ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ನಾವು ನಾಲ್ಕು ಜನ ಬೊಂಬಾಯಿಗೆ ಬಂದು ಗೋರೇಗಾಂವಿನಲ್ಲಿ ಮನೆಮಾಡಿದಂದು ನಮ್ಮ ಜೀವನ ಯಾಂತ್ರಿಕವಾಗಿಹೋಗಿ ರೋಸಿಹೋಗಿತ್ತು. ಬೆಳಗ್ಗೆ ಎದ್ದು ಹಾಲಿನವನು ಬಂದು ‘ದೂಧ್’ ಎಂದು ಕೂಗುವುದೇ ತಡ, ಚಡಪಡನೆ ಎದ್ದು, ಸ್ಪೋವ್ ಹಚ್ಚಿ ಕಾಫೀ ಮಾಡಿ ಸುರಿದುಕೊಳ್ಳುವುದು; ಇನ್ನೂ ಪೂರ್ತಿ ಕುಡಿದೇ ಇರುವುದಿಲ್ಲ, ಹಾಗೇ ಎದ್ದು ಅಗ್ಗಿಷ್ಟಿಕೆಗಳನ್ನು ಹಚ್ಚಿ ಒಂದು ಅನ್ನ ಒಂದು ಹುಳಿಗೆ ಎಸರು ಇಡುವುದು; ಮಧ್ಯೆ ‘ಬಂಬ’ಕ್ಕೆ ಬೆಂಕಿಹಚ್ಚಿ ನೀರು ಕಾಯಿಸುವುದು; ಸ್ನಾನಮಾಡಿ ನೆನೆದ ಕೂದಲು ಆರುವುದೇ ತಡ; ಮಾಡಿದ ಅಡುಗೆಯನ್ನು ಬೇಗಬೇಗನೆ, ಏನು ಹೆಚ್ಚ ಏನು ಕಡಿಮೆಯೋ, ಒಂದೂ ನೋಡದೆ ಬಕಬಕನೆ ತಿಂದು ಪ್ರಾಣ ಹೋಯಿತೋ ಎಂಬ ಅವಸರದಿಂದ 8-50ರ ಗಾಡಿ ಹಿಡಿದು ಚರ್ಚ್ಗೇಟ್ ಸ್ಟೇಷನ್ನಿನಲ್ಲಿ ಇಳಿಯುವುದು; ಗಾಡಿ ಪ್ಲಾಟ್ಫಾರಂನಲ್ಲಿ ನಿಲ್ಲುವುದಕ್ಕಿಲ್ಲ, ಇಳಿದು ಕಚೇರಿಗೆ ದೌಡಾಯಿಸುವುದು; ಸಾಯಂಕಾಲ ಕಚೇರಿ ಮುಗಿಸಿಕೊಂಡು ಮೊದಲನೇ ಗಾಡಿ ಹಿಡಿದು ಮನೆಗೆ ವಾಪಸ್ಸು ಬಂದರೆ ಮತ್ತೆ ನಳವೃತ್ತಿ ಕಾದಿರುತ್ತಿತ್ತು; ಊಟವೆಲ್ಲಾ ಆಗುವ ಹೊತ್ತಿಗೆ ಇನ್ನು ಸಾಕಪ್ಪ ಮಲಗಿದರೆ ಆಯಿತು ಎಂಬ ಯೋಚನೆ; ಮಲಗಿ ಒಂದು ಹತ್ತು ನಿಮಿಷ ಹರಟೆ, ನಿದ್ದೆ; ಪುನಃ ಬೆಳಗ್ಗೆ ಏಳುವ ಹೊತ್ತಿಗೆ ‘ದೂದ್’ ಎಂದು…
ದಿನವೂ ಇದೇ ಗೋಳಾಗಿದ್ದಿತು. ಭಾನುವಾರ? ಆಹಾ! ವಾರಕ್ಕೊಂದು ವೇಳೆ ತಪ್ಪದೇ ಬರುತ್ತಿದ್ದ ಆ ಅತಿಥಿಯ ಆಗಮನವು ಎಷ್ಟು ಹಿತಕರವಾಗಿರುತ್ತಿದ್ದಿತು! ಆ ದಿನ ಸೋಮಾರಿತನಕ್ಕೆ ಮೀಸಲು. ಕೀಲಿ ಮುಗಿದ ಯಂತ್ರದ ಹಾಗೆ ನಮ್ಮ ದಿನಚರಿ ನಿಧಾನವಾಗಿ ಸರಿಯುವುದು. ಹಾಲಿನವನು ಹತ್ತು ಬಾರಿ ‘ದೂದ್! ದೂದ್’ ಎಂದು ಹೊಡಕೊಂಡು ಕದ ಧಡಧಡ ದಬ್ಬಿದ ಮೇಲೆ ಎದ್ದು ಹಾಲು ತೆಗೆದುಕೊಳ್ಳುತ್ತಿದ್ದುದು. ಯಾರೋ ಒಬ್ಬರು ಎದ್ದು ನಿಧಾನವಾಗಿ ಕಾಫಿ ಹಾಕುವರು. ಆರಾಮವಾಗಿ ಹರಟೆ ಹೊಡೆಯುತ್ತಾ ಕಾಫಿ ಸೇವನೆ. ಮುಖಕ್ಷೌರಕ್ಕೆ ಆ ದಿನ ರಜಾ! ನೀರು ಕಾದಿದೆ ನೀವು ಸ್ನಾನಮಾಡಿ ಎಂದು ಒಬ್ಬರು ಹೇಳಿದರೆ, ನೀವೇ ಮೊದಲು ಮಾಡಿಬಿಡಿ ಎಂದು ಇನ್ನೊಬ್ಬರು; ಹೀಗೆ ಕಾದ ನೀರೆಲ್ಲ ಆರಿದ ಮೇಲೆ ಸ್ನಾನ. ಐದಾರು ತರಕಾರಿಗಳನ್ನು ಹಾಕಿ ಹುಳಿ; ಹಪ್ಪಳ ಸಂಡಿಗೆ ಕರಿದು, ಮಧ್ಯಾಹ್ನ ಎರಡು ಗಂಟೆಗೆ ಹೊಟ್ಟೆ ಬಿರಿಯ ಊಟ; ಊಟ ಆದಮೇಲೆ ಹಾಸಿಗೆಗಳನ್ನು ಎಲ್ಲಂದರಲ್ಲಿ, ಹೇಗೆಂದರೆ ಹಾಗೆ ಉರುಳಿಸಿ ಬಿದ್ದುಕೊಂಡುಬಿಟ್ಟರೆ ಸಂಜೆ ಆರು ಗಂಟೆಯವರೆಗೂ ಏಳುವ ಮಾತೇ ಇಲ್ಲ. ಆ ದಿನ ರೈಲಿನ ಮುಖ ಕೂಡ ನೋಡಬಾರದೆಂದು ಪ್ರತಿಜ್ಞೆ. ಮಲಾಡ್ ಕಡೆಯೋ, ಜೋಗೇಶ್ವರಿಯ ಕಡೆಯೋ ಒಂದಿಷ್ಟು ತಿರುಗಾಡುವುದಕ್ಕೆ ಹೊರಟು, ಅಲ್ಲೇ ಯಾವುದಾದರೂ ಒಂದು ಮಂಗಳೂರು ಹೋಟೆಲಿನಲ್ಲಿ ದೋಸೆ ಚಹಾ ತೆಗೆದುಕೊಂಡು ಎಂಟು ಗಂಟೆಯ ಹೊತ್ತಿಗೆ ಮನೆಗೆ ವಾಪಸು. ರಾತ್ರಿಗೆ ಚಪಾತಿ, ಒಗ್ಗರಣೆ ಅನ್ನ ತಿಂದು ಮಲಗಿಬಿಡುವುದು. ಮತ್ತೆ ಸೋಮವಾರ ಬೆಳಗ್ಗೆಯಿಂದ ಮೊದಲಿನಂತೆ- ಹೀಗೆ ನಡೆದಿತ್ತು ನಮ್ಮ ಜೀವನ ನಿರಂತರವಾಗಿ ಎರಡೂವರೆ ವರ್ಷಗಳಿಂದ.
ಇದನ್ನು ಓದಿದ್ದೀರಾ?: ಮೇವುಂಡಿ ಮಲ್ಲಾರಿ ಅವರ ಕತೆ | ಸುರಸುಂದರಿ
ಸಂಗೀತವೇ, ಸಾಹಿತ್ಯವೇ, ಭಾಷಣ ಕೇಳುವುದಕ್ಕೆ ಹೋಗುವುದೇ, ಉತ್ಸವಗಳಿಗೆ ಹೋಗುವುದೇ, ಒಂದು ವ್ಯಾಸಂಗವೇ, ಒಂದು ಹವ್ಯಾಸವೇ ಯಾವುದಕ್ಕೂ ಆಸ್ಪದವಿರಲಿಲ್ಲ. ಅಡುಗೆ, ಆಫೀಸು, ಊಟ, ನಿದ್ದೆ ಇವುಗಳ ಚಕ್ರವನ್ನು ಸುತ್ತಿ ಸುತ್ತಿ ಗಾಣದ ಎತ್ತಿನಂತಾಗಿದ್ದೆವು.
ಈ ಚಕ್ರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟು ಅನೇಕ ಬಾರಿ ವಿಫಲರಾಗಿದ್ದೆವು. ಆಫೀಸಿಗೆ ಹತ್ತಿರವಾಗಿ ಅಥವಾ ಕನ್ನಡಿಗರ ಸಾಮಾಜಿಕ ಜೀವನಕ್ಕೆ ಅನುಕೂಲವಾದ ಮಾತುಂಗಾ ಅಥವಾ ಗಿರಗಾಂವಿಗೆ ಹತ್ತಿರವಾಗಿ ಮನೆ ಮಾಡುವ ಪ್ರಶ್ನೆ ಉಳಿದಿದ್ದೇ ಇರಲಿಲ್ಲ. ಈ ಜನವರ್ಜಿತ ದೂರದ ಹಳ್ಳಿಯಲ್ಲಿ ಮನೆ ಸಿಕ್ಕಿದ್ದೇ ಒಂದು ಸಾಹಸದ ಕತೆಯಾಯಿತು. ಈ ಎರಡು ಕೊಠಡಿಗಳ ಝೋಪಡಿಗಾಗಿ ನಾವೆಷ್ಟು ಜನರ ಕೈಕಾಲು ಹಿಡಿದದ್ದು- ಎಷ್ಟು ಸುಳ್ಳ ಹೇಳಿದ್ದು, ಎಷ್ಟು ಜನರಿಂದ ಶಿಫಾರಸು ತಂದದ್ದು! ಇಷ್ಟು ಮಾಡಿ ಸಿಕ್ಕಮೇಲೆ, ಬೇರೊಂದು ಪ್ರಯತ್ನ ಮಾಡಲು ಆಸೆಯಾಗಲೀ ಶಕ್ತಿಯಾಗಲೀ ನಮ್ಮಲ್ಲಿ ಉಳಿದಿರಲಿಲ್ಲ. ಇಷ್ಟಾಗಿ ನಮಗೆ ಸಿಕ್ಕ ಆ ಎರಡು ಕೊಠಡಿಗಳು ಒಂದರ ಪಕ್ಕದಲ್ಲಿ ಒಂದು ಇರಲಿಲ್ಲ. ನಮಗಿಂತ ಮೊದಲು ಬಂದವರು, ಸಾಲಿನಲ್ಲಿ ಕಟ್ಟಿದ್ದ ಐದು ಕೊಠಡಿಗಳಲ್ಲಿ ಮಧ್ಯದ ಮೂರನ್ನು ಮೊದಲೇ ಹಿಡಿದುಬಿಟ್ಟಿದ್ದರು. ನಮಗೆ ಸಿಕ್ಕಿದ್ದು ಈ ಕೊನೆಯದು ಒಂದು, ಆ ಕೊನೆಯದು ಒಂದು. ಇಷ್ಟು ಸಿಕ್ಕಿದ್ದೇ ನಮ್ಮ ಪುಣ್ಯ, ತಲೆಯ ಮೇಲೆ ಒಂದು ಸೂರಾಯಿತು ಎಂದುಕೊಂಡು ತೆಪ್ಪಗಿದ್ದೆವು. ಜಾಗ ಬದಲಾಯಿಸುವ ಮಾತು ಬೇರೆ ಉಳಿದಿರಲಿಲ್ಲ.
ಇದನ್ನು ಓದಿದ್ದೀರಾ?: ‘ಹೊಯಿಸಳ’ ಅವರ ಕತೆ | ಭಯನಿವಾರಣೆ
ಅಡುಗೆ ಮಾಡಿಕೊಳ್ಳುವ ಕಷ್ಟ ತಪ್ಪಿದರೆ ಒಂದಿಷ್ಟು ಪುರಸೊತ್ತು ಸಿಕ್ಕುತ್ತೆ ಎಂದು ಏನೇನೋ ಪ್ರಯೋಗಗಳನ್ನು ಮಾಡಿ ನೋಡಿದೆವು. ಮೊದಲು ದೂರದ ಹೋಟಲೊಂದರಿಂದ ಊಟ ತರಿಸಿಕೊಳ್ಳುವ ಏರ್ಪಾಡು ಮಾಡಿದೆವು. ಷುರು ಮಾಡಿದ ಹದಿನೈದು ದಿನದಲ್ಲೇ ಒಬ್ಬರು ಹೊಟ್ಟೆನೋವು, ಇನ್ನೊಬ್ಬರು ಅಮಶಂಕೆ, ಮತ್ತೊಬ್ಬರು ಕಣ್ಣು ಮೂಗು ಉರಿ ಎಂದು ರಾಗ ಎತ್ತುತ್ತಾ ಬಂದರು. ಮುಖ್ಯ ಹೋಟಲಿನವನು ಕೊಡುತ್ತಿದ್ದ ಆ ಚಪಾತಿಗಳನ್ನು ಅಗಿಯುವುದರಲ್ಲಿ ದವಡೆನೋವು ಬಂದು ಬೇಸರ ಬಂದಿತ್ತು. ಹೋಟಲೂಟವನ್ನು ತಪ್ಪಿಸಿದ್ದಾಯಿತು. ಆಮೇಲೆ ಅಡುಗೆಯವನನ್ನು ಇಡುವ ಯೋಚನೆ ಮಾಡಿದೆವು. ಈ ಹಾಳು ಕೊಂಪೆಗೆ ಯಾವ ಅಡುಗೆಯವನು ಬರುತ್ತಾನೆ? ಕೊನೆಗೆ ಮಾತುಂಗಾ ಹೋಟಲಿನಲ್ಲಿ ಕೆಲಸಮಾಡುತ್ತಿದ್ದ ಚಾಲೂಕಾಗಿ ಕಾಣುತ್ತಿದ್ದ ಒಬ್ಬ ಮಾಣಿಗೆ ಮೂವತ್ತು ರೂಪಾಯಿ ಸಂಬಳ ಕೊಡುತ್ತೇವೆ, ಎರಡು ಹೊತ್ತು ಊಟ, ಕಾಫಿ ತಿಂಡಿ, ಬಟ್ಟೆ ಎಲ್ಲಾ ಕೊಡುತ್ತೇವೆ ಬಾ ಎಂದು ಒಪ್ಪಿಸಿ ಕರೆದುಕೊಂಡು ಬಂದೆವು. ಚಾಲೂಕಾಗಿ ಕಾಣುತ್ತಾನೆ ಹುಡುಗ ಎಂದು ನಾವು ಕರೆದು ತಂದರೆ ಅವನು ಚಾಲೂಕತನವನ್ನು ನಮಗೇ ತೋರಿಸಿಬಿಟ್ಟ. ಒಂದು ಸಂಜೆ ನಾವು ಬಂದು ನೋಡುವಷ್ಟರಲ್ಲಿ ಅವನಿಲ್ಲವೇ ಇಲ್ಲ! ಶಿವರಾಮಯ್ಯನ ಎರಡು ಉಣ್ಣೆ ಸೂಟು ಮಾಯವಾಗಿತ್ತು. ಗೋಪಾಲರಾಯರ ಮದುವೆಯಲ್ಲಿ ಕೊಟ್ಟಿದ್ದ ರೇಶಿಮೆ ಮಗುಟ ಇರಲಿಲ್ಲ. ನಾನು ಮರೆತು ಹೋದ ಗಡಿಯಾರ ಕೂಡ ಸೂಟು ಮಗುಟಗಳ ಹಾದಿಯನ್ನೇ ಹಿಡಿದಿದ್ದವು! ಪೊಲೀಸಿಗೆ ಕಂಪ್ಲೇಂಟು ಕೊಟ್ಟೆವು; ಮಾತುಂಗಾ, ಫೋರ್ಟು ಅಲ್ಲಿಯ ಮಂಗಳೂರು ಹೋಟಲುಗಳಲ್ಲೆಲ್ಲಾ ವಿಚಾರಿಸಿದೆವು. ಏನೂ ಪ್ರಯೋಜನ ಆಗಲಿಲ್ಲ. ಹೋದ ಸಾಮಾನುಗಳು ಹೋಗೇ ಹೋದವು. ಇಷ್ಟಕ್ಕೂ ಧೈರ್ಯಗೆಡದೆ, ಐದಾರು ತಿಂಗಳಾದ ಮೇಲೆ ಮೈಸೂರು ಸಂಘದ ಅಡುಗೆ ಆಚಾರು ಸುಬ್ಬಣ್ಣನವರ ಶಿಫಾರಸಿನ ಮೇಲೆ ಮತ್ತೊಬ್ಬನನ್ನು ಹಿಡಿದುಕೊಂಡು ಬಂದೆವು. ಅವನು ಬೀಡಿ ಸೇದುತ್ತಾ ಚಪಾತಿ ಮಾಡುತ್ತಿದ್ದ; ಹೋಗಲಿ ಎಂದು ಸುಮ್ಮನಿದ್ದರೆ ಒಂದು ಶನಿವಾರ ಎಲ್ಲಿಗೋ ಹೋಗಿದ್ದವನು ಏಳು ಗಂಟೆಯ ಹೊತ್ತಿಗೆ ತೂರಾಡಿಕೊಂಡು ಬಂದು ಕೊಠಡಿಯಲ್ಲೆಲ್ಲಾ ವಾಂತಿ ಮಾಡಿಕೊಂಡುಬಿಟ್ಟ. ಇದೇನು ಗ್ರಹಚಾರ ಎಂದು ನೋಡಲು ಹೋದರೆ ಈಚಲ ಮರದವ್ವನ ವಾಸನೆ! ಮಾರನೇ ದಿನ ಸಂಬಳ ಕೊಟ್ಟು ಅವನನ್ನು ವಾಪಸು ಕಳಿಸಿದೆವು. ಆದರೂ ಅಡುಗೆಯವನನ್ನು ಇಟ್ಟುಕೊಳ್ಳುವ ಚಪಲ ನಮ್ಮನ್ನು ಬಿಡಲಿಲ್ಲ. ವರುಷ ಹೀಗೆ ಕಳೆದಮೇಲೆ ಮತ್ತೊಬ್ಬ ಬಹಳ ಸಭ್ಯಸ್ತನ ಹಾಗೆ ಕಾಣುತ್ತಿದ್ದ ಒಬ್ಬ ಹುಡುಗನನ್ನು ತಂದಿಟ್ಟುಕೊಂಡೆವು. ಬಹಳ ಚೆನ್ನಾಗಿ ಅಡುಗೆ ಮಾಡುತ್ತಿದ್ದ. ಕೆಲಸವೂ ನಾಜೂಕು; ಒಂದು ಚೂರು ದಂಡ ಮಾಡುತ್ತಿರಲಿಲ್ಲ. ಶುಭ್ರನೂ ಹೌದು-ಎಲ್ಲಾ ಚೆನ್ನಾಗಿತ್ತು, ಒಂದು ದಿನ ಮಧ್ಯಾಹ್ನ ನಾನು ಎಂದಿಗಿಂತ ಮುಂಚೆ ಬಂದು ಕದ ತಟ್ಟಿದಾಗ ಒಳಗೆ ಯಾರೋ ಮಾತಾಡುತ್ತಾ ಇದ್ದಂತೆ ಇತ್ತು. ಕದ ತೆಗೆಯುವುದು ಸ್ವಲ್ಪ ಹೊತ್ತಾಯಿತು. ತೆಗೆದಮೇಲೆ ನೋಡಿದರೆ ಒಳಗೆ ಮೂಲೆಯಲ್ಲಿ ಒಬ್ಬ ಕಾಮಾಟಿಯರ ಹುಡುಗಿ ಮುಖ ಮುಚ್ಚಿಕೊಂಡು ನಿಂತಿದ್ದಾಳೆ. ಇವನು ನನ್ನ ಕಾಲಿಗೆ ಬಿದ್ದು, ಕ್ಷಮಿಸಬೇಕು, ಏನೋ ಆಗಿಹೋಯಿತು, ನನ್ನ ಮಾನ ಕಾಪಾಡಿ ಎಂದು ಬೇಡಿಕೊಂಡನು. ಆ ಹುಡುಗಿಯನ್ನು ಹೋಗಹೇಳಿ, ನೀನು ಇನ್ನು ಗಂಟುಮೂಟೆ ಕಟ್ಟಿಕೊಂಡು ಹೊರಡು, ಇನ್ನು ಕ್ಷಣ ಇಲ್ಲಿರಬೇಡ ಎಂದು ಅವನನ್ನು ಕಳಿಸಿದ್ದಾಯಿತು. ಸದ್ಯ, ಪಕ್ಕದ ಮನೆಯವರಿಗೆ ಯಾರಿಗೂ ಈ ವಿಷಯ ಗೊತ್ತಾಗಲಿಲ್ಲ. ಈ ಸಂಗತಿ ಆದಮೇಲೆ ಅಡುಗೆಯವರನ್ನು ಇಟ್ಟುಕೊಳ್ಳುವ ಯೋಚನೆ ದೂರವಾಯಿತು.
ಅಂತೂ ಈ ರೀತಿಯ ಜೀವನವನ್ನು ಮೂರು ವರುಷ ನಡೆಸಿದೆವು. ಅಷ್ಟುಹೊತ್ತಿಗೆ ಇದು ನಮಗೆ ರೋಸಿ ಹೋಗಿ ಏನಾದರೂ ಮಾಡಿ ಈ ವ್ಯರ್ಥ ಜೀವನವನ್ನು ಬದಲಾಯಿಸಿಕೊಳ್ಳಬೇಕು, ಎಷ್ಟು ದಿನ ಹೀಗೆ ಎಂದು ದಬ್ಬುವುದು ಎಂಬ ಯೋಚನೆ ಬಲವಾಯಿತು. ಏನಾದರೂ ಮಾಡಬೇಕು ಎಂಬ ಯೋಚನೆಯೇ ಹೊರತು, ಏನು ಮಾಡಿದರೆ ಸರಿ ಎಂಬುದು ತೋಚದೆ ಪೇಚಾಡುತ್ತಿದ್ದೆವು. ಗೋಪಾಲರಾಯರನ್ನು ಬಿಟ್ಟರೆ ಮಿಕ್ಕ ನಾವು ಮೂರು ಜನ ಗುಂಡುಗೋವಿಗಳು. ಮದುವೆಯಾಗುವ ವಿಚಾರ ನಮ್ಮಿಂದ ಬಹಳ ದೂರವಾಗಿತ್ತು. ಮೊದಲನೆಯದಾಗಿ ನಮಗೆ ಬರುತ್ತಿದ್ದ ಸಂಬಳ ನಮ್ಮ ಖರ್ಚಿಗೆ ಸರಿಹೋಗುತ್ತಿತ್ತೇ ಹೊರತು ಚೊಕ್ಕವಾಗಿ ಸಂಸಾರ ಮಾಡಲು ಪೂರೈಸುತ್ತಿರಲಿಲ್ಲ. ಖರ್ಚಿನ ಬಾಬತು ಹೇಗಾದರೂ ಇರಲಿ ಎಂದುಕೊಂಡರೆ, ಮದುವೆ ಮಾಡಿಕೊಂಡು ಯಾವ ಧೈರ್ಯದಿಂದ ಕೈಹಿಡಿದವಳನ್ನು ಈ ಹಾಳುಕೊಂಪೆಗೆ ಸಂಸಾರ ಮಾಡಲು ಕರೆದುಕೊಂಡು ಬರುವುದು? ಮನೆಯೋ, ಮಣ್ಣು ಮೆತ್ತಿದ ತಡಿಕೆಗಳಿಂದ ಕಟ್ಟಿದ್ದ ‘ಕಚ್ಚಾ’ ಕಟ್ಟಡ. ನಲ್ಲಿ ಇಲ್ಲ; ಭಾವಿಯಿಂದ ನೀರು ಸೇದಬೇಕು. ಅದೂ ಬೇಸಿಗೆಯಲ್ಲಿ ಒಂದು ತಿಂಗಳು ನೀರು ಇರುತ್ತಿರಲಿಲ್ಲ. ಆಗ ಅರ್ಧ ಫರ್ಲಾಂಗು ದೂರದ ಇನ್ನೊಂದು ಭಾವಿಯಿಂದ ನೀರು ತರಬೇಕಾಗುವುದು. ವಿದ್ಯುಚ್ಛಕ್ತಿಯ ದೀಪ ಇಲ್ಲ; ಸೀಮೆ ಎಣ್ಣೆ ಸಿಗುವುದೇ ದುರ್ಲಭ. ಎಲ್ಲಕ್ಕೂ ಮೇಲಾಗಿ ಜನವಿಹೀನ ಪ್ರದೇಶ. ನಮ್ಮ ಕಟ್ಟಡದಲ್ಲಿಯೇ ಇದ್ದ ಬೇರೆ ಮೂರು ಕೊಠಡಿಗಳಲ್ಲಿ ಸಂಸಾರಗಳು ಇದ್ದುವು ನಿಜ; ಆದರೆ ಅವರ ಭಾಷೆ ಮರಾಠಿ, ಗುಜರಾತಿ. ಕನ್ನಡ ಮಾತಾಡುವವರು ಹತ್ತಿರ ಇಲ್ಲ. ಮೂರು ಕಾಸಿಗೆ ಮೆಣಸಿನಕಾಯಿ ತರಬೇಕೆಂದರೂ ಭಾಷೆ ಗೊತ್ತಿಲ್ಲದಿದ್ದರೆ ಏನೂ ಸಾಗುವ ಹಾಗಿಲ್ಲ. ಯಾವ ಭಾಗ್ಯಕ್ಕೆಂದು ಮದುವೆ ಮಾಡಿಕೊಂಡ ಹೆಣ್ಣನ್ನು ಇಂತಹ ಕಡೆಗೆ ಕರಕೊಂಡು ಬರುವುದು? ಇವೆಲ್ಲಾ ಯೋಚನೆ ಬಂದು ನಮ್ಮ ಮದುವೆಗಳು ಮಂದುವರೆದಿದ್ದುವು.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ಈ ವಿಷಯವನ್ನೇ ತಿರುವುಮುರುವು ಹಾಕುತ್ತಾ ಒಂದು ದಿವಸ ಕುಳಿತಿದ್ದಾಗ ಗೋಪಾಲರಾಯರು ಇದ್ದಕ್ಕಿದ್ದ ಹಾಗೇ, “ನಾನು ಹೇಳುವ ಒಂದು ಮಾತು ನೀವು ಕೇಳಿದರೆ, ನಿಮಗೆ ಯಾವ ಯೋಚನೆಯೂ ಇಲ್ಲದ ಹಾಗೆ ಮಾಡುತ್ತೇನೆ” ಎಂದರು. ಅದೇನು ಹೇಳಿ, ಅದೇನು ಹೇಳಿ ಎಂದು ನಾವು ಮೂವರೂ ಅವರನ್ನು ಆಸೆಯಿಂದ ಪ್ರಶ್ನೆ ಮಾಡಿದೆವು.

ಗೋಪಾಲರಾಯರು ನಮ್ಮ ನಾಲ್ವರಲ್ಲಿ ಹಿರಿಯವರು. ನಾನು, ನಾಣಿ, ಶಿವರಾಮಯ್ಯ ಸುಮಾರು ಒಂದೇ ವಯಸ್ಸಿನವರು ಮತ್ತು ಚಿಕ್ಕಂದಿನಿಂದ ಗೆಳೆಯರು; ಒಟ್ಟಿಗೇ ಬೊಂಬಾಯಿಗೆ ಬಂದವರು. ಗೋರೇಗಾಂವಿನಲ್ಲಿ ಮನೆ ಮಾಡಿದಾಗ ಮೊದಲು ಇದ್ದವರು ನಾವು ಮೂವರೇ; ನಂತರ ಬಂದವರು ಗೋಪಾಲರಾಯರು. ಅವರ ಪೂರ್ವಪರಿಚಯ ನಮಗಿರಲಿಲ್ಲ. ನಾವು ಬೊಂಬಾಯಿಗೆ ಬಂದ ಹೊಸತರಲ್ಲಿ ಜಾಗ ಸಿಕ್ಕದೆ ಅಲ್ಲಿ ಇಲ್ಲಿ ಪರದಾಡುತ್ತಿದ್ದಾಗ ಒಬ್ಬ ಪುಣ್ಯಾತ್ಮರು ಮೂರು ತಿಂಗಳ ಕಾಲ ನಮಗೆ ಜಾಗವನ್ನು ಕೊಟ್ಟಿದ್ದರು. ಅವರ ಮೂಲಕ ಬಂದು ನಮ್ಮಲ್ಲಿ ಸೇರಿಕೊಂಡವರು ಗೋಪಾಲರಾಯರು. ಪೂರ್ವಪರಿಚಯವಿಲ್ಲದಿದ್ದರೂ ಬಂದ ನಾಲ್ಕೈದು ದಿನಗಳಲ್ಲೇ ಎಷ್ಟೋ ವರ್ಷಗಳ ಗೆಳೆಯರಿಗಿಂತ ಆಪ್ತರಾಗಿಬಿಟ್ಟರು. ಅವರ ಸೌಜನ್ಯ ಸಹಾಯಕತೆ ಇವುಗಳಿಂದ ಎಲ್ಲರಿಗೂ ಅಚ್ಚುಮೆಚ್ಚಾಗಿಬಿಟ್ಟರು. ಅವರದು ಮಾತು ಕಡಿಮೆ; ಕೆಲಸ ಜಾಸ್ತಿ. ಒಂದು ನಿಮಿಷವೂ ಸುಮ್ಮನೆ ಕೂಡುತ್ತಿರಲಿಲ್ಲ. ಆದರೆ ನಾವು ಮೂವರೂ ಶುದ್ಧ ಶೋಂಭೇರಿಗಳು. ಬಟ್ಟೆ ಪದಾರ್ಥಗಳನ್ನು ಎಲ್ಲೆಂದರೆ ಅಲ್ಲಿ, ಹೇಗೆಂದರೆ ಹಾಗೆ ಹಾಕಿಬಿಟ್ಟಿರುತ್ತಿದ್ದೆವು. ನಮ್ಮ ನಮ್ಮ ಪದಾರ್ಥಗಳನ್ನೇ ನಾವು ಸರಿಯಾಗಿಟ್ಟುಕೊಳ್ಳುತ್ತಿರಲಿಲ್ಲ. ಗೋಪಾಲರಾಯರು ಬಂದನಂತರ ಮನೆ ಸ್ವಲ್ಪ ನೋಡುವಂತಾಯ್ತು. ಬೇಸರವಿಲ್ಲದೆ ಆತ ಎಲ್ಲವನ್ನೂ ಚೊಕ್ಕಟವಾಗಿಡುತ್ತಿದ್ದರು. ನಮ್ಮೆಲ್ಲರನ್ನೂ ಹುರಿದುಂಬಿಸಿ ವಾರಕ್ಕೊಂದು ಬಾರಿ ಫಿನೈಲ್ ಹಾಕಿ ತೊಳೆಯುತ್ತಿದ್ದರು. ಅಡುಗೆಯಲ್ಲೂ ಚೆನ್ನಾಗಿ ನುರಿತವರು. ನಾವು ಕಂಡಿದ್ದು ಬರೀ ಅನ್ನ, ತರಕಾರಿ ಹಾಕಿದ ಸಾರು. ಅವರ ಕೈವಾಡದಿಂದ ನಮಗೆ ಆಗಿಂದಾಗ್ಗೆ ಪಲ್ಯ, ಮಜ್ಜಿಗೆಹುಳಿ, ಗೊಜ್ಜು ಇವುಗಳ ಸೇವೆ ಆಗುತ್ತಿತ್ತು. ಮೇಲಾಗಿ ನಗುನಗುತ ಇರುವ ಸ್ವಭಾವ ಅವರದು. ಒಬ್ಬರು ಇದ್ದಹಾಗೆ ಇನ್ನೊಬ್ಬರು ಇರುವುದಿಲ್ಲ. ಒಬ್ಬರ ರೀತಿ ಮತ್ತೊಬ್ಬರಿಗೆ ಸರಿ ಬೀಳುವುದಿಲ್ಲ. ನಾನೂ, ನಾಣಿ, ಶಿವರಾಮಯ್ಯ ಗೆಳೆಯರಾದರೂ ಒಬ್ಬರ ವಿಷಯ ಇನ್ನೊಬ್ಬರು ಬೇಜಾರುಪಟ್ಟುಕೊಳ್ಳುವ ಸಂದರ್ಭಗಳು ಹಲವು ಸಾರಿ ಬಂದಿದ್ದುವು. ನಾಣೀದು ವಿಪರೀತ ಆತುರ, ಶಿವರಾಮಯ್ಯ ತನ್ನ ಬಟ್ಟೆ ತನ್ನ ಪದಾರ್ಥ ಅಂದರೆ ಬಹಳ ಹುಷಾರು, ಮಿಕ್ಕವರದೆಂದರೆ ಅಷ್ಟು ನಿಕೃಷ್ಟ; ಮಾತಿಗೆ ಮುಂದು, ಕೆಲಸಕ್ಕೆ ಹಿಂದು. ನನ್ನದಂತೂ ಸುಧಾರಣೆಯ ಸರಹದ್ದನ್ನು ಮೀರಿಹೋದ ಸೋಮಾರಿತನ; ಕಾಲು ಚಾಚಿ ಪುಸ್ತಕ ಹಿಡಿದು ಅಡ್ಡಾಗಿಬಿಟ್ಟರೆ ಬ್ರಹ್ಮ ಬಂದರೂ ನನ್ನನ್ನು ಅಲ್ಲಾಡಿಸುವುದಕ್ಕಾಗುತ್ತಿರಲಿಲ್ಲ. ಹೀಗೆ ಒಬ್ಬೊಬ್ಬರ ಸ್ವಭಾವ ಒಂದೊಂದು ರೀತಿ ಇದ್ದು ಮನಸ್ತಾಪಗಳು, ಜಿಗುಪ್ಸೆಗಳು, ಕಿರಿ ಕಲಹಗಳು ನಮ್ಮ ಮೂವರಲ್ಲಿ ಒಂದಲ್ಲ ಒಂದು ಇದ್ದೇ ಇರುತ್ತಿದ್ದವು. ಗೋಪಾಲರಾಯರದು ಪಳಗಿದ ಜೀವ, ಮಿಕ್ಕವರ ಸ್ವಭಾವಗಳ ಏರುತಗ್ಗುಗಳ ಮೇಲೆ ಅವರ ಸೌಜನ್ಯವು ನಯವಾಗಿ ನಾಜೂಕಾಗಿ ನಿರ್ಬಾಧಕವಾಗಿ ಸಾಗುತ್ತಿತ್ತು. ಅವರ ವಿಷಯವಾಗಿ ನಾವೆಂದೂ ಬೇಸರಪಟ್ಟುಕೊಳ್ಳುವ ಕಾರಣ ಒದಗಿರಲಿಲ್ಲ. ಎಷ್ಟೋ ಬಾರಿ ಅವರೊಬ್ಬರೇ ನಮ್ಮ ಪಾಲಿನ ಕೆಲಸಗಳನ್ನೂ ಮಾಡಿಟ್ಟು ನಮಗೆ ನಾಚಿಗೆ ಬರುವಂತೆ ಮಾಡುತ್ತಿದ್ದರು. ಅವರ ಮಾತಿಗೆ ಬೆಲೆಯಿದ್ದಿತು. ಏನಾದರೂ ಮಾಡುತ್ತೇನೆ ಎಂದು ಹೇಳಿದರೆ ಅದರಂತೆ ಆಯಿತೆಂದೇ ತಿಳಿಯಬೇಕು. ಅವರ ಮಾತಿನಲ್ಲಿ ಇಷ್ಟು ವಿಶ್ವಾಸವಿದ್ದುದರಿಂದಲೇ ನಿಮ್ಮ ಪ್ರಶ್ನೆಯನ್ನು ಪರಿಹಾರ ಮಾಡುತ್ತೇನೆ ಎಂದು ಅವರು ಹೇಳಿದಾಗ ನಾವು ಆಸೆಯಿಂದ ಅವರನ್ನು ಮುತ್ತಿದುದು.
ಗೋಪಾಲರಾವ್ ವಿವರಿಸಿ ಹೇಳಿದರು: ”ಈಗ ಹೇಗಿದ್ದರೂ ನಿಮ್ಮದಾಗಿ ಎರಡು ಬೇರೆ ಬೇರೆ ಕೋಣೆ ಇವೆ. ಒಂದು ನನಗೆ ಕೊಟ್ಟುಬಿಡಿ. ನನ್ನ ಸಂಸಾರ ಕರೆಸುತ್ತೇನೆ. ಇನ್ನೊಂದರಲ್ಲಿ ನೀವು ಮೂವರು ಇರಿ. ನನ್ನ ಹೆಂಡತಿ ಹಳ್ಳಿ ಹುಡುಗಿ, ನಮ್ಮ ಮಾವನವರದು ದೊಡ್ಡ ಸಂಸಾರ. ಇಪ್ಪತ್ತು ಇಪ್ಪತ್ತೈದು ಜನಕ್ಕೆ ಅಡುಗೆ ಮಾಡಿ ನೀಡುವುದು ಅವಳಿಗೆ ಅಭ್ಯಾಸವಿದೆ. ನಮ್ಮೈದು ಜನಕ್ಕೆ ಮಾಡುವುದೇನು ಕಷ್ಟವಾಗೋದಿಲ್ಲ. ನನಗೂ ಮದುವೆಯಾಗಿ ಆಗಲೇ ಐದು ವರುಷ ಆಗಿಹೋಯಿತು. ಇನ್ನೂ ಗಂಡ ಹೆಂಡತಿ ಒಂದು ಕಡೆ ಇದ್ದು ಸಂಸಾರ ಮಾಡಿಲ್ಲ. ನಾನು ಹೇಳುವ ಹಾಗೆ ಮಾಡಿದರೆ ನಿಮ್ಮ ಊಟ ತಿಂಡಿಯ ಸಮಸ್ಯೆಯೂ ಪರಿಹಾರವಾಗುತ್ತೆ. ಒಬ್ಬ ಸಂಸಾರ ಹೂಡುವುದಕ್ಕೆ ಸಹಾಯ ಮಾಡಿದ ಪುಣ್ಯವೂ ಬರುತ್ತೆ- ನೋಡಿ ಆ ಪುಣ್ಯದಿಂದಲಾದರೂ ನಿಮಗೆ ಬೇಗ ಬೇಗ ಮದುವೆ ಆದೀತು!”
ಇದನ್ನು ಓದಿದ್ದೀರಾ?: ‘ಕ್ಷೀರಸಾಗರ’ ಅವರ ಕತೆ | ನಮ್ಮೂರಿನ ಪಶ್ಚಿಮಕ್ಕೆ
ಶಿವರಾಮಯ್ಯ, ”First class idea! (ಭೇಷ್ ಮಾತು!) ಗೋಪಾಲರಾವ್, ಇಷ್ಟು ದಿವಸ ಯಾಕೆ ಸುಮ್ಮನಿದ್ದಿರಿ. ನಮಗೆ ಮುಂಚೆಯೇ ಯಾಕೆ ಹೇಳಲಿಲ್ಲ?” ಎಂದು ಕೂಗಿ ಹೇಳಿದನು. ನನಗೆ ಮನಸ್ಸಿನಲ್ಲಿ ಸಂತೋಷವೇ ಆದರೂ, ”ನಿಮ್ಮ ಸಂಸಾರವನ್ನು ಕರೆಯಿಸಿ, ನಾವು ಬೇಡ ಎನ್ನುವುದಿಲ್ಲ. ಆದರೆ ನಮಗೆಲ್ಲಾ ಅಡುಗೆ ಮಾಡಿ ಹಾಕಬೇಕೆಂದರೆ ಅದೇನು ಸಣ್ಣ ಕೆಲಸವೇ, ಬಪ್ಪದ ಮಾತು” ಎಂದು ಉಪಚಾರಕ್ಕೋಸ್ಕರ ಎಂದೆನು. “ನೀವು ಆ ಯೋಚನೆಯನ್ನು ಹಚ್ಚಿಕೊಳ್ಳಲೇಬೇಡಿ. ಎಳ್ಳಷ್ಟೂ ಕಷ್ಟವಾಗದು” ಎಂದು ನನ್ನನ್ನು ಸುಲಭದಲ್ಲಿ ಒಪ್ಪಿಸಿದರು.
ನಮಗೆ ಈ ಯೋಚನೆ ಮೊದಲೇ ಹೊಳೆದಿದ್ದಿತು. ನಾನೂ ನಾಣಿ ಮಾತೂ ಆಡಿಕೊಂಡಿದ್ದೆವು. ಆದರೆ ಇದನ್ನು ಗೋಪಾಲರಾಯರ ಮುಂದೆ ಹೇಗೆ ಹೇಳುವುದಕ್ಕೆ ಬರುತ್ತದೆ? ಗೋಪಾಲರಾಯರೇ ನಮ್ಮ ಇಂಗಿತವನ್ನು ಗ್ರಹಿಸಿದಂತೆ ಕಾಣಿಸಿತು.
ಅಂತೂ ಆ ದಿನವೇ ಗೋಪಾಲರಾಯರು ತಮ್ಮ ಮಾವನವರಿಗೆ ಕಾಗದ ಬರೆದು ಹಾಕಿಬಿಟ್ಟರು. ಕೆಲವು ದಿನಗಳಲ್ಲೇ ಉತ್ತರವೂ ಬಂತು. ಇನ್ನೆಂಟು ದಿನಕ್ಕೆ ಅವರು ಬರುವುದೆಂದು ಗೊತ್ತಾಯಿತು. ನಮಗೆ ಈ ಮನೆಗೆಲಸದ ಶೃಂಖಲೆ ಇನ್ನು ಕಳಚಿತಲ್ಲಾ ಎಂದು ಎಷ್ಟು ಹರ್ಷವಾಯಿತೋ!
ಗಂಡನ ಮನೆಗೆ ಮೊದಲನೆಯ ಸಾರಿ ಬರುವ ಗೃಹಿಣಿಗೆ ಯಾವ ರೀತಿ ಆಗಮನವನ್ನು ಕೊಡಬೇಕು ಎಂದು ಯೋಚಿಸಿ ತಯಾರು ಮಾಡಿಕೊಂಡೆವು. ಮೂರು ವರ್ಷದಿಂದ ಸುಣ್ಣ ಕಾಣದಿದ್ದ ಮನೆಗೆ ಸುಣ್ಣ ಹೊಡೆಸಿದೆವು. ಗೋಪಾಲರಾಯರಿಗಾಗಿ ಬಿಡುವುದಿದ್ದ ಕೋಣೆಯಿಂದ ನಮ್ಮ ಸಾಮಾನುಗಳನ್ನೆಲ್ಲಾ ಖಾಲಿ ಮಾಡಿ ಅವರಿಗೆ ಉಪಯೋಗವಾಗಬಹುದಾದ ಪಾತ್ರೆ ಡಬ್ಬಗಳನ್ನು ಒರಸಿ ನೀಟಾಗಿ ಇಟ್ಟೆವು. ಪಾತ್ರೆಗಳನ್ನಿಟ್ಟುಕೊಳ್ಳುವುದಕ್ಕೆ ಎಂದು ಮರದ ಕಪಾಟನ್ನು ತಂದಿರಿಸಿದೆವು. ಎಲ್ಲಿಂದಲೋ ಒಂದು ತುಳಸೀ ಗಿಡ ತಂದು ಮಣ್ಣಿನ ಕೂಜದಲ್ಲಿ ಹಾಕಿ ಮನೆಯ ಅಂಗಳದಲ್ಲಿಟ್ಟೆವು. ಬಚ್ಚಲ ನೀರು ಸರಿಯಾಗಿ ಹರಿದುಹೋಗುವುದಕ್ಕೆಂದು ಒಂದು ಭಾನುವಾರವೆಲ್ಲಾ ನಿಂತು ಆಗತೆ ತೋಡಿ ತಗಡಿನ ದೋಣಿ ಇಟ್ಟೆವು. ಹೀಗೆ ಏನೇನು ತೋಚಿತೋ ಅವೆಲ್ಲವನ್ನೂ ಮಾಡಿದೆವು. ನಮ್ಮ ಅವಸ್ಥೆಯನ್ನು ನೋಡಿ ಗೋಪಾಲರಾವ್, “ಇವೆಲ್ಲಾ ಸುಮ್ಮನೆ ಯಾಕೆ ತೊಂದರೆ ತೆಗೆದುಕೊಳ್ಳುತ್ತೀರಿ, ಅವಳು ಬಂದು ಎಲ್ಲಾ ಮಾಡಿಕೊಳ್ಳುತ್ತಾಳೆ” ಎಂದರೂ ನಮ್ಮ ಉತ್ಸಾಹದ ಭಂಗವಾಗಲಿಲ್ಲ. ಕೊನೆಗೆ ಆಕೆ ಬರುವ ದಿವಸ ಹಬ್ಬದ ದಿನದಂತೆ ಮನೆ ಬಾಗಿಲಿಗೆ ಹಸಿರು ತೋರಣ ಕಟ್ಟಿದೆವು. ಶುಕ್ರವಾರದ ದಿನ ಸಂಜೆ ಹೊತ್ತು ಲಕ್ಷ್ಮೀದೇವಿಯ ಹಾಗೆ ಲಲಿತಮ್ಮ ತಮ್ಮ ಮೂರು ವರ್ಷದ ಮಗಳು ಕಮಲುವಿನ ಜೊತೆಗೆ ಈ ಮನೆಯ ಹೊಸ್ತಿಲನ್ನು ಮೆಟ್ಟಿದರು.
*
ಲಲಿತಮ್ಮ ಬಂದಮೇಲೆ ಕಾಡಿನ ಕೊಂಪೆಯಂತಿದ್ದ ನಮ್ಮ ವಠಾರ ಏನೋ ಲವಲವಿಕೆಯಿಂದ ಬೆಳಗತೊಡಗಿತು. ಸಾಮಾನ್ಯವಾಗಿ ತಮ್ಮತಮ್ಮಲ್ಲೇ ಹುದುಗಿಕೊಂಡಿರುತ್ತಿದ್ದ ನಮ್ಮ ವಠಾರದ ಇತರ ಮನೆಯವರೂ ಈಗ ಹೊರಗೆ ಬಂದು ಮಾತುಕತೆಗಳಲ್ಲಿ ತೊಡಗುತ್ತಿದ್ದರು. ಗೋಪಾಲರಾಯರು ದೇಶಸ್ಥ ವೈಷ್ಣವರು; ಆದ್ದರಿಂದ ಲಲಿತಮ್ಮನಿಗೆ ಸ್ವಲ್ಪಮಟ್ಟಿಗೆ ಮರಾಠಿ ಮೊದಲೇ ಬರುತ್ತಿತ್ತು. ಇಲ್ಲಿಗೆ ಬಂದಮೇಲೆ ಒಂದೆರಡು ತಿಂಗಳಲ್ಲೇ ಚೆನ್ನಾಗಿಯೇ ಕಲಿತುಕೊಂಡುಬಿಟ್ಟರು. ಪಕ್ಕದ ಎರಡು ಗುಜರಾತಿ ಮನೆಯ ಹೆಂಗಸರಿಗೂ ಮರಾಠಿ ಬರುತ್ತಿತ್ತು. ಎಲ್ಲರೊಡನೆಯೂ ಮಾತಾಡಿಕೊಂಡು, ತಮ್ಮ ಊರಿನ ರೀತಿನೀತಿಗಳನ್ನು ಅವರಿಗೆ ಹೇಳುತ್ತ ಇಲ್ಲಿನ ರೀತಿನೀತಿಗಳನ್ನು ಕೇಳಿ ತಿಳಿದುಕೊಳ್ಳುತ್ತಾ ಸ್ನೇಹವಾಗಿದ್ದು ಅಕ್ಕಪಕ್ಕದವರ ವಿಶ್ವಾಸವನ್ನು ಕೆಲವು ದಿನಗಳಲ್ಲೇ ಸಂಪಾದಿಸಿದರು. “ನನ್ನ ಹೆಂಡತಿ ಹಳ್ಳಿ ಹುಡುಗಿ” ಎಂದು ಗೋಪಾಲರಾಯರು ಹೇಳಿದಾಗ ಏನೋ ಎಂದು ತಿಳಿದುಕೊಂಡಿದ್ದೆವು. ಈ ಹಳ್ಳಿಯ ಹುಡುಗಿಯ ಹಾಗೆ ಪಟ್ಟಣದ ಎಲ್ಲ ಹುಡುಗಿಯರೂ ಇದ್ದರೆ ಎಷ್ಟು ಸಂಸಾರಗಳು ಸುಖವಾಗಿರುತ್ತಿದ್ದುವೋ ಎಂದು ಎಲ್ಲರಿಗೂ ಅನಿಸುವಂತಿತ್ತು. ಲಲಿತಮ್ಮನಿಗೆ ಇಂಗ್ಲೀಷು ಓದುವುದು, ಬರೆಯುವುದು ಬರುತ್ತಿರಲಿಲ್ಲ; ಆದರೆ ಜೀವನವನ್ನು ಸುಖಮಯವಾಗಿ ಮಾಡುವ ಜಾಣ್ಮೆ, ತಾಳ್ಮೆ, ಅನ್ಯೋನ್ಯತೆ, ಎಲ್ಲಕ್ಕೂ ಮೇಲಾಗಿ ಮಗುವಿನಂತಹ ಸರಳ ನಡತೆ ಇವೆಲ್ಲವೂ ಆಕೆಯಲ್ಲಿದ್ದುವು. ಆಕೆ ತುಂಬುಗಣ್ಣಿಂದ ಎಲ್ಲರನ್ನೂ ಸ್ನೇಹವಾಗಿ ನೋಡುವಳು, ಬಾಯಿ ತುಂಬಾ ಮಾತನಾಡಿಸುವಳು, ಎಲ್ಲರ ಅನುಕೂಲವನ್ನೂ ಯೋಚಿಸಿ ಕೆಲಸ ಮಾಡುವಳು. ನಮಗೆ ಒಂದು ದಿವಸವೂ ಇವರಿಗೆ ಭಾರವಾಗಿದ್ದೇವಲ್ಲಾ ಎನಿಸುವಂತೆ ಆಕೆ ನಡೆದುಕೊಂಡದ್ದು ಕಾಣೆ. ಗಂಡನ ಜೊತೆಯಲ್ಲಿ ಸಂಸಾರ ಮಾಡಲು ಇವರಿಂದಲೇ ಅವಕಾಶವಾದದ್ದು ಎಂದು ನಮ್ಮಲ್ಲಿ ಎಷ್ಟು ಕೃತಜ್ಞತೆಯೋ ಆಕೆಗೆ. ಈ ವಿಷಯವಾಗಿ ಬಾಯಿಬಿಟ್ಟು ನಮ್ಮನ್ನು ಕೊಂಡಾಡಿ ನಾವು ನಾಚುವ ಹಾಗೆ ಮಾಡಿದ್ದರು. ಇಪ್ಪತ್ತೇ ವರುಷದ ಆ ತಾಯಿ ನಾವು ಮೂವರನ್ನೂ ತನ್ನ ಮೂವರು ಚಿಕ್ಕ ತಮ್ಮಂದಿರ ಹಾಗೆ ನೋಡಿಕೊಂಡಳು. ನಮ್ಮ ಊಟ ತಿಂಡಿ ಉಪಚಾರಗಳಿಗೆ ಒಂದು ದಿನವೂ ತೊಂದರೆ ಬರಲಿಲ್ಲ. ವಾರ ವಾರವೂ ನಾವು ಎಣ್ಣೆನೀರು ಹಾಕಿಕೊಳ್ಳದೆ ಗಂಡ ಹೆಂಡತಿ ನಮ್ಮನ್ನು ಬಿಡುತ್ತಿರಲಿಲ್ಲ. “ಆಫೀಸಿನಲ್ಲಿ ಎಲೆಕ್ಟ್ರಿಕ್ ದೀಪದ ಬೆಳಕಿನಲ್ಲಿ ಕೆಲಸ ಮಾಡುವವರಪ್ಪ ನೀವು ನೀರು ಹಾಕಿಕೊಳ್ಳದಿದ್ದರೆ ಹ್ಯಾಗೆ” ಎಂದು ಬಲವಂತ ಮಾಡಿ ಎಬ್ಬಿಸುವರು. ಜನುಮದಲ್ಲೇ ಎರಕೊಂಡವನಲ್ಲ ಎಂದು ಅನ್ನುತ್ತಿದ್ದ ನಾಣಿ ಕೂಡ ಎದುರು ಹೇಳಲಾರದೆ ನೀರು ಹಾಕಿಕೊಳ್ಳಬೇಕಿತ್ತು. ನಮ್ಮ ಕೋಣೆಯ ಬೀಗದ ಕೈಯನ್ನು ಲಲಿತಮ್ಮನ ಬಳಿಯಲ್ಲೇ ಬಿಟ್ಟು ಹೋಗುತ್ತಿದ್ದೆವು. ಬೆಳಗ್ಗೆ ಆಫೀಸಿಗೆ ಹೊರಡುವ ಹೊತ್ತಿಗೆ ನಾವು ಎಷ್ಟೇ ಜಾಗರೂಕತೆಯಿಂದ ಇದ್ದರೂ ಕೋಣೆಯಲ್ಲಿನ ಸಾಮಾನು ಬಟ್ಟೆಬರೆ ಎಲ್ಲಾ ಅಸ್ತವ್ಯಸ್ತವಾಗಿ ಹರಡಿರುತ್ತಿದ್ದವು. ಸಂಜೆ ಬಂದು ನೋಡಿದರೆ ಎಲ್ಲಾ ಓರಣವಾಗಿರುತ್ತಿದ್ದುವು.
ಇದನ್ನು ಓದಿದ್ದೀರಾ?: ಟೇಂಗ್ಸೆ ಗೋವಿಂದರಾವ್ ಅವರ ಕತೆ | ಗಂಗೆಯ ಗುತ್ತಿಗೆ
ಪ್ರತಿ ಶನಿವಾರ ಸಂಜೆ ಅವರ ಮನೆಯಲ್ಲಿ ರಾಮಭಜನೆ ಆಗುವುದು. ವಠಾರದ ಎಲ್ಲರೂ ಆಗ ಸೇರುವೆವು. ಲಲಿತಮ್ಮ ಬಲವಂತಮಾಡಿ ಅಲ್ಲಿನ ಎಲ್ಲ ಹೆಣ್ಣುಮಕ್ಕಳ ಹತ್ತಿರವೂ ಹಾಡು ಹೇಳಿಸುತ್ತಿದ್ದರು. ತಾವೂ ಹೇಳುವರು. ಸಂಗೀತವನ್ನು ಪಾಠ ಹೇಳಿಸಿಕೊಂಡವರಲ್ಲ ಅವರು. ಆದರೆ ರಾಗಸರಸ್ವತಿಯು ತಾನಾಗೆ ಅವರಿಗೆ ಒಲಿದಿದ್ದಳು. ಆಕೆಗೆ ಬರುತ್ತಿದ್ದುದು ಹೆಚ್ಚಾಗಿ ಹಳ್ಳಿಯ ಹಾಡುಗಳು. ಆಕೆ ಹಾಡತೊಡಗಿದರೆಂದರೆ, ಹಾಡಿನ ಮಾತು ಅರ್ಥವಾಗದೇ ಇದ್ದರೂ, ಬಂದಿದ್ದ ಗುಜರಾತಿ, ಮರಾಠಿ ಹೆಣ್ಣುಮಕ್ಕಳು ಮುಗ್ಧರಾಗಿ ಕೇಳುವರು. ನಮಗೆ ಇದನ್ನು ಹೇಳಿಕೊಡಿ, ರಾಗ ಬಹಳ ಚೆನ್ನಾಗಿದೆ ಎಂದು ಕೇಳಿ ಕೇಳಿ ಹೇಳಿಸಿಕೊಳ್ಳುವರು. ಹಬ್ಬ ಹರಿದಿನಗಳಲ್ಲಂತೂ ಮಾಡಿದ ತಿಂಡಿ ತಿನಸುಗಳು ಎಲ್ಲರ ಮನೆಗೂ ಹಂಚಿಕೆಯಾಗುವುದು. ರಜೆ ಇದ್ದ ದಿನ ಎಲ್ಲರೂ ಒಟ್ಟಾಗಿ ಜುಹೂಗೋ, ಚೌಪಾತಿಗೋ ಹೋಗಿ ಬರುತ್ತಿದ್ದೆವು. ಮನೆಗೆ ಹೆಂಗಸರು ಬಂದಿದ್ದಾರೆ ಎಂದಮೇಲೆ ಗೋಪಾಲರಾಯರ ಸ್ನೇಹಿತರು ಕೆಲವರು ತಮ್ಮ ತಮ್ಮ ಮನೆಯವರನ್ನು ಇಲ್ಲಿಗೆ ಕರೆದುಕೊಂಡು ಬರುತ್ತಿದ್ದರು. ಸಿನಿಮಾ, ಸಂಗೀತ ಕಛೇರಿ ಎಂದು ಎಲ್ಲಿಗಾದರೂ ಹೋಗಬೇಕಾದರೆ ಒಟ್ಟಾಗಿಯೇ ಹೋಗುತ್ತಿದ್ದೆವು. ಹೀಗೆ ನಮ್ಮ ಜೀವನದ ಬೇಸರವು ಹೋಗಿ ಲವಲವಿಕೆ ಬಂತು.

ಎಲ್ಲಕ್ಕಿಂತ ಹೆಚ್ಚಾಗಿ ಲಲಿತಮ್ಮನ ಮಗಳು ಮೂರು ವರುಷದ ಕಮಲು ನಮ್ಮೆಲ್ಲರ ಹೃದಯವನ್ನು ಸೂರೆಗೊಂಡುಬಿಟ್ಟಿದ್ದಳು. ಅವಳು ಮನೆಯಿಂದ ಮನೆಗೆ ಓಡಾಡುವುದೇನು, ಎಲ್ಲರನ್ನೂ ಮಾತನಾಡಿಸುವುದೇನು, ತಾಯಿ ಹೇಳಿಕೊಟ್ಟ ಹಾಡುಗಳನ್ನೆಲ್ಲಾ ನಮಗೆ ಬಂದು ಒಪ್ಪಿಸುವುದೇನು, ಕುಣಿಯುವುದೇನು-ಅವಳ ಲವಲವಿಕೆಯಿಂದ ವಠಾರವೇ ನಲಿಯುತ್ತಿತ್ತು. ಆಫೀಸಿನಿಂದ ಬರುವಾಗ ಅವಳಿಗೋಸ್ಕರ ಎಂದು ನಾವು ಸಾಮಾನ್ಯವಾಗಿ ಏನಾದರೂ ಚೂರು ತಿಂಡಿ ತಂದು ಅವಳ ಕೈಯಲ್ಲಿ ಇಡುತ್ತಿದ್ದೆವು. ನಾವು ತಂದದ್ದನ್ನೇ ನೆನಪಿನಲ್ಲಿಟ್ಟುಕೊಂಡು, ನನ್ನನ್ನು ಬಿಸ್ಕೀತು ಮಾವ, ಶಿವರಾಮಯ್ಯನನ್ನು ಚಾಕಲೇಟ್ ಮಾವ, ನಾಣಿಯನ್ನು ಮೋಸಂಬಿ ಮಾವ ಎಂದು ಕರೆಯುತ್ತಿದ್ದಳು. ಕೆಲವು ತಿಂಗಳಲ್ಲೇ ಎಲ್ಲರ ಮನೆಯಲ್ಲೂ ಬಳಕೆಯಾಗಿ ಹೋಗಿ, ಗುಜರಾತಿಯವರ ಹತ್ತಿರ ಗುಜರಾತಿಯಲ್ಲೂ, ಮರಾಠಿಯವರ ಹತ್ತಿರ ಮರಾಠಿಯಲ್ಲೂ ಮಾತನಾಡುವುದನ್ನು ಕಲಿತುಬಿಟ್ಟಳು.
ಮರಾಠಿಯವರ ಮನೆಯಲ್ಲಿ ಒಬ್ಬ ಐದು ವರುಷದ ಹುಡುಗನಿದ್ದನು. ಇದುವರೆಗೆ ಅವನಿಗೆ ಸರಿಯಾದ ಜೊತೆಯಿಲ್ಲದೆ ಏನೋ ಮಂಕು ಕವಿದಂತೆ ಇರುತ್ತಿದ್ದನು. ನಾವು ಮೊದಲು ಅದೆಷ್ಟೋ ಅವನನ್ನು ಮಾತನಾಡಿಸಲು ಯತ್ನಪಟ್ಟು ನಿರಾಶರಾಗಿದ್ದೆವು. ಕಮಲು ಬಂದಮೇಲೆ ಅವನೂ ಹೊರಗೆ ಆಡುವುದಕ್ಕೆ ಬರಲು ಶುರುಮಾಡಿದನು. ಕೆಲವು ವಾರಗಳಲ್ಲಿಯೇ ಅವನೂ ಕಮಲುವಿನಂತೆಯೇ ಎಲ್ಲರಲ್ಲೂ ಬಳಕೆಯಾಗಿ ಚಟುವಟಿಕೆಯನ್ನು ಹೊಂದಿದನು. ಇದನ್ನು ಕಂಡು ಹುಡುಗನ ತಾಯಿ ಲಲಿತಮ್ಮನನ್ನು ಎಷ್ಟು ಕೊಂಡಾಡುತ್ತಿದ್ದರೋ, ”ನೀವು ಯಾವ ಕ್ಷಣದಲ್ಲಿ ಬಂದಿರೋ ಅಮ್ಮ, ನಮ್ಮ ಹುಡುಗನೂ ಎಲ್ಲ ಮಕ್ಕಳಂತೆ ಆಡಿಕೊಂಡಿರುವ ಹಾಗೆ ಆದ” ಎಂದು ಪದೇ ಪದೇ ಹೇಳುತ್ತಿದ್ದರು.
ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ
ಈಗ ಎಲ್ಲರಿಗೂ ಕೈತುಂಬ ಬಿಡುವು ಇರುತ್ತಿತ್ತು. ನಾನು ಮೂರು ವರುಷಗಳಿಂದಲೂ ಬರೆಯಬೇಕೆಂದಿದ್ದ ಕಾದಂಬರಿಯನ್ನು ಪ್ರಾರಂಭ ಮಾಡಿದೆ. ನಾಣಿ ಹಳೇ ರೇಡಿಯೋ ಸಾಮಾನುಗಳಷ್ಟನ್ನು ತಂದಿಟ್ಟುಕೊಂಡು “First Class ರೇಡಿಯೋ ಮಾಡುತ್ತೇನೆ. Ekko ತಾತನ ಹಾಗೆ ಇರಬೇಕು” ಎಂದು ಏನೋ ತಂತಿ, ವಾಲ್ವು ಇವುಗಳಲ್ಲೇ ಮಗ್ನನಾಗಿರುತ್ತಿದ್ದ. (ಅವನ ರೇಡಿಯೋ ಇನ್ನೂ ಪೂರ್ಣವಾಗಿಲ್ಲ: ನನ್ನ ಕಾದಂಬರಿಯೂ ಹಾಗೇ.) ಶಿವರಾಮಯ್ಯ ಒಂದು ಇಸ್ತ್ರೀ ಪೆಟ್ಟಿಗೆಯನ್ನು ತಂದಿಟ್ಟುಕೊಂಡು ಅಗಸನಿಗಿಂತ ಹೆಚ್ಚಾಗಿ ಬಟ್ಟೆಗಳನ್ನು ಇಸ್ತ್ರಿ ಮಾಡಿಕೊಳ್ಳುತ್ತಿದ್ದನು.
ಅಂತೂ, ನಮ್ಮ ಮನಸ್ಸಿನಲ್ಲಿ ಹೇಗೆ ಇದ್ದರೆ ಚೆನ್ನಾಗಿರುತ್ತೆ ಎಂದು ಯೋಚನೆ ಮಾಡುತ್ತಿದ್ದೆವೋ ಹಾಗೆ ಆಯಿತು. ಇನ್ನೂ ಚೆನ್ನಾಗಿಯೇ ಆಯಿತು. ಆದರೆ ಯಾವುದೂ ಬಹಳ ಕಾಲ ಒಂದೇ ತರವಾಗಿರುವುದಿಲ್ಲ. ಸುಖ, ಅನುಕೂಲ ಸ್ಥಿತಿಗಳಂತೂ ಸಾಯಂಕಾಲದ ಮೋಡಗಳಂತೆ ಒಂದೊಂದು ಬಣ್ಣ ಕಳೆದುಕೊಳ್ಳುತ್ತಿರುತ್ತವೆ. ಹೀಗೆ ಸುಖಮಯವಾದ ಹಾಲಿನ ಹೊಳೆ ಸ್ವಲ್ಪಕಾಲ ಹರಿದಿರಲಿಲ್ಲ. ಶಿವರಾಮಯ್ಯನ ವರ್ತನೆಯಿಂದ ಹಾಲು ಹುಳಿ ಹಿಡಿದು ಕೆಟ್ಟುಹೋಗುವ ಸಂದರ್ಭ ಬಂದುಬಿಟ್ಟಿತು. ಹೇಗೋ ನಮ್ಮ ಪುಣ್ಯದಿಂದಲೋ ಲಲಿತಮ್ಮನ ಸಹೃದಯತೆಯಿಂದಲೋ ನಮ್ಮೆಲ್ಲರ ಮಾನ ಉಳಿದದ್ದೇ ಹೆಚ್ಚಾಯಿತು.
ಶಿವರಾಮಯ್ಯನದು ರಸಿಕ ಸ್ವಭಾವ. ನಾವೆಲ್ಲರೂ ರಸಿಕರೇ, ಆದರೆ ಶಿವರಾಮಯ್ಯನ ರಸಿಕತೆ ನಮ್ಮೆಲ್ಲದರಕ್ಕಿಂತ ಒಂದು ಹೆಜ್ಜೆ ಮುಂದು. ಬಟ್ಟೆ ಹಾಕಿಕೊಳ್ಳುವುದರಲ್ಲಿ, ಅಲಂಕಾರ ಮಾಡಿಕೊಳ್ಳುವುದರಲ್ಲಿ ಒಳ್ಳೇ ಸೊಗಸುಗಾರ. ದಿನವೂ ಮಡಿ ಮಾಡಿದ ಬಟ್ಟೆಗಳೇ ಆಗಬೇಕು. ಅವನು ಕ್ರಾಪು ಬಾಚಿಕೊಳ್ಳುವುದೇ ಅವನ ದೈನಿಕ ಕಾರ್ಯಗಳಲ್ಲಿ ಮಹತ್ತರವಾದ ವಿಧಿ. ಅಲಂಕಾರ ಸಾಮಗ್ರಿಗಳಿಗೆ ಅವನದೊಂದು ಬೇರೆ ಕಪಾಟು. ಅದರಲ್ಲಿ ಬೇರೆ ಬೇರೆ ಬಣ್ಣದ ಕೂದಲೆಣ್ಣೆಗಳು, ಬ್ರಿಲಿಯಂಟಯಿನ್, ಸ್ನೋ, ಕ್ರೀಮುಗಳು. ಕನ್ನಡಿ ಮುಂದೆ ಕ್ರಾಪು ತೀಡಿಕೊಳ್ಳುವುದಕ್ಕೆ ನಿಂತನೆಂದರೆ, ರೈಲಿಗೆ ಹೊತ್ತಾಗಿರುತ್ತಿದ್ದುದೂ ಅವನ ಗಮನಕ್ಕೆ ಬರುತ್ತಿರಲಿಲ್ಲ. ಗೊತ್ತಾದರೂ ಅಲಂಕಾರವಿಧಿ ಮುಗಿಯದೆ ಕದಲುತ್ತಿರಲಿಲ್ಲ. ಆಫೀಸಿಗೆ ನಾವು ಒಬ್ಬರನ್ನು ಬಿಟ್ಟು ಇನ್ನೊಬ್ಬರು ಮುಂಚೆ ಹೋಗುತ್ತಿರಲಿಲ್ಲ. ಇವನ ದೆಸೆಯಿಂದ ಎಷ್ಟೋ ದಿನ ಆಫೀಸಿಗೆ ತಡವಾದದ್ದುಂಟು. ಉರಿ ಬೇಸಗೆಯಲ್ಲೂ ಉಣ್ಣೆಯ ಸೂಟುಗಳನ್ನೇ ಹಾಕಿಕೊಂಡು ತಿರುಗಾಡುವನು. ಇವಕ್ಕೇ ಅವನ ಸಂಬಳದಲ್ಲಿ ಅರ್ಧ ಖರ್ಚಾಗಿ ಹೋಗುತ್ತಿತ್ತು. ಮನೆಯಿಂದ ಏನಾದರೂ ಹಣ ಕಳುಹಿಸು ಎಂದು ಬರುತ್ತಿದ್ದ ಕಾಗದಗಳಿಗೆ ಅವನು ಉತ್ತರ ಕೊಡುತ್ತಲೇ ಇರಲಿಲ್ಲ, “ಏನು ಮಾಡುವುದು? ನಾನು ಕೆಲಸ ಮಾಡುತ್ತಿರುವುದು ಪಾರ್ಸಿ firm; ಇವೆಲ್ಲಾ ವೇಷಭೂಷಣ ಇಲ್ಲದಿದ್ದರೆ ನಾನು ಮುಂದಕ್ಕೆ ಬರುವುದು ಹೇಗೆ? ಸಂಬಳ ಹೆಚ್ಚಾಗಲಿ, ಕಳಿಸೇ ಕಳಿಸುತ್ತೇನೆ” ಎಂದು ನೆವ ನಮ್ಮ ಮುಂದೆ ಊದುವನು.
ಇವನ ರಸಿಕತೆ ಇಷ್ಟಕ್ಕೇ ಮುಗಿದಿದ್ದರೆ ಅದೊಂದು ತರಹ ಇರುತ್ತಿತ್ತು. ಅವನದು ಅದೇನು ಭ್ರಾಂತೋ, ತಾನು ಬಹಳ ಸುಂದರನೆಂದೂ, ತನ್ನನ್ನು ನೋಡಿದ ಹೆಣ್ಣುಮಕ್ಕಳೆಲ್ಲರೂ ತನ್ನಲ್ಲಿ ಮೋಹಗೊಳ್ಳುತ್ತಾರೆಂದೂ ತಿಳಿದಿದ್ದನು. ಶಿವರಾಮಯ್ಯ ನೋಡುವುದಕ್ಕೆ ಲಕ್ಷಣವಾಗೇ ಇದ್ದನು. ಚೊಕ್ಕವಾಗಿ ವೇಷ ಭೂಷಣಗಳನ್ನು ಮಾಡಿಕೊಳ್ಳುತ್ತಿದ್ದುದರಿಂದ, ಯಾರಾದರೂ ಒಂದು ಬಾರಿ ಕತ್ತೆತ್ತಿ ನೋಡುವಂತೆಯೇ ಇದ್ದನು. ಆದರೆ ಅವನ ಮನಸ್ಸನ್ನು ಯಾವ ಮಂಗವು ಕುಣಿಸುತ್ತಿತ್ತೋ, ಕಂಡ ಹೆಂಗಸರೆಲ್ಲ ತನ್ನಲ್ಲಿ ಮೋಹಗೊಳ್ಳುತ್ತಾರೆಂದು ತಿಳಿದು ಹಾಗೆ ನಡೆಯುತ್ತಿದ್ದನು. ಸ್ವಲ್ಪ ಲಕ್ಷಣವಾದ ಹೆಂಗಸರನ್ನು ಕಂಡರೆ ಸಾಕು, ಇವನ ಕಣ್ಣುಗಳು ಚಡಪಡಿಸುವುವು. ಅವರು ಯಾರೇ ಆಗಲಿ, ಮದುವೆಯಾದವರು, ಆಗದೇ ಇದ್ದವರು, ತಮ್ಮ ಪ್ರಿಯರ ಜೊತೆಗೆ ಹೋಗುತ್ತಿದ್ದವರು, ಮಕ್ಕಳಿದ್ದವರು ಇವನ ಕಣ್ಣುಗಳು ಅವರನ್ನು ಬಿಡದೆ ಅನುಸರಿಸುತ್ತಿದ್ದುವು. ಕಣ್ಣಿನ ದೃಷ್ಟಿಯಲ್ಲಿ ಆಸೆ ಕಾತುರತೆಗಳು ಕುಣಿಯುವುದು ಸ್ಪಷ್ಟವಾಗಿ ಎಲ್ಲರಿಗೂ ಕಾಣುತ್ತಿದ್ದುವು. ಇವನ ಚಪಲತನವನ್ನು ಕಂಡು ನಾವೆಷ್ಟೋ ಬಾರಿ ತಮಾಷೆಯಾಗಿ, ಗದರಿಕೊಂಡು, ಬುದ್ದಿ ಹೇಳಲು ಪ್ರಯತ್ನಪಟ್ಟಿದ್ದೆವು. “ಶಿವರಾಮಯ್ಯ, ಇದೇನು ನಾಚಿಕೆಯಾಗುವುದಿಲ್ಲವೇ ನಿನಗೆ, ಹೀಗೆ ಕಂಡಾಪಟ್ಟೆ ಹೆಂಗಸರನ್ನು ದೃಷ್ಟಿಸಿ ನೋಡುತ್ತೀಯಲ್ಲ. ಅಷ್ಟು ಬೇಕಾಗಿದ್ದರೆ ಊರಿಗೆ ಹೋಗಿ ಲಕ್ಷಣವಾಗಿ ಮದುವೆ ಮಾಡಿಕೊಂಡು ಬಾ. ಇಲ್ಲದಿದ್ದರೆ ನಿನ್ನ ಚಪಲ ತೀರುವುದಕ್ಕೆ ಅನುಕೂಲವಾದ ಬೇರೆ ಜಾಗಗಳು ಇಲ್ಲೇ ಇವೆ. ಇದು ಮಾತ್ರ ಒಳ್ಳೆಯದಲ್ಲ” ಎಂದು.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ಅವನು ನಾವು ಹೇಳುವುದನ್ನೆಲ್ಲಾ ಹಾಸ್ಯವಾಗಿ ತೆಗೆದುಕೊಂಡು, “ನಿಮಗೆ ಈ ವಿಷಯವೆಲ್ಲಾ ಏನೂ ಗೊತ್ತಾಗುವುದಿಲ್ಲ. ಹದಿನೆಂಟನೇ ಶತಮಾನದವರು ನೀವು. ಸುಂದರವಾದ ವಸ್ತು ಇರುವುದು ಎಲ್ಲರೂ ನೋಡಿ ಆನಂದಪಡುವುದಕ್ಕೆ. ಈಗ ನಾನು ನೋಡಿದ್ದರಿಂದ ಏನು ಅನಾಹುತ ಆದದ್ದು? ಆಕೆ ಪಾತಿವ್ರತ್ಯ ಹಾಳಾಗಲಿಲ್ಲವಷ್ಟೆ?” ಎಂದು ಕುಚೋದ್ಯದ ಮಾತಾಡುವನು.
ಇವನ ಸ್ವಭಾವ ಹೀಗಿರುವಾಗ್ಗೆ, ಲಲಿತಮ್ಮನಲ್ಲಿ ಇವನು ನಡಕೊಳ್ಳುತ್ತಿದ್ದುದು ಒಂದು ತರಹದಲ್ಲಿ ವಿಲಕ್ಷಣವಾಗಿ ಇರುತ್ತಿದ್ದುದು ಏನೂ ಆಶ್ಚರ್ಯವಲ್ಲ. ಲಲಿತಮ್ಮ ರೂಪವಂತೆ; ಸರಳ ಹೃದಯಿ. ಅಣ್ಣ ತಮ್ಮಂದಿರ ಜೊತೆಯಲ್ಲಿ ಹೇಗೋ ಹಾಗೆ ನಮ್ಮಲ್ಲಿ ನಡಕೊಳ್ಳುತ್ತಿದ್ದರು. ನಾವು ಹಾಸ್ಯದ ಮಾತಾಡಿದಲ್ಲಿ ಆಕೆಯೂ ಅದರಲ್ಲಿ ಸೇರಿ, ನಾವು ನಕ್ಕಾಗ ಆಕೆಯೂ ನಗುವರು. ನಮ್ಮಿಂದ ಗಂಡ ಹೆಂಡತಿ ಈ ಊರಲ್ಲಿ ಸಂಸಾರ ಮಾಡುವಂತಾಯ್ತೆಂದು, ಕೃತಜ್ಞತೆಯಿಂದ ನಮ್ಮಲ್ಲಿ ಎಷ್ಟೋ ಆದರವನ್ನು ತೋರುವರು. ಶಿವರಾಮಯ್ಯ ನಮ್ಮೆಲ್ಲರಿಗಿಂತ ಚಿಕ್ಕವನು-ಹುಡುಗು ಹುಡುಗಾಗಿ ಕಾಣುತ್ತಿದ್ದನು. ಅವನಲ್ಲಿ ಹೆಚ್ಚಾಗಿ ಸಲಿಗೆಯಿಂದ ಇದ್ದರು. ಶಿವರಾಮಯ್ಯನಿಗೆ ಒಳ್ಳೆ ಕಂಠ ಇತ್ತು. ಸಿನಿಮಾ ಹಾಡುಗಳನ್ನು ಚೆನ್ನಾಗಿ ಹಾಡುತ್ತಿದ್ದನು. ಲಲಿತಮ್ಮನಿಗೂ ಅದನ್ನು ಕಲಿಯಬೇಕೆಂದು ಆಸೆಯಾಗಿ, ಆ ಹಾಡನ್ನು ಹೇಳಿ, ಈ ಹಾಡನ್ನು ಹೇಳಿ ಎಂದು ಅವನ ಕೈಲಿ ಹೇಳಿಸಿ ಕಲಿತುಕೊಳ್ಳುತ್ತಿದ್ದರು. ನೀವು ಈ ಹಾಡು ಹೇಳಿಕೊಟ್ಟಿದ್ದಕ್ಕೆ ಬಹುಮಾನ ಎಂದು, ಅವನು ಎಂದೋ ತನಗೆ ಇಷ್ಟವೆಂದು ಹೇಳಿದ್ದ ತಿಂಡಿಯನ್ನು ನೆನಪಿನಲ್ಲಿಟ್ಟುಕೊಂಡು ಮಾಡಿಕೊಡುತ್ತಿದ್ದರು. ಈ ಮಾತುಕತೆಗಳು ಹಾಸ್ಯಗಳು ನಡೆಯುವಲ್ಲಿ ನಾವೂ ಗೋಪಾಲರಾಯರೂ ಎಲ್ಲರೂ ಇರುತ್ತಿದ್ದೆವು. ಈ ಸಲುಗೆಯಲ್ಲಿ ವಿಪರೀತವೇನು ನಮಗಾಗಲೀ, ಗೋಪಾಲರಾಯರಿಗಾಗಲೀ ಕಾಣಲಿಲ್ಲ. ಆದರೆ ಶಿವರಾಮಯ್ಯ ಎಲ್ಲವನ್ನೂ ಬೇರೆಯಾಗಿ ಅರ್ಥ ಮಾಡಿಕೊಂಡನು. ಸರಳವಾದ ಮಾತುಗಳಿಗೆ ವಕ್ರಾರ್ಥವನ್ನು ಕಲ್ಪಿಸಿಕೊಂಡನು. ಆಕೆಯ ಅಕಲುಷಿತ ನಗುವಿನ ಲಹರಿಯಲ್ಲಿ ಬೇರೊಂದು ಶಬ್ದದ ಧ್ವನಿಯನ್ನು ಕೇಳಿದನು. ಆಕೆಯ ಸ್ನೇಹಪೂರ್ಣ ದೃಷ್ಟಿಯಲ್ಲಿ ಇಲ್ಲದ ಕಾತರವನ್ನು ಕಂಡನು.
ಮೊದಲು ಮೂರು ತಿಂಗಳು ನಮಗೆ ಇದು ಅಷ್ಟಾಗಿ ಕಾಣಲಿಲ್ಲ. ಅವನೂ ಹುಷಾರಿನಲ್ಲಿಯೇ ಇದ್ದನೆಂದು ಕಾಣುತ್ತದೆ. ದಿನ ಕಳೆದಂತೆ ಶಿವರಾಮಯ್ಯನ ಮನಸ್ಸು ಯಾವ ದಾರಿಯಲ್ಲಿ ಓಡುತ್ತಿದೆ ಎಂದು ನಿಧಾನವಾಗಿ ಗೊತ್ತಾಗುತ್ತಾ ಬಂದಿತು. ಲಲಿತಮ್ಮ ಸರಳತನದಲ್ಲಿ ಕೊಟ್ಟ ಸಲುಗೆಯನ್ನು ದುರುಳತನಕ್ಕೆ ಬೆಳಸಿಕೊಳ್ಳಲು ಯತ್ನಮಾಡುತ್ತಿದ್ದನು. ಗೋಪಾಲರಾಯರು ಮನೆಯಲ್ಲಿ ಇರಲಿ ಇರದಿರಲಿ ಅವನು ಅವರ ಕೋಣೆಯ ಕಡೆ ಹೋಗಿಬರುವುದು ಹೆಚ್ಚಾಯಿತು. ಏನಾದರೊಂದು ನೆವ ಮಾಡಿಕೊಂಡು ಮಾತನಾಡಿಸಲು ಹೋಗುವನು. ಅವರು ಒಂದು ಮಾತನಾಡಿದರೆ ನಾಲ್ಕು ಮಾತು ಉತ್ತರ ಹೇಳುವನು. ಈ ಕೆಲಸದಲ್ಲಿ ಕಮಲುವನ್ನು ಚೆನ್ನಾಗಿ ನೆರವಿಗೆ ಉಪಯೋಗಿಸಿಕೊಳ್ಳುತ್ತಿದ್ದನು. ಅವಳ ನೆವ ಮಾಡಿಕೊಂಡು ಅಲ್ಲಿಗೆ ಹೋಗುವುದಕ್ಕೆ, ಮಾತನಾಡುವುದಕ್ಕೆ ಇವನಿಗೆ ತುಂಬಾ ಅನುಕೂಲವಾಗಿತ್ತು. ಕಮಲುವನ್ನು ಕಂಡರೆ ಅವನಿಗಿದ್ದ ಪ್ರೀತಿ ಅಷ್ಟಕ್ಕಷ್ಟೇ. ಆದರೂ ತಾಯಿಯ ಎದುರಿಗೆ ಆ ಮಗುವನ್ನು ಎಷ್ಟು ಮುದ್ದು ಮಾಡುವನೋ, ಎಷ್ಟು ಮಾತನಾಡಿಸಿ ಆಟವಾಡಿಸುವನೋ, ಕಮಲುವಿಗೆಂದು ದಿನವೂ ಸಂಜೆ ಏನಾದರೂ ಪೊಟ್ಣವನ್ನು ತಂದೇ ತರುವನು. ಆದರೆ ಅವನ ದೃಷ್ಟಿಯೆಲ್ಲವೂ ತಾನು ತಂದಿದ್ದು ತಾಯಿಯನ್ನು ತಲುಪುವುದರ ಕಡೆಯೇ.
ಇವನ ವರ್ತನೆ ವಿಪರೀತಕ್ಕಿಟ್ಟುಕೊಂಡಿತಲ್ಲಾ ಎಂದು ನಾಣಿಗೆ, ನನಗೆ ಬಹಳ ಖೇದವಾಯ್ತು. ಬಹಳ ಸೂಕ್ಷ್ಮ ವಿಚಾರ, ತಟಕ್ಕನೇ ಏನೂ ಮಾಡುವಂತಿರಲಿಲ್ಲ. ಹೀಗೆ ಮಾಡಬೇಡ ಎಂದು ಹೇಳುವುದಕ್ಕೆ ಹೋದರೆ ಅವನು ಹೇಗೆ ಎಂದರೆ ಏನುತ್ತರ ಕೊಡುವುದು? ಅವರೂ ಸಲಿಗೆಯಾಗಿದ್ದಾರೆ. ನಾನೂ ಸಲಿಗೆಯಾಗಿದ್ದೇನೆ, ಇದರಲ್ಲೇನು ತಪ್ಪು? ಎಂದರೆ ಏನು ಹೇಳುವುದು. ಹಾಗೂ ಅವನು ಮಾಡಬಾರದ್ದನ್ನು ಏನೂ ಮಾಡಿರಲಿಲ್ಲ. ಆಡಬಾರದ್ದನ್ನು ಆಡಿರಲಿಲ್ಲ. ಯಾವುದನ್ನೂ ಎತ್ತಿ ತೋರಿಸಿ ಇದು ಸರಿ ಅಲ್ಲ ಎಂದು ಹೇಳುವ ಹಾಗಿರಲಿಲ್ಲ. ಆದರೂ ನಮಗೆ ಭಯ ಇದ್ದೇ ಇತ್ತು- ಇದು ಏನೋ ಅಚಾತುರ್ಯವಾಗುತ್ತೆ ಎಂದು. ಇದನ್ನು ಹೇಗೆ ತಪ್ಪಿಸುವುದು ಎಂದು ಯೋಚಿಸಿ ಯೋಚಿಸಿ ಏನೂ ತೋಚದೆ ಸುಮ್ಮನಿರುತ್ತಿದ್ದೆವು. ಅಷ್ಟಕ್ಕೂ ಇವನ ವರ್ತನೆ ನಮ್ಮಿಬ್ಬರ ಕಣ್ಣಿಗೆ ಹೀಗೆ ತೋರಿತೇ ಹೊರತು, ಲಲಿತಮ್ಮನಾಗಲೀ, ಗೋಪಾಲರಾಯರಾಗಲೀ ಗಮನಿಸಿದ ಹಾಗೆ ತೋರಲಿಲ್ಲ. ನಾವೇ ತಪ್ಪು ಯೋಚನೆಗೆ ಎಡೆ ಕೊಟ್ಟಿರಬಹುದು, ಅವರು ಸುಮ್ಮನೇ ಇರುವಾಗ ನಾವು ತಲೆ ಹಾಕಿ ಮನಸ್ಸು ಕೆಡಿಸಬಾರದು ಎಂದು ಎನಿಸುವುದು. ಇವನ ವರ್ತನೆ ಅವರಿಗೆ ಸರಿಬೀಳದಿದ್ದರೆ ಅವರೇ ಸೂಚನೆ ಕೊಡುತ್ತಾರೆ ಎಂದು ಒಂದು ಸಾರಿ ಅನಿಸುವುದು. ಆದರೆ ಶಿವರಾಮಯ್ಯ ನಮ್ಮ ಗುಂಪು, ನಾವು ಚಿಕ್ಕಂದಿನಿಂದ ಗೆಳೆಯರು, ಒಟ್ಟಿಗೇ ಬೊಂಬಾಯಿಗೆ ಬಂದು ಒಟ್ಟಿಗೇ ಜೀವನ ನಡೆಸುತ್ತಿರುವವರು; ಆದ್ದರಿಂದ ಅವನ ವರ್ತನೆಗೆ ನಮಗೂ ಒಂದು ಬಾಧ್ಯತೆ ಬಂದಿತ್ತು. ಅವನಿಂದ ಅಪಮಾನಕರವಾದ ವಿಷಯ ನಡೆದರೆ, ಅದು ನಮಗೂ ತಟ್ಟುವುದು. ಹೀಗೆ ಯಾವ ನಿವಾರಣೆಯೂ ತೋಚದೆ ಒದ್ದಾಡುತ್ತಿದ್ದೆವು.
ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ
ಒಂದು ಸಂಜೆ ಸುಮಾರು ಏಳು ಏಳುವರೆ ಸಮಯ. ಮಾಗಿಕಾಲ, ಆಗಲೇ ಕತ್ತಲಾಗಿಹೋಗಿತ್ತು. ಗೋಪಾಲರಾವ್ ತಾವು ಬರುವುದು ಹೊತ್ತಾಗುತ್ತೆ, ಊಟಕ್ಕೆ ಕಾಯಬೇಡಿ ಎಂದು ಬೆಳಗ್ಗೆಯೇ ಹೇಳಿಹೋಗಿದ್ದರು. ನಾವು ಆಫೀಸು ಮುಗಿಯಿಸಿಕೊಂಡು ಬರುವ ಹೊತ್ತಿಗೆ ಶಿವರಾಮಯ್ಯ ಬಂದುಬಿಟ್ಟಿದ್ದನು. ಕಮಲುವನ್ನು ಎತ್ತಿಕೊಂಡು ಏನೋ ಮಾತನಾಡಿಸುತ್ತಾ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದನು. ಲಲಿತಮ್ಮ ಮತ್ತು ಪಕ್ಕದ ಮನೆಯಾಕೆ ಮಾತನಾಡುತ್ತಾ ಅಂಗಳದಲ್ಲಿ ಕೂತಿದ್ದರು. ನಾವು ಬಂದದ್ದನ್ನು ಕಂಡು ಕಮಲು ಶಿವರಾಮಯ್ಯನ ಬಗಲಿನಿಂದ ಹಾರಿ, “ಚಾಕಲೇಟ್ ಮಾಮ, ನಾನು ಅಮ್ಮ ಪೋಪು ಹೋಗಿದ್ದು. ಊಸಾಚಿರಸ್ (ಕಬ್ಬಿನ ರಸ) ಕುಡಿದ್ಬಂದ್ವು!” ಎಂದು ಕೇಕೆ ಹಾಕುತ್ತಾ ಹೇಳಿಕೊಂಡು ಬಂದಳು. ನಾನೂ, ನಾಣಿ ಮುಖ ಮುಖ ನೋಡಿಕೊಂಡೆವು. ಏನಾದರೂ ಹೇಳಬೇಕು ಎಂದು, “ನಮಗೆಲ್ಲಿ ಊಸಾಚಿರಸ್?’ ಎಂದು ಕೇಳಿದೆವು. ಲಲಿತಮ್ಮ ನಗುತ್ತಾ ಅಂದರು: ”ಅಯ್ಯೋ ಇವಳು ಎಷ್ಟು ಕೆಟ್ಟುಹೋಗಿದ್ದಾಳೆ ಅಂತೀರ! ನೋಡಿ. ಶಿವರಾಮಯ್ಯ ಬಂದು ಇನ್ನೂ ಬಟ್ಟೆ ಬದಲಾಯಿಸುವುದೇ ತಡ ಪೋಪು ಹೋಗಬೇಕು ಪೋಪು ಹೋಗಬೇಕು ಅಂತ ಗೋಳು ಹೊಯ್ದುಕೊಂಡುಬಿಟ್ಟಳು. ಅದು ಏನು ಸುಮ್ಮನೆ ನಡಕೊಂಡು ಹೋಗ್ತಾಳೆಯೇ, ಸವಾರಿಯೇ ಆಗಬೇಕು. ಪೇಟೆಯಷ್ಟು ದೂರ ಹೋಗಿದ್ದೆವು.”

ನಾವು ನಮ್ಮ ಕೋಣೆಗೆ ಬಂದೆವು. ನಮ್ಮ ಹಿಂದೆಯೇ ಶಿವರಾಮಯ್ಯನೂ ಬಂದನು.
“ಏನಯ್ಯಾ, ಗೋರೇಗಾಂವಿನಲ್ಲಿ ಏನು ಸಮಾಚಾರ?” ಎಂದು ನಾಣಿ ಕೇಳಿದ.
“ಏನಿರುತ್ತೆ ಈ ಹಾಳು ಕೊಂಪೇಲಿ. ಒಂದು ಪಾರ್ಕೆ, ಒಂದು ಸಿನಿಮಾವೇ, ಒಂದು ಒಳ್ಳೇ ಹೋಟಲೇ, ಅಂತೂ ರಾಜಣ್ಣ ನಮಗೆ ಒಳ್ಳೇ ವನವಾಸ ತಂದಿಟ್ಟ!” ಎಂದು ಶಿವರಾಮಯ್ಯ ನನ್ನ ಮುಖ ನೋಡಿ ನಕ್ಕ.
“ಅಂಥವನು ಮರೀನ್ ಲೈನ್ಸಿನ ಮಾವನ ಮನೆಯಲ್ಲಿ ಸುಖವಾಗಿರಬಹುದಿತ್ತಲ್ಲ!” ಎಂದು ನಾನು ಚುಚ್ಚು ಮಾತನಾಡಿದೆ. ಅದು ನಮ್ಮದೊಂದು ಹಳೆಯ ಹಾಸ್ಯ, ಎರಡು ವರ್ಷದ ಹಿಂದೆ ಶಿವರಾಮಯ್ಯನಿಗೆ ಮರೀನ್ ಲೈನ್ಸಿನಿಂದ ಒಂದು ಹೆಣ್ಣು ಬಂದಿತ್ತು. ಮರೀನ್ ಲೈನ್ಸು ಎಂದು ಕೇಳಿದ ತಕ್ಷಣವೇ ಅಲ್ಲಿರುವ ಭವ್ಯ ಮಹಲುಗಳಲ್ಲಿರುವ ದೊಡ್ಡ ಮನೆಯವರ ಹೆಣ್ಣು ಎಂದು ಅವನೂ ನಾವೂ ತಿಳಿದಿದ್ದೆವು. ಆಮೇಲೆ ಹೋಗಿ ನೋಡಿದರೆ, ಮನೆಯೇನೋ ಮರೀನ್ ಲೈನ್ಸು ಆವರಣದಲ್ಲೇ ಇತ್ತು; ಆದರೆ ನಮ್ಮ ಮನೆಯ ಹಾಗೇ ಒಂದು ಝೋಪಡಿ. ಇನ್ನು ಹುಡುಗೀನ ನೋಡುವುದಿಲ್ಲ ಎಂದು ಶಿವರಾಮಯ್ಯ ಹಿಂದಿರುಗೇಬಿಟ್ಟ!
ನನ್ನ ಮಾತಿಗೆ ಅವನು ಏನೂ ಉತ್ತರ ಕೊಡಲಿಲ್ಲ. ಕುರ್ಚಿಯ ಮೇಲೆ ಕೂತು, ಹೆಂಚಿನ ಕಡೆ ನೋಡುತ್ತಾ, ”ಬರಖಾಕಿ ರಾತ್ ಆಯೇ ಸಜನೀ” ಎಂದು ಸಣ್ಣಗೆ ಹಾಡಿಕೊಳ್ಳುತ್ತಿದ್ದ. ಅಷ್ಟುಹೊತ್ತಿಗೆ ಲಲಿತಮ್ಮ ಒಂದು ತಟ್ಟೆಯಲ್ಲಿ ಮೂರು ಕಪ್ಪು ಕಾಫೀ ತೆಗೆದುಕೊಂಡು ಬಂದು ಮೇಜಿನ ಮೇಲಿಟ್ಟರು. “ನೀವ್ಯಾಕೆ ತಂದಿರಿ? ನಾವೇ ಬರುತ್ತಿದ್ದಿ” ಎಂದು ನಾನಂದೆ. “ತಂದರೇನಾಯಿತಪ್ಪ! ಈಗತಾನೇ ಡಿಕಾಕ್ಷನ್ ಹಾಕಿದೆ, ನೀವು ಬರುವುದು ತಡವಾದರೆ ಆರಿಹೋಗಿ ಮತ್ತೆ ಬಿಸಿ ಮಾಡಬೇಕಾಗುತ್ತೆ ಅಂತ ಇಲ್ಲಿಗೇ ತಂದೆ. ಎರಡನೇ ಸಾರಿ ಬಿಸಿ ಮಾಡಿದ ಕಾಫಿ ಏನು ಚೆನ್ನಾಗಿರುತ್ತೆ!” ಎಂದರು. ”ಇದೇನು ಮೂರು ಕಪ್ಪು ಇದೆಯಲ್ಲಾ, ಶಿವರಾಮಯ್ಯನದು ಆಗಲಿಲ್ಲವೇನು?” ಎಂದು ನಾನು ಕೇಳಿದೆ.
“ಆಗದೇ ಏನು, ಇದು ಮೂರನೇ ಸಾರಿ! ಬಂದಾಗ ಕೊಟ್ಟಿದ್ದು ಆರಿಹೋಗಿತ್ತು ಎಂದು ವಾಕಿಂಗ್ ಹೋಗಿ ಬಂದಮೇಲೆ ಬೇರೆ ಹಾಕಿ ಕೊಟ್ಟಿದ್ದೆ. ಕಾಫೀ ಎಷ್ಟಾದರೂ ಕುಡೀಲಪ್ಪ! ಏನಾದರೂ ಮಾಡಿ ಆ ಹಾಳು ಸಿಗರೇಟು ಸೇದುವುದನ್ನು ಬಿಡಿಸಿಬಿಡಿ. ನಮ್ಮಪ್ಪ ಹಾಗೇ ಬೀಡಿ ವಿಪರೀತ ಸೇದುತ್ತಿದ್ದ; ಅವನು ಈಗ ಉಬ್ಬಸದಿಂದ ನರಳೋದು ನೋಡಿದರೆ ನರಕಯಾತನೆನಾದರೂ ವಾಸಿ ಎನಿಸುತ್ತೆ ನಮಗೆ!”
”ಅಯ್ಯೋ, ಅದು ಜನುಮಕ್ಕೆ ಅಂಟಿದ್ದು ಲಲಿತಮ್ಮ, ನಾವೇನು ಅವನಿಗೆ ಹೇಳಲಿಲ್ಲವೇನು? ಎಷ್ಟು ಹೇಳಿದರೆ ಕೇಳುತಾನೆ? ಈಗ ಶೋಕಿ, ಮುಂದೆ ಅವನು ತಾನೆ ಅನುಭವಿಸೋದು?” ಎಂದು ನಾನಂದೆ.
ಇಷ್ಟು ಹೊತ್ತು ಮಾತಿಲ್ಲದೆ ಹಾಡಿಕೊಳ್ಳುತ್ತ ಇದ್ದವನು ಈಗ ಬಾಯಿ ಹಾಕಿದ.
“ನಾನೇನು ಶೋಕೀಗೆ ಸೇದುತ್ತೇನೆಯೇ? ಏನೋ ಮನಸ್ಸಿಗೆ ಬೇಜಾರು, ಬೇಜಾರು ಕಳಿಯೋದಿಕ್ಕೆ ಸೇದ್ತೇನೆ” ಎಂದ.
”ಅದೇನಪ್ಪ ಅಂಥ ಬೇಜಾರು?” ಎಂದು ಲಲಿತಮ್ಮ ನಗುತ್ತಾ ಕೇಳಿದರು.
“ಅದು ಹೇಳೋದಿಕ್ಕೆ ಬರೋದಲ್ಲ. ಗೊತ್ತಾಗುವವರಿಗೆ ಗೊತ್ತಾಗೇ ಆಗುತ್ತೆ” ಎಂದು ಅವರ ಕಡೆಯೇ ನೋಡುತ್ತ ಅಂದ.
ಮಾತು ತಿರುಗಿಸೋಣ ಎಂದ ನಾನು, “ಗೋಪಾಲರಾವು ಬರೋ ಹೊತ್ತಾಯಿತು ಅಲ್ಲವೇ?” ಎಂದೆ.
ನಾಣಿ ಏನೋ ಜ್ಞಾಪಿಸಿಕೊಂಡವನಂತೆ, ”ಅಂದಹಾಗೆ ನಾನು ಹೇಳೋದು ಮರೆತೆ. ಮಧ್ಯಾಹ್ನ ಗೋಪಾಲರಾವ್ ಫೋನ್ ಮಾಡಿ ಹೇಳಿದರು. ಈ ದಿನ ಆಫೀಸಿನಲ್ಲಿ ಏನೋ ಹೆಚ್ಚು ಕೆಲಸ ಬಿದ್ದಿದೆಯಂತೆ. ಬರೋದು 10 ಗಂಟೆ ಆಗಬಹುದು. ಊಟಕ್ಕೆ ಕಾಯಬೇಡಿ ಅಂದರು” ಎಂದು ತಿಳಿಸಿದ.
”ಹೌದು ಬೆಳಿಗ್ಗೆ ಮನೇಲೂ ಹೇಳಿ ಹೋಗಿದ್ದರು. ಇನ್ನೇನು ಅಡಿಗೇನೂ ಆಯಿತು. ಸಾರು ಒಂದಿಷ್ಟು ಕುದ್ದರೆ ಮುಗೀತು. ಶಿವರಾಮಯ್ಯ, ಸ್ವಲ್ಪ ಕಮಲೂನ ನೋಡಿಕೊಳ್ಳಿಪ್ಪ ಅಲ್ಲೀವರೆಗೂ” ಎಂದು ಲಲಿತಮ್ಮ ಹೊರಟುಹೋದರು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಶಿವರಾಮಯ್ಯ ಹೊರಗೆ ಬಂದ. ನಾನೂ, ನಾಣೀನೂ ಹೊರಗೆ ಬಂದು ಅಂಗಳದಲ್ಲಿ ಗೋಡೆ ಒರಗಿ ಕೂತೆವು. ಶಿವರಾಮಯ್ಯ ಕಮಲೂನ ನೋಡಿಕೊಳ್ಳುವ ಅಗತ್ಯವೇನೂ ಇರಲಿಲ್ಲ; ಅವಳು ಪಕ್ಕದ ಮನೆಯಲ್ಲಿ ಆಡುತ್ತಾ ಇದ್ದಳು. ಅದನ್ನು ನೋಡಿ ಶಿವರಾಮಯ್ಯ ವಾಪಸು ಬರುವುದರಲ್ಲಿದ್ದ. ಅಷ್ಟಕ್ಕೇ ಮನಸ್ಸು ಹೇಗೆ ತಿರುಗಿತೋ, ಲಲಿತಮ್ಮನವರ ಕೋಣೆಯವರೆಗೂ ಹೋದ. ಅವರು ಒಳಕ್ಕೆ ಹೊರಟುಹೋಗಿದ್ದರು. ಇವನು ಬಾಗಿಲಲ್ಲೇ ಸ್ವಲ್ಪ ಹೊತ್ತು ನಿಂತ. ಒಂದೆರಡು ಸಾರಿ ಆ ಕಡೆ ಈ ಕಡೆ ನೋಡಿದ. ಆಮೇಲೆ ಸರಕ್ಕನೆ ಒಳಕ್ಕೆ ನುಗ್ಗಿದ. ನಾನೂ ನಾಣಿ ಮುಖ ನೋಡಿಕೊಂಡೆವು. ಶಿವರಾಮಯ್ಯ ಆ ಕಡೆ ಹೋದಾಗಲೇ ಅವನ ಮುಖ ನೋಡಿ ನಮಗೆ ಏನೋ ಅನಿಸಿತ್ತು. ಈಗ ಏನೋ ಯೋಚನೆ ಬಂತು. “ನಾಣಿ, ಇದೇಕೆ ಶಿವರಾಮಯ್ಯ ಹೀಗೆ ಒಳಕ್ಕೆ ಹೋದ? ನೋಡಿಕೊಂಡು ಬರುತ್ತೇನೆ ತಾಳು” ಎಂದು ನಾನು ಕೊನೆ ಕೋಣೆಯ ಕಡೆಗೆ ನಡೆದೆ. ನಾನು ಬಾಗಿಲ ಹತ್ತಿರ ಹೋಗುವುದಕ್ಕೂ ಶಿವರಾಮಯ್ಯ ಹೊರಗೆ ಬರುವುದಕ್ಕೂ ಸರಿಹೋಯಿತು. ಲಾಂದ್ರದ ಬೆಳಕಿನಲ್ಲಿ ಅವನ ಮುಖ ಚೆನ್ನಾಗಿ ಕಂಡಿತು. ಎರಡು ನಿಮಿಷದ ಹಿಂದೆ ಇದ್ದ ಗೆಲುವು ಹೋಗಿ, ಬಿಳುಪೇರಿ ಪ್ರೇತಮುಖದಂತಾಗಿತ್ತು. ಅಷ್ಟೊತ್ತಿಗೆ ಚೊಯ್ ಚೊರ್ ಎಂದ ವಗ್ಗರಣೆ ಶಬ್ದ ಒಳಗಿನಿಂದ ಕೇಳಿಸಿತು. ಬಾಗಿಲಿನಿಂದಲೇ ಲಲಿತಮ್ಮ ಒಲೆಯ ಮುಂದೆ ಕೂತಿದ್ದುದು ಕಾಣುತ್ತಿತ್ತು. ನನ್ನನ್ನು ನೋಡಿ, ಸೌಟನ್ನು ಸಾರಿನಲ್ಲಿ ಅದ್ದುತ್ತಲೇ ಕೇಳಿದರು, “ಏನಪ್ಪಾ ಬಂದಿರಿ?” ನಾನು ಏನೂ ಹೇಳಲು ತೋಚದೆ, “ಅಡುಗೆ ಆಯಿತಲ್ಲವೇ, ಇನ್ನೇನು ಊಟಕ್ಕೆ ಏಳುವುದು ತಾನೆ?” ಎಂದೆ. “ಏಕಪ್ಪ ಅಷ್ಟು ಹಸಿವೆಯೇ?” ಎಂದು ಅವರು ನಗೆಯಾಡಿದರು. ನಾನು ಹೊರಗೆ ಬಂದುಬಿಟ್ಟೆ.
ಶಿವರಾಮಯ್ಯ ಎಲ್ಲೂ ಕಾಣಲಿಲ್ಲ. ನಾಣಿಯನ್ನು ಕೇಳಿದೆ. ಅವನು, “ನೆಟ್ಟಗೆ ಎಲ್ಲಿಯೋ ಹೊರಗೆ ಹೋದ ಹಾಗೆ ಕಂಡಿತು” ಎಂದ. ನಾನು ನೋಡಿದ್ದನ್ನು ನಾಣಿಗೆ ಹೇಳಿದೆ. “ಅವನ ಚಮಡ ಸುಲೀಬೇಕು. ಏನಯ್ಯಾ ಒಂದಿಷ್ಟು ಮಾನ ಮರ್ಯಾದೆ ಬೇಡವೆ?” ಎಂದೆ.
ಸ್ವಲ್ಪ ಹೊತ್ತು ಕಾದೆವು. ಶಿವರಾಮಯ್ಯ ಬರಲಿಲ್ಲ. ಲಲಿತಮ್ಮ ಹೊರಗೆ ಬಂದು, “ಹಸಿವು ಅನ್ನುತ್ತಿದ್ದಿರಲ್ಲ, ಎಲೆ ಹಾಕಿದ್ದೀನಿ ಬನ್ನಿ” ಎಂದು ಕರೆದರು. ನಾವು “ಇಲ್ಲ, ಶಿವರಾಮಯ್ಯ ಎಲ್ಲೋ ಹೊರಗೆ ಹೋಗಿದಾನೆ. ಅವನೂ ಬರಲಿ, ಮೂರು ಜನವೂ ಒಟ್ಟಿಗೆ ಕೂತರೆ ಆಯಿತು” ಎಂದೆ.
ಅರ್ಧ ಮುಕ್ಕಾಲು ಗಂಟೆಯಾದರೂ ಶಿವರಾಮಯ್ಯ ಬರಲಿಲ್ಲ. ನಮಗೆ ಸ್ವಲ್ಪ ಯೋಚನೆ ಆಯಿತು. “ನಾಣಿ, ಎಲ್ಲಿಗೆ ಹೋದನೋ ಇವನು?” ಎಂದು ಕೇಳಿದೆ. “ಎಲ್ಲಿಯಾದರೂ ಹಾಳಾಗಿ ಹೋಗಲಿ ಬಿಡು. ಅವನು ಬಂದರೂ ಈ ರೂಮಿನಲ್ಲಿ ಸೇರಿಸಬಾರದು. ಇವನದು ಅತೀ ಆಯಿತು” ಎಂದು ಒದರಿದನು. ಶಿವರಾಮಯ್ಯನ್ನ ಕಂಡರೆ ನಾಣಿಗೆ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಅವನ ಮೇಲೆ ಇವನದು ಏನಾದರೂ ದೂರು ಇದ್ದೇ ಇರುತ್ತಿತ್ತು. ನಾನು ಕೊನೇ ಕೋಣೆಯ ಕಡೆ ಹೋಗಿ, “ಲಲಿತಮ್ಮ, ನಾನು ಹೋಗಿ ಶಿವರಾಮಯ್ಯನ್ನ ನೋಡಿಕೊಂಡು ಬರುತ್ತೇನೆ. ಯಾಕೋ ಇಷ್ಟು ಹೊತ್ತಾದರೂ ಬರಲಿಲ್ಲ” ಎಂದೆ. ಅವರು, “ಎಲ್ಲೋ ಸಿಗರೇಟು ತರಲು ಹೋಗಿದ್ದಾರೇನೋ, ನೀವೇಕೆ ಅಷ್ಟು ಗಾಬರಿಪಟ್ಟುಕೊಳ್ಳುತ್ತೀರಿ?” ಎಂದರು. ಸ್ವಲ್ಪ ಸುಮ್ಮನಿದ್ದು, ”ನೀವಿಬ್ಬರೂ ಊಟಕ್ಕೆದ್ದು ಬಿಡಿ ಅಪ್ಪ! ಮಾಡಿದ ಅಡುಗೆ ಆರಿ ಅಕ್ಷತೆಯಾಗಿ ಹೋಗುತ್ತೆ. ಅವರು ಹೊತ್ತಾಗಿ ಬಂದರೆ ನಮ್ಮವರ ಜೊತೆಯಲ್ಲಿ ಕೂತುಕೊಳ್ಳುತ್ತಾರೆ” ಎಂದು ಒತ್ತಾಯಮಾಡಿದರು.
ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್ರ ಕತೆ | ಕದ್ದವರು ಯಾರು?
ಸ್ವಲ್ಪ ಹೊತ್ತಿಗೆ ಗೋಪಾಲರಾವ್ ಬಂದರು. ನಾನೂ, ಲಲಿತಮ್ಮ ಒಟ್ಟಿಗೇ, “ಏನು, ಶಿವರಾಮಯ್ಯ ದಾರಿಯಲ್ಲಿ ನಿಮಗೆ ಸಿಕ್ಕರೆ?” ಎಂದು ಕೇಳಿದೆವು. “ಇಲ್ಲ, ಯಾಕೆ? ಏನಾಯಿತು?” ಎಂದು ನಮ್ಮನ್ನು ಕೇಳಿದರು. ಆಕೆಯೇ ಉತ್ತರ ಕೊಟ್ಟರು, ”ಏನೂ ಇಲ್ಲ, ಇನ್ನೇನು ಎಲೆ ಹಾಕೋಣ ಎಂದಿದ್ದೆವು; ಅಷ್ಟರಲ್ಲೇ ಎಲ್ಲೋ ಹೋದರು, ಇಷ್ಟು ಹೊತ್ತಾದರೂ ಬರಲಿಲ್ಲ ಎಂದು ರಾಜಣ್ಣ ಯೋಚನೆ ಮಾಡುತ್ತಿದ್ದರು.” ಗೋಪಾಲರಾವ್, ”ಅಷ್ಟೇ ತಾನೆ, ಬರುತ್ತಾರೆ! ಚೆನ್ನಾಗಿ ಹಸಿವಾಗಲಿ ಎಂದು ವಾಕಿಂಗ್ ಹೋಗಿದ್ದಾರೋ ಏನೋ?” ಎಂದರು.
ಆಮೇಲೆ ಅರ್ಧ ಮುಕ್ಕಾಲು ಗಂಟೆ ಕಾದೆವು. ಆಸಾಮಿ ಬರಲೇ ಇಲ್ಲ. ನನ್ನ ತಲೆಗೆ ಏನೇನೋ ಯೋಚನೆಗಳು ಬಂದವು. “ಗೋಪಾಲರಾವ್, ನಾನು ಹೋಗಿ ನೋಡಿಕೊಂಡು ಬರುತ್ತೇನೆ. ಯಾಕೋ ಇವನು ಇಷ್ಟು ಹೊತ್ತು ಮಾಡಿಬಿಟ್ಟ!” ಅಂದೆ. ಅವರು, “ನೋಡಿ, ಈಗ ನೀವು ಹೊರಟಿರಿ ಎಂದರೆ ಬರುವುದು ಎಷ್ಟು ಹೊತ್ತು ಆಗಬಹುದು? ಮೊದಲೇ ಹಸಿದಿದ್ದೀರಿ. ನಾನೂ ಹಸಿದಿದ್ದೇನೆ, ಒಂದಿಷ್ಟು ಊಟ ಮಾಡಿ ಹೊರಡೋಣಂತೆ. ನನಗೂ ವಾಕಿಂಗ್ ಆದಹಾಗೆ ಆಗುತ್ತೆ” ಎಂದು ಸ್ವಲ್ಪ ಹೊತ್ತು ಸುಮ್ಮನಿದ್ದು, ”ಅವರು ಎಲ್ಲೂ ಹೋಗಿಲ್ಲ. ಮನಸ್ಸಿಗೆ ಏನು ಬೇಸರವಾಯಿತೋ ತಿರುಗಾಡಿಕೊಂಡು ಹಗುರಮಾಡಿಕೊಳ್ಳಲು ಹೋಗಿದ್ದಾರೆ. ನೀವೇನೂ ಯೋಚನೆ ಮಾಡಬೇಡಿ” ಎಂದು ಹೇಳಿದರು. ಆಮೇಲೆ, “ಲಲಿತ, ನಾವು ಮೂರು ಜನಕ್ಕೆ ಎಲೆ ಹಾಕಿಬಿಡು” ಎಂದು ಹೆಂಡತಿಗೆ ಹೇಳಿದರು. “ಎಲೆ ಹಾಕಿ ಎಷ್ಟು ಹೊತ್ತೋ ಆಯಿತು” ಎಂದು ಒಳಗಿಂದ ಉತ್ತರ బంತು.
ಊಟಕ್ಕೆ ಕೂತೆವು. ಸಾರು ಬಡಿಸಿದಾಗ ಗೋಪಾಲರಾಯರು, ”ಒಗ್ಗರಣೆ ಸೀದುಹೋಗಿದೆಯಲ್ಲಾ!” ಎಂದರು. ಲಲಿತಮ್ಮ, “ಹೌದು! ಒಗ್ಗರಣೆ ಮಾಡುತ್ತಿದ್ದಾಗ ಶಿವರಾಮಯ್ಯ ಬಂದು ಏನೋ ಮಾತಾಡಿಸಿದರು. ಅವರಿಗೆ ಉತ್ತರ ಹೇಳುವಷ್ಟರಲ್ಲಿ ಒಗ್ಗರಣೆ ಸೀದುಹೋಯಿತು!” ಎಂದು ಸ್ವಲ್ಪ ನಗುತ್ತಲೇ ಹೇಳಿದರು. “ಹಾಗೋ!” ಎಂದು ಗೋಪಾಲರಾಯರೂ ನಕ್ಕರು. ನನಗೆ, ನಾಣಿಗೆ, ಶಿವರಾಮಯ್ಯ ಏನು ಕೇಳಿದರು, ಇವರು ಏನು ಹೇಳಿದರು ಎಂದು ತಿಳಿದುಕೊಳ್ಳಬೇಕೆಂದು ಕುತೂಹಲ. ಆದರೆ ಹೇಗೆ ಕೇಳುವುದು?
ಕೈತೊಳೆದು, “ಗೋಪಾಲರಾವ್, ಬನ್ನಿ ಹೋಗೋಣ, ಶಿವರಾಮಯ್ಯ ಎಲ್ಲಿ ತಪ್ಪಿಸಿಕೊಂಡನೋ ನೋಡೋಣ” ಎಂದೆ. ಅವರೂ ಬ್ಯಾಟರಿ ತೆಗೆದುಕೊಂಡು ಬಂದರು. ನಾಣಿ ಮನೆಯಲ್ಲೇ ನಿಂತ. ನಾವಿಬ್ಬರೇ ಹೊರಟೆವು. ಶಿವರಾಮಯ್ಯ ದಾರಿಯಲ್ಲಿ ಸಿಗುತ್ತಾನೆ ಎಂದು ನನ್ನ ನಿರೀಕ್ಷೆ. ಸ್ಟೇಶನ್ ರಸ್ತೆಯಲ್ಲಿ ಸೀದಾ ಹೋದೆವು. ನಮ್ಮ ವಠಾರದಿಂದ ಊರಿಗೆ ಹೋಗುವ ರಸ್ತೆ ಅದೊಂದೇ. ಸ್ಟೇಷನ್ ದಾಟಿದ ಮೇಲೆ ಅಂಗಡಿ ಸಾಲು, ಅಲ್ಲೊಂದು ಮಂಗಳೂರಿನವರ ಅಂಗಡಿಯಲ್ಲೇ ಶಿವರಾಮಯ್ಯ ಸಾಮಾನ್ಯವಾಗಿ ಸಿಗರೇಟ್ ತೆಗೆದುಕೊಳ್ಳುತ್ತಿದ್ದುದು. ಅಲ್ಲಿ ಹೋಗಿ ಕೇಳಿದೆವು. ಅವನು, “ಸಂಜೆ ಐದು ಗಂಟೆಗೆ ಬಂದಿದ್ದರು. ನಂತರ ಬರಲಿಲ್ಲ ಮಾರಾಯ್ರೆ” ಎಂದ. ಮುಂದೆ ಹಾಗೇ ಹೋದೆವು. ಗೋಡ್ ಬಂದರ್ ರಸ್ತೆ ಸಿಕ್ಕರೂ ಇವನ ಸುಳಿವು ಎಲ್ಲೂ ಕಾಣಲಿಲ್ಲ. ಆ ರಸ್ತೆಯಲ್ಲಿ ಇನ್ನೂ ಮುಂದಕ್ಕೆ ಹೋಗಿದ್ದರೆ ಉತ್ತರದ ಕಡೆಯಾದರೂ ಹೋಗಿರಬಹುದು; ದಕ್ಷಿಣದ ಕಡೆಯಾದರೂ ಹೋಗಿರಬಹುದು. ನಾವು ಯಾವ ಕಡೆ ಎಂದು ಹುಡುಕಿಕೊಂಡು ಹೋಗುವುದು? ಸಾಮಾನ್ಯವಾಗಿ ನಾವು ವಾಕಿಂಗ್ ಹೋಗುತ್ತಿದ್ದುದು ಮಲಾಡ್ ಕಡೆ. ಆ ಕಡೆಯೇ ಹೋಗಿರಬಹುದು, ಒಂದು ಛಾನ್ನು ನೋಡೋಣ ಎಂದು ಮಲಾಡ್ ಕಡೆಯೇ ಹೊರಟೆವು.
ಮಲಾಡ್ ದಾಟಿ ಹೋದರೂ ಪ್ರಯೋಜನವಾಗಲಿಲ್ಲ. ಜೋಗೇಶ್ವರಿ ಕಡೆ ಏನಾದರೂ ಹೋಗಿದ್ದಾನೋ ಏನೋ ಎಂದು ನಾನಂದೆ. ಗೋಪಾಲರಾಯರು, ”ನಿಮಗೆಲ್ಲೋ ಹುಚ್ಚು; ಎಲ್ಲಿಗೋ ಹೋದವರನ್ನು ಬೊಂಬಾಯಿಯಲ್ಲಿ ಹೀಗೆ ಹುಡುಕುವುದಕ್ಕಾಗುತ್ತದೆಯೇ? ಶಿವರಾಮಯ್ಯ ಏನು ಎಳೇ ಮಗೂನೇ? ಎಲ್ಲೋ ಹೋಗಿದ್ದಾರೆ; ಬರುತ್ತಾರೆ. ಯಾಕೆ ಸುಮ್ಮನೆ ಗಾಬರಿ ಮಾಡಿಕೊಳ್ಳುತ್ತೀರಿ? ನಾವು ಮನೆಗೆ ಹೋಗೋ ಹೊತ್ತಿಗೆ ಅವರು ಬಂದಿದ್ದರೂ ಬಂದಿರಬಹುದು” ಎಂದು ಧೈರ್ಯಕೊಟ್ಟರು. “ಸದ್ಯ ನಿಮ್ಮ ಮಾತು ನಿಜವಾದರೆ ಸಾಕು” ಎಂದು ಆಸೆ ಇಟ್ಟುಕೊಂಡು ಮನೆಗೆ ಹಿಂತಿರುಗಿದೆವು. ಗೋಪಾಲರಾಯರ ಕೋಣೆಯಲ್ಲಿ ದೀಪ ಉರಿಯುತ್ತಿರುವುದು ದೂರದಿಂದಲೇ ಕಂಡಿತು. ಹತ್ತಿರಕ್ಕೆ ಬಂದ ಮೇಲೆ, ಲಲಿತಮ್ಮ ಬಾಗಿಲಲ್ಲಿ ಕೂತಿದ್ದು ನೋಡಿದೆವು. ನಾವು ಗೇಟು ದಬ್ಬಿ ಬಂದ ತಕ್ಷಣವೇ, “ಏನು ಸಿಗಲಿಲ್ಲವೇ?” ಎಂದು ಕೇಳಿದರು. ಗೋಪಾಲರಾಯರು, ”ಇಲ್ಲ” ಎಂದರು.
ನಾಣಿ ಒಳಗೆ ಹಾಸಿಗೆ ಉರುಳಿಸಿಕೊಂಡು ಮಲಗಿದ್ದ. ನಿದ್ದೆ ಬಂದಿರಲಿಲ್ಲ. “ಏನಯ್ಯಾ, ಸಿಗಲಿಲ್ಲವೇ?” ಎಂದು ಅವನೂ ಕಾತುರದಿಂದಲೇ ಕೇಳಿದ. “ಇಲ್ಲ, ನಾವು ಮಲಾಡ್ ಕಡೆ ಹೋಗಿದ್ದೆವು. ಬರೋಹೊತ್ತಿಗೆ ಮನೆಗೆ ಬಂದಿದ್ದಾನೆ ಎಂದು ತಿಳಿದುಕೊಂಡು ಬಂದುಬಿಟ್ಟೆವು” ಎಂದೆ. ಲಲಿತಮ್ಮ ಹೇಳುತ್ತಿದ್ದುದು ಕೇಳಿಸಿತು, “ರಾಜಣ್ಣ ಸುಮ್ಮನೆ ಯೋಚನೆ ಮಾಡುತ್ತಿದ್ದಾರೆ. ಯಾರು ಸ್ನೇಹಿತರು ಸಿಕ್ಕರೋ ಏನೋ, ಸಿನಿಮಾ ಗಿನಿಮಾ ಕಡೆ ಹೋಗಿರಬಹುದು. ಎಲ್ಲಿ ಹೋಗುತ್ತಾರೆ; ಬರುತ್ತಾರೆ!”
ನಾನೂ ಹಾಸಿಗೆ ಉರುಳಿಸಿಕೊಂಡು ಮಲಗಿದೆ. ಬಹಳ ಹೊತ್ತಾದರೂ ನಿದ್ದೆ ಹತ್ತಲಿಲ್ಲ. ಒಂದು ಕಡೆ, ಶಿವರಾಮಯ್ಯ-ಲಲಿತಮ್ಮನವರ ಕೋಣೆಯಿಂದ ಹೊರಗೆ ಬರುವಾಗ ಅವನ ಮುಖ ಹಾಗೇಕೆ ಪೆಚ್ಚಾಗಿತ್ತು? ಇವನು ಏನು ಮಾಡಿದ? ಅವರು ಏನು ಹೇಳಿದರು? ಎಂದು ಕುತೂಹಲ; ಇನ್ನೊಂದು ಕಡೆ, ಹುಚ್ಚು ಹುಡುಗ ಏನೋ ಮಾಡಿಕೊಂಡುಬಿಟ್ಟಿದ್ದಾನೆ ಎಂಬ ಹೆದರಿಕೆ. ಮೂರು ಗಂಟೆ ಹೊಡೆದದ್ದು ಕೇಳಿಸಿತು. ಸ್ವಲ್ಪ ಜಂಪು ಹತ್ತಿದಂತಾಯ್ತು. ಒಳಗೆ ಯಾರೋ ಬಂದ ಹೆಜ್ಜೆ ಸಪ್ಪಳ ಕೇಳಿಸಿತು. ”ಯಾರು, ಶಿವರಾಮಯ್ಯ?” ಎಂದು ನಾನು ಕೇಳಿದೆ. ಬಂದವನು ಶಿವರಾಮಯ್ಯನೇ. “ಹೌದು ನಾನು,” ಎಂದ. “ಸದ್ಯ” ಎಂದು ಮನಸ್ಸಿಗೆ ಹಗುರವಾಯ್ತು.
“ಯಾಕಯ್ಯಾ ಇಷ್ಟು ಹೊತ್ತಾಯ್ತು, ನಮಗೆ ಬಹಳ ಗಾಬರಿ ಮಾಡಿದೆ” ಎಂದೆ. “ಸಿಗರೇಟ್ ತರುವುದಕ್ಕೆ ಹೋದೆ. ನಮ್ಮ ಆಫೀಸಿನ ಬಲ್ಸಾರ ಸಿಕ್ಕಿದ್ದ. ಬಲವಂತ ಮಾಡಿ ಮನೆಗೆ ಕರೆದುಕೊಂಡು ಹೋದ. ಅಲ್ಲೇ ಊಟ ಮಾಡಿ ಮಲಾಡಿಗೆ ಸಿನಿಮಾಕ್ಕೆ ಹೋಗಿಬಂದೆವು. ಅದಕ್ಕೇ ಹೊತ್ತಾಯಿತು” ಅಂದ. ನಾವು ಮಾತಾಡುತ್ತಿದ್ದುದು ಅಲ್ಲಿ ದಂಪತಿಗಳಿಗೆ ಕೇಳಿಸಿತು. ಗೋಪಾಲರಾವ್ ಅಲ್ಲಿಂದಲೇ “ಏನು, ಬಂದರೆ?” ಎಂದು ಕೇಳಿದರು. ”ಹೌದು ಬಂದ!” ಎಂದು ನಾನು ಉತ್ತರವಿತ್ತೆ.
ಇದನ್ನು ಓದಿದ್ದೀರಾ?: ‘ಶ್ರೀ ಸ್ವಾಮಿ’ಯವರ ಕತೆ | ಬೀಬೀ ನಾಚ್ಚಿಯಾರ್
“ಎಲ್ಲಿಗೆ ಹೋಗಿದ್ದರಂತೆ?”
“ಎಲ್ಲೋ ಸಿನಿಮಾಕ್ಕಂತೆ.”
“ನಾನು ಹೇಳಲಿಲ್ಲವೇ!” ಎಂದು ಲಲಿತಮ್ಮ ನಗುತ್ತಾ ಅಂದಿದ್ದು ನಮಗೆ ಕೇಳಿಸಿತು.
ಬೆಳಗ್ಗೆ ಶಿವರಾಮಯ್ಯನ ಮುಖ ನೋಡಿದೆ. ಒಂದು ತರಹಾ ಇದ್ದ. ಯಾರ ಹತ್ತಿರವೂ ಹೆಚ್ಚಾಗಿ ಮಾತಾಡಲಿಲ್ಲ. ಮುಖಕ್ಷೌರನೂ ಮಾಡಿಕೊಳ್ಳದೆ, “ಈವತ್ತು ಸ್ವಲ್ಪ ಕೆಲಸ ಇದೆ. ಬೇಗ ಹೋಗ್ತೇನೆ. ರಾತ್ರಿ ಬರೋದು ಹೊತ್ತಾಗುತ್ತೆ, ಊಟಕ್ಕೆ ನನಗೆ ಕಾಯಬೇಡಿ” ಎಂದು ಬಿರಬಿರನೆ ಹೊರಟುಹೋದ.
ರಾತ್ರಿ ಹತ್ತು ಗಂಟೆಗೆ ಮನೆಗೆ ಬಂದ. ಯಾರ ಹತ್ತಿರವೂ ಮಾತು ಕತೆ ಇಲ್ಲ. ಗೋಪಾಲರಾವ್ ಮಾತನಾಡಿಸಿದರೆ ಹೌದು, ಇಲ್ಲ ಎಂದು ಎರಡು ಮಾತಿನಲ್ಲಿ ಉತ್ತರ ಕೊಟ್ಟು ಸುಮ್ಮನಾದ. ಹಾಸಿಗೆ ಹಾಸಿ ಮಲಗಿಕೊಂಡ ಮೇಲೆ ನಾನೇ, “ಏನು ಶಿವರಾಮಯ್ಯ, ಯಾಕೋ ಒಂದು ತರಹಾ ಇದ್ದೀಯಾ?” ಎಂದೆ. “ಏನೂ ಇಲ್ಲ, ಮನೆಯಿಂದ ಕಾಗದ ಬಂತು, ತಕ್ಷಣ ಹೊರಟು ಬಾ ಅಂತ. ಯಾಕೋ ಎಂದು ಯೋಚನೆ ಮಾಡುತ್ತಿದ್ದೆ ಅಷ್ಟೆ. ನಾಳೆ ಬೆಳಿಗ್ಗೆ ಪೂನಾ ಎಕ್ಸ್ಪ್ರೆಸ್ಗೆ ಹೊರಡುತ್ತೇನೆ” ಅಂದ. “ಕಾಗದ ತಾನೇ ಬಂದಿರೋದು, ಹಾಗಿದ್ದರೆ ಏನೂ ಅಂತಹುದು ಇರಲಾರದು. ಇನ್ನೇನು ಬರೆದಿಲ್ಲವೇ?” ಎಂದು ಕೇಳಿದೆ.

“ಇಲ್ಲ” ಎಂದ. ಇವನು ಊರಿಗೆ ಹೋಗೋ ವಿಷಯ ನಿನ್ನೆಯೇ ನಿರ್ಧಾರ ಮಾಡಿದ್ದಾನೆ. ಈಗ ಏನೋ ಕಾಗದದ ಸುದ್ದಿ ಎತ್ತುತ್ತಿದ್ದಾನೆ ಎಂದು ನನಗೆ ಅನಿಸಿತು.
ಬೆಳಗ್ಗೆ, ಶಿವರಾಮಯ್ಯ ಊರಿಗೆ ಹೊರಡುತ್ತಾನೆ ಎಂದು ಎಲ್ಲರಿಗೂ ತಿಳಿಸಿದೆ. ಲಲಿತಮ್ಮ ಬೇಗ ಒಂದಿಷ್ಟು ಉಪ್ಪಿಟ್ಟು ಕಾಫಿ ಮಾಡಿಕೊಟ್ಟರು. “ರಾಜಣ್ಣ, ನೀವು ರಾತ್ರಿಯೇ ಹೇಳಿದ್ದಿದ್ದರೆ, ಒಂದಿಷ್ಟು ಗೋಧಿರೊಟ್ಟಿ ಮಾಡಿಕೊಡುತ್ತಿದ್ದೆ. ರೈಲಿನಲ್ಲಿ ಹಾಳು ಮೂಳು ತಿನ್ನುವುದು ತಪ್ಪುತ್ತಿತ್ತು” ಎಂದು ನನ್ನನ್ನು ಆಕ್ಷೇಪ ಮಾಡಿದರು.
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
ಶಿವರಾಮಯ್ಯ ಎಲ್ಲರಿಗೂ ಹೇಳಿ ಹೊರಟನು. ಲಲಿತಮ್ಮನವರಿಗೆ ಹೇಳಿದಾಗ ಅವರು ನಗುತ್ತಲೇ ”ಈ ಸಾರಿ ಒಂದು ಗಂಟು ಹಾಕಿ ಕಳುಹಿಸುತ್ತಾರೆ, ನಾನೇನು ಹೇಳಿದ್ದೇನಿ ನೋಡಿ! ಮದುವೆ ಮಾಡಿಕೋ ಬಾ ಅಂದರೆ ಜಂಬ ಮಾಡಿಕೊಳ್ಳುತ್ತಾನೆ ಎಂದು ಏನೂ ಬರೆಯದೆ ಸುಮ್ಮನೆ ಬಾ ಎಂದು ಬರೆದಿದ್ದಾರೆ. ನಮಗೆ ಲಗ್ನಪತ್ರಿಕೆ ಕಳಿಸುವುದು ಮರೆಯಬೇಡಿ” ಅಂದರು. ಶಿವರಾಮಯ್ಯನೂ ನಕ್ಕಹಾಗೆ ಮಾಡಿದ. ಒಂದು ಸಾರಿ ಕಣ್ಣೆತ್ತಿ ನೋಡಿ ಹೊರಟುಹೋದ. ಈ ನೋಟದಲ್ಲಿ ಕಾತುರವಿರಲಿಲ್ಲ, ದೈನ್ಯವಿತ್ತು.
ಲಲಿತಮ್ಮ ಆಮೇಲೆ ಏನೋ ಮಾತಿಗೆ ಬಂದು ಮೂರು ಸಾರಿ ಹೇಳಿದರು: “ಶಿವರಾಮಯ್ಯ ಈ ಸಾರಿ ಖಂಡಿತ ಮದುವೆ ಮಾಡಿಕೊಂಡು ಬರುತ್ತಾರೆ. ಅವರಿಗೊಂದು ಮನೆ ನೋಡಿಡುವ ವಿಚಾರ ಮಾಡುತ್ತಿರಿ!”
“ಪಕ್ಕದ ಮನೆ ಪಾಠಕ್ ಬೇರೆ ಎಲ್ಲೋ ಹೋಗುತ್ತೇವೆ ಎನ್ನುತ್ತಿದ್ದಾರೆ. ಆ ಕೋಣೆಯನ್ನೇ ತೆಗೆದಿಟ್ಟರಾಯಿತು!” ಎಂದು ನಾನಂದೆ.
ಲಲಿತಮ್ಮ ಹೇಳಿದ್ದು ಮತ್ತೊಮ್ಮೆ ನಿಜವಾಯಿತು. ಎಂಟು ದಿನಗಳ ನಂತರ ಶಿವರಾಮಯ್ಯನಿಂದ ಕಾಗದ ಬಂತು. ತಾನು ಎಷ್ಟು ಬೇಡವೆಂದರೂ ಕೇಳದೆ, ತಂದೆ ತಾಯಿಗಳು ಮದುವೆ ಗೊತ್ತು ಮಾಡಿದ್ದಾರೆಂತಲೂ, ಹುಡುಗಿ ಅಷ್ಟೊಂದು ಓದಿಲ್ಲದವಳಾದರೂ ಒಳ್ಳೆ ಮನೆತನದವಳೆಂದೂ, ಚೆನ್ನಾಗಿದ್ದಾಳೆಂದೂ ಬರೆದಿದ್ದನು. ನಾವೆಲ್ಲರೂ ರಜಾ ತೆಗೆದುಕೊಂಡು ಬರಲೇಬೇಕೆಂದೂ, ಗೋಪಾಲರಾವ್ ದಂಪತಿಗಳನ್ನು ಖಂಡಿತ ಕರಕೊಂಡು ಬರಬೇಕೆಂದೂ ಒತ್ತಾಯದಿಂದ ಬರೆದಿದ್ದನು. ಲಲಿತಮ್ಮನಿಗೆ ತನ್ನ ತಮ್ಮನ ಮದುವೆಯೋ ಎನ್ನುವಷ್ಟು ಸಂತೋಷವಾಯಿತು.
ನಾವ್ಯಾರೂ ಮದುವೆಗೆ ಹೋಗಲು ಆಗಲಿಲ್ಲ. ಎಲ್ಲರೂ ನಮ್ಮ ಯೋಗ್ಯತಾನುಸಾರ ಉಡುಗೊರೆಗಳನ್ನು ಮಾತ್ರ ಕಳಿಸಿದೆವು. ಲಲಿತಮ್ಮ ತಾವೇ ಹಾಕಿದ್ದ ಒಂದು ಉಲ್ಲನ್ ಸೈಟರನ್ನು ವಧುವಿಗೂ, ಗೋಪಾಲರಾವ್ ಒಂದು ಸೂಟಿಗಾಗುವಷ್ಟು ಉಲ್ಲನ್ ಬಟ್ಟೆಯನ್ನು ವರನಿಗೂ ಉಡುಗೊರೆಯಾಗಿ ಕಳಿಸಿದರು.
ಶಿವರಾಮಯ್ಯ ಮತ್ತೆ ಬೊಂಬಾಯಿಗೆ ಬರಲಿಲ್ಲ. ಅವನ ಮಾವ ಒಳ್ಳೆ ಅನುಕೂಲಸ್ಥರೆಂದು ತಿಳಿಯಿತು. ಒಬ್ಬಳೇ ಮಗಳಂತೆ, ಆಸ್ತಿ ಪಾಸ್ತಿಯನ್ನು ನೋಡಿಕೊಂಡು ಅವರ ಹತ್ತಿರವೇ ಇದ್ದುಬಿಟ್ಟನು. ಆಗಿಂದಾಗ್ಗೆ ಕಾಗದ ಬರೆಯುತ್ತಿದ್ದನು. ಕೊನೆಯಲ್ಲಿ ಯಾವಾಗಲೂ ‘ಲಲಿತಮ್ಮನವರಿಗೆ ನನ್ನ ನಮಸ್ಕಾರಗಳನ್ನು ತಿಳಿಸುವುದು’ ಎಂದು ಒಂದು ಪಂಕ್ತಿ ಇದ್ದೇ ಇರುತ್ತಿತ್ತು.
ಆದರೆ ನಾನೆಷ್ಟು ಪ್ರಯತ್ನಪಟ್ಟರೂ ಆ ಸೀದ ಒಗ್ಗರಣೆಯ ಕಥೆ ಏನು ಎಂಬುದು ಸರಿಯಾಗಿ ಗೊತ್ತಾಗಲೇ ಇಲ್ಲ.
(ಕೃಪೆ: ಮಲ್ಲಿಗೆ ಮಾಸಪತ್ರಿಕೆ; “ಹೆಣ್ಣು ಹೃದಯ ಮತ್ತು ಇತರ ಕತೆಗಳು”, ಜೀವನ ಕಾರ್ಯಾಲಯ, ಬೆಂಗಳೂರು, 1958)
ಟಿ.ಎಸ್. ಸಂಜೀವರಾಯರ ‘ಸೀದ ಒಗ್ಗರಣೆ’
ಖಂಡಿತವಾಗಿಯೂ ಹೆಚ್ಚು ಜನರ ಗಮನಕ್ಕೆ ಬಾರದೇ ಉಳಿದಿರುವ ಕತೆಗಾರರಲ್ಲಿ ಶ್ರೀ ಟಿ.ಎಸ್. ಸಂಜೀವರಾವ್ (ಜ. 1920) ಅವರು ಒಬ್ಬರು. ಅವರ ಕತೆಗಳು ಯಾವುದಾದರೂ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವೋ ಇಲ್ಲವೋ ತಿಳಿಯದು. 1958ರಷ್ಟು ಈಚೆಗೆ ಅವರ “ಹೆಣ್ಣು ಹೃದಯ ಮತ್ತು ಇತರ ಕತೆಗಳು” ಎಂಬ ಐದು ಕತೆಗಳ ಸಂಕಲನವೊಂದನ್ನು ಮಾಸ್ತಿಯವರು ಪ್ರಕಟಿಸಿದ್ದಾರೆ. ಈ ಕತೆಗಳನ್ನು ಬರೆದ ಕಾಲ, ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೆ ಆ ಮಾಹಿತಿ, ಇನ್ನೂ ಅಪ್ರಕಟಿತ ಕತೆಗಳಿವೆಯೇ ಹೇಗೆ-ಇತ್ಯಾದಿ ಯಾವ ವಿವರಗಳೂ ಅದರಲ್ಲಿ ಇಲ್ಲ. ಈ ಸಂಕಲನ ಬಂದಮೇಲಂತೂ ಸಂಜೀವರಾಯರು ಅಜ್ಞಾತವಾಸಕ್ಕೇ ಹೋದಂತಾಗಿದೆ. ಈಗ ಅವರು ಪುಣೆಯಲ್ಲಿ ವಾಸವಾಗಿದ್ದಾರೆ. ಅವರ ಬರವಣಿಗೆ ಎಲ್ಲೂ ಕಣ್ಣಿಗೆ ಬೀಳುತ್ತಿಲ್ಲ.
ಸಂಜೀವರಾಯರ ಕಥಾಸಂಕಲನವನ್ನು ಓದಿದ ಯಾರಿಗಾದರೂ ಇಲ್ಲಿಯ ಕತೆಗಳು ಆರಂಭದ ಪ್ರಯತ್ನಗಳಲ್ಲ ಎಂಬುದು ತಟ್ಟನೇ ಹೊಳೆಯುವಂತಿದೆ. ಈ ಐದೂ ಕತೆಗಳಲ್ಲಿಯೂ ನಿರರ್ಗಳವಾದ, ಲವಲವಿಕೆಯ ನಿರೂಪಣೆಯಿದೆ, ಪಳಗಿದ ಬರವಣಿಗೆ ಇದೆ, ಪ್ರಬುದ್ಧ ಅನುಭವವಿದೆ. ಒಳ್ಳೆಯ ಅರ್ಥದಲ್ಲಿ ಈ ಕತೆಗಳನ್ನು ಮಾಸ್ತಿ ಸಂಪ್ರದಾಯದ ಉತ್ತಮ ಉದಾಹರಣೆಗಳೆಂದು ತೆಗೆದುಕೊಳ್ಳಬಹುದು. ಅದೇ ರೀತಿಯ ಶಾಂತವಾದ ಬರವಣಿಗೆ, ಚಮತ್ಕಾರದ ತಿರುವು ಇಲ್ಲದ ನೇರ ಕತೆಗಾರಿಕೆ, ಶುಚಿಯಾದ ಸಾಂಪ್ರದಾಯಿಕ ಜೀವನ ದೃಷ್ಟಿ, ತೋರಿಕೆಗೆ ಸರಳವೆಂದು ಕಾಣುವ ಅರ್ಥವಂತಿಕೆ.
ಸಂಕಲನಕ್ಕೆ ಹೆಸರು ಕೊಟ್ಟಿರುವ ‘ಹೆಣ್ಣು ಹೃದಯ’, ‘ಗೃಹಿಣಿ’ ಮೊದಲಾದ ಹೆಸರುಗಳು ತಕ್ಷಣ ನವೋದಯದ ಭಾವಾತಿರೇಕದ ಬರವಣಿಗೆಯನ್ನು, ಹೆಣ್ಣುಮಕ್ಕಳ ಕಣ್ಣೀರಿನ ಕತೆಗಳನ್ನು ನೆನಪಿಗೆ ತರುವಂತಿವೆ. ಸಂಜೀವರಾಯರ ಕಥೆಗಳಲ್ಲಿ ಅಂತಃಕರಣ, ಭಾವುಕತೆಗಳ ಅಂಶಗಳೂ ಇವೆ. ‘ಪುಟ್ಟ ನಕ್ಷತ್ರ’, ‘ಜುಲ್ಫಿ’ಯಂಥ ಕಥೆಗಳಲ್ಲಿ ಮೆಲೋಡ್ರಾಮದ ಅಂಶಗಳೂ ಇವೆ. ಆದರೂ ಬರವಣಿಗೆಯಲ್ಲಿ ಸಂಯಮ ಇದೆ. ಅಂತೆಯೇ ಅವರ ಕಥೆಗಳನ್ನು ಬೇಸರವಿಲ್ಲದೆ ಓದಬಹುದು.
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ಆದರೆ ‘ಸೀದ ಒಗ್ಗರಣೆ’ಯ ರೀತಿಯೇ ಬೇರೆ. ಅವರ ಕತೆಗಾರಿಕೆ ಒಂದು ಹದಕ್ಕೆ ಬಂದದ್ದರ ಸ್ಪಷ್ಟ ನಿದರ್ಶನ ಇದರಲ್ಲಿ ಕಾಣುತ್ತದೆ. ಕೇವಲ ಬರವಣಿಗೆಯಲ್ಲಿ ಮಾತ್ರವಲ್ಲ, ವಸ್ತುವಿನ ಕಲ್ಪನೆ-ನಿರ್ವಹಣೆಗಳಲ್ಲೂ ಕೂಡ ಪಳಗಿದ ಕೈಯ ಕೈವಾಡ ಸ್ಪಷ್ಟವಾಗಿದೆ.
ಸುಸಂಸ್ಕೃತ ಗೃಹಿಣಿಯೊಬ್ಬಳು ತನ್ನ ಸುಹೃದಯ ನಡವಳಿಕೆಯನ್ನು ತಪ್ಪಾಗಿ ಅರ್ಥಮಾಡಿಕೊಂಡ ತರುಣನೊಬ್ಬ ಅಚಾತುರ್ಯಕ್ಕೆ ಎಳೆಸಿದ ಸಂದರ್ಭವನ್ನು ಯಾವ ಸದ್ದುಗದ್ದಲವಿಲ್ಲದೆ ಅತ್ಯಂತ ಹೃದಯವಂತಿಕೆಯಿಂದ ನಿರ್ವಹಿಸಿದ ಪ್ರಸಂಗವೊಂದನ್ನು ಕಥೆ ಚಿತ್ರಿಸುತ್ತದೆ. ಈ ಸನ್ನಿವೇಶದಲ್ಲಿ ಭಾವೋದ್ವೇಗ, ಮೆಲೋಡ್ರಾಮ, ನಾಟಕೀಯತೆ, ರಂಬಾಟ ಮುಂತಾದ ಎಲ್ಲವಕ್ಕೂ ಅವಕಾಶ ಇದೆ. ಆದರೆ ಕತೆಗಾರರು ಈ ಸನ್ನಿವೇಶವನ್ನು ಯಾವ ಉಬ್ಬರಕ್ಕೂ ಅವಕಾಶವಿಲ್ಲದಂತೆ ನಿರೂಪಿಸಿರುವ ತಾಂತ್ರಿಕ ಜಾಣ್ಮೆ ಸರಳವಾಗಿ ಕಂಡರೂ ಪರಿಣಾಮಕಾರಿಯಾಗಿದೆ. ಅದರಲ್ಲೂ ಕಥೆಯ ಶಿಖರ-ಸನ್ನಿವೇಶವನ್ನು ನಿರ್ವಹಿಸಿರುವ ರೀತಿ ಅತ್ಯಂತ ವಿಶಿಷ್ಟವಾಗಿದೆ.

ಈ ಕಥೆಯ ಶಿಖರ-ಸನ್ನಿವೇಶ ಎನ್ನಬಹುದಾದದ್ದು ಲಲಿತಮ್ಮ-ಶಿವರಾಮಯ್ಯರ ಮುಖಾಮುಖಿ, ಆ ಮುಖಾಮುಖಿಯ ಸನ್ನಿವೇಶದ ಬಗೆಗೆ ಕಥೆಯಲ್ಲಿ ಕುತೂಹಲದ ನಿರೀಕ್ಷೆಗಳು ಬೆಳೆದು ಹರಡುತ್ತವೆ. ಆದರೆ ಈ ಮುಖ್ಯ ಸನ್ನಿವೇಶ ಕೊನೆಗೂ ವಿವರವಾಗಿ ನಾಟ್ಯೀಕರಣಗೊಳ್ಳುವದೇ ಇಲ್ಲ. ಈ ಸನ್ನಿವೇಶದಲ್ಲಿ ಶಿವರಾಮಯ್ಯ ಏನು ಮಾಡಿದ, ಲಲಿತಮ್ಮ ಆ ಪ್ರಸಂಗದಲ್ಲಿ ತೋರಿಸಿದ ಪ್ರತಿಕ್ರಿಯೆ ನಿಖರವಾಗಿ ಎಂಥದು ಎಂಬುದು ಕಡೆಗೂ ಗೊತ್ತಾಗುವುದೇ ಇಲ್ಲ. ಬದಲಾಗಿ ಅದರ ಬಗ್ಗೆ ಒಂದು ಬಗೆಯ ನಿಗೂಢತೆ ಬೆಳೆಯುತ್ತದೆ. ಆದರೆ ಹೀಗೆ ಕಥೆಯ ಮುಖ್ಯ ಸನ್ನಿವೇಶವೊಂದು ನಾಟ್ಯೀಕರಣಗೊಳ್ಳದಿರುವುದು ಕಥೆಯ ದೋಷವಾಗುವುದಿಲ್ಲ. ಹಾಗೆಯೇ ಅದರ ಬಗೆಗಿನ ನಿಗೂಢತೆ ಅಗ್ಗದ ಕುತೂಹಲ ಹುಟ್ಟಿಸುವ ತಂತ್ರವೂ ಆಗುವುದಿಲ್ಲ. ಇಲ್ಲಿಯೇ ಈ ಕತೆಯ ಸೊಗಸು ಇರುವುದು.
ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್ರ ಕತೆ | ಕದ್ದವರು ಯಾರು?
ಈ ಕತೆಯನ್ನು ಹೇಳುತ್ತಿರುವವನು ಶಿವರಾಮಯ್ಯನ ಸ್ನೇಹಿತ. ಕಥೆಯಲ್ಲಿ ಅವನೂ ಒಂದು ಪಾತ್ರ. ಶಿವರಾಮಯ್ಯನ ನಡತೆಯ ಬಗ್ಗೆ ಆತನಿಗೆ ತೀವ್ರ ಆತಂಕ ಹುಟ್ಟುತ್ತದೆ. ಅವನಿಂದಾಗಿ ಉಳಿದವರಿಗೂ ಕೆಟ್ಟ ಹೆಸರು ಬರುವ ಭಯವಾಗುತ್ತದೆ. ಆ ಘಟನೆಯ ನಂತರ ಶಿವರಾಮಯ್ಯ ಕಣ್ಮರೆಯಾದದ್ದು ಅವನಿಗೆ ವಿವಂಚನೆಯನ್ನುಂಟು ಮಾಡುತ್ತದೆ. ಕಥೆಯ ವಸ್ತುವಿನ ಪೀಠಿಕೆಯಲ್ಲಿ ಮತ್ತು ಮುಖ್ಯ ಪಾತ್ರಗಳನ್ನು ಪರಿಚಯಿಸುವಲ್ಲಿ ಅಗತ್ಯವಾದ ಎಲ್ಲ ವಿವರಗಳನ್ನು ಆತ ಕೊಡುತ್ತಾನೆ. ಆದರೆ ಕಥೆಯ ಮುಖ್ಯ ಸನ್ನಿವೇಶದಲ್ಲಿ ಆತ ಕೇವಲ ಹೊರಗಿನ ವರದಿಗಾರನಾಗಿ ಮಾತ್ರ ಉಳಿಯುತ್ತಾನೆ. ಕಥೆಯ ನಿರೂಪಕನ ಆಯ್ಕೆಯೇ ಈ ಸಂಗತಿಯನ್ನು ನಿರ್ಧರಿಸುತ್ತದೆ. ತಾಂತ್ರಿಕವಾಗಿ ಈ ಸನ್ನಿವೇಶದಲ್ಲಿ ನಿರೂಪಕನಿಗೆ ಪ್ರತ್ಯಕ್ಷದರ್ಶಿಯಾಗಿ ಹಾಜರಿರುವದು ಸಾಧ್ಯವಿರಲಿಲ್ಲ. ಆ ಸಮಯದಲ್ಲಿ ಅಲ್ಲಿದ್ದವರು ಶಿವರಾಮಯ್ಯ-ಲಲಿತಮ್ಮ ಇಬ್ಬರೇ. ಆ ಘಟನೆಯ ನಂತರ ಶಿವರಾಮಯ್ಯ ಮುಂಬಯಿಯನ್ನೇ ಬಿಟ್ಟುಹೋಗುತ್ತಾನೆ. ಲಲಿತಮ್ಮ ಆ ಬಗ್ಗೆ ಯಾರಲ್ಲೂ ಬಾಯಿ ಬಿಡುವದಿಲ್ಲ. ಅವಳನ್ನು ಕೇಳುವ ಧೈರ್ಯವೂ ನಿರೂಪಕನಿಗೆ ಆಗುವದಿಲ್ಲ. ಆತಂಕದಿಂದ ನಿರೂಪಕ ಆ ಘಟನೆ ನಡೆದ ಸ್ಥಳಕ್ಕೆ ಹೋಗುವಷ್ಟರಲ್ಲೇ ಆ ಘಟನೆ ಮುಗಿದಿರುತ್ತದೆ. ಹೀಗಾಗಿ ನಿರೂಪಕನಿಗೂ ಅದೊಂದು ಕುತೂಹಲಕರವಾದ ರಹಸ್ಯವಾಗಿಯೇ ಉಳಿಯುತ್ತದೆ.
ಆದರೆ ಈ ರಹಸ್ಯವೇ ಲಲಿತಮ್ಮನ್ನ ಪಾತ್ರವನ್ನು, ಆಕೆಯ ಸಂಸ್ಕಾರ-ಹೃದಯವಂತಿಕೆಗಳನ್ನು ಎತ್ತಿ ತೋರಿಸುತ್ತದೆ. ಶಿವರಾಮಯ್ಯ ಲಲಿತಮ್ಮನ ಸರಳ ಸ್ವಭಾವದ ಸಲಿಗೆಯನ್ನು ಅಪಾರ್ಥ ಮಾಡಿಕೊಂಡು ಏನೋ ಮಾಡಲು ಹೋದ; ಲಲಿತಮ್ಮ ಅವನಿಗೆ ಜೀವಮಾನವೆಲ್ಲ ನೆನಪಿಡುವಂಥ ಪಾಠ ಕಲಿಸಿದಳು; ಅದರಿಂದಾಗಿ ಶಿವರಾಮಯ್ಯ ಮುಖ ಎತ್ತಿ ಮತ್ತೊಮ್ಮೆ ಆಕೆಯನ್ನು ನೋಡದಂತಾಯಿತು-ಎಂಬುದನ್ನು ಇಡಿಯ ಸಂದರ್ಭದಿಂದ ಸುಲಭವಾಗಿ ಊಹಿಸಬಹುದು. ಆದರೆ ಮುಖ್ಯವಾದದ್ದು ಇದಲ್ಲ. ಲಲಿತಮ್ಮ ಈ ಘಟನೆಯ ಬಗ್ಗೆ ತಳೆಯುವ ನಿಲುವು ಮತ್ತು ಅದನ್ನು ನಿರ್ವಹಿಸುವ ರೀತಿ ಮುಖ್ಯವಾದದ್ದು.
ಶಿವರಾಮಯ್ಯನ ನಡತೆಯ ಬಗ್ಗೆ ಕಥೆಯಲ್ಲಿ ಎರಡು ಬಗೆಯ ನಿಲುವುಗಳು ವ್ಯಕ್ತವಾಗುತ್ತವೆ. ಒಂದು ನಿರೂಪಕನದು. ನಿರೂಪಕ ಅವನ ನಡತೆಯನ್ನು ಮುಂಚಿನಿಂದಲೇ ಶಂಕಿಸುತ್ತಾನೆ. ಅದು ಅವನ ಸ್ವಭಾವಸಿದ್ದ ಗುಣ ಎಂದು ನಿರ್ಣಯಿಸಿ ಆ ಬಗ್ಗೆ ತನ್ನ ತೀವ್ರ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಾನೆ. ಇದು ಒಂದು ರೀತಿಯಿಂದ ಸಹಜವಾಗಿ ಯೋಚಿಸುವ ಎಲ್ಲ ಓದುಗರ ನಿಲುವೂ ಹೌದು. ಆದರೆ ಲಲಿತಮ್ಮನ ನಿಲುವು ಬೇರೆ ಬಗೆಯದು. ಆಕೆಯೂ ಶಿವರಾಮಯ್ಯನ ನಡತೆಯ ಬಗ್ಗೆ ಅಸಮ್ಮತಿ ತೋರಿಸುವವಳೇ. ಆದರೆ ಆಕೆಯ ಅಸಮ್ಮತಿ ಬೇರೆ ಬಗೆಯದು. ಆಕೆ ಮುಗ್ಧಳಾದರೂ ಸಾರಾಸಾರ ವಿವೇಚನೆಯುಳ್ಳವಳು, ಸಮರ್ಥಳು; ಎಲ್ಲರ ಬಗೆಗೂ ಸಲಿಗೆಯಿಂದ ಇದ್ದರೂ ತನ್ನನ್ನು ತಾನು ಬಲ್ಲವಳು. ಶಿವರಾಮಯ್ಯನ ವರ್ತನೆಯಿಂದ ಆಕೆಗೆ ಆಘಾತವಾಗಿರಬಹುದಾದರೂ ಆ ಬಗ್ಗೆ ರಂಬಾಟ ಮಾಡಿ, ಜಗಜ್ಜಾಹೀರುಗೊಳಿಸಿ, ತನ್ನ ಪಾತಿವ್ರತ್ಯದ ಪತಾಕೆಯನ್ನು ಹಾರಿಸಿ ನಿಲ್ಲುವದಿಲ್ಲ. ಬದಲಾಗಿ ಅವನ ನಡತೆಯನ್ನು ಏನೋ ಕ್ಷಣಿಕವಾದ ಸಹಜ ದೌರ್ಬಲ್ಯವೆಂದು ಭಾವಿಸುತ್ತಾಳೆ. ಅವನಿಗೆ ಸೂಕ್ತವಾದ, ಆದರೆ ಪರಿಣಾಮಕಾರಿಯಾದ, ಎಚ್ಚರಿಕೆ ನೀಡಿ, ಅವನು ತನ್ನ ತಪ್ಪಿಗಾಗಿ ನಾಚಿಕೊಳ್ಳುವ, ತನ್ನ ನಡತೆಯನ್ನು ತಾನೇ ತಿದ್ದಿಕೊಳ್ಳುವ ಅವಕಾಶ ಕೊಡುತ್ತಾಳೆ. ಅದರಿಂದ ಎಲ್ಲರ ಮಾನವನ್ನೂ ಉಳಿಸುತ್ತಾಳೆ. ಇದಿಷ್ಟನ್ನು ನಾಟ್ಯೀಕರಿಸಿ ತೋರಿಸದಿದ್ದರೂ ಕಥೆ ಸೂಚ್ಯವಾಗಿ ನಮ್ಮ ಅವಗಾಹನೆಗೆ ತರುತ್ತದೆ. ಘಟನೆಯ ನಂತರದ ವಿವರಗಳ ಮೂಲಕವೇ ಘಟನೆಯ ಬಗ್ಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತದೆ.
ಆದರೆ ಇದೂ ಅಷ್ಟು ಮಹತ್ವದ್ದಲ್ಲ. ಲಲಿತಮ್ಮ ಆ ಘಟನೆಯನ್ನು ಅಲ್ಲಿಗೇ ಬಿಟ್ಟುಬಿಡುತ್ತಾಳೆ. ಶಿವರಾಮಯ್ಯ ಮೊದಲಾಗಿ ಎಲ್ಲರ ಬಗೆಗೂ ಅದೇ ಮೊದಲಿನ ವಿಶ್ವಾಸದಿಂದ ನಡೆದುಕೊಳ್ಳುತ್ತಾಳೆ. ಆ ಘಟನೆಯ ಬಗ್ಗೆ ಯಾರಲ್ಲೂ ಹೇಳುವದಿಲ್ಲ. ಸೀದ ಒಗ್ಗರಣೆಗೆ ಕಾರಣ ಕೊಡುತ್ತ ಶಿವರಾಮಯ್ಯ ಏನೋ ಕೇಳಿದರು, ಅವರ ಜೊತೆ ಮಾತಾಡುವದರಲ್ಲೇ ಒಗ್ಗರಣೆ ಸೀದುಹೋಯಿತೆಂದು ನಗೆಯಾಡುತ್ತಾಳೆ. ಶಿವರಾಮಯ್ಯ ರಾತ್ರಿ ಬಹಳ ಹೊತ್ತಾದರೂ ತಿರುಗಿ ಬಾರದ ಬಗ್ಗೆ ನಿರೂಪಕ ಆತಂಕಗೊಂಡಾಗ ಅವರು ತಿರುಗಿ ಬಂದೇ ಬರುತ್ತಾರೆಂದು ವಿಶ್ವಾಸದಿಂದ ಹೇಳುತ್ತಾಳೆ. ಶಿವರಾಮಯ್ಯ ಊರಿಗೆ ಹೋಗುತ್ತಾನೆಂದು ತಿಳಿದಾಗ ಮೊದಲೇ ತಿಳಿಸಿದ್ದರೆ ಏನಾದರೂ ಬುತ್ತಿ ಮಾಡಿಕಳಿಸಬಹುದಿತ್ತು ಎನ್ನುತ್ತಾಳೆ. ನಂತರವೂ ಎಂದಿನಂತೆ ಸಹಜವಾಗಿ, ಏನೂ ನಡೆದೇ ಇಲ್ಲವೆಂಬಂತೆ ಉಳಿದುಬಿಡುತ್ತಾಳೆ. ಶಿವರಾಮಯ್ಯ ಈ ಬಾರಿ ಮದುವೆ ಮಾಡಿಕೊಂಡೇ ಬರುತ್ತಾರೆಂದು ಕೊಂಕಿಲ್ಲದೆ ನಗೆಯಾಡುತ್ತಾಳೆ. ಆಕೆಯ ಆಕೃತ್ರಿಮವಾದ ನಗೆಮಾತುಗಳಲ್ಲಿ ಬತ್ತದ ಜೀವನಶ್ರದ್ದೆ ಇದೆ, ಜೀವನೋತ್ಸಾಹ ಇದೆ. ಈ ಘಟನೆಯಿಂದ ಆಕೆಯ ಮನಸ್ಸು ಕಹಿಯಾಗುವದಿಲ್ಲ. ಮನುಷ್ಯ-ಸಂಬಂಧಗಳ ಮೇಲೆ ದುಷ್ಪರಿಣಾಮವಾಗುವುದಿಲ್ಲ. ಇದೆಲ್ಲ ಒಂದು ಕಡೆಯಿಂದ ಲಲಿತಮ್ಮನ ಸುಸಂಸ್ಕೃತ ವ್ಯಕ್ತಿತ್ವದ ದೊಡ್ಡತನವನ್ನು ಎತ್ತಿತೋರಿಸಿದರೆ, ಇನ್ನೊಂದು ಕಡೆಯಿಂದ ಶಿವರಾಮಯ್ಯನಿಗೆ ಅವನ ಅಪರಾಧದ ಪ್ರಮಾಣವನ್ನು ಮನದಟ್ಟು ಮಾಡಿಕೊಡುತ್ತದೆ.
ಇದನ್ನು ಓದಿದ್ದೀರಾ?: ವಿ.ಜಿ. ಶ್ಯಾನಭಾಗರ ಕತೆ | ದೇವದಾಸಿ
ಹೀಗೆ ಯಾವ ರಂಬಾಟ ಇಲ್ಲದೆಯೂ ಆಗಬೇಕಾದ ಪರಿಣಾಮ ಇನ್ನೂ ತೀವ್ರವಾಗಿ ಆಗುತ್ತದೆ. ಈ ಮಾತನ್ನು ಶಿವರಾಮಯ್ಯನ ದೃಷ್ಟಿಯಿಂದಲೂ ಹೇಳಬಹುದು, ಓದುಗರ ದೃಷ್ಟಿಯಿಂದಲೂ ಹೇಳಬಹುದು.
ಇಲ್ಲೆಲ್ಲ ಮಾಸ್ತಿಯವರ ಕತೆಗಾರಿಕೆಯ ಅಪ್ರತ್ಯಕ್ಷ ಪ್ರಭಾವವನ್ನು ಕಾಣಬಹುದು. ಮಾಸ್ತಿ ಕತೆಗಳ ಸಂಕೀರ್ಣತೆಯ ಸುಳಿಗಳು ಈ ಕತೆಯಲ್ಲಿ ಕಡಿಮೆಯಾಗಿದ್ದರೂ, ಸರಳವಾದ ಬರವಣಿಗೆಯಲ್ಲಿ, ಕೆಳದನಿಯ ನಿರೂಪಣೆಯಲ್ಲಿ, ಹೆಚ್ಚು ಏರಿಳಿತಗಳಿಲ್ಲದ ಸಮತೋಲನದಲ್ಲಿ ಇದು ಮಾಸ್ತಿ ಕತೆಗಳನ್ನು ನೆನಪಿಗೆ ತರುತ್ತದೆ. ಅಲ್ಲಿಯಂತೆಯೇ ಇಲ್ಲೂ ಬರವಣಿಗೆಯ ಜಾಣ್ಮೆಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. ಒಂದು ಸಂಗತಿಯನ್ನು ಬೇರೆ ಬೇರೆ ನೈತಿಕ ನಿಲುವುಗಳಿಂದ ಅಳೆಯುವ ಮಾಸ್ತಿಯವರ ರೀತಿ ಇಲ್ಲೂ ಇದೆ. ಲಲಿತಮ್ಮನ ಪಾತ್ರವಂತೂ ಮಾಸ್ತಿಯವರ ಕತೆಗಳಲ್ಲಿ ಎಲ್ಲಿಯಾದರೂ ಸೇರಿಸಿಬಿಡಬಹುದಾದಂಥದು. ಆದರೂ ಇದು ಮಾಸ್ತಿಯವರ ಕತೆಗಳ ಅನುಕರಣವಲ್ಲ.
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)