ದಾದಾಜಿ ಖೋಬ್ರಗಡೆ: ಭತ್ತದ ಜೊತೆಗೆ ಬದುಕಿದ ಸಾಮಾಜಿಕ ಸಂತ

Date:

Advertisements
ಶೈಕ್ಷಣಿಕ ಅಧ್ಯಯನ, ತರಬೇತಿ, ಹಲವಾರು ಸೌಲಭ್ಯಗಳನ್ನು ಬಳಸಿಕೊಂಡು ಸಂಶೋಧನೆ ಮಾಡುವ ಸಾಂಪ್ರದಾಯಿಕ ವಿಜ್ಞಾನಿಯಷ್ಟೇ ಅವಿದ್ಯಾವಂತ ಶ್ರಮಿಕನೊಬ್ಬ ತನ್ನ ಅಪಾರ ದೇಸೀ ಜ್ಞಾನ, ಮೇಧಾವಿತನ ಮತ್ತು ಕೌಶಲ್ಯದಿಂದ ಅದ್ಭುತವನ್ನು ಸಾಧಿಸಬಹುದೆಂಬುದನ್ನು ತೋರಿಸಿದ ಸಾಮಾನ್ಯ ಕೃಷಿಕನ ಅಸಾಮಾನ್ಯ ಕಥೆ. ಅಂಬೇಡ್ಕರ್ ಜಯಂತಿಯ ನೆಪದಲ್ಲಿ, ದಾದಾಜಿ ನೆನಪು...

ಭಾಗ-2

ವೈಜ್ಞಾನಿಕ ಸಂಸ್ಥೆಗಳು ದಾದಾಜಿ ಅವರ ಸಾಧನೆಯನ್ನು ಅವಗಣನೆ ಮಾಡಿದರೂ ಅವರು ಅಭಿವೃದ್ಧಿಪಡಿಸಿದ ತಳಿಯನ್ನು ಬೆಳೆಯಲು ರೈತಸಮೂಹ ಹೆಚ್ಚಿನ ಒಲವು ತೋರಿದ ಪರಿಣಾಮದಿಂದ ಅವರ ಬಗ್ಗೆ ಸ್ಥಳೀಯಮಟ್ಟದಲ್ಲಿ ಮೊದಲು ಮಾನ್ಯತೆ ದೊರೆಯಿತು. 1993ರಲ್ಲಿ ನಾಂದೇಡ್ ಫಕೀರ್‌ನ ಗ್ರಾಮ ಪಂಚಾಯತ್ ದಾದಾಜಿ ಖೋಬ್ರಗಡೆಯವರ ಕಾರ್ಯಸಾಧನೆಯನ್ನು ಉಲ್ಲೇಖಿಸಿ ಅವರೊಬ್ಬ ಬಿತ್ತನೆ ಭತ್ತದ ಉತ್ಪಾದಕರೆಂದು ಘೋಷಿಸಿ ಠರಾವು ಹೊರಡಿಸಿತು. ಪಿಕೆವಿ ತನ್ನ ಎಚ್‌ಎಂಟಿ ತಳಿಯನ್ನು ಬಿಡುಗಡೆ ಮಾಡುವ ಮೊದಲೇ 1994ರಲ್ಲಿ ಅಂದಿನ ಚಿಮರು ಲೋಕಸಭೆಯನ್ನು ಪ್ರತಿನಿಧಿಸುತ್ತಿದ್ದ ಸಂಸತ್ ಸದಸ್ಯ ವಿಲಾಸ್ ಭಾವುರಾವ್ ಮತ್ತೆಮ್ವರ್ ಅವರು ನಾಂದೇಡ್ ನಗರದಲ್ಲಿ ಇಂದಿರಾ ಗಾಂಧಿ ಅವರ ಪುತ್ಥಳಿಯನ್ನು ಅನಾವರಣ ಮಾಡಿದ ಸಭೆಯಲ್ಲಿ ದಾದಾಜಿ ಅವರ ಸಾಧನೆಯನ್ನು ಪುರಸ್ಕರಿಸಿ ಸನ್ಮಾನಿಸಿದರು. ಅದೇ ವರ್ಷ ನಾಗಭೀಡಲ್ಲಿ ನಡೆದ ಕೃಷಿ ಮೇಳದಲ್ಲಿ ತಾಲೂಕು ಆಡಳಿತವು ವಿನೂತನ ರೈತನೆಂದು ಸನ್ಮಾನಿಸಿತು. ಇದೇ ವೇಳೆಗೆ ಎಚ್ಎಂಟಿ ತಳಿಯ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಂಡ ಹಲವರು ನಕಲಿ ಎಚ್‌ಎಂಟಿ ಬಿತ್ತನೆ ಬೀಜವನ್ನು ಸಹ ಮಾರುವ ಪ್ರಕರಣಗಳೂ ನಡೆದವು. ಇಂಥ ಮಾನ್ಯತೆ ಅರಸಿ ಬರುತ್ತಿರುವಾಗಲೇ ಪಿಕೆವಿ ಸಿಂಧೆವಾಹಿ ಭತ್ತದ ಸಂಶೋಧನೆಯಿಂದ ಪಿಕೆವಿ ಎಚ್‌ಎಂಟಿ ತಳಿಯನ್ನು ಖೋಬ್ರಗಡೆ ಅವರಿಗೆ ಮಾಹಿತಿ ನೀಡದೆ, ಮಾನ್ಯತೆಯನ್ನೂ ನಿರಾಕರಿಸಿ ಬಿಡುಗಡೆ ಮಾಡಿತು.

ಇದರಿಂದ ಆಘಾತವಾದರೂ ದೃತಿಗೆಡದ ಖೋಬ್ರಗಡೆ ಅವರು ಹೊಸ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುತ್ತಲೇ ಹೋದರು. 1990ರಿಂದ ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ನಡೆಸಿದ ತಳಿ ಅಭಿವೃದ್ಧಿ ಪ್ರಯೋಗಗಳಲ್ಲಿ ಖೋಬ್ರಗಡೆ ಅವರು ಸಾಧಿಸಿದ ಯಶಸ್ಸು ಬೆರಗು ಮೂಡಿಸುವಂಥದ್ದು. ಅವರು ಎಚ್‌ಎಂಟಿ ತಳಿಯ ಜೊತೆಗೆ ನಾಂದೇಡ್ ಚಿನ್ನೂರ್, ನಾಂದೇಡ್ 92, ನಾಂದೇಡ್ ಹೀರಾ, ಡಿಆರ್‌ಕೆ, ವಿಜಯ್ ನಾಂದೇಡ್, ದೀಪಕ್ ರತ್ನ, ಎಚ್‌ಎಂಟಿ ಕಾಟೆ ಮತ್ತು ಡಿಆರ್‌ಕೆ 2 -ಹೀಗೆ ಎಂಟು ತಳಿಗಳನ್ನು ಅಭಿವೃದ್ಧಿ ಮಾಡಿದರು. ತಮ್ಮ ಜಮೀನಿನಲ್ಲಿಯೇ ಬೆಳೆದ ಭತ್ತದ ಪೈರುಗಳಲ್ಲಿ ಕಂಡುಬಂದ ವಿಶಿಷ್ಟ ಗುಣಗಳನ್ನು ಗಮನಿಸಿ, ಅವುಗಳನ್ನು ಪೋಷಿಸಿ, ಆಯ್ಕೆ ವಿಧಾನವನ್ನು ಅನ್ವಯಿಸಿ ಮತ್ತೆ ಮತ್ತೆ ಬೆಳೆಯುತ್ತಾ ಅಪೇಕ್ಷಿತ ಗುಣ ಸ್ಥಿರಗೊಳ್ಳುವವರೆಗೆ ಅಭಿವೃದ್ಧಿಪಡಿಸುವ ಮೂಲಕ ಅವರು ತಳಿ ಜನಕರೆನಿಸಿದರು. ರೈತರಲ್ಲಿ ಜನಪ್ರಿಯವಾಗಿದ್ದ ಭತ್ತದ ತಳಿಗಳಿಗಿಂತ ಇವರ ತಳಿಗಳು ಹೆಚ್ಚು ಇಳುವರಿ ನೀಡುತ್ತಿದ್ದ ಕಾರಣ ಬೇಡಿಕೆ ಸೃಷ್ಟಿಯಾಯಿತು. ಜೊತೆಗೆ ಅವುಗಳಿಂದ ದೊರೆಯುತ್ತಿದ್ದ ನಸು ಪರಿಮಳದ ಅಕ್ಕಿಗೂ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ದೊರಕುತ್ತಿತ್ತು. ಆದುದರಿಂದ ಏಕಕಾಲಕ್ಕೆ ರೈತರಿಗೂ ಮಾರಾಟಗಾರರಿಗೂ ಮತ್ತು ಗ್ರಾಹಕರಿಗೂ ಪ್ರಿಯವೆನಿಸುವ ತಳಿಗಳು ಹೆಸರುವಾಸಿಯಾದವು. ಯಾವುದೇ ಶೈಕ್ಷಣಿಕ ಹಿನ್ನೆಲೆ ಇಲ್ಲದ, ತಳಿ ಅಭಿವೃದ್ಧಿಯಲ್ಲಿ ಸಾಂಪ್ರದಾಯಕ ತರಬೇತಿ ಸಹ ಪಡೆಯದ ಖೋಬ್ರಗಡೆಯವರು ಕೇವಲ ಆಸಕ್ತಿ, ಕುತೂಹಲ, ತಾಳ್ಮೆ, ಶ್ರಮ ಮತ್ತು ಅಪೂರ್ವವಾಗಿ ದಕ್ಕಿದ್ದ ತಮ್ಮ ಕರ್ತೃಶಕ್ತಿಯಿಂದ ಮಾಡಿದ ಪವಾಡವಿದು.

ದಾದಾಜಿ ಖೋಬ್ರಗಡೆ1 1
ದಾದಾಜಿಯವರು ಆವಿಷ್ಕರಿಸಿದ ಭತ್ತದ ತಳಿಗಳು

ಪಿಕೆವಿ ಖೋಬ್ರಗಡೆಯವರಿಗೆ ಮಾನ್ಯತೆ ನೀಡದಿದ್ದರೂ ಅವರ ಸಾಧನೆಯು ಜಗತ್ತಿಗೆ ತಿಳಿಯಲು ತಡವಾಗಲಿಲ್ಲ. ಆಶಿಶ್ ಕೊಠಾರಿ ಅವರಂಥ ಅನೇಕ ಸಾಮಾಜಿಕ ಕಾರ್ಯಕರ್ತರು ಪಿಕೆವಿ ವಿಶ್ವವಿದ್ಯಾಲಯವು ದಾದಾಜಿ ಅವರಿಗೆ ಎಸಗಿದ ದ್ರೋಹದ ವಿರುದ್ಧ ದನಿ ಎತ್ತಿದರು. ಅನೇಕ ಪತ್ರಕರ್ತರು ದಾದಾಜಿಯವರ ಹಳ್ಳಿಗೆ ಭೇಟಿ ನೀಡಿ ಅವರ ಸಾಧನೆಯ ಬಗ್ಗೆ ಬರೆದು ಅವರಿಗೆ ಸಲ್ಲಬೇಕಾದ ಮಾನ್ಯತೆಗೆ ಒತ್ತಾಯಿಸುವ ಲೇಖನಗಳನ್ನು ಬರೆದರು. ‘ಹಿಂದೂ’ ಪತ್ರಿಕೆಯ ಮುಂಬಯಿಯ ಪ್ರತಿನಿಧಿ ಮೀನಾ ಮೆನನ್ ಅವರು ಪಿವಿಕೆ ಜೊತೆ ದಾದಾಜಿ ನಡೆಸುತ್ತಿರುವ ಸಂಘರ್ಷದ ಬಗ್ಗೆ ಹಾಗೂ ಶೈಕ್ಷಣಿಕ ವಿಜ್ಞಾನಿಗಳು ತಮ್ಮ ತಾಂತ್ರಿಕ ವಿದ್ಯೆಯಿಂದ ದಾದಾಜಿ ಅವರಂತಹ ನೆಲಮೂಲ ವಿಜ್ಞಾನಿಗಳನ್ನು ಶೋಷಿಸುತ್ತಿರುವ ಬಗ್ಗೆ ರಾಷ್ಟ್ರೀಯ ನವಶೋಧಗಳ ಪ್ರತಿಷ್ಠಾನ ಅಥವಾ ಎನ್‌ಐಎಫ್ (The National Innovation Foundation) ಸಂಸ್ಥೆಗೆ ಪತ್ರ ಬರೆದರು. ನಾಗಪುರದ ವಿಕಲ್ಪ ಎಂಬ ಸ್ವಯಂಸೇವಾ ಸಂಸ್ಥೆಯು 2002ರ ಡಿಸೆಂಬರ್‌ನಲ್ಲಿ ಎನ್‌ಐಎಫ್‌ಗೆ ಪತ್ರವೊಂದನ್ನು ಬರೆದು ದಾದಾಜಿಯವರು 1983ರಿಂದ 2001ರವರೆಗೆ ನಡೆಸಿದ ಪ್ರಯೋಗಗಳ ಸಂಪೂರ್ಣ ಮಾಹಿತಿಯನ್ನು ನೀಡಿತು. ದೇಸೀ ತಂತ್ರಜ್ಞಾನ ಮತ್ತು ಇತರೆ ಪದ್ಧತಿಗಳನ್ನು ರೂಢಿಸಿಕೊಂಡು ಪಾರಂಪರಿಕ ತಿಳಿವಳಿಕೆಯನ್ನು ಎನ್‌ಐಎಫ್ ಎಂಬುದು ಯಾವುದೇ ಸಂಸ್ಥೆಯ ನೆರವಿಲ್ಲದೆ ಮನುಕುಲದ ಉದ್ಧಾರಕ್ಕೆ ದುಡಿಯುವ ವ್ಯಕ್ತಿಗಳು ಮತ್ತು ಸಂಸ್ಥೆಯಗಳನ್ನು ತಳಮಟ್ಟದಲ್ಲಿಯೇ ಸಬಲಗೊಳಿಸಲು 2000 ಇಸವಿಯಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆ, ಈ ಎನ್‌ಐಎಫ್. ಸ್ಥಳೀಯ ಮಟ್ಟದಲ್ಲಿ ಇರುವ ಇಂಥ ತಿಳಿವಳಿಕೆ/ತಂತ್ರಜ್ಞಾನವನ್ನು ಮಾನ್ಯತೆ ಮಾಡಿ ಅಗತ್ಯವಿರುವ ಎಲ್ಲ ಕಡೆ ಪ್ರಸಾರ ಮಾಡಲು ನೆರವು ನೀಡುವುದು ಸಹ ಅದರ ಧ್ಯೇಯಗಳಲ್ಲಿ ಸೇರಿದೆ.

ಇದನ್ನು ಓದಿದ್ದೀರಾ?: ದಾದಾಜಿ ಖೋಬ್ರಗಡೆ: ಭತ್ತದ ಜೊತೆಗೆ ಬದುಕಿದ ಸಾಮಾಜಿಕ ಸಂತ

ಎನ್‌ಐಎಫ್ ಸಂಸ್ಥೆಯ ಸೂಚನೆಯಂತೆ ದಾದಾಜಿ ಅವರು ತಮ್ಮ ಒಂಭತ್ತು ತಳಿಗಳನ್ನು ಮಾನ್ಯತೆಗೆ ಸಲ್ಲಿಸಿದರು. ದಾದಾಜಿ ಅವರ ಸಂಶೋಧನೆಯನ್ನು ಮಾನ್ಯ ಮಾಡಿದ ಎನ್‌ಐಎಫ್ 2005ರಲ್ಲಿ ಅವರ ಎಚ್‌ಎಂಟಿ ತಳಿ ಹಾಗೂ 2009ರಲ್ಲಿ ಡಿಆರ್‌ಕೆ ತಳಿಯನ್ನು ನೋಂದಣಿ ಮಾಡಿಸಿ ಮಾಡಿ ತಲಾ ತಳಿಗೆ 50 ಸಾವಿರ ರೂಪಾಯಿಗಳ ಸಾಂಕೇತಿಕ ಗೌರವಧನ ನೀಡಿತು. ಆದರೆ ಅದಕ್ಕೂ ಮೊದಲು ಅದು ಪಿಕೆವಿ ಎಚ್‌ಎಂಟಿ ತಳಿಗೂ ಮಾನ್ಯತೆ ನೀಡಿತ್ತು. ಆ ತಳಿಯ ಪೂರ್ವಾಪರ ವಿಚಾರಿಸದೆ ಮಾನ್ಯತೆ ನೀಡಿದ ಮತ್ತು ದಾದಾಜಿಯವರ ತಳಿಗೆ ಅಲ್ಪಧನ ನೀಡಿದ ಕ್ರಮದ ಬಗ್ಗೆ ಅನೇಕ ಸ್ವಯಂಸೇವಾ ಸಂಸ್ಥೆಗಳು ಆಕ್ಷೇಪಣೆ ವ್ಯಕ್ತಪಡಿಸಿದವು. ದಾದಾಜಿಗೂ ಸಮಾಧಾನವಾಗಲಿಲ್ಲ. ಆದರೆ ತಳಮಟ್ಟದ ಸಂಶೋಧಕರಿಗೆ ತನ್ನ ಕೈಲಾದ ಮಟ್ಟಿಗೆ ನೆರವಾಗುತ್ತಿದ್ದೇನೆಂದು ಹೇಳಿ ಎನ್‌ಐಎಫ್ ಕೈತೊಳೆದುಕೊಂಡಿತು. ಈಗಾಗಲೇ ಪಿಕೆವಿ ಎಚ್ಎಂಟಿ ತಳಿಯನ್ನು ಮಾನ್ಯ ಮಾಡಿರುವ ಕಾರಣ ಟ್ರೇಡ್‌ಮಾರ್ಕ್ ಸಂಬಂಧ ಯಾವುದೇ ಸಂಕಷ್ಟ ಉದ್ಭವವಾಗುವುದನ್ನು ತಡೆಯಲು ದಾದಾಜಿಯ ಒಪ್ಪಿಗೆ ಪಡೆದು ಅವರ ಮೊದಲ ತಳಿಗೆ ‘ದಾದಾಜಿ ಎಚ್‌ಎಂಟಿ’ ಎಂಬ ಹೆಸರು ನೀಡಿತು. ಮತ್ತೊಂದು ತಳಿಗೆ ದಾದಾಜಿ ಅವರ ಹೆಸರು (ಡಿಆರ್‌ಕೆ ತಳಿ) ನೀಡಿತು. ದಾದಾಜಿ ಸಲ್ಲಿಸಿದ ಉಳಿದ ಏಳು ತಳಿಗಳ ಮಾನ್ಯತೆ ಏನಾಯಿತೋ ತಿಳಿಯಲಿಲ್ಲ. 

ಆದರೆ ಈ ಕಥೆ ಇಲ್ಲಿಗೇ ಮುಗಿಯಲಿಲ್ಲ. ಸ್ಥಳೀಯ ರೈತರ ಸಂಶೋಧನೆಗೆ ನೆರವಾಗುವ ದೃಷ್ಟಿಯಿಂದ ಎನ್‌ಐಎಫ್ ಸಂಸ್ಥೆಯು ಆರಂಭಿಸಿದ್ದ ಕಿರು ಉದ್ಯಮ ನಿಧಿ (Micro Venture Innovation Fund) ಅಡಿಯಲ್ಲಿ ವಾಣಿಜ್ಯ ಪ್ರಮಾಣದಲ್ಲಿ ಎಚ್‌ಎಂಟಿ ಮತ್ತು ಡಿಆರ್‌ಕೆ ತಳಿಗಳನ್ನು ಬೆಳೆಯಲು ವಾರ್ಷಿಕ ಶೇ. 12.5 ಬಡ್ಡಿಯ ಮೂರು ಲಕ್ಷ ಹಣವನ್ನು 2012ರಲ್ಲಿ ಮಂಜೂರು ಮಾಡಿತು. ದಾದಾಜಿ ಒಂದು ಲಕ್ಷ ಅಸಲು ಮತ್ತು ಬಡ್ಡಿ ಹಿಂದಿರುಗಿಸಿದರು. 2015ರ ಜನವರಿಯಲ್ಲಿ ಅವರು ಪಾರ್ಶ್ವವಾಯುವಿಗೆ ತುತ್ತಾದರು. ಆ ವರ್ಷದ ಮುಂಗಾರು ಕೈಕೊಟ್ಟಿತು. ಅಪ್ಪ – ಮಗನ ವೈದ್ಯಕೀಯ ವೆಚ್ಚವೂ ಹೆಚ್ಚಿತು. ಬಾಕಿ ಸಾಲದ ಮೊತ್ತ 2,39,147 ರೂಪಾಯಿ ಹಿಂದಿರುಗಿಸಲು ಎನ್‌ಐಎಫ್‌ನಿಂದ ನೋಟಿಸ್ ಬಂತು. ಅವರ ಮಗ ಮಿತ್ರಜಿತ್ ಖೋಬ್ರಗಡೆ ಎನ್‌ಐಎಫ್‌ಗೆ ಪತ್ರ ಬರೆದು ಸಾಲವನ್ನು ಮನ್ನಾ ಮಾಡಲು ಅಥವಾ ಬಡ್ಡಿಯನ್ನಾದರೂ ಮನ್ನಾ ಮಾಡಲು ಕೋರಿದರು. ತಮ್ಮ ತಂದೆ ಹಿಂದೆ ಸಲ್ಲಿಸಿದ್ದ ಏಳು ಇತರೆ ತಳಿಗಳ ಮಾನ್ಯತೆ ವಿಷಯ ಪ್ರಸ್ತಾಪಿಸಿ ಅವುಗಳ ಪರ ಗೌರವಧನ ನೀಡಿ ಸಾಲ ವಜಾ ಮಾಡಿಕೊಂಡು ಉಳಿದ ಹಣವನ್ನು ನೀಡಿದರೆ ವೈದ್ಯಕೀಯ ವೆಚ್ಚಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು. ಆದರೆ ಎನ್‌ಐಎಫ್ ಸಂಸ್ಥೆಯು ದಾದಾಜಿಯವರ ತಳಿಗಳ ಹಕ್ಕು ಸ್ವಾಮ್ಯವನ್ನು ಖಾಸಗಿ ಕಂಪನಿಗಳಿಗೆ ವರ್ಗಾಯಿಸಿದರೆ ಸಾಲ ತೀರುವ ಜೊತೆಗೆ ಗೌರವಧನವೂ ದೊರೆಯುತ್ತದೆಂಬ ಸಲಹೆ ನೀಡಿತು. ದಾದಾಜಿ ಈ ಸಲಹೆಗೆ ಒಪ್ಪಲಿಲ್ಲ.

ದಾದಾಜಿ ಖೋಬ್ರಗಡೆ2
ದಾದಾಜಿಯವರನ್ನು ಅರಸಿಬಂದ ಪ್ರಶಸ್ತಿ ಪುರಸ್ಕಾರಗಳು

ದಾದಾಜಿ ಅವರಿಗೆ ಇಂಥ ಸಂಕಟಗಳು ಅನ್ಯಾಯಗಳು ಮತ್ತು ಅವುಗಳ ವಿರುದ್ಧ ಹೋರಾಡುವ ಅನುಭವಗಳು ಹೊಸದಾಗಿರಲಿಲ್ಲ. ಹಾಗೆಯೇ ಯಾವುದೋ ಮೂಲೆಯಿಂದ ನೆರವು ಕೈಹಿಡಿಯುವ ಘಟನೆಗಳೂ ಸಂಭವಿಸುತ್ತಿದ್ದರಿಂದ ತೀರಾ ನಿರಾಶೆಗೂ ಬೀಳುತ್ತಿರಲಿಲ್ಲ. ‘ಹಿಂದೂ’ ಪತ್ರಿಕೆಯ ಮುಂಬೈ ಪ್ರತಿನಿಧಿ ಮೀನಾ ಮೆನನ್ ಅವರು 2004ರಲ್ಲಿ ದಾದಾಜಿ ಅವರ ಸಾಧನೆಯ ಬಗ್ಗೆ ಬರೆದ ವಿಸ್ತೃತ ವರದಿಯು ವ್ಯಾಪಕ ಪ್ರಚಾರ ನೀಡಿತ್ತು. ಅದೇ ವರ್ಷ ಭಾರತದೇಶ ಕಂಡ ಮೇಧಾವಿ ಭತ್ತದ ವಿಜ್ಞಾನಿ ರಾಧೇಲಾಲ್ ಹರೆಲಾಲ್ ರಿಚ್ಛಾರಿಯ ಅವರ ಹೆಸರಲ್ಲಿ ಸ್ಥಾಪನೆಯಾದ ‘ಆರ್‌ಎಚ್ ರಿಚ್ಛಾರಿಯಾ ಸಮ್ಮಾನ್’ನ ಮೊದಲ ಪ್ರಶಸ್ತಿಗೆ ದಾದಾಜಿಯವರನ್ನೇ ಆಯ್ಕೆ ಮಾಡಲಾಯಿತು. ವಿಶ್ವದ ಶ್ರೇಷ್ಠ ಭತ್ತದ ವಿಜ್ಞಾನಿಯೊಬ್ಬರ ಹೆಸರಿನ ಪ್ರಶಸ್ತಿ ಒಬ್ಬ ಸಾಮಾನ್ಯ ರೈತನ ಸಾಧನೆಗೆ ದೊರಕಿದ್ದು ದಾದಾಜಿಯವರ ಮೂಲಕ ದೇಸೀ ಪ್ರತಿಭೆಗೆ ಸಂದ ಅರ್ಹ ಗೌರವ. ಮಾರನೆಯ ವರ್ಷ ಎನ್‌ಐಎಫ್ ಸಹ ಭತ್ತದ ಸಂಶೋಧಕರೆಂಬುದನ್ನು ಗುರುತಿಸಿ ದಾದಾಜಿಯವರಿಗೆ ಪ್ರಶಸ್ತಿ ನೀಡಿತು. ಇದಕ್ಕೂ ಮುನ್ನ ಮಹಾರಾಷ್ಟ್ರ ಸರ್ಕಾರವು 2003ರಲ್ಲಿ ಕೃಷಿಪಂಡಿತ ಪ್ರಶಸ್ತಿ ನೀಡಿ ಗೌರವಿಸಿತ್ತು. 2005ರಲ್ಲಿ ಮಹಾರಾಷ್ಟ್ರ ಸರ್ಕಾರವು 25 ಸಾವಿರ ನಗದು ಚಿನ್ನದ ಪದಕದೊಂದಿಗೆ ವಸಂತರಾವ್ ನಾಯಕ್ ಕೃಷಿಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಿತು. ದೇಸೀ ಸಂಶೋಧನೆಯ ವ್ಯಾಪಕ ಪ್ರಸಾರಕ್ಕಾಗಿ ಎನ್‌ಐಎಫ್ ಸಂಸ್ಥೆಯು ಸ್ಥಾಪಿಸಿದ್ದ ಡಿಫ್ಯೂಷನ್ ಅವಾರ್ಡ್ಅನ್ನು ದಾದಾಜಿ ಅವರ ಎಚ್‌ಎಂಟಿ ಭತ್ತದ ತಳಿಗೆ 2009ನೇ ಸಾಲಿನಲ್ಲಿ ನೀಡಿತು. 2010ರಲ್ಲಿ ಮಹಾರಾಷ್ಟ್ರ ಸರ್ಕಾರವು ಡಾ.ಪಂಜಾಬ್‌ರಾವ್ ದೇಶಮುಖ್ ಕೃಷಿರತ್ನ ಪ್ರಶಸ್ತಿಯನ್ನು ನೀಡಿ ಪುಸ್ಕರಿಸಿತು. ಇವುಗಳಲ್ಲದೆ ದಾದಾಜಿಯವರಿಗೆ ಅನೇಕ ಸಂಘ ಸಂಸ್ಥೆಗಳು ಅವರ ಪ್ರತಿಭೆಯನ್ನು ಗುರುತಿಸಿ ಪುರಸ್ಕಾರ ನೀಡಿದವು.

ಇದನ್ನು ಓದಿದ್ದೀರಾ?: ‘ದಲಿತರು ಹಿಂದುಗಳಲ್ಲ’: ಬಿಜೆಪಿ ಅಂತರಂಗ ಬಿಚ್ಚಿಟ್ಟ ಕೇಂದ್ರ ಸಚಿವ ಜೋಶಿ

ಪ್ರಶಸ್ತಿ ಪುರಸ್ಕಾರಗಳಿಂದ ಬಂದ ಹಣವನ್ನು ದಾದಾಜಿ ಅವರು ತಮ್ಮ ಕೃಷಿ ಸಂಶೋಧನೆಯನ್ನು ವಿಸ್ತರಿಸಲು ಬಳಸುತ್ತಿದ್ದರು. ತಮ್ಮ ಜಮೀನಿಗೆ ಭದ್ರವಾದ ಬೇಲಿ, ಪಂಪ್ ಸೆಟ್, ಬಾವಿ ನಿರ್ಮಾಣ, ಸ್ವಲ್ಪ ಜಮೀನು ಖರೀದಿ, ಮನೆಯ ರಿಪೇರಿ ಹೀಗೆ ಖರ್ಚು ಮಾಡುತ್ತಿದ್ದರು. ಮಗನ ವೈದ್ಯ ಚಿಕಿತ್ಸೆಯಂತೂ ನಿರಂತರವಾಗಿ ನಡದೇ ಇತ್ತು. ವಸಂತರಾವ್ ನಾಯಕ್ ಕೃಷಿಭೂಷಣ ಪ್ರಶಸ್ತಿ ಭಾಗವಾಗಿ ಬಂದ ನಗದು ಖರ್ಚಾದ ನಂತರ ಪಂಪ್ ಸೆಟ್ ಕೊಳ್ಳುವ ಸಲುವಾಗಿ ತಮ್ಮಲ್ಲಿದ್ದ 14 ಕ್ಯಾರೆಟ್‌ನ ಚಿನ್ನದ ಪದಕವನ್ನು ಮಾರಲು ಹೋದಾಗ ಆಘಾತ ಕಾದಿತ್ತು. ಅದನ್ನು ಪರೀಕ್ಷಿಸಿದ ಚಿನಿವಾರರು ಕಡಿಮೆ ಗುಣಮಟ್ಟದ ಬೆಳ್ಳಿಯ ಲೋಹಕ್ಕೆ ಚಿನ್ನದ ಲೇಪ ನೀಡಿ ತಯಾರಿಸಿರುವ ನಕಲಿ ಪದಕ ಎಂಬುದನ್ನು ಬಹಿರಂಗಪಡಿಸಿದರು. ಇದರಿಂದ ಕೆರಳಿದ ದಾದಾಜಿಯವರು ಸರ್ಕಾರಕ್ಕೆ ಪದಕ ಹಿಂತಿರುಗಿಸಿ ಪ್ರತಿಭಟಿಸಿದರು. ಅವರ ಜೊತೆಯಲ್ಲಿ ಪದಕ ಪಡೆದವರೂ ನಿಜ ತಿಳಿದು ಹಿಂದಿರುಗಿಸಿದರು. ಸರ್ಕಾರಕ್ಕೆ ಮುಖಭಂಗವಾಯಿತು. ಈ ಬಗ್ಗೆ ತನಿಖೆಗೆ ಆದೇಶಿಸಿದ ಸರ್ಕಾರವು ರೈತರ ಕ್ಷಮೆ ಕೋರಿ ಅಸಲಿ ಪದಕವನ್ನು ನೀಡಿತು. ನಮ್ಮ ಅಧಿಕಾರಶಾಹಿ ಸಹ ರೈತರನ್ನು ಎಷ್ಟು ಕ್ರೂರವಾಗಿ ನಡೆಸಿಕೊಳ್ಳಬಹುದು ಎಂಬುದಕ್ಕೆ ಇದು ಸಾಕ್ಷಿ.

ವ್ಯವಸ್ಥೆಯ ಬೇರೆ ಬೇರೆ ಅಂಗಗಳ ಜೊತೆ ಪಡೆದ ಕಹಿ ಅನುಭವಗಳ ನಡುವೆಯೂ ದಾದಾಜಿ ರಾಮಾಜಿ ಖೋಬ್ರಗಡೆ ಅವರು ತಮಗೆ ಪ್ರಿಯವಾದ ಭತ್ತದ ತಳಿಯ ಅಭಿವೃದ್ಧಿ ಕೆಲಸವನ್ನು ಮಾಡುತ್ತಲೇ ನಡೆದರು ಹೊಸ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುವ ಬಯಕೆ ಅವರಲ್ಲಿ ಕೊನೆಯವರೆಗೂ ಚಿಗುರುತ್ತಲೇ ಇತ್ತು. ಲೌಕಿಕ ಜಗತ್ತಿನ ಅನ್ಯಾಯಗಳ ಬಗ್ಗೆ ಯೋಚಿಸದೆ ಸಸ್ಯ ಸಂತನಾಗಿ ಬದುಕು ಸಾಗಿಸಿದರು. ತಾನು ಅಭಿವೃದ್ಧಿಪಡಿಸಿದ ಭತ್ತದ ತಳಿಗಳನ್ನು ಬೇರೆಯವರು ಲಪಟಾಯಿಸಿದರೂ ದಾದಾಜಿ ದೇಸೀ ಬೀಜ ಸಂಪತ್ತಿನ ರಕ್ಷಣೆಗೆಂದೇ ಆರಂಭಿಸಲಾದ ‘ಭಾರತ್ ಬೀಜ್ ಸವರಾಜ ಮಂಚ್‌’ನ ಸ್ಥಾಪಕ ಸದಸ್ಯರಾಗಿದ್ದರು. ಆ ಸಂಸ್ಥೆಯ ಭಾರತದ ಸಮೃದ್ಧ ಬೆಳೆ ವೈವಿಧ್ಯವು ಖಾಸಗಿಯವರ ಸ್ವತ್ತಾಗದೆ ರೈತರಲ್ಲೇ ಉಳಿಯಬೇಕೆಂಬ ಉದ್ದೇಶಕ್ಕೆ ಖೋಬ್ರಗಡೆ ಅವರು ಬದ್ಧರಾಗಿದ್ದರು. ರೈತರ ಹಕ್ಕುಗಳು ಮತ್ತು ಸಾಂಪ್ರದಾಯಿಕ ಬೀಜ ಸಂರಕ್ಷಣೆ ಪದ್ಧತಿಗಳ ಬಲವಾದ ಪ್ರತಿಪಾದಕರಾಗಿ ಉಳಿದರು. ಅವರು ಕಾರ್ಪೊರೇಟ್‌ಗಳಿಗೆ ಪರವಾಗಿರುವ ಬೌದ್ಧಿಕ ಆಸ್ತಿ ವ್ಯವಸ್ಥೆಯನ್ನು ವಿರೋಧಿಸಿದರು ಮತ್ತು ತಮ್ಮ ಬೀಜಗಳನ್ನು ಪಕ್ಕದ ರೈತರೊಂದಿಗೆ ಮುಕ್ತವಾಗಿ ಹಂಚಿಕೊಂಡರು.

ಇದನ್ನು ಓದಿದ್ದೀರಾ?: ಸರ್ಪಗಳತ್ತ ಕುಪ್ಪಳಿಸುತ್ತಿರುವ ದಲಿತ ಕಪ್ಪೆಗಳು; ಪ್ರತ್ಯೇಕ ಮತಕ್ಷೇತ್ರಗಳೇ ಪರಿಹಾರ?

ಖೋಬ್ರಗಡೆ ಅವರ ನಿರಂತರ ಶ್ರಮದಿಂದ ಅಭಿವೃದ್ಧಿಯಾದ ತಳಿಗಳ ಬೇಸಾಯದಿಂದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕವಾಗಿ ಲಾಭವಾಯಿತು. ‘ಫ್ರಂಟ್‌ಲೈನ್’ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ ಹಾಗೆ ‘ರೈತರ ಆರ್ಥಿಕ ಬದುಕು ಸುಧಾರಿಸಿತು. ಅವರ ಮನೆಗಳ ಛಾವಣಿಯಲ್ಲಿ ಹೊದಿಸಿದ್ದ ಹುಲ್ಲಿನ ಸ್ಥಾನದಲ್ಲಿ ಹೆಂಚುಗಳು ಬಂದವು.’

ಆದರೆ, ಅವರ ಕೊನೆಯ ವರ್ಷಗಳು ಬಡತನ, ಅನಾರೋಗ್ಯ ಮತ್ತು ನಿರಾಶೆಯಿಂದ ಕೂಡಿದ್ದವು. ಎರಡು ಎಕರೆ ಜಮೀನನ್ನು ತಮ್ಮ ಮಗನ ಸಿಕಲ್ ಸೆಲ್ ರಕ್ತಹೀನತೆಗೆ ಚಿಕಿತ್ಸೆಗಾಗಿ ಮಾರಾಟ ಮಾಡಿದ ನಂತರ, ಅವರು ಎರವಲು ಜಮೀನಿನಲ್ಲೂ ಕೃಷಿ ಮಾಡಿದರು ಮತ್ತು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡಿದರು. ಅವರ ಕೊನೆಯ ವರ್ಷಗಳಲ್ಲಿ ಪಾರ್ಶ್ವವಾಯುವಿನ ಆಘಾತದಿಂದ ಹಾಸಿಗೆಗೆ ಬಂಧಿಯಾದರು. 2018ರ ಜೂನ್ 3ರಂದು ಮಹಾರಾಷ್ಟ್ರದ ಗಡಚಿರೋಲಿಯಲ್ಲಿ 79ರ ವಯಸ್ಸಿನಲ್ಲಿ ನಿಧನರಾದರು.

ದಾದಾಜಿ ಖೋಬ್ರಗಡೆ3
ರೈತರಿಗಾಗಿ ಜೀವ ಸವೆಸಿದ ಸಾಮಾಜಿಕ ಸಂತ ದಾದಾಜಿ- ಪ್ರಶಸ್ತಿಗಳೊಂದಿಗೆ

ದಾದಾಜಿ ಅವರ ಬದುಕು ಈ ದೇಶದ ಸಣ್ಣ ರೈತರ ಬದುಕಿನ ಸಾರಸಂಗ್ರಹದಂತಿತ್ತು. ಅವರು ಕಾಯಕಕ್ಕೆ ನಿಷ್ಠರಾಗಿದ್ದರು. ಬಡವರಾಗಿಯೇ ಉಳಿದರು. ಸುಲಭ ದ್ರೋಹಕ್ಕೆ ತುತ್ತಾದರು. ಸಾತ್ವಿಕ ಸಿಟ್ಟಿನಿಂದ ಪ್ರತಿಭಟಿಸಿದರು. ಆದರೂ ಪಾರಂಪರಿಕ ಕೃಷಿಯು ಪ್ರತಿನಿಧಿಸುವ ಹಂಚಿ ಉಣ್ಣುವ ಮೂಲ ತತ್ವಕ್ಕೆ ಬದ್ಧರಾಗಿದ್ದರು. ಅವರು ಅಳಿದರೂ ಪ್ರತಿವರ್ಷ ಸುಮಾರು ಹತ್ತು ಲಕ್ಷ ಎಕರೆ ಭೂಮಿಯಲ್ಲಿ ಅವರು ಅಭಿವೃದ್ಧಿಪಡಿಸಿದ ಎಚ್‌ಎಂಟಿ ಮತ್ತು ಡಿಆರ್‌ಕೆ ತಳಿಗಳ ಪೈರುಗಳು ಹಸಿರು ಚೆಲ್ಲುತ್ತಾ ನಿಲ್ಲುತ್ತವೆ. ಬಂಗಾರದ ತೆನೆಹೊತ್ತು ಬಯಲ ತಂಗಾಳಿಯಲ್ಲಿ ಚೀ… ಪೀ… ಎಂದು ಹಾರುವ ಹಕ್ಕಿಗಳ ಜೊತೆ ದಾದಾಜಿಯ ಹೆಸರನ್ನು ಉಸಿರಾಡುತ್ತಾ ತಲೆದೂಗುತ್ತವೆ.

WhatsApp Image 2023 07 14 at 5.34.29 PM
ಡಾ. ಕೆ. ಪುಟ್ಟಸ್ವಾಮಿ
+ posts

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ. ಪುಟ್ಟಸ್ವಾಮಿ
ಡಾ. ಕೆ. ಪುಟ್ಟಸ್ವಾಮಿ

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

1 COMMENT

  1. [url=https://tokarnye-stanki-s-chpu.ru/]токарный чпу[/url] — это современное оборудование для точной обработки металла и дерева.
    Эти устройства позволяют выполнять высокоточную обработку металлических и неметаллических заготовок.

    Автоматизация токарных работ минимизирует человеческий фактор и ускоряет выполнение задач. Подобные агрегаты востребованы в автомобильной, медицинской и энергетической сферах.

    #### **2. Принцип работы токарных станков с ЧПУ**
    Управление процессом осуществляется через компьютер, который передает команды механическим узлам.

    Система обратной связи позволяет корректировать работу станка в режиме реального времени. Благодаря этому каждое изделие соответствует заданным параметрам без дополнительной доводки.

    #### **3. Преимущества токарных станков с ЧПУ**
    Одним из ключевых плюсов считается снижение зависимости от человеческого фактора.

    Автоматизация процесса позволяет сократить производственные издержки. Также оборудование легко адаптируется под изготовление разных деталей без длительной переналадки.

    #### **4. Перспективы развития токарных станков с ЧПУ**
    Развитие технологии приведет к созданию более умных и автономных систем.

    Внедрение интернета вещей (IoT) позволит удаленно контролировать производственные процессы. Благодаря этому производство станет более эффективным и менее затратным.

    ### **Спин-шаблон:**

    #### **1. Введение в токарные станки с ЧПУ**
    Обрабатывающие центры с ЧПУ стали неотъемлемой частью современного производства. Такое оборудование обеспечивает точное и быстрое изготовление деталей из различных материалов.

    Применение ЧПУ сокращает время производства и уменьшает количество брака. Такие технологии нашли применение в производстве инструментов, деталей и сложных конструкций.

    *(Шаблон продолжается аналогично для всех последующих разделов.)*

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರೀಕ್ಷೆ ಸಮಯ,ನಡೆಯದ ಪಾಠ; ಪರೀಕ್ಷೆ ಮುಂದೂಡಿಕೆಗೆ ಕುಲಸಚಿವರಿಗೆ ವಿದ್ಯಾರ್ಥಿಗಳ ಆಗ್ರಹ

ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು...

‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಇತಿಹಾಸಕಾರ ರಾಮಚಂದ್ರ ಗುಹಾ ಆಯ್ಕೆ

ಪ್ರಸಿದ್ಧ ಭಾರತೀಯ ಇತಿಹಾಸಕಾರ, ಅಂಕಣಕಾರ ಹಾಗೂ ಚಿಂತಕ ಡಾ.ರಾಮಚಂದ್ರ ಗುಹಾ ಅವರನ್ನು...

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

Download Eedina App Android / iOS

X