ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ

Date:

Advertisements
ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ತುಂಬಿದ ಹುಣ್ಣಿಮೆಯ ಬೆಳದಿಂಗಳಿನ ಇರುಳು. ಶಾಂತತೆ ಸೌಂದರ್ಯದೊಡನೆ ಬೆರೆತು ಬಹು ಸುಖಕರವಾಗಿತ್ತು. ಸೃಷ್ಟಿಯ ಆ ಚೆಲುವಿಗೆ, ಆ ಶಾಂತತೆಗೆ ಹೊಯಿಕೈಯಾಗಿ ಕಾವೇರಿ ನದಿ ಮೆಲುದನಿಯೊಡನೆ ಹರಿಯುತ್ತಿತ್ತು.

ತಿರುಮಕೂಡಲಿನ ಬಳಿ ನಾಲ್ಕು ಜೋಡೆತ್ತಿನ ಗಾಡಿಗಳು ಒಂದರ ಹಿಂದೆ ಒಂದು ಬರುತ್ತಿದ್ದುವು. ಗಾಡಿ ಹೊಡೆಯುವವರು ತಿಂಗಳಿನ ಸೊಗಸಿಗೆ ಜೋಂಪಿಸುತ್ತಿದ್ದರು. ಎತ್ತುಗಳು ಅಭ್ಯಾಸಬಲದಿಂದ ದಾರಿಹಿಡಿದು ಹೋಗುತ್ತಿದ್ದವು. ಅವುಗಳ ಕೊರಳ ಗಂಟೆಗಳು ಕಿಣಿಕಿಣಿ ದನಿಗೈಯುತ್ತಿದ್ದುವು. ಗಾಡಿಗಳ ಹಿಂದೆ ಸ್ವಲ್ಪ ದೂರದಲ್ಲಿ ಇಬ್ಬರು-ಮೂವರಾಗಿ ಕೆಲವು ಜನ ನಡೆದು ಬರುತ್ತಿದ್ದರು.

ಗಾಡಿಗಳು ಅಮಲ್ದಾರರಿಗೆ ಸೇರಿದವು. ಅವರು ಮುಂದಿನ ಗಾಡಿಯಲ್ಲಿ ಮಲಗಿ ಅರ್ಧನಿದ್ರೆಯಲ್ಲಿದ್ದರು. ಜಮಾಬಂದಿಯ ಗಲಾಟೆ ಆ ಸಾಯಂಕಾಲಕ್ಕೇ ಮುಗಿದದ್ದರಿಂದ ಅವರ ಮನಸ್ಸು ತಿಳಿಯಾಗಿತ್ತು. ಅಮಲ್ದಾರರೂ ನೌಕರರೂ ಕೆರೆಹಳ್ಳಿಯಿಂದ ಮಬ್ಬಿನ ಹೊತ್ತಿಗೆ ಹೊರಟವರು ಸುಮಾರು ರಾತ್ರಿಯ ವೇಳೆಗೆ ತಿರುಮಕೂಡಲಿನ ಬಳಿಗೆ ಬಂದಿದ್ದರು. ಯಜಮಾನರು ಗಾಡಿಯಲ್ಲಿದ್ದದ್ದರಿಂದ ಕಛೇರಿಯ ನೌಕರರು ಮರ್ಯಾದೆಯ ಔಚಿತ್ಯವರಿತು ಗಾಡಿಗಳ ಹಿಂದೆ ನಡೆದು ಬರುತ್ತಿದ್ದರು. ಅಮಲ್ದಾರರು ಕುಳಿತ ಒಂದು ಗಾಡಿಯನ್ನುಳಿದು ಮೂರು ಗಾಡಿಗಳೂ ಸಾಮಾನಿನವು.

Advertisements

ಹೊಳೆ ದಾಟುವುದೇನೂ ಕಷ್ಟದ ಕೆಲಸವಲ್ಲ. ಆ ಮಂಡಿಯುದ್ದದ ನೀರಿನಲ್ಲಿ ಕಾಲ್ನಡೆಗಳು ನಿರಾಯಾಸವಾಗಿ ಹಾದು ಬರಬಹುದು. ದಾಟಿ ಮುಂದಿನ ದಡವನ್ನು ಸೇರಿದರೆ ನರಸೀಪುರವನ್ನು ಸೇರಿದಂತೆಯೇ. ಆ ದಡದಿಂದ ಊರಿಗೆ ಸುಮಾರು ಒಂದು ಒಂದೂವರೆ ಫರ್ಲಾಂಗಿನ ದೂರ; ಹೆಚ್ಚೆಂದರೆ ಆಳುಕೂಗಿನ ಅಳತೆ.

ಗಾಡಿಗಳು ಹೊಳೆಯನ್ನು ಸರಾಗವಾಗಿ ದಾಟಿದುವು. ಹಿಂದೆ ಬರುತ್ತಿದ್ದ ನೌಕರರೂ ಅಲ್ಲೊಬ್ಬ ಇಲ್ಲೊಬ್ಬನಂತೆ ದಾಟುತ್ತಿದ್ದರು. ಗಾಡಿಗಳಿಗೂ ಅವರಿಗೂ ಸುಮಾರು ಅರ್ಧ ಫರ್ಲಾಂಗಿನ ದೂರವಿತ್ತು. ಜಮಾಬಂದಿಯ ಜಂಜಡದಿಂದ ಅವರ ತಲೆಗೆ ಹಿಡಿದಿದ್ದ ಜಡ್ಡು ಈ ಬೆಳದಿಂಗಳಿನ ಸೊಗಸಿನಲ್ಲಿ ಮಾಯವಾಗಿತ್ತು. ಹುಡುಗರು ಆಟವಾಡುವಂತೆ ಹೊಳೆಯ ಮಧ್ಯದಲ್ಲಿ ಅಲ್ಲಲ್ಲಿ ನಿಂತು ನೀರು ಮುಕ್ಕುಳಿಸುತ್ತ ನಿಧಾನವಾಗಿ ಸಾಗಿದ್ದರು.

ವಾಸುವೂ ಆ ಬೆಳುದಿಂಗಳಿಗೆ ಸೋತಿದ್ದ. ಎಲ್ಲರಿಗಿಂತ ಸ್ವಲ್ಪ ಮುಂದಾಗಿ- ಗಾಡಿಗಳಿಗೆ ಕೊಂಚ ಹಿಂದೆ- ಅವನು ಬರುತ್ತಿದ್ದ. ಕಛೇರಿಯವರು ಇನ್ನೂ ಕೆಲವರು ಹೊಳೆಯಲ್ಲಿರುವಾಗಲೇ ಅವನು ಈಚೆಯ ದಡವನ್ನು ಸೇರಿದ್ದ. ಊರಿನ ಕಡೆಯಿಂದ ನಾಯಿ ಬಗುಳುವ ಶಬ್ದ ಕೂಡ ಕೇಳುತ್ತಿತ್ತು.

ದಡವನ್ನು ಸೇರಿದ ಕೂಡಲೇ ಅದರ ಪಕ್ಕದಲ್ಲಿ ದೊಡ್ಡ ದೊಡ್ಡ ಮರಗಳು; ಪುರಾತನ ಕಾಲದ ಬಿಳಿಲು ಬಿಟ್ಟ ಆಲದ ಮರಗಳು, ದಟ್ಟವಾಗಿ ಬೆಳೆದು ಹಬ್ಬಿದ್ದ ಕೊಂಬೆಗಳಲ್ಲಿ ಕೆಲವು ಕಮಾನಿನಂತೆ ಬಾಗಿ ದಾರಿಯ ಮೇಲೆ ಹರಡಿಕೊಂಡಿದ್ದುವು. ಒಂದು ಕಡೆಯ ರೆಂಬೆಗಳು ಹಾಗೆ ಹಬ್ಬಿ ಹೊಳೆಯ ಅಂಚಿನ ಮೇಲೂ ಕೈಚಾಚಿದ್ದುವು.

ಆ ಮರಗಳನ್ನು ಹಾದು ಮುಂದೆ ಹೋಗಬೇಕು. ಗಾಡಿಗಳು ಸ್ವಲ್ಪ ಮುಂದಾಗಿ ಸಾಗಿದ್ದುವು. ವಾಸು ಆ ಮರದಡಿಗೆ ಬಂದ. ಅವನಿಗೆ ಸುಮಾರು ಆರೇಳು ಮಾರು ದೂರದಲ್ಲಿ ಮರದ ಕೆಳಗೆ ಯಾರೋ ಹೆಂಗಸು ನಿಂತಿದ್ದಳು. ಮೇಲೆ ಕೊಂಬೆಗಳು ಹರಡಿಕೊಂಡಿದ್ದರಿಂದ ಆ ಸ್ಥಳ ಕತ್ತಲಾಗಿದ್ದು ಅಷ್ಟು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.

ಇವನು ಮುಖವನ್ನು ಆ ಕಡೆ ತಿರುಗಿಸಿದಾಗ ಯಾರೋ ನಿಂತಿರುವಂತಿರುವುದನ್ನು ಕಂಡು ತಲೆ ಬಗ್ಗಿಸಿಕೊಂಡ. ತಾನು ಬರುವುದನ್ನು ಕಂಡು ಯಾರೋ ಸಂಕೋಚದಿಂದ ಎದ್ದು ನಿಂತಿರಬಹುದೆಂದು ಭಾವಿಸಿ ಪುನಃ ಅತ್ತ ನೋಡದೆ ನಾಲ್ಕು ಹೆಜ್ಜೆ ಮುಂದೆ ಹಾಕಿದ.

ಒಂದು ಕ್ಷಣದಲ್ಲಿ ಮರದ ಎಲೆಗಳು ಮರ್ಮರನೆ ಅಲ್ಲಾಡಿದಂತಾಯಿತು; ಯಾರೋ ಕಿಲಕಿಲನೆ ನಕ್ಕಂತಾಯಿತು; ಏನೋ ಧೊಪ್ಪನೆ ನೀರಿನಲ್ಲಿ ಬಿದ್ದಹಾಗಾಯಿತು. ವಾಸು ಸರ್‍ರನೆ ತಿರುಗಿ ನೋಡಿದ. ಮರದ ಕೆಳಗೆ ನಿಂತಿದ್ದ ಹೆಂಗಸು ಅಲ್ಲೆಲ್ಲೂ ಕಾಣಿಸಲಿಲ್ಲ. ನೀರಿನ ಮೇಲೆ ಬಾಗಿಕೊಂಡಿದ್ದ ಕೊಂಬೆಗಳು ಮಾತ್ರ ಅಲ್ಲಾಡುತ್ತಿದ್ದವು. ಅವನ ಮೈ ಝಲ್ಲೆಂದು ಬೆವತುಹೋಯಿತು.

2

ವೆಂಕಟರಮಣಯ್ಯನವರು ನರಸೀಪುರದಲ್ಲಿ ಗಣ್ಯರಾದ ಬ್ರಾಹ್ಮಣರು. ಅವರ ಸದಾಚಾರನಿಷ್ಠೆಯೂ ಸರಳ ಜೀವನವೂ ಊರಿನಲ್ಲಿ ಅವರಿಗೆ ಮರ್ಯಾದೆಯನ್ನು ತಂದಿದ್ದುವು. ಮುಕ್ಕಾಲುಪಾಲು ಜನ ಅವರಿಗೆ ಬೇಕಾದವರಾಗಿ, ಸಮಯದಲ್ಲಿ ಆಗುತ್ತಿದ್ದರು.

20181202 144607

ಅವರಿಗಿದ್ದವನು ಒಬ್ಬನೇ ಮಗ- ವಾಸು. ಅವನಲ್ಲದೆ ವೆಂಕಟರಮಣಯ್ಯನವರ ಹೊಟ್ಟೆಯಲ್ಲಿ ಹೆಣ್ಣೂ ಇಲ್ಲ; ಗಂಡೂ ಇಲ್ಲ. ತಮಗಿರುವ ಜೀವವೆಲ್ಲ ವಾಸು ಒಬ್ಬನಲ್ಲೇ ಎಂದು ಆ ಗಂಡ ಹೆಂಡಿರು ತಿಳಿದಿದ್ದರು. ಅತಿಶಯ ಮಮತೆಯಿಂದ, ಆದರದಿಂದ ಮಗನನ್ನು ಸಾಕಿದ್ದರು. ಈಚೆಗೆ ತಮಗೆ ಪಿಂಚನ್ ಆದ ಮೇಲೆ ಅಮಲ್ದಾರರಿಗೆ ಹೇಳಿಕೊಂಡು ಕಛೇರಿಯಲ್ಲಿ ಒಂದು ಗುಮಾಸ್ತೆಯ ಕೆಲಸಕ್ಕೆ ಮಗನನ್ನು ಸೇರಿಸಿದ್ದರು. ಹೋದ ವರುಷ ಮೈಸೂರಿನ ಯೋಗ್ಯ ಸಂಸಾರದವರೊಬ್ಬರ ಕಡೆಯಿಂದ ಹೆಣ್ಣು ತಂದು ಮಗನಿಗೆ ವಿಜೃಂಭಣೆಯಿಂದ ಮದುವೆಯನ್ನೂ ಮಾಡಿದ್ದರು. ಸೊಸೆ ಇನ್ನೂ ಮನೆಗೆ ಬಂದಿರಲಿಲ್ಲ.

ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ

ಈಗ ಒಂದೆರಡು ದಿನಗಳಿಂದ ವೆಂಕಟರಮಣಯ್ಯನವರ ಮನಸ್ಸು ಸ್ವಸ್ಥವಾಗಿರಲಿಲ್ಲ. ವಾಸುವಿನ ಮೇಲೆ ಅವರ ದೃಷ್ಟಿ ಬಿದ್ದಿತ್ತು. “ಹುಡುಗ ಏಕೋ ಕಂಗೆಟ್ಟಿದ್ದಾನೆ” ಎಂದುಕೊಂಡು ದೇಹಸ್ಥಿತಿ ವಿಚಾರಿಸಿ ಔಷಧಿ ತರಿಸಿಕೊಟ್ಟರು. ವಾಸು ಏನನ್ನೂ ಹೇಳದಾದ. ಜ್ವರವಿಲ್ಲ, ಚಳಿಯಿಲ್ಲ, ನೆಗಡಿಯಿಲ್ಲ, ಕೆಮ್ಮಿಲ್ಲ. ಆದರೂ ದಿನದಿನಕ್ಕೆ ಹುಡುಗ ಹಲ್ಲಿಯ ಹಾಗೆ ಸವೆಯುತ್ತಿದ್ದಾನೆ. ಕಾರಣವರಿಯದೆ ವೆಂಕಟರಮಣಯ್ಯನವರು ಚಿಂತೆಗೊಳಗಾದರು. ಇವೆಲ್ಲದರ ಜೊತೆಗೆ ಅವರ ಯೋಚನೆ ಹೆಚ್ಚಾಗುವ ಒಂದು ವಿಶೇಷ ಸಂಗತಿ ಅನುಭವಕ್ಕೆ ಬಂದಿತು.

ಒಂದು ದಿನ ಬೆಳಗ್ಗೆ ಯಾವುದೋ ಮನೆಗೆಲಸದ ಸಾಮಾನು ಬೇಕಾಗಿ ಅದು ವಾಸುವಿನ ಕೊಠಡಿಯಲ್ಲಿರಬಹುದೆಂಬ ನಿರೀಕ್ಷೆಯಿಂದ ಅಲ್ಲಿಗೆ ಹೋದರು. ಏಳೆಂಟು ದಿನಗಳಿಂದ ಅವನ ಕೊಠಡಿಗೆ ಹೋಗಿರಲಿಲ್ಲ. ಒಳಕ್ಕೆ ಕಾಲಿಟ್ಟ ಕೂಡಲೆ ಅವರ ಮನಸ್ಸು ಏನೋ ಒಂದು ಬಗೆಯಾಯಿತು. ಸುತ್ತಲೂ ನೋಡಿ ಭ್ರಾಂತರಾದರು. ಗೋಡೆಯ ಮೇಲೆಲ್ಲ ಗಂಧದಲ್ಲಿ ಕೈ ಅದ್ದಿ ಬಡಿದ ಚಟ್ಟಿನ ಗುರುತು; ನೆಲದ ಮೇಲೆ ಸೀಳಿಹಾಕಿದ ವೀಳೆಯದೆಲೆಯ ನಾರು; ಕೊಠಡಿಯಲ್ಲೆಲ್ಲ ಅತಿಯಾದ ಸುವಾಸನೆ. ವೆಂಕಟರಮಣಯ್ಯನವರಿಗೆ ಅರ್ಥವಾಗಲಿಲ್ಲ. ಒಂದು ಕ್ಷಣ ಶೂನ್ಯಮನಸ್ಸಿನಲ್ಲಿ ನಿಂತು ನೋಡಿದರು. ಇದ್ದಕ್ಕಿದ್ದ ಹಾಗೆ ಏನೋ ಹೊಳೆದಂತಾಯಿತು. ಬಾಗಿಲೆಳೆದುಕೊಂಡು ಈಚೆಗೆ ಬಂದುಬಿಟ್ಟರು.

ಆ ಸಂಜೆ ವಾಸು ಕಛೇರಿಯಿಂದ ಮನೆಗೆ ಬಂದಾಗ ವೆಂಕಟರಮಣಯ್ಯನವರು ಅವನನ್ನು ಎಂದಿನಂತೆ ಮಾತಾಡಿಸಲಿಲ್ಲ. ದೇಹಸ್ಥಿತಿ ಹೇಗಿರುವುದೆಂದು ಕೂಡ ಕೇಳಲಿಲ್ಲ. ರಾತ್ರಿ ಊಟವಾದ ಮೇಲೆ ವಾಸು ತನ್ನ ಕೊಠಡಿಗೆ ಮಲಗಿಕೊಳ್ಳುವುದಕ್ಕೆ ಹೋದಮೇಲೆ ವೆಂಕಟರಮಣಯ್ಯನವರು ಮಗನ ಕೊಠಡಿಗೆ ಅಡ್ಡವಾಗಿ ಹಾಸಿಕೊಂಡರು. ಸದ್ದಾಗದಂತೆ ಬಾಗಿಲಿಗೆ ಹೊರಗಡೆಯಿಂದ ಒಂದು ಬೀಗವನ್ನೂ ಹಾಕಿಬಿಟ್ಟರು,

ಬೆಳಗ್ಗೆ ಎಲ್ಲರಿಗೆ ಮುಂಚೆಯೇ ಎದ್ದು ಬೀಗ ತೆಗೆದುಬಿಟ್ಟರು. ವಾಸು ಹೊರಗೆ ಬಂದಮೇಲೆ ಅವನಿಗೆ ಕಾಣದಂತೆ ಕೊಠಡಿಗೆ ಹೋದರು. ನೋಡಿ ಅಪ್ರತಿಭರಾದರು. ಹಿಂದಿನ ದಿವಸದಂತೆಯೇ! ಗೋಡೆಯ ಮೇಲೆ ಅಲ್ಲಲ್ಲಿ ಗಂಧದ ಹೊಸ ಚಿಟ್ಟು ಬಡಿದಿದೆ; ವೀಳೆಯದೆಲೆಯ ಸೀಳುಗಳು ಮಗನ ಹಾಸುಗೆಯ ಬಳಿ ಬಿದ್ದಿವೆ; ಪುನುಗಿನ ಅತಿ ಸುವಾಸನೆ ಸುತ್ತಿಕೊಂಡಿದೆ.

3

ದೇವೀ ನರಸಯ್ಯ ನರಸೀಪುರದಲ್ಲಿಯೇ ಹುಟ್ಟಿ ಬೆಳೆದವನು; ಹೆಸರಾದ ಮಾಂತ್ರಿಕ. ಬಲಿ, ಮಾಟ, ಮಾರಣ ಮೊದಲಾದವುಗಳಲ್ಲಿ ಎತ್ತಿದ ಕೈ. ಅವನ ಕೀರ್ತಿ ಸುತ್ತ ಹಳ್ಳಿಗಳಲ್ಲೆಲ್ಲಾ ಪಸರಿಸಿತ್ತು. ಹಳ್ಳಿಯವರಿಗೆ ಅವನನ್ನು ಕಂಡರೆ ಒಂದು ವಿಧವಾದ ಭಯಮಿಶ್ರ ಭಕ್ತಿಯೂ ಸ್ಥಳದವರಿಗೆ ಗೌರವವೂ ಇದ್ದುವು.

ಇದನ್ನು ಓದಿದ್ದೀರಾ?: ಮೇವುಂಡಿ ಮಲ್ಲಾರಿ ಅವರ ಕತೆ | ಸುರಸುಂದರಿ

ನರಸಯ್ಯ ಮಾಡದ ಕೆಲಸವಿರಲಿಲ್ಲ; ಅವನಿಗೆ ಸಿದ್ದಿಸದ ಕ್ರಿಯೆಯಿರಲಿಲ್ಲ. ಊರಿನವರು ಸಾಮಾನ್ಯವಾಗಿ ಅವನನ್ನು ಬೆಳಗಿನ ಹೊತ್ತು ಕಾಣುತ್ತಿರಲಿಲ್ಲ. ವೆಂಕಟರಮಣಯ್ಯನವರೂ ಅವನನ್ನು ನೋಡಿದ್ದರು. ಅವನ ಶಕ್ತಿ ಸಾಮರ್ಥ್ಯಗಳ ವಿಚಾರವಾಗಿ ಅವರಿವರಿಂದ ಬೇಕಾದಷ್ಟು ಕೇಳಿದ್ದರು.

ಒಂದು ಮಧ್ಯಾಹ್ನ ಅವನನ್ನು ಕಂಡು ವೆಂಕಟರಮಣಯ್ಯನವರು ಮಾತಾಡಿದರು-

“ಹಾಗಾದರೆ ನನ್ನ ಸಂಶಯ ನಿಜವೆ?”

”ನಿಶ್ಚಯ ಸ್ವಾಮಿ.”

“ನೋಡದೆ ಹೇಗೆ ಹೇಳುತ್ತಿ?”

”ಹೇಳಬಹುದು.”

”ಇಲ್ಲಾ, ಹುಡುಗನಲ್ಲಿ ಇನ್ನೇನಾದರೂ ದುರ್ಗುಣ…?”

”ಅಂಥಾದ್ದೇನೂ ಇಲ್ಲ. ಸ್ವಾಮಿ-ನಾನು ಹೇಳುತೀನಿ ಇದು ಅದರ ಚೇಷ್ಟೆಯೇ.”

ವಾಸುವಿಗೆ ಮೋಹಿನಿ ಹಿಡಿದಿದೆ ಎಂದು ನರಸಯ್ಯ ಅಭಿಪ್ರಾಯ ಪಟ್ಟಾಗ ವೆಂಕಟರಮಣಯ್ಯನವರ ಎದೆ ಗುಂಡಿನೇಟಿಗೆ ಎದುರು ಬಿದ್ದಂತಾಯಿತು. ಜಾತಿಯಲ್ಲಿ ಕಡಿಮೆಯವನಾದ ನರಸಯ್ಯನ ಕಾಲು ಹಿಡಿದುಕೊಳ್ಳುವುದಕ್ಕೆ ಹೋದರು. ನರಸಯ್ಯ ವೆಂಕಟರಮಣಯ್ಯನವರಿಗೆ ಸಮಾಧಾನ ಧೈರ್ಯಗಳನ್ನು ಹೇಳಿ ತಾನು ಆ ಸಂಜೆಯೇ ಮನೆಗೆ ಬಂದು ವಾಸುವನ್ನು ನೋಡಿ ಮುಂದಿನ ಏರ್ಪಾಡು ಮಾಡುತ್ತೇನೆಂದು ಮಾತು ಕೊಟ್ಟು ವೆಂಕಟರಮಣಯ್ಯನವರನ್ನು ಕಳಿಸಿದ.

ಸಾಯಂಕಾಲ ವಾಸು ಮನೆಗೆ ಬಂದಾಗ ತಾಯಿತಂದೆಗಳಿಗೆ ಅವನನ್ನು ನೋಡಿ ಎದೆ ನೊಂದುಹೋಯಿತು. ಕೈಗೆ ಬಂದ ಹುಡುಗ; ಹೆಂಡತಿ ಮನೆಗೆ ಬರುವ ಕಾಲದಲ್ಲಿ ಈ ಗತಿಯೆ? ಹದಿನೈದು ದಿನಗಳಿಂದ ಎಷ್ಟು ಹೀರಿಹೋಗಿದ್ದಾನೆ? ಹಲ್ಲಿಯಾದರೂ ವಾಸಿ ಎಂದು ಮುದುಕ ಗಂಡ-ಹೆಂಡಿರು ಮಗನಿಗೆ ಕಾಣದಂತೆ ಕಂಬನಿಯನ್ನು ಚಿಮ್ಮಿದರು.

ಇದನ್ನು ಓದಿದ್ದೀರಾ?: ‘ಹೊಯಿಸಳ’ ಅವರ ಕತೆ | ಭಯನಿವಾರಣೆ

ಮಬ್ಬಿನ ಹೊತ್ತಿಗೇ ದೇವೀ ನರಸಯ್ಯ ವೆಂಕಟರಮಣಯ್ಯನವರ ಮನೆಗೆ ಬಂದ. ಬಂದವನು ವಾಸುವನ್ನು ಕಂಡು ಅವನ ಕೊಠಡಿಗೆ ಹೋದ. ಒಳಗೆ ಬಾಗಿಲು ಮುಚ್ಚಿತ್ತು. ಅರ್ಧ ಗಂಟೆಯ ಮೇಲೆ ಬಾಗಿಲು ತೆಗೆಯಿತು. ಏನೋ ಬಹಳ ಮಾತಾಡಿರಬೇಕು ಇಬ್ಬರೂ. ವೆಂಕಟರಮಣಯ್ಯನವರಿಗೆ ಅದನ್ನು ಕೇಳುವ ಕುತೂಹಲ. ನರಸಯ್ಯ ಇದನ್ನು ಅವರ ಮುಖದಲ್ಲೇ ತಿಳಿದುಕೊಂಡು- “ಸ್ವಾಮಿ, ನೀವೇನೂ ಯೋಚನೆ ಮಾಡಬೇಕಾಗಿಲ್ಲ; ವಾಸಪ್ಪನವರಿಗೆ ಕೆಲವು ಗುಪ್ತ ವಿಚಾರಗಳನ್ನು ಹೇಳಿಕೊಟ್ಟಿದ್ದೇನೆ. ಅದಕ್ಕೆ ಮಾಡಬೇಕಾದ ‘ಹಿಕ್ಮತ್ತು’ ಮಾಡಿದೇನೆ. ನಾನು ನಾಳೆ ಇದೇ ಹೊತ್ತಿಗೆ ಬರುತ್ತೇನೆ” ಎಂದು ಹೇಳಿ ಹೊರಟುಹೋದ.

ಭಾರತೀಪ್ರಿಯ ಒಂದು ಹಳೆಯ ಕತೆ1

4

ಅರ್ಧ ರಾತ್ರಿಯ ಸುಮಾರು; ಕಲ್ಲು-ನೀರು ಒಂದಾಗುವ ವೇಳೆ. ವಾಸುವೊಬ್ಬನೇ ತನ್ನ ಕೊಠಡಿಯಲ್ಲಿ ಮಲಗಿದಾನೆ. ಹೊರಗಡೆಯಿಂದ ಬಾಗಿಲಿಗೆ ಬೀಗ ಹಾಕಿಕೊಂಡು ವೆಂಕಟರಮಣಯ್ಯನವರು ಬಾಗಿಲ ಹತ್ತಿರವೇ ಮಲಗಿದಾರೆ.

ವಾಸು ಒಂದು ಬಗೆಯ ಅರ್ಧನಿದ್ರೆ ಅರ್ಧ ಎಚ್ಚರಗಳ ಸ್ಥಿತಿಯಲ್ಲಿದ್ದಾನೆ. ಆಗ ಕೊಠಡಿಯೊಳಗೆ ಯಾರೋ ಸುಳಿದ ಹಾಗಾಯಿತು; ಕಾಲುಸರದ ಸದ್ದಾಯಿತು; ಗಂಧದ ವಾಸನೆ ಹರಡಿ ವಾಸುವನ್ನು ಸೋಕಿತು. ಆ ಬರವಿನ, ಸದ್ದಿನ ಸುವಾಸನೆಯ ಪರಿಚಯ ತನಗೆ ಇರುವಂತೆ ಅವನ ಭಾವನೆ. ಅವನ ಮುಖದ ಮೇಲೆ ತಿಳಿನಗುವಿನ ಒಂದು ಅಲೆ ಸುಳಿಯಿತು.

ಒಳಗೆ ಬಂದವಳು ಹುಡುಗಿ, ಹದಿನೇಳರ ಪ್ರಾಯವಿರಬಹುದು. ಮಲ್ಲಿಗೆಯ ಹೂವಿನಂಥ ಬಿಳಿಯ ಪತ್ತಲ; ಸುರುಳಿ ಸುರುಳಿಯಾಗಿ ನಿತಂಬಗಳ ಮೇಲೆ ನಲಿಯುತ್ತಿದ್ದ ಕಪ್ಪು ಕೂದಲಿನ ರಾಶಿ; ವಿಶಾಲವಾದ ಹಣೆ; ತೇಜೋಯುಕ್ತವಾಗಿ ನೀಲವಾಗಿದ್ದ ಕಣ್ಣುಗಳು; ನಯವಾದ ಮಾಟವಾದ ಮೂಗು; ಅದರ ಮೇಲೆ ಕಣ್ಣು ಕೋರಯಿಸುವ ಒಂದು ವಜ್ರದ ಮೂಗುತಿ; ಕಿವಿಯಲ್ಲಿ ಅಂಥವೇ ಎರಡು ಓಲೆಗಳು; ಅರಳಿದ ರೋಜಾ ಹೂವಿನಂಥ ಕೆನ್ನೆಗಳು; ರಾಗರಂಜಿತವಾದ ಮೃದುವಾದ ತುಟಿಗಳು; ಬಳೆಗಳಿಂದ ತುಂಬಿದ, ಉನ್ನತವಾಗಿ ಹಿಡಿದಿದ್ದ ಕೈಯಲ್ಲಿ ನಿಗಿನಿಗಿಸುವ ಬೆಳ್ಳಿಯ ತಟ್ಟೆ; ಅದರಲ್ಲಿ ಅಣಿಮಾಡಿಟ್ಟ ವೀಳ್ಯ ಸಾಮಗ್ರಿ, ಗಂಧದ ಬಟ್ಟಲು; ಅಸಾಧಾರಣ ಲಾವಣ್ಯವತಿ.

ಬಂದವಳು ಒಂದು ಕ್ಷಣಕಾಲ ವಾಸುವನ್ನು ದಿಟ್ಟಿಸಿ ನೋಡಿದಳು. ನೋಡಿ, ನಸುನಕ್ಕು, ಎರಡು ಹೆಜ್ಜೆ ಮುಂದಿಟ್ಟಳು. ಅವಳು ತನ್ನ ಹಾಸುಗೆಯ ಮೇಲೆ ಬಂದು ಕುಳಿತಂತೆ ವಾಸುವಿಗೆ ಬೋಧೆಯಾಯಿತು. ಯಂತ್ರದಂತೆ ಸರ್‍ರನೆ ಪಕ್ಕಕ್ಕೆ ಹೊರಳಿದ. ಆಗ ಅವನ ಕೈ ಅನಪೇಕ್ಷಿತವಾಗಿ ಅವಳ ಬೆನ್ನಿಗೆ ಸೋಕಿತು. ಅವಳು ಪೂರ್ಣವಾಗಿ ಅವನ ಕಡೆ ತಿರುಗಿ, ಬಾಗಿ ಅವನ ಕೈಯನ್ನು ತೆಗೆದು ತನ್ನ ಕೆನ್ನೆಯ ಮೇಲಿಟ್ಟುಕೊಂಡಳು. ವಾಸು ಹಾಗೇ ಅವಳ ಮುಖವನ್ನು ಎರಡು ಕೈಗಳಿಂದಲೂ ಹಿಡಿದು ತನ್ನೆಡೆಗೆ ಎಳೆದುಕೊಂಡ. ಆಗ ಅವನ ನಿದ್ದೆಯ ಭಾವ ಇಳಿದುಹೋಯಿತು. ಮನಸ್ಸಿನ ಮೇಲೆ ಯಾವುದೋ ನೆನಪು ಒತ್ತಿತು. ಕೈ ಎಳೆದುಕೊಂಡು ಹಾಸುಗೆಯ ಮೇಲೆ ಎದ್ದು ಕುಳಿತ.

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

ಅವಳು ಮೆಲ್ಲನೆ ಅಪೂರ್ವವಾದ ಅಲೌಕಿಕವಾದ ಸಣ್ಣ ದನಿಯಲ್ಲಿ- ‘ಯಾಕೆ ?’ ಎಂದಂತಾಯಿತು. ವಾಸು ಮನಸ್ಸಿನಲ್ಲಿದ್ದುದನ್ನು ಪ್ರಯತ್ನಿಸಿ ಉಜ್ವಲಗೊಳಿಸುತ್ತ-

“ದಿನಾಗಲೂ ಏನು ನಡೆಯುವುದು ಗೊತ್ತೆ?”

“ಏನು?”

”ನೀನು ಬಂದು ಹೋದ ಮೇಲೆ…”

“ಹೂಂ”

”ನಿನ್ನ ಹಾಗೇ…”

“ಹೂಂ”

”ಬರುತ್ತಾಳೆ.”

“ಆಂ?”

”…”

“ಎಷ್ಟು ಹೊತ್ತಿನಲ್ಲಿ?”

“ಇದೇ ಹೊತ್ತಿನಲ್ಲಿ.”

“ಬಂದು…?”

“ನಿನ್ನ ಹಾಗೇ…”

ಅವಳು ಮಾತಾಡಲಿಲ್ಲ; ಒಂದು ಅದ್ಭುತವಾದ ಭಾವ ಅವಳ ಮುಖದ ಮೇಲೆ ಕ್ಷಣಮಾತ್ರದಲ್ಲಿ ಮೈದೋರಿ ಮಾಯವಾಯಿತು. ಮರ್ಮಭೇದಕವಾದ ಒಂದು ವಿಲಕ್ಷಣ ನಗು ಅವಳ ಮುಖದಲ್ಲಿ ತೋರಿತು. ಕೈ ಬಳೆಗಳನ್ನು ಸಿಂಜಿಸುತ್ತ-

“ನಿಜವಾಗಿ ಹೇಳುತ್ತೀಯಾ?”

“ಸತ್ಯವಾಗಿ…”

“ನಾನು ನಂಬುವುದಿಲ್ಲ.”

”ಹಾಗೆಂದರೆ…?”

“ಇಲ್ಲ- ನಿನ್ನ ಮಾತು ಸುಳ್ಳು!”

“ಸುಳ್ಳು?”

“ಹೌದು ಸುಳ್ಳು!”

“ಹೇಗೆ ಹೇಳುತ್ತಿ?”

“ನನಗೆ ಗೊತ್ತು!”

”…”

”ಇದು ನಿನ್ನ… ನಿನಗೆ ಸೇರಿದ ಯಾರೋ ಒಬ್ಬರ ಯುಕ್ತಿ, ಕಲ್ಪನೆ; ನನ್ನನ್ನು ಮೋಸಮಾಡುವುದಕ್ಕೆ! ನಾ ಬಲ್ಲೆ. ನನ್ನನ್ನು ಬಿಟ್ಟು ಇಲ್ಲಿಗೆ ನಿನ್ನ ಹತ್ತಿರ ಬರುವುದಕ್ಕೆ ಇನ್ನಾರಿಗೆ ಎದೆ?”

ಅವಳ ಮಾತಿನಲ್ಲಿ ತೀಕ್ಷ್ಯತೆಯಿತ್ತು, ಅಧಿಕಾರವಿತ್ತು, ನಿಶ್ಚಲತೆಯಿತ್ತು. ವಾಸು ನಡುಗಿದ. ಪುನಃ ನುಡಿದಳು ಅವಳು-

”ನೀನು ಹೇಳುತ್ತಿರುವುದು ಸುಳ್ಳೆಂದು ಬಲ್ಲೆ; ಆದರೂ ನಿನಗೋಸ್ಕರ ಒಂದು ಕೆಲಸವನ್ನು ಮಾಡುತ್ತೇನೆ, ಏಳು.”

ಇದನ್ನು ಓದಿದ್ದೀರಾ?: ‘ಕ್ಷೀರಸಾಗರ’ ಅವರ ಕತೆ | ನಮ್ಮೂರಿನ ಪಶ್ಚಿಮಕ್ಕೆ

”’ಎಲ್ಲಿಗೆ?”

“ನನ್ನೊಡನೆ ಬಾ.”

“ಹೊರಗೆ?… ಬಾಗಿಲು?”

“ನನ್ನ ಕೈ ಹಿಡಿದುಕೋ.”

“ನಾಲ್ಕು ಬಾಗಿಲುಗಳಿವೆ.”

”ಭಯವಿಲ್ಲ.”

ವಾಸು ಯಂತ್ರದಂತೆ ಎದ್ದು ನಿಂತು ಅವಳು ನೀಡಿದ ಕೈಯನ್ನು ಹಿಡಿದುಕೊಂಡ. ಸ್ಪರ್ಶದಿಂದ ಅವನ ಮೈ ಪುಲಕಿತವಾಗಿ ಮನಸ್ಸು ಒಂದು ಅನಿರ್ವಚನೀಯ ಭಾವದ ವಶವಾಯಿತು. ಅಂತರಿಕ್ಷದಲ್ಲಿ ಹಾರಿದಂತಾಯಿತು. ಮರುಗಳಿಗೆಯೇ ಸುಯ್ಯೆಂದು ತಣ್ಣನೆಯ ಗಾಳಿ ಮೈಮೇಲೆ ಬೀಸಿತು; ಮರದ ಮರ್ಮರ ಶಬ್ದವಾಯಿತು. ಪಕ್ಕದಲ್ಲಿ ನೋಡಿದರೆ ಹೊಳೆ; ಯಾವುದೊ ಗೊತ್ತಿಲ್ಲದ, ಕಣ್ಣು ಕಾಣದ ಪ್ರದೇಶ. ವಾಸುವಿನ ಮೈ ಬೆವತು ನೀರಾಗಿತ್ತು. ಆ ಕಾಡಿನಲ್ಲಿ ನಿಂತು ಅವಾಕ್ಕಾಗಿ ಸುತ್ತ ನೋಡಿದ.

ಅವಳು ಹಿಂದಣಿಂದ ನುಡಿದಂತಾಯಿತು:

”ಅದನ್ನು ಕೀಳು.”

ವಾಸು ನೋಡಿದ. ಮುಂದೆ ನೆಲದ ಮೇಲೆ ಹಬ್ಬಿಕೊಂಡಿದ್ದ ಎಂಥದೋ ಬಳ್ಳಿ. ಬಗ್ಗಿ ಅದನ್ನು ಪ್ರಯತ್ನಪೂರ್ವಕವಾಗಿ ಕಿತ್ತಿದ. ಪುನಃ ಅವಳ ಧ್ವನಿ-

”ಅದನ್ನು ಭದ್ರವಾಗಿ ಹಿಡಿದುಕೋ!”

ಒಂದು ಹಳೆಯ ಕತೆ2 1

ಅವಳ ಮಾತಿನಲ್ಲಿ ಒಂದು ಬಗೆಯ ಖೇದಸೂಚಕ ಧ್ವನಿಯಿತ್ತು. ವಾಸು ಅವಳ ಆಜ್ಞೆಯಂತೆ ಆ ಬಳ್ಳಿಯನ್ನು ಕೈಯಲ್ಲಿ ಹಿಡಿದುಕೊಂಡ. ಮರಳಿ ಹಿಂದಣಿಂದ ನುಡಿದಳು ಅವಳು-

“ಇದು ನಿನ್ನ ಹತ್ತಿರ ಇದ್ದರೆ ನಾನು ಅಥವಾ ನನ್ನಂಥವರು ನಿನ್ನನ್ನು ಸಮೀಪಿಸುವುದಕ್ಕಾಗುವುದಿಲ್ಲ. ಇದರ ಶಕ್ತಿ ಅಂಥದು; ಸುಡುಗಾಡು ಬೇರಿನದು. ಆ ಇನ್ನೊಬ್ಬಳು ನನ್ನ ಹಾಗೇ ಬರುತ್ತಾಳೆ ಎಂದೆಯಲ್ಲ. ಅವಳು ಬಂದಾಗ ಮಾತ್ರ ಈ ಬೇರನ್ನು ಮೈಮೇಲೆ ಇಟ್ಟುಕೋ. ಆಗ ಅವಳಿಗೆ ನಿನ್ನ ಬಳಿ ಬರುವುದಕ್ಕಾಗುವುದಿಲ್ಲ. ಇನ್ನು ಹೊರಡು.”

ಇದನ್ನು ಓದಿದ್ದೀರಾ?: ಟೇಂಗ್ಸೆ ಗೋವಿಂದರಾವ್ ಅವರ ಕತೆ | ಗಂಗೆಯ ಗುತ್ತಿಗೆ

ಗಾಳಿ ಸುಯ್ಯೆಂದಂತಾಯಿತು. ಒಂದು ಕ್ಷಣದಲ್ಲಿ ಏನೋ ಆಯಿತು. ವಾಸು ನೋಡಿದ. ಆ ಕಾಡು, ಹೊಳೆ, ನಿರ್ಜನ ಪ್ರದೇಶ ಒಂದೂ ಕಾಣಿಸಲಿಲ್ಲ. ತಮ್ಮ ಮನೆಯ ಮುಂದೆಯೇ ನಿಂತಿದಾನೆ; ಮೈಮೇಲೆ ಬಟ್ಟೆಯಿಲ್ಲದೆ ನಗ್ನನಾಗಿದ್ದಾನೆ.

”ಅಮ್ಮಾ!” ಎಂದು ಒಂದು ಸಲ ಚೀರಿ ಬಿದ್ದುಬಿಟ್ಟ.

ಸ್ವಲ್ಪ ಹೊತ್ತಿನಲ್ಲೇ ವೆಂಕಟರಮಣಯ್ಯನವರು ಬಾಗಿಲು ತೆಗೆದು ಓಡಿ ಬಂದರು. ಹಾಲು ಚೆಲ್ಲಿದ ಹಾಗೆ ಬೆಳುದಿಂಗಳು; ಬೀದಿಯಲ್ಲಿ ನರಪ್ರಾಣಿಯಿಲ್ಲ; ಮನೆಯ ಮುಂದೆ ಮಗ ನಿರ್ವಾಣವಾಗಿ ಬಿದ್ದಿದ್ದಾನೆ. ‘ಮಗೂ!’ ಎನ್ನುತ್ತ ಅವನ ಕಡೆ ಧಾವಿಸಿದರು. ಪಕ್ಕದ ಜಗುಲಿಯ ಮೇಲೆ ಏನೋ ಸದ್ದಾಯಿತು. ತಿರುಗಿ ನೋಡಿದರು. ಬಿಳಿಯ ಸೀರೆಯನ್ನುಟ್ಟಿದ್ದ ಒಬ್ಬಳು ಹುಡುಗಿ ಜಗುಲಿಯಿಂದ ಧುಮುಕಿ ಓಡಿದಂತಾಯಿತು. ವೆಂಕಟರಮಣಯ್ಯನವರು ಗಡಗಡನೆ ನಡುಗಿದರು.

*

ಮಾರನೆಯ ಸಂಜೆ ತಾನು ಬರುವುದಾಗಿ ಹೇಳಿದ್ದ ಹೊತ್ತಿಗೆ ದೇವೀ ನರಸಯ್ಯ ಬಂದ. ಬಂದವನು ಹಿಂದಿನ ದಿನದಂತೆ ವಾಸುವಿನ ಕೂಡ ಬಹಳ ಹೊತ್ತು ಮಾತಾಡಿದ. ಮನೆಯವರಿಗೆಲ್ಲ ಧೈರ್ಯ ಹೇಳಿ ತಾನು ಹೋಗುವಾಗ ತಂತಿಯಲ್ಲಿ ಬಿಗಿದಿದ್ದ ತಾಯಿತವನ್ನು ವಾಸುವಿನ ಕೊರಳಿಗೆ ಕಟ್ಟಿ ಹೊರಟುಹೋದ.

5

ಅದೇ ರಾತ್ರಿ, ಒಂದು ಗಂಟೆಯ ಮೇಲಾಗಿತ್ತು. ವಾಸು ಹಾಗೇ ಮಲಗಿ ನಿದ್ದೆಯಲ್ಲಿದ್ದಾನೆ. ಕೊಠಡಿಯ ಬಾಗಿಲು ಹೊರಗಡೆಯಿಂದ ಬೀಗ ಹಾಕಿರುವುದು ಹಾಕಿದಂತೆಯೇ ಇದೆ. ಒಯ್ಯನೆ ನರುಗುಂಪು ಸೂಸಿ ಅವಳು ಒಳಗೆ ಸುಳಿದು ಬಂದಳು. ನಗು ಮೊಗ, ಬಳುಕುತ್ತಿದ್ದ ಮೈ, ಕೈಯಲ್ಲಿ ವೀಳೆಯದ ತಟ್ಟೆ. ಬಂದವಳು ಹಿಂದಿನ ದಿವಸಗಳಂತೆ ನೇರವಾಗಿ ಹಾಸುಗೆಯ ಮೇಲೆ ಹೋಗಿ ಕುಳಿತುಕೊಳ್ಳಲಿಲ್ಲ. ಎರಡು ಮಾರು ದೂರದಲ್ಲಿ ನಿಂತು, ಬಳುಕುತ್ತ ನಲಿಯುತ್ತ ಅಪೂರ್ವ ಮನೋಹರವಾಗಿ ನಕ್ಕಳು. ವಾಸು ಆಗಲೇ ಎಚ್ಚರಗೊಂಡಿದ್ದ. ಆ ನಗು, ಆ ನಿಲುವು, ಆ ಬೆಡಗು ಅವನಿಗೆ ಅತ್ಯಂತ ಮನೋಹರವಾಗಿ ತೋರಿದುವು. ಅವಳು ತನ್ನ ಅದೇ ಮೋಹಕವಾದ, ಅಲೌಕಿಕವಾದ, ಲಘುವಾದ ದನಿಯಲ್ಲಿ ನುಡಿದಳು-

“ಕೊರಳಿನಲ್ಲಿರುವುದನ್ನು ತೆಗೆಯಬಾರದೆ?”

ದನಿಯಲ್ಲಿ ಪ್ರಾರ್ಥನೆಯ, ಪ್ರೇಮದ, ದೀನತೆಯ ಭಾವವಿತ್ತು. ವಾಸುವಿನ ಕೈಗಳು ಮೆಲ್ಲನೆ ತನ್ನ ಕೊರಳಿನಲ್ಲಿದ್ದ ತಾಯಿತಿನ ಕಡೆಗೆ ಹೋದುವು. ಮನಸ್ಸಿನಲ್ಲಿ ಏನೋ ಯೋಚನೆ, ಏನೋ ಜ್ಞಾಪಕ; ಆ ಯೋಚನೆ ಜ್ಞಾಪಕಗಳನ್ನು ಕೊಲ್ಲುತ್ತಿದ್ದ ಅವಳ ಸಾನ್ನಿಧ್ಯ, ಸಾಮೀಪ್ಯ. ಪ್ರಯತ್ನಿಸಿ ಪ್ರಯತ್ನಿಸಿ ಕೈಯನ್ನು ಹಿಂದೆ ತೆಗೆದುಬಿಟ್ಟ.

ಮೆಲ್ಲನೆ ಕೇಳಿದಳು ಅವಳು-

“ಯಾಕೆ?”

“ಏನು?”

“ತೆಗೆಯಬಾರದೆ?”

“ಇ…ಲ್ಲ..”

”ಇಲ್ಲ?”

ಒಂದು ಕ್ಷಣ ಮೌನ, ಪುನಃ ಅವಳ ದನಿ-

“ಸ್ವಲ್ಪ ತೆಗೆಯಬಾರದೆ?”

ಆ ದನಿ, ಆ ದೀನತೆ, ಆ ಭಾವ ಅವನನ್ನು ಹಿಂಡುತ್ತಿದ್ದುವು.

”ಸ್ವಲ್ಪ… ಒಂದೇ ಕ್ಷಣ…”

ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ

ಅವಳ ಕಣ್ಣು ನೀರಿನಲ್ಲಿ ತೇಲಿತು. ನಿಮಿಷ ಮಾತ್ರ ಯಾವುದೋ ಭಾವ ಅವಳ ಮುಖ ದೇಹಾದ್ಯಂತವನ್ನೂ ಆಳಿ ಮರೆಯಾಯಿತು. ಮರಳಿ ಬೇಡಿದಳು-

”ನನಗೆ ಮೋಸ ಮಾಡಬೇಡಿ.”

“ಮೋಸ…?”

“ಮೋಸವಲ್ಲದೆ ಏನು?”

”…”

“ನಿಮಗೆ ಸೋತಿದೇನೆ; ಒಂದು ನಿಮಿಷ ತೆಗೆಯಿರಿ.”

”ಆ..ಗು..ವು..ದಿ..ಲ್ಲ.”

“ನನ್ನ ಪ್ರೇಮಕ್ಕೆ ಇದೇ ಪ್ರತಿಫಲವೆ?”

”ನಿನ್ನ ಪ್ರೇ…ಮ…?”

“ಸೆರಗೊಡ್ಡಿ ಬೇಡುತ್ತೇನೆ…”

”ಉ..ಹುಂ..”

”…”

“ಕೈಯಲ್ಲಿ ಹೂಗಳಿವೆ; ಗಂಧವಿದೆ.”

”…”

“ಇವೊತ್ತು ನನ್ನನ್ನು ನೋಡಿ.”

”…”

“ನನ್ನ ಪ್ರೇಮವನ್ನು ನೋಡಿ.”

ವಾಸುವಿನ ಮನಸ್ಸು ಕರಗಿ ನೀರಾಯಿತು. ಆ ಚೆಲುವೆಯನ್ನು ಅಷ್ಟು ನೋಯಿಸುವುದೆ? ಅವಳನ್ನು ಸ್ವೀಕರಿಸುವುದಕ್ಕೆ ಎರಡು ಕೈಗಳನ್ನೂ ಚಾಚಿದ. ಅವಳು ಅಳುತ್ತಿದ್ದಳು, ನಗುತ್ತಿದ್ದಳು, ಮಧುರಳಾಗಿದ್ದಳು, ಮನೋಹರಳಾಗಿದ್ದಳು, ರೂಪಸಿಯಾಗಿದ್ದಳು. ಕೈಚಾಚಿದ್ದನ್ನು ನೋಡಿ-

”ಅದನ್ನು ತೆಗೆಯಿರಿ; ಈ ನಿಮಿಷ ಬರುತ್ತೇನೆ” ಎಂದಳು.

ವಾಸು ಉದ್ವಿಗ್ನನಾಗಿ ಭಾವಮತ್ತನಾಗಿ ತಾಯಿತನ್ನು ಕಿತ್ತು ಹಾಕುವುದಕ್ಕೆ ಕೈಹಾಕಿದ. ಥಟ್ಟನೆ ನಡುಗಿ ವಿಕಟ ಕ್ಷೀಣ ಸ್ವರದಲ್ಲಿ-

“ಇಲ್ಲ ತೆಗೆಯುವುದಿಲ್ಲ” ಎಂದು ಚೀರಿದ. ಹೊರಗೆ ಬಾಗಿಲು ತೆಗೆಯುವಂತೆ ಶಬ್ದವಾಯಿತು. ಆ ಕ್ಷಣ ಅವಳು ಮಾಯವಾಗಿದ್ದಳು.

*

ನಡೆದ ಸಂಗತಿಯೆಲ್ಲಾ ಬೆಳಗ್ಗೆ ದೇವೀ ನರಸಯ್ಯನಿಗೆ ತಿಳಿಯಿತು. ಅವನು ವಾಸುವಿನ ಮುಂದೆ “ಇನ್ನು ಭಯವಿಲ್ಲ ಸ್ವಾಮಿ, ಗೆದ್ದಿರಿ; ಆದರೆ ಆ ಬಡ್ಡೀ ಹೆಣ್ಣು ಇನ್ನೂ ನಾಲೈದು ದಿನ ಹತ್ತಿರ ಬರ್‍ತದೆ; ಹೀಗೇ ಮಾಡಬೇಕು. ಥಳಕಿಗೆ ಬೆರಗಾದೀರಿ” ಎಂದು ಎಚ್ಚರಿಸಿ ಹೊರಟುಹೋದ.

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ನರಸಯ್ಯನ ಮಾತಿನಂತೆಯೇ ಅವಳು ಪ್ರತಿ ರಾತ್ರಿಯೂ ಬರುತ್ತಿದ್ದಳು. ಅತ್ತು ಗೋಳಿಟ್ಟು ಬೇಡಿ ಸಾಕಾಗಿ ಹೊರಟುಹೋಗುತ್ತಿದ್ದಳು. ಕ್ರಮೇಣ ಹಾಗೆ ಬರುವುದೂ ನಿಂತುಹೋಯಿತು. ವಾಸುವೂ ದೇಹಸ್ಥಿತಿಯಲ್ಲಿ ಸ್ವಲ್ಪ ಸ್ವಲ್ಪವಾಗಿ ಚೇತರಿಸಿಕೊಳ್ಳುತ್ತ ಬಂದ. ವೆಂಕಟರಮಣಯ್ಯನವರ ಆನಂದಕ್ಕೆ ಪಾರವೇ ಇಲ್ಲ. ಮೃತ್ಯುವಿನ ಬಾಯಿಗೆ ಸಿಕ್ಕಿದ್ದ ಮಗನನ್ನು ಉದ್ಧಾರ ಮಾಡಿದಕ್ಕಾಗಿ ದೇವೀ ನರಸಯ್ಯನಿಗೆ ಮರ್ಯಾದೆ ಸಲ್ಲಿಸುವುದಕ್ಕೆ ಯೋಚಿಸಿದರು. ಆದರೆ ಅವನು ಯಾವ ಸನ್ಮಾನವನ್ನೂ ಸ್ವೀಕರಿಸಲಿಲ್ಲ.

6

ನಾಲ್ಕು ವರುಷ ತಳ್ಳಿತು.

ಎಲ್ಲ ಸಂಸಾರಗಳಲ್ಲಿಯೂ ನಡೆಯುವಂತೆ ವೆಂಕಟರಮಣಯ್ಯನವರ ಸಂಸಾರದಲ್ಲಿಯೂ ಬದಲಾವಣೆಗಳಾಗಿದ್ದುವು. ವಾಸೂಗೆ ಪ್ರಸ್ತವಾಗಿ ಮೂರು ವರ್ಷಗಳ ಹತ್ತಿರಕ್ಕೆ ಬಂದಿತ್ತು. ಅವನಿಗೆ ಆ ಕಾಲದಲ್ಲೇ ಮೈಸೂರಿಗೆ ವರ್ಗವಾದದ್ದು. ತಂದೆತಾಯಿಗಳಿಗೆ ಮಗ-ಸೊಸೆಯರನ್ನು ಬಿಟ್ಟಿರುವುದಕ್ಕೆ ಇಷ್ಟವಿಲ್ಲದಿದ್ದರೂ ಮೈಸೂರಿನಂಥ ಪಟ್ಟಣವಾಸಕ್ಕೆ ಅವರ ಮನಸ್ಸು ಒಗ್ಗಲಿಲ್ಲ. ಆದ್ದರಿಂದ ನರಸೀಪುರದಲ್ಲಿಯೇ ನಿಂತರು.

ಈಚೆಗೆ ಸುಂದರಮ್ಮ ಮುದ್ದಾದ ಗಂಡು ಕೂಸಿನ ತಾಯಿಯಾಗಿದ್ದಳು. ಬಾಣಂತನಕ್ಕೆ ಅತ್ತೆಯೇ ಬಂದಿದ್ದರು. ಮೊಮ್ಮಗನನ್ನು ಕಂಡ ಅವರ ಸಂತೋಷ ಹೇಳತೀರದು.

ವಾಸು ಸಂಸಾರದಲ್ಲಿ ಸುಖ. ಈ ಸುಖದಲ್ಲಿ, ಇಂಥ ಹೆಂಡತಿಯನ್ನು ಹೊಂದಿದ ಹೆಮ್ಮೆಯಲ್ಲಿ ಕೊರಳಿನಲ್ಲಿದ್ದ ತಾಯಿತದ ಕೊಂಡಿ ಸವೆದು ಎಂದೋ ಬಿದ್ದುಹೋಗಿದ್ದುದು ಅವನ ಗೋಚರಕ್ಕೆ ಬರಲಿಲ್ಲ. ತನಗೆ ಬರುವುದು ಮೂವತ್ತೇ ರೂಪಾಯಿಗಳ ಸಂಬಳವಾದರೂ ಸುಂದರಮ್ಮನಂಥ ಗುಣವಂತೆಯ, ಜಾಣೆಯ, ರೂಪವತಿಯ ಸಂಬಂಧ ಸಾಹಚರ್ಯಗಳಿಂದ ಆ ಸಂಬಳ ಮುನ್ನೂರೇ ಆಗಿತ್ತು. ಅವಳಲ್ಲಿ ಅವನಿಗೆ ಜೀವ; ಅವನಲ್ಲಿ ಅವಳಿಗೆ ಪ್ರಾಣ. ಹೀಗಾಗಿ ಅವರ ಸಂಸಾರ ನಿರಾತಂಕವಾಗಿ ಸಾಗಿತ್ತು.

ಈ ಮಧ್ಯೆ ವೆಂಕಟರಮಣಯ್ಯನವರು ಕಾಯಿಲೆ ಮಲಗಿದರು. ಮೊದಲು ಮೊದಲು ಮಗನಿಗೆ ತಿಳಿಸಿದರೆ ಗಾಬರಿಯಾಗುತ್ತಾನೆಂದು ಅವರು ವಾಸೂಗೆ ಬರೆಯಲೇ ಇಲ್ಲ. ಅಲ್ಲದೆ ಮಾತಾಡಿದ್ದಕ್ಕೆ ಅಲ್ಲಿಂದಿಲ್ಲಿಗೆ ಬಂದು ಹೋಗುವುದು ಸುಲಭವಲ್ಲ. ಕಛೇರಿಯಲ್ಲಿ ರಜ ಸಿಕ್ಕುವುದು ತಾನೆ ಹೇಗೆ? ಹೀಗೆ ಯೋಚಿಸಿ ಅವರು ಸುಮ್ಮನಾಗಿದ್ದರು. ಕೊನೆಗೆ ಹೆಂಡತಿಯ ಒತ್ತಾಯದಿಂದ ಮಗನಿಗೆ ಕಾಗದ ಬರೆದರು.

ಕಾಗದ ವಾಸುವಿನ ಕೈಗೆ ಮಾರನೆಯ ದಿನವೇ ಸೇರಿತು. ನೋಡಿ ಅವನಿಗೆ ಗಾಬರಿಯಾಯಿತು. ಆವೊತ್ತು ಮಧ್ಯಾಹ್ನವೇ ಕಛೇರಿಯಲ್ಲಿ ಹೇಳಿಬಿಟ್ಟು ನಿಂತುನಿಂತಹಾಗೇ ಹೊರಟುಬಿಟ್ಟ.

ವಾಸು ಹತ್ತಿದ್ದ ಬಸ್ಸು ದುರದೃಷ್ಟದಿಂದ ಕೆಟ್ಟುಹೋಗಿ ತಿರುಮಕೂಡಲಿಗೆ ಒಂದು ಮೈಲಿ ದೂರದಲ್ಲಿ ನಿಂತುಹೋಯಿತು. ಏನು ಮಾಡಿದರೂ ಮುಂದೆ ಹೋಗಲಿಲ್ಲ. ಹೆಚ್ಚು ಸಾಮಾನು ತಂದಿದ್ದ ಪ್ರಯಾಣಿಕರು ಅಲ್ಲಿಯೇ ನಿಂತು ರಾತ್ರಿಯ ವೇಳೆಗೆ ಬರುವ ಬಸ್ಸನ್ನು ಎದುರು ನೋಡುತ್ತಿದ್ದರು. ವಾಸುವಿಗೆ ಗಂಟು ಮೂಟೆ ಯಾವುದೂ ಇರಲಿಲ್ಲ. ಒಂದು ದಿನ ನಿಲ್ಲುವುದಕ್ಕೆ ಮಾತ್ರ ಬೇಕಾದ ಬೇಕಾದ ಪಂಚೆ ಚೌಕಗಳು ಕೈಚೀಲದಲ್ಲಿದ್ದವು. ರಾತ್ರಿ ಎಂಟು ಗಂಟೆಗೆ ಮತ್ತೊಂದು ಬಸ್ಸು ಅಲ್ಲಿಗೆ ಬರುವ ನಿರೀಕ್ಷೆಯಿತ್ತು. ಆದರೆ ಒಂದು ಮೈಲಿ ದೂರದಲ್ಲಿದ್ದ ನರಸೀಪುರಕ್ಕೆ ನಡೆದು ಹೋಗುವುದು ಅಸಾಧ್ಯವೇನೂ ಅಲ್ಲ. ಅಲ್ಲದೆ ತಂದೆಯನ್ನು ಬೇಗ ನೋಡಬೇಕೆಂಬ ಕಾಂಕ್ಷೆ. ಆದ್ದರಿಂದ ಹಾಗೇ ನಡೆದು ಹೊರಟುಬಿಟ್ಟ.

ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ

ನಡು ಬೇಸಗೆ; ಹೊಳೆಯಲ್ಲಿ ಮಂಡಿಯುದ್ದದ ಮೇಲೆ ನೀರಿರಲಿಲ್ಲ. ದಾಟುವುದಕ್ಕೇನೂ ಕಷ್ಟವಲ್ಲ. ಇನ್ನೂ ಸಾಯಂಕಾಲ ಏಳು ಗಂಟೆಯ ಸಮಯ; ಸ್ವಲ್ಪ ವೇಗವಾಗಿ ನಡೆದರೆ ಕಾಲು ಗಂಟೆಯ ಹೊತ್ತಿನಲ್ಲಿಯೇ ನರಸೀಪುರವನ್ನು ಸೇರಬಹುದು.

ವಾಸು ಹೊಳೆಯನ್ನು ದಾಟಿ ಆ ಕಡೆಯ ದಡವನ್ನು ಸೇರಿದ. ಸ್ವಲ್ಪ ಸ್ವಲ್ಪ ಬೆಳಕು ಇನ್ನೂ ಇತ್ತು. ಅವಸರವಾಗಿ ನಡೆಯತೊಡಗಿದ. ದಡದ ಪಕ್ಕದಲ್ಲಿ ಅದೇ ಹಳೆಯ ಆಲದ ಮರ. ಮೊದಲಿನಂತೆಯೇ ಹಬ್ಬಿ ಚಾಚಿಕೊಂಡಿತ್ತು. ಅದರ ಕೆಳಗೆ ಬಂದು ಮುಂದೆ ಹೋಗಬೇಕು. ಅಲ್ಲಿ ಬಂದಾಗ ವಾಸುವಿನ ಮನಸ್ಸು ಏನೋ ಒಂದು ಬಗೆಯಾಯಿತು. ಮಸಕು ಮಸಕಾಗಿದ್ದ ನಾಲ್ಕು ವರುಷದ ಹಿಂದಿನ ಅನುಭವ ಮನಸ್ಸಿನಲ್ಲಿ ಮರುಕಳಿಸಿ ಉಜ್ವಲವಾಯಿತು. ಹಿಂದೆ, ಇಲ್ಲೇ ಇದೇ ಮರದ ಕೆಳಗೆ ಏನನ್ನೋ ನೋಡಿದ್ದ. ಈಗ ಪುನಃ ಅಲ್ಲಿ ಯಾರೋ ನಿಂತಿದ್ದಂತೆ ಕಾಣಿಸಿತು. ಮೈನವಿರೆದ್ದು ವಾಸು ಒಂದು ಸಲ ನಡುಗಿದ. ನಡುಗಿ, ಅದು ಮನಸ್ಸಿನ ಭ್ರಮೆಯೋ ಏನೋ ಎಂದು ಕಣ್ಣುಜ್ಜಿಕೊಂಡು ನೋಡಿದ. ಅಲ್ಲ, ಭ್ರಮೆಯಲ್ಲ ಅವಳೇ ಇವಳು! ಅದೇ ನೋಟ, ಅದೇ ನಗು, ಅದೇ ನಿಲುವು, ಅದೇ ಬಿಳಿಯ ಪತ್ತಲ!

ಒಂದು ಹಳೆಯ ಕತೆ3 1

ಕಿಲಕಿಲನೆ ನಕ್ಕಂತಾಯಿತು; ಮೈಮೇಲೆ ಆರತಿ ಎರಚಿದಂತಾಯಿತು; ನೀರಿನಲ್ಲಿ ಧುಡುಂ ಎಂದು ಧುಮುಕಿದಂತಾಯಿತು; ಕೊಂಬೆಗಳು ಮರಮರ ಎಂದ ಹಾಗಾಯಿತು; ಗಾಳಿ ಗೋಳಿನ ದನಿಯಲ್ಲಿ ಬೀಸಿದಂತೆ ತೋರಿತು. ವಾಸುವಿನ ಮೈಯೆಲ್ಲ ಬೆವೆತುಹೋಯಿತು. ಒಂದು ಸಲ ಧೈರ್ಯ ತಂದುಕೊಂಡು ಮತ್ತೆ ಆ ಕಡೆ ತಿರುಗಿ ನೋಡಿದ. ಯಾರೂ ಕಾಣಿಸಲಿಲ್ಲ. ಎಲ್ಲವೂ ಶೂನ್ಯವಾಗಿದ್ದಂತೆ ತೋರಿತು.

ಕಾಲು ಎಳೆದುಕೊಂಡು ಮನೆಗೆ ಬಂದು ಸೇರಿದ. ಕಾಯಿಲೆಯ ತಂದೆಯೊಡನೆ ಏನೇನೋ ಮಾತಾಡಿದ. ಹೇಗೆ ಹೇಗೋ ಊಟ ಮಾಡಿದ. ರಾತ್ರಿ ಮಲಗಿಕೊಂಡ. ಅರ್ಧ ರಾತ್ರಿಯ ಸುಮಾರಿಗೆ ಜ್ವರ ಬಂದಿತು.

*

ವೆಂಕಟರಮಣಯ್ಯನವರು ಮಗನನ್ನು ಕಳೆದುಕೊಂಡು ವರುಷಗಳಾಗಿವೆ. ಆ ಮುದುಕ ಗಂಡ-ಹೆಂಡತಿಯರು ಬದುಕಲಾರದೆ ಬದುಕಿದಾರೆ. ಸುಂದರಮ್ಮ ಹುಚ್ಚಿಯ ಹಾಗಿದ್ದಾಳೆ.

(ಕೃಪೆ: ಮಲ್ಲಿಗೆ ಮಾಸಪತ್ರಿಕೆ; ‘ರುದ್ರವೀಣೆ’, ಶ್ರೀ ಪ್ರಭಾಕರ ಬುಕ್ ಡಿಪೋ, ಕೋಟೆ, ಬೆಂಗಳೂರು, 1947)

ಭಾರತೀಪ್ರಿಯರ ‘ಒಂದು ಹಳೆಯ ಕತೆ’

‘ಮೋಚಿ’ ಕತೆಯ ಮೂಲಕ ದಿವಂಗತ ಭಾರತೀಪ್ರಿಯ (ಎಸ್. ವೆಂಕಟರಾವ್: 1911–1981) ಅವರ ಹೆಸರು ಕನ್ನಡ ಸಣ್ಣಕತೆಗಳ ಪ್ರಪಂಚದಲ್ಲಿ ಸಾಕಷ್ಟು ಪರಿಚಿತವಾಗಿದೆ. ಬಹುಶಃ ಕನ್ನಡ ಸಣ್ಣಕತೆಗಳಲ್ಲಿ ಆನಂದರ ‘ನಾನು ಕೊಂದ ಹುಡುಗಿ’ಯನ್ನು ಬಿಟ್ಟರೆ ‘ಮೋಚಿ’ ಕತೆಯಷ್ಟು ಮಹತ್ವದ ಆಂಥಾಲಜಿಗಳಲ್ಲಿ ಕಾಣಿಸಿಕೊಂಡ ಕತೆ ಇನ್ನೊಂದಿಲ್ಲವೆಂದು ತೋರುತ್ತದೆ. ಅ.ನ.ಕೃ. ಅವರ “ಕಾಮನ ಬಿಲ್ಲು”(1933)ದಿಂದ ಆರಂಭವಾಗಿ, ದೇ.ಜ.ಗೌ. ಅವರ “ಹೊಸಗನ್ನಡ ಕಥಾ ಸಂಗ್ರಹ (1957), ಎಲ್.ಎಸ್. ಶೇಷಗಿರಿರಾವ್ ಅವರ “ಕನ್ನಡ ಸಣ್ಣಕತೆಗಳು” (1962) ಮತ್ತು ಈಚೆಗಿನ ನಿರಂಜನರ “ಧರಣಿ ಮಂಡಲ ಮಧ್ಯದೊಳಗೆ”(1980)ವರೆಗೆ ಅನೇಕ ಪ್ರಾತಿನಿಧಿಕ ಸಂಗ್ರಹಗಳಲ್ಲೂ, ಪಠ್ಯಪುಸ್ತಕಗಳಲ್ಲೂ ಈ ಕತೆ ಓದುಗರ ಮುಂದೆ ಮತ್ತೆ ಮತ್ತೆ ಬಂದಿದೆ. ಆದರೆ ಈ ಕತೆಯ ಜನಪ್ರಿಯತೆ ಭಾರತೀಪ್ರಿಯರ ಇತರ ಕತೆಗಳ ಕಡೆಗೆ ಜನರ ಗಮನ ಹೋಗದಂತೆ ಮಾಡಿದೆ. ಅಷ್ಟೇ ಅಲ್ಲ, ಭಾರತೀಪ್ರಿಯರು ಬರೆದದ್ದು ಇದೊಂದೇ ಕತೆಯನ್ನೇನೋ ಎಂಬ ತಪ್ಪು ಅಭಿಪ್ರಾಯವನ್ನೂ ಮೂಡಿಸಿರುವ ಸಾಧ್ಯತೆ ಇದೆ.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

ಭಾರತೀಪ್ರಿಯರು ಕತೆಗಳನ್ನು ಬರೆಯಲು ಆರಂಭಿಸಿದ್ದು 1931ರಲ್ಲಿ. ‘ಕಥಾಂಜಲಿ’ ಪತ್ರಿಕೆಯಲ್ಲಿ ಅವರ ಮೊದಲ ಕತೆಗಳು ಪ್ರಕಟವಾದವು. ನಂತರ ಪ್ರಬುದ್ಧ ಕರ್ಣಾಟಕ, ಕತೆಗಾರ, ಪ್ರೇಮ, ವಾಣಿ, ಛಾಯ ಮೊದಲಾದ ಹಲವಾರು ಪತ್ರಿಕೆಗಳಲ್ಲಿ ಅವರ ಕತೆಗಳು ಕಾಣಿಸಿಕೊಂಡವು. ಅವರು ಬರೆದಿರುವ ಒಟ್ಟು ಕತೆಗಳ ಸಂಖ್ಯೆ ಎಷ್ಟೆಂದು ತಿಳಿಯುವುದಿಲ್ಲ. ಭಾರತೀಪ್ರಿಯರೇ ಸಂಪಾದಿಸಿದ್ದ “ಅಂತರಗಂಗೆ” ಎಂಬ ಒಂದು ಅತ್ಯಂತ ಸುಂದರವಾಗಿ ಅಚ್ಚಾಗಿರುವ ಸಂಕಲನದಲ್ಲಿ ಅವರ ಮೂರು ಕತೆಗಳಿವೆ. ಇವೂ ಸೇರಿ ಒಟ್ಟು ಹತ್ತು ಕತೆಗಳ ಸಂಕಲನ “ರುದ್ರವೀಣೆ” 1947ರಲ್ಲಿ ಪ್ರಕಟವಾಯಿತು. ತಾವು ಬರೆದಿರುವ ಕತೆಗಳಲ್ಲಿ ಕೆಲವನ್ನು ಆಯ್ದು ಇದರಲ್ಲಿ ಸೇರಿಸಿರುವುದಾಗಿ ಭಾರತೀಪ್ರಿಯರೇ ತಮ್ಮ ‘ಅರಿಕೆ’ಯಲ್ಲಿ ತಿಳಿಸಿದ್ದಾರೆ. ಈ ಸಂಕಲನದಲ್ಲಿ ಇಲ್ಲದ ‘ಮೊಗಲ ದೇವಿ’, ‘ಹಸಿವು’ ಮುಂತಾದ ಒಂದೆರಡು ಕತೆಗಳನ್ನು ಅ.ನ.ಕೃ. ಹೆಸರಿಸಿದ್ದಾರೆ. ‘ಕಥಾಂಜಲಿ’ಯಲ್ಲಿ ಅವರ ಆರಂಭದ ಎರಡು ಕತೆಗಳಿವೆ. ಹೀಗೆ ಸಂಕಲನ ರೂಪದಲ್ಲಿ ಬಾರದಿರುವ ಅವರ ಇನ್ನುಳಿದ ಕತೆಗಳನ್ನೆಲ್ಲ ಸೇರಿಸಿ ಪ್ರಕಟಿಸುವ ಕೆಲಸ ಆಗಬೇಕು.

ಭಾರತೀಪ್ರಿಯರ ಕತೆಗಳು ಅನೇಕ ಜನ ವಿಮರ್ಶಕರ ಗಮನ ಸೆಳೆದಿವೆ. ಕನ್ನಡ ಸಣ್ಣಕತೆಗಳ ಸಮೀಕ್ಷೆಗಳಲ್ಲಿ ಅವರ ಹೆಸರು ಸಾಮಾನ್ಯವಾಗಿ ಬಂದೇ ಬರುತ್ತದೆ. “ರುದ್ರವೀಣೆ” ಪ್ರಕಟವಾದ ತರುಣದಲ್ಲಿ ಬಂದಿರುವ ಜಿ. ವೆಂಕಟಸುಬ್ಬಯ್ಯ, ತ.ರಾ.ಸು. ಎಂ.ವಿ. ಸೀತಾರಾಮಯ್ಯ, ಪಿ.ವಿ. ಜೋಷಿ ಮೊದಲಾದವರ ಪತ್ರಿಕಾವಿಮರ್ಶೆಗಳು ಸಾಕಷ್ಟು ವಿವರವಾಗಿಯೇ ಇವೆ. ಸಂಕಲನದ ಮೂರನೆಯ ಮುದ್ರಣದಲ್ಲಿ (1969) ಈ ವಿಮರ್ಶೆಗಳನ್ನೂ ಸೇರಿಸಿರುವುದು ಬಹಳ ಉಪಯುಕ್ತವಾಗಿದೆ.

ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?

ಸಾಮಾನ್ಯವಾಗಿ ವಿಮರ್ಶಕರೆಲ್ಲ ಭಾರತೀಪ್ರಿಯರ ಹೆಚ್ಚಿನ ಕತೆಗಳನ್ನು ‘ಆವರಣ ಪ್ರಧಾನ’ವಾದ ಕತೆಗಳೆಂದು ಗುರುತಿಸಿದ್ದಾರೆ. ಕತೆಯ ವಿವರಗಳೆಲ್ಲ ಒಂದು ವಿಶಿಷ್ಟವಾದ ಮೂಡಿನ ನಿರ್ಮಾಣಕ್ಕಾಗಿ ಕೆಲಸಮಾಡುವುದು ಇಂಥ ಕತೆಗಳ ವೈಶಿಷ್ಟ್ಯ ಎನ್ನಬಹುದು. ಭಯ, ಪ್ರಶಾಂತತೆ, ರಹಸ್ಯ, ಕುತೂಹಲ, ನಿರೀಕ್ಷೆ, ವಿಷಾದ, ದುರಂತ ಮೊದಲಾದ ಭಾವಗಳನ್ನು ಅವುಗಳಿಗೆ ತಕ್ಕದಾದ ಆವರಣ, ಸನ್ನಿವೇಶಗಳ ಮೂಲಕ ಉತ್ಕಟವಾಗಿ ಚಿತ್ರಿಸಬಲ್ಲ ಶಕ್ತಿ ಭಾರತೀಪ್ರಿಯರಿಗೆ ವಿಶೇಷವಾಗಿ ಸಾಧಿಸಿದೆ. ಭಾಷೆ ಅದಕ್ಕೆ ತಕ್ಕ ಹಾಗೆ ಸಹಜವಾಗಿ ಏರಿಳಿತಗಳನ್ನು ಪಡೆದುಕೊಳ್ಳುತ್ತದೆ. ಒಟ್ಟಿನಲ್ಲಿ ಬರವಣಿಗೆಯಲ್ಲಿ ವಿಶಿಷ್ಟವಾದ ಹಿತಮಿತವಾದ ಔಚಿತ್ಯ ಕಾಣುತ್ತದೆ.

ಆದರೆ, ಕೆಲವು ವಿಮರ್ಶಕರು ಗುರುತಿಸಿರುವಂತೆ, ಈ ಕತೆಗಳ ಮುಖ್ಯವಾದ ಕೊರತೆಯೆಂದರೆ ವೈಚಾರಿಕತೆಯ ಅಭಾವ ಮತ್ತು ಪಾತ್ರಚಿತ್ರಣದ ಬಗೆಗಿನ ಔದಾಸೀನ್ಯ. ಇದರಿಂದಾಗಿ ಭಾರತೀಪ್ರಿಯರ ಕತೆಗಾರಿಕೆ ಎಷ್ಟೇ ಮೋಹಕವಾಗಿ ಕಂಡರೂ ಕತೆಗಳು ಮೈತುಂಬಿಕೊಳ್ಳುವುದಿಲ್ಲ. ‘ಮೋಚಿ’ಯಂಥ ಕತೆಯಲ್ಲಿ ಸಾಮಾಜಿಕ ಸಮಸ್ಯೆಯೊಂದರ ಚಿಂತನೆ ಇದ್ದರೂ ಅದು ಭಾವುಕತೆಯ ದಟ್ಟಬಣ್ಣದ ಮುಂದೆ ತೆಳ್ಳಗಾಗಿದೆ. ಹೀಗೆ ವೈಚಾರಿಕತೆ ಒಡ್ಡುವ ತೊಡಕಿನ ಸಮಸ್ಯೆಗಳನ್ನು ಎದುರಿಸುವ ಅವಕಾಶಗಳೇ ಇಲ್ಲದ್ದರಿಂದ ಭಾರತೀಪ್ರಿಯರ ಕಲೆಗಾರಿಕೆ ಕೂಡ ಹೆಚ್ಚಿನ ಸತ್ವಪರೀಕ್ಷೆಗೆ ಒಳಗಾಗುವುದಿಲ್ಲ. ಇದೇ ಬಗೆಯ ಸರಳತೆಯನ್ನು ಸನ್ನಿವೇಶಗಳ ರಚನೆಯಲ್ಲೂ ಕಾಣಬಹುದು. ಅವರ ಕತೆಗಳಲ್ಲಿಯ ಸನ್ನಿವೇಶಗಳನ್ನು ಒಂದರ ನಂತರ ಒಂದು ಬಿಡಿ ಬಿಡಿಯಾಗಿ ಪೋಣಿಸಿದಂತಿದೆ. ಹೀಗಾಗಿ ಅವು ಒಂದಕ್ಕೊಂದು ಸೇರಿ ಸಂಕೀರ್ಣವಾದ ವಿನ್ಯಾಸವೊಂದನ್ನು ಪಡೆಯುವುದಿಲ್ಲ.

ಭಾರತೀಪ್ರಿಯ ಒಂದು ಹಳೆಯ ಕತೆ

ಆದರೆ ಭಾರತೀಪ್ರಿಯರ ಕತೆಗಳ ರಸಾಸ್ವಾದನೆಯಲ್ಲಿ ಈ ರೀತಿಯ ಅಪೇಕ್ಷೆಗಳನ್ನಿಟ್ಟುಕೊಳ್ಳುವದೇ ಸರಿಯಲ್ಲವೇನೋ! ಯಾಕೆಂದರೆ ಅವರ ಕತೆಗಳ ರೀತಿಯೇ ಬೇರೆಯಾಗಿದೆ. “ರುದ್ರವೀಣೆ”ಯ ಹೆಚ್ಚಿನ ಕತೆಗಳು ವಾಸ್ತವದಾಚೆಗಿನ ಅತಿಮಾನುಷ ಜಗತ್ತಿಗೆ ಸೇರಿದವುಗಳು, ಅಥವಾ ಮೊದಲು ಅತಿಮಾನುಷದ ಭ್ರಮೆಯನ್ನು ಹುಟ್ಟಿಸಿ ಕೊನೆಯಲ್ಲಿ ವಾಸ್ತವದ ತರ್ಕಕ್ಕೆ ತರುವಂಥವು. ‘ಒಂದು ಹಳೆಯ ಕತೆ’, ‘ಅನುಗ್ರಹ’ಗಳು ಭೂತ ಚೇಷ್ಟೆಯ ಕತೆಗಳು. ‘ಬೇಟೆ’ಯಲ್ಲಿ ದೆವ್ವವಿರದಿದ್ದರೂ, ಅದು ಇದೆಯೆಂಬ ನಂಬಿಕೆಯಿಂದ ಹುಟ್ಟುವ ಭಯಾನಕತೆಯೇನೂ ಕಡಿಮೆಯಾಗುವುದಿಲ್ಲ. ‘ಆ ಒಂದು ರಾತ್ರಿ’ ಸ್ವಪ್ನದ ಕತೆ. ‘ಸಾಧನೆ’ಯಲ್ಲೂ ಶಕ್ತಾರಾಧನೆಗೆ ಸಂಬಂಧಿಸಿದ ಅತಿಮಾನುಷ ಅಂಶಗಳಿವೆ. ಇಲ್ಲೆಲ್ಲಾ ಅತಿಮಾನುಷ ವಾತಾವರಣದ ನಿರ್ಮಾಣವೇ ಮುಖ್ಯವಾಗಿದ್ದು ಆ ದಿಶೆಯಲ್ಲಿಯೇ ವಿವರಗಳೆಲ್ಲ ಕೆಲಸ ಮಾಡುತ್ತವೆ. ಅಂಥ ಅತಿಮಾನುಷ ಶಕ್ತಿಗಳಲ್ಲಿ ವಿಶ್ವಾಸವಿಲ್ಲದ ಓದುಗರೂ ನಂಬಲು ಸಾಧ್ಯವಾಗುವಂಥ ಗಟ್ಟಿಯಾದ ವಿವರಗಳ ಮೂಲಕ ತರ್ಕಪ್ರಜ್ಞೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಭಯ ನಿಗೂಢತೆಗಳ ಉತ್ಕಟ ವಾತಾವರಣವನ್ನು ನಿರ್ಮಿಸಿ ಮರುಳುಗೊಳಿಸುವ ಇಂಥ ಕತೆಗಾರಿಕೆಯ ತತ್ವಗಳೇ ಬೇರೆಯಾಗಿರುತ್ತವೆ. ಇಲ್ಲಿಯ ಕಲ್ಪಕತೆಯ ರೀತಿಯೂ ಬೇರೆಯಾಗಿರುತ್ತದೆ.

ಇದನ್ನು ಓದಿದ್ದೀರಾ?: ‘ಶ್ರೀ ಸ್ವಾಮಿ’ಯವರ ಕತೆ | ಬೀಬೀ ನಾಚ್ಚಿಯಾರ್

‘ಒಂದು ಹಳೆಯ ಕತೆ’ಯನ್ನು ಈ ದೃಷ್ಟಿಯಿಂದ ನೋಡಬೇಕು. ಇದೊಂದು ದೆವ್ವದ ಕತೆ. ಇನ್ನಷ್ಟು ನಿಖರವಾಗಿ ಹೇಳಬೇಕೆಂದರೆ ಮೋಹಿನಿಯ ಕತೆ. ಈ ಬಗೆಯ ಕತೆಗಳಲ್ಲಿ ಮುಖ್ಯವಾಗಿ ಎರಡು ರೀತಿಯ ಪರಿಣಾಮಗಳು ಎದ್ದು ಕಾಣುತ್ತವೆ. ಮರಳುಗೊಳಿಸುವ ಸಮ್ಮೋಹಕ ವಾತಾವರಣದ ಸೃಷ್ಟಿ, ಇಲ್ಲವೆ ಮೈ ನಡುಗಿಸುವ ಭಯಾನಕತೆ. ಒಟ್ಟಿನಲ್ಲಿ ಮೈ ಜುಮ್ಮೆನ್ನಿಸುವ ಒಂದು ರೊಮ್ಯಾಂಟಿಕ್ ಅನುಭವ. ‘ಒಂದು ಹಳೆಯ ಕತೆ’ ಮೋಹಕತೆ ಮತ್ತು ಭಯಾನಕತೆಗಳೆರಡನ್ನೂ ಹಿತಮಿತವಾಗಿ ಮೇಲೈಸಿಕೊಂಡಿರುವ, ಆದರೂ ಹೆಚ್ಚಾಗಿ ಮೋಹಕತೆಯ ಕಡೆಗೆ ವಾಲಿರುವ ಒಂದು ವಿಶಿಷ್ಟ ಕತೆ.

ನಮ್ಮ ಜನಪದ ಕತೆಗಳಲ್ಲೂ ಮೋಹಿನಿಯ ಕತೆಗಳು ಸಾಕಷ್ಟು ಸಿಗುತ್ತವೆ. ಮತ್ತು ಅವಕ್ಕೇ ವಿಶಿಷ್ಟವಾದ ಆಶಯಗಳೂ ಇವೆ. ಭಾರತೀಪ್ರಿಯರು ‘ಒಂದು ಹಳೆಯ ಕತೆ’ಯಲ್ಲಿ ಇಂಥ ಆಶಯಗಳನ್ನೂ ಮೋಹಿನಿಯನ್ನು ಕುರಿತು ಹಳ್ಳಿಯ ಜನಗಳಲ್ಲಿ ಪ್ರಚಲಿತವಿರುವ ಹಲವಾರು ನಂಬಿಕೆಗಳನ್ನೂ ದಿಟ್ಟವಾಗಿ ಬಳಸಿಕೊಂಡು ಒಂದು ಆಧುನಿಕ ಕತೆಯನ್ನು ಸೃಷ್ಟಿಸಿದ್ದಾರೆ.

ಕತೆಯ ಆರಂಭದಲ್ಲಿಯೇ ತುಂಬು ಹುಣ್ಣಿಮೆಯ ಬೆಳದಿಂಗಳಿನ ವರ್ಣನೆ ಇದೆ. ಸ್ವಪ್ನದ ಭ್ರಾಮಕ ಪರಿಣಾಮಕ್ಕೆ ಇದೊಂದು ಉಚಿತವಾದ ವಾತಾವರಣ. ಹಾಗೆಯೇ ಹರಿಯುವ ಹೊಳೆಯೂ ಕೂಡ. ಇದರ ಹಿಂದೆಯೇ ಜಮಾಬಂದಿಯ ಪ್ರವಾಸದ ವಾಸ್ತವ ವಿವರಗಳು ಬರುತ್ತವೆ. ಹೀಗೆ ಕತೆ ಒಂದು ಕಡೆಯಿಂದ ಭ್ರಾಮಕ ಪರಿಣಾಮವನ್ನು ಹುಟ್ಟಿಸುತ್ತ, ಇನ್ನೊಂದು ಕಡೆಯಿಂದ ವಾಸ್ತವ ವಿವರಗಳನ್ನು ಗಟ್ಟಿಗೊಳಿಸುತ್ತ ಹೋಗುತ್ತದೆ. ಅದರಿಂದ ಅತಿಮಾನುಷ ಸಂಗತಿಗಳು ಯಾವದೊ ಬೇರೊಂದು ಲೋಕದವೆಂಬಂತೆ ಕಾಣದೆ ನಮ್ಮ ನಿತ್ಯದ ಬದುಕಿನಲ್ಲೇ ನಡೆದುವಾಗಿ ನಮಗೆ ಹೆಚ್ಚು ನಿಜವಾಗುತ್ತವೆ. ವಾಸು, ಅವನ ತಂದೆ-ತಾಯಿ, ನೌಕರಿ, ಹೆಂಡತಿ ಇತ್ಯಾದಿಗಳೆಲ್ಲ ಅವನೊಬ್ಬ ವಾಸ್ತವ ಜಗತ್ತಿನ ಸಾಮಾನ್ಯ ಮನುಷ್ಯನೆಂಬುದನ್ನು ಸ್ಥಾಪಿಸುತ್ತವೆ. ಇವುಗಳನ್ನು ಒಪ್ಪಲು ನಮಗೆ ಕಷ್ಟವೇನೂ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ತರ್ಕಬುದ್ದಿಗೆ ಹೆಚ್ಚಿನ ಸವಾಲಾಗದಂತೆ ಮೋಹಿನಿಯ ಮೊದಲ ಭೇಟಿಯಾಗುತ್ತದೆ. ಹೊಳೆ, ದಂಡೆಯ ಮೇಲಿನ ಮರ, ಅದರ ನೆರಳು, ನೆರಳಿನಲ್ಲಿ ನಿಂತ ಹೆಂಗಸು, ಅವಳ ಕಿಲಕಿಲ ನಗು, ದೊಪ್ಪೆಂಬ ಶಬ್ದ, ಅಲ್ಲಾಡುವ ಕೊಂಬೆಗಳು- ಈ ವಿವರಗಳು ವಾಸ್ತವವಾಗಿದ್ದೂ ಬೆಳದಿಂಗಳ ರಾತ್ರಿಯಲ್ಲಿ ಒಂದು ಬಗೆಯ ನಿಗೂಢವಾದ ವಾತಾವರಣವನ್ನು ಹುಟ್ಟಿಸುತ್ತವೆ. ಆ ಹೆಂಗಸು ಒಮ್ಮೆಲೆ ಕಾಣಲಾಗದುದು ಅವಾಸ್ತವವಲ್ಲವಾದರೂ, ಆ ವಾತಾವರಣದಲ್ಲಿ ವಾಸುವಿನ ಮೈ ಝಲ್ಲೆಂದುದರಲ್ಲಿ ಆಶ್ಚರ್ಯವೇನೂ ಇಲ್ಲ.

ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’

ಇದೇ ಬಗೆಯ ವಿವರಗಳ ಸಮತೋಲನವನ್ನು ಕತೆಯ ಉದ್ದಕ್ಕೂ ಕಾಣಬಹುದಾಗಿದೆ. ಕತೆ ಮೋಹಿನಿಯ ಅಸ್ತಿತ್ವವನ್ನು ಒಪ್ಪಿಕೊಂಡೇ ಹೊರಡುತ್ತದೆ. ಆದರೆ ಈ ನಂಬಿಕೆಯನ್ನು ಒರಟಾಗಿ ಓದುಗರ ಮೇಲೆ ಹೇರುವುದಿಲ್ಲ, ಅದರ ಅಸ್ತಿತ್ವವನ್ನು ನಂಬಲು ಅನಿವಾರ್ಯವಾಗುವಂಥ ವಿವರಗಳನ್ನು ಕ್ರಮೇಣವಾಗಿ, ಜಾಣೆಯಿಂದ ಸೇರಿಸುತ್ತ ಹೋಗುತ್ತದೆ. ಅದಕ್ಕಾಗಿ ನಿರೂಪಣೆಯ ಕೋನವನ್ನೂ ಆಗಾಗ ಬದಲಿಸಲಾಗಿದೆ. ಕತೆಯ ಮೊದಲ ಭಾಗದಲ್ಲಿ ವಾಸು ನಿರೂಪಣೆಯ ಕೇಂದ್ರಪ್ರಜ್ಞೆಯಾಗಿದ್ದಾನೆ. ಮೋಹಿನಿಯ ಪ್ರಥಮ ದರ್ಶನವಾಗುವುದು ಇಲ್ಲಿ, ಅಲ್ಲಿಂದ ಅವನಿಗೆ ಮೋಹಿನಿಯ ಸಹವಾಸ ಆರಂಭವಾಗುತ್ತದೆ. ಆದರೆ ಈ ವಿಷಯ ನಮಗೆ ನೇರವಾಗಿ ಗೊತ್ತಾಗುವುದಿಲ್ಲ, ಎರಡನೆಯ ಭಾಗದಲ್ಲಿ ಕೇಂದ್ರಪ್ರಜ್ಞೆ ವಾಸುವಿನ ತಂದೆ ವೆಂಕಟರಾಮಯ್ಯನವರಿಗೆ ಬದಲಾಗುತ್ತದೆ. ಮಗನ ಆರೋಗ್ಯ ಇಳಿಯುತ್ತಿರುವುದನ್ನು ಅವರು ಮೊದಲು ಗಮನಿಸುತ್ತಾರೆ. ನಂತರ ಗಂಧದ ಚಟ್ಟು, ಪುನುಗಿನ ಸುವಾಸನೆ, ವೀಲೆಯದೆಲೆಯ ಸೀಳುಗಳ ಮೂಲಕ ಮೋಹಿನಿಯ ಅಸ್ತಿತ್ವವನ್ನು ಸಂದೇಹಿಸುತ್ತಾರೆ. ಮೂರನೆಯ ಭಾಗದಲ್ಲಿ ದೇವೀನರಸಯ್ಯ ಅವರ ಸಂದೇಹವನ್ನು ನಂಬಿಕೆಯಾಗಿ ಸ್ಥಿರಪಡಿಸುತ್ತಾನೆ. ಹೀಗೆ ಮೋಹಿನಿಯ ಅಸ್ತಿತ್ವ ಸ್ಥಾಪಿತವಾದ ಮೇಲೆ ನಾಲ್ಕನೆಯ ಭಾಗದಲ್ಲಿ ಮೋಹಿನಿ-ವಾಸುರ ಏಕಾಂತದಲ್ಲಿ ನಮಗೆ ಪ್ರವೇಶ ದೊರೆಯುತ್ತದೆ. ಅಲ್ಲಿಂದ ಮೋಹಿನಿ ಒಂದು ಪಾತ್ರವಾಗಿ ವಾಸ್ತವದಲ್ಲಿ ದಿಟ್ಟವಾಗಿ ಕಾಣಿಸಿಕೊಳ್ಳತೊಡಗುತ್ತಾಳೆ.

ಆದರೂ ಈ ಸನ್ನಿವೇಶಗಳಲ್ಲಿ ಭಯಾನಕವಾದುದೇನೂ ಇಲ್ಲ. ಮೋಹಿನಿಯ ಅಸಾಮಾನ್ಯ ಚೆಲುವು, ಅವಳ ಸಮ್ಮೋಹಕ ಶಕ್ತಿ, ಅವಳು ವಾಸುವಿನ ಮೇಲೆ ತೋರಿಸುವ ಪ್ರೀತಿ, ಪ್ರಣಯಸಲ್ಲಾಪ, ತನಗೆ ನಂಬಿಕೆಯಾಗದಿದ್ದರೂ ಅವನ ಪ್ರೀತಿಗಾಗಿ ಮೂಲಿಕೆಯನ್ನು ಹುಡುಕಿಕೊಡುವುದು, ಆ ಮೂಲಿಕೆಯನ್ನು ತೆಗೆದಿಡಲು ವಾಸುವನ್ನು ಕೇಳಿಕೊಳ್ಳುವಾಗಿನ ಬಿನ್ನಾಣ, ಪ್ರಾಮಾಣಿಕ ಆರ್ತತೆ- ಇಂಥಲ್ಲೆಲ್ಲ ಮಾನವೀಯ ಅಂಶಗಳು ಸಾಕಷ್ಟಿವೆ. ಈ ಅಂಶಗಳಿಂದಾಗಿ ಅತಿಮಾನುಷ ಪ್ರಪಂಚವೂ ಕೂಡ ರಾಗ-ಭಾವಗಳ ಮಾನುಷ ಪ್ರಪಂಚದ ವಿಸ್ತರಣೆಯೇ ಆಗಿ ಕಾಣುತ್ತದೆ. ಒಂದು ರೀತಿಯಿಂದ ಆ ಅತೃಪ್ತ ಆತ್ಮ ಮನುಷ್ಯಜನ್ಮದಲ್ಲಿ ಈಡೇರದ ತನ್ನ ಆಸೆಗಳನ್ನು ಭೂತಾವಸ್ಥೆಯಲ್ಲಿ ಈಡೇರಿಸಿಕೊಳ್ಳಲು ನಡೆಸುವ ಉತ್ಕಟ ಪ್ರಯತ್ನಗಳನ್ನು ನೋಡಿ ಸಹಾನುಭೂತಿಯೂ ಹುಟ್ಟುತ್ತದೆ. ಇದರ ಜೊತೆಗೆ ಅತಿಮಾನುಷ ವಿವರಗಳೂ ಬರುತ್ತಲೇ ಇರುವುದನ್ನು ಗಮನಿಸಬೇಕು. ಮೋಹಿನಿ ಮುಚ್ಚಿದ ಕೋಣೆಯಲ್ಲಿ ಪ್ರವೇಶಿಸುವದು, ಮುಚ್ಚಿದ ಕೋಣೆಯಿಂದಲೇ ವಾಸುವಿನ ಕೈಹಿಡಿದು ಹೊರಗೆ ಬರುವುದು, ವಾಯುವೇಗದಿಂದ ಕಾಡಿಗೆ ಬರುವುದು, ರಾತ್ರಿಯ ಭೇಟಿಗಳು ಇತ್ಯಾದಿಗಳ ಜೊತೆಗೆ ಜಾನಪದ ನಂಬಿಕೆಯಂತಿರುವ ಮೂಲಿಕೆಯ ಪ್ರಸಂಗ ಇತ್ಯಾದಿಗಳೆಲ್ಲ ಮಾನುಷ-ಅತಿಮಾನುಷಗಳ ಗಡಿಯಲ್ಲಿ ಹೊಯ್ದಾಡುತ್ತವೆ. ಕನಸಿನ ಅಸ್ಪಷ್ಟತೆ ಉದ್ದಕ್ಕೂ ಬೆಳೆದು ಬರುತ್ತದೆ.

ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು

ನಂತರ ವಾಸುವಿನ ಬದುಕು ಮತ್ತೆ ಸಾಮಾನ್ಯ ವಾಸ್ತವಕ್ಕೆ ಹಿಂದಿರುತ್ತದೆ. ಹಿಂದಿನ ಘಟನೆಯೆಲ್ಲಾ ಒಂದು ಕನಸು ಎಂಬಂತೆ ಮರೆತುಹೋಗುತ್ತದೆ. ಆದರೆ ನಾಲ್ಕು ವರ್ಷಗಳ ನಂತರ ತಿರುಗಿ ಅದೇ ಹೊಳೆಯ ದಂಡೆಯ ಬಳಿ ಬಂದಾಗ ಮರುಕಳಿಸುವ ಘಟನೆಯ ವಿವರಗಳು ಮತ್ತೆ ಹಿಂದಿನ ಪ್ರಸಂಗದ ಪುನರಾವೃತ್ತಿಯ ನಿರೀಕ್ಷೆಯನ್ನು ಹುಟ್ಟಿಸುತ್ತವೆ. ಅದಕ್ಕೆ ಬದಲಾಗಿ ಕತೆ ವಾಸುವಿನ ಸಾವಿನಲ್ಲಿ ಹಠಾತ್ತಾಗಿ ಮುಗಿದುಬಿಡುವುದು ತೀವ್ರ ಅಸಮಾಧಾನವನ್ನು ಉಂಟುಮಾಡುತ್ತದೆ. ಇಲ್ಲಿಯ ಮುಖ್ಯ ಸಮಸ್ಯೆ ಎಂದರೆ ವಾಸುವಿನ ಸಾವು ನಾಟೀಕರಣಗೊಳ್ಳುವುದಿಲ್ಲ ಎಂಬುದು. ಇದು ಹಲವು ಸಂದಿಗ್ಧಗಳಿಗೆ ಕಾರಣವಾಗುತ್ತದೆ. ಮೊದಲನೆಯದಾಗಿ, ಇದರಿಂದ ಮತ್ತೆ ಮೋಹಿನಿಯನ್ನು ನೋಡಿದ ವಾಸು ಮುಂದೆ ಬರಬಹುದಾದ ಪ್ರಸಂಗವನ್ನು ನೆನೆದು ಆ ಭಯದಿಂದಲೇ ಸತ್ತನೋ, ಅಥವಾ ತಾತ್ಕಾಲಿಕವಾಗಿ ಮೋಸಹೋಗಿ ಸೋತು ದೂರಹೋಗಿದ್ದ ಮೋಹಿನಿ ವಾಸುವನ್ನು ಕೊಂದು ಸೇಡು ತೀರಿಸಿಕೊಂಡಳೋ ಗೊತ್ತಾಗುವುದಿಲ್ಲ. ಎರಡನೆಯದಾಗಿ, ವಾಸುವಿನ ಸಾವು ದುರಂತ ಅಥವಾ ಭಯದ ಯಾವ ಪರಿಣಾಮವನ್ನೂ ನೀಡದೆ ಸಪ್ಪೆಯಾಗುತ್ತದೆ. ಭೂತದ ಕತೆಗಳಿಂದ ನಾವು ನಿರೀಕ್ಷಿಸುವ ಪರಿಣಾಮ ಇದಲ್ಲ. ಹೀಗಾಗಿ ಕತೆ ಅಪೂರ್ಣವಾದಂತೆನಿಸುತ್ತದೆ. ಆದರೂ ಈ ಕತೆಯ ಉದ್ದಕ್ಕೂ ಭಾರತೀಪ್ರಿಯರು ಕಟ್ಟಿಕೊಡುವ ಸಮ್ಮೋಹಕ ವಾತಾವರಣದ ಚೆಲುವು ಮಾತ್ರ ನೆನಪಿನಲ್ಲಿ ಉಳಿದುಬಿಡುತ್ತದೆ ಎಂಬುದು ನಿಜ.

ಇಂಥ ಕತೆಗಳಲ್ಲಿ ಬದುಕಿನ ಅರ್ಥವಂತಿಕೆ ದೊರೆಯುವದಿಲ್ಲವೆಂಬುದು ಮೇಲೆಯೇ ಕಾಣುತ್ತದೆ. ಅದು ಈ ಕತೆಗಳ ಉದ್ದೇಶವೇ ಅಲ್ಲ. ಆದರೆ ಇನ್ನುಳಿದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಕತೆಗಳ ಸಾಮಾನ್ಯ ಧಾಟಿಗಿಂತ ಭಿನ್ನವಾದ ಹೊಸ ರುಚಿಯ ಬದಲಾವಣೆ ಇವುಗಳಿಂದ ಸಿಗುತ್ತದೆಂಬುದು ಸುಳ್ಳಲ್ಲ. ಭಾರತೀಪ್ರಿಯರ ಅನೇಕ ಕತೆಗಳು ಇಂಥ ಹೊಸ ರುಚಿಯನ್ನು ಧಾರಾಳವಾಗಿ, ವೈವಿಧ್ಯಪೂರ್ಣವಾಗಿ ಒದಗಿಸುತ್ತದೆ.

(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿರಂಜನ ಅವರ ಕತೆ | ಕೊನೆಯ ಗಿರಾಕಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ತರಾಸು ಅವರ ಕತೆ | ಇನ್ನೊಂದು ಮುಖ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

Download Eedina App Android / iOS

X