ನಿಯಮ ಮೀರಿ ಪ್ಲಾಸ್ಟಿಕ್ ಬಳಸಿದರೆ ಅಂಗಡಿಗಳ ಪರವಾನಗಿ(ಲೈಸೆನ್ಸ್) ರದ್ದು ಮಾಡಲಾಗುವುದು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್ ಆಡಿ ಹೇಳಿದರು.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಜಿಲ್ಲಾಮಟ್ಟದ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿ, “ತಮ್ಮ ವ್ಯಾಪ್ತಿಯ ಜನಸಂಖ್ಯೆ ಹಾಗೂ ಸಂಗ್ರಹವಾಗುವ ತ್ಯಾಜ್ಯದ ಮಾಹಿತಿ ಸ್ಥಳೀಯ ಸಂಸ್ಥೆಗಳಿಗೆ ತಿಳಿದಿರಬೇಕು. ತ್ಯಾಜ್ಯ ವಿಲೇವಾರಿಗೆ ಸ್ವಚ್ಛ ಭಾರತ್ ಮಿಷನ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು” ಎಂದರು.
“ಪ್ಲಾಸ್ಟಿಕ್ ಬಳಕೆಯನ್ನು ಕೇಂದ್ರ ಸರ್ಕಾರವು ನಿಷೇಧಿಸಿದ್ದು, ನಿಯಮ ಮೀರಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ಬಳಕೆ ಕಂಡುಬಂದರೆ ಅಂಗಡಿಗಳ ಪರವಾನಗಿಯನ್ನೇ ರದ್ದುಗೊಳಿಸಬೇಕು. ಪ್ಲಾಸ್ಟಿಕ್, ಇ–ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಕಾಲೇಜುಗಳಲ್ಲಿ ಗ್ರೀನ್ ಕ್ಯಾಂಪಸ್ ನಿರ್ಮಾಣಕ್ಕೆ ಉತ್ತೇಜಿಸಬೇಕು. ದೇವಸ್ಥಾನಗಳಲ್ಲೂ ಸ್ವಚ್ಛತೆ ಬಗ್ಗೆ ತಿಳಿವಳಿಕೆ ಮೂಡಿಸಬೇಕು” ಎಂದು ಸೂಚನೆ ನೀಡಿದರು.
“ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಪ್ರತಿ ಮನೆಯಿಂದಲೇ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಣೆ ಮಾಡುವಂತೆ ಕ್ರಮ ವಹಿಸಬೇಕು” ಎಂದು ಹೇಳಿದರು.
“ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಸರಿಯಾಗಿ ಕೈಗೊಳ್ಳಲು ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಮರುಬಳಕೆ ಆಗಬಹುದಾದ ತ್ಯಾಜ್ಯದಿಂದಲೂ ಆದಾಯ ಗಳಿಸುವತ್ತ ಸ್ಥಳೀಯ ಸಂಸ್ಥೆಗಳು ಗಮನ ಹರಿಸಬೇಕು” ಎಂದು ಸುಭಾಷ್ ಆಡಿ ಸೂಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವಿದ್ಯಾರ್ಜನೆ ಬಾಲ್ಯವಿವಾಹ ತಡೆಗೆ ದಾರಿ: ಆರ್ ಕೆ ಸರ್ದಾರ್
ಸಭೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.