- ದೆಹಲಿ ವಿಶ್ವವಿದ್ಯಾಲಯದ ಹೊರಗೆ ಘಟನೆ
- ಕಾಲೇಜಿನಲ್ಲಿ ಬಿಎ ಅಧ್ಯಯನ ಮಾಡುತ್ತಿದ್ದ ನಿಖಿಲ್
ದೆಹಲಿ ವಿಶ್ವವಿದ್ಯಾಲಯದ ಆರ್ಯಭಟ ಕಾಲೇಜಿನ ಹೊರಗೆ 19 ವರ್ಷದ ವಿದ್ಯಾರ್ಥಿಯೊಬ್ಬನನ್ನು ಭಾನುವಾರ (ಜೂನ್ 18) ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿದ್ಯಾರ್ಥಿಯನ್ನು ನಿಖಿಲ್ ಚೌಹಾಣ್ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಯು ವಿಶ್ವವಿದ್ಯಾಲಯದಲ್ಲಿ ಮುಕ್ತ ಅಧ್ಯಯನ ಕಾಲೇಜಿಗೆ ದಾಖಲಾಗಿದ್ದ.
ವಿದ್ಯಾರ್ಥಿ ನಿಖಿಲ್ ಭಾನುವಾರ ತರಗತಿಗೆ ಹಾಜರಾಗಲು ದೆಹಲಿ ವಿಶ್ವವಿದ್ಯಾಲಯದ ಕಾಲೇಜಿಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
ದೆಹಲಿ ವಿಶ್ವವಿದ್ಯಾಲಯದ ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಜತೆ ನಿಖಿಲ್ ಏಳು ದಿನಗಳ ಹಿಂದೆ ಕಲಹ ಮಾಡಿಕೊಂಡಿದ್ದ. ನಿಖಿಲ್ ವಿಶ್ವವಿದ್ಯಾಲಯಕ್ಕೆ ಆಗಮಿಸಿರುವುದನ್ನು ತಿಳಿದು ಅಲ್ಲಿಗೆ ಬಂದ ವಿದ್ಯಾರ್ಥಿಯು ನಿಖಿಲ್ ಜತೆ ಮತ್ತೆ ಜಗಳ ಪ್ರಾರಂಭಿಸಿ ನಿಖಿಲ್‌ಗೆ ಚಾಕುವಿನಿಂದ ಇರಿದಿದ್ದಾನೆ.
ವಿದ್ಯಾರ್ಥಿಯು ನಿಖಿಲ್ ಸ್ನೇಹಿತೆಯ ಜತೆ ಅಸಭ್ಯವಾಗಿ ವರ್ತಿಸಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ನಿಖಿಲ್ ಹಾಗೂ ವಿದ್ಯಾರ್ಥಿ ನಡುವೆ ಮಾತಿನ ಚಕಮಕಿ ನಡೆದಿತ್ತು.
ನಿಖಿಲ್ ಭಾನುವಾರ ವಿಶ್ವವಿದ್ಯಾಲಯಕ್ಕೆ ಆಗಮಿಸಿರುವುದನ್ನು ತಿಳಿದು ಆರೋಪಿತ ವಿದ್ಯಾರ್ಥಿಯು ತನ್ನ ಇತರ ಮೂವರು ಸಹಚರರ ಜೊತೆ ಕಾಲೇಜಿಗೆ ಆಗಮಿಸಿದನು. ಕಾಲೇಜಿನ ಗೇಟಿನ ಹೊರಗೆ ನಿಖಿಲ್‌ಗೆ ಚಾಕುವಿನಿಂದ ಇರಿದು ವಿದ್ಯಾರ್ಥಿ ಪರಾರಿಯಾದನು.
ತಕ್ಷಣ ನಿಖಿಲ್‌ನನ್ನು ಮೋತಿ ಬಾಗ್‌ನಲ್ಲಿರುವ ಚರಕ್ ಪಾಲಿಕಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ನಿಖಿಲ್ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು.
ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದ ಬಿಎ ಪದವಿಯ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ ನಿಖಿಲ್ ಪಶ್ಚಿಮ ವಿಹಾರದಲ್ಲಿ ವಾಸವಾಗಿದ್ದ.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಕಳ್ಳನೆಂದು ಮುಸ್ಲಿಂ ಯುವಕನನ್ನು ಮರಕ್ಕೆ ಕಟ್ಟಿ ʼಜೈ ಶ್ರೀರಾಮ್ʼ ಹೇಳುವಂತೆ ಹಲ್ಲೆ
ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದ್ದು ಆರೋಪಿಯನ್ನು ಗುರುತಿಸಲಾಗಿದೆ. ಘಟನೆ ನಡೆದ ಕಾಲೇಜು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ದೆಹಲಿ ವಿಶ್ವವಿದ್ಯಾಲಯ ನಿಖಿಲ್ ಹತ್ಯೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
“ಅಮೂಲ್ಯ ಜೀವವೊಂದನ್ನು ಕಳೆದುಕೊಂಡಿರುವುದಕ್ಕೆ ನಮಗೆ ಬೇಸರವಾಗಿದೆ. ವಿದ್ಯಾರ್ಥಿ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ. ನಿಖಿಲ್ ಚೌಹಾಣ್ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ವಿಶ್ವವಿದ್ಯಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.