ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಇಡೀ ಜೀವಮಾನದ ಅನುಭವಗಳನ್ನು ಧಾರೆಯೆರೆದು ರಚಿಸಿದ ಸಂವಿಧಾನ ನಮ್ಮ ದೇಶದ ನಾಗರಿಕರು ಸ್ವತಂತ್ರವಾಗಿ ಬದುಕಲು ಅವಕಾಶಗಳನ್ನು ಕಲ್ಪಿಸಿದೆ. ನ್ಯಾಯ. ಸಮಾನತೆ, ಲಿಂಗ ಮತ್ತು ಆರ್ಥಿಕ ಸಮಾನತೆಯನ್ನು ಭದ್ರಪಡಿಸಿಕೊಳ್ಳಲು ಅವಕಾಶ ನೀಡಿದೆ. ಇಂಥ ಅದ್ಭುತ ಸಂವಿಧಾನ ಪ್ರತಿಯೊಬ್ಬರೂ ಅರ್ಥೈಸಿಕೊಂಡು ಪಾಲನೆ ಮಾಡಬೇಕು ಎಂದು ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ ಹೇಳಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
“ನಮ್ಮ ಸಂವಿಧಾನ ಪ್ರತಿಯೊಬ್ಬರ ಜೀವನದ ಮಾರ್ಗದರ್ಶಿಯಾಗಬೇಕು. ದೇಶದ ಆರ್ಥಿಕ, ಸಾಮಾಜಿಕ ಬದಲಾವಣೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತಿದ್ದು, ನಮ್ಮ ರಾಷ್ಟ್ರ ಬಲಿಷ್ಠವಾಗಿ, ಸದೃಢವಾಗಲು ಎಲ್ಲರಿಗೂ ಸಮಾನವಾಗಿ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಮಹಿಳಾ ವಿವಿಯ ವಿದ್ಯಾರ್ಥಿನಿಯರು ಉನ್ನತವಾದ ಜ್ಞಾನ ಸಂಪಾದಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವಂತಾಗಬೇಕು” ಎಂಬ ಆಶಯ ವ್ಯಕ್ತಪಡಿಸಿದರು.
“ನಾವು ಇವತ್ತು ಜ್ಞಾನಾಧಾರಿತ ಸಮಾಜದಲ್ಲಿ ಬದುಕುತ್ತಿದ್ದೇವೆ. ಜ್ಞಾನವೇ ಇಂದು ಬಹು ಮುಖ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಕಷ್ಟಪಟ್ಟು ಜ್ಞಾನ ಸಂಪಾದಿಸಬೇಕು. ಜ್ಞಾನ ಸಂಪಾದಿಸದೇ ಹೋದರೆ ಈ ಸಮಾಜದಲ್ಲಿ ಮೋಸಹೋಗುವ ಸಾಧ್ಯತೆಗಳಿವೆ. ನಮ್ಮ ದಿನನಿತ್ಯದ ಜೀವನ ಸುಗಮವಾಗಿ ಮತ್ತು ನಿರಾತಂಕವಾಗಿ ನಡೆಯಬೇಕಾದರೆ ಜ್ಞಾನ ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರ ಜ್ಞಾನ ವಿಸ್ತರಿಸಲು ಮಹಿಳಾ ವಿಶ್ವವಿದ್ಯಾಲಯ ಸಾಧ್ಯವಿರುವ ಎಲ್ಲ ಸೌಲಭ್ಯಗಳನ್ನೂ ಒದಗಿಸುತ್ತದೆ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಣರಾಜ್ಯೋತ್ಸವದಲ್ಲಿ ಜೈಶ್ರೀರಾಮ್ ಘೋಷಣೆ; ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರ ಇಡದೆ ಅವಮಾನ
ಗಣರಾಜ್ಯೋತ್ಸವದ ಮಹತ್ವ ಕುರಿತು ಕುಲಸಚಿವ ಶಂಕರಗೌಡ ಸೋಮನಾಳ ಅವರು ವಿದ್ಯಾರ್ಥಿನಿಯರಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟು ವಿಜೇತ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ವಿತರಿಸಿದರು.
ಸಂಗೀತ ವಿಭಾಗದ ವಿದ್ಯಾರ್ಥಿನಿಯರಿಂದ ರಾಷ್ಟ್ರೀಯ ಗೀತೆಗಳ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್ ಎಂ ಚಂದ್ರಶೇಖರ್, ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಡಾ ಹನುಮಂತಯ್ಯ ಪೂಜಾರ, ಹಾಸ್ಟೆಲ್‌ಗಳ ಮುಖ್ಯ ವಾರ್ಡನ್ ಪ್ರೊ ಜ್ಯೋತಿ ಉಪಾಧ್ಯೆ, ವಿವಿಯ ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಸೇರಿದಂತೆ ಇತರರು ಇದ್ದರು.