ಚಿಂತಾಮಣಿ ನಗರಸಭೆಯ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಿಗೆ ಇದೇ ಸೆಪ್ಟೆಂಬರ್ 11 ರಂದು ಚುನಾವಣೆ ನಿಗದಿಯಾಗಿದ್ದು, ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷವು ಅಧಿಕಾರದ ಚುಕ್ಕಾಣೆ ಹಿಡಿಯುವುದು ಖಚಿತವಾಗಿದೆಯಾದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಐವರು ಸದಸ್ಯರ ನಡುವೆ ಮಧ್ಯೆ ಬಿಗ್ ಫೈಟ್ ಏರ್ಪಟ್ಟಿದೆ.
ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜಾಚಾರಿ, ಮಹಮದ್ ಶಫೀಕ್, ಹರೀಶ್, ಜಗದೀಶ್ ರೆಡ್ಡಿ, ಅಕ್ಷಯ್ ಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ಇಲ್ಲವಾದ್ದರಿಂದ ರಾಣಿಯಮ್ಮ ಬಹುತೇಕ ಖಚಿತವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಐದೂ ಜನರಲ್ಲಿ ಬಿಗ್ ಫೈಟ್ ನಡೆಯುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬದ್ಧ ವೈರಿಗಳಾಗಿದ್ದ ಕೆ.ಹೆಚ್.ಮುನಿಯಪ್ಪ ಹಾಗೂ ಡಾ.ಎಂ.ಸಿ.ಸುಧಾಕರ್ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಏಳಿಗೆಯ ಹಿನ್ನಲೆಯಲ್ಲಿ ಒಂದಾಗಿರುವುದರಿಂದ ಕೆ.ಹೆಚ್.ಮುನಿಯಪ್ಪ ಬೆಂಬಲಿತ ಸದಸ್ಯ ಜೈ ಭೀಮ್ ಮುರಳಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಾಗಿದೆ. ಪಕ್ಷೇತರ ಅಭ್ಯರ್ಥಿ ಅಕ್ಷಯ್ ಕುಮಾರ್ ಸಹ ಡಾ.ಎಂ.ಸಿ.ಸುಧಾಕರ್ ಅವರಿಗೆ ಮೊದಲಿನಿಂದಲೂ ಬೆಂಬಲ ಸೂಚಿಸಿದ್ದಾರೆ. 29ನೇ ವಾರ್ಡಿನ ಜೆಡಿಎಸ್ ಸದಸ್ಯ ಅಸಿಯ ನಜ್ ಕೋಂ ಶೇಕ್ ಸಾಧಿಕ್ ಸಹಾ ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಪಕ್ಷದ ಸಂಖ್ಯಾಬಲ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಎಂ.ಎಲ್.ಸಿ ಅನಿಲ್ ಕುಮಾರ್ ಸೇರಿ 19 ಇದೆ. ಇದೀಗ ಪ್ರಜಾಪಕ್ಷದ ಅಭ್ಯರ್ಥಿ 15ನೇ ವಾರ್ಡಿನ ಸದಸ್ಯೆ ರೂಬಿಯಾ ಸುಲ್ತಾನಾ ಕೋಂ ಅಲ್ಲಾ ಬಕಾಷ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಕೋಲಾರ ಸಂಸದರ ಒಂದು ಮತವೂ ಸೇರಿದಂತೆ ಜೆಡಿಎಸ್ ಪಕ್ಷದ ಸಂಖ್ಯಾಬಲ ಕೇವಲ 15 ಇದೆ. ಕಾಂಗ್ರೆಸ್ ಸಂಖ್ಯಾಬಲ 19 ಇರುವುದರಿಂದ ಕಾಂಗ್ರೆಸ್ ಗೆಲುವು ಬಹುತೇಕ ಖಚಿತವಾಗಿದೆ.

2018-19ನೇ ಸಾಲಿನಲ್ಲಿ ನಡೆದ 31 ವಾರ್ಡ್ ಗಳ ನಗರಸಭಾ ಸದಸ್ಯರ ಚುನಾವಣೆಯಲ್ಲಿ ಡಾ.ಎಂ ಸಿ ಸುಧಾಕರ್ ಬೆಂಬಲಿತ 14 ಸದಸ್ಯರು, ಜೆಡಿಎಸ್ ಪಕ್ಷದಿಂದ 14 ಸದಸ್ಯರು, ಕಾಂಗ್ರೆಸ್ ಪಕ್ಷದಿಂದ ಕೆ.ಹೆಚ್.ಮುನಿಯಪ್ಪ ಬೆಂಬಲಿತ ಅಭ್ಯರ್ಥಿ ಜೈಭೀಮ್ ಮುರಳಿ, ಪಕ್ಷೇತರ ಅಭ್ಯರ್ಥಿಗಳಾಗಿ ಆಕ್ಷಯ್ ಕುಮಾರ್ ಮತ್ತು ಚಾಂದ್ ಪಾಷ ಆಯ್ಕೆಯಾಗಿದ್ದರು. ಜೆಡಿಎಸ್ ಪಕ್ಷದಿಂದ 14 ಸದಸ್ಯರು ಗೆಲುವು ಸಾಧಿಸಿದ್ದು, ಜೈಭೀಮ್ ಮುರಳಿ ಮತ್ತು ಚಾಂದ್ ಪಾಷ ಜೆಡಿಎಸ್ ಗೆ ಬೆಂಬಲ ಸೂಚಿಸಿದ್ದರಿಂದ ಜೆಡಿಎಸ್ ನಗರಸಭೆ ಅಧಿಕಾರ ಹಿಡಿಯಲು ಸಾಧ್ಯವಾಗಿತ್ತು.
ನಗರಸಭಾ ಸದಸ್ಯ ಮಹಮದ್ ಶಫೀಕ್ ನಡೆ ಕುತೂಹಲ : ಇದೇ 11 ರಂದು ನಡೆಯಲಿರುವ ಅಧ್ಯಕ್ಷ ಸ್ಥಾನಕ್ಕೆ ತಾನು ಸಹಾ ಪ್ರಬಲ ಆಕ್ಷಾಂಕಿಯಾಗಿದ್ದು ಪಕ್ಷಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದೇನೆ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿಸುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದು, ನನ್ನನ್ನು ಅಭ್ಯರ್ಥಿಯನ್ನಾಗಿ ಪರಿಗಣಿಸದಿದ್ದರೆ ನನ್ನ ಮುಂದಿನ ನಡೆ ಅಭಿವೃದ್ಧಿಯ ಕಡೆಗೆ ಎಂಬ ಮಹಮದ್ ಶಫೀಕ್ ಅವರ ಮಾತುಗಳು ಕುತೂಹಲ ಕೆರಳಿಸಿದ್ದು, ಮುಂದಿನ ರಾಜಕೀಯ ಬೆಳವಣಿಗೆಗೆ ದಿಕ್ಸೂಚಿಯಾಗಿದೆ.
18ನೇ ವಾರ್ಡಿನಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದ್ದ ನಗರಸಭಾ ಸದಸ್ಯ ಮಹಮದ್ ಶಫೀಕ್ ಮೂಲಭೂತ ಸೌಕರ್ಯಗಳ ಸಮಸ್ಯೆ ಹಾಗೂ ಹಲವು ವಿಚಾರಗಳ ಕುರಿತಾಗಿ ಹಲವಾರು ಬಾರಿ ಸ್ವಪಕ್ಷೀಯ ಶಾಸಕ ಜೆ.ಕೆ.ಕೃಷ್ಣಾರೆಡ್ಡಿಯವರ ಧೋರಣೆಯ ವಿರುದ್ಧ ಧರಣಿ ನಡೆಸಿ ಪಕ್ಷದ ಹಿರಿಯರ ಕೆಂಗಣ್ಣಿಗೆ ಗುರಿಯಾಗಿದ್ದರು.
ರಾಜಕೀಯ ಚದುರಂಗದಾಟದಲ್ಲಿ ಹಾವು ಮುಂಗುಸಿಯಂತೆ ಬದ್ಧ ವೈರಿಗಳಾಗಿದ್ದ ಕೆ.ಹೆಚ್.ಮುನಿಯಪ್ಪ ವಿರುದ್ಧ ಮುನಿಸಿಕೊಂಡಿದ್ದ ಡಾ.ಎಂ.ಸಿ.ಸುಧಾಕರ್ 2018ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಲೋಕಸಭಾ ಅಭ್ಯರ್ಥಿ ಮುನಿಸ್ವಾಮಿಗೆ ಬೆಂಬಲ ಸೂಚಿಸಿ ಕೆ.ಹೆಚ್.ಮುನಿಯಪ್ಪ ಅವರನ್ನು ಸೋಲಿಸಿ ಸಂಸದ ಮುನಿಸ್ವಾಮಿ ಗೆಲುವಿಗೆ ಕಾರಣರಾಗಿದ್ದರು.
ಜಿಲ್ಲೆಯಲ್ಲಿ ಯಾವುದೇ ನೆಲೆಯೇ ಇಲ್ಲದ ತನ್ನನ್ನು ಲೋಕಸಭಾ ಅಭ್ಯರ್ಥಿಯನ್ನಾಗಿ ಬೆಂಬಲಿಸಿದ ಡಾ.ಎಂ.ಸಿ.ಸುಧಾಕರ್ ಋಣ ಹೇಗಾದರೂ ತೀರಿಸಲೇಬೇಕೆಂದು ಕಾಯುತ್ತಿದ್ದ ಮುನಿಸ್ವಾಮಿ ಜೆಡಿಎಸ್ ಮುಖಂಡರ ಧೋರಣೆಯಿಂದ ಬೇಸತ್ತಿದ್ದ ಮಹಮದ್ ಶಫಿಕ್ ಅವರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ತನ್ನ ಜೊತೆಯಲ್ಲಿಯೇ ಕರೆತರುವ ಮೂಲಕ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಸ್ಪರ್ಧಿಸಿದ್ದ ಭಾರತೀಯ ಪ್ರಜಾಪಕ್ಷದ ಡಾ.ಎಂ.ಸಿ.ಸುಧಾಕರ್ ಬೆಂಬಲಿತ ರೇಖಾ ಉಮೇಶ್ ಮತ್ತು ಸುಹಾಸಿನಿ ಶೇಷರೆಡ್ಡಿ ಗೆಲುವಿಗೆ ಕಾರಣರಾದರು. ದಿವಗಂತ.ಎಂ.ಸಿ.ಅಂಜನೇಯರೆಡ್ಡಿ ಕುಟುಂಬದಿಂದ ಕೈತಪ್ಪಿ ಹೋಗಿದ್ದ ನಗರಸಭೆ ಆಡಳಿತವನ್ನು ಮತ್ತೆ ಕೊಡಿಸಿಕೊಡಿಸುವಲ್ಲಿ ಮಾಜಿ ಸಂಸದ ಮುನಿಸ್ವಾಮಿ ಸಫಲರಾದರು. ಈ ಮೂಲಕ ತಮ್ಮ ಋಣವನ್ನು ಸ್ವಲ್ಪ ಮಟ್ಟಿಗೆ ತೀರಿಸಿಕೊಂಡರೆಂಬ ಮಾತು ಆಗ ಜನಜನಿತವಾಗಿತ್ತು.
ಜೆಡಿಎಸ್ ಪಕ್ಷದಿಂದ ವಿಪ್ ಜಾರಿ ಮಾಡಿದ್ದರೂ ವಿಪ್ ಉಲ್ಲಂಘನೆ ಮಾಡಿ ವಿರೋಧ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಿರಲು ಹಾಗೂ ನಗರಸಭೆ ಆಡಳಿತ ಕೈತಪ್ಪಿಹೋಗಲು ಶಫೀಕ್ ಕಾರಣರೆಂದು ದೂರಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಆಗಿನ ಶಾಸಕ ಜೆಕೆ ಕೃಷ್ಣಾರೆಡ್ಡಿ, ಜಿಲ್ಲಾಧ್ಯಕ್ಷ ಮುನೇಗೌಡ, ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದು ಸುದೀರ್ಘ ವಿಚಾರಣೆ ನಂತರ ಶಫೀಕ್ ನಗರಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದರು.
ಮಹಮದ್ ಶಫಿಕ್ ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ ಪರವಾಗಿ ಕೆಲಸ ಮಾಡಿ ತೆರವಾಗಿದ್ದ 18ನೇ ವಾರ್ಡಿನ ನಗರಸಭಾ ಸದಸ್ಯ ಸ್ಥಾನಕ್ಕೆ 2023ರ ಡಿಸೆಂಬರ್.27 ರಂದು ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರಾಗಿ ಗೆಲುವು ಸಾಧಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಖಾಲಿ ಇಲ್ಲದ ಸಿಎಂ ಸ್ಥಾನ ಮತ್ತು ವ್ಯರ್ಥ ಕಾಲಹರಣ
ಮತ್ತೆ ಜೆಡಿಎಸ್‌ನತ್ತ ಶಫೀಕ್? : ಜೆಡಿಎಸ್ ಪಕ್ಷದಲ್ಲಿ ಉಚ್ಚಾಟನೆಗೊಂಡು ಕಾಂಗ್ರೆಸ್ ಪಕ್ಷ ಸೇರಿದ್ದ ಮಹಮದ್ ಶಫೀಕ್ ಮತ್ತೆ ಜೆಡಿಎಸ್ ಕದ ತಟ್ಟುತ್ತಿದ್ದಾರೆಂಬ ಗುಸು ಗುಸು ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಮುದ ನೀಡುವಂತೆ ಟಿಪ್ಪುನಗರದ ಜೆಕೆ ಭವನದಲ್ಲಿ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಮಂಗಳವಾರ ರಾತ್ರಿ 15ನೇ ವಾರ್ಡಿನ ಸದಸ್ಯೆ ರೂಬಿಯಾ ಸುಲ್ತಾನಾರವರ ಪತಿ ಅಲ್ಲಾ ಬಕಾಷ್ ಮತ್ತಿತರರು ಮಹಮದ್ ಶಫೀಕ್ ಅನುಪಸ್ಥಿತಿಯಲ್ಲಿ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.
(ವರದಿ : ಸೈಯದ್ ಅಸ್ಲಾಂ ಪಾಷಾ, ಚಿಂತಾಮಣಿ)

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.