ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬಹುತೇಕ ಎಲ್ಲ ಭಾಗದಲ್ಲೂ ಕರುಗಳಿಗೋಸ್ಕರ ನೀಡಲಾಗುವ ಸಮಗ್ರ ಚಿಕಿತ್ಸಾ ಅಭಿಯಾನವಾದ “ಕರುಣಾ” ಕಾರ್ಯಕ್ರಮ ಚಾಲ್ತಿಯಲ್ಲಿದೆ ಎಂದು ಪಶು ಸಹಾಯಕ ನಿರ್ದೇಶಕ ಡಾ.ರೆ ಮಾ. ನಾಗಭೂಷಣ್ ತಿಳಿಸಿದರು.
ಇದರಂಗವಾಗಿ ಅರಳೀಕೆರೆ ಗ್ರಾಮದ 30 ಕರುಗಳಿಗೆ ಸಮಗ್ರ ಚಿಕಿತ್ಸೆ ನೀಡಲಾಗಿದೆ. ಗ್ರಾಮದ ಎಲ್ಲ ಕರುಗಳಿಗೂ ಜಂತುನಾಶಕ ಔಷಧಿಯನ್ನು ಕುಡಿಸಿ, ಸದೃಢ ಆರೋಗ್ಯ ವೃದ್ಧಿಗೆ ಪೂರಕವಾದ ಅಗತ್ಯ ಟಾನಿಕ್ ಮತ್ತು ಚುಚ್ಚುಮದ್ದುಗಳನ್ನು ನೀಡಲಾಯಿತು. ನಂತರ, ಕರುಗಳಿಗೆ ಪ್ರತಿದಿನ ಕೊಡಬಹುದಾದ ಮಾತ್ರೆ ಮತ್ತು ಟಾನಿಕ್’ಗಳನ್ನೂ ಪಾಲಕರಿಗೆ ವಿತರಿಸಲಾಯಿತು.
ಈ ಕರುಗಳಿಗೋಸ್ಕರ ನಡೆಸುವ ಕರುಣಾ ಕಾರ್ಯಕ್ರಮವನ್ನು ಪಾಲಕರಿಗೆ ಅನುಕೂಲಕರವಾದ ಸಂಜೆ ವೇಳೆಯ 6.00 ಗಂಟೆಗೆ ನಡೆಸಲಾಗಿರುತ್ತದೆ. ನಂತರ ಮಿಕ್ಕಿದ ರಾತ್ರಿ ಸಮಯದಲ್ಲಿ ಪಶುಪಾಲನೆ ಹಾಗೂ ಅದರ ಆಧುನಿಕ ಮತ್ತು ವೈಜ್ಞಾನಿಕ ವಿಧಾನಗಳ ಕುರಿತಾದ ವಿಶೇಷ ಉಪನ್ಯಾಸಗಳನ್ನು ಹಳ್ಳಿಗಳಲ್ಲಿ ನೀಡಲಾಗುತ್ತಿದೆ ಎಂದರು.

ಬೆಳಗ್ಗೆಯೂ 8.30’ರ ಹೊತ್ತಿಗೆ ಅರಳೀಕೆರೆ ಗ್ರಾಮದ ಸುಮಾರು 100 ರಾಸುಗಳಿಗೆ ಜಂತುನಾಶಕ ಔಷಧಿ ಕುಡಿಸಿ, ಚರ್ಮಗಂಟು ರೋಗದ ಲಸಿಕೆಗಳನ್ನು ನೀಡಲಾಯಿತು. 10 ರಾಸುಗಳಿಗೆ ಬರಡು ಮತ್ತು ಗರ್ಭಸಂಬಂಧೀ ಚಿಕಿತ್ಸೆಯನ್ನು ನೀಡಲಾಯಿತು. 30 ರಾಸುಗಳಲ್ಲಿದ್ದ ಇತರೆ ಸಾಮಾನ್ಯ ತೊಂದರೆಗಳನ್ನೂ ಪರೀಕ್ಷಿಸಿ, ಚಿಕಿತ್ಸೆಯನ್ನು ನೀಡಲಾಯಿತು. ಜೊತೆಗೆ ಗರ್ಭಧರಿಸಿದ್ದ 30 ರಾಸುಗಳು ಹಾಗೂ ಕರುವಿಗೆ ಜನ್ಮ ನೀಡಿದ್ದ 15 ರಾಸುಗಳ ಪಾಲಕರಿಗೆ ಲವಣ ಮತ್ತು ಖನಿಜ ಮಿಶ್ರಣದ ಪ್ರಾಕೆಟ್’ಗಳನ್ನು ವಿತರಿಸಿ, ಅದನ್ನು ರಾಸುಗಳಿಗೆ ನೀಡುವ ಸರಿಯಾದ ಮಾರ್ಗಸೂಚಿ ಮತ್ತು ಸಲಹೆಗಳನ್ನೂ ಪಾಲಕರಿಗೆ ತಿಳಿಸಿಕೊಡಲಾಯಿತು.
ಅದೇ ರೀತಿ ಗ್ರಾಮದ 600 ಕುರಿಗಳ ಕುರಿ ಸಾಕಣೆದಾರರಿಗೂ ಜಂತುನಾಶಕ ಔಷಧಿಯನ್ನು ವಿತರಿಸಿ, ಕುರಿಗಳಿಗೆ ಅದನ್ನು ನೀಡುವ ವಿಧಾನಗಳನ್ನು ತಿಳಿಸಿಕೊಡಲಾಯಿತು.
ಚಿಕ್ಕನಾಯಕನಹಳ್ಳಿ ತಾಲೂಕಿನ ಸೋರಲಮಾವು ಗ್ರಾಮದಲ್ಲೂ ಕರುಗಳಿಗೋಸ್ಕರ ಕರುಣಾ ಸಮಗ್ರ ಚಿಕಿತ್ಸಾ ಅಭಿಯಾನವನ್ನು ನಡೆಸಲಾಯಿತು. ಗ್ರಾಮದ 25 ಕರುಗಳಿಗೆ ಸಮಗ್ರ ಚಿಕಿತ್ಸೆ ನೀಡಲಾಯಿತು. ಇಲ್ಲಿಯೂ ಕೂಡ ಪಶು ಆರೋಗ್ಯ ಶಿಬಿರವನ್ನು ನಡೆಸಲಾಯಿತು.
ಗ್ರಾಮದ 50 ರಾಸುಗಳಿಗೆ ಜಂತುನಾಶಕ ಔಷಧಿ ಕುಡಿಸಿ, ಚರ್ಮಗಂಟು ರೋಗದ ಲಸಿಕೆ ನೀಡಲಾಯಿತು. ಇತರೆ ಸಾಮಾನ್ಯ ತೊಂದರೆಗಳಿದ್ದ 15 ರಾಸುಗಳಿಗೆ ಚಿಕಿತ್ಸೆ ನೀಡಲಾಯಿತು. ಇಲ್ಲಿನ 06 ರಾಸುಗಳಿಗೆ ಬರಡು ಮತ್ತು ಗರ್ಭಸಂಬಂಧಿ ಚಿಕಿತ್ಸೆಯನ್ನು ನೀಡಲಾಯಿತು. ಮತ್ತು ಇಲ್ಲಿ ಗರ್ಭಧರಿಸಿದ್ದ 15 ರಾಸುಗಳು ಹಾಗೂ ಕರುವಿಗೆ ಜನ್ಮ ನೀಡಿದ್ದ 15 ರಾಸುಗಳು ಎಲ್ಲಕ್ಕೂ ಲವಣ ಮತ್ತು ಖನಿಜ ಮಿಶ್ರಣಗಳ ಪ್ಯಾಕೆಟ್ಟುಗಳನ್ನು ಪಾಲಕರ ಕೈಗೆ ವಿತರಿಸಲಾಯಿತು. ಜೊತೆಗೆ ಗ್ರಾಮದ ಕುರಿ ಹಾಗೂ ಮೇಕೆಗಳ ಆರೋಗ್ಯಕರ ಬೆಳವಣಿಗೆಗಾಗಿ ಮಾತ್ರೆ, ಟಾನಿಕ್ಕು, ಜಂತುನಾಶಕ ಔಷಧಿ ಹಾಗೂ ಲಸಿಕೆ ಹಾಕಿಸಬೇಕಾದ ವೇಳಾಪಟ್ಟಿ ಎಲ್ಲವನ್ನೂ ಪಾಲಕ ಮತ್ತು ಸಾಕಣೆದಾರರ ಕೈಗೆ ತಿಳಿಸಿ ಕೊಡಲಾಯಿತು.

ಕರುಗಳ ಲಾಲನೆ-ಪಾಲನೆ, ಒಂದು ವರ್ಷ ಅವಧಿಯ ಒಳಗೆ ಕರು ಬೆದೆಗೆ ಬರುವಂತೆ ಮಾಡಲು ಅಳವಡಿಸಿಕೊಳ್ಳಬೇಕಾದ ಅಂಶಗಳು, ಕೃತಕ ಗರ್ಭಧಾರಣೆಯ ಮಹತ್ವ, ಗರ್ಭಧರಿಸಿದ ರಾಸುಗಳ ಪಾಲನೆ-ಪೋಷಣೆಯ ನವ ವಿಧಾನಗಳು, ರೋಗಗಳ ನಿಯಂತ್ರಣ, ಲಸಿಕೆಗಳ ಪ್ರಾಮುಖ್ಯತೆ, ಕಂದು ರೋಗದ ಲಸಿಕೆ, ಚರ್ಮಗಂಟು ರೋಗದ ಲಸಿಕೆ, ಕಾಲು-ಬಾಯಿ ಜ್ವರದ ಲಸಿಕೆ ಹಾಗೂ ಮೇವಿನ ಬೆಳೆಗಳ ಪ್ರಾಮುಖ್ಯತೆ, ಒಣಮೇವು ಪೌಷ್ಠೀಕರಣ, ರಸಮೇವು ತಯಾರಿಕೆ, ಲಾಭದಾಯಕ ಹೈನುಗಾರಿಕೆಯ ತತ್ವಗಳು ಮತ್ತು ಅಭ್ಯಾಸಕ್ರಮಗಳೂ ಸೇರಿದಂತೆ, ಪಶು ಪಾಲನೆಯ ಸಮಗ್ರ ವಿಚಾರಗಳನ್ನು ಉಪನ್ಯಾಸ ಕಾರ್ಯಕ್ರಮಗಳಲ್ಲಿ ರೈತ ಮತ್ತು ಪಶುಪಾಲಕರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಪಶು ಸಹಾಯಕ ನಿರ್ದೇಶಕ ಡಾ.ರೆ ಮಾ ನಾಗಭೂಷಣ್ ತಿಳಿಸಿದರು.
ಕರುಗಳಿಗೋಸ್ಕರ ಕರುಣಾ ಅಭಿಯಾನದಲ್ಲಿ, ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಎನ್ ವಿರೂಪಾಕ್ಷ, ಜಾನುವಾರು ಅಧಿಕಾರಿ ಜಗದೀಶ್, ಹಿರಿಯ ಪಶು ಪರೀಕ್ಷಕರುಗಳಾದ ಅತೀಕ್ ಅಹಮದ್ ಮತ್ತು ಮನೋಹರ್, ದಿಲೀಪ್, ಪ್ರಜ್ವಲ್, ಅತಾ ಉಲ್ಲಾ, ಸಿದ್ರಾಮಣ್ಣ, ನವೀನ್ ಹಾಗೂ ಪಶು ಸಖಿಯರಾದ ಕವಿತಾ, ಪ್ರಮೀಳಾ ಉಪಸ್ಥಿತರಿದ್ದರು.

ಜೊತೆಗೆ, ರೈತರು, ಪಶು ಪಾಲಕರು, ಗ್ರಾಮಸ್ಥರು,
ಗ್ರಾಮಗಳ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಹಾಗೂ ಆಸಕ್ತ ಯುವಕ ಯುವತಿಯರು ಹಾಜರಿದ್ದರು.
ವರದಿ, ಸಂಚಲನ, ಚಿಕ್ಕನಾಯಕನ ಸೀಮೆಯಿಂದ
