ಕರ್ನಾಟಕ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ವಿಷಯದಲ್ಲಿ ಸುಪ್ರೀಂಕೋರ್ಟಿನಲ್ಲಿ ಆಗುತ್ತಿದ್ದ ಬೆಳವಣಿಗೆಗಳ ಬಗ್ಗೆ ಸ್ವಲ್ಪವೂ ನಿಗಾ ಇರಲಿಲ್ಲ. ತಾನು ಏನೋ ಒಂದು ಶಿಫಾರಸ್ಸು ಮಾಡಿ ಮುಖ ಉಳಿಸಿಕೊಂಡೆ ಎಂಬ ಕಾಟಾಚಾರ ಮಾತ್ರ ಇಡೀ ಬೆಳವಣಿಗೆಯಲ್ಲಿ ಎದ್ದು ಕಾಣುತ್ತಿತ್ತು.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭ, ಡಾ ಜಿ ಪರಮೇಶ್ವರ್ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ರಚನಾ ಸಮಿತಿಯ ಅಧ್ಯಕ್ಷರು.”ಗ್ಯಾರಂಟಿಗಳನ್ನು ಪ್ರಣಾಳಿಕೆಗಳ ಮೂಲಕ ಹೇಳಬೇಕಿತ್ತು. ಆದರೆ ಅದಕ್ಕೆ ಅವಕಾಶ ಕೊಡದೆ ಚುನಾವಣಾ ಸಭೆಗಳಲ್ಲೇ ಘೋಷಿಸಲಾಗುತ್ತಿದೆ. ಹೀಗಾದರೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರಿಗೇನು ಕೆಲಸ” ಎಂದು ಹೇಳಿ ಸ್ವಲ್ಪ ದಿನ ಡಾ ಪರಮೇಶ್ವರ್ ಮುನಿಸಿಕೊಂಡಿದ್ದರು. ಕೊನೆಗೂ ಪ್ರಣಾಳಿಕೆ ಸಮಿತಿ ಅಧ್ಯಕ್ಷರಿಗೆ ಒಂದು ಬಲವಾದ ಭರವಸೆಯನ್ನು ಘೋಷಿಸುವ ಅವಕಾಶ ಸಿಕ್ಕಿತು. ಒಳ ಮೀಸಲಾತಿಯ ಕುರಿತಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಯಿತು. ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲೇ ನ್ಯಾ ಸದಾಶಿವ ವರದಿಗೆ ಒಪ್ಪಿಗೆ ಕೊಟ್ಟು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದು.
ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಸಚಿವ ಸಂಪುಟ ಸಭೆಗ ನಡೆದವು. ಒಳ ಮೀಸಲಾತಿ ವಿಷಯ ಪ್ರಸ್ತಾಪವಾಗದೇ ಮೂಲೆ ಸೇರಿತು. ಅತ್ತ ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಮಾದಿಗ ವಿಶ್ವರೂಪಂ’ ಸಭೆಯಲ್ಲಿ ಭಾಗವಹಿಸಿ ತೋರಿಸಿದ ಬದ್ಧತೆಗೆ ಕಾಂಗ್ರೆಸ್ ಒಳಗೊಳಗೆ ನಡುಗಿ ಹೋಗಿತ್ತು. ಇತ್ತ ಕರ್ನಾಟಕದಲ್ಲಿ ಆರಂಭವಾದ ಮಾದಿಗ ಮುನ್ನಡೆ ಸಮಾವೇಶಗಳು, ಅದಕ್ಕೆ ಸಿಕ್ಕ ಜನಸ್ಪಂದನದಿಂದಾಗಿ ಕಾಂಗ್ರೆಸ್ ತಾನು ಕೊಟ್ಟ ಪ್ರಣಾಳಿಕೆಯಲ್ಲಾದರೂ ಎಚ್ಚೆತ್ತುಕೊಳ್ಳಬೇಕಾಯಿತು.
ಜನವರಿ 17, 2024 ಕರ್ನಾಟಕ ಸರ್ಕಾರದ ಸಚಿವ ಸಂಪುಟದ ಸಭೆ. ‘ಸಂವಿಧಾನದ 341ನೇ ವಿಧಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಂಪುಟ ಸಭೆ ನಿರ್ಧರಿಸಿತು. ಸಂಪುಟ ಸಭೆಯ ನಂತರ ಇದನ್ನು ಪತ್ರಕರ್ತರಿಗೆ ವಿವರಿಸಲು ಬಂದ ಸಮಾಜ ಕಲ್ಯಾಣ ಸಚಿವರು ತಡಬಡಾಯಿಸಿದರು.
341ನೇ ವಿಧಿಗೆ ತಿದ್ದುಪಡಿ ಆಗಬೇಕು ಎಂದು ನ್ಯಾ ಉಷಾ ಮೆಹ್ರಾ ಆಯೋಗ 2008ರಲ್ಲಿ ಹೇಳಿದ್ದು ನಿಜ. 2008ರಿಂದ 2013ರವರಗೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಇತ್ತಲ್ಲ! ಆಗೇಕೆ 341ನೇ ವಿಧಿಗೆ ತಿದ್ದುಪಡಿ ಮಾಡಲಿಲ್ಲ? 2013ರಿಂದ 2018ರವರೆಗೆ ಕರ್ನಾಟಕದಲ್ಲಿ ಸಿದ್ಧಾರಾಮಯ್ಯ ನೇತೃತ್ವದ ಬಹುಮತದ ಸರ್ಕಾರವೇ ಇತ್ತಲ್ಲ! ಆಗೇಕೆ ಈ ಶಿಫಾರಸ್ಸನ್ನು ಕಳುಹಿಸಲಿಲ್ಲ? ಪತ್ರಕರ್ತರ ಪ್ರಶ್ನೆಗೆ ಸಮಾಜ ಕಲ್ಯಾಣ ಸಚಿವರಲ್ಲಿ ಉತ್ತರ ಇರಲಿಲ್ಲ, ಬೆವರೊರೆಸಿಕೊಂಡು ಎದ್ದ ಸಚಿವರು, ʼಯಾರೋ ಮೀಡಿಯಾದವರನ್ನೆಲ್ಲ ಟ್ಯೂನ್ ಮಾಡಿ ಕಳುಹಿಸಿದ್ದಾರೆ’ ಎಂದು ಗೊಣಗಿಕೊಂಡು ಹೋದರೆಂದು ಪತ್ರಕರ್ತರೊಬ್ಬರು ಹೇಳಿದರು.
- 2020ರ ತಮ್ಮ ತೀರ್ಪಿನಲ್ಲೇ ನ್ಯಾ ಅರುಣ ಮಿಶ್ರಾ ‘341ನೇ ವಿಧಿಗೆ ತಿದ್ದುಪಡಿ ತರುವ ವಿಷಯ ಅಪ್ರಸ್ತುತ’ ಎಂದು ಸ್ಪಷ್ಟವಾಗಿ ಹೇಳಿದ್ದರು.
- 2023ರ ಅಕ್ಟೋಬರ್‌ನಲ್ಲಿ ಒಳಮೀಸಲಾತಿಯ ವಿಚಾರಣೆಗಾಗಿ ಸುಪ್ರೀಂಕೋರ್ಟ್ ಏಳು ಸದಸ್ಯರ ಪೀಠವನ್ನು ರಚಿಸಿತು.
- ಕೇಂದ್ರ ಸರ್ಕಾರ ಒಳಮೀಸಲಾತಿಯ ಪರವಾಗಿ ವಕಾಲತ್ತು ವಹಿಸಿತು.
- ವಿಚಾರಣೆ ಆರಂಭವಾಗಲು ಕೆಲದಿನಗಳು ಇರುವಾಗ 2024 ಜನವರಿ 17ರಂದು ಕರ್ನಾಟಕ ಸರ್ಕಾರ ‘341ನೇ ವಿಧಿಗೆ ತಿದ್ದುಪಡಿ ತನ್ನಿ’ ಎಂದು ಕೇಂದ್ರಕ್ಕೆ ಪತ್ರ ಬರೆಯಿತು.
ಕರ್ನಾಟಕ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ವಿಷಯದಲ್ಲಿ ಸುಪ್ರೀಂಕೋರ್ಟಿನಲ್ಲಿ ಆಗುತ್ತಿದ್ದ ಬೆಳವಣಿಗೆಗಳ ಬಗ್ಗೆ ಸ್ವಲ್ಪವೂ ನಿಗಾ ಇರಲಿಲ್ಲ. ತಾನು ಏನೋ ಒಂದು ಶಿಫಾರಸ್ಸು ಮಾಡಿ ಮುಖ ಉಳಿಸಿಕೊಂಡೆ ಎಂಬ ಕಾಟಾಚಾರ ಮಾತ್ರ ಇಡೀ ಬೆಳವಣಿಗೆಯಲ್ಲಿ ಎದ್ದು ಕಾಣುತ್ತಿತ್ತು.
ದುರಂತವೆಂದರೆ ಆಗಸ್ಟ್ 1ರಂದು ಸುಪ್ರೀಂಕೋರ್ಟಿನ ಐತಿಹಾಸಿಕ ತೀರ್ಪು ಹೊರಬಿತ್ತು. ಆಗಲೂ ನಮ್ಮ ಸಮಾಜ ಕಲ್ಯಾಣ ಸಚಿವರು ಹೇಳಿದ್ದು ‘ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಬೇಕಾಗುತ್ತದೆ!’ ಇಂತಹ ‘ಬಂಡೆ’ ಸರ್ಕಾರದ ಎದುರು ಒಳ ಮೀಸಲಾತಿಯ ಚೆಂಡು ಉರುಳಿ ಬಂದಿದೆಯೇ ? ಕಾಲವೇ ಉತ್ತರಿಸಬೇಕು.

ಮಂಜುನಾಥ ಬುರಡಿ
ಗದಗ ಜಿಲ್ಲಾ ಮಾದಿಗ ದಂಡೋರ ಜಿಲ್ಲಾ ಪ್ರಧಾನ ಕಾರ್ಯದರ್ಶಿ