ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕತಂತ್ರಜ್ಞಾನ ಇಲಾಖೆಯು ರಾಜ್ಯದಲ್ಲಿನ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಹೊಸ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಖರ್ಗೆ, “ಸ್ಟಾರ್ಟ್ಅಪ್‌ಗಳಿಗೆ ಇನ್ಕ್ಯುಬೇಶನ್ ಕಾರ್ಯಕ್ರಮ ಮತ್ತು ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಹೂಡಿಕೆ ಮಾಡಲು ಸಿದ್ಧರಾಗಲು, ಇನ್ಕ್ಯುಬೇಶನ್ ಮತ್ತು ಆಕ್ಸಿಲರೇಟರ್ ಸೇರಿದ ಉಭಯ ಕಾರ್ಯಕ್ರಮವನ್ನು ಪ್ರಸ್ತಾಪಿಸಲಾಗಿದೆ. ಇನ್ಕ್ಯುಬೇಶನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಇನ್ಕ್ಯುಬೇಟರ್/ ಆಕ್ಸಿಲರೇಟರ್‌ಗಳು ಆಕ್ಸಿಲರೇಶನ್ ಕಾರ್ಯಕ್ರಮದಡಿ ಧನಸಹಾಯಕ್ಕೆ ಅರ್ಹರಾಗುತ್ತಾರೆ. ಆಕ್ಸಿಲರೇಶನ್ ಹಂತದಲ್ಲಿ ಇನ್ಕ್ಯುಬೇಶನ್ ಕಾರ್ಯಕ್ರಮದಲ್ಲಿ ಯಶಸ್ವಿಯಾದವರಿಗೆ ಆದ್ಯತೆ ನೀಡಲಾಗುವುದು” ಎಂದು ತಿಳಿಸಿದ್ದಾರೆ.
“ಇನ್ಕ್ಯುಬೇಶನ್ ಕಾರ್ಯಕ್ರಮ ಪೂರೈಸಿದ ಶೇ.30ರಷ್ಟು ಅಭ್ಯರ್ಥಿಗಳು ಆಕ್ಸಿಲರೇಶನ್ ಅನುದಾನಕ್ಕೆ ಅರ್ಹರಾಗುತ್ತಾರೆ. ಇನ್ಕ್ಯುಬೇಟರ್‌ಗಳು ಹಾಗೂ /ಆಕ್ಸಿಲರೇಟರ್‌ಗಳ ಬೆಂಬಲದೊಂದಿಗೆ ಇಲಾಖೆಯು ಪ್ರತಿ ವರ್ಷ 2 ಗುಂಪುಗಳನ್ನು ರೂಪಿಸುವುದು. ಪ್ರತಿ ಗುಂಪು ನಿರ್ದಿಷ್ಟ ವಲಯವನ್ನು ಹೊಂದಿರುತ್ತದೆ. ಇನ್ಕ್ಯುಬೇಟರ್ಗಳು ಮತ್ತು ಆಕ್ಸಿಲರೇಟರ್ಗಳನ್ನು ಮ್ಯಾಪ್ ಮಾಡಲಾಗುತ್ತದೆ ಮತ್ತು ಪ್ರದೇಶದ ನಿರ್ದಿಷ್ಟ ಇನ್ಕ್ಯುಬೇಶನ್ ಹಾಗೂ ಆಕ್ಸಿಲರೇಶನ್ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.
ಬಯೋಟೆಕ್, ಅಗ್ರಿಟೆಕ್, ಮೆಡ್ಟೆಕ್/ಹೆಲ್ತ್ಟೆಕ್ ಮತ್ತು ಕ್ಲೀನ್ಟೆಕ್ ಕೇಂದ್ರೀಕೃತ ವಲಯಗಳಾಗಿರುತ್ತವೆ. ಧನಸಹಾಯ ಹಾಗೂ ಇನ್ನಿತರ ವಿವರಗಳಿಗಾಗಿ https://itbtst.karnataka.gov.in/storage/pdf-files/KITS%20Tenders/Call-for-Proposals-WEscalate.pdf ಲಿಂಕ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸಲು 14 ಆಗಸ್ಟ್ 2024 (ಸಂಜೆ 5:00) ಕೊನೆಯ ದಿನ.