2020ರಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಅಪರಾಧಿ ಎಂದು ಸಾಬೀತಾಗಿದೆ. ಆತನಿಗೆ ಐದು ವರ್ಷ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಗದಗ ಜಿಲ್ಲೆಯ ಮುಂಡರಗಿಯಲ್ಲಿ ಬಿಇಒ ಆಗಿದ್ದ ಅಪರಾಧಿ ಎನ್ ಶಂಕ್ರಪ್ಪ ಹಳ್ಳಿಗುಡಿ 2020ರ ಫೆಬ್ರವರಿ 19ರಂದು 10ನೇ ತರಗತಿ ಓದುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ, “ಅಪರಾಧಿಯು ದಂಡವನ್ನು ಪಾವತಿಸುವಲ್ಲಿ ವಿಫಲನಾದರೆ, ಇನ್ನೂ ಆರು ತಿಂಗಳು ಹೆಚ್ಚುವರಿ ಕಠಿಣ ಜೈಲು ಶಿಕ್ಷೆ ವಿಸ್ತರಿಸಬೇಕು” ಎಂದು ಹೇಳಿದ್ದಾರೆ. ಅಲ್ಲದೆ, ಮಾನಸಿಕವಾಗಿ ನೊಂದ ಸಂತ್ರಸ್ತ ಬಾಲಕಿಗೆ 1 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಶಾಲೆಗೆ ಭೇಟಿ ನೀಡಿದ್ದ ಅಪರಾಧಿ ಶಂಕ್ರಪ್ಪ ಬಾಲಕಿಯ ಕುಟುಂಬದ ಹಿನ್ನೆಲೆ ವಿಚಾರಿಸಿದ್ದರು. ಬಾಲಕಿಗೆ ಸಹಾಯ ಮಾಡುವುದಾಗಿ ಹೇಳಿ, ಆಕೆಯ ವಿಳಾಸವನ್ನು ಪಡೆದುಕೊಂಡಿದ್ದರು. 2020ರ ಫೆಬ್ರವರಿ 19ರಂದು ಶಾಲೆಗೆ ಮತ್ತೆ ಭೇಟಿ ನೀಡಿದ್ದ ಶಂಕ್ರಪ್ಪ, ಯಾರು ಇಲ್ಲದ ಸಮಯದಲ್ಲಿ ಬಾಲಕಿ ಮನೆಗೆ ಭೇಟಿ ನೀಡಿದ್ದರು. ಆಕೆಯನ್ನು ಇಷ್ಟ ಪಡುತ್ತಿರುವುದಾಗಿ ಹೇಳಿ, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರು. ಆಕೆಯ ಪೋಷಕರು ಮನೆಗೆ ಹಿಂದಿರುಗಿದಾಗ ಬಾಲಕಿ ಘಟನೆಯ ಬಗ್ಗೆ ವಿವರಿಸಿದ್ದರು. ಬಳಿಕ ಬಾಲಕಿಯ ತಾಯಿ ಪೊಲೀಸರು ದೂರು ನೀಡಿದ್ದರು ಎಂದು ತಿಳಿದುಬಂದಿದೆ.
“ನ್ಯಾಯಾಲಯವು ಶನಿವಾರ ಆದೇಶ ಹೊರಡಿಸಿದ್ದು, ಬುಧವಾರದಂದು ಆದೇಶದ ಪ್ರತಿ ದೊರೆತಿದೆ. ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವ ದುಷ್ಕರ್ಮಿಗಳಿಗೆ ಇದೊಂದು ಉತ್ತಮ ಪಾಠ. ಸರ್ಕಾರಿ ಅಧಿಕಾರಿಯಾಗಿರುವ ಆಪರಾಧಿಗೆ ಶಿಕ್ಷೆ ವಿಧಿಸುವ ಮೂಲಕ ನ್ಯಾಯಾಲಯ ನ್ಯಾಯವನ್ನು ಎತ್ತಿ ಹಿಡಿದಿದೆ” ಎಂದು ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಪೋಕ್ಸೊ) ಎ.ಯು ಹಿರೇಮಠ ಹೇಳಿದ್ದಾರೆ.
ದೂರು ದಾಖಲಾದ ನಂತರ ಸಾಕ್ಷ್ಯಾ ನಾಶಪಡಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟಿಕೊಂಡು ಶಂಕ್ರಪ್ಪ ಹಳ್ಳಿಗುಡಿಯನ್ನು ಹೂವಿನಹಡಗಲಿಗೆ ವರ್ಗಾವಣೆ ಮಾಡಲಾಗಿತ್ತು. ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾದ ನಂತರ ಅವರನ್ನು ಅಮಾನತುಗೊಳಿಸಲಾಗಿತ್ತು. ನಿರೀಕ್ಷಣಾ ಜಾಮೀನು ಪಡೆದಿದ್ದ ಅವರು, ಗದಗ ಜಿಲ್ಲೆ ತೊರೆಯದಂತೆ ನ್ಯಾಯಾಲಯ ನಿರ್ಬಂಧಿಸಿತ್ತು.