ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ತಮ್ಮ ಮನೆಗೆ ಪ್ರಧಾನಿ ಮೋದಿ ಭೇಟಿ ಕುರಿತು ಆ ಸಂದರ್ಭದಲ್ಲಿ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಸಂವಿಧಾನವನ್ನು ಗೌರವಿಸುವ ಒಳಮೀಸಲಾತಿ ಮತ್ತು ಮೋದಿಯವರ ಭ್ರಷ್ಟಾಚಾರವನ್ನು ಬಯಲಿಗಿಟ್ಟ ಚುನಾವಣಾ ಬಾಂಡ್ ಕುರಿತು ಸಂಘಪರಿವಾರ ಮತ್ತು ಬಿಜೆಪಿ ತೆಗೆದಿದ್ದ ತಕರಾರು ಅರ್ಜಿಗಳನ್ನು ನಯವಾಗಿ ತಿರಸ್ಕರಿಸುವ ಮೂಲಕ ದೇಶದ ಜನತೆಯಲ್ಲಿ ಮನೆಮಾಡಿದ್ದ ಸಂಶಯವನ್ನು ಹೋಗಲಾಡಿಸಿದ್ದಾರೆ.
ಪರಿಶಿಷ್ಟ ಜಾತಿಗಳ (ಎಸ್ಸಿ) ಉಪ ವರ್ಗೀಕರಣ ಮಾಡುವ ಒಳಮೀಸಲಾತಿಯನ್ನು ಜಾರಿಗೊಳಿಸಲು ರಾಜ್ಯಗಳಿಗೆ ಸಂವಿಧಾನಬದ್ಧ ಅಧಿಕಾರ ಇದೆ ಎಂಬುದಾಗಿ ಆಗಸ್ಟ್ 1ರಂದು ತಾನು ನೀಡಿರುವ ತೀರ್ಪಿನ ಮರುಪರಿಶೀಲನೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅ. 4ರಂದು ವಜಾಗೊಳಿಸಿದೆ. ಮತ್ತು ‘ಈ ವಿಚಾರವಾಗಿ ತಾನು ನೀಡಿರುವ ತೀರ್ಪಿನಲ್ಲಿ ಎದ್ದುಕಾಣುವಂತಹ ಯಾವುದೇ ದೋಷ ಇಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಏಳು ಸದಸ್ಯರಿರುವ ಪೀಠವು ಸ್ಪಷ್ಟಪಡಿಸಿದೆ.
ಹಾಗೆಯೇ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿ ಫೆಬ್ರುವರಿ 15ರಂದು ತಾನು ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಅ. 5ರಂದು ವಜಾಗೊಳಿಸಿದೆ. ಮತ್ತು ‘ತೀರ್ಪಿನಲ್ಲಿ ಎದ್ದುಕಾಣುವಂತಹ ಯಾವುದೇ ದೋಷ ಇಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ಸದಸ್ಯರಿರುವ ಪೀಠವು ಸ್ಪಷ್ಟಪಡಿಸಿದೆ.
ಇವೆರಡೂ ನಡೆಗಳು ಸುಪ್ರೀಂ ಕೋರ್ಟಿನ ಘನತೆಯನ್ನು ಎತ್ತಿ ಹಿಡಿದಿವೆ. ಹಾಗೆಯೇ ಇವೆರಡೂ ನಿರ್ಧಾರಗಳ ಹಿಂದಿನ ರೂವಾರಿಯಾದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಮೇಲಿದ್ದ ಅನುಮಾನ, ಸಂಶಯಗಳನ್ನು ದೂರ ಮಾಡಿದೆ. ಆ ಮೂಲಕ ಅವರ ಮೇಲಿದ್ದ ಗೌರವ ಹೆಚ್ಚಿಸಿದೆ.
ಏಕೆಂದರೆ, ದೇಶಕ್ಕೆ ದೇಶವೇ ಗಣೇಶ ಉತ್ಸವದ ಸಂಭ್ರಮದ ಸಂದರ್ಭದಲ್ಲಿ, ದೇಶದ ಮುಖ್ಯ ನ್ಯಾಯಮೂರ್ತಿಗಳು ತಮ್ಮ ನಿವಾಸದಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿದ್ದರು. ಆ ಖಾಸಗಿ ಪೂಜಾ ಕಾರ್ಯಕ್ರಮಕ್ಕೆ ಈ ದೇಶದ ಪ್ರಧಾನಮಂತ್ರಿಗೆ ಆಹ್ವಾನ ನೀಡಿದ್ದು, ಅದನ್ನು ಮನ್ನಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹಲವು ಪ್ರಶ್ನೆಗಳಿಗೆ, ಚರ್ಚೆಗೆ ಈಡುಮಾಡಿತ್ತು. ಅಷ್ಟೇ ಅಲ್ಲ, ಮುಖ್ಯ ನ್ಯಾಯಮೂರ್ತಿಗಳ ನಡೆಯನ್ನು ಸಂಶಯದಿಂದ ನೋಡುವಂತೆ ಮಾಡಿತ್ತು. ‘ಇದು ನಿವೃತ್ತಿಯ ನಂತರ ಮತ್ತೊಂದು ಲಾಭದ ಪದವಿಗಾಗಿ’ ಎಂಬ ಗುರುತರವಾದ ದೂರು ಕೇಳಿಬಂದಿತ್ತು.
ಅದಕ್ಕೆ ಪೂರಕವಾಗಿ ರಾಮಜನ್ಮಭೂಮಿ ಪ್ರಕರಣದಲ್ಲಿ ಪ್ರಜಾಪ್ರಭುತ್ವದ ಬುನಾದಿಯನ್ನೇ ದುರ್ಬಲಗೊಳಿಸುವ ತೀರ್ಪು ನೀಡಿದ ಸಂವಿಧಾನಪೀಠದ ನ್ಯಾಯಮೂರ್ತಿಗಳಾಗಿದ್ದ ರಂಜನ್ ಗೊಗೋಯ್, ಅಬ್ದುಲ್ ನಜೀರ್, ಎಸ್.ಎ. ಬೊಬ್ಡೆಯವರು, ನಿವೃತ್ತಿಯ ನಂತರದ ದಿನಗಳಲ್ಲಿ ಆಡಳಿತಾರೂಢ ಬಿಜೆಪಿಯಿಂದ ರಾಜ್ಯಸಭಾ ಸದಸ್ಯ, ರಾಜ್ಯಪಾಲರಾಗಿ ನೇಮಕಗೊಂಡು ನ್ಯಾಯಾಂಗದ ಘನತೆಗೆ ಚ್ಯುತಿ ತಂದರು ಎಂಬುದನ್ನು ಉದಾಹರಿಸಲಾಗಿತ್ತು. ಮುಂದುವರೆದು ಕೆಲ ನಿವೃತ್ತ ನ್ಯಾಯಾಧೀಶರು ವಿಶ್ವ ಹಿಂದೂ ಪರಿಷತ್ನ ಸಮಾವೇಶವೊಂದರಲ್ಲಿ ಭಾಗವಹಿಸಿದ್ದನ್ನು ಉಲ್ಲೇಖಿಸಲಾಗಿತ್ತು.
ಅಂಬೇಡ್ಕರ್ ರಚಿಸಿದ ಸಂವಿಧಾನದ ಬಗ್ಗೆ ವಿಶ್ವ ಹಿಂದೂ ಪರಿಷತ್ನ ನಿಲುವು ಏನು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಸಂಘಪರಿವಾರದ ಭಾಗವಾಗಿರುವ ವಿಎಚ್ಪಿಯ ಸಮಾವೇಶದಲ್ಲಿ ಭಾಗವಹಿಸಿದ ನ್ಯಾಯಾಧೀಶರು, ಆರ್ಎಸ್ಎಸ್, ವಿಎಚ್ಪಿ, ಬಿಜೆಪಿ ನಾಯಕರು ಒಳಗೊಂಡಿರುವ ಪ್ರಕರಣಗಳನ್ನು ಯಾವ ರೀತಿಯಲ್ಲಿ ನಿಭಾಯಿಸಿದರು ಎಂಬುದನ್ನು ದೇಶದ ಜನತೆ ಕಂಡಿತ್ತು ಮತ್ತು ಅದು ಅನುಮಾನಕ್ಕೂ ಕಾರಣವಾಗಿತ್ತು.
ಅದೇ ಹಿನ್ನೆಲೆಯಲ್ಲಿ, ಅದರ ಮುಂದುವರೆದ ಭಾಗವಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನಿವಾಸಕ್ಕೆ ತೆರಳಿದ ಪ್ರಧಾನಿ ಮೋದಿಯವರ ನಡೆಯನ್ನೂ ಸಂಶಯಿಸಲಾಗಿತ್ತು. ಜೊತೆಗೆ ಸದ್ಯದಲ್ಲಿಯೇ ಜರುಗಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ತಳುಕು ಹಾಕಲಾಗಿತ್ತು. ಮತ ಗಳಿಕೆಗಾಗಿ ಸಂಘ ಪರಿವಾರ ಮತ್ತು ಬಿಜೆಪಿ ಯಾವ ಹಂತಕ್ಕೆ ಬೇಕಾದರೂ ಹೋಗಬಹುದು ಎಂಬುದನ್ನು ಉದಾಹರಣೆಸಹಿತ ಬಿಡಿಸಿಡಲಾಗಿತ್ತು.
ನ್ಯಾ. ಚಂದ್ರಚೂಡ್ ಮೂಲತಃ ಮಹಾರಾಷ್ಟ್ರದವರು. ಮಹಾರಾಷ್ಟ್ರದಲ್ಲಿ ಗಣೇಶ ಉತ್ಸವವೆಂದರೆ, ರಾಜಕಾರಣಿಗಳು, ಕಲಾವಿದರು, ಅಧಿಕಾರಿಗಳು, ಶ್ರೀಸಾಮಾನ್ಯರು ಎನ್ನದೇ ಎಲ್ಲ ವರ್ಗದ ಜನರೂ ಪಾಲ್ಗೊಳ್ಳುತ್ತಾರೆ. ಅದು ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಸಂಕೇತವಾಗಿ, ರಾಜಕಾರಣದ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಧರ್ಮ ಮತ್ತು ರಾಜಕಾರಣ ಮಿಳಿತಗೊಂಡಿರುವ ಗಣೇಶ ಉತ್ಸವವನ್ನು ಪ್ರಧಾನಿ ಮೋದಿಯವರು ಬಿಡುತ್ತಾರೆಯೇ? ಮಹಾರಾಷ್ಟ್ರಿಗರ ವೇಷಭೂಷಣ, ಕೈಯಲ್ಲಿ ಆರತಿ, ಶಿರದ ಮೇಲೆ ಮರಾಠಿ ಲಾಂಛನಗಳೊಂದಿಗೇ ಮೋದಿಯವರು ನ್ಯಾಯಮೂರ್ತಿಗಳ ಮನೆಯಲ್ಲಿ ಪ್ರತ್ಯಕ್ಷರಾಗಿದ್ದರು. ಶಿವಾಜಿ ಪ್ರತಿಮೆಯಿಂದ ಹೋದ ಮಾನವನ್ನು ಗಣೇಶನ ಮೂಲಕ ಗಳಿಸಲು ಯತ್ನಿಸಿದ್ದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಭಾರತದ ಅಪೌಷ್ಟಿಕತೆಯ ಗಂಭೀರತೆ ಕೇಂದ್ರಕ್ಕೆ ಅರಿವಾಗುವುದು ಯಾವಾಗ?
ಭೇಟಿ ಕುರಿತು ವಿಪಕ್ಷ ನಾಯಕರು, ಸುಪ್ರೀಂ ಕೋರ್ಟ್ ವಕೀಲರ ಸಂಘದ ಪದಾಧಿಕಾರಿಗಳು ಖಂಡಿಸಿದರು. ಪ್ರಜಾಪ್ರಭುತ್ವವಾದಿಗಳು ಆತಂಕ ವ್ಯಕ್ತಪಡಿಸಿದರು. ನ್ಯಾಯಾಂಗದ ಮೇಲೆ ಈ ಖಾಸಗಿ ಪೂಜಾ ಕಾರ್ಯಕ್ರಮ ತಪ್ಪು ಸಂದೇಶವನ್ನು ಕೊಡುತ್ತದೆ ಎಂಬ ಪ್ರತಿಕ್ರಿಯೆಗಳೂ ವ್ಯಕ್ತವಾದವು. ಆದರೆ ಸಂಘಪರಿವಾರ ಮತ್ತು ಬಿಜೆಪಿ ನಾಯಕರು, ಪ್ರಧಾನಿ ಮನಮೋಹನ್ ಸಿಂಗ್, ಅಂದಿನ ಸಿಜೆಐ ಕೆ.ಜಿ. ಬಾಲಕೃಷ್ಣನ್ ಜೊತೆಗೆ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದು ಎಷ್ಟು ಸರಿ ಎಂದು 2009ರ ಘಟನೆಯನ್ನು ಮೆಲುಕು ಹಾಕಿ ಸಮರ್ಥಿಸಿಕೊಂಡಿದ್ದರು.
ಯಾರು ಎಷ್ಟೇ ಪರ-ವಿರೋಧ ಮಾತಾಡಿದರೂ, ಈ ಘಟನೆ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ವಿಶ್ವಾಸಾರ್ಹತೆಯನ್ನು ಅನುಮಾನದಿಂದ ನೋಡಲು ಆಸ್ಪದ ಕೊಟ್ಟಿತ್ತು. ಈ ಸಂದೇಹಕ್ಕೆ ಚಂದ್ರಚೂಡರು ಇನ್ನು ಮುಂದೆ ನ್ಯಾಯಮೂರ್ತಿಗಳಾಗಿ ತೆಗೆದುಕೊಳ್ಳುವ ತೀರ್ಮಾನ ಹಾಗೂ ತೀರ್ಪುಗಳು ಉತ್ತರ ನೀಡಬಹುದಾಗಿವೆ ಎಂದು ಕೂಡ ವ್ಯಾಖ್ಯಾನಿಸಲಾಗಿತ್ತು.
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ತಮ್ಮ ಮನೆಗೆ ಪ್ರಧಾನಿ ಮೋದಿ ಭೇಟಿ ಕುರಿತು ಆ ಸಂದರ್ಭದಲ್ಲಿ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಸಂವಿಧಾನವನ್ನು ಗೌರವಿಸುವ ಒಳಮೀಸಲಾತಿ ಮತ್ತು ಮೋದಿಯವರ ಭ್ರಷ್ಟಾಚಾರವನ್ನು ಬಯಲಿಗಿಟ್ಟ ಚುನಾವಣಾ ಬಾಂಡ್ ಕುರಿತು ಸಂಘಪರಿವಾರ ಮತ್ತು ಬಿಜೆಪಿ ತೆಗೆದಿದ್ದ ತಕರಾರು ಅರ್ಜಿಗಳನ್ನು ನಯವಾಗಿ ತಿರಸ್ಕರಿಸುವ ಮೂಲಕ ದೇಶದ ಜನತೆಯಲ್ಲಿ ಮನೆಮಾಡಿದ್ದ ಸಂಶಯವನ್ನು ಹೋಗಲಾಡಿಸಿದ್ದಾರೆ. ತಾವೇನು ಎನ್ನುವುದನ್ನು ತೋರ್ಪಡಿಸಿದ್ದಾರೆ. ನ್ಯಾಯಾಂಗದ ಘನತೆ-ಗೌರವಗಳನ್ನು ಎತ್ತಿ ಹಿಡಿದಿದ್ದಾರೆ. ನ್ಯಾಯಾಂಗದ ಬಗ್ಗೆ ಜನರಲ್ಲಿರುವ ನಂಬಿಕೆಯ ಪಸೆ ಆರದಂತೆ ನೋಡಿಕೊಂಡಿದ್ದಾರೆ.
