ ವಿರುದ್ಧ ಸೋತರೂ ಆರ್ಸಿಬಿ, ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವುಗಳಿಸಿ ವಿಶ್ವಾಸ ಮೂಡಿಸಿತ್ತು. ಆದರೆ ನಂತರದ ಮೂರು ಪಂದ್ಯಗಳಲ್ಲಿ ಹೈದರಾಬಾದ್ ಸನ್ ರೈಸರ್ಸ್, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪರಾಭವಗೊಂಡಿದೆ.
ಕೆಕೆಆರ್ ಮಧ್ಯಮ ಕ್ರಮಾಂಕವೂ ದುರ್ಬಲವಾಗಿದೆ. ತಂಡಕ್ಕಿರುವ ಮತ್ತೊಂದು ದೊಡ್ಡ ಸಮಸ್ಯೆ ವೇಗದ ಬೌಲಿಂಗ್. 6 ಪಂದ್ಯಗಳಲ್ಲಿ ಕೆಕೆಆರ್ ವೇಗಿಗಳು ಒಟ್ಟಾರೆ ಕೇವಲ 9 ವಿಕೆಟ್ ಪಡೆದು, 11.3ರ ರನ್ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
ಕೆಕೆಆರ್ ತಂಡ ಬ್ಯಾಟಿಂಗ್ನಲ್ಲಿ ಹೆಚ್ಚಾಗಿ ವೆಂಕಟೇಶ್ ಅಯ್ಯರ್, ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಅವರನ್ನು ನೆಚ್ಚಿಕೊಂಡಿದೆ. ವಿದೇಶಿ ಆಟಗಾರರಾದ ಜೇಸನ್ ರಾಯ್ ಹಾಗೂ ಆಂಡ್ರೆ ರಸೆಲ್ ಜವಾಬ್ದಾರಿಯುತ ಆಟ ಪ್ರದರ್ಶಿಸಬೇಕಿದೆ. ಸ್ಪಿನ್ನರ್ಗಳಾದ ಸುನಿಲ್ ನರೈನ್, ವರುಣ್ ಚಕ್ರವರ್ತಿ ಜತೆಗೆ ಅನುಕೂಲ್ ರಾಯ್ ಕೂಡ ಚೆನ್ನೈ ಬ್ಯಾಟ್ಸ್ಮನ್ಗಳನ್ನು ಸದೆಬಡಿಯಲು ಸಜ್ಜಾಗಬೇಕಿದೆ.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2023 | ಚೆನ್ನೈvs ಎಸ್ಆರ್ಎಚ್; ಧೋನಿ ಪಡೆಗೆ 7 ವಿಕೆಟ್ ಭರ್ಜರಿ ಜಯ
ಮತ್ತೊಂದೆಡೆ ಚೆನ್ನೈ ತಂಡ ಆಡಿರುವ ಆರು ಪಂದ್ಯಗಳಲ್ಲಿ ಎರಡು ಪಂದ್ಯ ಸೋತು ನಾಲ್ಕರಲ್ಲಿ ಜಯಗಳಿಸಿ ಉತ್ತಮ ಫಾರ್ಮ್ನಲ್ಲಿದೆ. ಸಂಘಟಿತ ಆಟದೊಂದಿಗೆ ಎದುರಾಳಿ ತಂಡಕ್ಕೆ ಪೆಟ್ಟು ನೀಡುತ್ತಿದೆ.
ಡೆವೊನ್ ಕಾನ್ವೇ ಸತತ ಮೂರು ಅರ್ಧಶತಕ ಸಿಡಿಸಿದ್ದು, ತಂಡದ ಬ್ಯಾಟಿಂಗ್ ಆಧಾರಸ್ತಂಭವಾಗಿದ್ದಾರೆ. ಕಾನ್ವೇ ಜತೆಗೆ ಋತುರಾಜ್ ಗಾಯಕ್ವಾಡ್, ಮೋಯಿನ್ ಅಲಿ, ಶಿವಂ ದುಬೆ, ಅಜಿಂಕ್ಯ ರಹಾನೆ ಕೂಡ ಯಾವುದೇ ಸಂದರ್ಭದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ರವೀಂದ್ರ ಜಡೇಜಾ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಗೆಲುವಿನ ರುವಾರಿಗಳಾಗಿದ್ದಾರೆ. ಯುವ ವೇಗಿ ಪತಿರಣ ಹಾಗೂ ಸ್ಪಿನ್ನರ್ ಮಹೀಶ್ ತೀಕ್ಷಣ ಎದುರು ರನ್ಗಳಿಸಲು ಕೆಕೆಆರ್ ಬ್ಯಾಟ್ಸಮನ್ಗಳು ಎಚ್ಚರಿಕೆಯ ಆಟವಾಡಬೇಕಿದೆ.
ಪಿಚ್ ರಿಪೋರ್ಟ್
ಈಡನ್ ಗಾರ್ಡನ್ಸ್ನಲ್ಲಿ ಈ ವರ್ಷ 4 ಇನ್ನಿಂಗ್ಸ್ಗಳಲ್ಲಿ 3 ಬಾರಿ 200ಕ್ಕೂ ಹೆಚ್ಚು ಮೊತ್ತ ದಾಖಲಾಗಿದೆ. ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ. ಸ್ಪಿನ್ನರ್ಗಳಿಗೆ ತಕ್ಕಮಟ್ಟಿನ ನೆರವು ಸಿಗಬಹುದು.
ಒಟ್ಟು ಮುಖಾಮುಖಿ: 26
ಚೆನ್ನೈ: 17
ಕೆಕೆಆರ್: 09
ಆಡುವ ಹನ್ನೊಂದರ ಬಳಗ
ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೆ, ಋುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ (ನಾಯಕ), ಪತಿರನ, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣ, ಆಕಾಶ್.
ಕೋಲ್ಕತಾ ನೈಟ್ ರೈಡರ್ಸ್: ಜೇಸನ್ ರಾಯ್, ಲಿಟನ್ ದಾಸ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ಮಂದೀಪ್ ಸಿಂಗ್, ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೇನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ