ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ರೈಲ್ವೆ ಹಳಿಗಳ ನಿರ್ವಹಣೆ ಮತ್ತು ಸಿಗ್ನಲ್ ವೈಫಲ್ಯಗಳ ಸಮಸ್ಯೆಗಳತ್ತ ಗಮನ ಹರಿಸಬೇಕಿತ್ತು. ಹೊಸ ಮಾರ್ಗಗಳನ್ನು ನಿರ್ಮಿಸಿ ರೈಲ್ವೆ ಜಾಲವನ್ನು ವಿಸ್ತರಿಸಿದ್ದರೆ ಸಂಚಾರದಟ್ಟಣೆಯನ್ನು ತಗ್ಗಿಸಬಹುದಿತ್ತು. ಆದರೆ ತೀರಾ ದುಬಾರಿ ಯೋಜನೆಗಳನ್ನು ರೈಲ್ವೆಯ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ.
ಭಾರತೀಯ ರೈಲ್ವೆ ಇಲಾಖೆ ಮತ್ತೆ ಸುದ್ದಿಯಲ್ಲಿದೆ. ಅಪಘಾತಗಳು ಸಂಭವಿಸಿದಾಗ ಮಾತ್ರ ಸುದ್ದಿ ಶೀರ್ಷಿಕೆಗಳಲ್ಲಿ ಪ್ರತ್ಯಕ್ಷವಾಗುವ ಇಲಾಖೆಯಿದು. ಮತ್ತೊಂದು ಅಪಘಾತದ ತನಕ ಹಾಸಿ ಹೊದ್ದು ಮಲಗಿಬಿಡುತ್ತದೆ. ಸಾಮಾನ್ಯ ಪ್ರಯಾಣಿಕರ ನಿತ್ಯ ಪಡಿಪಾಟಲು, ದೂರು ದುಮ್ಮಾನಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡುವುದಿಲ್ಲ. ಪಶ್ಚಿಮ ಬಂಗಾಳದ ಸಿಲಿಗುಡಿಯ ಸನಿಹ ಜೂನ್ 16ರಂದು ಸರಕು ಸಾಗಣೆ ರೈಲುಗಾಡಿಯೊಂದು ಪ್ರಯಾಣಿಕರ ಗಾಡಿಗೆ ಡಿಕ್ಕಿ ಹೊಡೆದು ಹತ್ತು ಮಂದಿ ಅಸುನೀಗಿದ್ದಾರೆ. ಸರಿಯಾಗಿ ವರ್ಷದ ಹಿಂದೆ ಇದೇ ಜೂನ್ ತಿಂಗಳಿನಲ್ಲಿ ಒಡಿಶಾದ ಬಾಲಸೋರ್ ನಲ್ಲಿ ಜರುಗಿದ ರೈಲುಗಳ ಢಿಕ್ಕಿ 358 ಜೀವಗಳನ್ನು ಬಲಿ ತೆಗೆದುಕೊಂಡಿತ್ತು.
ಭಾರೀ ಜನಸಂಖ್ಯೆಯ ಭಾರತದಲ್ಲಿ ರಸ್ತೆ ಮತ್ತು ವಾಯು ಸಾರಿಗೆಗಳಿಗೆ ಪೈಪೋಟಿ ನೀಡುವಂತಹ ಬಲಿಷ್ಠ ರೈಲ್ವೆ ವ್ಯವಸ್ಥೆ ಇರಬೇಕಿತ್ತು. ಜನಸಾಮಾನ್ಯರ ಮತ್ತು ಅರ್ಥವ್ಯವಸ್ಥೆಯ ಪ್ರಾಥಮಿಕ ಅಗತ್ಯಗಳ ಪೂರೈಕೆ ಕೂಡ ಭಾರತದ ರೈಲ್ವೆ ವ್ಯವಸ್ಥೆಯಲ್ಲಿ ಬಿಸಿಲುಗುದುರೆಯಾಗಿ ಹೋಗಿದೆ. ವೇಗ, ಸುರಕ್ಷತೆ ಹಾಗೂ ರೈಲ್ವೆ ಮಾರ್ಗ ಜಾಲವನ್ನು ಹೆಚ್ಚಿಸುವ ಸರ್ಕಾರದ ಭರವಸೆಗಳು ಮತ್ತೆ ಮತ್ತೆ ಮಕಾಡೆ ಮಲಗಿವೆ. ಹೊಸ ಮಾರ್ಗಗಳ ನಿರ್ಮಾಣಕ್ಕೆ ಆದ್ಯತೆ ಇಲ್ಲ. ಇರುವ ರೈಲ್ವೆ ಮಾರ್ಗಗಳು ಕಿಕ್ಕಿರಿದು ಉಸಿರುಕಟ್ಟಿವೆ. ಕವಚ್ ಅಳವಡಿಕೆ ಯೋಜನೆ ಮಂದಗತಿಯಲ್ಲಿ ಸಾಗಿದೆ.
ಪ್ರಯಾಣಿಕರು ಮತ್ತು ಸರಕು ಸಾಗಣೆ ಎರಡರಲ್ಲೂ ರೈಲ್ವೆಯ ಪಾಲು ಸತತವಾಗಿ ಕುಸಿಯುತ್ತಲೇ ನಡೆದಿದೆ. ವಾಯು ಮಾರ್ಗ ಮತ್ತು ರಸ್ತೆ ಮಾರ್ಗಗಳ ಪಾಲು ಶೇ.ಆರರಿಂದ ಹನ್ನೆರಡರಷ್ಟು ಹೆಚ್ಚಿದೆ. 2019-20ರಿಂದ ತನ್ನ ಈ ಹಿನ್ನಡೆಯ ಅಂಕಿಅಂಶಗಳನ್ನು ಪ್ರಕಟಿಸದೆ ಮುಚ್ಚಿಟ್ಟುಕೊಂಡಿದೆ ರೈಲ್ವೆ ಮಂತ್ರಾಲಯ. ಭಾರತೀಯ ರೈಲ್ವೆ ತೀವ್ರ ಬಿಕ್ಕಟ್ಟಿನ ದಿನಗಳನ್ನು ಹಾಯುತ್ತಿದೆ. ಹೀಗೆಯೇ ಮುಂದುವರೆದರೆ ಅಧೋಗತಿ ನಿಶ್ಚಿತ ಎನ್ನುತ್ತಾರೆ ತಜ್ಞರು. ರೈಲ್ವೆ ಮಂತ್ರಾಲಯದ ಅತ್ಯುನ್ನತ ಆಡಳಿತ ಸಂಸ್ಥೆ ರೈಲ್ವೆ ಮಂಡಳಿ. ಈ ಮಂಡಳಿ ದಿಕ್ಕು ತಪ್ಪಿದೆ. ವೇಗ, ಸುರಕ್ಷತೆ ಸಮಯಪಾಲನೆ ಯಾವುದರಲ್ಲೂ ಸುಧಾರಣೆ ಇಲ್ಲವಾಗಿದೆ.
ಭಾರತದ ಕಂಪ್ರ್ಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿ.ಎ.ಜಿ) ಅವರು ಭಾರತೀಯ ರೈಲ್ವೆಯ ಸುರಕ್ಷತೆ, ವೇಗ ಹಾಗೂ ಸಮಯಪರಿಪಾಲನೆ ಕುರಿತು ಎರಡು ಬಹುಮುಖ್ಯ ವರದಿಗಳನ್ನು ನೀಡಿದ್ದಾರೆ. ದೇಶದ ಮಹಾಲೆಕ್ಕಪರಿಶೋಧಕ ಸಂಸ್ಥೆ ಸ್ವಾಯತ್ತ ಸ್ವರೂಪದ್ದು. ಈ ಸಂಸ್ಥೆ ನೀಡುವ ವರದಿಗಳನ್ನು ಸಂಸತ್ತಿನಲ್ಲಿ ಮಂಡಿಸಿ ಚರ್ಚೆಗೆ ಇಡಬೇಕು. ಆದರೆ ಮೋದಿ ಆಡಳಿತದಲ್ಲಿ ಇಂತಹ ಪರಿಪಾಠವೇ ತಪ್ಪಿ ಹೋಗಿದೆ.
ವರದಿಯ ಪ್ರಕಾರ 2014-2019ರ ಅವಧಿಯಲ್ಲಿ ಮೇಯ್ಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಾಡಿಗಳ ಸರಾಸರಿ ವೇಗ ತಾಸಿಗೆ 50-51 ಕಿ.ಮೀ.ಗಳಲ್ಲೇ ಸ್ಥಗಿತಗೊಂಡಿದೆ. ಆದರೆ ‘ಮಿಶನ್ ರಫ್ತಾರ್’ ಅಡಿಯಲ್ಲಿ ವೇಗವನ್ನು ತಾಸಿಗೆ 75 ಕಿ.ಮೀ.ಗಳಿಗೆ ಏರಿಸಲಾಗಿದೆ ಎಂದು ರೈಲ್ವೆ ಇಲಾಖೆ ಸುಳ್ಳು ಹೇಳುತ್ತಿದೆ. ಇನ್ನು ಸರಕು ಸಾಗಣೆ ಗಾಡಿಗಳ ವೇಗ ಮೊದಲಿಗಿಂತ ತಗ್ಗಿದೆ.
ಸಿಎಜಿ ನೀಡಿರುವ ಎರಡನೆಯ ವರದಿ ಅಪಘಾತಗಳ ಕುರಿತದ್ದು. ರೈಲುಗಾಡಿಗಳು ಲೆವೆಲ್ ಕ್ರಾಸಿಂಗ್‌ಗಳನ್ನು ಹಾದು ಹೋಗುವ ಹೊತ್ತಿನಲ್ಲಿ ಗೇಟುಗಳನ್ನು ಹಾಕಲು ಮತ್ತು ತೆರೆಯಲು ವ್ಯಕ್ತಿಗಳನ್ನು ನೇಮಿಸಿದ ನಂತರ ಲೆವೆಲ್ ಕ್ರಾಸಿಂಗ್ ಬಳಿಯ ಅಪಘಾತಗಳು ತಗ್ಗಿವೆ. ಆದರೆ ಹಳಿ ತಪ್ಪುವ ಮತ್ತು ರೈಲುಗಾಡಿಗಳು ಪರಸ್ಪರ ಡಿಕ್ಕಿ ಹೊಡೆಯುವ ಅಪಘಾತಗಳಿಗೆ ತಡೆಯಿಲ್ಲದೆ ನಡೆಯುತ್ತಿವೆ. ಸಿಗ್ನಲ್ ವೈಫಲ್ಯಗಳು ಮತ್ತು ಹಳಿದೋಷಗಳು ಎಂದಿನಂತೆ ಮುಂದುವರೆದಿವೆ.
ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ರೈಲ್ವೆ ಹಳಿಗಳ ನಿರ್ವಹಣೆ ಮತ್ತು ಸಿಗ್ನಲ್ ವೈಫಲ್ಯಗಳ ಸಮಸ್ಯೆಗಳತ್ತ ಗಮನ ಹರಿಸಬೇಕಿತ್ತು. ಹೊಸ ಮಾರ್ಗಗಳನ್ನು ನಿರ್ಮಿಸಿ ರೈಲ್ವೆ ಜಾಲವನ್ನು ವಿಸ್ತರಿಸಿದ್ದರೆ ಸಂಚಾರದಟ್ಟಣೆಯನ್ನು ತಗ್ಗಿಸಬಹುದಿತ್ತು. ಆದರೆ ತೀರಾ ದುಂದುವೆಚ್ಚದ ದುಬಾರಿ ಯೋಜನೆಗಳನ್ನು ರೈಲ್ವೆಯ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ಈ ಬಿಳಿ ಆನೆ ಯೋಜನೆಗಳು ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ. ಆದರೂ ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡಿದ್ದಾರೆ ಮೋದಿ.
ಉದಾಹರಣೆಗೆ ಬುಲೆಟ್ ಟ್ರೇನ್ ಯೋಜನೆಯನ್ನೇ ನೋಡೋಣ. ಮುಂಬಯಿ ಮಾರ್ಗವಾಗಿ ಸಾಗುವ ಪುಣೆ-ಅಹಮದಾಬಾದ್ ಬುಲೆಟ್ ಟ್ರೇನ್ ಯೋಜನೆಯ ವೆಚ್ಚ 1.10 ಲಕ್ಷ ಕೋಟಿ ರುಪಾಯಿಗಳು. ಈಗಾಗಲೆ ಈ ವೆಚ್ಚ ಇನ್ನೂ 50 ಸಾವಿರ ಕೋಟಿ ರುಪಾಯಿಗಳಷ್ಟು ಹೆಚ್ಚಿದೆ. ಪೂರ್ಣಗೊಳ್ಳುವ ವೇಳೆಗೆ ಐದು ಲಕ್ಷ ಕೋಟಿಗಳನ್ನು ದಾಟಿದರೆ ಆಶ್ಚರ್ಯವಿಲ್ಲ. ಈ ರೈಲು ಈಗ ಅಸ್ತಿತ್ವದಲ್ಲಿರುವ ಬ್ರಾಡ್ ಗೇಜ್ ಮಾರ್ಗದಲ್ಲಿ ಓಡುವುದಿಲ್ಲ. ಹೀಗಾಗಿ ಪ್ರತ್ಯೇಕ ಸ್ಟ್ಯಾಂಡರ್ಡ್ ಗೇಜ್ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಮೋದಿಯವರ ಒಣಪ್ರತಿಷ್ಠೆಗಾಗಿ ರೇಲ್ವೆಯನ್ನು ಬಡವಾಗಿಸಿರುವ ಮತ್ತೊಂದು ಯೋಜನೆ ವಂದೇ ಭಾರತ್. ಕಳೆದ ಮೂರು ವರ್ಷಗಳಲ್ಲಿ 50 ಜೋಡಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳಿಗೆ ತಾವೇ ಖುದ್ದಾಗಿ ಹಸಿರು ಬಾವುಟ ತೋರಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಪ್ರಧಾನಮಂತ್ರಿ. ಜನಸಾಮಾನ್ಯರ ಕೈಗೆ ಎಟುಕದ ದುಬಾರಿ ದರದ ಟ್ರೇನುಗಳಿವು. ವೇಗಕ್ಕಿಂತ ವಿಲಾಸ ಮತ್ತು ಅಲಂಕಾರಕ್ಕೇ ಆದ್ಯತೆ.
2023-24ನೆಯ ಸಾಲಿನಲ್ಲಿ ರೈಲ್ವೆ ಮಂತ್ರಾಲಯಕ್ಕೆ ಮಾಡಲಾದ ಒಟ್ಟು ಬಜೆಟ್ ಹಂಚಿಕೆ 2.4 ಲಕ್ಷ ಕೋಟಿ ರೂಪಾಯಿ. 2013-14ಕ್ಕೆ ಹೋಲಿಸಿದರೆ ಒಂಬತ್ತು ಪಟ್ಟ ಹೆಚ್ಚು. ಆದರೆ ಈ ಹಂಚಿಕೆ ಎಲ್ಲಿ ವಿನಿಯೋಗ ಆಗುತ್ತಿದೆ? ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳಿಗೆ ಲಕ್ಷಾಂತರ ಕೋಟಿ ಹಣ ಸುರಿಯಲಾಗುತ್ತಿದೆಯೇ? ಮೋದಿಯವರು ಪ್ರಧಾನಿಯಾಗುವ ಮುನ್ನ ಪ್ರತ್ಯೇಕ ಬಜೆಟ್ ಹೊಂದಿತ್ತು ರೈಲ್ವೆ ಮಂತ್ರಾಲಯ. ಈ ಬಜೆಟ್ಟನ್ನು ಜನರಲ್ ಬಜೆಟ್‌ನಲ್ಲಿ ವಿಲೀನಗೊಳಿಸಿದ್ದೇಕೆ? ಖಾಸಗೀಕರಣಕ್ಕೆ ಅನುವು ಮಾಡಲೆಂದೇ?
ಈ ಹಿಂದೆ ರೈಲ್ವೆ ಮಂತ್ರಿಯಾಗಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಳೆದ ವರ್ಷ ಹೇಳಿದ್ದ ಪ್ರಕಾರ ರೈಲ್ವೆ ಇಲಾಖೆಯಲ್ಲಿ ಒಟ್ಟು ಮೂರು ಲಕ್ಷ ಹುದ್ದೆಗಳನ್ನು ಭರ್ತಿ ಮಾಡದೆ ಖಾಲಿ ಬಿಡಲಾಗಿದೆ. ಇವುಗಳ ಪೈಕಿ ಸುರಕ್ಷತೆಗೆ ಅತ್ಯಗತ್ಯವಿರುವ ಹುದ್ದೆಗಳನ್ನಾದರೂ ತ್ವರಿತಗತಿಯಿಂದ ಭರ್ತಿ ಮಾಡಬೇಕಿದೆ.
ಸಾಮಾನ್ಯ ರೈಲು ಗಾಡಿಗಳ ಸಂಚಾರವನ್ನು ಕಡೆಗಣಿಸಿ, ಬಡಬಗ್ಗರ ಪ್ರಯಾಣವನ್ನು ನರಕವಾಗಿಸಿ ವಂದೇ ಭಾರತ್ ಮತ್ತು ಬುಲೆಟ್ ಟ್ರೇನುಗಳ ಲೀಲಾ ವಿನೋದ- ವಿಲಾಸದಲ್ಲಿ ತೊಡಗಿದ್ದಾರೆ ನರೇಂದ್ರ ಮೋದಿ. ಕೋಳಿ ಗೂಡುಗಳು ಮತ್ತು ಹಂದಿ ಗೂಡುಗಳಂತಾಗಿವೆ ಜನಸಾಮಾನ್ಯರು ಪ್ರಯಾಣಿಸುವ ರೈಲು ಗಾಡಿಗಳು. ಕನಿಷ್ಠ ಅನುಕೂಲ ಮತ್ತು ಕನಿಷ್ಠ ಸುರಕ್ಷತೆಯನ್ನೂ ಗಾಳಿಗೆ ತೂರಲಾಗುತ್ತಿದೆ.
ಹೊರಗೆ ಥಳುಕು- ಒಳಗೆ ಹುಳುಕು, ಹೊಟ್ಟೆಗೆ ಹಿಟ್ಟಿಲ್ಲ-ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಗಾದೆಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ಜನಸಾಮಾನ್ಯರ ಸಾವು ನೋವುಗಳು ಅವರ ಹೃದಯ ಪರಿವರ್ತನೆ ಮಾಡಲೆಂದು ಆಶಿಸಬೇಕಿದೆ.
