ಅಂಗಡಿ ಮುಂಗಟ್ಟು ದಿನದ 24 ಗಂಟೆಗಳು ತೆರೆದಿರುವುದಕ್ಕೆ ಸಂಬಂಧಿಸಿ ರಾಜ್ಯ ಕಾರ್ಮಿಕ ಇಲಾಖೆಯು ನೂತನ ನಿಯಮಗಳು ಮತ್ತು ಷರತ್ತುಗಳನ್ನು ಘೋಷಿಸಿದೆ. ಹತ್ತು ಅಥವಾ ಅದಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಎಲ್ಲಾ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ವರ್ಷದ ಎಲ್ಲಾ ದಿನಗಳಲ್ಲಿ, ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಕಾರ್ಮಿಕ ಇಲಾಖೆಯು ಶುಕ್ರವಾರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ 1961ರ ಅಡಿಯಲ್ಲಿ ಈ ಅಧಿಸೂಚನೆಯನ್ನು ಹೊರಡಿಸಿದೆ. ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುವ ಮತ್ತು ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರವನ್ನು ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇನ್ನು 2021ರ ಜನವರಿ 2ರಂದು ಸರ್ಕಾರ ಇದೇ ಆದೇಶ ಹೊರಡಿಸಿತ್ತು.
ನಿಯಮ ಪ್ರಕಾರ ಗರಿಷ್ಠ ಕೆಲಸದ ಅವಧಿಯು ದಿನಕ್ಕೆ ಎಂಟು ಗಂಟೆಗಳು ಮತ್ತು ವಾರಕ್ಕೆ 48 ಗಂಟೆಗಳು ಆಗಿದೆ. ಹೆಚ್ಚಿನ ಅವಧಿಯ ಕೆಲಸಕ್ಕೆ (ಓವರ್ ಟೈಮ್) ಅವಕಾಶ ನೀಡಲಾಗಿದೆ. ಆದರೆ ಅದಕ್ಕೂ ಮಿತಿಯನ್ನು ವಿಧಿಸಲಾಗಿದೆ. ದಿನಕ್ಕೆ 10 ಗಂಟೆಗಳು ಮತ್ತು ವಾರಕ್ಕೆ 50 ಗಂಟೆಗಳವರೆಗೆ ನಿಗದಿಪಡಿಸಲಾಗಿದೆ.
ಇದನ್ನು ಓದಿದ್ದೀರಾ? ಬೆಳಗಾವಿ | ನಿಯಮ ಮೀರಿ ಪ್ಲಾಸ್ಟಿಕ್ ಬಳಸಿದರೆ ಅಂಗಡಿಗಳ ಪರವಾನಗಿ ರದ್ದು: ಸುಭಾಷ್ ಆಡಿ ಎಚ್ಚರಿಕೆ
ಇನ್ನು ಎಲ್ಲಾ ಉದ್ಯೋಗಿಗಳಿಗೆ ವೇತನವು ಕರ್ನಾಟಕ ವೇತನ ಪಾವತಿ ನಿಯಮಗಳು 1963ಕ್ಕೆ ಅನುಗುಣವಾಗಿರಬೇಕು. ಯಾವುದೇ ಉದ್ಯೋಗದಾತರು ರಜಾದಿನಗಳಲ್ಲಿ ಅಥವಾ ಸಾಮಾನ್ಯ ಸಮಯವನ್ನು ಮೀರಿ ಹೆಚ್ಚಿನ ಕೆಲಸವನ್ನು ನೌಕರರಿಗೆ ನೀಡಿದರೆ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಪ್ರತಿ ಉದ್ಯೋಗಿಗೆ ವಾರಕ್ಕೆ ಒಂದು ದಿನ ರಜೆ ನೀಡಬೇಕು. ಅದಕ್ಕೆ ಅನುಗುಣವಾಗಿ ಉದ್ಯೋಗಿಗಳನ್ನು ನೇಮಿಸಿಕೊಂಡಿರಬೇಕು. ಪಾರದರ್ಶಕತೆಯನ್ನು ಹೆಚ್ಚಿಸಲು, ಪ್ರತಿ ಉದ್ಯೋಗಿಯ ವಿವರಗಳನ್ನು ಹೊಂದಿರಬೇಕು, ಜೊತೆಗೆ ಅವರು ತೆಗೆದುಕೊಂಡ ರಜೆಯ ದಾಖಲೆ ಹೊಂದಿರಬೇಕು. ಯಾವುದೇ ನಿಯಮ ಉಲ್ಲಂಘನೆಯಾಗಿದ್ದರೆ ಉದ್ಯೋಗದಾತ/ ಮ್ಯಾನೇಜರ್ ಮೇಲೆ ದಂಡವನ್ನು ವಿಧಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಇನ್ನು ಪಬ್‌ಗಳು, ಕ್ಲಬ್‌ಗಳು ಮತ್ತು ಬಾರ್‌ಗಳಿಗೆ ಈ ನಿಯಮವು ಅನ್ವಯಿಸುವುದಿಲ್ಲ. ಅವುಗಳಿಗೆ ಪ್ರತ್ಯೇಕ ನಿಯಮಗಳಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | 625 ಅಂಗಡಿಗಳಲ್ಲಿ ಇನ್ನು ಕನ್ನಡ ನಾಮಫಲಕ ಅಳವಡಿಕೆ ಬಾಕಿ
ಮಹಿಳೆಯರ ಸುರಕ್ಷತೆಗಾಗಿ ನಿಯಮಗಳು
ಯಾವುದೇ ದಿನವಾಗಲಿ ಅಥವಾ ಯಾವುದೇ ಸಂದರ್ಭಗಳಲ್ಲಿ ರಾತ್ರಿ 8 ಗಂಟೆಯ ನಂತರ ಯಾವುದೇ ಮಹಿಳೆಯರನ್ನು ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡಿಸಬಾರದು ಎಂದು ಸರ್ಕಾರ ಶುಕ್ರವಾರ ಘೋಷಿಸಿದೆ. ಹಾಗೆಯೇ ಮಹಿಳಾ ಉದ್ಯೋಗಿ ತಾವಾಗಿಯೇ ರಾತ್ರಿ 8ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕೆಲಸ ಮಾಡಲು ಬಯಸಿದರೆ ಲಿಖಿತ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಶಿಫ್ಟ್‌ಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಸಾರಿಗೆ ಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಮಹಿಳೆಯನ್ನು ನೇಮಿಸುವ ಪ್ರತಿಯೊಂದು ಅಂಗಡಿ ಮುಗ್ಗಟ್ಟುಗಳಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಆಂತರಿಕ ದೂರುಗಳ ಸಮಿತಿಯನ್ನು ರಚಿಸಬೇಕು ಎಂದು ಸರ್ಕಾರ ಸೂಚಿಸಿದೆ.
