ನೆನಪು | ಎಲ್ಲರಂಥವನಲ್ಲ ಪಟ್ಟಾಭಿ : ಪಟ್ಟಾಭಿರಾಮ ಸೋಮಯಾಜಿ ಕುರಿತು ಸರ್ವಮಂಗಳಾ ಬರಹ

Date:

Advertisements
ಜು. 1, 2023ರಂದು ಮಂಗಳೂರಿನಲ್ಲಿ ನಿಧನರಾದ ಸಾಮಾಜಿಕ ಹೋರಾಟಗಾರ, ಲೇಖಕ, ನಿವೃತ್ತ ಪ್ರಾಧ್ಯಾಪಕ ಪ್ರೊ. ಪಟ್ಟಾಭಿರಾಮ ಸೋಮಯಾಜಿ, ಅಪ್ಪಟ ಗಾಂಧಿವಾದಿ, ತನ್ನ ಬಟ್ಟೆ ಒಗೆದುಕೊಳ್ಳುತ್ತಿದ್ದ. ಹೊಸ ಹೊಸ ವಿಚಾರಗಳ ಬಗ್ಗೆ ಚಿಂತನೆಗಳ ಬಗ್ಗೆ ಹಸಿದುಕೊಂಡಿರುತ್ತಿದ್ದ, ಸದಾ ಯಾವುದೋ ವಿಚಾರದ ಗುಂಗಿನಲ್ಲಿರುತ್ತಿದ್ದ... ಅವರೊಂದಿಗಿನ ಒಡನಾಟದ ಕುರಿತು ಹಿರಿಯ ಕವಯಿತ್ರಿ ಸರ್ವಮಂಗಳಾ ಅವರ ಬರಹ.

ಪಟ್ಟಾಭಿ ನನಗೆ ಬಹಳ ಆಪ್ತ. ನಮ್ಮ ಮನೆಯ ಮಕ್ಕಳಿಗೆಲ್ಲಾ ಪ್ರೀತಿಯ ಪಟ್ಟಾಭಿ ಮಾಮ. ಮಕ್ಕಳ ಹುಟ್ಟಿದ ಹಬ್ಬವಾಗಲಿ, ಯಾವುದೇ ಸಮಾರಂಭವಾಗಲಿ, ಪಟ್ಟಾಭಿ ಬರದೆ ಅದು ಪೂರ್ಣವಾಗುತ್ತಿರಲಿಲ್ಲ.

ಏನಾದರೂ ವಿಶೇಷ ಮಾಡಿದಾಗ ಅಮ್ಮ “ಬಿಸಿ ಇದ್ದಾಗಲೇ ಪಟ್ಟಾಭಿಗೆ ಬರಲು ಹೇಳೆ, ತಣ್ಣಗಾದರೆ ರುಚಿ ಇರಲ್ಲ” ಎನ್ನುತ್ತಿದ್ದರು. ತಡವಾಗಿ ಬಂದಾಗ ‘ತಡ ಮಾಡಿಬಿಟ್ಟೆ ಪಟ್ಟಾಭಿ, ಸ್ವಲ್ಪ ಇದು ಬಿಸಿ ಮಾಡ್ತೀನಿ’ ಅಂದರೆ “ಪರವಾಗಿಲ್ಲಮ್ಮ, ನಿಮ್ಮ ಕೈ ಅಡಿಗೆ ತಣ್ಣಗಾದರೂ ನನಗದು ರುಚಿಯೇ” ಎನ್ನುತ್ತಿದ್ದನು. ಈ ರೀತಿಯ ಸಂವಾದಗಳು ಅವರಿಬ್ಬರ ನಡುವೆ ಸಾಮಾನ್ಯವಾಗಿತ್ತು.

‘ರುಜುವಾತು’ ಸಾಂಸ್ಕೃತಿಕ-ಸಾಹಿತ್ಯದ ಪತ್ರಿಕೆ, ಮೀನಾ, ಪಟ್ಟಾಭಿ ಮತ್ತು ನಾನು ಒಟ್ಟಿಗೆ ಇರುವ ಅವಕಾಶ ಕಲ್ಪಿಸಿತು. ನಮ್ಮೊಂದಿಗೆ ಯು.ಆರ್. ಅನಂತಮೂರ್ತಿ, ನಮ್ಮ ನಾಲ್ವರ ನಡುವೆ ಅಂಟಿದ ನಂಟಿನ ಪ್ರಾರಂಭ- ರುಜುವಾತು. ಈ ಅಂಟಿದ ನಂಟು ಎಷ್ಟು ಗಾಢವಾಗುತ್ತಾ ಹೋಯಿತು ಎಂಬುದನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಹೊಕ್ಕಳಿನ ಬಳ್ಳಿಯ ನಂಟಿಗಿಂತಲೂ ಮಿಗಿಲು!

ಎಲ್ಲರಂಥವನಲ್ಲ ಪಟ್ಟಾಭಿ! ಸ್ವಹಿತಕ್ಕಾಗಿ ಬೆನ್ನು ಬಾಗಿದವನಲ್ಲ. ಲೌಕಿಕವಾಗಿ ಬದುಕಿದವನೇ ಅಲ್ಲ. ಯಾವುದೋ ವಿಚಾರದ ಗುಂಗು, ಪದ್ಯದ ಗುಂಗಿನಲ್ಲಿ ತಲ್ಲೀನ. ಟಿ.ನರಸೀಪುರದ ವಿದ್ಯೋದಯ ಕಾಲೇಜಿನಲ್ಲಿನ ಪ್ರಕರಣ ಇತಿಹಾಸವನ್ನೇ ನಿರ್ಮಿಸಿತು. ಆ ಸಂದರ್ಭದಲ್ಲಿ ಪಟ್ಟಾಭಿಯ ಹೆಸರೂ ಖ್ಯಾತಿ ಪಡೆಯಿತು! ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳನ್ನು ಆಂಗ್ಲ ವಿಷಯದಲ್ಲಿ ಅನರ್ಹರಾಗಿದ್ದರೂ ಪಾಸು ಮಾಡಲೇಬೇಕೆಂಬ ಒತ್ತಾಯವನ್ನು ಕಾಲೇಜಿನ ಆಡಳಿತ ಮಂಡಳಿಯವರು ಹೇರಿದಾಗ ಪಟ್ಟಾಭಿ ಬಲವಾಗಿ ವಿರೋಧಿಸಿದನು.

somayaji sir
ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ

“ವಿಶೇಷ ತರಗತಿಗಳನ್ನು ತೆಗೆದುಕೊಂಡು ಪಾಠ ಮಾಡಲು ನಾನು ಸಿದ್ಧ, ಆದರೆ ಕನಿಷ್ಠ 05 ಅಂಕಗಳನ್ನು ತೆಗೆದುಕೊಳ್ಳದವರಿಗೆ ಅಂಕವನ್ನು ನಾನು ತುಂಬಲಾರೆ. ವಿದ್ಯಾರ್ಥಿಗಳಿಗೆ ನಾನು ಮಾಡುವ ದ್ರೋಹ ಇದು” ಬೆದರಿಕೆಗಳಿಗೆ ಜಗ್ಗದೆ ಕಟು ನಿಷ್ಠುರ ನಿಲುವು ತಳೆದನು. ಕೋರ್ಟಿನ ಮೆಟ್ಟಿಲೂ ಹತ್ತಬೇಕಾಯಿತು.

ಉದ್ಯೋಗದ ಅಗತ್ಯವಿದ್ದಾಗಲೂ, ಅದಕ್ಕೂ ಸಿದ್ಧನಾದನು. ನ್ಯಾಯಾಧೀಶರು “ಹಳ್ಳಿ ಹುಡುಗರು, ಇಂಗ್ಲೀಷ್ ಬರಲ್ಲ, ನೋಡಪ್ಪ ಪಾಪದವರು” ಎಂದಾಗ “ಈ ರೀತಿಯ ಅನುಕಂಪ, ಅವರನ್ನು ಇನ್ನಷ್ಟು ದುರ್ಬಲಗೊಳಿಸುತ್ತೆ. ಅವರು ಯಾರೂ ಪೆದ್ದರಲ್ಲ. ಸೂಕ್ತ ರೀತಿಯ ಶಿಕ್ಷಣ ದೊರೆಯದೆ ಹೀಗಾಗುತ್ತಿದೆ. ಸಂಬಳ ರಹಿತವಾಗಿ ವಿಶೇಷ ತರಗತಿಗಳನ್ನು ನಾನು ಮಾಡಲು ಸಿದ್ಧ. ತರಬೇತಿಯನ್ನು ನೀಡುತ್ತೇನೆ, ಅಂಕಗಳನ್ನು ನಾನು ಪಡೆದುಕೊಂಡೆ ಎಂಬ ಆತ್ಮವಿಶ್ವಾಸ ವಿದ್ಯಾರ್ಥಿಗಳಿಗೆ ಅಗತ್ಯ. ಹಾಗೆ ಮಾಡುವುದು ಅಧ್ಯಾಪಕರ ಕರ್ತವ್ಯ, ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ. ಸುಮ್ಮನೆ ಅಂಕ ತುಂಬಿ, ಪಾಸು ಮಾಡಿ ಅವರನ್ನು ಅಭಿಮಾನ ಶೂನ್ಯರಾಗಿ ಮಾಡಿ ಕೀಳರಿಮೆಯಲ್ಲಿ ನರಳುವಂತೆ ಮಾಡುವುದಲ್ಲ. ನನ್ನ ಕರ್ತವ್ಯಕ್ಕೆ ನಾನು ಬದ್ಧ” ಎಂದು ವಾದಿಸಿದನು.

ಕೇಸ್‌ನಲ್ಲಿ ಜಯಶಾಲಿಯೂ ಆದನು. ನುಂಗಲಾರದ ಬಿಸಿ ತುತ್ತಾದ ಪಟ್ಟಾಭಿಯನ್ನು ಆಡಳಿತ ಮಂಡಳಿಯವರು ರಾಜೀನಾಮೆ ಕೊಡುವಂತೆ ಮಾಡಿದರು. ಅದಕ್ಕೊಂದು ಹಿನ್ನಲೆಯೂ ಇತ್ತು.

ಪಟ್ಟಾಭಿ ಮೌಲ್ಯಮಾಪನ ಮಾಡಿದ ಉತ್ತರಪತ್ರಿಕೆಗಳನ್ನು, ತಮ್ಮೆದುರು ದನಿ ಎತ್ತದ ಇನ್ನೊಬ್ಬ ಅಧ್ಯಾಪಕನ ಕೈಯಲ್ಲಿ ಮೌಲ್ಯಮಾಪನ ಮಾಡಿಸಿ, ಎಲ್ಲರನ್ನು ಪಾಸು ಮಾಡಿಸಿದರು. ತಾತ್ವಿಕವಾಗಿ ಇದನ್ನು ವಿರೋಧಿಸಿ ರಾಜೀನಾಮೆ ನೀಡಿ ಬರೀ ಕೈಯಲ್ಲಿ ಹಸಿದ ಹೊಟ್ಟೆಯಲ್ಲಿ ಪಟ್ಟಾಭಿ ಉದ್ಯೋಗ ಬಿಟ್ಟನು.

ಈ ಸುದ್ದಿ ಓದಿದ್ದೀರಾ? ಸಾಮಾಜಿಕ ಹೋರಾಟಗಾರ, ನಿವೃತ್ತ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ಇನ್ನಿಲ್ಲ

ಅವನನ್ನು ಬಲ್ಲವರು, ಸ್ನೇಹಿತರು ಕೂಡ ಆ ಸಂದರ್ಭದಲ್ಲಿ ಆತನನ್ನು ವ್ಯಂಗ್ಯವಾಗಿ ಟೀಕಿಸಿದ್ದರು. ಅಹಂಕಾರಿ, ಹಠಮಾರಿ, ಮೊಂಡ, ಕೆಲಸ ಬಿಟ್ಟ ಹುಚ್ಚ- ಹೀಗೆ ಏನೇನೋ! ಆದರೆ ಈ ಬಗ್ಗೆ ಪಟ್ಟಾಭಿಗೆ ಪಶ್ಚಾತ್ತಾಪ ಇಲ್ಲ.

ur a and pattabi
ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯು.ಆರ್.ಅನಂತಮೂರ್ತಿ

ನೋವು ಕೊಟ್ಟ ಮತ್ತೊಂದು ಪ್ರಸಂಗ: ಯು.ಆರ್.ಅನಂತಮೂರ್ತಿಯವರಿಗೆ ಪಟ್ಟಾಭಿ ಬಗ್ಗೆ ಅಪಾರ ನಂಬಿಕೆ, ಅಭಿಮಾನ, ಪಟ್ಟಾಭಿ ನನ್ನ ಮಾನಸ ಪುತ್ರ ಎನ್ನುತ್ತಿದ್ದರು. ಅವನ ಹರಿತವಾದ ಗ್ರಹಿಕೆ, ಸೂಕ್ಷ್ಮ ಒಳನೋಟ, ಭಾಷಾ ಬಳಕೆ ಬಗ್ಗೆ ಹೆಮ್ಮೆಯಿತ್ತು. “ನೋಡಲು ಸಣಕಲ ಕಡ್ಡಿ, ಆದರೆ ಅವನ ಮಾತು, ವಿಚಾರ ಎಲ್ಲವೂ ಬಹಳ ತೂಕ” ಎನ್ನುತ್ತಿದ್ದರು. ಅವರು ಸ್ವರಾಜ್ ಬರೆಯುವಾಗ ಆಗಲೇ ಅವರ ಆರೋಗ್ಯ ಸಾಕಷ್ಟು ಹಾಳಾಗಿತ್ತು. ಡಯಾಲಿಸಿಸನ್ನು ಮನೆಯಲ್ಲೇ ಮಾಡಿಕೊಳ್ಳುತ್ತಿದ್ದರು. ಕೆಲವೊಮ್ಮೆ ಪಟ್ಟಾಭಿಗೆ ಫೋನ್ ಮಾಡಿ ‘ನಾಳೆ ಬರ್ತಿಯಾ’ ಎನ್ನುತ್ತಿದ್ದಂತೆ, ಅವ ರಾತ್ರೋರಾತ್ರಿ ಮಂಗಳೂರಿನಿಂದ ಹೊರಟು ಬಂದು ಮೇಷ್ಟ್ರ ಜೊತೆ ಚರ್ಚೆ, ಮಾತುಕತೆ ನಡೆಸಿ ಅಂದೇ ಹಿಂದಿರುಗುತ್ತಿದ್ದ. ಆಗ ಅವರಿಬ್ಬರ ಆದ್ಯತೆ ಸ್ವರಾಜ್ ಆಗಿತ್ತು. ಮೇಷ್ಟ್ರು ‘ಸ್ವರಾಜ್’ ಬರೆಯುವಾಗ ಪ್ರತಿ ಪುಟವನ್ನೂ ಅವನಿಗೆ ಮೇಲ್ ಮಾಡುತ್ತಿದ್ದರು.

“ಇಂಗ್ಲೀಷ್‌ಗೆ ಅನುವಾದಿಸಿ ಕಳುಹಿಸು” ಎಂದಿದ್ದರು. ಪ್ರತಿದಿನವೂ ವೃತದಂತೆ ತಪ್ಪದೆ ಶಿರಸಾವಹಿಸಿ ಮಾಡಿದ, ಅದಕ್ಕಾಗಿ ಒಂದು ವರ್ಷ ಸಿದ್ಧತೆಯನ್ನೂ ಮಾಡಿಕೊಂಡಿದ್ದ, ನಿತ್ಯವೂ ಗಂಟೆಗಟ್ಟಲೆ ದೂರವಾಣಿಯ ಮೂಲಕ ಅವರಿಬ್ಬರ ಮಾತುಕತೆ, ಚರ್ಚೆ ನಡೆಯುತ್ತಲೇ ಇತ್ತು. ಇದರ ಪರಿಣಾಮ- ಕರ್ನಾಟಕದಲ್ಲೇ ಏಕೆ ಭಾರತದಲ್ಲೇ ಗಾಂಧಿ ಚಿಂತನೆಗಳ ಬಗ್ಗೆ, ಸ್ವರಾಜ್ ಬಗ್ಗೆ, ದೇಶಿ ಬಗ್ಗೆ ಅಧಿಕೃತವಾಗಿ ಮಾತನಾಡುವುದರಲ್ಲಿ ಅಗ್ರಗಣ್ಯ ಪಟ್ಟಾಭಿ. ಏನಾಯಿತು, ಹೇಗಾಯಿತು ಗೊತ್ತಿಲ್ಲ. ಮೇಷ್ಟ್ರು ಅಳಿದ ನಂತರ ಅನುವಾದ ಕಾರ್ಯವನ್ನು ಮತ್ತೊಬ್ಬರು ಯಾರೋ ಮಾಡಿದರು. ಪಟ್ಟಾಭಿ ನೊಂದುಕೊಂಡಿದ್ದರೂ ನಮ್ಮ ಬಳಿ ಏನೂ ಹೇಳಿಕೊಳ್ಳಲಿಲ್ಲ. ಅವನದ್ದು ಬಹಳ ದೊಡ್ಡ ಗುಣ.

ಪಟ್ಟಾಭಿ
‘ಒಡಲು;ಒಡನಾಡಿಗಳ ಒಡಲಾಳ’ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಪ್ರೊ. ಪಟ್ಟಾಭಿರಾಮ ಸೋಮಯಾಜಿ

ದುಷ್ಟ ವಿಚಾರಗಳನ್ನು, ಆಚಾರಗಳನ್ನು ಸಾರ್ವಭೌಮತ್ವ ಪ್ರವೃತ್ತಿಯನ್ನು, ಭ್ರಷ್ಟಾಚಾರವನ್ನೂ, ಸಾಮಾಜಿಕ ಪೀಡನೆಗಳನ್ನೂ ಬಲವಾಗಿ ಪ್ರತಿಭಟಿಸುತ್ತಿದ್ದರು, ನಿಜ. ಅಂತಹ ವಿಚಾರಗಳ ಬಗ್ಗೆ ಅವನ ವಿರೋಧ ಬಲವಾಗಿತ್ತು. ಆದರೆ ವ್ಯಕ್ತಿಗಳ ಬಗ್ಗೆ ಅಲ್ಲ. ಯಾವ ವ್ಯಕ್ತಿಯನ್ನೂ ಅವನು ದ್ವೇಷಿಸುತ್ತಿರಲಿಲ್ಲ. ಜನ ವಿರೋಧಿ ಚಟುವಟಿಕೆಗಳ ವಿರುದ್ಧದ ಹೋರಾಟ ನಡೆಸುತ್ತಿದ್ದನು. ಒಬ್ಬಂಟಿಯಾಗಿಯೇ ಧರಣಿ ಕೂರುತ್ತಿದ್ದನು! ಸತ್ಯ-ಪ್ರಾಮಾಣಿಕತೆ ಇವೆರಡೂ ಅವನ ಉಚ್ವಾಸ- ನಿಶ್ವಾಸ! ತನಗೊಲ್ಲದ ಯಾವ ಕೆಲಸವನ್ನೂ ಅವ ಮಾಡುತ್ತಿರಲಿಲ್ಲ. ಆದರೆ ಒಪ್ಪಿಕೊಂಡ ಕೆಲಸವನ್ನು ಪರಿಪಾಲಿಸುತ್ತಿದ್ದ, ಯಾರಿಂದಲೂ ಏನನ್ನೂ ನಿರೀಕ್ಷಿಸುತ್ತಿರಲಿಲ್ಲ.

ಅಪ್ಪಟ ಗಾಂಧಿವಾದಿ, ತನ್ನ ಬಟ್ಟೆ ತಾನೆ ಒಗೆದುಕೊಳ್ಳುತ್ತಿದ್ದ. ಹೊಸ ಹೊಸ ವಿಚಾರಗಳ ಬಗ್ಗೆ ಚಿಂತನೆಗಳ ಬಗ್ಗೆ ಹಸಿದುಕೊಂಡಿರುತ್ತಿದ್ದ, ಸದಾ ಯಾವುದೋ ವಿಚಾರದ ಗುಂಗಿನಲ್ಲಿರುತ್ತಿದ್ದ, ಬೇಂದ್ರ ಅಡಿಗರ ಪದ್ಯ ಪ್ರಿಯ, ಬೇಂದ್ರೆಯವರ ‘ಚಹಾದ……’ ಪದ್ಯದ ಬಗ್ಗೆ ಅವ ಬರೆದ ಲೇಖನ ಮೌಲಿಕವಾದುದು. ವಚನ ಸಾಹಿತ್ಯದ ಬಗ್ಗೆ ಮತ್ತು ಲೋಹಿಯಾ, ಅಂಬೇಡ್ಕರ್, ರಾಯ್ ಬಗ್ಗೆ ಅವನ ಓದು ತಿಳಿವಳಿಕೆ ಅಪಾರ.

ಆಂಗ್ಲ ಸಾಹಿತ್ಯದ ಬಗ್ಗೆಯೂ ಅಷ್ಟೇ. ಮೈಮರೆತು ಪಾಠ ಮಾಡುತ್ತಿದ್ದ, ಮಾತನಾಡಲು ಅವನಿಗೆ ತರಗತಿಗಳೇ ಆಗಬೇಕಾಗಿರಲಿಲ್ಲ, ವಿದ್ಯಾರ್ಥಿಗಳ ಪ್ರಿಯ ಮೇಷ್ಟ್ರು ಇವನು. ಅವರಿಗಾಗಿಯೇ, ಅವರಿಂದಲೇ ನಾನು ಬದುಕಿರುವುದು ಎನ್ನುವಂತಿದ್ದನು. ದೃಷ್ಟಿಕೋನದಲ್ಲಿ ತಾಜಾತನ, ಮಾನಸಿಕ ಧೈರ್ಯ, ಚೈತನ್ಯ ಅವನ ಪಾಲಿನ ನೈತಿಕ ಊರುಗೋಲು, ಕೃಶ ಕಾಯಕ್ಕೆ, ಅದಮ್ಯ ಧೀಶಕ್ತಿಯ ದೃಢ ಮನಸ್ಸಿನ ತಳಪಾಯವಿತ್ತು. ಅಸ್ಮಿತೆ ಕಳೆದುಕೊಳ್ಳದೆ ಎಲ್ಲ ರೀತಿಯ ಇಕ್ಕಟ್ಟು ಬಿಕ್ಕಟ್ಟುಗಳನ್ನು ಯಾವ ಹೊಂದಾಣಿಕೆ ಮಾಡಿಕೊಳ್ಳದೆ, ಎದುರಿಸಿದ ದಿಟ್ಟ ನಿಲುವಿನ ಪ್ರಜ್ಞಾ ಹೃದಯವಂತ ಪಟ್ಟಾಭಿ, ಒಲ್ಲದ್ದಕ್ಕೆ ಎಂದೂ ಬೆನ್ನು ಬಾಗಿಸದ ವಿನೀತ! ಏಕಾಂತವಾಸ, ಆಘಾತಗಳು, ಒತ್ತಡಗಳಿಂದಾಗಿ ಧೂಮಪಾನ, ಕುಡಿತ ಅತಿಯಾಗಿ ರೂಢಿಸಿಕೊಂಡ, ಆರೋಗ್ಯ ಮತ್ತು ಖಾಸಗಿ ಬದುಕನ್ನೂ ಹಾಳುಮಾಡಿಕೊಂಡ.

g rajashekhar and pattabhi 2
ಸಾಮಾಜಿಕ ಹೋರಾಟಗಾರ ಜಿ ರಾಜಶೇಖರ್ ಅವರೊಂದಿಗೆ ಪಟ್ಟಾಭಿ

ತಾತ್ವಿಕವಾಗಿ ಭಾರತದ ರಾಷ್ಟ್ರೀಯ ಆಂದೋಲನದ ಸುಧಾರಕರ ಚಳವಳಿ, ಪಾಶ್ಚಾತ್ಯ ವೈಜ್ಞಾನಿಕ ಚಿಂತನೆ, ಸಮಾಜ ಮುಖಿಯಾದ ಸಾಹಿತ್ಯದ ಓದು ಇವೆಲ್ಲದರಿಂದಲೂ ಒಟ್ಟಾಗಿ ಪ್ರೇರಣೆ ಪಡೆದ ಅಪೂರ್ವ ಚಿಂತಕ, ನಿಷ್ಠುರ ನಿಲುವಿನ ಪಟ್ಟಾಭಿಯ ಚಿಂತನೆಯ ನೆಲೆ ಇರುವುದು ಮಾನವೀಯ ವೈಜ್ಞಾನಿಕ ದೃಷ್ಟಿಯಲ್ಲಿ. ಅವನೊಬ್ಬ ಮಾಮೂಲಿ ಬುದ್ದಿಜೀವಿಯಾಗಿರಲಿಲ್ಲ. ಓದಿನ ಹಸಿವು, ಲೋಕದ ಜ್ಞಾನವನ್ನೆಲ್ಲ ತಿಳಿಯಬೇಕೆನ್ನುವ ವಿದ್ಯಾದಾಯಿ. ವಿಷಯ ಪೂರ್ಣ ಅರಿವಾಗುವವರೆಗೂ ಆ ಬಗ್ಗೆ ಮಾತನಾಡುತ್ತಿರಲಿಲ್ಲ. ಬೇಂದ್ರೆ, ಅಡಿಗರ ಪದ್ಯದ ಬಗ್ಗೆ ಮಾತನಾಡತೊಡಗಿದರೆ, ಅದೊಂದು ದೃಶ್ಯ ಕಾವ್ಯವಾಗುವುದರ ಜೊತೆಗೆ ಕಾವ್ಯಾನುಭವದ ರಸದೌತಣವಾಗುತ್ತಿತ್ತು.

ಬುಸುಗುಟ್ಟುವುದು ಪಟ್ಟಾಭಿಗೆ ಗೊತ್ತಿತ್ತೇ ವಿನಹ ಕಚ್ಚುವುದು ಗೊತ್ತೇ ಇರಲಿಲ್ಲ. ಬುಸುಗುಟ್ಟುವುದು ಕೂಡಾ ಅವನ ಸ್ವರಕ್ಷಣೆಗೆ, ಇಲ್ಲವಾದರೆ ಹೊಟ್ಟೆಬಾಕ ಸಂಸ್ಕೃತಿ ಎಂದೋ ಅವನನ್ನು ಹೊಸಕಿ ಹಾಕುತ್ತಿತ್ತು. ಯಾರ ಯಾವ ಕೃಪಾಕಟಾಕ್ಷವಿಲ್ಲದೆ ಏಕಾಂಗಿಯಾಗಿಯೇ ವಿರುದ್ಧ ದಿಕ್ಕಿನಲ್ಲಿ ಈಸುತ್ತ ದಡ ಸೇರಿದ್ದಾನೆ ಪಟ್ಟಾಭಿ.

ನನಗೀಗಲೂ ಪಟ್ಟಾಭಿ ಶಾಪಗ್ರಸ್ತ ದೇವತೆ, ಮನದಾಳ ಅರಿಯಬಲ್ಲ ಗೆಳೆಯ-ಆಪ್ತ. ನಮ್ಮ ಪ್ರೀತಿಯ ‘ಮೇಷ್ಟ್ರು’ ಯೂ.ಆರ್. ಅನಂತಮೂರ್ತಿಯವರ ಮಾನಸ ಪುತ್ರ.

ಸರ್ವಮಂಗಳಾ

ಪಟ್ಟಾಭಿ ಉಪನ್ಯಾಸಕರಾಗಿ ನಿವೃತ್ತಿ ಹೊಂದಿದ ಸಂದರ್ಭದಲ್ಲಿ, ಪಟ್ಟಾಭಿ ಅವರನ್ನು ಬಲ್ಲ ಸ್ನೇಹಿತರು, ಹಿತೈಷಿಗಳು, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಸೇರಿ ಹೊರತಂದ 'ಒಡಲು; ಒಡನಾಡಿಗಳ ಒಡಲಾಳ' ಎಂಬ ಪುಸ್ತಕದಲ್ಲಿನ ಬರಹ. 
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಇಂದಿನ ಸಮಾಜಕ್ಕೆ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಅವಶ್ಯಕತೆ ಇದೆಯೇ?

ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ...

ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ: ‘Gen-Z’ ಪ್ರತಿಭಟನೆಯ ಭೀತಿ ಕಾರಣವೇ?

ಸರ್ಕಾರದ ವಯೋಮಿತಿ ಸಡಿಲಿಕೆ ದಿಢೀರ್ ನಿರ್ಧಾರಕ್ಕೆ, ಯುವಜನರ 'ಝೆನ್‌-ಜೆಡ್‌' ಪ್ರತಿಭಟನೆ ಕಾರಣವಾಗಿರಬಹುದೇ?...

Download Eedina App Android / iOS

X