ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಮನುಷ್ಯ ಹೇಗಿದ್ದಾತ ಹೇಗಾಗಿಬಿಡುತ್ತಾನೆ ಎಂಬುದೊಂದು ಅದ್ಭುತ ವಿಷಯ. ದೊಡ್ಡ ಮನಸ್ಸಿನ, ಧಾರಾಳ ಹೃದಯದ ಹುಡುಗ, ಕಾಸಿಗೆ ಕಾಸು ಗಂಟುಹಾಕುವ ಜಿಪುಣನಾಗುವುದನ್ನು ನಾನು ಕಂಡಿದ್ದೇನೆ. ಇರುವೆಯನ್ನೂ ನೋಯಿಸಲಾರದ, ಹೂವಿನಂಥ ಮನಸ್ಸಿನ ಹುಡುಗ, ಪೋಲಿಸ್ ಇನ್ಸ್ಪೆಕ್ಟರನಾಗಿ, ಮಹಾ ಕಾಲಭೈರವ, ಸುಜನಕುಠಾರನಾಗುವುದನ್ನು ಕಂಡಿದ್ದೇನೆ. ಹಾಗೇನೇ, ನಮ್ಮ ಶಂಭುವಿನಲ್ಲಾದ ಮಾರ್ಪಾಡೂ ಕಡಿಮೆಯಲ್ಲ.
ನಾನೂ, ಶಂಭುವೂ ಒಟ್ಟಿಗೆ ಕಲಿತವರಾದ್ದರಿಂದ, ಅವನನ್ನು ಚೆನ್ನಾಗಿ ಬಲ್ಲೆ. ‘ಸಣ್ಣ ಕಂಬಳ’ ಶಾಲೆಯಲ್ಲಿ ಒಂದೇ ಕ್ಲಾಸಿನಲ್ಲಿ ಕಲಿಯುತ್ತಿದ್ದೆವು. ಮಾತ್ರವಲ್ಲ, ಅವನ ಮನೆಯ ಹತ್ತಿರವೇ ನಮ್ಮ ಮನೆ. ನಾವಿಬ್ಬರೂ ಒಟ್ಟಿಗೆ, ಎರಡೂ ಮನೆಗಳ ಅಂಗಳದಲ್ಲಿ, ಅವನ ಚಿಕ್ಕ ತಂದೆಯ (ಕಕ್ಕನ) ಮಕ್ಕಳೊಂದಿಗೆ ಆಡುತ್ತಿದ್ದುದು ನೆನಪಿದೆ. ಇವನ ತಂದೆಯೂ, ಚಿಕ್ಕತಂದೆಯೂ, ಸಾಕಷ್ಟು ಇದ್ದವರೇ. ಒಳ್ಳೇ ಪ್ರತಿಷ್ಠಿತ ಮನೆತನ. ಇವನ ತಂದೆ ಒಳ್ಳೇ ಜಾಗ್ರತೆಯ ಜನ; ಹಣ ಪೋಲು ಮಾಡುವವರಲ್ಲ. ಅದರ ಮೇಲೆ ಶುಕ್ರದೆಸೆ ಅನ್ನಿ. ಸ್ವಲ್ಪ ಹಣ ಮಾಡಿ ಇಟ್ಟಿದ್ದರು. ಹೊಸ ಆಸ್ತಿ ಕೊಳ್ಳುತ್ತಿದ್ದರು, ಮನೆಯನ್ನು ಹೊಸದಾಗಿ ಕಟ್ಟಿಸುತ್ತಿದ್ದರು.
ಅವನ ಚಿಕ್ಕತಂದೆಯವರ ಸ್ಥಿತಿ ತುಸು ಕೆಳಮುಖವಾಗಿತ್ತು. ಸ್ವಲ್ಪ ಉಪೇಕ್ಷೆಯ, ಸ್ವಲ್ಪ ಧಾರಾಳ ಕೈಯ ಮನುಷ್ಯ. ಅದರ ಮೇಲೆ ಅಷ್ಟಮದಲ್ಲಿ ಅಂಗಾರಕ. ಅವರ ಅವಸ್ಥೆ ಗಂಡಾಂತರಕ್ಕೆ ಇಳಿಯುವ ಹಾಗೆ ತೋರುತ್ತಿತ್ತು.
ಇದನ್ನು ಓದಿದ್ದೀರಾ?: ಮೇವುಂಡಿ ಮಲ್ಲಾರಿ ಅವರ ಕತೆ | ಸುರಸುಂದರಿ
ಶಂಭುವಿನ ವಿಷಯ ಹೇಳಲಿಲ್ಲ. ಅವನನ್ನು ನಾವೆಲ್ಲಾ ಕರ್ಣ ಮಹಾರಾಯನೆಂದೋ, ಧರ್ಮರಾಯನೆಂದೋ, ಲೇವಡಿ ಮಾಡುತ್ತಿದ್ದೆವು. ಯಾರ ಕಷ್ಟವನ್ನು ಕಂಡರೂ ಕರಗಿ ಹೋಗುತ್ತಿದ್ದ. ಕಳ್ಳಹುಡುಗರು ತಮ್ಮ ಪೆನ್ಸಿಲ್ಲು, ಪುಸ್ತಕ ಕಳೆದುಹೋಯಿತೆಂದು ಅವನ ಎದುರು ಸುಳ್ಳೇ ನಟಿಸಿ, ಅತ್ತು ಅವನಿಂದ ಪುಸ್ತಕ ಪೆನ್ಸಿಲ್ಲು ದಾನವಾಗಿ ಪಡೆದು, ಹೋಟೆಲು ಗಣಪತಿ ಕಮಿಟಿಯಲ್ಲಿ ಮಾರಿ, ಕಾಫಿ, ಕಡಲೆ ಮುಕ್ಕುತ್ತಿದ್ದರು. ನಮ್ಮ ಭೋಳೇ ಶಂಭು, ತನ್ನ ದಾನದ ಪ್ರತಿಫಲವಾಗಿ ಮನೆಯಲ್ಲಿ ಕಿವಿಯಪ್ಪ ತಿನ್ನುತ್ತಿದ್ದ. ಇದೂ ಅಲ್ಲದೆ ನಾನು ಅಂದರೆ, ಅದಕ್ಕಿಂತಲೂ ಹೆಚ್ಚು, ತನ್ನ ಹತ್ತಿರದ ಸಂಬಂಧಿಕರು, ಅಂದರೆ, ತನ್ನ ತಂದೆ-ತಾಯಿ-ತಂಗಿ-ತಮ್ಮಂದಿರು ಅಂದರೆ ಜೀವ. ಅವನ ಚಿಕ್ಕ ತಂದೆಯ ಇಬ್ಬರು ಮಕ್ಕಳೂ ನಮ್ಮ ಕ್ಲಾಸಿನಲ್ಲೇ ಇದ್ದರು. ಅವರನ್ನು ಈತ ಪರಿಪಾಲಿಸುವ ಕ್ರಮವನ್ನು ನೋಡಿ ಎಲ್ಲರೂ ನಗುತ್ತಿದ್ದರು. ಅವರನ್ನು ಯಾರೂ ಚಾ-ಚೂ-ಅನ್ನಲಿಕ್ಕಿಲ್ಲ-ನಮ್ಮ ಶಾಂತಮೂರ್ತಿ ಶಂಭು ಕದನಕಲಿ, ಅರಿಭಯಂಕರನಾಗುತ್ತಿದ್ದ.
ನಾನು ಹೇಳಿದೆನಲ್ಲಾ, ಅವರ ಚಿಕ್ಕಪ್ಪನ ಸ್ಥಿತಿ ಹದಗೆಡುತ್ತಿತ್ತೆಂದು ಅದು ವಿಕೋಪಕ್ಕೆ ಬಂತು. ಸಾಲ ಏರಿ, ಏರಿ, ಆಸ್ತಿ ಹರಾಜಾಗಿ, ಮನೆಯನ್ನೇ ಮಾರುವಂಥ ಪ್ರಸಂಗ ಬಂತು. ಒಳ್ಳೇ ಮರ್ಯಾದಸ್ಥರು. ನಮ್ಮ ರಾಯರ ಒಡಹುಟ್ಟಿದ ತಮ್ಮಂದಿರೇ ತಾನೆ. ಅಣ್ಣನಲ್ಲಿಗೆ ಬಂದು, ಸ್ಪಷ್ಟವಾಗಿ ಹೇಳಲು ಬಾಯಿ ಬರದೆ, ರಾಮಾಯಣ ತೋಡಿಕೊಂಡು, ತಾಪತ್ರಯದ ಗೋಳು ಹೊಯ್ದುಕೊಂಡರು. ಅಣ್ಣ ‘ರಾಯರು’, ಬಹಳ ಸಹಾನುಭೂತಿಯಿಂದ ಕೇಳಿ: ”ಛೇ! ಹೌದೇ? ಏನು ಕಷ್ಟವಪ್ಪಾ! ಎಲ್ಲಾ ಆ ಭಗವಂತನ ಆಟ. ನಾವು ನಿಮಿತ್ತಮಾತ್ರರು. ಅವನು ಆಡಿಸಿದ ಹಾಗೆ” ಎಂದು ವೇದಾಂತ ಮಾಡಿ, ಕಾಫೀ ಕುಡಿಸಿದರು. ಒಳಗೆ ಚಿಕ್ಕಮ್ಮನಿಗೆ, ಶಂಭುವಿನ ತಾಯಿ, ಬಹಳ ಕರುಣೆಯಿಂದ ಸಂತೈಸಿ, ಕಣ್ಣೀರು ಸುರಿಸಿ: “ಏನು ತಂಗೀ! ಈ ಸುಖ ಐಶ್ವರ್ಯ ಎಲ್ಲಾ ನೆರೆಯ ನೀರಮ್ಮಾ ಒಂದು ಕ್ಷಣ ಸರ್ರನೆ ಬಂತು; ಮರುಕ್ಷಣ ಇಳಿದುಹೋಯಿತು. ಹಾಗೇ ನೋಡಮ್ಮಾ” ಎಂದು ಬಿಸುಸುಯ್ದರು. ಗಂಟೆಗಟ್ಟಲೆ ಪ್ರಸ್ತಾವಿಸಿ, ಬೇಡಿ, ಸೂಚಿಸಿ, ಮನೆ, ಆಸ್ತಿಯನ್ನೆಲ್ಲಾ ಇವರಿಗೇ ಅಡವಾಗಿಸುವ ಪ್ರಸ್ತಾಪವನ್ನು ಮಾಡಿಯೂ, ಕೊನೆಗೆ ನಿರಾಶರಾಗಿ ಸಪ್ಪೆಮೋರೆ ಹಾಕಿಕೊಂಡು, ಗಂಡಹೆಂಡಿರು ಹೋದರು.
ರಾಯರು ಗಂಭೀರವಾಗಿ ರುಕ್ಕಿಣಿಯಮ್ಮನ ಹತ್ತಿರ ಅಪ್ಪಣೇ ಕೊಡಿಸಿದರು: “ಅಲ್ಲಾ, ಸಂಬಂಧಿಕರು, ಕುಟುಂಬದವರಿಗೆ ಸಾಲಕೊಟ್ಟರೆ ಹಣವೂ ನಾಮ; ಅಪಕೀರ್ತಿ ಬೇರೆ; ಮತ್ತೆ ಮನೋಕಷಾಯ. ಹಣ ಬಾರದ ಸಂಕಟ, ಹಣ ಕೇಳಲು ದಾಕ್ಷಿಣ್ಯ. ಈ ಉಭಯ ಸಂಕಟವೇ ಬೇಡಪ್ಪಾ! ನಮ್ಮದೇ ನಮಗೆ ಹೊರಲಾರದಷ್ಟು ಭಾರವಾಗಿದೆ” ಎಂದರು- ಬೇಂಕಿನಲ್ಲಿಟ್ಟ ತಮ್ಮ ಹತ್ತು ಸಾವಿರ ರೂಪಾಯಿನ ಅಸಾಧ್ಯ ಹೊರೆಯನ್ನು, ಪಾಪ; ನೆನೆದು.
ಇದನ್ನು ಓದಿದ್ದೀರಾ?: ‘ಹೊಯಿಸಳ’ ಅವರ ಕತೆ | ಭಯನಿವಾರಣೆ
ಅಮ್ಮನವರೂ ಸಹಜವಾಗಿಯೇ ದನಿಗೂಡಿದರು: ”ಅಲ್ಲಾಂದ್ರೆ, ಅವರವರ ಸುಖದುಃಖ ಅವರವರಿಗೆ. ಯಾರ ಕಷ್ಟಕ್ಕೆ ಯಾರಿದ್ದಾರೆ? ನಾವು ಈ ಸಂಕಟವನ್ನು ಕುತ್ತಿಗೆಯ ಮೇಲೆ ಹಾಕಿಕೊಂಡರೆ, ನಮಗೆ ಕೈ ಕೊಟ್ಟು ಎತ್ತುವವರು ಯಾರಂತೆ? ಕುಟುಂಬಾ, ಸಂಸಾರ, ನಮ್ಮವರೂ, ಎಂದು ನೆನಸಿದವ ತಿರುಪೆಗೆ ಹೋದ” ಎಂದು ಜ್ಞಾನಪ್ರದರ್ಶನವಾಯಿತು.
ಆ ಏಳೆಂಟು ದಿನ ನನಗೆ ಚೆನ್ನಾಗಿ ನೆನಪಿದೆ. ಒಂದನೆಯದಾಗಿ, ರಾಯರ ತಮ್ಮ ದೊಡ್ಡ ಕುಟುಂಬದವರಾದ್ದರಿಂದ, ಅವರ ಅವನತಿ, ಊರಿಗೆಲ್ಲಾ ದೊಡ್ಡ ಸುದ್ದಿಯೇ. ಎರಡನೆಯದು, ನಮ್ಮ ಶಂಭುವಿನ ರಾದ್ಧಾಂತದಿಂದಾಗಿ. ಅವನಿಗೆ ಆ ಹತ್ತು ಹನ್ನೆರಡು ದಿನ ಸುಖವೇ ಇರಲಿಲ್ಲ. ಗಳಿಗೆಗೊಮ್ಮೆ ಚಿಕ್ಕಮ್ಮನ ಮನೆಗೆ ಹೋಗಿ, ಅವರೊಡನೆ ಅತ್ತು ಅವರ ಗೋಳು ಕೇಳಿ, ಎದೆ ಕರಗಿ ಬರುತ್ತಿದ್ದ. ಹಾಗೆಂದು ಚಿಕ್ಕಮ್ಮ ಅವನೆದುರಿಗೆ ಚಕಾರ ಎತ್ತುವಷ್ಟು ಅಭಿಮಾನಶೂನ್ಯರಲ್ಲ. ಆದರೆ ಅವನ ತಮ್ಮಂದಿರ ಬಾಡಿದ ಮುಖ, ಸೊರಗಿದ ಹೊಟ್ಟೆ, ಚಿಕ್ಕಪ್ಪನ ಅರ್ಧ ಹುಚ್ಚರಂಥ ಸ್ಥಿತಿಯಿಂದ ಅವನಿಗೆ ಎಲ್ಲಾ ದುಃಖದ ಆಳ ಗೊತ್ತಾಗುತ್ತಿತ್ತು.
ಈ ದಿನ ಒಲೆ ಬುಡದಲ್ಲಿದ್ದ ಅಮ್ಮನ ಬೆನ್ನು ಹಿಡಿದ. ‘ಅಮ್ಮ’ ಅಂದ. ಅಮ್ಮ ”ಏನೋ? ಒಲೆಯ ಬುಡದಲ್ಲಿ ಆರೂಢ?” ಎಂದರು. ”ಅಮ್ಮ ಪಾಪ, ಚಿಕ್ಕಮ್ಮನಿಗೆ ಎಷ್ಟು ಕಷ್ಟ? ನೀನೂ ಅಪ್ಪನೂ ಮನಸ್ಸು ಮಾಡಿದರೆ…”
”ಈ ಹುಡುಗನ ಅಧಿಕಪ್ರಸಂಗವೇ!… ಅಲ್ಲ ಮಗು. ನಿನಗೆ ತಿಳಿಯುವುದಿಲ್ಲ. ಹುಡುಗ! ನಮ್ಮ ಕಷ್ಟವೇ ನಮಗೆ ಸಾಕಾಗಿದೆ. ನಿನಗೆ ಕಲಿಸಬೇಡವೇ? ನಿನ್ನ ಅಪ್ಪ ಆ ಬಾಳೆ ಬೈಲು ಆಸ್ತಿ ಕೊಳ್ಳಬೇಕೆಂದಿದ್ದಾರೆ. ಕೆಳಗಿನ ಹಿತ್ತಲಲ್ಲಿ ಮನೆ ಕಟ್ಟಿಸುವುದಕ್ಕೆ ಎಷ್ಟು ಖರ್ಚು ಗೊತ್ತೇ? ಆಮೇಲೆ, ಆ ಮನೆ ರಿಪೇರಿ, ಹಾಗೆ, ಹೀಗೆ, ಅಂದರೆ, ನಿನ್ನ ಅಪ್ಪ ಏನು ರೂಪಾಯಿ ಮರ ನೆಟ್ಟಿದ್ದಾರೆಯೇ? ಮತ್ತೆ, ನೋಡು-ಅವರವರ ಸುಖದುಃಖ ಅವರವರಿಗೆ. ನಾವು ಅವರನ್ನು ಹೊರುವುದಾದರೆ, ನಮ್ಮನ್ನು ಹೊರಲಿಕ್ಕೆ ಯಾರು ಬರುತ್ತಾರೆ ಎಂದು ತಿಳಿದಿ ಮಗು?” ಎಂದು ಸವಿಯಾಗಿ ಅಂದರು.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
“ಮತ್ತೆ ನೋಡು: ರಮನ ಮದುವೆಯ ಯೋಚನೆ ಮಾಡಬೇಕು. ಕೃಷ್ಣನಿಗೆ ಇದೇ ಎರಡು ತಿಂಗಳಲ್ಲಿ ನೂಲ ಮದುವೆಯಾಗಬೇಕು. ನಿನಗೆ ಮಂಗಳೂರಿನ ದೊಡ್ಡಶಾಲೆಗೆ ಕಳಿಸಬೇಡವೇ? ಕೃಷ್ಣನಿಗೂ, ನಿನ್ನ ಹಿಂದೆಯೇ ಪೇಟೆಗೆ ಕಳಿಸಬೇಕು… ನಮ್ಮ ತಾಪತ್ರಯ ಪರ್ವತವಾಗಿ ನಿಂತಿದೆ.”

ಮುಖ ಸಪ್ಪೆಮಾಡಿಕೊಂಡು, ಅಪ್ಪನ ಕಿವಿಯಲ್ಲಿ ಒಂದು ಮಾತು ಹಾಕಿನೋಡಿದ. ಅವರು ಗುಡುಗುಡಿಸಿದರು: ”ಅಧಿಕಪ್ರಸಂಗ! ದೊಡ್ಡವರ ಮಾತಿನಲ್ಲಿ ನಿನ್ನೆ ಹುಟ್ಟಿದ ಕೂಸುಗಳು ಬಾಯಿ ಹಾಕುವುದು! ಅಪ್ಪನಿಗೆ ಉಪದೇಶ ಮಾಡಲು ಬಂದನಲ್ಲಾ ಮಗರಾಯ… ಅಲ್ಲಾ. ನನ್ನ ಬಾಯಿಂದೇನು ರೂಪಾಯಿ ಉದುರುತ್ತದೆಯೇ ಹೇಗೆ? ಅವರವರ ಸುಖದುಃಖ ಅವರವರಿಗೆ. ಈ ಹೊರೆ ಹೊತ್ತೇ ನನ್ನ ಬೆನ್ನು ಮುರಿಯಿತು. ಇನ್ನು ಇನ್ನೊಬ್ಬರ ಸಂಸಾರದ ತಾಪತ್ರಯ ಹೊರಬೇಕೆ? ಚಂದದ ಮಾತು! ಮಕ್ಕಳಿಗೇನು ಗೊತ್ತು ತಲೆ-ಬಾಲ” ಎಂದು.
ಹುಡುಗ ತುಂಬಾ ರಂಬಾಟ ಮಾಡಿದ. ಊಟ ಮಾಡಲಿಲ್ಲ ಅನ್ನ ಸತ್ಯಾಗ್ರಹ ಹೂಡಿದ. ‘ಅಕ್ಕಿ ಉಳಿಯಿತು’ ಎಂದರು ತಂದೆ. ಅಮ್ಮ, ”ಹಸಿವಾದಾಗ, ನಾಯಿಯ ಹಾಗೆ ಬಂದು ಮುಕ್ಕುತ್ತಾನೆ” ಎಂದರು. ”ಅಲ್ಲಾ ಹುಡುಗರ ಸೊಕ್ಕೆ! ಅದರಮೇಲೆ ಒಂದಿಷ್ಟಾದರೂ ಮೆದುಳು ಬೇಡವೇ? ಅವರವರ ಸುಖದುಃಖ ಅವರವರಿಗೆಂದೂ ತಲೆಗೆ ಹೊಳೆಯದಿದ್ದರೆ!” ಕೊನೆಗೂ, ಶಂಭು, ಹಸಿದ ನಾಯಿಯಂತೆ, ಊಟಕ್ಕೆ ಬಂದ ಎನ್ನಿ. ಹುಡುಗ ಬೇರೇನು ಮಾಡಿಯಾನು? ಆದರೆ ಶಾಲೆಯಲ್ಲಿ ತನ್ನ ಚಿಕ್ಕಪ್ಪನ ಮಕ್ಕಳಿಂದ, ನಾಚಿಕೆಯಿಂದ ಆತ್ಮಲಾಂಛನದಿಂದ ಮುಖಮುಚ್ಚಿಕೊಳ್ಳುತ್ತಿದ್ದ. ನನ್ನೊಡನೆ ಬಹಳವಾಗಿ ಗೋಗರೆದ: “ಅಪ್ಪ ಅಮ್ಮ ಸುಮ್ಮನೆ ಆಸೆ ಮಾಡುತ್ತಿದ್ದಾರೆ” ಎಂದ. “ಆ ಕೆಳಗಿನ ಹೊಸ ಮನೆ ಕಟ್ಟದೇಹೋದರೆ, ಏನು ಮಹಾ ಸ್ವರ್ಗಲೋಕ ತಪ್ಪುತ್ತದೆ?” ಎಂದ. ”ಆ ಹಾಳು ಬಾಳೆ ಬೈಲು ಆಸ್ತಿಯ ಬದಲು ಚಿಕ್ಕಪ್ಪನ ಆಸ್ತಿಯನ್ನೇ ಅಡವಿಗೆ ಕೊಳ್ಳಬಾರದೇ” ಎಂದ. ನನಗೆ ಅಡವು, ಆಸ್ತಿ ಎಲ್ಲ ತಿಳಿಯದೇ ಹೋದರೂ, ಅವನ ಸಹಾನುಭೂತಿ ತಿಳಿಯುತ್ತಿತ್ತು. “ಅವರವರ ಸುಖ-ದುಃಖ ಅವರವರಿಗಂತೆ. ಅವರವರ ಕೈ ಅವರವರ ತಲೆಯ ಮೇಲಂತೆ. ಒಳ್ಳೇ ಧರ್ಮ” ಎಂದು ಕಣ್ಣೀರು ಸುರಿಸಿ ಸಿಡಿದುಬೀಳುತ್ತಿದ್ದ.
ಕೊನೆಗೂ ಅವನ ಸತ್ಯಾಗ್ರಹ ಗೆಲ್ಲಲಿಲ್ಲ. ಚಿಕ್ಕಪ್ಪ, ಎಲ್ಲಾ ಮನೆಮಾರು, ಆಸ್ತಿ ಮಾರಿ, ಹೆಂಡತಿಯನ್ನು ಅವರ ತಾಯಿಯ ಮನೆಯಲ್ಲಿ ಬಿಟ್ಟು, ಒಬ್ಬ ಹುಡುಗನನ್ನು ಯಾರಿಗೋ ದತ್ತಕ್ಕೆ ಕೊಟ್ಟು ಉಳಿದವರೊಡನೆ ಮದರಾಸಿಗೆ ಹೋಗಿ, ಎಲ್ಲೋ ಹೋಟಲಲ್ಲಿ- ರಾಯರಂಥ ದೊಡ್ಡ ಮನೆತನದವರು, ಹೋಟಲಲ್ಲಿ- ಕೆಲಸಕ್ಕೆ ನಿಂತರು. ದೊಡ್ಡರಾಯರು: “ಅವರವರ ಅದೃಷ್ಟಕ್ಕೆ ಏನು ಮಾಡಲಾಗುತ್ತದೆ? ಕೊಡುವ ಕಾಲಕ್ಕೆ ದೇವರು ಕೊಟ್ಟ; ಕೊಂಡು ಹೋಗುವಾಗ್ಯೆ ಕೊಂಡು ಹೋಗುತ್ತಾನೆ… ಅವರವರ ತಲೆಗೆ ಅವರವರ ಕೈ” ಎಂದು ವೇದಾಂತ ಪಠಿಸಿದರು. ಅಮ್ಮನವರೂ “ಅವರವರ ಸುಖದುಃಖಾ…” ಎಂದು ರಾಗ ಎಳೆದರು.
ಇದನ್ನು ಓದಿದ್ದೀರಾ?: ‘ಕ್ಷೀರಸಾಗರ’ ಅವರ ಕತೆ | ನಮ್ಮೂರಿನ ಪಶ್ಚಿಮಕ್ಕೆ
ಶಂಭುವಿಗಾದ ವೇದನೆ, ಸಂಕಟ ನಾನು ಬಲ್ಲೆ. ಅವನ ಮನಸ್ಸು ಸರಿಯಿರಲಿಲ್ಲ. ಪ್ರಾಯಕ್ಕಿಂತ ಹೆಚ್ಚು ಬೆಳೆದ ಮನಸ್ಸು. ಸ್ಥಿತಿಗತಿಯ ಅರಿವು ಆಗುತ್ತಿತ್ತು. ಮನಸ್ಸು ಬಹಳ ಬಾಡಿಹೋಗಿತ್ತು. ಸ್ವಲ್ಪ ದಿನ ಅಮಾವಾಸ್ಯೆ ಕವಿದುಕೊಂಡಿತ್ತು. ಆದರೆ ಕೊನೆಗೆ-ಹುಡುಗರದೇ ಏಕೆ, ಮನುಷ್ಯರದು ಯಾರದೇ ಆದರೂ ವ್ಯಥೆ ಎಷ್ಟು ದಿನ ಇರುತ್ತದೆ? ಜೀವನಕ್ಕೂ ನಮಗೂ ಒಂದಲ್ಲ ಒಂದು ದಿನ ರಾಜಿಯೋ, ಶರಣು-ಸಂಧಿಯೋ ಆಗಲೇಬೇಕಷ್ಟೆ- ಶಂಭುವೂ ನೆಟ್ಟಗಾದ. ಮೋಡ ಚದುರಿತು.
ಆದರೆ, ಆಗಲೇ ಅವನ ಸ್ವಭಾವ ಬದಲಿದಹಾಗೆ ನನಗೆ ಕಂಡಿತು. ಮುಂಚೆ, ತನ್ನ ತಮ್ಮಂದಿರು, ಕೃಷ್ಣ, ಪುಟ್ಟ, ತಂಗಿ ರಮ ಅಂದರೆ ಜೀವ ಕೊಡುತ್ತಿದ್ದಾತ, ತನ್ನ ಚಿಕ್ಕಪ್ಪನ ಮಕ್ಕಳನ್ನು ತಲೆಯ ಮೇಲೇರಿಸುತ್ತಿದ್ದ ಆತ ಈಗ ದೂರವಾದ. ಮುಂಚಿನ ಶಂಭುವಿನ ‘ಧರ್ಮರಾಯತನ’, ‘ದಾನಿ ಕರ್ಣತನ’ ಮೆಲ್ಲಗೆ ಮಾಯವಾಯಿತು. ಅವನ ಬುದ್ಧಿಯೂ- ಹಿಂದಕ್ಕೆ ಹಸನಾಗಿ ಮಂದವಾಗಿದ್ದುದು- ಈಗ ಹೆಚ್ಚು ಸೂಕ್ಷ್ಮತೀಕ್ಷ್ಣವಾದಂತೆ ತೋರಿತು. ಮುಂಚಿನಂತೆ, ಯಾರಾದರೂ ಕಣ್ಣೀರು ಸುರಿಸಿ ಅತ್ತುಕರೆದರೆ, ”ಅಯ್ಯೋ ಪಾಪ! ಏನಾದರೂ ಮಾಡೋಣ” ಎಂಬ ಬೆಪ್ಪುತನ, ಎಲ್ಲರಿಂದಲೂ ಮೋಸಹೋಗುವುದು ನಿಂತುಹೋಗಿ ಅವನೇ ”ಚಿಂತಿಲ್ಲ, ಚಾಲಾಕಿದ್ದಾನೆ ಹುಡುಗ, ಭೋಳೇ ಧರ್ಮರಾಯನಲ್ಲ. ಶಕುನಿಯದೂ ತುಸು ಗಾಳಿ ತಾಗಿದೆ” ಎನ್ನುವ ಹಾಗಾಯಿತು. ಅವನ ಗೆಳೆಯರು, ಅವನಿಂದ ಪೆನ್ಸಿಲ್ಲು-ಪುಸ್ತಕಗಳ “ಕುಂಡಲ-ದಾನ” ಪಡೆಯುವುದು ನಿಂತುಹೋಯಿತು. ಒಳ್ಳೇ ಜಾಗರೂಕನಾಗಿ, ಮೈಯೆಲ್ಲಾ ಕಣ್ಣಾಗಿ, ಚಾಣಾಕ್ಷನಾಗಿಬಿಟ್ಟ.
ಅದೇ ಕಾರಣವೋ ಏನೋ, ಯಾವಾಗಲೂ ಹರಹರ ಎಂದು ಪಾಸಾಗುವವನು, ಬಹಳ ಒಳ್ಳೇ ದರ್ಜೆಯಲ್ಲಿ ಪಾಸ್ ಆದ. ಆಮೇಲೆ ಮಂಗಳೂರಿಗೆ ಕಲಿಯಲು ಯಾತ್ರೆ.
ನಾನೂ ಅವನ ತಮ್ಮನೂ ಕೂಡಾ, ಮಂಗಳೂರಲ್ಲೇ ಕಲಿಯುತ್ತಿದ್ದೆವು. ನಾನೂ ಅವರಿಬ್ಬರೂ ಬೇರೆ ಬೇರೆ ಹೈಸ್ಕೂಲಿನಲ್ಲಿ ಓದುತ್ತಿದ್ದುದರಿಂದ ಹೆಚ್ಚು ಅನ್ಯೋನ್ಯವಾಗಿರಲು ಅವಕಾಶವಿರಲಿಲ್ಲ. ಆದರೆ ನೋಡಿದಾಗೆಲ್ಲ ನನಗೆ ಆತ ಬಹಳ ಬುದ್ಧಿವಂತನಂತೆ ತೋರುತ್ತಿದ್ದ. ಮುಂಚಿನ ಶಂಭುವಿನ ಭೋಳೇಮುಖ, ಗಿಡ್ಡವಾಗಿ ಕತ್ತರಿಸಿದ ಕೂದಲು, ಹಿಂದೆ ನಾ ಕೂದಲುಗಳ ಜಟಾ-ಜೂಟ, ಗಿಡ್ಡ ಪಂಚೆ, ಮತ್ತು ಸೊಂಟಕ್ಕಿಂತ ಕೆಳಗಿಳಿಯದ ತುಂಡು ಅಂಗಿಯ ಬದಲಿಗೆ, ಈಗ, ಠಾಕ್-ಠೀಕ್ ಆಗಿದ್ದ. ಸ್ವಲ್ಪ ಸಮಯದಲ್ಲಿಯೇ ಒಂದು ಕನ್ನಡಕವೂ ಬಂದು ಅವನ ಮುಖಕ್ಕೆ ಕಳೆಕೊಟ್ಟಿತು. ಹಾಗೆಂದು ಸಿಗರೇಟು ಸೇದುತ್ತಿರಲಿಲ್ಲ. ಸಿನಿಮಾದ ವಿಪರೀತ ಹುಚ್ಚು ಇದ್ದಂತೆ ತೋರಲಿಲ್ಲ. ಕಾಫೀ ಭವನದ ಭಕ್ತನೂ ಆಗಿರಲಿಲ್ಲ. ಮನೆಯಿಂದ ಅಪ್ಪ ಕಳುಹಿಸಿದ ಹಣದಲ್ಲಿ ಜಾಗ್ರತೆಯಿಂದ ಒಂದಿಷ್ಟು ಉಳಿಸುತ್ತಿದ್ದ. ಪಾಠದಲ್ಲಿ ಸಾಕಷ್ಟು ಚುರುಕು. ಅಲ್ಲದೆ ಅಧ್ಯಾಪಕರೊಡನೆ ತುಂಬಾ ಮಾತುಕತೆ ನಡೆಸುತ್ತಿದ್ದ. ತರ್ಕಸಂಘ, ನಾಟಕ, ಇದರಲ್ಲೆಲ್ಲಾ ಒಂದಿಷ್ಟು ಭಾಗವಹಿಸಿ, ಎಲ್ಲರಿಗೂ ಪರಿಚಿತ ವ್ಯಕ್ತಿಯಾಗಿದ್ದ. ಎಲ್ಲರೂ: ”ಹುಡುಗ, ಒಳ್ಳೇ ಚಾಲಾಕಾಗಿದ್ದಾನೆ, ಬುದ್ದಿವಂತ! ಎಲ್ಲಿ ಹೋದರೂ ಮೇಲೆ ಬಂದಾನು” ಎಂದು ಹೇಳುತ್ತಿದ್ದರು. ಅವನ ತಮ್ಮ ಹಾಗಲ್ಲ. ಅಧಿಕ ಪ್ರಸಂಗಿ, ಮಾತುಗುಳಿ. ದೊಡ್ಡ ಉತ್ಸಾಹದ ಹುಚ್ಚು. ಕ್ರಿಕೆಟು, ಸಿನೆಮಾ, ರಾಜಕೀಯ ಚಳವಳ ಎಂದು ತಲೆಚಿಟ್ಟು ಮಾಡಿಕೊಳ್ಳುತ್ತಿದ್ದ. ಆದರೂ ಒಳ್ಳೇ ಹುಡುಗ.
ಇದನ್ನು ಓದಿದ್ದೀರಾ?: ಟೇಂಗ್ಸೆ ಗೋವಿಂದರಾವ್ ಅವರ ಕತೆ | ಗಂಗೆಯ ಗುತ್ತಿಗೆ
ನಾನು, ಇಂಟರ್ ಮುಗಿಸಿದ ಮೇಲೆ ವಿದ್ಯಾಭ್ಯಾಸಕ್ಕೆ ಶರಣುಹೊಡೆದು ಉಂಡಾಡಿಯಾಗಿದ್ದುಬಿಟ್ಟೆ. ಮನೆಯಲ್ಲಿ ಊರುಬಿಟ್ಟು ದೂರದ ಪರ ಊರಿಗೆ ಹೋಗಬಾರದೆಂದು ಕಟ್ಟಪ್ಪಣೆಯಾಗಿತ್ತು. ನಮ್ಮ ಶಂಭುರಾಯ-ಈಗ ಕೆ.ಎಸ್.ರಾಯ-ವಕಾಲತ್ತು ಕಲಿಯಲು ಹೋದ. ಅವನ ಅಭಿವೃದ್ಧಿ ಕಂಡು ಮನೆಯವರಿಗೆಲ್ಲ ಹೆಮ್ಮೆ. ಆತ ವರ್ಷಕ್ಕೊಮ್ಮೆ, ಚೊಕ್ಕಟವಾದ ಸೂಟ್ ಹಾಕಿಕೊಂಡು, ತನ್ನ ಠೀವಿಯ ಕನ್ನಡಕದೊಡನೆ ಊರಿಗೆ ಬಂದಾಗ, ರಾಯರಿಗೂ, ಅಮ್ಮನಿಗೂ ದೊಡ್ಡ ಹಬ್ಬ.
ಅವನ ತಮ್ಮಂದಿರೆಲ್ಲಾ ಇವನಿಗೆ ‘ದೃಷ್ಟಿ’ ಸೋಂಕದಂತೆ ಹುಟ್ಟಿದವರೋ ಏನೋ. ಹಿರಿಯ ತಮ್ಮ ಹೇಳಿದೆನಲ್ಲಾ, ರಾಜಕೀಯ ಚಳುವಳಿಯೋ ಮಣ್ಣೂ ಮಸಣವೋ ಅಂದುಕೊಂಡು ಓದು ಹಾಳುಮಾಡಿಕೊಂಡು, ಒಂದೆರಡು ಬಾರಿ ನಾಪಾಸಾದ. ಈಗ ಭಗೀರಥ ಪ್ರಯತ್ನದೊಡನೆ ಇಂಟರ್ಮೀಡಿಯೆಟ್ ಭವಸಾಗರವನ್ನು ಈಜಿ ಪಾರಾಗಲು ಪೇಚಾಡುತ್ತಿದ್ದ. ಅವನ ಉಳಿದ ತಮ್ಮಂದಿರು ಮೆಟ್ರಿಕ್ ಅಂತಸ್ತನ್ನು ಮುಟ್ಟಿರಲಿಲ್ಲ. ಒಬ್ಬರಿಗೂ ನಮ್ಮ ‘ಜ್ಯೇಷ್ಠ’ನ ತಲೆ ದೇವರು ಕೊಡಲಿಲ್ಲೆಂದು ರಾಯರೇ ಹೇಳುತ್ತಿದ್ದರು.
ಶಂಭು-ಅಲ್ಲ ಕೆ.ಎಸ್.- ವಕಾಲತ್ ಕಲಿತಾಯಿತು. ರಾಯರು ಹೊಟ್ಟೆತುಂಬಾ ಹಾಲು ಕುಡಿದರು. ಅಮೃತಪಾನವೇ ಆದಂತಾಯಿತು. ಅವರ ಅಭಿಲಾಷೆಯೆಲ್ಲಾ ಕೈಗೂಡಿದಹಾಗೆ ತೋರುತ್ತಿತ್ತು. ಸ್ವರ್ಗಲೋಕಕ್ಕೆ ಮೂರೇ ಗೇಣು ಉಳಿಯಿತು. ಈ ಮೂರು ನಾಲ್ಕು ಹುಡುಗರ-ಮುಖ್ಯತಃ ಶಂಭುವಿನ- ಅಲ್ಲ ಕೆ.ಎಸ್. ರಾವ್ನ(ಅವನಿಗೆ ಶಂಭು ಎಂದು ಕರೆದರೆ ಈಗ ಮುಖ ಸಿಡಿಗುಟ್ಟುತ್ತಿತ್ತು) ವಿದ್ಯಾಭ್ಯಾಸದ ಕಷ್ಟದಲ್ಲಿ, ಆಸ್ತಿಯ ಮೇಲೆ, ಮನೆಯ ಮೇಲೇನೂ ಸಾಲವಾಗಿತ್ತು ಅನ್ನುವ. ಆದರೆ ಇನ್ನೇನು? ‘ನಮ್ಮ ‘ರುಸ್ತುಂ’ ಹುಡುಗ ಚಿನ್ನದ ಮಳೆಗರೆಯಿಸುತ್ತಾನೆ. ಈ ಸಾಲ ಎಲ್ಲಾ ಯಾವ ಲೆಕ್ಕ? ರಮನ ಮದುವೆಯ ಚಿಂತೆಯೂ ಇರಲಿಲ್ಲ. ಏಕೆಂದರೆ ನಮ್ಮ ಹೊಸ ವಕೀಲ ಪುತ್ರರತ್ನನನ್ನು ತೋರಿಸಿ, ”ಅದಲಿ ಬದಲಿ” ವ್ಯಾಪಾರ ಮಾಡುವುದೆಂದು ಮುಂಚಿನಿಂದಲೂ ಅವರ ದೂರಾಲೋಚನೆಯೇ ಇತ್ತು. ರಮನನ್ನು ಬೆಳ್ಳಿ ಬೈಲಿನ ಸಾವಿರ ಮುಡಿ ಅಕ್ಕಿಯ ಧನಿ ರಾಮಶರ್ಮರ ಮಗ ಸುಂದರನಿಗೆ ಕೊಡುವುದೆಂದೂ, ಅವರ ತಮ್ಮನ (ಅವರೂ ಸಾಧಾರಣ ಕುಳವಲ್ಲ; ಸ್ಥಿತಿವಂತರೇ) ಮಗಳನ್ನು ನಮ್ಮ ಕೆ.ಎಸ್.ಗೆ ತರುವುದೆಂದೂ ಒಳಗಿಂದೊಳಗೇ ಪಂಚಾತಿಗೆಯಾಗಿತ್ತು. ರಮನಿಗೂ ಆ ಹುಡುಗ ಸುಂದರನ ಮೇಲೆ ಮನಸ್ಸಿತ್ತು. ಅವನೂ ನನ್ನೊಡನೆ ಮಾತಾಡಿದ್ದಾಗ ಈ ವಿಷಯ ತುಂಬಾ ಆಶೆ ತೋರಿಸಿದ್ದ. ಒಳ್ಳೆ ಗುಣದ ಹುಡುಗ. ರಮನೇ-(ನನ್ನ ಮನಸ್ಸಿನ ಆಶೆ ಆಗ ಅವಳಿಗೆ ಗೊತ್ತಿರಲಿಲ್ಲ ಅನ್ನಿ)-ನನ್ನೊಡನೆ ಸುಂದರನ ವಿಷಯ ಮನಸ್ಸು ಬಿಚ್ಚಿ ಮಾತನಾಡಿದ್ದಳು. ನೆನಸಿದಂತೆಯೇ ಆಗುತ್ತಿದ್ದರೆ ಬಹಳ ಹಾಲೇನು ಸುರಿಯುತ್ತಿತ್ತು.
ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ
ಆದರೆ, ನಮ್ಮ ರಾಯರ ಕನಸು ನೆರವೇರಲಿಲ್ಲ. ಕೆ.ಎಸ್. ‘ಊ ಹೂಂ’ ಅಂದುಬಿಟ್ಟ, ಮಾತ್ರವಲ್ಲ; ಮರು ಟಪಾಲಿನಲ್ಲೇ ಅಪ್ಪ ಅಮ್ಮಂದಿರ ಆಶೀರ್ವಾದಕ್ಕಾಗಿ ‘ಅರ್ಜಿ ದಾಖಲ್’ ಮಾಡಿದ. ಮದ್ರಾಸಿನಲ್ಲೇ ನಮ್ಮೂರವರಾದ ವಕೀಲ ಲಕ್ಷ್ಮೀನಾರಾಯಣರಾಯರು ಒಳ್ಳೇ ಸಂಪತ್ತು, ಕೀರ್ತಿ ಸಂಪಾದಿಸಿದ್ದರು. ಅವರ ವಕೀಲಕಿಯ ಕೀರ್ತಿಛತ್ರ- ಕೃಪಾಪೋಷಣೆಗಳನ್ನು ಅವರ ಮಗಳ (ದೊಡ್ಡ ಸುರಸುಂದರಿಯೇನಲ್ಲ. ನಾನೂ ಕಂಡಿದ್ದೇನೆ. ಸಾಮಾನ್ಯ ಮಾಂಸದ ಗೊಂಬೆ; ಬಿಳಿ ಚರ್ಮ, ಅಷ್ಟೆ) ವರದ ಹಸ್ತದೊಡನೆ ಕೆ.ಎಸ್. ವಿನಯದಿಂದ ಸ್ವೀಕರಿಸಿದ. ರಾಯರು, ರಮನ ಮತ್ತು ಬೆಳ್ಳಿ ಬೈಲಿನ ವೈವಾಹಿಕ ಒಪ್ಪಂದದ ಕುರಿತಾಗಿ ಅವನಿಗೆ ಅಂಗಲಾಚಿ ಬರೆದಾಗ ಆತನಿಂದ, “ನನ್ನ Future ಭವಿಷ್ಯ ನೋಡಬೇಕೋ ಬೇಡವೋ? ನೀನೇ ಹೇಳು ಅಪ್ಪಾ. ಈ ಬೇರೆ ವಿಚಾರದಲ್ಲಿ ನನ್ನ Interests ಅಭಿವೃದ್ಧಿಗೇನು ಗತಿ?” ಎಂದು ಉತ್ತರ ಬಂತು.
ಸರಿ, ಮದರಾಸಿನಲ್ಲೇ ವಿಜೃಂಭಣೆಯಿಂದ ಮದುವೆಯಾಯಿತು. ರಾಯರೂ ಎಲ್ಲರೂ ಹೋಗಿದ್ದರು. ಆದರೆ ಮನಸ್ಸಿನಲ್ಲಿ, ಈ ಸಂಭ್ರಮ, ದೊಡ್ಡವರ ನಂಟುತನಗಳ ಎಡೆಯಲ್ಲಿಯೂ, ಸ್ವಲ್ಪ ಶಂಕೆಯಿತ್ತು. ಈ ಮದ್ರಾಸು ವಕೀಲರ ಥಳಕು ಬೆಳಕು ಬೆಡಗಿನ ಒಳಗೆ, ತಮ್ಮ ಬೀಗರಮೇಲೆ ಹೆಚ್ಚು ಗೌರವವಿದ್ದಂತೆ ಕಾಣಲಿಲ್ಲ. ಆಮೇಲೆ ರಮನ ಅವಸ್ಥೆ?

ರಮನ ನೆಂಟಸ್ತಿಕೆ ತಪ್ಪಿಹೋಯಿತು. ಬೆಳ್ಳಿ ಬೈಲಿನವರ ಹುಡುಗಿ ಒಳ್ಳೇ ಬೆಳೆದು ನಿಂತಿದ್ದಳು. ಅವರ ಹುಡುಗರಿಗೇನೂ “ಅರ್ಜೆಂಟಾ”ಗಿರಲಿಲ್ಲ. ಹುಡುಗರಿಗೇನು? ಬಸವನಂತೆ ಬೆಳೆದು ಇರುತ್ತಾರೆ. ಆ ಹುಡುಗಿಗೆ ಬೇರೆ ಕಡೆ ನೋಡಿ, ಸುಂದರನನ್ನು ಸಾಟೆ (ಅದಲಿ-ಬದಲಿ) ವ್ಯಾಪಾರ ಮಾಡಿ, ಆ ಹೊರೆ ನೀಗಿಕೊಂಡರು. ರಮನಿಗೆ ತುಂಬಾ ಸಂಕಟವಾಗಿರಬೇಕು. ಆದರೆ ಹುಡುಗಿ ಮಾತನಾಡದೆ ಕಣ್ಣಲೇ ದುಃಖತುಂಬಿ ನುಂಗಿಕೊಂಡಳು. ಅವಳು ದೊಡ್ಡ ರೂಪವತಿಯಲ್ಲ. ರಾಯರ ಈಗಿನ ಹಣಕಾಸಿನ ಸ್ಥಿತಿ… ಮಗನ ವೈಭವ, ಇನ್ನೂ ಮೂಡಿರಲಿಲ್ಲ ತಾನೆ; ಸೂರ್ಯೋದಯವಾಗಿರಲಿಲ್ಲ… ಅಷ್ಟು ಉತ್ಕೃಷ್ಟವಾಗಿರಲಿಲ್ಲ. ಆದುದರಿಂದ ಒಳ್ಳೇ ವರ ಬರಲಿಲ್ಲ. ಹುಡುಗಿಯ ರೂಪು-ಗುಣಗಳಿಗಿಂತಲೂ, ಹುಡುಗಿಯ ಜನ್ಮದಾತನ ಹಣಕಾಸನ್ನು ನೋಡಿಕೊಂಡೇ ವರಗಳು ಬರುತ್ತವೆ. ಕೊನೆಗೆ, ಉಪಾಯವಿಲ್ಲದೆ, ನನ್ನಂಥ ನಾಲ್ಕಾರು ತುಂಡು ಹೊಲಗಳ ಏಕಚಕ್ರಾಧಿಪತಿ ಉಂಡಾಡಿ ಸುದಾಮನಿಗೇ ಭಿಕ್ಷೆಯಾಗಿತ್ತರು. ರಮ, ನನ್ನ ಗುಡಿಸಲಿನಲ್ಲಿ ಲಕ್ಷ್ಮಿಯ ಹಾಗೇನೋ ಇದ್ದಾಳೆ. ಅವಳನ್ನು ದೂರಿದರೆ ನನ್ನ ನಾಲಿಗೆಯಲ್ಲಿ ಹುಳು ಹುಟ್ಟಿತು. ಆದರೆ ಅವಳ ಕಣ್ಣಲ್ಲಿ ಕವಿಯುವ ಮೋಡ, ಆಗಾಗ್ಗೆ ಮೂಡುವ ದೂರದ ನೋಟ, ಹಗಲುಗನಸಿನ ಬೈಗು ನೋಡಿ ಬೆಳ್ಳಿ ಬೈಲಿನವರ ಐಶ್ವರ್ಯ, ಸುಂದರನ ರೂಪ (ನಾನು ಮೊಂಡು ಮೂಗಿನ ವಾಮನಾವತಾರಿಯೆಂದು ಒಪ್ಪಿಕೊಳ್ಳುವ ಸತ್ಯಪ್ರಿಯತೆ ನನ್ನಲ್ಲಿದೆ) ನನಗೇ ಜ್ಞಾಪಕವಾಗುತ್ತಿತ್ತು.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ಅಯ್ಯೋ, ಎಲ್ಲಿಂದ ಎಲ್ಲಿ ಬಂದೆವು, ಕತೆ ಬರಿಯುವವರಿಗೂ ತಮ್ಮ ತಮ್ಮ ಸುಖ ದುಃಖ ಅಂದರೆ ಅಷ್ಟು ಪ್ರಿಯ ನೋಡಿ. ಈಗ, ಶಂಭು-ಅಲ್ಲ-ಕೆ.ಎಸ್.ನ ಚರಿತ್ರೆ ಹೇಳುತ್ತಿರೋದು. ನನ್ನ ಸುಖ ದುಃಖ ನಿಮಗ್ಯಾಕೆ ಓದಲಿ?
ಅವನ ಆಕಾಂಕ್ಷೆಯನ್ನು ದೇವರು ಮೆಚ್ಚಿರಬೇಕು. ಅವನ Future-ಭವಿಷ್ಯ ಅವನಾಶಿಸಿದ ಹಾಗೇ ಆಯಿತು. ಶ್ವಶುರವರ್ಯರ ವಕೀಲಕಿಯೆಲ್ಲಾ ಇವನ ಬುಟ್ಟಿಗೆ ಬಿತ್ತು. ಕೈತುಂಬಾ ಸಂಪಾದನೆಯೊಡನೆ, ಒಳ್ಳೇ ಚಾಣಾಕ್ಷನೆಂಬ ಹೆಸರೂ ಪಡೆದ. ಕಾರ್ಪೋರೇಷನ್ನಿನ ಮೆಂಬರಿಕೆಯ ಮೇಲೂ ಕಣ್ಣು ಹಾಕಿದ್ದ. ಅದಕ್ಕಾಗಿ ಆಗಾಗೈ, ಹುಡುಗಿಯರ ಶಾಲೆಗಳ ‘ಸ್ಕೂಲ್ ಡೇ’ಗಳಿಗೆ ಅಧ್ಯಕ್ಷನಾಗಿ ಹೋಗುತ್ತಿದ್ದ. ಒಂದೆರಡು ಕಡೆ ಘಂಟಾಘೋಷವಾಗಿ ಸಣ್ಣ ಪುಟ್ಟ ದಾನ-ಸ್ಕಾಲರ್ಷಿಪ್ ಕೊಡಮಾಡಿದ್ದ.
ಸುರುವಿಗೇನೋ ಮನೆಗೂ ಹಣ ಕಳಿಸುತ್ತಿದ್ದ. ರಾಯರು ಬಹಳ ಹಿಗ್ಗುತ್ತಿದ್ದರು, ತಮ್ಮ ಬಾಲ ಚಂದ್ರನ ಉತ್ಕರ್ಷೆಯನ್ನು ಕಂಡು. ಕೊನೆಗೆ ಬಾಲಚಂದ್ರನಿಗೇ, ತನ್ನದೇ ಬಾಲಚಂದ್ರೋದಯವಾದಾಗ ಅಂದರೆ ಮಕ್ಕಳು ಮರಿ ಹುಟ್ಟಿದಾಗ, ಮನೆಗೂ ಆತನಿಗೂ ಇದ್ದ ಆರ್ಥಿಕ ಸಂಬಂಧ ತುಸು ಬಿಡಿಸಿತು. ಅಲ್ಲದೆ ಮದ್ರಾಸೆಲ್ಲಿ? ಸಣ್ಣ ಕಂಬಳವೆಲ್ಲಿ? ರಕ್ತಬಾಂಧವ್ಯಕ್ಕೂ ಮೈಲುಗಳ ಮಿತಿಯಿದೆ ನೋಡಿ. 550 ಮೈಲು ಸ್ವಲ್ಪ ಹೆಚ್ಚೆಂದೇ ಹೇಳಬೇಕು. ಅಲ್ಲದೆ, ಅವನ ಹೆಂಡತಿಗೂ ಹಿತಾಹಿತ ಜ್ಞಾನವಿಲ್ಲವೇ? ಒಳ್ಳೆಯದು-ಕೆಟ್ಟದು ಅರಿಯದ ಮಗುವೇ?… “ತಂದೆ, ತಾಯಿ, ಇಂಟರ್ನಲ್ಲಿ ಮುಳುಗೇಳುತ್ತಿರುವ ತಮ್ಮ, ಕಾಲೇಜ್ ಮೆಟ್ಟಿಲೇರುವ ತಮ್ಮಂದಿರ ಸಣ್ಣ ಸೇನೆಯಿಂದ ನಾವು ಕಣ್ಣುಮುಚ್ಚಿ ದಾನ ಮಾಡಿದರೆ, ಇನ್ನು ನಮ್ಮ ಮಕ್ಕಳಿಗೇನು ಗತಿ? ಲೈಫ್ ಇನ್ಸೂರೆನ್ಸ್ನ ಪಾಲಸಿಗೆ-50,000 ರೂಪಾಯಿನದು-ಕಂತುಕಂತಿಗೆ ಕಟ್ಟಬೇಡವೇ ? ನಮ್ಮ ನಮ್ಮ ಸುಖ ದುಃಖ ನಾವು ನೋಡಿಕೊಳ್ಳದೆ, ಬೇರೆಯವರನ್ನು ಎಷ್ಟೆಂದು ಹೊರುವುದು? ನೋಡಿ ಇನ್ಸೂರೆನ್ಸ್ನ ಕಂತು ಖಂಡಿತ ಮರೆಯಬೇಡಿ. ತಿಳೀತೇಂದ್ರೆ?”
ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ
ತಮ್ಮ ಕೃಷ್ಣ ಇಂಟರ್ಮೀಡಿಯೇಟ್ ಹೇಗೂ ಈಸಿ ದಡ ಸೇರಿದ. ಹೇಗೂ ಹಠದಿಂದ ಓದಿ,-(ಹುಡುಗನಿಗೆ ಮೆದುಳಿಲ್ಲದೇನಲ್ಲ; ದಡ್ಡತನ ಅಷ್ಟೆ)- ಒಳ್ಳೇ ಕ್ಲಾಸ್ ಕೂಡ ಪಡೆದ. ವೈದ್ಯ ಕಲಿಯಬೇಕೆಂದು ಆಶೆ. ರಾಯರೂ ”ಅದಕ್ಕೇನಂತೇ? ನಮ್ಮ ಶಂಭು ಸಂಪಾದಿಸುತ್ತಾನೆ; ನಿಮಗೆಲ್ಲಾ ದಾರಿ ತೋರಿಸುತ್ತಾನೆ. ನನಗಿನ್ನು ವಾನಪ್ರಸ್ಥಾಶ್ರಮ” ಎಂದು ಹೇಳಿ ಶಂಭುವಿಗೆ ಈ ವಿಚಾರ ಕಾಗದ ಬರೆದರು. ಮದ್ರಾಸಿನಿಂದ 500 ರೂಪಾಯಿಗೊಂದು ಚೆಕ್ ಬಂತು. ”ಅಪ್ಪಾ, ನೀನು ಸ್ವಲ್ಪ ನಮ್ಮ ತಾಪತ್ರಯದ ಯೋಚನೆ ಮಾಡಬೇಕು. ನನಗೂ ಮಕ್ಕಳಿದ್ದಾರೆ; ಮದ್ರಾಸಿನಲ್ಲಿ ಖರ್ಚೋ ಅಟ್ಟಕ್ಕೇರುತ್ತದೆ. ಆಮೇಲೆ ನನ್ನ future, ನನ್ನ ಮಕ್ಕಳ futureನ ವಿಚಾರ ಮಾಡಬೇಡವೇ? ಇಷ್ಟು ಹೇಗೂ ತಿಳಿಸಿದ್ದೇನೆ. ಇನ್ನು ಮುಂದೆ ನನ್ನಿಂದ ಸಾಗದ ಬಾಬತು. ನನ್ನನ್ನು ದೂರಬೇಡಿ. ನಡುನೀರಿನಲ್ಲಿ ಕೈಬಿಟ್ಟೆನೆಂದು ಅನ್ನಬಾರದು ಮತ್ತೆ. ನಿಮಗೂ ಗೊತ್ತು ಸುಖ ದುಃಖ ತಾಪತ್ರಯ. ನಮ್ಮ ಕಷ್ಟಸುಖ, -ಸಂಸಾರ ಅನುಭವಿಸಿದ ನಿಮಗೆ ಗೊತ್ತಾಗದಿರಲಿಕ್ಕಿಲ್ಲ.”
ರಾಯರು “ಪಾಪ! ಅವನ ಕಷ್ಟ ನಮಗೆ ಹೇಗೆ ತಿಳಿಯುತ್ತದೆ? ದೂರದಲ್ಲಿ ಮದ್ರಾಸು, ದೊಡ್ಡ ವಕೀಲಿ ಎಂದು ನುಣ್ಣಗೆ ಕಾಣುತ್ತದೆ. ಅವನ ಸುಖ ದುಃಖ ಅವನೇ ಬಲ್ಲ” ಎಂದು ಉಸ್ಸಪ್ಪಗರೆದರು. ಅಮ್ಮನವರು ಸ್ವಲ್ಪ ಕಟುವಾಗಿ ಗೊಣಗಿ, ”ಮಾಟಗಾತಿ ನನ್ನ ಮಗನ ಮೇಲೆ ಮಂಕುಬೂದಿ ಎರಚಿದ್ದಾಳೆ” ಎಂದು ಸೊಸೆಯನ್ನು ಶಪಿಸಿ, ಅತ್ತೆಯ ಪಾತ್ರವನ್ನು ಅಭಿನಯಿಸಿದರು. ಅಲ್ಲೇ ಕೂತು ನೊಣಾ ಹೊಡೆಯುತ್ತಿದ್ದ ನನಗೆ ಹಿಂದಿನ ಕತೆ ನೆನಪಾಯಿತು. ”ಅಯ್ಯೋ ಅವನದೇನು ತಪ್ಪು? ಅಪ್ಪ, ಅಮ್ಮ ಕಲಿಸಿದ ಪಾಠ ಚೆನ್ನಾಗಿ ಒಪ್ಪಿಸುತ್ತಿದ್ದಾನೆ” ಎಂದುಕೊಂಡೆ. ಅಲ್ಲೇ ಕತ್ತುಚಾಚಿ, ಉತ್ಕಂಠನಾಗಿದ್ದ ಕೃಷ್ಣ ಧಡಕ್ಕನೆದ್ದು ಹೊರಗೆ ಹೋಗಿ, ಗಟ್ಟಿಯಾಗಿ ಉಗುಳಿದ. “ಸುಖದುಃಖವಂತೆ, ಮಣ್ಣು ಮಸಣ; ಸುಖ ಅವನಿಗೆ, ದುಃಖ ನಮಗೆ. ಕಣ್ಣಲ್ಲಿ ರಕ್ತವಿಲ್ಲದ ಜಾತಿ” ಎಂದು, ತನ್ನ ಒಡೆದ ಕನಸುಗಳನ್ನೆಲ್ಲಾ ಬಿಸಾಕಿ ಹೊರಗೆ ಹೊರಟ.
ರಾಯರ ಕೂದಲು ಹಣ್ಣಾಗಿತ್ತು. ಅವರ ದೆಸೆಯೂ ತಿರುಗುತ್ತಾ ಬಂದಿತ್ತು. ಅವರು ಆ ಆಸ್ತಿ ತೆಗೆದುಕೊಂಡದ್ದು ಒಳ್ಳೆಯದಾಗಲಿಲ್ಲ. ಅದನ್ನು ಮಾರಿದ ಮುಂಚಿನ ಧನಿ ದೊಡ್ಡ ಫಟಿಂಗ, ಪಾತಾಳಶಕುನಿ. ಆಸ್ತಿ ಮಾರಿದಮೇಲೆ, ತನ್ನ ಸೊಸೆಯಿಂದ, ಕುಟುಂಬದವರಿಂದ, ಅನಂತವಾಗಿ, ಮೈರಾವಣನ ಪೀಳಿಗೆಯಂತೆ ವ್ಯಾಜ್ಯ ಹೂಡಿಸಿದ. ಮುಂಚಿನ ಒಕ್ಕಲುಗಳನ್ನು ಗದರಿಸಿ, ಬೆದರಿಸಿ ಗೇಣಿ ಸೆಳೆದುಕೊಂಡ. ಈ ಶ್ರೇಷ್ಠಿಭಯಂಕರ ನಾಗಪ್ಪ ಶೆಟ್ಟಿಯೆದುರು ‘ಕಾಯಿಹುಳಿ’ ಬ್ರಾಹ್ಮಣರದು ಏನು ನಡೆದೀತು? ಅದರ ಮೇಲೆ ಹೇಳಿದ್ದೆನೆಲ್ಲಾ ವಿದ್ಯಾಭ್ಯಾಸದ ಸಾಲ-ಸೋಲ ಎಂದು. ಹಾಗೂ ಹೀಗೂ ದಿನ ಕೆಟ್ಟಿರಬೇಕು. ಮಕ್ಕಳೆಲ್ಲಾ ಕಾಲೇಜ್-ಹೈಸ್ಕೂಲನ್ನು ಅಷ್ಟಷ್ಟರಲ್ಲೇ ಬಿಟ್ಟುಬಿಟ್ಟು ಮನೆಗೆ ಬಂದು, ಹರಹರ ಎಂದು ದಿನ ದೂಡಬೇಕಾಯಿತು. ಸಣ್ಣವರು ಹಾರೆಗುದ್ದಲಿ ಹಿಡಿದು ನಾಲ್ಕು ಮೆಣಸು-ಸವುತೇಕಳ ಬೇಸಾಯ ಮಾಡಲು ಹಿಂಜರಿಯಲಿಲ್ಲ. ಆದರೆ ಕಾಲೇಜು-ಸಿಗರೇಟಿನ ರುಚಿ ತಾಗಿದವರಿಗೆ ಅನ್ನಸಂಹಾರವೊಂದೇ ಉಳಿಯಿತು. ಮುದಿಯ ರಾಯರಿಗೂ ಅವರಿಂದ ಕೆಲಸ ಮಾಡಿಸಲು ನಾಚಿಕೆಯಾಗುತ್ತಿತ್ತು. ಇವರಿಗೆ ವಿದ್ಯೆ ಕೊಡಲು ಕೈಲಾಗದೆ, ಕರ್ತವ್ಯ ಭ್ರಷ್ಟನಾಗಿ, ತಂದೆಯಾಗಿ, ತಂದೆಯ ಅಧಿಕಾರ ನಡೆಸಲು ನನಗೆ ಮೋರೆಯೆಲ್ಲಿದೆ ಎಂದು ನನ್ನೊಡನೆ ಹೇಳುತ್ತಿದ್ದರು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

ಈಚೆಗೆ ಅಮ್ಮ ಕಾಯಿಲೆ ಬಿದ್ದರು. ಮುದಿಪ್ರಾಯದ ವಾತ. ಹಡೆದು ಹಡೆದು, ದುಡಿದು ದುಡಿದುದರ ನಿಶಕ್ತಿ, ಮತ್ತೆ ಏನೋ ಏನೋ. ನಮ್ಮಲ್ಲಿಗೆ ತರಿಸಿ, ರಮ, ಆದಷ್ಟು ಉಪಚಾರ ಮಾಡಿದಳು. ಡಾಕ್ಟರರಿಗೆ ತೆರಲು ನಮ್ಮಲ್ಲಿ ಯಾರಿಗೂ ತ್ರಾಣವಿರಲಿಲ್ಲ. ಈಗ ಅವರ ಮನೆಯೂ ಅಡವಾಗಿದ್ದಿತು. ನನಗಿದ್ದುದು ಮೂರು ಹೊತ್ತಿನ ಗಂಜಿಗೆ ಗತಿ ಮಾತ್ರ ಎಂದು ನಿಮ್ಮಲ್ಲಿ ಮೊದಲೇ ಅರಿಕೆ ಮಾಡಿದ್ದೇನೆ. ಡಾಕ್ಟರರ ಮದ್ದು ಮಾಡಿದರೆ ಗುಣವಾಗುವುದೆಂದು ನಮಗೆ ಗೊತ್ತಿತ್ತು. ಆದರೆ, ಡಾಕ್ಟರೋ- ಮುಖಾ ನೋಡಿದರೆ ದಕ್ಷಿಣೆ ಎಂದು ಕೈ ಚಾಚುತ್ತಾರೆ. ಮಂಗಳೂರಿಗೆ ಕೊಂಡುಹೋಗಿ ಹೇಗೆ ಚಿಕಿತ್ಸೆ ಮಾಡಿಸುವುದು? ಬಹಳ ಉದ್ವಿಗ್ನತೆಯಿಂದ ಮದರಾಸಿಗೆ ಶಂಭುವಿಗೆ ನಾವೆಲ್ಲರೂ ಬರೆದೆವು! “ಬಹಳ ಅಪಾಯಸ್ಥಿತಿ. ಬಂದುಹೋಗು, ಅಕ್ಕಿ ಹೋಗಿ ಅನ್ನವಾಗುವಂತಿದೆ,” ಎಂದು ತಿಳಿಸಿದೆವು. ಶಂಭು ಏನು ಮಾಡಿಯಾನು ಪಾಪ! ಅವನ ತಾಪತ್ರಯ ಅವನಿಗೇ ಗೊತ್ತು. ಅದು ವಕಾಲತ್ತಿನ ಸಮಯ. “ರಾಶಿರಾಶಿ ಕೇಸು ಬಂದು ಬಿದ್ದಿವೆ. ಕಕ್ಷಿಗಾರರ ಪಡೆಗಟ್ಟಿದೆ. ಉಪಾಯವಿಲ್ಲ. ಬಹಳ ಕಷ್ಟ, ದೇವರು ನಡೆಸಿ ಅಮ್ಮನಿಗೆ ಗುಣವಾಗಬೇಕು. ಅವಳಿಗೂ (ಹೆಂಡತಿ) ಬಹಳ ದುಃಖವಾಯಿತೆಂದು ಅಮ್ಮನಿಗೆ ಹೇಳಿ” ಎಂದು ಬರೆದ. ಹೊತ್ತು ಹೆತ್ತ ತಾಯಿಯನ್ನು ನೆನೆಸಿ ‘ಹೋಗೋಣ’ ಎಂದು ಎದ್ದುನಿಂತರೆ, ಗೃಹಲಕ್ಷ್ಮಿ ‘ನಮ್ಮ ನಮ್ಮ ಸುಖ ದುಃಖ’ದ ಪಾರಾಯಣ ಮಾಡಿರಬೇಕೆಂದು ನಾನು ಊಹಿಸಿದೆ.
ನಾನು “ಚಿಕಿತ್ಸೆಗೆ ಏನು ಉಪಾಯ?” ಎಂದು ಕೇಳಿ ಬರೆದಿದ್ದೆ. ನೂರು ರೂಪಾಯಿ ಕಳಿಸಿದ. “ನೋಡು, My dear fellow, ಇದಕ್ಕಿಂತ ಹೆಚ್ಚು ಕೊಡುವುದು ನನ್ನಿಂದ ಆಗುವ ಬಾಬತಲ್ಲ. ಪಾಪ; ಅಪ್ಪ ಅಮ್ಮ ಕಷ್ಟದಲ್ಲಿದ್ದಾರೆ. ಆದರೆ ನಮಗೆ ನಮ್ಮ ನಮ್ಮ ಸುಖದುಃಖವಿಲ್ಲವೇ? ನಮ್ಮ ತಾಪತ್ರಯ ನಮ್ಮ ಜೀವ ತಿನ್ನುತ್ತಾ ಇದೆ. ನೋಡು, ಮಹಾರಾಯಾ, ‘ಪರಶುವಾಕಂ’ನಲ್ಲಿ ಒಂದು ಮನೆ ಕಟ್ಟಿಸಲು ಕೈ ಹಚ್ಚಿದ್ದೇನೆ. ಅದೇ ಈಗ ಬ್ರಹ್ಮಕಪಾಲವಾಗಿ ಕಾಡುತ್ತಿದೆ. ಇದ್ದದ್ದೆಲ್ಲಾ ಸಿಮೆಂಟು ಮಣ್ಣಿಗೇ ಸರಿಯಾಗುತ್ತಿದೆ. ಮಕ್ಕಳ ಶಾಲೆ ಫೀಸು-ಅದೂ ಯೂರೋಪಿಯನ್ ಕಾನ್ವೆಂಟ್ ಸ್ಕೂಲು- ಬೇರೆ. ನೀನೇ ಯೋಚಿಸಿ ನೋಡು, ಮಹಾರಾಯ, ನಮ್ಮ ಕಷ್ಟ ಸುಖ…”
ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್ರ ಕತೆ | ಕದ್ದವರು ಯಾರು?
ಈ ಬಾರಿ ಮುದುಕನ ವೇದಾಂತ, ಪುತ್ರರತ್ನನ ಮೇಲಿನ ಅಭಿಮಾನ, ಎಲ್ಲಾ ದುಃಖದಲ್ಲಿ ಮುಳುಗಿಹೋಯಿತು. ”ಹುಟ್ಟಿಸಿದ ತಾಯಿ ತಂದೆಯನ್ನು ಮರೆತವನೇ! ಸುಖದುಃಖವಂತೆ!” ಎಂದು ಶಪಿಸಿದರು. ಮಗ್ಗುಲಲ್ಲೇ ಮಂಚದ ಮೇಲೆ ಮಲಗಿ, ನರಳುತ್ತಿದ್ದ, ಎಲುಬಿನ ಹಂದರವಾಗಿದ್ದ ಅಮ್ಮ: ”ಅಯ್ಯೋ ಪಾಪ! ಯಾಕೆ ಅವನನ್ನು ಅಂದುಕೊಳ್ಳುತ್ತೀರಿ, ಅವರವರ ಸುಖ ದುಃಖ ಅವರಿಗೇ ಗೊತ್ತು. ಯಾರ ತಲೆಗೆ ಯಾರ ಕೈ… ನಾರಾಯಣ…” ಎಂದು ನರಳಿದರು.
(ಕೃಪೆ: ಮಲ್ಲಿಗೆ ಮಾಸಪತ್ರಿಕೆ; ‘ಹುಚ್ಚ ಮುನಸೀಫ’, ಜೀವನ ಕಾರ್ಯಾಲಯ, ಬಸವನಗುಡಿ, ಬೆಂಗಳೂರು, 1949)
ಬಾಗಲೋಡಿಯವರ ‘ಅವರವರ ಸುಖದುಃಖ’
ಈ ಕಥೆ ಮೊದಲು ಪ್ರಕಟವಾದದ್ದು 1947ರ ಸುಮಾರಿಗೆ, ‘ಜೀವನ’ ಪತ್ರಿಕೆಯಲ್ಲಿ. ಅನಂತರ 1949ರಲ್ಲಿ ಮಾಸ್ತಿಯವರೇ ಪ್ರಕಟಿಸಿದ ‘ಹುಚ್ಚ ಮುನಸೀಫ ಮತ್ತು ಇತರ ಕತೆಗಳು’ ಎಂಬ ಸಂಕಲನದಲ್ಲಿ ಬಂದಿದೆ. ‘ಪವಾಡ ಪುರುಷ’ದ ಬರವಣಿಗೆಗಿಂತ ಬಹಳ ಭಿನ್ನವಾದ ಈ ಕಥೆಯನ್ನು ಬರೆದಾಗ ಬಾಗಲೋಡಿಯವರಿಗೆ ಕೇವಲ ಇಪ್ಪತ್ತು ವರ್ಷ. ಅದು ಅವರ ಬರವಣಿಗೆಯ ಆರಂಭದ ಕಾಲ. ಆದರೂ ಈ ಕಥೆಯ ಬರವಣಿಗೆಯಲ್ಲಿ ಅವರು ತೋರಿಸಿರುವ ಪ್ರಬುದ್ಧತೆ ಆಶ್ಚರ್ಯಕರವಾಗಿದೆ.
‘ಹುಚ್ಚ ಮುನಸೀಫ’ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿರುವ ಮಾಸ್ತಿಯವರು “ಶ್ರೀ ಬಾಗಲೋಡಿಯವರ ಕತೆಗಳು ಅವರದೇ ಆದ ಒಂದು ವಸ್ತುವೈಶಿಷ್ಟ್ಯ, ಕಥನಪದ್ಧತಿ, ರಸಸಿದ್ಧಿಗಳಿಂದ ನಿರಾಯಾಸವಾಗಿ ಒಂದು ಮೇಲ್ಮಟ್ಟವನ್ನು ಮುಟ್ಟುತ್ತವೆ” ಎಂದಿದ್ದಾರೆ. ಬಾಗಲೋಡಿಯವರು “ತಮ್ಮ ಹುಟ್ಟುನಾಡಿನ ಜೀವನವನ್ನು ಒಲಿದ ಕಣ್ಣಿಂದ ನೋಡಿ ಬಗೆಯರಳಿ ಗ್ರಹಿಸಿರುವುದು” ಮತ್ತು “ಈ ಜೀವನ ವಿಶ್ವಜೀವನದ ಚಿತ್ರವೂ ಆಗಿರುವುದು ಅವರ ಕತೆಗಳ ಮೇಲಟ್ಟಕ್ಕೆ ಮುಖ್ಯ ಕಾರಣ” ಎಂದು ಸೂಚಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಅವರು ‘ಅವರವರ ಸುಖದುಃಖ’ವನ್ನು ಹೆಸರಿಸಿದ್ದಾರೆ. ಈ ಮಾತುಗಳು ಸ್ವಲ್ಪ ಸ್ಥೂಲವಾಗಿ ಕಂಡರೂ ಸತ್ಯವಾಗಿವೆ.
‘ಅವರವರ ಸುಖದುಃಖ’ ವಿಡಂಬನೆಯ ಜಾತಿಗೆ ಸೇರಿದ ಬರವಣಿಗೆ. ಸಾಮಾನ್ಯವಾಗಿ ಇಂಥ ಬರವಣಿಗೆಯಲ್ಲಿ ವ್ಯಕ್ತಿಗಳ ಅಥವಾ ಸಮಾಜದ ಹದ ತಪ್ಪಿದ ರೀತಿ-ನೀತಿ, ಓರೆಕೋರೆ, ಸೋಗು-ದಿಮಾಕುಗಳನ್ನು ಉತ್ಪ್ರೇಕ್ಷಿಸಿ ಗೇಲಿಗೆಬ್ಬಿಸುವುದೇ ಹೆಚ್ಚು. ಇಂಥ ವಿಡಂಬನೆ ತನ್ನ ತೀಕ್ಷತೆ, ವ್ಯಂಗ್ಯ, ಹಾಸ್ಯ, ಲೇವಡಿಗಳಿಂದ ಲವಲವಿಕೆಯನ್ನು ಹುಟ್ಟಿಸುತ್ತದೆ, ಚುಚ್ಚುತ್ತದೆ, ಕೆರಳಿಸುತ್ತದೆ. ಆದರೂ ಹೆಚ್ಚಿನ ಸಂದರ್ಭಗಳಲ್ಲಿ ಬದುಕಿನ ಮೇಲು ಮೇಲಿನ ವಿವರಗಳಲ್ಲೇ ನಿಲ್ಲುವುದರಿಂದ ಅದಕ್ಕೆ ಆಳ ಬರುವುದಿಲ್ಲ. ಆದರೆ ಬಾಗಲೋಡಿಯವರು ಈ ಕಥೆಯಲ್ಲಿ ಇಂಥ ಹೊರಗಿನ ವಿವರಗಳಿಗಷ್ಟೇ ತೃಪ್ತರಾಗದೇ ಮನುಷ್ಯನ ಸ್ವಭಾವವನ್ನೇ ವಿಡಂಬನೆಗೆ ಗುರಿಪಡಿಸಿದ್ದಾರೆ. ಮಾಸ್ತಿಯವರು ಹೇಳುವ ವಿಶ್ವಜೀವನದ ಚಿತ್ರದ ಅರ್ಥವೂ ಇದೇ. ಜೊತೆಗೆ ಈ ವಿಡಂಬನೆಗೆ ಬಾಗಲೋಡಿಯವರು ನಿರ್ಮಿಸಿಕೊಂಡಿರುವ ತಾಂತ್ರಿಕ ಚೌಕಟ್ಟು ಸಹ ಅಭ್ಯಾಸಯೋಗ್ಯವಾಗಿದೆ.
ಇದನ್ನು ಓದಿದ್ದೀರಾ?: ‘ಶ್ರೀ ಸ್ವಾಮಿ’ಯವರ ಕತೆ | ಬೀಬೀ ನಾಚ್ಚಿಯಾರ್
ಕಥೆಯಲ್ಲಿ ವಿಡಂಬನೆಗೆ ಒಳಗಾಗಿರುವುದು-ಬೆಳೆಯುತ್ತ ತನ್ನ ಔದಾಯವನ್ನು ಕಳೆದುಕೊಂಡು ಸ್ವಾರ್ಥದ ಗೂಡಿನಲ್ಲಿ ಸೇರಿಕೊಳ್ಳುವ ಮನುಷ್ಯನ ಸ್ವಭಾವ. ಆದರೆ ಇದಿಷ್ಟೇ ಕಥೆಯ ಅರ್ಥವಲ್ಲ. ದೃಷ್ಟಿಕೋನಗಳ ತಾಕಲಾಟದಲ್ಲಿ, ಆ ತಾಕಲಾಟದಲ್ಲಿ ಹುಟ್ಟುವ ವ್ಯಂಗ್ಯದಲ್ಲಿ ಪಾತ್ರಗಳು ಆ ವ್ಯಂಗ್ಯವನ್ನು ಗುರುತಿಸುವ ಅಥವಾ ಗುರುತಿಸದಿರುವ ರೀತಿಗಳಲ್ಲಿ ಬರವಣಿಗೆ ಸಾಕಷ್ಟು ಸಂಕೀರ್ಣವಾಗಿದೆ.
ಕೇಂದ್ರವಸ್ತುವನ್ನು ಕಥೆ ಮೂರು ನೆಲೆಗಳಲ್ಲಿ ತೋರಿಸುತ್ತದೆ. ಒಂದು ಕಡೆ ಶಂಭುವಿನ ತಂದೆ-ತಾಯಿಗಳಿದ್ದಾರೆ. ಇವರು ಈಗಾಗಲೇ ಬೆಳವಣಿಗೆಯ ಹಂತಗಳನ್ನು ದಾಟಿ ಹೋಗಿ ಸಂಪೂರ್ಣ ಸ್ವಾರ್ಥಿಗಳಾಗಿದ್ದಾರೆ. ಅದನ್ನೇ ವ್ಯವಹಾರಜ್ಞಾನವೆಂದು ನಂಬಿದ್ದಾರೆ. ಸ್ವಾರ್ಥ ಅವರಲ್ಲಿ ಈಗಾಗಲೇ ಒಂದು ಸಿದ್ಧವಸ್ತುವಾಗಿದೆ.
ಇನ್ನೊಂದು ತುದಿಯಲ್ಲಿ ಶಂಭು ಇದ್ದಾನೆ. ಬಾಲ್ಯದ ಅರೆ ಔದಾರ್ಯದ ಹಂತದಿಂದ ಅವನು ಕ್ರಮೇಣ ಬೆಳೆಯುತ್ತ ಬೆಳೆಯುತ್ತ ತನ್ನ ತಂದೆ-ತಾಯಿಗಳ ಅವಸ್ಥೆಗೇ ಬಂದು ಮುಟ್ಟುತ್ತಾನೆ. ಅವರಂತೆ ಇವನೂ ವ್ಯವಹಾರ ಬುದ್ಧಿಯನ್ನು ಕಲಿತುಕೊಳ್ಳುತ್ತಾನೆ. ಅವನ ಈ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಕಾಣಿಸಿಕೊಳ್ಳುವ ಅವನ ಹಾಗೂ ಅವನ ತಂದೆ-ತಾಯಿಗಳ ನಡುವೆ ನಡೆಯುವ ದೃಷ್ಟಿಕೋನ ಮತ್ತು ಹಿತಾಸಕ್ತಿಗಳ ತಾಕಲಾಟಗಳು ಕಥೆಯ ಮುಖ್ಯ ಸ್ವಾರಸ್ಯದ ಸ್ಥಾನಗಳಾಗಿವೆ.

ಕಥೆಯ ಆರಂಭದಲ್ಲಿ ಕಾಣುವ ಶಂಭು ಒಬ್ಬ ಭೋಳೇ ಸ್ವಭಾವದ ಹುಡುಗ. ಅವನಿಗೆ ತನ್ನವರು ಎಂದರೆ ಪ್ರೀತಿ. ಕಷ್ಟದಲ್ಲಿರುವವರನ್ನು ಕಂಡರೆ ಕರಗುವ ಸ್ವಭಾವ. ಆದರೆ ಅವನ ಔದಾರ್ಯ, ಸ್ವಜನ ಪ್ರೇಮಗಳಲ್ಲಿ ತಿಳುವಳಿಕೆ ಸಾಲದು. ಎಲ್ಲಾ ಅತಿ. ಅಂತೆಯೇ ಕಳ್ಳಹುಡುಗರು ಅವನ ಔದಾರ್ಯದ ದುರುಪಯೋಗ ಮಾಡಿಕೊಳ್ಳುತ್ತಾರೆ. ಅವನು ತನ್ನ ಚಿಕ್ಕಪ್ಪನ ಮಕ್ಕಳನ್ನು ಪರಿಪಾಲಿಸುತ್ತಿದ್ದ ರೀತಿಯನ್ನು ಕಂಡು ಎಲ್ಲರೂ ನಗುವಂತಾಗುತ್ತದೆ. ಈ ಸ್ಥಿತಿಯಲ್ಲಿ ಅವನ ಔದಾರ್ಯ ಕೇವಲ ಭೋಳೇತನವಾಗಿ, ಹುಡುಗತನವಾಗಿ ಕಾಣುತ್ತದೆ. ಅವನ ತಂದೆ-ತಾಯಿಗಳಿಗೆ ಅನಿಸುವುದೂ ಹಾಗೇ.
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
ಶಂಭುವಿನ ಚಿಕ್ಕಪ್ಪನಿಗೆ ಕಷ್ಟ ಬಂದಾಗ ಶಂಭುವಿನ ತಂದೆ-ತಾಯಿಗಳು ಆತನಿಗೆ ಸಹಾಯ ಮಾಡುವದಿಲ್ಲ. ಇದು ಶಂಭು ಮತ್ತು ಅವನ ತಂದೆ-ತಾಯಿಗಳ ಮೊದಲ ಮುಖ್ಯ ಮುಖಾಮುಖಿಗೆ ಕಾರಣವಾಗುತ್ತದೆ. ತಂದೆ-ತಾಯಿ ತಮ್ಮದೇ ತಾಪತ್ರಯಗಳನ್ನು ಮುಂದೆ ಮಾಡಿ ಸಹಾಯವನ್ನು ನಿರಾಕರಿಸುವುದನ್ನು ವ್ಯಾವಹಾರಿಕವಾದ, ಬುದ್ಧಿವಂತಿಕೆಯ ಕೆಲಸವೆಂದು ಸಮರ್ಥಿಸಿಕೊಳ್ಳುತ್ತಾರೆ. ಶಂಭುವಿಗೆ ಇದು ದೊಡ್ಡ ಸ್ವಾರ್ಥವಾಗಿ, ಅನ್ಯಾಯವಾಗಿ ಕಾಣುತ್ತದೆ. ಅದಕ್ಕಾಗಿ ಅವನು ದೊಡ್ಡ ರಂಬಾಟವನ್ನೇ ನಡೆಸುತ್ತಾನೆ. ಈ ರಂಬಾಟ ತಂದೆ-ತಾಯಿಗಳಿಗೆ ಅಧಿಕಪ್ರಸಂಗವಾಗಿ, ಹುಡುಗುತನದ ಅವಿವೇಕವಾಗಿ ಕಾಣುತ್ತದೆ. ಹೀಗೆ ಕಥೆಯಲ್ಲಿ ಒಂದೊಂದು ಕ್ರಿಯೆಯೂ ಪ್ರತಿಕ್ರಿಯೆಗಳ ಆವರ್ತಗಳನ್ನು ಹುಟ್ಟಿಸುತ್ತ ಹೋಗುತ್ತದೆ.
ಆದರೆ ಶಂಭು ದೊಡ್ಡವನಾದ ಹಾಗೆ ಬದಲಾಗುತ್ತಾನೆ. ತನ್ನ ಹಿತವನ್ನೇ ಗಮನದಲ್ಲಿಟ್ಟುಕೊಂಡು ತನ್ನ ಹೆಂಡತಿಯನ್ನು ತಾನೇ ಆರಿಸಿಕೊಳ್ಳುತ್ತಾನೆ. ತಮ್ಮ ಹಿತದ ದೃಷ್ಟಿಯಿಂದ ತಂದೆ-ತಾಯಿಗಳು ಆರಿಸಿದ ಹುಡುಗಿಯನ್ನು ಹೀಗೆ ಅವನು ನಿರಾಕರಿಸುತ್ತಾನೆ. ಇದು ಅವರಿಗೆ ಸ್ವಾರ್ಥವೆಂದು ತೋರುತ್ತದೆ. ಬರಬರುತ್ತ ಅವನು ಮನೆಯನ್ನೇ ಮರೆಯುತ್ತಾನೆ. ತಮ್ಮ-ತಂಗಿಯರ ನೆರವಿಗೆ ಬರುವದಿಲ್ಲ. ತಂದೆ-ತಾಯಿಗಳ ಸ್ಥಿತಿ ಕೆಳಗಾಗುತ್ತ ಬಂದಂತೆ ಅವರು ಮಗನಿಂದ ಆಪೇಕ್ಷಿಸಿದ ಸಹಾಯ ಬರದಿದ್ದಾಗ ಅವರು ಅವನ ಸ್ವಾರ್ಥದ ಬಗ್ಗೆ ಕಹಿಯಾಗುತ್ತ ಹೋಗುತ್ತಾರೆ. ಕೊನೆಗೆ ತಾಯಿಯ ಕಾಯಿಲೆಗೂ ಅವನು ಕಾಳಜಿ ಮಾಡದಾದಾಗ ಅವರಿಗಷ್ಟೇ ಅಲ್ಲ, ಹೊರಗಿನವರಿಗೂ ಅದು ತಪ್ಪಾಗಿ ಕಾಣುತ್ತದೆ.
ಆದರೆ ಇಲ್ಲಿಯ ಸ್ವಾರಸ್ಯದ ಅಂಶವೆಂದರೆ ಕಥೆಯಲ್ಲಿಯ ವ್ಯಂಗ್ಯ. ಶಂಭುವಿನ ತಂದೆ ತನ್ನ ತಮ್ಮನ ಕಷ್ಟಕಾಲದಲ್ಲಿ ನೆರವಾಗುವದಿಲ್ಲ. ಇದರಲ್ಲಿ ಆತನಿಗೆ ತಪ್ಪಾಗಲಿ, ಸ್ವಾರ್ಥವಾಗಲಿ ಕಾಣುವುದಿಲ್ಲ. ಆದರೆ ತಮ್ಮ ಮಗ ಶಂಭು ತನ್ನ ತಮ್ಮ-ತಂಗಿಯರ ವಿಷಯದಲ್ಲಿ ಅದೇ ರೀತಿ ನಡೆದುಕೊಂಡಾಗ ಸ್ವಾರ್ಥಿಯಾಗಿ, ಕೆಟ್ಟವನಾಗಿ ಕಾಣುತ್ತಾನೆ. ಈ ವ್ಯಂಗ್ಯ ಅವರಿಗೆ ತಿಳಿಯುವದಿಲ್ಲ. ಹಾಗೆಯೇ ಶಂಭುವಿಗೆ ತನ್ನ ತಂದೆ ತನ್ನ ತಮ್ಮನ ಕಷ್ಟದ ಕಾಲದಲ್ಲಿ ನೆರವಾಗದಿದ್ದಾಗ ಸ್ವಾರ್ಥಿಯಾಗಿ, ಕೆಟ್ಟವನಾಗಿ ಕಾಣುತ್ತಾನೆ. ಆದರೆ ಸ್ವತಃ ತಾನೂ ಅಂಥದೇ ಸಂದರ್ಭದಲ್ಲಿ ತನ್ನ ತಮ್ಮ-ತಂಗಿಯರ ಹಾಗೂ ತಂದೆ-ತಾಯಿಗಳ ವಿಷಯದಲ್ಲಿ ಅದೇ ರೀತಿ ನಡೆದುಕೊಂಡಾಗ ತಾನು ಸ್ವಾರ್ಥಿ, ಕೆಟ್ಟವನು ಎಂಬ ಭಾವನೆ ಅವನಿಗೆ ಬರುವುದಿಲ್ಲ. ಈ ವ್ಯಂಗ್ಯ ಶಂಭುವಿಗೆ ತಿಳಿಯುವುದಿಲ್ಲ.
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ಹೀಗೆ ಈ ವ್ಯಂಗ್ಯ ಅವರವರಿಗೆ ತಿಳಿಯದಿರುವುದೇ ಕಥೆಯ ಮುಖ್ಯ ಆಸಕ್ತಿಯಾಗಿದೆ. ಮನುಷ್ಯ ಸ್ವಭಾವದ ಈ ವಿಚಿತ್ರವನ್ನು ಎತ್ತಿತೋರಿಸಿ ವಿಡಂಬಿಸುವದೇ ಇಲ್ಲಿಯ ಮುಖ್ಯ ಉದ್ದೇಶ.
ಆದರೆ ಕಥೆಗೆ ಇನ್ನೂ ಒಂದು ನೆಲೆ ಇದೆ. ಅದು ಶಂಭು ಮತ್ತು ಅವನ ತಂದೆ-ತಾಯಿಗಳ ಅರಿವಿಗೆ ಬಾರದ ವ್ಯಂಗ್ಯವನ್ನು ಮೂರನೆಯವನ ದೃಷ್ಟಿಯಿಂದ ಗುರುತಿಸುವ ನೆಲೆ. ಈ ನೆಲೆಯಲ್ಲಿ ನಿರೂಪಕನಿದ್ದಾನೆ. ಎಲ್ಲ ಪಾತ್ರಗಳನ್ನೂ ಸನಿಹದಿಂದ ಗಮನಿಸುವ ಅನುಕೂಲತೆಗಳಿರುವ, ಆದರೆ ವಸ್ತುನಿಷ್ಠವಾದ ದೃಷ್ಟಿಕೋನದಿಂದ ನಿರೀಕ್ಷಿಸಿ ಸಮತೂಕದಿಂದ ದಾಖಲಿಸಬಲ್ಲ ಪಾತ್ರ ಇದು. ಸ್ಪಷ್ಟವಾಗಿ ಹೇಳದಿದ್ದರೂ ಸನ್ನಿವೇಶಗಳ ಜೋಡಣೆಯ ಮೂಲಕ, ಉತ್ಪ್ರೇಕ್ಷೆ ವಿಡಂಬನೆ ವ್ಯಂಗ್ಯಗಳ ಮೂಲಕ ಕಥೆಯ ಮುಖ್ಯ ವ್ಯಂಗ್ಯವನ್ನು ಈತ ಓದುಗರ ಅರಿವಿಗೆ ತರುತ್ತಾನೆ. ಈ ನೆಲೆಯಲ್ಲಿ ಶಂಭು ಮತ್ತು ಅವನ ತಂದೆ-ತಾಯಿಗಳಿಬ್ಬರ ಸ್ವಾರ್ಥ ದೃಷ್ಟಿಗಳೂ, ಅವರು ಅದನ್ನು ಗುರುತಿಸದಿರುವ ಸಂಗತಿಗಳೂ ಬೆಲೆಗಟ್ಟಲ್ಪಡುತ್ತವೆ.
ಕಥೆ ಹೀಗೆ ಒಟ್ಟಿನ ಹಿಡಿತದಲ್ಲಿ ಸಾಕಷ್ಟು ಗಟ್ಟಿಯಾಗೇ ಇದೆ. ಆದರೆ ವಿವರಗಳಲ್ಲಿ ಒಂದೊಂದು ಸಲ ಕಲೆಗಾರಿಕೆಯ ದೋಷಗಳೂ ಕಾಣಿಸಿಕೊಳ್ಳುತ್ತವೆ. ‘ಅವರವರ ಸುಖದುಃಖ’ ಎಂಬ ಮಾತಿನ ಪುನರುಕ್ತಿ ಇಂಥವುಗಳಲ್ಲಿ ಒಂದು. ಪುನರುಕ್ತಿಯಲ್ಲಿ ಈ ಮಾತು ತನ್ನ ವ್ಯಂಗ್ಯದ ಹರಿತವನ್ನು ಕಳೆದುಕೊಳ್ಳುತ್ತ ಕೊನೆಗೆ ಕಿರಿಕಿರಿಯಾಗತೊಡಗುತ್ತದೆ. ಹಾಗೆಯೇ ”… ನಮ್ಮದೇ ನಮಗೆ ಹೊರಲಾರದಷ್ಟು ಭಾರವಾಗಿದೆ’ ಎಂದರು, -ಬ್ಯಾಂಕಿನಲ್ಲಿಟ್ಟ ತಮ್ಮ ಹತ್ತು ಸಾವಿರ ರೂಪಾಯಿಯ ಅಸಾಧ್ಯ ಹೊರೆಯನ್ನು ಪಾಪ, ನೆನೆದು” ಎಂಬಂತಹ ಮಾತುಗಳು ಇನ್ನೂ ಹದಗೊಳ್ಳಬೇಕಾಗಿದ್ದ ಕಲೆಗಾರಿಕೆಗೆ ನಿದರ್ಶನಗಳಾಗಿ ಅಲ್ಲಲ್ಲಿ ಕಾಣಿಸುತ್ತವೆ. ಆದರೆ ಇದು ನಯಗಾರಿಕೆಗೆ ಸಂಬಂಧಿಸಿದ ವಿಷಯ.
‘ಪವಾಡಪುರುಷ’ದಲ್ಲಿ ಬಾಗಲೋಡಿಯವರು ಕೊನೆಯ ಆಕಸ್ಮಿಕ ಸತ್ಯಪ್ರಕಾಶದ ಮೂಲಕ ಕಥೆಯ ಅರ್ಥವನ್ನೆಲ್ಲ ಒಮ್ಮೆಲೆ ಸ್ಫೋಟಿಸಿಬಿಡುತ್ತಾರೆ. ಆ ಮೂಲಕ ಅಲ್ಲಿಯವರೆಗಿನ ಓದುಗನ ಆರಾಮಿನ ಸ್ಥಿತಿಯನ್ನು ಕಲಕುತ್ತಾರೆ. ‘ಅವರವರ ಸುಖದುಃಖ’ದಲ್ಲಿ ಅರ್ಥವನ್ನು ಹಂತಹಂತವಾಗಿ ಬಿಚ್ಚುತ್ತ, ಬಿಚ್ಚಿದ್ದನ್ನು ದೃಢಪಡಿಸುತ್ತ ಹೋಗುತ್ತಾರೆ. ಎರಡರದೂ ಒಂದೊಂದು ರೀತಿಯ ಸ್ವಾರಸ್ಯ, ಔಚಿತ್ಯ.
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)