‘ಹೊಯಿಸಳ’ ಅವರ ಕತೆ | ಭಯನಿವಾರಣೆ

Date:

Advertisements
ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಭಯ, ದಿಗಿಲು, ಅಂಜಿಕೆ, ಹೆದರಿಕೆ- ಇವು ಎಲ್ಲವೂ ಒಂದೇ ಭಾವದ ಶಾಖೋಪಶಾಖೆಗಳು. ಯಾವಾಗ್ಗೆ ಮನುಷ್ಯನಲ್ಲಿ ಭಯವು ಹುಟ್ಟಿತೋ ಆಗ್ಗೆ ಮನುಷ್ಯನು ಮೃತನಂತೆ.

‘ಭಯೇ ವ್ಯಾಪಿಲೇ ಸರ್ವ ಬ್ರಹ್ಮಾಂಡ ಆಹೇ।
ಭಯಾತೀತ ತೇ ಸಂತ ಆನಂದ ಪಾಹೇ।।’

ಹೀಗೆಂದು ರಾಮಸಮರ್ಥರು ಶ್ರೀಶಿವಾಜಿಗೆ ಹೇಳಿದ್ದಾರೆ. ಭಯಾತೀತನಾಗಬೇಕು, ಆನಂದ ಬರಲು ಬಯಸಿದರೆ!” ಹೀಗೆಲ್ಲಾ ಹೇಳಿದ ರಾಣೋಜೀರಾಯ. ಸುಂದರ ತರುಣಿ ಆತನ ಸತಿ ಎಲ್ಲಮ್ಮ ಕೇಳಿದಳು. ನೀಳವಾಗಿ ನಿಂತಿದ್ದವಳು ಸರ್‍ರನೆ ಆತನ ಕಡೆಗೆ ಸರಿದು ಬಂದು ಅವನ ಕೈಲಿದ್ದ ಪುಸ್ತಕವನ್ನು ಕಿತ್ತು ಬಿಸಾಟು ಮಲ್ಲಿಗೆಯ ಅಂಟಾಗಿ ಒಲಿದೊಲಿದು ಆತನ ಮೈಗೆಲ್ಲ ಹಬ್ಬಿಕೊಂಡಳು.

“ನೋಡಿ! ನಿಮ್ಮಂಥ ಕೊಲೆಘಾತುಕರನ್ನೇ ತಬ್ಬಿಕೊಂಡು ಹಣ್ಣು ಮಾಡಿಬಿಟ್ಟೆ- ಕ್ರೂರ ಯುದ್ಧದಲ್ಲಿ! ನನಗೆಲ್ಲಿಯ ಭಯ? ಎಂಥೆಂಥವರ ಎದೆಯಲ್ಲೂ ಭಯ ಹುಟ್ಟಿಸುವ ಮೃಗರಾಜ ಸಿಂಹವನ್ನು ಬೆನ್ನು ತಟ್ಟಿ ಎಬ್ಬಿಸಿ- ಅದು ‘ಆಂ’ ಎಂದು ಆರ್ಭಟಿಸಿದಾಗ ಅದರ ಬಾಯೊಳಗೆ ಕೈ ಹೊಗಿಸಿ ಅದರ ಹೃದಯವನ್ನು ಕಿತ್ತು ತೆಗೆಯುವ ನಿಮ್ಮಂಥವರನ್ನು ಮಿದುವು ಮಾಡುವ ಶಕ್ತಿ ನನಗೆ ಇದೆ. ಭಯವೆಲ್ಲಿಯದು ನನಗೆ? ನಿಮ್ಮನ್ನು ಅಂಜಿಸುವ ಬೆಂಕಿಯನ್ನು ನಾನು ಹೇಗೆ ಇಟ್ಟಾಡಿಸುವೆನು ನೋಡಿರಿ. ಯಾವಾಗ ಏನು ಹುರಿ-ಕರಿ-ಬೇಯಿಸೆಂದರೆ- ಅವೆಲ್ಲ ತತ್‌ಕ್ಷಣವೇ ಮಾಡುವುದಿಲ್ಲವೇ? ಆ ಬೆಂಕಿ-ನನ್ನ ಅಡಿಯಾಳಾಗಿ!”

ಈ ಮಾತಿಗೆ ರಾಣೋಜಿ ‘ಜಾಣೆಯೇ ಸರಿ ನನ್ನಾಕೆ! ತಬ್ಬಿಕೊಂಡು ತಬ್ಬಿಬ್ಬು ಮಾಡಿದೆ. ಫಣಿವೇಣಿಯಿಂದ ಕೈಗಳನ್ನು ಬಿಗಿದುಬಿಟ್ಟೆ. ಈಗ ನೆಟ್ಟ ದಿಟ್ಟಿಯಿಂದ ನನ್ನ ಎದೆಯನ್ನು ಚುಚ್ಚುತಲಿರುವೆ- ಸರಿ, ಎನ್ನು- ಆದರೆ ಹೀಗೇ, ಇಂಥಾದ್ದೇ, ಒಂದು ಸರ್ಪ ಬಂದಿತು ಎನ್ನೋಣ-ನಿನ್ನ ಮೈಗೆ ಹೀಗೆ ಸುತ್ತಿತು ಎನ್ನೋಣ- ಆಗ?”

ಎಲ್ಲಮ್ಮ: “ಮಾಡುವುದೇನು? ನೀವು ಇರುತ್ತೀರಲ್ಲ ಹತ್ತಿರ. ಚಾಕು ಬಿಚ್ಚಿ ಪಡುವಲ ಕಾಯಿ ಹೆಚ್ಚಿದಂತೆ ಹೆಚ್ಚಿಬಿಡಿ ಎನ್ನುವೆನು. ನೀವು…”

ರಾಣೋಜಿ: ”ಆಹಾ, ನಾನಿರಲಿಲ್ಲ ಎಂದುಕೋ”

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

ಎಲ್ಲಮ್ಮ: “ನಿಮ್ಮನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಕಂಡಿರ!”

ರಾಣೋಜಿ: ”ಮಸಲ, ದೊಡ್ಡ ಆನೆ ಬಂತು! ಸೊಂಡಿಲು ಅಲ್ಲಾಡಿಸುತ್ತಾ- ಹೆಜ್ಜೆ ಹೆಜ್ಜೆಗೂ ಭೂಮಿಯನ್ನು ನಡುಗಿಸುತ್ತಾ- ಬಂದಿತು ಎಂದುಕೋ. ಆಗ್ಗೆ!”

ಎಲ್ಲಮ್ಮ “ಸೊಂಡಿಲು ಒಳಗೆ ಕಟ್ಟಿರುವೆಯಾಗಿ ಹೋಗಿ ಕಚ್ಚುವೆನು. ಆಗ ಎಂತಿದ್ದರೂ ಸತ್ತೇ ಸಾಯುವುದು.”

ರಾಣೋಜಿ: ”ಹೀಗೆಲ್ಲಾ ಅಡ್ಡಾದಿಡ್ಡಿಯಾಗಿ ಮಾತಾಡಲಿಕ್ಕೇ ಸರಿ. ಎಲ್ಲಿ ಹೇಳು. ಉತ್ತರಕ್ಕುತ್ತರ ಸರಿಯಾಗಿ ಹೇಳಬೇಕು. ಹೂ!”

“ಹೂಂ ಕೇಳುವಂಥವರಾಗಿ. ಹೆದರುವರಾರು!” ಎಂದು ಉತ್ತರ ಕೊಡಲು ಸಿದ್ದಳಾದ ಕಾಂತೆಯು ತನ್ನ ಅರಳೇಪೇಟೆ ಸೀರೆ ನೆರಿಗೆಯನ್ನು ನವಿಲು ಬಾಲದಂತೆ ಕೆದರಿಕೊಂಡು ಕುಳಿತಳು. ಹೇಳಿ ನೇಯಿಸಿಕೊಂಡದ್ದು ಆ ಸೀರೆ. ಬೆಂಗಳೂರಿನದು. ಸೆರಗಿನಲ್ಲಿ ಮೋಡ ಮುಸುಕಿದ ಆಕಾಶ. ಒಡಲೆಲ್ಲ ಜರತಾರಿ ನವಿಲು ಕಣ್ಣು. ಯಾವ ಹೆಂಗಸೂ ಎಂದೂ ಉಡದಂಥ ಸೀರೆ.

ಇದನ್ನು ಓದಿದ್ದೀರಾ?: ‘ಕ್ಷೀರಸಾಗರ’ ಅವರ ಕತೆ | ನಮ್ಮೂರಿನ ಪಶ್ಚಿಮಕ್ಕೆ

ರಾಣೋಜಿ ಚಪ್ಪಾಳೆ ತಟ್ಟಿಕೊಂಡು ಕುಣಿದುಬಿಟ್ಟ. ”ಯಾಕೇಂದ್ರೆ ಇದೇನು ಕುಣಿತ!” ”ಸಿಂಹದ ಮೇಲೆ ನವಿಲು ಕುಳಿತುಬಿಟ್ಟಿದೆ. ಹಾ, ಹಾಹಾ!” ಎಂದು ಮತ್ತೆ ಕುಣಿದ. ಚಪ್ಪಾಳೆ ತಟ್ಟಿದ. ಎಲ್ಲಮ್ಮ ತಿರುಗಿ ನೋಡಿದಳು. ಹೌಹಾರಿ ಬೆದರಿ ಎದ್ದೋಡಿದಳು. ಸಿಂಹದ ತಲೆಯ ಮೇಲೆ ಕುಳಿತುಬಿಟ್ಟಿದ್ದಳು ಆಕೆ. ರಾಣೋಜಿ ತತ್‌ ಕ್ಷಣವೇ ಮೇಜಿನ ಮೇಲಿದ್ದ ಬಂದೂಕನ್ನು ತೆಗೆದು ಕೈಲಿ ಕೊಡಹೋದನು. ”ಹಿಡಿ! ಶೂರಾಗ್ರಣೀ, ಇದು ಬಾರುಮಾಡಿದ ಬಂದೂಕು. ಹೊಡೆದು ಕೊಂದುಬಿಡು ಆ ಸಿಂಹವನ್ನು! ಹೀಗೆ ಹಿಡಿ, ಗುರಿ ಇಡು, ಕುದುರೆ ಎಳಿ, ಸುಟ್ಟುಬಿಡು- ಆ ಸಿಂಹವನ್ನು. ಅಬ್ಬಬ್ಬ ಎಷ್ಟೊಂದು ಧೈರ್ಯ ಆ ಕರುಳಿಲ್ಲದ ಸಿಂಹಕ್ಕೆ?”

ಎಲ್ಲಮ್ಮ ಸಿಟ್ಟಾದಳು. ಆ ಸಿಟ್ಟು ಅವಳ ಸೌಂದರ್ಯವನ್ನು ಇನ್ನೂ ಹೆಚ್ಚಿಸಿತು. ಝರಿಯು ಜಲಪಾತವಾದ ಹಾಗೆ! “ಕರುಳೂ ಇಲ್ಲ, ಎದೆಯೂ ಇಲ್ಲ. ನೀವು ಇಂಥ ಸತ್ತ ಸಿಂಹಗಳನ್ನೆಲ್ಲ ತಂದಿಟ್ಟು-ನಿಮ್ಮ ಕೋಣೆಯ ಸೌಂದರ್ಯವನ್ನೆಲ್ಲ ಕೊಂದೇಬಿಟ್ಟಿದ್ದೀರಿ. ಇಷ್ಟಕ್ಕೆಲ್ಲ ಹೆದರಲೇಕೆ?” ರಾಣೋಜಿ ”ಹೌದೌದು! ನೀನೀಗ ನೋಡು, ಅಂಜಿಲ್ಲ, ನಿನ್ನ ಮೈ ನಡುಗಲಿಲ್ಲ. ಕಣ್ಣುಗಳಲ್ಲಿ ನೀರೂ ಸಹ ತುಂಬಿಲ್ಲ. ಪಾಪ! ಆ ಸಿಂಹವೇ ತಾನೆ, ನಿನ್ನ ಸೋಂಕಿಗೆ ಸತ್ತು ಒಣಗಿ ಚರ್ಮವಾಗಿ ಹೋಗಿಬಿಟ್ಟಿದೆ.” ಎಲ್ಲಮ್ಮನೇನೂ ಹೇಳಲಿಲ್ಲ. ಗೇರುಸೊಪ್ಪೆ ಜಲಪಾತದ ಚಿತ್ರವೊಂದನ್ನು ನೋಡುತ್ತ ನಿಂತಳು.

ಮತ್ತೆ ರಾಣೋಜಿಯೇ ಆಕೆಯ ಹತ್ತಿರಕ್ಕೆ ನಡೆದನು. “ಬಾ ಹೆಣ್ಣೆ! ನನ್ನ ಪ್ರಯತ್ನವೆಲ್ಲ ವ್ಯರ್ಥವಾಯಿತು. ಹೆಂಗುಸಲ್ಲವೆ ನೀನು! ವೀಣೆ ಹಿಡಿಯುವುದೇ ಹೆಚ್ಚಿನ ಕೆಲಸ ನಿನ್ನದು. ಬಾರಿಸು ನಿನ್ನ ವೀಣೆ. ಭಯ, ಭ್ರಾಂತಿ ಹೋಗಲಿ. ಸೆರಗು ಹೊದ್ದಿಸಲಾದರೂ ಹತ್ತಿರ ಬರಬಹುದೇ ರಾಣೀ ಸಾಹೇಬರೇ! ಚಂಚು! ಇವರಿಗೆ ಸಂಗೀತ ಮಂದಿರದ ದಾರಿ ತೋರಿಸು.”

ಇದನ್ನು ಓದಿದ್ದೀರಾ?: ಟೇಂಗ್ಸೆ ಗೋವಿಂದರಾವ್ ಅವರ ಕತೆ | ಗಂಗೆಯ ಗುತ್ತಿಗೆ

ಎಲ್ಲಮ್ಮ ಕಸರಿಕೊಂಡು ಹಿಂತಿರುಗಿದಳು. “ಸಂಗೀತ ಮಂದಿರವಂತೆ, ನಾಟ್ಯಶಾಲೆ ಯಾಕಾಗಬಾರದು! ಮೃತ್ಯುವಿಗೆ! ನೆಟ್ಟಗೊಂದು ಅಡುಗೆಮನೆಯಿಲ್ಲ ನನ್ನ ಭಾಗ್ಯಕ್ಕೆ ಈ ಕಾಡಲ್ಲಿ! ನಮ್ಮ ದೇಶದ ಗೊಂಡಾರಣ್ಯವೇ ವಾಸಿ. ದೇಶವಲ್ಲದ ದೇಶ! ಕಾಡಲ್ಲದ ಕಾಡು. ಇಂಥಾ ಬಳಿಗೆ ಹೊತ್ತು ತಂದಿದ್ದೀರಿ ನನ್ನ. ಸೀತಮ್ಮನವರಿಗಾದರೂ ಇಷ್ಟು ಕಷ್ಟವಿತ್ತೋ ಇಲ್ಲವೋ ಆ ಕಾಡಲ್ಲಿ! ಆ ಲಂಕೆಯಲ್ಲಿ! ಊಳಿಗಕ್ಕೆ ಈ ನೀಗ್ರೊ ರಾಕ್ಷಸರು. ನರಭಕ್ಷಕರು! ಈ ನನ್ನ ಬಾಳಿನ ಬಳಗಕ್ಕೆ ಪೀತಾಂಬರದ ಸಿಂಗವ್ವ, ಬೇಂಗಟೇ ಬೇತಾಳ ಜಿರಾಫೆ, ಕೋಡುಮುಸುಡಿ ಎಮ್ಮೆ. ಓಹೋಹೋ ಏನೂಂತ ಕೊಚ್ಚಿಕೊಳ್ಳುವಿರಿಂದ್ರೇ! ನಿಮ್ಮ ಹೆಮ್ಮೆ ಹಲಸಿನ ಕಾಯಿ!”

ಭಯ ನಿವಾರಣೆ1 1

ಇಷ್ಟೆಂದ ಮೇಲೆ ಸಹ ಕೋಪ ಮಾಡದಿದ್ದರೆ ಅವನೆಂಥಾ ಗಂಡಸು! ರಾಣೋಜಿಗೆ ತನ್ನ ದೇಶದ ನೆನಪು ಬಂತು. ಕಿಟಕಿಯಿಂದಾಚೆ ನೋಡುತ್ತ ನಿಂತ. ಹೇಳಿದ, ”ನಿನ್ನ ಉಡಿಗೆ ತೊಡಿಗೆಯ ಅತ್ಯಾಶೆಗಾಗಿಯೇ ಇಲ್ಲಿಗೆ ಬಂದದ್ದು, ಈ ಆಫ್ರಿಕಕ್ಕೆ. ನಿನ್ನ ರತ್ನದ ಕಂಠಿ, ನಿನ್ನ ಬೆಡಗಿನ ಸೀರೆ-ಆ ನಿನ್ನ ಬೆಳ್ಳಿ ಬಂಗಾರವೆಲ್ಲ ಬರುತ್ತಿತ್ತೆ ನಿನ್ನ ದೇಶದಲ್ಲಿದ್ದಿದ್ದರೆ? ಇಂಡಿಯದಲ್ಲಿ? ಕನ್ನಡ ನಾಡಿನಲ್ಲಿ! ಅದೂ ಮೈಸೂರಲ್ಲಿ! ಆ ನೂಕು ನುಗ್ಗಲಲ್ಲಿ! ಆ ಬಡತನದಲ್ಲಿ! ನಡಿ, ವೀಣೆ ಬಾರಿಸುತ್ತಾ ಕುಳಿತಿರು- ಊಟದ ಹೊತ್ತಿಗೆ ನಾನೊಂದಿಷ್ಟು ಅಡ್ಡಾಡಿ ಬರುವೆ”ನೆಂದು ಕೈಲಿ ಬಂದೂಕು ಹಿಡಿದು ಹೊರಗೆ ಹೊರಟೇ ಬಿಟ್ಟನು.

ಮಧ್ಯ ಆಫ್ರಿಕದ ಕಾಡು! ಕಾಡಿನ ನಡುವೆ ರಾಣೋಜಿಯ ಮರಮಟ್ಟುಗಳ ಬಂಗಲಿ. ಸುತ್ತಣ ಕಾಡು ಕತ್ತರಿಸಿ ಆರು ತಿಂಗಳಾಗಿಲ್ಲ. ಈಗಾಗಲೇ ಬಂಗಲೆಯನ್ನು ಬಳಸಿ ಬಂದಿದೆ ಕಾಡುಪೊದೆ. ಸ್ವಲ್ಪ ದೂರ ಹೋದ ರಾಣೋಜಿಯು ಒಂದು ಮರವನ್ನು ಹತ್ತಿ ಕುಳಿತುಕೊಂಡನು. ಇತ್ತ ಜೇಡನೊಂದು ಪುಟ್ಟ ಹಕ್ಕಿಯನ್ನೇ ಹಿಡಿದು ಹೀರುತಲಿದೆ ರಕ್ತ. ಅತ್ತ ಕೋತಿಯೊಂದು ಬಾಲವನ್ನು ದೊಡ್ಡ ಬಳ್ಳಿಯೊಂದಕ್ಕೆ ಸುತ್ತಿ ಜೋಕಾಲೆಯಾಡುತಲಿದೆ. ಅದೋ ಅಲ್ಲಿ ನೀರಿನ ಬಳಿ ಪಟ್ಟೀಕತ್ತೆಗಳು ಹಿಂಡು ಹಿಂಡಾಗಿ ಮೇಯುತಲಿವೆ. ಕಣ್ಣಿಗೆ ದುರ್ಬಿನು ಹಿಡಿದು ನೋಡಿದನು-ದೂರದ ಬೆಟ್ಟ-ಅದರ ಇಳಿಜಾರಲ್ಲಿ ನಾಲ್ಕೈದು ಖಡ್ಗಮೃಗಗಳು ಮೇಯುತ್ತಲಿವೆ. ಅದರಾಚೆ- ಕೆಸರು-ಅಲ್ಲಿ ನೀರ್ಗುದುರೆಗಳು ಹಾಯಾಗಿ ಮಲಗಿವೆ. ಇತ್ತ ದಕ್ಷಿಣ ದಿಕ್ಕಿನಲ್ಲಿದೆ ಆ ನಗರ. ಅದಕ್ಕೆ ನೀರಿನ ವ್ಯವಸ್ಥೆ ಮಾಡಲಿಕ್ಕಾಗಿಯೇ ರಾಣೋಜಿಯು ಬಂದುದು. ಇಂಜನಿಯರಾಗಿ ಇಂಡಿಯದಲ್ಲಿ ಇರಲೊಲ್ಲದೆ ಆಫ್ರಿಕಕ್ಕೆ ಬಂದಿದ್ದನು. ಕೆನಿಯಕ್ಕೆ ಬಂದು, ಅಲ್ಲಿಂದ ಲಕ್ಷ್ಮಿಯ ಹೆಜ್ಜೆಯ ಜಾಡನ್ನು ಹಿಡಿದು ಇಲ್ಲಿಗೆ ಬಂದಿದ್ದನು. ಈಗಾಗಲೇ ಒಂದೆರಡು ಭಾರಿಯ ಕೆಲಸಗಳನ್ನು ಮಾಡಿ, ಹಣವಂತನಾಗಿರುವನು. ಬೇಟೆಯಲ್ಲಿ ಸಿಕ್ಕಿದ ಮೃಗಗಳ ಚರ್ಮಗಳಿಂದಲೇ ಬಹಳ ಬಂಗಾರ ಬಂದಿದೆ. ಇಲ್ಲಿಯ ಜೀವನವಾಗಲೀ, ಕೆಲಸವಾಗಲೀ ಕಷ್ಟತರವಾಗಿರಲಿಲ್ಲ ರಾಣೋಜಿಗೆ. ಕಷ್ಟವಾಗಿ ತೋರಿದ್ದು ಹೆಂಡತಿಯ ಭಯನಿವಾರಣೆ. ಅವಳು ಧೈರ್ಯ ಕಲಿತು ಕಾಡಿನಲ್ಲಿ ಓರ್ವಳೇ ಇರುವಳಾದರೆ, ಅನುಕೂಲ ಹೆಚ್ಚು. ಇನ್ನು ಮುಂದಿನ ಠಾವಾದರೋ ಸಿಂಹ ಹೆಬ್ಬಾವುಗಳ ಬೀಡು. ಎಲ್ಲಮ್ಮ ಧೈರ್ಯ ಕಲಿಯದೆಲೆ ಏನೇನೂ ಆಗುವಂತಿಲ್ಲ. ಅದಕ್ಕಾಗಿ ಎಲ್ಲಾ ಜಾತಿಯ ಮೃಗಗಳ ಚರ್ಮಗಳನ್ನೂ ತಂದು ತನ್ನ ಕೋಣೆಯಲ್ಲಿ ಅಲಂಕಾರವಾಗಿ ಹರಡಿರುವನು. ಇಷ್ಟು ದಿನಗಳಾದರೂ ಕೂಡ ಸತ್ತ ಮೃಗಗಳನ್ನು ಕಣ್ಣೆತ್ತಿ ನೋಡುವ ಧೈರ್ಯ ಸಹಾ ಎಲ್ಲಮ್ಮನಿಗೆ ಬರಲಿಲ್ಲ. ಮುಂದಿನ್ನೇನು ಉಪಾಯ ಹೂಡಲೆಂದು ಯೋಚಿಸುತ್ತಿರುವಲ್ಲಿ- ಊಟದ ತುತ್ತೂರಿ ಕೇಳಿಬಂತು. ಕೊಂಬೆಯಿಂದ ಕೊಂಬೆಗೆ ಇಳಿದಿಳಿದು ಮನೆಗೆ ಬಂದನು. ಯಾರನ್ನೂ ಮಾತನಾಡಿಸದೆಲೆ ತನ್ನ ಅರ್ಧಾಂಗಿಯನ್ನು ಕಾಣಲು ಭೋಜನಶಾಲೆಗೆ ನಡೆದನು. ಅಂದು ಸರಸ ಸಲ್ಲಾಪಗಳಿಲ್ಲದೆಲೆ ಊಟದ ರುಚಿ ಕೆಟ್ಟುಹೋಯಿತು.

*

ಉರಿಬಿಸಿಲಿನ ಹಗಲೊಂದು, ಉದ್ವೇಗದ ರಾತ್ರಿಯೊಂದು ಕಳೆದವು. ಭಾಮಿನಿಗೆ ಭಯನಿವಾರಣೆಯಾಗಲಿಲ್ಲವೆಂದು ಯೋಚನೆಯು ಅತ್ಯುತ್ಕಟವಾಯಿತು ರಾಣೋಜಿಗೆ. ಇನ್ನೂ ಮುಂದೆ ಭಯಂಕರವಾದ ಕಾನನಗಳಿಗೆ ಹೋಗಬೇಕು. ನದಿಯ ನೀರು ಎಲ್ಲಿ ಎತ್ತರದಲ್ಲಿದೆಯೋ ಅಲ್ಲಿಂದ ಕಾಲುವೆ ತೋಡುವ ವ್ಯವಸ್ಥೆ ಮಾಡಬೇಕು. ಆ ಸ್ಥಳಗಳನ್ನು ಹುಡುಕುತ್ತಾ ಇನ್ನೆಲ್ಲೆಲ್ಲಿಗೆ ಹೋಗಬೇಕಾದೀತೋ ಬಲ್ಲವರಾರು! ಸುತ್ತ ಪಹರೆಗಳನ್ನು ಹೆಚ್ಚಿಸೋಣವೇ ಸತಿಯ ಸೌಖ್ಯಕ್ಕೆ? ಯಾರನ್ನು ನಂಬಿ ಬಿಟ್ಟು ಹೋಗಬೇಕು? ಇಬ್ಬರು ನೀಗ್ರೊಗಳನ್ನು ಕಾಡಿನ ಮಧ್ಯೆ ನಂಬುವುದಕ್ಕೆ ಸಾಧ್ಯವಿಲ್ಲ.

ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ

“ಎಲ್ಲಮ್ಮ ನೋಡಲಿಕ್ಕೆ ಬಲು ಸೌಮ್ಯ-ಸುಂದರ, ಮಂದರ-ಮಧುರ, ಕೋಮಲ-ಯಾರ ಬಾಯಿಗಾದರೂ ತುತ್ತಾದಾಳು. ಇಲ್ಲಿ ಯಾಕಾದರೂ ಈಕೆಯನ್ನು ಕರೆತಂದೆನೋ! ಬಂದೂಕು ಹಿಡಿಯಲಿಕ್ಕೆ ಕೂಡ ಇವಳಿಗೆ ಬರಲಿಲ್ಲವಲ್ಲ. ಮುಂದೇನು ಮಾಡಲಿ? ಕೆನಿಯ ದೇಶದಲ್ಲಿರುವ ನೆಂಟರಲ್ಲಿಗಾದರೂ ಹೋಗೆಂದರೆ ಹೋಗಳಲ್ಲ. ಆಗಲಿ, ಇನ್ನೂ ಮುನ್ನೂ ಪ್ರಯತ್ನ ಮಾಡಿ ಸತ್ತ ಪ್ರಾಣಿಗಳನ್ನು ತಂದು ಮುಂದಿಟ್ಟು ಆಕೆಗೆ ಭಯ ಹೋಗುವುದೇನೋ ನೋಡುವೆನು. ಮನುಷ್ಯನು ತನ್ನ ಎಚ್ಚರದಲ್ಲಿದ್ದರೆ ದುಷ್ಟ ಜಂತುಗಳೇನು ಮಾಡಿಯಾವು? ಅವುಗಳಿಗೆ ಯಥಾಪ್ರಕೃತಿವಿಧಿಯಾದ ಒಂದೊಂದೇ ಮಾರ್ಗಗಳು. ನಮಗಾದರೋ ಬುದ್ಧಿವಿಕಾಸದ ಹಲವು ಮಾರ್ಗಗಳು. ಜೀವಿಗಳು ಆತ್ಮರಕ್ಷಣೆಗೆ ದುಷ್ಟತನ ತೋರಿಸುವವು- ಮನುಷ್ಯಜೀವಿಯು ತನ್ನ ಹಿರೇತನವನ್ನು ತೋರಿಸಿಕೊಳ್ಳಬೇಕು. ಈ ಯುದ್ಧದಲ್ಲಿ ಆದಿಯಿಂದಲೂ ಮನುಷ್ಯನೇ ಜಯಿಸಿ ನಿಂತು ಬದುಕಿ ಬಂದವನು. ಎಲ್ಲಮ್ಮನ ಭಯನಿವಾರಣೆಗೆ ಉಪಾಯವಿದ್ದೇ ಇದೆ. ಸತ್ತ ಸಿಂಹಗಳನ್ನೂ ಹೆಬ್ಬಾವುಗಳನ್ನೂ ತಂದು ಕೋಣೆಯಲ್ಲಿ ಜೋಡಿಸಿ ಇಡಬೇಕು. ಸತ್ತವನ್ನು ಮುಟ್ಟಿ ಅಭ್ಯಾಸವಾದರೆ ಸಾಕು. ಆಕೆಗೆ ಆ ಕೋಣೆಯಲ್ಲಿರುವಷ್ಟು ಧೈರ್ಯ ಬಂದರೆ ಸಾಕು. ಎಲ್ಲಿಯಾದರೂ ಹೋಗಿ ಬರುವವರೆಗೆ ಹೆಂಡತಿ ಬದುಕಿರುವಳೆಂದು ಧೈರ್ಯದಿಂದಿರಬಹುದು. ಆಳುಗಳು ಯಾರೂ ಆ ಕೋಣೆಗೆ ಬರುವುದಿಲ್ಲ. ಬಲು ಹೆದರುವರು. ಕಾಡಿನಲ್ಲಿ ಆರ್ಭಟಿಸುವ ಮೃಗಗಳಿಗೆ ಅವರು ಹೆದರುವುದಿಲ್ಲ. ಆದರೆ ಈ ನನ್ನ ಸತ್ತ ಪ್ರಾಣಿಗಳನ್ನು ಕಂಡರೆ ಬಲು ಭಯ ಪಡುವರು. ನನಗೆ ಅದ್ಭುತವಾದ ಮಂತ್ರಶಕ್ತಿಯಿದೆಯೆಂದು ಅವರು ಭಾವಿಸಿರುವರು. ಏನು ಮಾಡಿದರೂ ಒಬ್ಬೊಬ್ಬರೇ ನನ್ನ ಕೋಣೆಗೆ ಇಲ್ಲಿಯವರಾರೂ ಬರುವುದಿಲ್ಲ. ಈ ಭಾಗದಲ್ಲಿ ಎಲ್ಲಮ್ಮನಿಗೆ ಕ್ಷೇಮ. ನಾನಿಲ್ಲದಾಗ ಆಕೆ ಅಲ್ಲಿರುವುದಾದರೆ -ಯಾವುದೊಂದು ಭಯವೂ ಇರದು. ಸತ್ತ ಮೃಗಗಳ ಸಂಗಡವಾದರೂ ಆ ಪುಣ್ಯಾತಿಗಿತ್ತಿ ಇರುವುದಾದರೆ ಧೈರ್ಯದಿಂದ ಸುತ್ತುತ್ತ ಹೋಗಬಹುದು” ಎಂದು ಮುಂತಾಗಿ ಅಲೆ ಅಲೆಯಾಗಿ ಆಲೋಚನೆಗಳು ಬಂದವು.

ರಾತ್ರಿ ಕಳೆಯಿತು; ರಾಣೋಜಿಯ ಮುಖ ಕಳೆಗೂಡಿತು. ನಗುನಗುತ ಎಲ್ಲಮ್ಮನನ್ನು ಎಬ್ಬಿಸಿ ‘ಕೋಕೋ’ ಮಾಡಹೇಳಿದನು. ಹೊರಗೆ ಹೋಗಿ ನೀಗ್ರೋ ಆಳುಗಳನ್ನೆಲ್ಲ ಸಿದ್ಧವಾಗಿರಹೇಳಿದನು. ಗಿಣಿಯ ಬಳಿ ನಿಂತು ಮಾತಾಡಿಸಿದನು. ಉಷ್ಟ್ರಪಕ್ಷಿಯನ್ನು ಎತ್ತಿ ನಿಲ್ಲಿಸಿದನು-ಅದು ಕೊಕ್ಕು ಬಿಚ್ಚಲು ಅದರ ಬಾಯಿಗೆ ಒಂದು ಪೆಪರ್‌ಮಿಂಟು ಹಾಕಿದನು. ಈ ವೇಳೆಗೆ ನಾಯಿಗಳು ಮೋರೆ ನೋಡಿ ನೆಗೆಯಲಾರಂಭಿಸಿದುವು. ಅವುಗಳನ್ನು ಬಿಚ್ಚಿಬಿಟ್ಟು ಬೆನ್ನು ತಟ್ಟಿ ಕಳಿಸುವ ಹೊತ್ತಿಗೆ ಚಿಂಪಾಂಸೀ ಹ್ಯಾಟುಗಾಲು ಹಾಕುತ್ತ ಅವನ ಬಳಿಗೆ ಬಂದು ಕೈಕೊಟ್ಟು ನಡುವೇರಿತು. ಕಡೆಗೆ ಬೇರೆ ಮೃಗ ಶಾಬಕಗಳನ್ನು ಮಾತಾಡಿಸಲು ಕೈಸಾಲೆಗೆ ಹೋದನು. ಅಂತು ಆ ದಿನ ಒಂದು ಬಗೆಯ ಆನಂದದಿಂದ ಕಾಡು ತಿರುಗಿ ಬರಲು ಹೊರಟನು ರಾಣೋಜಿರಾಯ.

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ಬಹಳ ಬಿಸಿಲಾಗುತ್ತ ಬಂದಿತು. ಕಾಡಿನಿಂದ ಹವೆಯೇರಲು ಆರಂಭವಾಯಿತು. ಕೊಳೆತ ಸೊಪ್ಪು ಸದೆಯ ವಾಸನೆ ಅಲ್ಲಲ್ಲಿ ಎದ್ದಿತು. ಎಷ್ಟೋ ಕಡೆ ಆಕಾಶವೂ ಕಾಣದು, ನೆಲವೂ ಕಾಣದು. ಮೇಲೆ ಸೊಪ್ಪು ಹೂ ಹಣ್ಣುಗಳ ಹಂದರ; ಕೆಳಗೆ ಎಲೆ ಬಳ್ಳಿಗಳ ಪಂಜರ. ಹೂವಿಗೊಂದು ಚಿಟ್ಟೆ, ಎಲೆಗೊಂದು ಇರುವೆ, ಕೊಂಬೆಗೊಂದು ಕೋತಿ, ರೆಂಬೆಗೊಂದು ಪಕ್ಷಿ-ಝಂ ಎಂದು ಶಬ್ದ. ಕಾಲಿಟ್ಟು ತೆಗೆದರೆ ಸೊಳ್ಳೆಗಳು, ನೊಣಗಳು ಎದ್ದು ಹಾರುವವು. ಮರಗಳ ಮೇಲೆ ಅಲ್ಲೊಂದಿಲ್ಲೊಂದು ಕೊಡಲಿಯ ಗುರುತು ಹಾಕಿಕೊಂಡು ಹೊರಟನು. ಬರಬರುತ ಕಾಡು ದಟ್ಟವಾಯಿತು. ಯಾವುದು ಬಳ್ಳಿಯೋ ಮತ್ತಾವುದು ಹೆಬ್ಬಾವೋ ತಿಳಿಯಲು ಕಷ್ಟ, ಹಸುರು ಮುಸುಕಿದ ಪಂಕಗಳು ಗಟ್ಟಿ ನೆಲದ ಭ್ರಾಂತಿ ಹುಟ್ಟಿಸುವವು. ದೂರದಿಂದ ಸೊಗಡು ವಾಸನೆ ಬರುತಲಿದೆ- ಅದು ರಕ್ಕಸ ಕಮಲದ ಕಂಪು. ಮೃಗ-ಪಕ್ಷಿಗಳ ಕಲಕಲದಲ್ಲಿ ತಾನಾಡಿದ್ದು ತನಗೇ ಕೇಳಿಸದು. ಕಾಲಿಟ್ಟು ತೆಗೆದರೆ ಮಂಡಿಯುದ್ದದ ದರಗು-ಅದರ ಝರಝರ ಶಬ್ದ-ಆ ಶಬ್ದಕ್ಕೆ ಹಲವು ಹದಿನೆಂಟು ಜಾತಿ ಪ್ರಾಣಿಗಳು ಎದ್ದೋಡುವವು. ಸೂರ್ಯನು ನೆತ್ತಿಯ ಮೇಲೆ ಬಂದರೂ ಕೂಡ ಈ ಆಫ್ರಿಕದ ಕಾಡಿನಲ್ಲಿ ಗಾಢಾಂಧಕಾರದ ಭಯಂಕರ ಕನಸು.

ರಾಣೋಜಿಯು ಹಿಂತಿರುಗಿ ಕಣ್ಣಮೇಲೆ ಕಣ್ಣು ಪಹರೆ ಇಟ್ಟು ನಡೆದು ಬಂದನು. ಮನೆಯು ಹತ್ತಿರ ಬಂದಿತು. ದೂರದಲ್ಲಿ ಅತ್ತ ಕಡೆ ಏನೋ ಕಂಡನು. ನಿಂತು ನೋಡಿದನು. ಏನೋ ಯೋಚನೆ ಹೊಳೆಯಿತು. ಮೊಗದಲ್ಲಿ ನಗೆ ಕಂಡಿತು. ಅರ್ಧ ಗಂಟೆಯ ಕಾಲ ನಡೆದಿರಬಹುದು. ಅವನ ಗಮನಕ್ಕೆ ನಡಿಗೆಯೆಂದು ಹೇಳುವುದು ತಾನೇ ಹೇಗೆ? ಯಾಕೆಂದರೆ- ಹತ್ತಿ, ಇಳಿದು, ಹಾರಿ, ಜಾರಿ ದೂರ ಸಾಗಬೇಕಾಗಿತ್ತು. ಅಲ್ಲೊಂದು ಮಾರು ದೂರದಲ್ಲಿ ಎರಡೂವರೆ ಮಾರು ಉದ್ದದ ಹೆಬ್ಬಾವಿತ್ತು. ಮರದ ಕೊಂಬೆಗೆ ಬಾಲಸುತ್ತಿಕೊಂಡು ನೇತಾಡುತ್ತಲಿತ್ತು. ಒಂದೊಂದು ಬಾರಿ ವಲಿದಾಡಿ ಬಾಯಿ ಕಳೆಯುವುದು. ನಾಲಿಗೆ ಸುಗಿಯುವುದು. ರಾಣೋಜಿಯು ನಿಂತನು, ನೋಡಿದನು. ಹೊಂಚುಹಾಕಿದನು. ತೊಡೆಯ ಗಾತ್ರಕ್ಕಿತ್ತು. ಮೈಮೇಲೆ ಹಳದಿ ಬಣ್ಣ, ಬೆನ್ನ ಮೇಲೆ ನೀಲಿಯ ಪದ್ಮಗಳು. ಆ ಪದ್ಮದಳಗಳನ್ನು ಕೂಡಿಕೊಂಡು ಹಬ್ಬಿರುವ ಬಂಗಾರದ ಸರಿಗೆಯ ಬಳ್ಳಿ. ನೋಡಿ ಹಲವು ಬಗೆಯ ಆನಂದದ ಯೋಚನೆಗಳು ಅಂಕುರಿಸಿದವು. ಹತ್ತಿರದ ಮರಕ್ಕೆ ಒರಗಿದನು. ಕೋವಿಯನ್ನು ಹಿಡಿದೆತ್ತಿ ಗುರಿಯಿಟ್ಟನು. ತಲೆ ಹಿಂಭಾಗಕ್ಕೆ ಗಂಟಲ ಬಳಿಗೆ ಹೊಡೆದುಬಿಟ್ಟನು. ಆ ಶಬ್ದವು ನೂರು ಬಾರಿ ಪ್ರತಿಧ್ವನಿತವಾಗಿ ಕಾಡೆಲ್ಲ ನಡುಗಿತು. ಇತ್ತ ಸರ್ಪವು ಸುರುಳಿಸುರುಳಿಯಾಗಿ, ಮುರಳಿಮುರಳಿಯಾಗಿ, ತಿರುವಿ ತಿರುವಿ, ಏರಿ ಇಳಿದು ಕೆಳಗೆ ಬಿದ್ದಿತು. ”ಹೆಂಡತಿಯ ಭಯ ಬಿಡಿಸಲು ಇದು ಸಹಕಾರಿಯಾಗಬಹುದು. ಆಳುಗಳಿಗೆ ಭಯ ಹೆಚ್ಚಿಸಲು ಮನೆಯಲ್ಲಿ ಇಡಬಹುದು. ಕಡೆಗೆ ಬೇಕಾದರೆ ಚರ್ಮವನ್ನು ಮಾರಬಹುದು. ಅಥವಾ ಇಂಡಿಯಲ್ಲಿರುವ ಸ್ನೇಹಿತರಿಗೆ ಕಾಣಿಕೆಯಾಗಿ ಕಳುಹಿಸಬಹುದು.” ಹೀಗೆಂದು ಭಾವಿಸುವಷ್ಟರಲ್ಲಿ ಒರಗಿದ್ದ ಮರವು ಪಕ್ಕಕ್ಕೆ ಸರಿದ ಹಾಗಾಯಿತು. ತಿರುಗಿ ನೋಡಿ ಗಾಬರಿಯಾದನು. ಆ ಮರಕ್ಕೆ ಸುತ್ತಿಕೊಂಡಿದ್ದ ಇನ್ನೊಂದು ಹೆಬ್ಬಾವಿನ ಮೇಲೆ ಭಾರ ಬಿಟ್ಟು ಒರಗಿ ನಿಂತಿದ್ದನು. ಹಿಂದೆ ಮುಂದೆ ತಿರುಗಿ ನೋಡಿದನು. ಸರ್ಪವು ಯಾವುದೋ ಪ್ರಾಣಿಯನ್ನು ನುಂಗಿ ಮರಕ್ಕೆ ಸುತ್ತಿಕೊಂಡಿತ್ತು. ನಿದ್ದೆಯೋ ಏನೋ ಪಾಪ! ಭೋಜನಾನಂತರ! ಕಣ್ಣು ಮುಚ್ಚಿತ್ತು.

ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ

ಸೂರ್ಯನೇನೋ ನಡುನೆತ್ತಿಯಲ್ಲಿ ನಿಂತಿದ್ದನು. ರಾಣೋಜಿಗೆ ಮನೆಯ ನೆನಪಾಯಿತು. ಸತ್ತ ಹಾವಿನ ಬಾಲವನ್ನು ಕೈಗೆ ಸುತ್ತಿಕೊಂಡು ಹೊರಟನು. ಮತ್ತೆ ನಿಂತನು. ನೆಲದ ಮೇಲೆ ಎಳೆದು ತಲೆಯು ಕೆಟ್ಟು ಹೋಗುವುದೆಂದು ಅದರ ಸುತ್ತ ಸೊಪ್ಪು ಸುತ್ತಿದನು-ಮತ್ತೆ ಹೊರಟನು. ಮನೆ ಸೇರುವ ಹೊತ್ತಿಗೆ ಹೊರಗೆ ಯಾರೂ ಇರಲಿಲ್ಲ. ಕಿಟಕಿಯ ಬಳಿಗೆ ಹೋದನು. ಹಾವಿನ ತಲೆಯನ್ನೆತ್ತಿ ಒಳಗೆಸೆದನು. ಕೋಣೆಯೊಳಕ್ಕೆ ಹೋಗಿ ಹಾವನ್ನು ಎಳೆದುಕೊಂಡನು. ಆ ಚಿಕ್ಕ ಕೋಣೆಯಲ್ಲಿ ಆ ಭಾರಿಯ ಘಟಸರ್ಪವು ಮೇಜಿನ ಮೇಲೆ ವಿವೇಕಾನಂದರ ಚಿತ್ರದ ಮುಂದೆ ಹಾಸಿ, ಗಾಂಧಿಯವರ ಪ್ರತಿಮೆಯ ಹಿಂದಾಗಿ, ಪುಸ್ತಕ ಬೀರೂ ಬಳಿ ಬಂದು, ಮೇಲೇರಿ, ಕನ್ನಡ ಪುಸ್ತಕಗಳು ಇರುವ ಬಳಿ ಬಂದು, “ಯಮನ ಸೋಲಿ”ನ ಬಳಿ ಬಾಯಿ ತೆರೆದುಕೊಂಡಿತ್ತು. ಹೀಗೆಲ್ಲ ಅಲಂಕಾರ ಮಾಡಿ ಅಲ್ಲಿ ನಿಂತು, ಇಲ್ಲಿ ನಿಂತು, ಕಿಟಕಿಯ ಪರದೆ ತುಸುವಾಗಿ ಎಳೆದು-ಆನಂದದ ಚಿತ್ರವನ್ನು ನೋಡಿ ಹಿಗ್ಗಿ ಬಾಗಿಲೆಳೆದುಕೊಂಡು ಹೊರಟನು. ಇಂಥಾ ಸುಂದರವಾದ ಹಾವು ಎಲ್ಲಿಯೂ ಇದ್ದಿಲ್ಲ-ಮತ್ತೋ ಇದ್ದರೂ ಹೊಡೆದು ತರುವಂಥವರು ಯಾರಿದ್ದಾರೆ! ತಂದರೂ ಹೀಗೆಲ್ಲ ಅಲಂಕಾರವಾಗಿಟ್ಟು ತನ್ನ ಅರ್ಧಾಂಗಿಗೆ ತೋರಿಸಿ ನಲಿಯುವ ಭಾಗ್ಯ ಎಷ್ಟು ಮಂದಿಗೆ ಒದಗೀತು!

ಊಟವಾಯಿತು. ಮಾತುಕತೆಯಲ್ಲಿ ಇಂಡಿಯ ಆಫ್ರಿಕಗಳು ಒಂದಕ್ಕೊಂದು ಹೆಣೆದುಕೊಂಡು ಬಿಟ್ಟವು. ಮುಳಯ್ಯನ ಗಿರಿ, ಕಿಲಿಮಾಂಜೀರೋ; ವಿಕ್ಟೋರಿಯ ಸರಸ್ಸು, ಅಯ್ಯನಕೆರೆ; ತಮ್ಮ ಜನ, ನೀಗ್ರೋ ಜನ ಮುಂತಾದ್ದೆಲ್ಲ ಬಂದು ನಿಂದು ಚಿತ್ರಿತವಾಗಿ, ಅಳಿಸಿಹೋದುವು. ಭೋಜನ ಸಮಯದ ಈ ಸಲ್ಲಾಪವು ನೀಗ್ರೋ ಚಂಚೂಗೆ ಕೊಂಚವೂ ಅರ್ಥವಾಗಲಿಲ್ಲ. ಹೊಟ್ಟೆ ತುಂಬಿಕೊಂಡರು ಇವರಿಬ್ಬರು ಎಂಬುದು ಮಾತ್ರ ಅರಿವಾಯಿತು.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

ಪಂಜರದ ಮೃಗಪಕ್ಷಿಗಳ ಸಂಗಡ ಮಾತನಾಡಿದರು. ಉಷ್ಟ್ರಪಕ್ಷಿಯು ಬಂದು ಎಲ್ಲಮ್ಮನ ತುರುಬಿನ ಹೂವನ್ನು ಕಿತ್ತು ಕಿತ್ತು ನುಂಗಿತು. ಕಾಡುಮನುಷ್ಯ ಚಿಂಪಾಂಸೀ ಬಂದು ಹಕ್ಕಿಯನ್ನು ಓಡಿಸಿ ತಾನು ನಿಂತಿತು ಅವರಿಬ್ಬರ ನಡುವೆ. ಅವರಿಬ್ಬರ ಕೈಗಳನ್ನೂ ತೆಗೆದು ತನ್ನ ಒರಟು ಮುಖಕ್ಕೆ ಒತ್ತಿಕೊಂಡಿತು. ಅವರಿಬ್ಬರೂ ಕುರ್ಚಿಗಳ ಮೇಲೆ ಕುಳಿತುಕೊಂಡರು. ಕಾಡುಮನುಷ್ಯ ಸಡಗರದಿಂದ ಅತ್ತಿತ್ತ ಓಡಾಡಹತ್ತಿತು. ರಾಜಿಗೆ ಕೋಣೆಯ ನೆನಪು ಬಂತು. ಕಳಿಸಿ ನೋಡೋಣ ಹೆಂಡತಿಯನ್ನು ಆ ಬಳಿಗೆ ಎಂದುಕೊಂಡನು. “ಅದೇನು ಹೊಸ ಯೋಚನೆ” ಎಂದು ಇಂಗಿತವರಿತು ಆಕೆ ಕೇಳಿದಳು. “ಏನೂ ಇಲ್ಲ! ನಿನ್ನ ದನಿಯಲ್ಲಿ ಕನ್ನಡದ ಮೇಲಿನ ಆ ಹೊಸ ಹಾಡನ್ನು ಕೇಳಬೇಕೆನಿಸ ಹತ್ತಿದೆ-‘ಮನವ ತಣಿಸುವ ಮೋಹನ’- ಹೇಳು, ಹೂ!” ಈ ಮಾತಿಗೆ ಎಲ್ಲಮ್ಮ “ನನಗೇನು ಅನ್ನಿಸದೆ ಬಲ್ಲಿರಾ? ನಿಮ್ಮ ನಾಲಿಗೆಯಲ್ಲಿ ಒಂದಿಷ್ಟು ಕನ್ನಡ ಓದಿಸಿ ಕೇಳಬೇಕು.” ರಾಣೋಜಿಗೆ ಅನುಕೂಲವಾಯಿತು- “ಆಮೇಲೆ ಹಾಡು ಹೇಳುವಿಯಂತೆ! ನಾನೇ ಮೊದಲು ಓದಿಬಿಡುತ್ತೇನೆ. ತೆಗೆದುಕೊಂಡು ಬಾ. ಹಾಗಾದರೆ ನಮ್ಮ ನಲವಿನ ಮಲೆನಾಡಿನಾತ ಬರೆದ ಪುಸ್ತಕ. ನಿನ್ನಂಥವಳು ಓದಬೇಕಾದ್ದು. ಹೊಸದಾಗಿ ಬಂದಿದೆ- ‘ಯಮನ ಸೋಲು’- ನಾನೇ ಓದಿಹೇಳುವೆ.”

”’ತಪಸ್ವಿನೀ’!-ಬೇಡವೋ!” ಎಂದುಕೊಂಡು ಎಲ್ಲಮ್ಮನು ಕೋಣೆಯ ಕಡೆ ನಡೆದಳು. ಜಡೆ ತೂಗಾಡಿತು. ಸೆರಗು ಹಾರಿಹಾರಿತು. ಕೈಬಳೆಗಳು ಥಳಥಳಿಸಿದವು. ಕಾಲುಂಗುರಗಳು ಮಾತಾಡಿದವು. ರಾಣೋಜಿಯು ಆತುರದಿಂದ ಆ ಕಡೆಯೇ ನೋಡುತ ಕುಳಿತನು. ಮರೆಯಾದಳು ಎಲ್ಲಮ್ಮ. ರಾಣೋಜಿಯು ಆಲೈಸುತ್ತ ಕುಳಿತ. ಬಾಗಿಲು ತೆರೆದ ಶಬ್ದ. ಇಷ್ಟು ಹೊತ್ತಿಗೆ ಒಳಕ್ಕೆ ಹೋಗಿರಬಹುದು. ಆಲೈಸಿದ ರಾಣೋಜಿ. ಇನ್ನೇನು ಕಿರುಚಿಕೊಳ್ಳುವಳು. ಆಗ ಕೂಗಿ ಹೇಳಬೇಕು- “ಸತ್ತ ಹಾವೆಂದು”-ಆಮೇಲೆ ಅವಳ ಪುಕ್ಕಲುತನಕ್ಕೆ ಚಪ್ಪಾಳೆ ತಟ್ಟಿ ನಗಬೇಕು!

ಇಷ್ಟು ಹೊತ್ತಿಗೆ ಎಲ್ಲಮ್ಮ ಕಿರುಚಿಕೊಂಡಳು. ಕುಳಿತಲ್ಲಿಂದಲೇ ರಾಣೋಜಿ ಕೂಗಿದನು, “ಸತ್ತ ಹಾವು ಕಣೇ ಅದು, ಹೆದರಬೇಡ. ಪುಸ್ತಕವನ್ನು ಬೇಗನೇ ತೆಗೆದುಕೊಂಡು ಬಂದುಬಿಡು.” ಇನ್ನೊಮ್ಮೆ ಕೂಗು! ದನಿಯು ಕಠೋರವಾಗಿತ್ತು. ನೆಲದ ಒಡಲಿಂದ ಬಂದಹಾಗಿತ್ತು. “ಸತ್ತ ಹಾವಿಗೆ ಹೆದರುವಿಯಾ! ಅಂಜುಬುರುಕಿ! ನಾನೇ ಬಂದೆ ಬಿಡು” ಹೀಗೆನ್ನುತ್ತ ಹೊರಟನು. ಮತ್ತೆ ಕೂಗು! ಈ ಬಾರಿ ಕುಗ್ಗಿದ ಕಂಠ, ಬಾಗಿಲ ಬಳಿ ಸೇರುವ ಹೊತ್ತಿಗೆ, ಇನ್ನೆರಡು ಮೂರು ಬಾರಿ ದೊಡ್ಡದಾಗಿ ನಿಟ್ಟುಸಿರು ಬಿಟ್ಟ ಶಬ್ದ! ಈ ದಿನ ಬಹಳ ಅಂಜಿಬಿಟ್ಟಳೆಂದು ಎರಡು ಬಾಗಿಲೂ ತೆಗೆದನು. ಕಿಟಕಿಗಳನ್ನೆಲ್ಲಾ ತೆರೆದನು. ಹೆಂಡತಿಯ ಸುಳಿವಿಲ್ಲ. ಚಿಂಪಾಂಸೀ ಒಳಗೆ ಬಂತು. ರಾಗೋಜಿಯು ಚಂಚೂ ಕರೆದನು. ಉಳಿದ ಆಳುಗಳೆಲ್ಲರೂ ಓಡಿ ಬಂದರು. ಮೇಜಿನ ವಸ್ತ್ರ, ಸಿಂಹದ ತೊಗಲು, ಕರಡಿ ಚರ್ಮಗಳೆಲ್ಲವೂ ಸುರುಳಿ ಸುಪ್ಪಟ್ಟೆಯಾಗಿದ್ದವು. ಅಲ್ಲಲ್ಲಿ ರಕ್ತ ಚುಮುಕಿಸಿದ ಹಾಗಿತ್ತು. ಎಲ್ಲಮ್ಮ ಹೊರಗೆ ಹೋಗಿಲ್ಲ! ಒಳಗಂತೂ ಕಾಣಲಿಲ್ಲ! ಕೂಗಿದನು. ಗಾಬರಿಯಾದನು. ಪುಸ್ತಕಗಳನ್ನೆಲ್ಲಾ ಕಿತ್ತಾಡಿದನು. ಬೀರುವನ್ನು ಉರುಡಿಸಿದನು. ಬುಡದಲ್ಲೇನೋ ಇತ್ತು. ಒಮ್ಮೆಲೆ ಹಾರಿ ಎಳೆದು ತೆಗೆದನು… ಎಲ್ಲಮ್ಮನ ದೇಹ! ರಕ್ತಸಿಕ್ತವಾಗಿದ್ದಿತು. ತಲೆ ಯಾವುದೋ ಮುಖವಾವುದೋ ಕಾಣುವಂತಿರಲಿಲ್ಲ. ಗುರುತು ಕೂಡ ಅಳಿಸಿತ್ತು. ಅಂಥಾ ಅಂದವಾದ ಮೋರೆ ಅವಳದು. ಏನಾಗಿದ್ದೀತು!

ಭಯ ನಿವಾರಣೆ2 1 1

*

ಕಾಡುಮನುಷ್ಯ ಏನನ್ನೋ ಹಿಡಿದೆಳೆದುಕೊಂಡು ಬಂದಿತು. ಎಳೆಯಲಾರದು ಪಾಪ! ಚಂಚೂ ಸಹಾಯಕ್ಕೆ ಹೋದನು. ಬೆಳಕಲ್ಲಿ ನೋಡಿದರೆ ಎರಡು ಹೆಬ್ಬಾವುಗಳು! ಒಂದಕ್ಕೊಂದು ಹೊಸೆದುಕೊಂಡಿವೆ! ಒಂದಕ್ಕೆ ಜೀವವಿದೆ, ಇನ್ನೊಂದಕ್ಕೆ ಜೀವವಿಲ್ಲ. ಜೀವದ ಹಾವು ಸತ್ತ ಹಾವಿನ ಬಾಯೊಳಗೆ ತನ್ನ ಬಾಯಿಟ್ಟುಕೊಂಡಿದೆ! ಕಿತ್ತಳೆದರೂ ತೆಗೆಯಲೊಲ್ಲದು. ಅದೇನು ಪ್ರಣಯ! ಹಾವುಗಳಲ್ಲಿ ಕೂಡ! ಕೊಂದ ಹಾವಿನ ಹೆಂಡತಿಯೇ ಅದು! ಪ್ರಕೃತಿ ವೈಚಿತ್ರ್ಯ ಹೇಗಿದೆಯೋ ಬಲ್ಲರಾರು! ಬಣ್ಣಿಸುವರಾರು! ಮನುಜರ ಪ್ರಣಯ ಬರಿ ಮಾತು. ಪಕ್ಷಿಪ್ರಾಣಿಗಳ ಪ್ರಣಯವೇ ಶ್ರೇಷ್ಠವೆನಿಸದೆ ನಿಮಗೆ!

ಈ ಕಥೆಯನ್ನು ಹೇಳಿದವನು ರಾಣೋಜಿರಾಯ! ನುಡಿನುಡಿಗಳನ್ನು ಕಣ್ಣೀರಲ್ಲಿ ನೆನೆನೆನೆಸಿ ನನ್ನ ಹೃದಯದಲ್ಲಿಟ್ಟನು. ಈಗ ನಮ್ಮ ನಾಡಿನಲ್ಲೇ ನೆಲೆಸಿರುವನು. ವಿದೇಶಗಮನ ದ್ರವ್ಯದಾಶೆಗೆ! ಮೃಗಚರ್ಮ ಸಂಪಾದನೆ ಭಯನಿವಾರಣೆಗೆ! ಆಫ್ರಿಕದಲ್ಲಿ! ಆಯಿತೇ ಭಯನಿವಾರಣೆ?

(ಕೃಪೆ: ಮಲ್ಲಿಗೆ ಮಾಸಪತ್ರಿಕೆ; ‘ದಿನಾರಿ’, ಸತ್ಯಶೋಧನ ಪ್ರಕಟನ ಮಂದಿರ, ಬೆಂಗಳೂರು, 1947. ಕೃಪೆ: ಕಾವ್ಯಾಲಯ ಪ್ರಕಾಶನ, ಮೈಸೂರು)

ಹೊಯಿಸಳರ ‘ಭಯನಿವಾರಣೆ’

‘ಹೊಯಿಸಳ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಅರಗಂ ಲಕ್ಷ್ಮಣರಾವ್ (1893-1956) ಅವರು ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾದವರು. ಒಬ್ಬ ಲೇಖಕ ಸಾಹಿತ್ಯದ ಒಂದು ಪ್ರಕಾರದಲ್ಲಿ ಪ್ರಸಿದ್ಧಿ ಪಡೆದ ಮೇಲೆ ಆತ ಉಳಿದ ಪ್ರಕಾರಗಳಲ್ಲಿ ಮಾಡಿದ ಕೆಲಸ ಗಮನ ಸೆಳೆಯುವದಿಲ್ಲ ಎಂಬುದಕ್ಕೆ ಹೊಯಿಸಳರದೂ ಒಂದು ನಿದರ್ಶನ. ಅವರ ಸಣ್ಣಕತೆಗಳು ನಿರ್ಲಕ್ಷ್ಯಕ್ಕೀಡಾಗಿವೆ. 1947ರ ಒಂದೇ ವರ್ಷದಲ್ಲಿ ಅವರ “ಕಂಚಿನ ಕನ್ನಡಿ” ಮತ್ತು “ದಿನಾರಿ” ಎಂಬ ಎರಡು ಕಥಾಸಂಗ್ರಹಗಳು ಪ್ರಕಟವಾಗಿವೆ (ಸತ್ಯಶೋಧನ ಪ್ರಕಟನ ಮಂದಿರ, ಬೆಂಗಳೂರು), ಎರಡರಲ್ಲೂ ಸೇರಿ 14 ಕತೆಗಳಿವೆ. ಸಂಕಲನ ರೂಪದಲ್ಲಿ ಬರಲು ಈ ಕತೆಗಳು ಸಾಕಷ್ಟು ಕಾಲ ತೆಗೆದುಕೊಂಡಂತಿದೆ. ಇವುಗಳಲ್ಲಿ ಅನೇಕ ಕತೆಗಳು ಬಹಳ ಮುಂಚೆಯೇ ಜಿ.ವಿ. ನರಸಿಂಹಮೂರ್ತಿಯವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ “ಕತೆಗಾರ” ಮಾಸಪತ್ರಿಕೆಯಲ್ಲಿ ಬಂದಿದ್ದುದಾಗಿ ನರಸಿಂಹಮೂರ್ತಿಯವರು ‘ಕಂಚಿನ ಕನ್ನಡಿ’ಗೆ ಬರೆದ ‘ಮೊಗವಾಗಿಲು’ ಎಂಬ ಮುನ್ನುಡಿಯಿಂದ ತಿಳಿದುಬರುತ್ತದೆ. ‘ಭಯನಿವಾರಣೆ’ ಎಂಬ ಕತೆ ಉಡುಪಿಯ ಕಿರಿಯರ ಪ್ರಪಂಚ ಪ್ರಕಟಿಸಿದ “ಮಧುವನ”ದಲ್ಲಿ 1935ರಷ್ಟು ಹಿಂದೆಯೇ ಸೇರಿರುವದನ್ನು ನೋಡಿದರೆ ಆ ಸುಮಾರಿಗೇ ಹೊಯಿಸಳರು ಕತೆಗಳನ್ನು ಬರೆದಿರಬೇಕೆಂದು ಊಹಿಸಬಹುದಾಗಿದೆ. ಆಮೇಲೆ ಅವರ ಸಣ್ಣಕತೆಗಳ ಬಗ್ಗೆ ಎಲ್ಲಿಯೂ ಪ್ರಸ್ತಾಪ ಬಂದಂತೆ ಕಾಣುವದಿಲ್ಲ.

ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?

‘ಭಯನಿವಾರಣೆ’ ಒಂದು ವಿಶಿಷ್ಟ ಕತೆ. ಈ ಕತೆಯನ್ನು ಕುರಿತು ‘ಮಧುವನ’ದ ಸಂಪಾದಕರು ”ಈ ಕತೆಯು ತೀರಾ ಹೊಸ ವಸ್ತುವಿನದು. ಇದು ಕನ್ನಡ ಕಥಾಪ್ರಪಂಚದ ಅತಿ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ” ಎಂದು ಬರೆದಿದ್ದಾರೆ. ಈ ವಿಮರ್ಶೆಯಲ್ಲಿಯ ಎರಡನೆಯ ಹೇಳಿಕೆಯನ್ನು ಒಪ್ಪುವದು ಸ್ವಲ್ಪ ಕಷ್ಟವಾದರೂ ಮೊದಲನೆಯ ಹೇಳಿಕೆಯಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಕನ್ನಡ ಸಣ್ಣಕತೆಯ ಬೆಳವಣಿಗೆಯ ಹಂತದಲ್ಲಿಯಂತೂ ಈ ಬಗೆಯ ಕತೆಗಳನ್ನು ನಿರೀಕ್ಷಿಸುವದೇ ಸಾಧ್ಯವಿಲ್ಲ. ಯಾರಾದರೂ ಈಗ ಈ ಕತೆಯನ್ನು ಬರೆದಿದ್ದರೆ ಅದೊಂದು ಸಂಕೇತಗಳ ಸಂಕೀರ್ಣ ಕಗ್ಗವಾಗಿಬಿಡಬಹುದಿತ್ತು. ಹೆಬ್ಬಾವು ಸಿಕ್ಕಮೇಲೆ ಯಾರಾದರೂ ಸುಮ್ಮನೇ ಬಿಟ್ಟಾರೆಯೆ?

ನವೋದಯದ ಕತೆಗಾರರು ವಸ್ತುವಿನ ಆಯ್ಕೆಯಲ್ಲಿ ತೋರಿಸಿರುವ ವೈವಿಧ್ಯ ಮತ್ತು ದಿಟ್ಟತನ ಆಶ್ಚರ್ಯಕರವಾದುದು. ವಾಸ್ತವದ ಒಳಗೆ ಮತ್ತು ಆಚೆ ಅವರು ತಮ್ಮ ಕಲ್ಪನಾಪ್ರತಿಭೆಯನ್ನು ಬಹಳ ದೂರಕ್ಕೆ ಒಯ್ದಿದ್ದರು. ‘ಭಯನಿವಾರಣೆ’ಯ ಕಥೆ ನಡೆಯುವದು ಆಫ್ರಿಕಾದ ಕಗ್ಗಾಡಿನಲ್ಲಿ. ಕತೆಗಾರರೇನೂ ಆ ಪರಿಸರವನ್ನು ನೋಡಿದವರಲ್ಲ. ಆದರೂ ಅದರ ಭಯಾನಕ ಚಿತ್ರವನ್ನು ಊಹಿಸಿಕೊಡುತ್ತಾರೆ. ಕಥೆಗೆ ಈ ವಾತಾವರಣ ಅವಶ್ಯವಾಗಿದೆ. ಅದು ವಾಸ್ತವವೆಂದು ನಂಬಿಸಲು, ಆಫ್ರಿಕಾದಲ್ಲಿ ಇದ್ದು ಈ ಕತೆಯನ್ನು ಅನುಭವಿಸಿ ಬಂದಿರುವ ರಾಣೋಜಿಯೇ ಅದನ್ನು ಹೇಳಿದ್ದಾಗಿ ಕತೆಗಾರ ನಮಗೆ ತಿಳಿಸುತ್ತಾನೆ.

ಇದರಲ್ಲಿ ಎರಡು ಕತೆಗಳು ಒಟ್ಟೊಟ್ಟಿಗೆ ಹೆಣೆದುಕೊಂಡಿವೆ. ಎಷ್ಟೆಂದರೆ, ಒಂದನ್ನು ಇನ್ನೊಂದರಿಂದ ಬಿಡಿಸಲು ಆಗುವದಿಲ್ಲ.

ಒಂದು ಕತೆ ರಾಣೋಜಿ ಮತ್ತು ಎಲ್ಲಮ್ಮನದು. ಬರವಣಿಗೆಯಲ್ಲಿ ಇದು ಮುನ್ನೆಲೆಯಲ್ಲಿರುವದರಿಂದ, ಮತ್ತು ಮನುಷ್ಯಪಾತ್ರಗಳ ನಡುವೆ ನಡೆಯುವದರಿಂದ, ಸಹಜವಾಗಿ ನಮ್ಮ ಗಮನ ಇದರ ಮೇಲೆಯೇ ಕೇಂದ್ರೀಕೃತವಾಗಿ ಇನ್ನೊಂದು ಕತೆಯ ಬಗ್ಗೆ ಲಕ್ಷ್ಯ ಹೋಗದಿರಬಹುದು.

ಭೀಕರ ಕಾಡಿನ ನಡುವೆ, ನಿರ್ಜನ ಪ್ರದೇಶದಲ್ಲಿ, ಭಯಾನಕ ಪ್ರಾಣಿಗಳ ಸಹವಾಸದಲ್ಲಿ ಸ್ವದೇಶದಿಂದ ದೂರ ನಡೆಯುವ ಮನುಷ್ಯರ ಕತೆ ಮೊದಲಿಗೆ ಆರಂಭವಾಗುತ್ತದೆ. ಬರವಣಿಗೆಯ ಹೆಚ್ಚಿನ ಭಾಗ ಇದಕ್ಕೇ ಮೀಸಲಾಗಿದೆ. ಆಫ್ರಿಕಾದ ಕಾಡಿನ ಸಹಜ ವಾತಾವರಣವೇ ಭೀಕರವಾಗಿದೆ. ಎಲ್ಲಮ್ಮನಿಗೆ ಭಯನಿವಾರಣೆಯಾಗಲೆಂದು ರಾಣೋಜಿ ಮನೆಯಲ್ಲಿ ತಂದು ತುಂಬಿರುವ ಕಾಡುಪ್ರಾಣಿಗಳ ಅವಶೇಷಗಳು ವಾತಾವರಣದ ಭಯಾನಕತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಈ ವಾತಾವರಣದಲ್ಲಿ ಅಸಹಜವೆನ್ನುವಂತೆ ದಂಪತಿಗಳ ಪ್ರೀತಿ, ಸರಸ, ಹುಡುಗಾಟದಿಂದ ಕತೆ ಆರಂಭವಾಗುತ್ತದೆ. ಇದು ಕೂಡ ಎಲ್ಲಮ್ಮನ ಭಯವನ್ನು ಹೊಡೆದೋಡಿಸುವ ತಂತ್ರವಾಗುತ್ತದೆ. ಇಲ್ಲಿಯೇ, “ಫಣಿವೇಣಿ” ಎಂಬ ಹಳೆಯ ಮಾತಿನೊಂದಿಗೆ, “ಆದರೆ ಹೀಗೇ, ಇಂಥಾದ್ದೇ, ಒಂದು ಸರ್ಪ ಬಂದಿತು ಎನ್ನೋಣ-ನಿನ್ನ ಮೈಗೆ ಹೀಗೆ ಸುತ್ತಿತು ಎನ್ನೋಣ” ಎಂಬ ಸೂಚನೆಯೊಂದು ಹುಡುಗಾಟದಲ್ಲಿ ಸುಳಿದು ಹೋಗುತ್ತದೆ. ಎಲ್ಲಮ್ಮ ಹೆಬ್ಬಾವಿನಂತೆ ರಾಣೋಜಿಯನ್ನು ಅಪ್ಪಿಕೊಳ್ಳುವ ಒಂದು ವಿವರವೂ ಇದೆ. ಇಲ್ಲಿ ಮುಂಬರುವ ವ್ಯಂಗ್ಯದ ಸೂಚನೆ ಸುಮ್ಮನೇ ಸರಿದು ಹೋಗುತ್ತದೆ. ಇಡೀ ಹುಡುಗಾಟದ ನಡುವೆ ಮುಂಬರುವ ದುರಂತದ ಸೂಚನೆ ಕಾಣುವದಿಲ್ಲ. ಆದರೆ ಹುಡುಗಾಟದ ಜೊತೆಗೆ ಗಂಡ-ಹೆಂಡತಿಯ ನಡುವಿನ ಪ್ರೀತಿಯ ಸಂಬಂಧ ದಟ್ಟವಾಗಿ ಕಾಣುತ್ತದೆ. ಎಲ್ಲಮನ ಭಯವನ್ನು ಹೊಡೆದೋಡಿಸಿ ಅವಳನ್ನು ಈ ಪ್ರದೇಶಕ್ಕೆ ಒಗ್ಗಿಸಬೇಕೆಂಬ ಯತ್ನದಲ್ಲಿ ರಾಣೋಜಿಯ ಪ್ರಾಮಾಣಿಕ ಪ್ರೀತಿ ಇದೆ. ಆದರೆ ಅದಕ್ಕಾಗಿ ಅವನು ಬಳಸುವ ಹುಡುಗಾಟದ ತಂತ್ರ ಯಾರೂ ಊಹಿಸದ ದುರಂತಕ್ಕೆ ಕಾರಣವಾಗಿ ಎಲ್ಲಮ್ಮನನ್ನು ನುಂಗಿಹಾಕುತ್ತದೆ. ಈ ಚಿತ್ರವೇ ಭಯಾನಕವಾಗಿದೆ.

ಇದನ್ನು ಓದಿದ್ದೀರಾ?: ‘ಶ್ರೀ ಸ್ವಾಮಿ’ಯವರ ಕತೆ | ಬೀಬೀ ನಾಚ್ಚಿಯಾರ್

ಭಯನಿವಾರಣೆಗಾಗಿ ರಾಣೋಜಿ ಬಳಸಿಕೊಳ್ಳುವದು ಸತ್ತ ಹೆಬ್ಬಾವನ್ನು ಅದು ಗಿಡದ ಟೊಂಗೆಯೊಂದರಿಂದ ಜೋತಾಡಿಕೊಂಡಿದ್ದಾಗ ನೋಡುವ ರಾಣೋಜಿ ಅದನ್ನು ಕೊಂದು ಅದರ ಹೆಣವನ್ನು ಮನೆಯಲ್ಲಿರಿಸುತ್ತಾನೆ. ಹುಡುಗಾಟಕ್ಕಾಗಿ ಹೆಂಡತಿಯನ್ನು ಹೆದರಿಸಿ ಅವಳ ಭಯನಿವಾರಣೆ ಮಾಡಬೇಕೆಂಬುದು ಅವನ ಉದ್ದೇಶ. ಆದರೆ ಹಾಗೆ ಹಾವನ್ನು ಕೊಲ್ಲುವಾಗ ಅದರ ಜೊತೆಗಾರ ಹೆಬ್ಬಾವನ್ನು ಅವನು ಗಮನಿಸಿರಲಿಲ್ಲ. ಜೊತೆಗೆ ಅದನ್ನು ಕೊಲ್ಲುವಾಗ ಅವನು ಗಿಡದ ಬಳಿ ಒತ್ತಿ ನಿಂತದ್ದು ಅದರ ಜೊತೆಗಾರ ಹೆಬ್ಬಾವಿನ ದೇಹಕ್ಕೆ!

ಈ ಹಾವುಗಳ ನಡುವಿನ ಸಂಬಂಧ ಇನ್ನೊಂದು ಕತೆಯನ್ನು ಹೇಳುತ್ತದೆ. ರಾಣೋಜಿ-ಎಲ್ಲಮ್ಮರ ನಡುವಿನ ಪ್ರೀತಿ, ಹಾಗೆ ನೋಡಿದರೆ ವಿಶೇಷವಾದದ್ದಲ್ಲವೆಂದೇ ಹೇಳಬೇಕು. ಮನುಷ್ಯರಲ್ಲಿ ಅಂಥ ಪ್ರೀತಿ ಸಹಜವೇ. ಸ್ವಲ್ಪ ಒರಟಾಗಿಯೇ ಚಿತ್ರಿತವಾಗಿರುವ ಈ ಪ್ರೀತಿ ಹಾವುಗಳ ನಡುವಿನ ಪ್ರೀತಿಯ ಬಗ್ಗೆ ಪರೋಕ್ಷವಾಗಿ ನಮ್ಮ ಗಮನ ಸೆಳೆಯುತ್ತದೆ. ತಾನು ಪ್ರೀತಿಸಿದ್ದ ಜೊತೆಗಾರ್ತಿಯನ್ನು ಕೊಂದವನ ಹೆಂಡತಿಯನ್ನು ಕೊಂದು ಸೇಡು ತೀರಿಸಿಕೊಳ್ಳುವದು ಮನುಷ್ಯರಲ್ಲಿ ಕಾಣುವ ಸೇಡಿನ ಹಾಗೆ ಕಾಣುತ್ತದೆ. ತಾನು ಕಚ್ಚಿ ಕೊಂದ ಎಲ್ಲಮ್ಮ ತನ್ನ ಜೊತೆಗಾರ್ತಿಯನ್ನು ಕೊಂದವನ ಜೊತೆಗಾರ್ತಿ, ಅವಳನ್ನು ಕೊಂದರೆ ತನಗಾದ ಸಂಕಟವನ್ನು ಅವಳ ಗಂಡನೂ ಅನುಭವಿಸುತ್ತಾನೆ ಎಂದೆಲ್ಲಾ ಅದು ಯೋಚಿಸಿರಲಾರದು. ಇದೊಂದು ಆಕಸ್ಮಿಕವೂ ಇರಬಹುದು, ಅನಿರ್ದಿಷ್ಟವೂ ಇರಬಹುದು. ಇಲ್ಲಿ ಮುಖ್ಯವಾದದ್ದು ಆ ಹಾವುಗಳ ನಡುವೆ ಪ್ರಕಟವಾಗುವ ಪ್ರೀತಿ. ಸತ್ತುಹೋದ ತನ್ನ ಜೊತೆಗಾತಿಯ ಕಳೇಬರವನ್ನು ಹುಡುಕಿಕೊಂಡು ಬಂದು, ಅದನ್ನು ಎಳೆದುಕೊಂಡು ಹೋಗಿ, ಅದರ ಬಾಯಲ್ಲಿ ಬಾಯಿಟ್ಟು ದೇಹಕ್ಕೆ ದೇಹವನ್ನು ಹೆಣೆದು ತೋರಿಸುವ ಆಶ್ಚರ್ಯಕರವಾದ ಪ್ರೀತಿ. ಇದು ಆಕಸ್ಮಿಕವೂ ಅಲ್ಲ, ಅನುದ್ದಿಷ್ಟವೂ ಅಲ್ಲ. ಮನುಷ್ಯರಲ್ಲಿ ಇರಬಹುದಾದ ಪ್ರೀತಿಗೆ ಇದು ಯಾವ ರೀತಿಯಲ್ಲೂ ಕಡಿಮೆಯದಲ್ಲ. ಅದಕ್ಕಾಗಿಯೇ ಮನುಷ್ಯರ ನಡುವಿನ ಪ್ರೀತಿಯ ವರ್ಣನೆಯಿಂದ ಆರಂಭವಾಗುವ ಕತೆ ಪ್ರಾಣಿಗಳ ನಡುವಿನ ಪ್ರೀತಿಯ ವರ್ಣನೆಯೊಂದಿಗೆ ಮುಕ್ತಾಯವಾಗುವದು ಅರ್ಥಪೂರ್ಣವಾಗಿದೆ.

ಮನುಷ್ಯ ಈ ಲೋಕವನ್ನು ನೋಡುವದು ತಾನೇ ಈ ಸೃಷ್ಟಿಯ ಕೇಂದ್ರ ಎನ್ನುವ ರೀತಿಯಿಂದ. ಅದರಿಂದಾಗಿ ಉಳಿದ ಜೀವಜಗತ್ತಿನ ಬದುಕು ಅವನಿಗೆ ಗೌಣವಾಗಿ ಕಾಣುತ್ತದೆ. ಈ ಜಗತ್ತು, ಇಲ್ಲಿಯ ಜೀವಲೋಕವೆಲ್ಲ ಇರುವುದು ತನಗಾಗಿ, ತನ್ನ ಸುಖಕ್ಕಾಗಿ, ತನ್ನ ಭೋಗಕ್ಕಾಗಿ ಎಂದು ಅವನು ಭಾವಿಸಿದ್ದಾನೆ. ಇದಕ್ಕೆ ಅಡ್ಡಿಯಾಗುವ ಹಾವು, ಹುಲಿ, ಸಿಂಹ ಇತ್ಯಾದಿಗಳೆಲ್ಲ ಅವನಿಗೆ ಕ್ರೂರಪ್ರಾಣಿಗಳಾಗಿ ಮಾತ್ರ ಕಾಣುತ್ತವೆ. ಅದಕ್ಕಾಗಿ ಅವುಗಳನ್ನು ಕಂಡಲ್ಲಿ ಕೊಲ್ಲುವದೇ ತನ್ನ ಕರ್ತವ್ಯ ಎಂದು ಭಾವಿಸುತ್ತಾನೆ. ಕೊಲ್ಲುವದು ಅವನಿಗೊಂದು ಆಟವಾಗುತ್ತದೆ. ಹಾವಿನ ಚರ್ಮವನ್ನು ಮಾರಿ ಹಣಗಳಿಸುವ ಆಶೆಯೂ ರಾಣೋಜಿಯಂಥವರಿಗೆ ಇಲ್ಲದಿಲ್ಲ. ಆದರೆ ಮನುಷ್ಯರ ಈ ಪ್ರವೃತ್ತಿಯನ್ನು ಪ್ರಾಣಿಗಳ ದೃಷ್ಟಿಯಿಂದ ನೋಡಿದರೆ ಆಟಕ್ಕಾಗಿ ಹಣಕ್ಕಾಗಿ ಅವುಗಳನ್ನು ಕೊಲ್ಲುವ ಮನುಷ್ಯ ಎಂಥ ಕ್ರೂರಿಯಾಗಿ ಕಾಣಬಹುದು?

‘ಭಯನಿವಾರಣೆ’ ಇಂಥ ಹೊಸ ನೋಟವನ್ನು ಒದಗಿಸುವ ಕತೆಯಾಗಿದೆ. ”ಅದರಲ್ಲಿ ನರನಾರಿಯರ ಕಡೆಗೆ ಗಮನ ಕೊಡದೆ ಇದ್ದು, ಸತಿಪತಿ ಸರ್ಪಜೀವಿಗಳ ಕಡೆಗೆ ಗಮನವಾದರೆ ಹೊಸದೊಂದು ಪ್ರಪಂಚದ ಬಾಗಿಲು ತೆರೆದಂತಾಗುವದು” ಎಂದು ಲೇಖಕರು “ದಿನಾರಿ” ಕಥಾಸಂಕಲನದ ಮೊದಲ ಮಾತಿನಲ್ಲಿ ಹೇಳಿದ್ದಾರೆ. ಆದರೆ ಅದಕ್ಕಾಗಿ ನರನಾರಿಯರ ಕತೆಯನ್ನು ಗಮನಿಸದಿರುವಂತಿಲ್ಲ. ಅದಿಲ್ಲದೆ ಇದಕ್ಕೆ ಸರಿಯಾದ ಮುನ್ನೆಲೆ ಸಿಗುವದಿಲ್ಲ. ಕತೆಯಲ್ಲಿ ಎಲ್ಲಮ್ಮನ ಸಾವೊಂದೇ ದುರಂತವಲ್ಲ; ಹಾವಿನ ಸಾವಿನದೂ ಒಂದು ದುರಂತ. ಒಂದು ಇನ್ನೊಂದರ ಕಾರಣವೂ ಹೌದು, ಪರಿಣಾಮವೂ ಹೌದು.

ಈ ದೃಷ್ಟಿಯಿಂದ ಇದೊಂದು ಹೊಸಬಗೆಯ ಕತೆ. ಬರವಣಿಗೆಯಲ್ಲಿ ಅಂಥ ನಯಗಾರಿಕೆ ಇಲ್ಲವಾದರೂ ಪರಿಣಾಮದ ದೃಷ್ಟಿಯಿಂದ ಮಹತ್ವದ ಕತೆ. ಜೀವಲೋಕವನ್ನು ನೋಡುವ ನಮ್ಮ ದೃಷ್ಟಿಯನ್ನು ತಿದ್ದುವ ಕತೆ.

(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿರಂಜನ ಅವರ ಕತೆ | ಕೊನೆಯ ಗಿರಾಕಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ತರಾಸು ಅವರ ಕತೆ | ಇನ್ನೊಂದು ಮುಖ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

Download Eedina App Android / iOS

X