- ಕೆಎಲ್‌ಇ ದಂತ ವೈದ್ಯಕೀಯ ಕಾಲೇಜಿನಲ್ಲಿ ಮೌನೇಶ್ ವ್ಯಾಸಂಗ
- ಯೂರೋ ಕ್ಯಾಬ್ಸ್ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲು
ದಂತ ವೈದ್ಯ ವಿದ್ಯಾರ್ಥಿಯೊಬ್ಬ ಕಾರ್ಯನಿರತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಬಸ್‌ನ ನಿರ್ವಾಹಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅನುಚಿತ ವರ್ತನೆ ತೋರಿದ್ದಾನೆ. ಈ ಹಿನ್ನೆಲೆ, ವಿದ್ಯಾರ್ಥಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬಿಎಂಟಿಸಿ ಬಸ್ ಕಂಡಕ್ಟರ್ ಅಶೋಕ್ ನೀಡಿದ ದೂರಿನ ಮೇರೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ದಂತ ವೈದ್ಯ ವಿದ್ಯಾರ್ಥಿ ಮೌನೇಶ್ ವಿರುದ್ಧ ನಗರದ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ವಿದ್ಯಾರಣ್ಯಪುರದ ಕುವೆಂಪುನಗರದ ನಿವಾಸಿ ಮೌನೇಶ್ (20) ಖಾಸಗಿ ಕಾಲೇಜಿನ ದಂತ ವೈದ್ಯ ವಿದ್ಯಾರ್ಥಿ. ತುಮಕೂರು ರಸ್ತೆಯ ಗೊರಗುಂಟೆಪಾಳ್ಯದ ಕೆಎಲ್‌ಇ ದಂತ ವೈದ್ಯಕೀಯ ಕಾಲೇಜಿನಲ್ಲಿ ಮೌನೇಶ್ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗೆ ತೆರಳಲು ಬೆಳಗ್ಗೆ ಗಂಗಮ್ಮನ ಗುಡಿ ಸರ್ಕಲ್‌ನಲ್ಲಿ ಬಿಎಂಟಿಸಿ ಬಸ್ ಹತ್ತಿದ್ದಾನೆ.
ಈ ವೇಳೆ, ಬಿಎಂಟಿಸಿ ಬಸ್ ನಿರ್ವಾಹಕ ಟಿಕೆಟ್ ತೆಗೆದುಕೊಳ್ಳಲು ಹೇಳಿದ್ದಾರೆ. ವಿದ್ಯಾರ್ಥಿಯೂ ತನ್ನ ಬಳಿ ಪಾಸ್ ಇದೆ ಎಂದಿದ್ದಾನೆ. ಬಳಿಕ ನಿರ್ವಾಹಕ ಪಾಸ್ ತೋರಿಸಲು ಕೇಳಿದ್ದಾರೆ. ವಿದ್ಯಾರ್ಥಿ ಪಾಸ್ ತೋರಿಸಿದ ಬಳಿಕ ನಿರ್ವಾಹಕ ಕಾಲೇಜಿನ ಗುರುತಿನ ಚೀಟಿ ತೋರಿಸುವಂತೆ ಸೂಚಿಸಿದ್ದಾರೆ.
ಈ ವೇಳೆ, ಮೌನೇಶ್ ಜೆರಾಕ್ಸ್ ಪ್ರತಿಯನ್ನು ತೋರಿಸಿದ್ದು, ನಿರ್ವಾಹಕ ಅಸಲಿ ಗುರುತಿನ ಚೀಟಿ ತೋರಿಸುವಂತೆ ಕೇಳಿದ್ದಾನೆ. ಇದಕ್ಕೆ ವಿದ್ಯಾರ್ಥಿ ಮೌನೇಶ್ ‘ಮಹಿಳೆಯರು ಜೆರಾಕ್ಸ್ ಪ್ರತಿ ತೋರಿಸಿದರೆ ಸಾಕು ಸುಮ್ಮನೇ ಇರ್ತೀರಾ’ ಎಂದು ಏರು ದನಿಯಲ್ಲಿ ಗಲಾಟೆ ಆರಂಭಿಸಿದ್ದಾನೆ.
ನಿರ್ವಾಹಕ ಮತ್ತು ಮೌನೇಶ್‌ನ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಇದೇ ವೇಳೆ, ಚಾಲಕ ಬಸ್ ನಿಲ್ಲಿಸಿ, ನಿರ್ವಾಹಕನ ನೆರವಿಗೆ ಬಂದಿದ್ದಾನೆ. ಚಾಲಕನಿಗೂ ಕೂಡ ಮೌನೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಮೌನೇಶ್ನನ್ನು ಪೀಣ್ಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಪೊಲೀಸ್ ಠಾಣೆಗೆ ಕರೆದುಕೊಂಡು ಹೋದಾಗಲೂ ಸಬ್ ಇನ್‌ಸ್ಪೆಕ್ಟರ್ ಮೇಲೆ ಮೌನೇಶ್ ಹಲ್ಲೆ ನಡೆಸಿದ್ದಾನೆ ಎಂಬ ಆರೋಪವಿದೆ. ಈ ಆರೋಪದ ಮೇರೆಗೆ ಮೌನೇಶ್ ಮೇಲೆ ಮತ್ತೊಂದು ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.
ಮೌನೇಶ್ ತಂದೆ ರಾಜ ಈ ಬಗ್ಗೆ ಮಾತನಾಡಿ, “ನನ್ನ ಮಗ ಮೌನೇಶ್ ತುಂಬಾ ಮೃದುಸ್ವಭಾವದವನು. ಈತ ಯಾವುದೇ ಜಗಳಕ್ಕೆ ಹೋಗುವವನಲ್ಲ. ಪೊಲೀಸರು ನನ್ನ ಮಗನ ಮೇಲೆ ಮನಬಂದಂತೆ ಹೊಡೆದಿದ್ದಾರೆ. ಈಗ ಆತನ ಮೇಲೆ ಪೊಲೀಸರು ಹಲ್ಲೆ ಆರೋಪ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಇಟಿ ಫಲಿತಾಂಶ ಪ್ರಕಟ : ಮೇಲುಗೈ ಸಾಧಿಸಿದ ಬಾಲಕಿಯರು
ಬೆಂಗಳೂರು | ಯುರೋ ಕ್ಯಾಬ್‌ಗಳಿಂದ ಸಂಚಾರ ನಿಯಮ ಉಲ್ಲಂಘನೆ ; 1.16 ಲಕ್ಷ ದಂಡ
ರಾಜಧಾನಿ ಬೆಂಗಳೂರಿನಲ್ಲಿ 82 ಯೂರೋ ಕ್ಯಾಬ್ಸ್ ಮೇಲೆ ಸಂಚಾರ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಾಗಿತ್ತು. ಬರೊಬ್ಬರಿ 1.16 ಲಕ್ಷ ದಂಡ ವಿಧಿಸಲಾಗಿತ್ತು.
ಸಂಚಾರ ನಿಯಮ ಉಲ್ಲಂಘನೆಯಡಿ ಯೂರೋ ಕ್ಯಾಬ್ಸ್ ಸಂಸ್ಥೆಯಿಂದ ಹೆಣ್ಣೂರು ಠಾಣೆ ಪೊಲೀಸರು 1.16 ಲಕ್ಷ ದಂಡವನ್ನ ಸಂಗ್ರಹಿಸಿದ್ದಾರೆ.
ಈ ಕುರಿತು ಸಂಚಾರಿ ಪೊಲೀಸರು ಕಂಪನಿಗೆ ನೋಟಿಸ್ ನೀಡಿದ್ದು, ಕ್ಯಾಬ್ ಸಂಸ್ಥೆ ಅಧಿಕಾರಿಗಳು ಠಾಣೆಗೆ ಆಗಮಿಸಿ 1.16 ಲಕ್ಷ ದಂಡ ಪಾವತಿಸಿದ್ದಾರೆ.