ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ನಗರದ ಲಾಡಗೇರಿಯ 5 ಜನ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ರುಪಾಪುರ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಬೀದರ್ ನಗರದ ಲಾಡಗೇರಿ ನಿವಾಸಿಗಳಾದ ಸುನೀತಾ (40), ಸಂತೋಷಕುಮಾರ್ (45) , ಲಕ್ಷ್ಮೀ (57), ನೀಲಮ್ಮ(62) ಹಾಗೂ ಕಲಾವತಿ ಮೃತರು ಎಂದು ಹೇಳಲಾಗುತ್ತಿದೆ.
ಬೀದರ್‌ನಿಂದ ಕ್ರೂಸರ್ ವಾಹನದಲ್ಲಿ ಫೆ.18ರಂದು ಒಟ್ಟು 14 ಜನ ಕುಂಭಮೇಳಕ್ಕೆ ತೆರಳಿದ್ದರು. ಫೆ.21 ರಂದು ವಾರಣಾಸಿ ಜಿಲ್ಲೆಯ ರುಪಾಪುರ ಸಮೀಪ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕ್ರೂಸರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಐದು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಾರಣಾಸಿ ಜಿಲ್ಲೆಯ ಮಿರ್ಜಾಮುರಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.