ಅಮೇಥಿಯಲ್ಲಿ ರಾಹುಲ್ ಸ್ಪರ್ಧಿಸುತ್ತಿಲ್ಲ ಎಂದು ಗೊತ್ತಾದಾಗ ಚುನಾವಣೆಗೆ ಮುಂದೆಯೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ರಾಹುಲ್ ಗಾಂಧಿ ಸೋಲಿಗೆ ಹೆದರಿ ರಾಯ್‌ಬರೇಲಿಗೆ ಓಡಿದ್ದಾರೆ ಎಂದು ಸ್ಮೃತಿ ಹೇಳಿದ್ದರು. ಈಗ ಗಾಂಧಿ ಕುಟುಂಬದ ಆಪ್ತ ಕಿಶೋರಿಲಾಲ್ ಎದುರು ಸ್ಮೃತಿ ಹೀನಾಯವಾಗಿ ಸೋತಿದ್ದಾರೆ.
ಕಿರುತೆರೆ ನಟಿ ಸ್ಮೃತಿ ಇರಾನಿ ಬಿಜೆಪಿಯಿಂದ ಎರಡು ಬಾರಿ ಸಂಸದೆಯಾಗಿ ಆಯ್ಕೆಯಾಗಿ ಎರಡೂ ಬಾರಿ ಸಚಿವೆಯಾಗಿದ್ದವರು. ಸದಾ ರಾಹುಲ್ ಗಾಂಧಿ ವಿರುದ್ಧ ಕಠಿಣ ಶಬ್ಧಗಳಿಂದ ನಿಂದಿಸುತ್ತಾ, ಸದನದಲ್ಲೂ ಹೊರಗೆಯೋ ಗೇಲಿ ಮಾಡುತ್ತ ಸಂಘಿಗಳ ಹಾಟ್ ಫೇವರಿಟ್ ಎನಿಸಿದಾಕೆ. 2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಅಮೇಥಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದ ನಂತರವಂತೂ ರಾಹುಲ್ ಗಾಂಧಿ ಅವರನ್ನು ಸಿಕ್ಕ ಸಿಕ್ಕ ಸಂದರ್ಭದಲ್ಲಿ ಟೀಕಿಸುತ್ತಾ ದೊಡ್ಡ ನಾಯಕಿ ಎಂಬ ಭ್ರಮೆಯಲ್ಲಿದ್ದವರು.
ಸದನದಲ್ಲಿ ತಾವು ಮಾತನಾಡುವಾಗ ರಾಹುಲ್ ಕಣ್ಣು ಹೊಡೆದರು ಎಂದು ಸುಳ್ಳು ಸುಳ್ಳೇ ಹೇಳಿ, ಸದಸ್ಯೆಯರ ಜೊತೆಗೆ ಸ್ಪೀಕರ್ ಬಿರ್ಲಾ ಅವರಿಗೆ ದೂರು ನೀಡಿದ್ದು ದೇಶವೇ ನೋಡಿದೆ. ಆಕೆಯ ಈ ಆರೋಪವನ್ನು ಬಿಜೆಪಿ ನಾಯಕರೇ ನಂಬಿರಲಿಲ್ಲ. ಮಣಿಪುರದ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ಉತ್ತರಿಸಬೇಕು ಎಂಬ ಒತ್ತಡ ವಿರೋಧ ಪಕ್ಷಗಳಿಂದ ಬಂದಾಗ ಒತ್ತಡಕ್ಕೆ ಮಣಿದು ಮಣಿಪುರದ ವಿಚಾರದ ಚರ್ಚಗೆ ಸ್ಫೀಕರ್ ಅವಕಾಶ ಕೊಟ್ಟಾಗ ಮಣಿಪುರ ಮಹಿಳೆಯರ ಬಗ್ಗೆ ಕಿಂಚಿತ್ ಅನುಕಂಪ, ಕಾಳಜಿಯ ಮಾತನಾಡದೇ ಕಾಂಗ್ರೆಸ್ ಆಡಳಿತವಿರುವ ಮಧ್ಯಪ್ರದೇಶದಲ್ಲಿ ನಡೆದ ಅತ್ಯಾಚಾರದ ಬಗ್ಗೆ ಪ್ರಸ್ತಾಪಿಸಿ ರಾಹುಲ್ ಗಾಂಧಿಯವರನ್ನು ಹೀನಾಯವಾಗಿ ಟೀಕಿಸಿದಾಕೆ ಸ್ಮೃತಿ ಇರಾನಿ. ಸಮಯ ಸಿಕ್ಕಾಗಲೆಲ್ಲ ಸೋನಿಯಾ ಅವರನ್ನು ಕೆಣಕುತ್ತಲೇ ಹೋದಾಕೆ. ಸಂಸದ ಡಿ ಕೆ ಸುರೇಶ್ ಪ್ರತ್ಯೇಕ ದೇಶದ ಹೇಳಿಕೆಗೆ ಮತ್ತು ರಾಷ್ಟ್ರಪತಿ ಮುರ್ಮು ಅವರ ಬಗ್ಗೆ ಅಧೀರ್ ರಂಜನ್ ಚೌಧರಿ ಕೊಟ್ಟ ಕೀಳು ಮಟ್ಟದ ಹೇಳಿಕೆಗೂ ಸೋನಿಯಾ ಗಾಂಧಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು.
ಈ ಬಾರಿ ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಅನುಮಾನದಿಂದಲೇ ರಾಹುಲ್ ಸೋಲಿಸಲು ಬಿಜೆಪಿ ತಂತ್ರ ಸಿದ್ಧಪಡಿಸಿತ್ತು. ಆದರೆ, ರಾಹುಲ್ ಅವರು ತಮ್ಮ ಸ್ವಕ್ಷೇತ್ರ ಕೇರಳದ ವಯನಾಡಿನಿಂದ ಮಾತ್ರ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಕೇರಳದಲ್ಲಿ ಮತದಾನ ಮುಗಿದ ನಂತರ ಉತ್ತರ ಪ್ರದೇಶದ ಅಮೇಥಿಯಿಂದ ರಾಹುಲ್ ಮತ್ತು ಸೋನಿಯಾರಿಂದ ತೆರವಾದ ರಾಯ್‌ಬರೇಲಿಯಿಂದ ಪ್ರಿಯಾಂಕಾಗಾಂಧಿ ಸ್ಪರ್ಧಿಸುವುದಾಗಿ ಸುದ್ದಿ ಹಬ್ಬಿತ್ತು. ಅಂತಿಮಾಗಿ ರಾಹುಲ್ ಗಾಂಧಿ ರಾಯ್‌ಬರೇಲಿಯಿಂದ ಕಣಕ್ಕಿಳಿದಿದ್ದರು. ಅಮೇಥಿಯಲ್ಲಿ ರಾಹುಲ್ ಸ್ಪರ್ಧಿಸುತ್ತಿಲ್ಲ ಎಂದು ಗೊತ್ತಾದಾಗ “ಚುನಾವಣೆಗೆ ಮುಂದೆಯೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ” ಎಂದ ಸ್ಮೃತಿ ಇರಾನಿ ತಾನು ಬಹಳ ದೊಡ್ಡ ನಾಯಕಿ ಎಂದುಕೊಂಡಿದ್ದರು. ಕಾಂಗ್ರೆಸ್, ಅಮೇಥಿಯಿಂದ ಗಾಂಧಿ ಕುಟುಂಬದ ನಿಷ್ಠಾವಂತರಾಗಿದ್ದ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಲಾಗಿತ್ತು. ಈ ಬಗ್ಗೆ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಜೊತೆ ಮಾತನಾಡುತ್ತ, “ರಾಹುಲ್ ಗಾಂಧಿ ಹೆದರಿ ರಾಯ್‌ಬರೇಲಿಗೆ ಓಡಿದ್ದಾರೆ” ಎಂದು ಹೇಳಿದ್ದರು. “ವಯನಾಡಿನಲ್ಲಿ ಸೋಲುವ ಭೀತಿಯಿಂದ ರಾಹುಲ್ ರಾಯ್‌ಬರೇಲಿಗೆ ಹೋಗಿದ್ದಾರೆ” ಎಂದು ಪ್ರಧಾನಿ ಮೋದಿ ಕೂಡಾ ಹೇಳಿದ್ದರು. ಈಗ ಇದೇ ಸ್ಟಾರ್ ನಾಯಕಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ 77 ಸಾವಿರ ಮತಗಳಿಂದ ಸೋತಿದ್ದಾರೆ. ಕೇವಲ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತನಿಂದ ಸ್ಮೃತಿ ಇರಾನಿಗೆ ತೀವ್ರ ಮುಖಭಂಗವಾಗಿದೆ. ರಾಹುಲ್ ವಯನಾಡಿನಲ್ಲಿ 3.6 ಲಕ್ಷ ಮತಗಳ ಅಂತರದಿಂದ ಮತ್ತು ರಾಯ್ ಬರೇಲಿಯಲ್ಲಿ 4 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಇದು ಸ್ಮೃತಿ ಇರಾನಿಯ ಅಹಂಕಾರಕ್ಕೆ ಬಿದ್ದ ಪೆಟ್ಟು.
ರಾಹುಲ್‌ರನ್ನು ಸೋಲಿಸಲು ವಯನಾಡಿಗೆ ಹೋಗಿ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಪರ ಪ್ರಚಾರ ನಡೆಸಿದ ಈಕೆ, “ಅಮೇಥಿ ಜನರಿಗೆ ಕೈಕೊಟ್ಟಂತೆ ವಯನಾಡ್ ಜನರಿಗೂ ರಾಹುಲ್ ಗಾಂಧಿ ದ್ರೋಹ ಎಸಗುತ್ತಾರೆ. ಅಮೇಥಿಯಲ್ಲಿ ಸುದೀರ್ಘ ಕಾಲ ಅಧಿಕಾರದಲ್ಲಿದ್ದರೂ ರಾಹುಲ್ ಅಭಿವೃದ್ಧಿ ಮಾಡಲಿಲ್ಲ. ವಯನಾಡ್ ಕ್ಷೇತ್ರಕ್ಕೂ ಅವರು ಸಮಯ ಕೊಟ್ಟಿದ್ದು ಕಡಿಮೆ. ಇಲ್ಲಿಂದಲೂ ಅವರು ನಿರ್ಗಮಿಸುವ ಸಾಧ್ಯತೆ ಇದೆ” ಎಂದು ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು. ಒಟ್ಟಿನಲ್ಲಿ ಬಿಜೆಪಿಯ ಹಾಸ್ಯಾಸ್ಪದ ವಕ್ತಾರ ಸಂಬಿತ್ ಪಾತ್ರನಿಂದ ಹಿಡಿದು, ಸ್ಮೃತಿ, ಮೋದಿಯವರೆಗೆ ಎಲ್ಲರಿಗೂ ರಾಹುಲ್ ಗಾಂಧಿ ಗೇಲಿಯ ವಸ್ತುವಾಗಿದ್ದರು. ಒಳಗೊಳಗೆ ಅವರಿಗಿದ್ದ ರಾಹುಲ್ ಬಗೆಗಿನ ಭಯವೇ ಅವರನ್ನು ಆ ರೀತಿ ಆಡಿಸುತ್ತಿತ್ತು.
ಎರಡು ವರ್ಷಗಳ ಹಿಂದೆ ಅಮೇಥಿಯ ಬೀದಿಬದಿಯ ಹೊಟೇಲೊಂದಕ್ಕೆ ಹೋದ ಸ್ಮೃತಿ ಇರಾನಿ ಹೋಟೇಲ್ ಮಾಲೀಕನನ್ನು ಮಾತನಾಡಿಸುತ್ತಾ ವಿಡಿಯೊ ಮಾಡಿಕೊಂಡಿದ್ದರು. “ಇಲ್ಲಿಗೆ ರಾಹುಲ್ ಗಾಂಧಿ ಬಂದಿರಲ್ಲ ಅಲ್ವಾ ಅಂತ ಸ್ಮೃತಿ ಕೇಳುತ್ತಾರೆ. ಆಗ ಆತ, “ರಾಹುಲ್ ಅವರು ಆಗಾಗ ಇಲ್ಲಿಗೆ ಬಂದು ಇಲ್ಲಿ ತಿಂಡಿ ಸವಿಯುತ್ತಿದ್ದರು” ಎಂದು ಹೇಳಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿತ್ತು. ಹೋದಲ್ಲಿ ಬಂದಲ್ಲಿ ಸ್ಮೃತಿ ಇರಾನಿಗೆ ರಾಹುಲ್‌ದೇ ಧ್ಯಾನವಾಗಿ ಹೋಗಿತ್ತು.
ರಾಹುಲ್ ಅವರನ್ನು ಪಪ್ಪು ಮಾಡಲು ಬಿಜೆಪಿ ಸಾವಿರಾರು ಕೋಟಿ ಹಣ ವ್ಯಯ ಮಾಡಿದೆ ಎಂಬ ಆರೋಪವನ್ನು ಪ್ರಿಯಾಂಕಾ ಗಾಂಧಿಯವರೇ ಮಾಡಿದ್ದರು. “ಅವರು ನನ್ನ ಸಹೋದರನನ್ನು ಎಷ್ಟೇ ಗೇಲಿ ಮಾಡಿದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮಗೆ ದೇಶದ ಜನರ ಯೋಗಕ್ಷೇಮ ಮುಖ್ಯ. ನಾವು ಜನರ ನೋವು ಆಲಿಸುವ ಕೆಲಸ ಮಾಡುತ್ತೇವೆ” ಎಂದು ಹೇಳಿದ್ದರು.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ದೇಶದ ಉದ್ದಗಲಕ್ಕೂ ನಾನಾ ವರ್ಗದ ಜನರ ಭೇಟಿ ಮಾಡಿದ್ದಾರೆ. ಅವರ ನೋವುಗಳನ್ನು ಆಲಿಸಿದ್ದಾರೆ. ಸಾವಿರಾರು ಬಡ ಜನರು ರಾಹುಲ್ ಅಪ್ಪುಗೆಯ ಬಿಸುಪು ಅನುಭವಿಸಿದ್ದಾರೆ. ಅದರ ಫಲವಾಗಿ ಈಗ ರಾಹುಲ್ ರಾಯ್‌ಬರೇಲಿ, ವಯನಾಡ್ ಎರಡೂ ಕಡೆ ಲಕ್ಷಾಂತರ ಮತಗಳ ಅಂತರದಿಂದ ಗೆದ್ದಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷವನ್ನು ನೂರರ ದಡ ಮುಟ್ಟಿಸಿದ್ದಾರೆ. ಅಖಿಲೇಶ್ ಜೊತೆ ಸೇರಿ ರಾಹುಲ್ ಮಾಡಿದ ಮೋಡಿ ಹೇಗಿತ್ತು ಎಂದು ಉತ್ತರಪ್ರದೇಶದ ಜನ ನೋಡಿದ್ದಾರೆ. ಬಿಜೆಪಿಯ ಹಾಟ್ ಲ್ಯಾಂಡ್‌ನಲ್ಲಿ ಮೋದಿ, ಯೋಗಿ, ರಾಮಮಂದಿರ, ರಾಮಲಲ್ಲಾ ಎಲ್ಲ ಅಲೆಗಳು ವಿಫಲವಾಗಿವೆ. ಇಂಡಿಯಾ ಒಕ್ಕೂಟಕ್ಕೆ ಎನ್‌ಡಿಎಗಿಂತ ಹೆಚ್ಚಿನ ಸೀಟು ಕೊಟ್ಟಿದ್ದಾರೆ ಜನ.
ಈ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಸ್ಮೃತಿ ಸಂದರ್ಶನ ಮಾಡುತ್ತಾ, “ನೀವು ಅಮೇಥಿಯಲ್ಲಿ ಮಾಡಿದ ಮೂರು ಉತ್ತಮ ಕೆಲಸ ಯಾವುದು” ಎಂದು ಕೇಳಿದ್ದರು. ಅದಕ್ಕೆ ಎಂದಿನ ದುರಹಂಕಾರದಿಂದಲೇ ಉತ್ತರಿಸಿದ ಸ್ಮೃತಿ, “ಅದನ್ನು ಗಾಂಧಿ ಕುಟುಂಬವನ್ನು ಕೇಳಬೇಕು” ಎಂದಿದ್ದರು. ಈಕೆ ಪ್ರತಿನಿಧಿಸುತ್ತಿರುವ ಕ್ಷೇತ್ರಕ್ಕೆ ಈಕೆ ನೀಡಿದ ಕೊಡುಗೆ ಏನೆಂದು ಹೇಳುವ ಬದಲು, ಗಾಂಧಿ ಕುಟುಂಬವನ್ನು ಕೇಳಿ ತಿಳಿದುಕೊಳ್ಳಬೇಕಿದ್ದರೆ ಈಕೆಗೆ ಮತ ಹಾಕಿ ಏನು ಪ್ರಯೋಜನ ಎಂಬ ತೀರ್ಮಾನಕ್ಕೆ ಕ್ಷೇತ್ರದ ಜನ ಬಂದಿದ್ದಾರೆ. ಗಾಂಧಿ ಕುಟುಂಬದ ಆಪ್ತ ಕಿಶೋರಿ ಲಾಲ್ ಶರ್ಮಾ ಇದೇ ಮೊದಲ ಬಾರಿ ಸ್ಪರ್ಧಿಸಿ ಸ್ಮೃತಿಗೆ ಸೋಲುಣಿಸಿದ್ದಾರೆ.
ರಾಯ್ ಬರೇಲಿಯಲ್ಲಿ 2.5 ಲಕ್ಷ ಮತಗಳ ಅಂತರದಲ್ಲಿ ಮತ್ತು ವಯನಾಡು 4 ಲಕ್ಷ ಮತಗಳ ಅಂತರದಲ್ಲಿ ರಾಹುಲ್ ಗೆದ್ದಿದ್ದಾರೆ. ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರಾಗಿದ್ದ ರಾಹುಲ್ ದೇಶದ ಹಲವು ರಾಜ್ಯಗಳಲ್ಲಿ ಪ್ರಚಾರ ಕಾರ್ಯ ನಡೆಸಿದ್ದರು. ಸ್ವಂತ ಕ್ಷೇತ್ರ ವಯನಾಡಿಗೂ ಹೆಚ್ಚು ಭೇಟಿ ನೀಡಿರಲಿಲ್ಲ. ರಾಯ್‌ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿ ತಾಯಿ, ತಂಗಿ ಜೊತೆ ಪ್ರಚಾರ ಸಭೆ ನಡೆಸಿದ್ದರು. ಸೋದರಿ ಪ್ರಿಯಾಂಕಾ ಗಾಂಧಿ ಅಣ್ಣನ ಗೆಲುವಿಗಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಇಬ್ಬರೂ ನಡೆಸಿದ ಸಮಾವೇಶಗಳಲ್ಲಿ ಲಕ್ಷೋಪಾದಿಯಲ್ಲಿ ಜನ ಸೇರುತ್ತಿದ್ದರು. ಸಭೆಯಲ್ಲಿ ಸೇರುವ ಇಷ್ಟು ಜನ ವೋಟ್ ಹಾಕುವರೇ ಎಂಬ ಜಿಜ್ಞಾಸೆ ಸಹಜವಾಗಿಯೇ ಇತ್ತು. ಯಾಕೆಂದರೆ ನಾಲ್ಕು ವರ್ಷಗಳ ಹಿಂದೆ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಇದೇ ತರ ಜನ ಸೇರುತ್ತಿದ್ದರು. ಆದರೆ ಕಾಂಗ್ರೆಸ್‌ಗೆ ಬೆರಳೆಣಿಕೆಯ ಸೀಟೂ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಜನ ಮನಸ್ಸಿನಿಂದ ಜಮಾಯಿಸಿದ್ದರು ಅನ್ಸುತ್ತೆ. ಸ್ಮೃತಿ ಇರಾನಿಯ ಅಹಂಕಾರ ಮುರಿಯುವುದರ ಜೊತೆಗೆ ಮೋದಿಯ ಏಕಚಕ್ರಾಧಿಪತ್ಯದ ಅಹಂ ಕೂಡ ಮುರಿದಿದೆ. ಚಾರ್ ಸೌ ಪಾರ್ ಎಂದು ಕುಣಿದಾಡಿದವರು ಮುನ್ನೂರರ ಗಡಿ ತಲುಪುವುದಕ್ಕೆ ಹೆಣಗಾಡಿದ್ದಾರೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.