ತುರುವೇಕೆರೆ ತಾಲೂಕಿನ ಯಡಿಯೂರು – ಮಾಯಸಂದ್ರ ರಸ್ತೆ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂಬ ಆರೋಪವನ್ನು ಗುತ್ತಿಗೆದಾರ ಕೇಶವಮೂರ್ತಿ ಅಲ್ಲಗಳೆದಿದ್ದಾರೆ. ರಸ್ತೆಯ ಗುಣಮಟ್ಟದ ಬಗ್ಗೆ ಸಾರ್ವಜನಿಕರು ದೂರಿದ್ದರಿಂದ ಸ್ಥಳಕ್ಕೆ ಧಾವಿಸಿದ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಕಾಮಗಾರಿಯಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ ಎಂದು ಗುತ್ತಿಗೆದಾರ ಕೇಶವಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಕಳೆದ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕಾಮಗಾರಿಯನ್ನು ಈಗಷ್ಟೇ ಕೈಗೆತ್ತಿಕೊಳ್ಳಲಾಗಿದೆ. ಮಳೆ ಹಾಗೂ ಇನ್ನಿತರೆ ಕಾರಣಗಳಿಂದ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಾಗುತ್ತಿಲ್ಲ. ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂಬ ದೃಷ್ಠಿಯಿಂದ ರಸ್ತೆಯ ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಎರಡೂ ಪದರಗಳಿಗೆ ಸೂಕ್ತ ನಿರ್ದೇಶನಗೊಳಪಟ್ಟಿರುವ ವಸ್ತುಗಳನ್ನೇ ಬಳಕೆ ಮಾಡಲಾಗಿದೆ. ಕಾಮಗಾರಿಯಲ್ಲಿ ಯಾವುದೇ ಲೋಪ ಎಸಗಿಲ್ಲ ಎಂದು ಗುತ್ತಿಗೆದಾರ ಕೇಶವಮೂರ್ತಿ ತಿಳಿಸಿದ್ದಾರೆ.
ಈ ಕಾಮಗಾರಿ ಬಗ್ಗೆ ಯಾವುದೇ ತನಿಖೆ ನಡೆಸಿದರೂ ನಾನು ಎದುರಿಸಲು ಸಿದ್ಧ. ಕಾಮಗಾರಿ ವಿಚಾರದಲ್ಲಿ ರಾಜಿಯ ಮಾತಿಲ್ಲ. ಸಾರ್ವಜನಿಕರು ಓಡಾಡುವ ರಸ್ತೆ ಇದಾಗಿದೆ. ನಾನು ಸಹ ಈ ರಸ್ತೆಯಲ್ಲಿ ಸಾಕಷ್ಟು ಬಾರಿ ಓಡಾಡಿದ್ದೇನೆ. ಸಾರ್ವಜನಿಕರ ಅಭಿಪ್ರಾಯ ಏನಿತ್ತು ಎಂಬುದೂ ಗೊತ್ತಿದೆ. ಗೊತ್ತಿದ್ದೂ ಸಹ ನಾವು ತಪ್ಪು ಮಾಡಲು ಸಾಧ್ಯವಿಲ್ಲ. ಇನ್ನೂ ಕಾಮಗಾರಿ ಸಂಪೂರ್ಣಗೊಂಡಿಲ್ಲ. ಇನ್ನೂ ಕಾಮಗಾರಿ ಸಾಕಷ್ಟು ಬಾಕಿ ಇದೆ. ಕೆಲ ಸಮಯದ ನಂತರ ಉತ್ತಮ ಕಾಮಗಾರಿ ಆಗಲಿದೆ. ಹಾಗಾಗಿ ಯಾರೂ ಸಹ ಕಾಮಗಾರಿಯ ಬಗ್ಗೆ ಆತಂಕಪಡುವುದು ಬೇಡ ಎಂದು ಗುತ್ತಿಗೆದಾರ ಕೇಶವಮೂರ್ತಿ ಹೇಳಿದ್ದಾರೆ.
ಪರಿಶೀಲನೆ : ಯಡಿಯೂರು – ಮಾಯಸಂದ್ರ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಭಾಕರ್, ಸಹಾಯಕ ಇಂಜಿನಿಯರ್ ಇಮ್ರಾನ್ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ಮಾಡಿದರು. ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದು ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ತಿಳಿದುಬಂದಿದೆ.
ವರದಿ – ನಾಗಭೂಷಣ್ ತುರುವೇಕೆರೆ
