ಎಸ್ಎಸಿಸ್ಪಿ, ಟಿಎಸ್ಪಿಗೆ ಮೀಸಲಿಟ್ಟಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ಅಪರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಸ್ಲಂ ಜನಾಂದೋಲನ ಸಂಚಾಲಕ ಎ ನರಸಿಂಹಮರ್ತಿ ಮಾತನಾಡಿ, “2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕಾಗಿಯೇ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಘೋಷಣೆ ಮಾಡುವಾಗ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಹಣದಲ್ಲಿ ಗ್ಯಾರಂಟಿಗಳಿಗೆ ಖರ್ಚು ಮಾಡುತ್ತೇವೆಂದು ಘೋಷಣೆ ಮಾಡಿರಲಿಲ್ಲ. ಆದರೆ ಆಡಳಿತಕ್ಕೆ ಬಂದ ಮೇಲೆ ಈ 5 ಗ್ಯಾರಂಟಿಗಳಿಗೆ ಸಾಮಾನ್ಯ ಹಣದಲ್ಲಿ ಖರ್ಚು ಮಾಡದೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಹಣದಲ್ಲಿ ಖರ್ಚು ಮಾಡಲಾಗಿದೆ” ಎಂದು ಆರೋಪಿಸಿದರು.
“2017-18 ರಿಂದ ಅನ್ನಭಾಗ್ಯ ಯೋಜನೆಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಿದ್ದ ಹಣದಲ್ಲಿ ಹಂಚಿಕೆ ಮಾಡುತ್ತಿದ್ದು, ಆ ವರ್ಷದಿಂದ ಈವರೆಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಬಿಪಿಎಲ್ದಾರರ ವಿವರಗಳನ್ನು ನೀಡಿಲ್ಲ. ಈ ಯೋಜನೆಯ ಅರ್ಹತೆಯ ಮಾರ್ಗಸೂಚಿ ಪ್ರಕಾರ ಆದಾಯ ಮೀತಿಯಲ್ಲಿ ಇರುವವರಿಗೆಲ್ಲ ಪಡಿತರ ನೀಡುತ್ತೇವೆಂದು ಘೋಷಣೆ ಮಾಡಿಕೊಳ್ಳಲಾಗಿದೆ. ಜಾತಿ ಆಧಾರಿತವಾಗಿ ಮಾರ್ಗಸೂಚಿಯಲ್ಲಿ ಇರುವುದಿಲ್ಲ. ಗೃಹಲಕ್ಷ್ಮೀ ಯೋಜನೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುಷ್ಠಾನ ಮಾಡುತ್ತಿದ್ದು, ಪಕ್ಕ ಫಲಾನುಭವಿಗಳ ಮಾಹಿತಿ ಸಿಕ್ಕಿಲ್ಲ. ಅಂದಾಜಿನಲ್ಲಿ ಸಿಗುತ್ತಿದೆ. ಶಕ್ತಿ ಯೋಜನೆ ಗೃಹಜ್ಯೋತಿ, ಯುವನಿಧಿ ಈ ಯಾವುದೇ ಯೋಜನೆಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸೌಲಭ್ಯ ಪಡೆದಿರುವುದಕ್ಕೆ ಇಲಾಖೆಗಳಲ್ಲಿಯೂ ಮಾಹಿತಿ ಇಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲೂ ದಾಖಲೆಗಳಿಲ್ಲ” ಎಂದು ಹೇಳಿದರು.
ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳ ಉಪಹಂಚಿಕೆ ಕಾಯಿದೆ 2013ರಲ್ಲಿ ಆಡಳಿತ ವೆಚ್ಚವನ್ನು ಹೊರೆತುಪಡಿಸಿ ಒಟ್ಟು ಅಭಿವೃದ್ಧಿಗೆ ಖರ್ಚು ಮಾಡುವ ಹಣದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಉಪ ಹಂಚಿಕೆಗೆ ಹಣವನ್ನು ಮೀಸಲಿಡುತ್ತಿದ್ದು, ಮೀಸಲಿಟ್ಟ ಉಪಹಂಚಿಕೆ ಹಣದಲ್ಲಿ(ಬಾಡಿಗೆ, ವಿದ್ಯುತ್, ಕುಡಿಯುವ ನೀರು ಇತರೆ ಎಲ್ಲ ರೀತಿಯ ಆಡಳಿತಾತ್ಮಕ ವೆಚ್ಚಗಳಿಗೆ) ಇಲಾಖೆಗಳು ನಿರ್ಮಾಣ ಮಾಡುವ ಹೊಸ ಕಟ್ಟಡಗಳಿಗೆ, ಕಟ್ಟಡ ದುರಸ್ತಿಗಳಿಗೆ, ಶಾಲಾ-ಕಾಲೇಜು ಕಟ್ಟಡಗಳಿಗೆ, ಹಾಸ್ಟೆಲ್ ಕಟ್ಟಡಗಳಿಗೆ ಮತ್ತು ಇವುಗಳ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಉಪ ಹಂಚಿಕೆ ಹಣವನ್ನು ಖರ್ಚು ಮಾಡುತ್ತಿರುವುದು ಖಂಡನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ದಲಿತ ಚಳವಳಿಗೆ 50 ವರ್ಷದ ಸಂಭ್ರಮಕ್ಕೆ ಆಹ್ವಾನ
“ಗ್ಯಾರಂಟಿ ಯೋಜನೆಗಳಿಗೆ ಎಸ್ಇಎಸ್ಪಿ/ಟಿಎಸ್ಪಿ ಹಣವನ್ನು ಬಳಕೆ ಮಾಡುತ್ತಿರುವುದು ಖಂಡಿನೀಯ. ಗ್ಯಾರಂಟಿ ಯೋಜನೆಗಳಿಗೆ ಸಾಮಾನ್ಯ ಹಣದಲ್ಲಿ ಖರ್ಚು ಮಾಡಲು ಸರ್ಕಾರ ಮುಂದಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿಗೆ ಸಾಮಾಜಿಕ ನ್ಯಾಯ ಖಾತ್ರಿಪಡಿಸಲು ಬದ್ಧತೆ ಪ್ರದರ್ಶಿಸಬೇಕು” ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯು ಒತ್ತಾಯಿಸಿತು.
ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ಕಣ್ಣನ್, ಜಾಬೀರ್ಖಾನ್, ಚಕ್ರಪಾಣಿ, ಮೋಹನ್ ಟಿ ಆರ್, ಗಣೇಶ, ಮುಬಾರಕ್, ಸಾವಿತ್ರಿ ಬಾಫುಲೆ ಮಹಿಳಾ ಘಟಕದ ಅನುಪಮಾ, ಪೂಣಿಮಾ, ಶಾರದಮ್ಮ, ವಸಂತಮ್ಮ, ಗಂಗಾ, ಮಂಗಳಮ್ಮ, ಸುಜಾತ, ತಿಪ್ಪೆಸ್ವಾಮಿ ಸೇರಿದಂತೆ ಇತರರು ಇದ್ದರು.