ದೆಹಲಿಯಲ್ಲಿ ಪ್ರಸ್ತುತ ನಡೆಯುತ್ತಿರುವ ನೀರಿನ ಸಂಕಷ್ಟದ ನಡುವೆ ಹಿಮಾಚಲ ಪ್ರದೇಶ ಸರ್ಕಾರ ತಾನು ಹಿಂದೆ ನೀಡಿದ ಹೇಳಿಕೆಯನ್ನು ಹಿಂಪಡೆದಿದ್ದು, ದೆಹಲಿಗೆ ಬಿಡಬೇಕಾದ 136 ಕ್ಯೂಸೆಕ್ಸ್ ಹೆಚ್ಚುವರಿ ನೀರು ನಮ್ಮ ಬಳಿ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
ಈ ಹಿನ್ನೆಲೆಯಲ್ಲಿ ನೀರು ಸರಬರಾಜಿಗಾಗಿ ಯಮುನಾ ನದಿ ಉನ್ನತ ಮಂಡಳಿ(ಯುವೈಆರ್‌ಬಿ)ಗೆ ಮನವಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿರುವ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಿಂದ ಬಿಡಲಾಗುವ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವಂತೆ ಹರಿಯಾಣ ಸರ್ಕಾರಕ್ಕೆ ನಿರ್ದೇಶಿಸುವಂತೆ ದೆಹಲಿ ಸರ್ಕಾರ ಮನವಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಡುವ ಸ್ಥಾನದಲ್ಲಿರುವವರು ಒಳ್ಳೆಯದನ್ನೇ ಕೊಡಬೇಕು ಎಂದು ರಾಜ್ ಹೇಳಿದ್ದು ಯಾರಿಗೆ?
ರಜಾ ಕಾಲ ಪೀಠದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಪ್ರಸನ್ನ ಬಿ ವರಾಳೆ ಅವರು ರಾಷ್ಟ್ರೀಯ ರಾಜಧಾನಿಗೆ ಮಾನವೀಯ ಆಧಾರದ ಮೇಲೆ ನೀರು ಬಿಡುಗಡೆ ಮಾಡುವಂತೆ ವೈಯುಆರ್‌ಬಿಗೆ ಇಂದು ಸಂಜೆ 5 ಗಂಟೆಯೊಳಗೆ ಮನವಿ ಸಲ್ಲಿಸುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿದರು.
ಉಭಯ ರಾಜ್ಯಗಳ ನಡುವಿನ ಯಮುನಾ ನದಿಯ ನೀರಿನ ಹಂಚಿಕೆ ಸಂಕೀರ್ಣ ಹಾಗೂ ಸೂಕ್ಷ್ಮ ವಿಷಯವಾಗಿದೆ. ಮಧ್ಯಂತರ ಆಧಾರದ ಮೇಲೆ ನಿರ್ಧರಿಸಲು ನ್ಯಾಯಾಲಯವು ಯಾವುದೇ ತಾಂತ್ರಿಕ ಪರಿಣಿತಿಯನ್ನು ಹೊಂದಿಲ್ಲ ಎಂದು ಪೀಠ ತಿಳಿಸಿದೆ.
“1994ರಲ್ಲಿ ಎರಡೂ ರಾಜ್ಯಗಳ ನಡುವೆ ಆಗಿರುವ ಒಪ್ಪಂದದಂತೆ ನಿರ್ಮಾಣವಾಗಿರುವ ಸಂಸ್ಥೆಯ ಮೂಲಕ ಈ ಸಮಸ್ಯೆಯನ್ನು ಇತ್ಯರ್ಥಗೊಳಿಸಿಕೊಳ್ಳಬೇಕು” ಎಂದು ನ್ಯಾಯಮೂರ್ತಿಗಳು ತಿಳಿಸಿದರು.
