ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಸಕಲೇಶಪುರ, ಆಲೂರು, ಬೇಲೂರು ಮತ್ತು ಹಾಸನ ತಾಲೂಕುಗಳಲ್ಲಿ ವರುಣನ ಅಬ್ಬರದಿಂದಾಗಿ ರೈತರು, ವಾಹನ ಸವಾರರು ತತ್ತರಿಸಿದ್ದಾರೆ.
ಬೇಲೂರು ತಾಲೂಕಿನ ಕುಪ್ಲೋಡು ಗ್ರಾಮದಲ್ಲಿ ಕೆರೆ ಕೋಡಿ ಒಡೆದ ಪರಿಣಾಮ ನೀರು ರೈತರ ಜಮೀನುಗಳಿಗೆ ನುಗ್ಗಿದೆ. ಸುಮಾರು 60 ಎಕರೆಗೂ ಅಧಿಕ ಗದ್ದೆ ಮತ್ತು ತೆಂಗಿನ ತೋಟಗಳಿಗೆ ನೀರು ನುಗ್ಗಿ ಬೆಳೆಗಳಿಗೆ ಅಪಾರ ಹಾನಿಯಾಗಿದೆ. ರೈತರು ತೀವ್ರ ನಷ್ಟ ಅನುಭವಿಸಿದ್ದು, ಕೃಷಿ ಇಲಾಖೆಯಿಂದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ಹಾಸನ | ಹಲವೆಡೆ ಉತ್ತಮ ಮಳೆ; ಕಾಫಿ ಕೃಷಿಕರ ಮೊಗದಲ್ಲಿ ಮಂದಹಾಸ
ಬಿರುಗಾಳಿಯೊಂದಿಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಕಲೇಶಪುರ ಮತ್ತು ಬೇಲೂರು ತಾಲೂಕುಗಳ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳಿವೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು, ಜನರು ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದಾರೆ. ರಸ್ತೆಯಲ್ಲಿ ಚಾಲಕರಿಗೆ ದಾರಿ ಕಾಣದಂತೆ ಸುರಿಯುತ್ತಿರುವ ಮಳೆಯಿಂದ ವಾಹನ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಕಲೇಶಪುರ ತಾಲೂಕಿನ ಶಿರಾಡಿಘಾಟ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಎರಡು ಕಡೆ ಭೂಕುಸಿತ ಉಂಟಾಗಿದೆ. ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ತಡೆಗೋಡೆ ಇದ್ದರೂ ಮಣ್ಣು ಕುಸಿಯುತ್ತಿದ್ದು, ಒಂದು ಬದಿ ವಾಹನ ಸಂಚಾರ ಸ್ಥಗಿತಗೊಂಡಿದ್ದು ವಾಹನ ದಟ್ಟಣೆಯಿಂದ ನೂರಾರು ವಾಹನಗಳು ನಿಂತಲ್ಲೆ ನಿಂತಿವೆ. ಡಿವೈಎಸ್ಪಿ ಪ್ರಮೋದ್ ಜೈನ್ ಹಾಗೂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಂಚಾರ ಸುಗಮಗೊಳಿಸಲು ಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಮಲೆನಾಡು ಕರಾವಳಿ ಜನಪರ ಒಕ್ಕೂಟ
ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣ ಕ್ಷೀಣಿಸಿದೆ. ಮಳೆಯ ತೀವ್ರತೆಯಿಂದಾಗಿ ಸ್ಥಳೀಯ ಆಡಳಿತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಪರಿಹಾರ ಮತ್ತು ಸಂತ್ರಸ್ತರಿಗೆ ಸಹಾಯದ ವಿಷಯದಲ್ಲಿ ತುರ್ತು ಕ್ರಮಕ್ಕೆ ಮುಂದಾಗಿದೆ.