ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಹೀನಾಯ ಸೋಲು ಕಂಡಿದೆ. ತವರು ನೆಲೆದಲ್ಲೇ ನಡೆದ ಸರಣಿಯ ಮೂರು ಟೆಸ್ಟ್‌ಗಳನ್ನೂ ‘ಟೀಮ್ ಇಂಡಿಯಾ’ ಸೋತಿದ್ದು, ಮುಖಭಂಗ ಅನುಭವಿಸಿದೆ. ಜೊತೆಗೆ, ಭಾರತ ತಂಡದ ಸ್ಟಾರ್ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದು, ಶ್ರೇಯಾಂಕದಲ್ಲಿ ಕುಸಿತ ಅನುಭವಿಸಿದ್ದಾರೆ.
ತಂಡಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ತಂಡ 2ನೇ ಸ್ಥಾನದಲ್ಲಿದೆ. ಆದರೆ, ಆಟಗಾರರ ಪಟ್ಟಿಯಲ್ಲಿ ಭಾರೀ ಕುಸಿತ ಕಂಡಿದೆ. ಅದರಲ್ಲೂ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶಾರ್ಮಾ ಟಾಪ್-10 ಮಾತ್ರವಲ್ಲ, ಟಾಪ್-20 ಇಂದಲೂ ಹೊರಬಿದ್ದಿದ್ದಾರೆ.
ಐಸಿಸಿ ಟೆಸ್ಟ್ ರ್ಯಾಂಕಿಂಗ್ನ ಅಗ್ರ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಈ ಹಿಂದೆ ಕೊಹ್ಲಿ ಮತ್ತು ರೋಹಿತ್ ಟಾಪ್-10ನಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಮುಗಿದ ಬಳಿಕ ಕೊಹ್ಲಿ ಮತ್ತು ರೋಹಿತ್ ಟಾಪ್-20ಯಿಂದ ಹೊರಬಿದ್ದಿದ್ದಾರೆ. ಕೊಹ್ಲಿ 22ನೇ ಸ್ಥಾನಕ್ಕೆ ಕುಸಿದ್ದರೆ, ರೋಹಿತ್ 26ನೇ ಸ್ಥಾನಕ್ಕೆ ಮುಗ್ಗರಿಸಿದ್ದಾರೆ. ಕಳೆದ 10 ವರ್ಷಗಳಲ್ಲಿಯೇ ಕೊಹ್ಲಿ ಅವರಿಗೆ ಇದು ಭಾರೀ ಹಿನ್ನಡೆಯಾಗಿದೆ.
ಆದಾಗ್ಯೂ, ಭಾರತೀಯ ತಂಡದ ಬ್ಯಾಟ್ಸ್ಮನ್ ರಿಷಭ್ ಪಂತ್ 6ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಈ ಹಿಂದೆ, ಟಾಪ್-3ನೇ ಸ್ಥಾನದಲ್ಲಿದ್ದ ಜೈಸ್ವಾಲ್, ಈಗ 4ನೇ ಸ್ಥಾನದಲ್ಲಿದ್ದಾರೆ.
ಬೌಲರ್ಗಳ ರ್‍ಯಾಂಕಿಂಗ್ ಪಟ್ಟಿಯನಲ್ಲಿ ಜಸ್ಪ್ರೀತ್ ಬುಮ್ರಾ 3ನೇ ಸ್ಥಾನ, ರವಿಚಂದ್ರನ್ ಅಶ್ವಿನ್ 5ನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ 6ನೇ ಸ್ಥಾನದಲ್ಲಿದ್ದಾರೆ.
ಇತ್ತೀಚೆಗೆ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 3 ಪಂದ್ಯಗಳ 6 ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಕೇವಲ 93 ರನ್ ಗಳಿಸಿದ್ದರು. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ 91 ರನ್ ಗಳಿಸಿದ್ದಾರೆ.