ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಕುಸಿತದ ಪರಿಣಾಮ ಶುಕ್ರವಾರ (ಫೆ.28) ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1,300ಕ್ಕೂ ಅಧಿಕ ಅಂಕಗಳಷ್ಟು ಕುಸಿತದೊಂದಿಗೆ ವಹಿವಾಟು ಮುಂದುವರಿದಿದೆ.
ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,394.78 ಅಂಕ ಕುಸಿತಗೊಂಡಿದ್ದು, 73,217.65 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 427.50 ಅಂಕ ಇಳಿಕೆಯಾಗಿದ್ದು, 22.117.55 ಅಂಕಗಳ ಗಡಿಗೆ ಕುಸಿದಿದೆ.
ಸೆನ್ಸೆಕ್ಸ್ ಮತ್ತು ನಿಫ್ಟಿ ಇಳಿಕೆಯಿಂದ ಹೂಡಿಕೆದಾರರ 7.46 ಲಕ್ಷ ಕೋಟಿ ರೂಪಾಯಿ ಕರಗಿ ಹೋದಂತಾಗಿದೆ. ಭಾರೀ ಪ್ರಮಾಣದ ಇಳಿಕೆಯಿಂದಾಗಿ ಟೆಕ್ ಮಹೀಂದ್ರ, ಇಂಡಸ್ ಇಂಡ್ ಬ್ಯಾಂಕ್, ಮಾರುತಿ, ಎಚ್ ಸಿಎಲ್ ಟೆಕ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್, ಮಹೀಂದ್ರ & ಮಹೀಂದ್ರ ಮತ್ತು ಟೈಟಾನ್ ಷೇರುಗಳು ನಷ್ಟ ಕಂಡಿದೆ.
ಈ ಸುದ್ದಿ ಓದಿದ್ದೀರಾ? ನೂತನ ಸೆಬಿ ಮುಖ್ಯಸ್ಥರಾಗಿ ತುಹಿನ್ ಕಾಂತ ಪಾಂಡೆ ನೇಮಕ
ಮತ್ತೊಂದೆಡೆ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದಾನಿ ಪೋರ್ಟ್ಸ್ ಷೇರುಗಳು ಲಾಭಗಳಿಸಿದೆ. ಏಷ್ಯನ್ ಮಾರುಕಟ್ಟೆಗಳಾದ ಸಿಯೋಲ್, ಟೋಕಿಯೋ, ಶಾಂಘೈ ಹಾಗೂ ಹಾಂಗ್ ಕಾಂಗ್ ಷೇರುಪೇಟೆ ವಹಿವಾಟು ಭಾರೀ ಕುಸಿತ ಕಂಡಿರುವುದಾಗಿ ಮಾರುಕಟ್ಟೆ ವರದಿ ತಿಳಿಸಿದೆ.