ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳನ್ನು ಶಾಂತಿಯುತವಾಗಿ ನಡೆಸಲಾಗುವುದು ಮತ್ತು ಯಾವುದೇ ಹಿಂಸಾಚಾರವನ್ನು ಸಹಿಸಲಾಗುವುದಿಲ್ಲ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ ವಿ ಆನಂದ್ ಬೋಸ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕೋಲ್ಕತ್ತಾದ ಭಾರತೀಯ ವಿಚಾರ ಕೇಂದ್ರದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, “ಪಶ್ಚಿಮ ಬಂಗಾಳದಲ್ಲಿ ಕೆಲವು ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಎದುರಾಗಲಿದ್ದು, ಚುನಾವಣೆಗಳಲ್ಲಿ ಪಾಲ್ಗೊಳ್ಳುವ ಜವಾಬ್ದಾರಿಯನ್ನು ಹೊಂದಿರುವ ಎಲ್ಲ ಪಕ್ಷಗಳು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಮುಂದಾಗಬೇಕು. ಇದಕ್ಕೆ ರಾಜ್ಯದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು ಹೊಣೆಗಾರರು” ಎಂದು ರಾಜ್ಯಪಾಲರು ಹೇಳಿದರು.
ಚುನಾವಣೆಯ ಸಂದರ್ಭದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ವಿವಿಧ ರಾಜಕೀಯ ಪಕ್ಷಗಳಿಂದ ಮಧ್ಯ ಪ್ರವೇಶಿಸುವಂತೆ ಹಲವಾರು ಮನವಿಗಳನ್ನು ಸ್ವೀಕರಿಸಿದ ಬೋಸ್, ರಾಜ್ಯ ಚುನಾವಣಾ ಆಯೋಗವನ್ನು ತುರ್ತು ಸಭೆಗೆ ಕರೆದಿದ್ದರು. ಅಲ್ಲದೆ ಸ್ಥಳೀಯ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಹಾಗೂ ಪ್ರಚಾರದ ಸಂದರ್ಭದಲ್ಲಿ ಹಿಂಸಾಚಾರ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಹಿಂಸಾಚಾರದ ಘಟನೆಗಳು ವರದಿಯಾಗಿವೆ.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | 220 ತಿಂಗಳಲ್ಲಿ 225 ಹಗರಣಗಳು; ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
ಪಶ್ಚಿಮ ಬಂಗಾಳದಲ್ಲಿ ಜುಲೈ 8ರಂದು ನಡೆಯಲಿರುವ ಪಂಚಾಯತ್ ಚುನಾವಣೆ ತೀವ್ರ ಕಾವು ಪಡೆದಿದ್ದು, ನಾಮಪತ್ರ ಸಲ್ಲಿಸುವ ಮೊದಲ ದಿನವೇ ಹಿಂಸಾಚಾರ ನಡೆದಿದೆ. ಹಲವಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಆಗಮಿಸಿದ ವೇಳೆ ಕೆಲವೆಡೆ ಘರ್ಷಣೆ ಉಂಟಾದ ಕಾರಣ ಬಿಡಿಒ ಕಚೇರಿಗಳಿಗೆ ಘೇರಾವ್ ಹಾಕಲಾಗಿದೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಟಿಎಂಸಿ, ಸಿಪಿಎಂ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ. ಡೋಮ್‌ಕಲ್‌ನ ಪ್ರದೇಶದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ಫೂಲ್ಚಂದ್ ಶೇಖ್(45) ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಫೂಲ್ಚಂದ್ ಅವರ ಹತ್ಯೆ ಹಿಂದೆ ಟಿಎಂಸಿಯ ಕೈವಾಡ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪ್ರಕರಣ ಸಂಬಂಧ ಸ್ಥಳೀಯ ತೃಣಮೂಲ ಪಕ್ಷದ ಮುಖಂಡ ಬಶೀರ್ಮೊಲ್ಲಾ ಎಂಬಾತನನ್ನು ಬಂಧಿಸಿದ್ದು, ಆತನ ಬಳಿ ಇದ್ದ ಗನ್ ಅನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.