ಎಚ್‌ಐವಿ ಸೋಂಕಿನ ಕುರಿತು ವಿದ್ಯಾರ್ಥಿಗಳು ಮತ್ತು ಯುವ ಸಮೂಹದಲ್ಲಿ ಅರಿವು ಅಗತ್ಯ. ಸೋಂಕಿನ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ಯುವಕರು ಮುಂದಾಗಬೇಕು ಎಂದು ವಿಜಯಪುರ ಜಿಲ್ಲಾಸ್ಪತ್ರೆ ಏಡ್ಸ್ ನಿಯಂತ್ರಣ ಕಚೇರಿ ಜಿಲ್ಲಾ ಮೇಲ್ವಿಚಾರಕ ಬಾಬುರಾವ ತಳವಾರ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಕೋಶ ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಏಡ್ಸ್ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಎಚ್‌ಐವಿ ಸೋಂಕಿತ ವ್ಯಕ್ತಿಗಳೊಂದಿಗೆ ತಾರತಮ್ಯ ಮತ್ತು ಅವರ ಮೇಲಿನ ಕಳಂಕ ಹೋಗಲಾಡಿಸಲು ಸಮುದಾಯದ ಪಾತ್ರ ಅತ್ಯಂತ ಮುಖ್ಯವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಗ್ರ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು ಲಭ್ಯವಿದ್ದು, ಸೋಂಕಿತರಿಗೆ ಉಚಿತ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಜನರು ಈ ಸೌಲಭ್ಯಗಳ ಬಗ್ಗೆ ಹೆಚ್ಚು ಜಾಗೃತರಾಗಬೇಕಾಗಿದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಇದು ಒಂದು ಗಂಭೀರವಾದ ಕಾಯಿಲೆ ಇದರ ಬಗ್ಗೆ ಯುವಜನತೆ ಎಚ್ಚರಿಕೆಯಿಂದ ಇರಬೇಕು ಎಂದರು. ಸೋಂಕು ತಗುಲಿದ ವ್ಯಕ್ತಿಗಳ ಜೊತೆ ಸಾಮಾನ್ಯವಾಗಿ ವರ್ತಿಸುವುದು, ಅವರಿಗೂ ಗೌರವ ನೀಡುವುದು ಸೇರಿದಂತೆ ಅವರನ್ನು ಎಲ್ಲರಂತೆಯೇ ಪರಿಗಣಿಸುವುದರಿಂದ ಅವರಲ್ಲಿ ಕೀಳರಿಮೆ ಹೋಗಲಾಡಿಸುವಲ್ಲಿ ಯುವಕರು, ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಸೂಕ್ತ ಕ್ರಮಕ್ಕೆ ಕರಾಸ ಆಗ್ರಹ
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಪ್ರೊ. ಅಶೋಕ ಕುಮಾರ ಸುರಪುರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
