ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ

Date:

Advertisements
ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಹೆಸರು ಅನಸೂಯೆ. ವಯಸ್ಸು ನಲವತ್ತು ಮೀರಿತ್ತು. ಮೂವತ್ತಕ್ಕೇ ವಿತಂತುವಾಗಿದ್ದಳು. ಒಡಲು ಕುಡಿ ಒಡೆದಿರಲಿಲ್ಲ. ಹತ್ತಿರದ ಬಂಧುಗಳೂ ಇರಲಿಲ್ಲ. ಪತಿ ತೀರಿಕೊಂಡಾಗ ದೂರದವರು ಯಾರೋ ಬಂಧುಗಳು ಬಂದು ಅಪರಕರ್ಮಗಳನ್ನು ಮುಗಿಸಿಕೊಟ್ಟು ಹೋದರು. ಮನೆ ಬರಿದಾಯಿತು. ಮನಸ್ಸೂ ಬರಿದಾಯಿತು.

ಈಗಿನ ವಾಸದ ಮನೆ ಚಿಕ್ಕದು. ಆದರೂ ಒಪ್ಪವಾಗಿತ್ತು. ಅದು ಇದ್ದುದು ಬೆಂಗಳೂರು ನಗರದ ಹಳೇ ಶೀಗೆಬೇಲಿಯ ಒಂದು ಮನೆಯ ಮಹಡಿಯಲ್ಲಿ ಹತ್ತಿ ಇಳಿಯಲು ಪ್ರತ್ಯೇಕ ಮೆಟ್ಟಲಿತ್ತು. ಕೆಳಗೆ ವಾಸವಿದ್ದ ಮನೆಯ ಮಾಲೀಕರು ಒಳ್ಳೆಯವರು.

ಕಾಲಯಾಪನೆ ಕಷ್ಟವಿರಲಿಲ್ಲ. ಗಂಡನ ಜೀವವಿಮೆಯಿಂದ ಬಂದ ಮೊತ್ತ, ಬ್ಯಾಂಕ್ ಒಂದರಲ್ಲಿ ಬಡ್ಡಿ ಕೂಡಿಸಿಕೊಳ್ಳುತ್ತಿತ್ತು. ಆತ ಗೌರ್ನಮೆಂಟ್ ಹುದ್ದೆಯಲ್ಲಿ ಸೂಪರಿಂಟೆಂಡಿಂಗ್ ಎಂಜಿನಿಯರ್ ಆಗಿದ್ದ. ಡ್ಯೂಟಿಯ ಮೇಲಿದ್ದಾಗ ದುರಂತ ಸಂಭವಿಸಿತ್ತಾದ್ದರಿಂದ, ವಿಧವೆಗೆ ಮಾಸಾಶನ ದೊರೆತಿತ್ತು. ಆಕೆಯ ನಿತ್ಯಜೀವನ ಅದರಿಂದಲೇ ಸಾಗಿತ್ತು. ಆಕೆಗೆ ತನ್ನ ಅಡುಗೆ, ತನ್ನ ಊಟ, ತನ್ನ ಓದು, ಹವ್ಯಾಸವಾಗಿದ್ದುವು. ಕೈಮೇಲೆ ಬಹಳ ಸಮಯ ಉಳಿಯುತ್ತಿತ್ತು. ಜೀವನ ನಿರರ್ಥಕವಾಗುತ್ತಿದೆಯೆಂದು ಬಗೆದು, ಒಂದೇ ಫರ್‌ ಲಾಂಗ್ ದೂರದಲ್ಲಿ ಇದ್ದ ಆರ್ಯಬಾಲಿಕಾ ಪಾಠಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇರಿಕೊಂಡಳು. ಆಗಿನ ಮೆಟ್ರಿಕ್ ಪರೀಕ್ಷೆಯಾಗಿ ‘ಎಫ್.ಎ.’ ಪರೀಕ್ಷೆಗೆ ಒಂದು ವರ್ಷ ಓದಿದ್ದಳಾದ್ದರಿಂದ ಶಾಲೆಯ ಮುಖ್ಯಾಧ್ಯಾಪಕಿಯ ಸ್ಥಾನ ಇನ್ನು ಒಂದೆರಡು ವರ್ಷಗಳಲ್ಲಿ ಆಕೆಗೇ ಮೀಸಲಾಗಿತ್ತು.

ಇದನ್ನು ಓದಿದ್ದೀರಾ?: ದೇವುಡು ಅವರ ಕತೆ | ಮೂರು ಕನಸು

ಹುಟ್ಟಿ ಬೆಳೆದಿದ್ದ ಸಂಪ್ರದಾಯ ಆಕೆಯ ರಕ್ಷಾಕವಚವಾಗಿತ್ತು. ಆಕೆಯ ಮನಸ್ಸು ಶುಚಿರುಚಿಗಳಿಂದ ಕೂಡಿತ್ತು. ಆಕೆಯ ಉಡುಗೆತೊಡುಗೆಗಳಲ್ಲಿ ಔಚಿತ್ಯವಿತ್ತು, ಗಾಂಭೀರ್ಯವಿತ್ತು. ಮನೆಯಲ್ಲಿದ್ದ ಒಂದೇ ಸಹವಾಸಿ -ಪಂಚವರ್ಣದ ಒಂದು ಗಿಳಿ. ಅದು ಪಂಜರದೊಳಗೆ ಇರುತ್ತಿದ್ದುದು ನಿದ್ದೆಮಾಡುವಾಗ, ಮಲಕುಮಾಡುವಾಗ, ಒಡತಿ ಶಾಲೆಗೆ ಹೋದಾಗ. ಮಿಕ್ಕವೇಳೆಯಲ್ಲಿ ಪಂಜರದ ಹೊರಗೇ.

ಶಿಶಿರ ಋತುವಿನ ಒಂದು ಭಾನುವಾರ ಸಂಜೆ. ಅನಸೂಯೆ ರಾತ್ರಿಯ ಅಡುಗೆಯನ್ನೂ ಮಧ್ಯಾಹ್ನವೇ ಮಾಡಿ ಮುಚ್ಚಿಟ್ಟಿದ್ದಳು. ಆರು ಗಂಟೆಯ ಸಮಯದಲ್ಲಿ ಹೊರಗೆ ಕೈಸಾಲೆಯಲ್ಲಿ ಕುಳಿತು ದಿನಪತ್ರಿಕೆಯನ್ನು ಓದುತ್ತಿದ್ದಳು. ಜಾಹಿರಾತು ಪುಟ ಒಂದರಲ್ಲಿ, ಹತ್ತಿರದ ಸಿನಿಮಾ ಮಂದಿರದಲ್ಲಿ ‘ಮಹಾಸತಿ ಅನಸೂಯ’ ಚಿತ್ರವು ನಡೆಯುತ್ತಿದೆಯೆಂದು ಇತ್ತು.

ಆಕೆ ಸಿನಿಮಗಳನ್ನು ಅಷ್ಟಾಗಿ ನೋಡುತ್ತಿರಲಿಲ್ಲ. ತನ್ನ ಹೆಸರಿನ ಆ ಮಹಾಸತಿಯ ಕಥೆಯನ್ನು ಪುರಾಣಗಳಲ್ಲಿ ಓದಿದ್ದಳು, ಕೇಳಿದ್ದಳು. ನೋಡಲು ನಿರ್ಧರಿಸಿ, ಎದ್ದು, ಗಿಳಿರಾಮನನ್ನು ಪಂಜರದೊಳಕ್ಕೆ ಕೂಡಿ, ಚಳಿಯ ದಿನಗಳಾದ್ದರಿಂದ ಹೊದೆವ ಶಾಲೊಂದನ್ನು ಮಡಚಿಟ್ಟುಕೊಂಡು, ಮನೆಯ ಬಾಗಿಲು ಕಿಟಕಿಗಳನ್ನು ಭದ್ರಪಡಿಸಿ, ಮುಂದಿನ ಕೈಸಾಲೆಯ ದೀಪ ಒಂದನ್ನು ಮಾತ್ರ ಹೊತ್ತಿಸಿಟ್ಟು, ಹೊರಬಾಗಿಲಿಗೆ ಬೀಗ ಹಾಕಿಕೊಂಡು, ಮೆಟ್ಟಿಲುಗಳನ್ನಿಳಿದು, ಸಿನಿಮಾ ಮಂದಿರದ ದಾರಿಯನ್ನು ಹಿಡಿದಳು.

ಆಕೆಗೆ ಅಂದು ಸ್ವಲ್ಪ ಕೆಮ್ಮು ಇತ್ತು. ದಾರಿಯಲ್ಲಿ ಹೋಗುತ್ತ ಅಂಗಡಿಯೊಂದರಲ್ಲಿ ‘ಪೆಪ್ಪರ್‌ಮಿಂಟ್-ಸ್ಟ್ರಾಂಗ್’ ಒಂದು ರೋಲ್ ಕೊಂಡು, ಬಿಚ್ಚಿ, ಒಂದನ್ನು ಬಾಯಲ್ಲಿ ಹಾಕಿಕೊಂಡು ನೆಟ್ಟಗೆ ಸಿನಿಮಾ ಮಂದಿರಕ್ಕೆ ಬಂದಳು.

ಇದನ್ನು ಓದಿದ್ದೀರಾ?: ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ

ಸಿನಿಮಾ ಮಂದಿರಗಳಲ್ಲಿ ಹೆಂಗುಸರಿಗೆ ಪ್ರತ್ಯೇಕ ಸ್ಥಳವನ್ನಿಡುತ್ತಿದ್ದ ಕಾಲವದು. ಅವರು ಟಿಕೆಟ್ ಕೊಳ್ಳುವುದಕ್ಕೂ ಪ್ರತ್ಯೇಕ ಗೂಡು ಇತ್ತು. ಅನಸೂಯೆ ಕೈಯಲ್ಲಿ ಸಾಕಷ್ಟು ಹಣವನ್ನು ಹಿಡಿದು, ಅಲ್ಲಿ ಸಾಲು ನಿಂತಿದ್ದ ಎಲ್ಲ ಹೆಂಗುಸರಿಗೂ ಕೊನೆಯವಳಾಗಿ ನಿಂತಳು. ನಾಲೈದು ನಿಮಿಷಗಳಲ್ಲಿ ಅವಳಿಂದ ಹಿಂದಿನ ಸಾಲೂ ಬೆಳೆಯಿತು.

ಈಗ ಸಾಲಿನ ನಡುವೆ ಇದ್ದ ಅನಸೂಯೆ, ನಿಮಿಷಗಳನ್ನು ಕಳೆಯಲು ಅತ್ತಿತ್ತ ನೋಡತೊಡಗಿದಳು. ಅನತಿ ದೂರದಲ್ಲಿ ನಿಂತಿದ್ದ ಹುಡುಗಿಯೊಬ್ಬಳು ಅನಸೂಯೆಯ ಕಣ್ಣುಗಳನ್ನು ಮಂದಹಾಸದಿಂದ ಇದಿರುಗೊಂಡಳು. ಮಗುವಿನ ಕಣ್ಣುಗಳು ಜಿಂಕೆಮರಿಯ ಕಣ್ಣುಗಳಂತೆ ವಿಶಾಲವಾಗಿದ್ದುವು. ಹುಡುಗಿಯ ತಲೆತುಂಬ ಉದ್ದನೆಯ ಕೂದಲು ಎರಡು ಜಡೆಗಳಾಗಿ, ಕೊನೆಯನ್ನು ತಲೆಯ ಪಠ್ಯಗಳೇ ಕೋದುಕೊಂಡಿದ್ದುವು. ಎರಡು ಜಡೆಗೂ ಎರಡು ಕೆಂಪು ರಿಬ್ಬನ್‌ಗಳು ಚೆಂದ ಕೊಟ್ಟಿದ್ದುವು. ಕಾಲುಗಳಿಗೆ ಪಾಲಿಷ್ ಮಾಡಿದ್ದ ಕರಿಯ ಸ್ಲಿಪ್-ಆನ್ ಷೂಗಳನ್ನು ಹಾಕಿಕೊಂಡಿದ್ದಳು. ತೊಡೆಯವರೆಗೂ ಕಪ್ಪನೆಯ ಕಾಲುಚೀಲಗಳು ಇದ್ದುವು. ತೊಟ್ಟಿದ್ದ ಪರ್ಸಿಯನ್ ಕಾಲರ್ ಕೋಟು ಒಂದು ಬಗೆಯ ಹಸಿರು ವೆಲ್ವೆಟೀನ್. ಅದಕ್ಕೆ ಅಗಲ ಅಗಲವಾದ ಕೆಂಪು ಗುಂಡಿಗಳಿದ್ದುವು. ಹುಡುಗಿ ನಿಂತಿದ್ದ ಒಂದು ಚೆಲುವಿನ ಭಂಗಿ ಅನಸೂಯೆಯ ಕಣ್ಣುಗಳನ್ನು ಹೆಚ್ಚು ಆಕರ್ಷಿಸಿದುವು.

ನೋಡುತ್ತಿದ್ದ ಹಾಗೆಯೇ ಆ ಹುಡುಗಿ ನೆಟ್ಟಗೆ ಅನಸೂಯೆಯ ಬಳಿಗೇ ನಡೆದು ಬಂದು, ಮೃದುವಾಗಿ ನಗುತ್ತ ದೈನ್ಯದಿಂದ ಕೇಳಿದಳು: ‘ನನಗೊಂದು ಉಪಕಾರ ಮಾಡಬಲ್ಲಿರಾ?’

‘ನನ್ನಿಂದ ಆಗುವುದಾದರೆ… ಆಗಬಹುದಾದರೆ, ಹೇಳಮ್ಮ?’

‘ನೋಡೀ! ನಾನು ಚಿಕ್ಕವಳು, ಆದ್ದರಿಂದ ಟಿಕೀಟು ಕೊಡುವುದಿಲ್ಲ. ನೋಡಬೇಕೆಂಬ ಆಶೆ ಇದೆ. ಮಕ್ಕಳಿಗೆ ಅರ್ಧ ಛಾರ್ಜಂತೆ-ಇಗೋ ಕೊಳ್ಳಿ ನನ್ನ ಟಿಕೀಟಿನ ಹಣ-ಎರಡನೆಯ ತರಗತಿಗೆ…’

‘ಅದೆಷ್ಟು ಹೊತ್ತಿನಿಂದ ಅಲ್ಲಿಯೇ ನಿಂತಿದ್ದೆ?’

‘ಸ್ವಲ್ಪ ಹೊತ್ತಿನಿಂದ. ಇಲ್ಲಿ ಇನ್ಯಾರನ್ನೂ ಕೇಳುವ ಧೈರ್ಯ ಬರಲಿಲ್ಲ ನನಗೆ.’

ಅನಸೂಯೆಯೂ ಎರಡನೆಯ ತರಗತಿಗೇ ಹಣ ಹಿಡಿದು ನಿಂತಿದ್ದಳು. ಸರದಿ ಬಂದಾಗ ತನಗೆ ಪೂರ ಟಿಕೆಟೊಂದನ್ನೂ ಹುಡುಗಿಗೆ ಅರ್ಧ ಟಿಕೆಟನ್ನೂ ಕೊಂಡಳು. ಮಧ್ಯಾಹ್ನದ ‘ಷೋ’ ಇನ್ನೂ ಮುಗಿದಿರಲಿಲ್ಲವಾದ್ದರಿಂದ, ವರಾಂಡದಲ್ಲಿದ್ದ ಬೆಂಚುಗಳ ಮೇಲೆ ಹತ್ತು ನಿಮಿಷ ಕೂತಿರಬೇಕಾಯಿತು. ಹುಡುಗಿಯೂ ಬಂದು ಅವಳ ಪಕ್ಕದಲ್ಲಿಯೇ ಕುಳಿತಳು.

ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ

ಅನಸೂಯೆಗೆ ಆಗ ತಾನೊಂದು ನ್ಯಾಯಬಾಹಿರವಾದ ಕಾರ್ಯವನ್ನು ಮಾಡಿದೆನೆಂಬ ಶಂಕೆ ತಲೆದೋರಿತು.

ಹುಡುಗಿಯನ್ನು ನೋಡಿ, ‘ಏನೆ ಮಗು! ನನ್ನ ಕೈಯಿಂದ ಒಂದು ತಪ್ಪು ಕೆಲಸವನ್ನು ಮಾಡಿಸಿಬಿಟ್ಟೆಯಲ್ಲಾ! ನಿನ್ನ ತಾಯಿ ಬಲ್ಲಳೆ? ನೀನು ಕೇಳಿ ಬಂದೆಯ? ನಿನ್ನೊಬ್ಬಳನ್ನೆ ಕಳಿಸಿಕೊಟ್ಟಳೆ?’ ಎಂದು ಕೇಳಿದಳು.

ಹುಡುಗಿ ಏನೊಂದು ಉತ್ತರವನ್ನೂ ಕೊಡಲಿಲ್ಲ. ಹಾಕಿಕೊಂಡಿದ್ದ ಕೋಟನ್ನು ಬಿಚ್ಚಿ ನಾಜೋಕಾಗಿ ಮಡಚಿ ತೊಡೆಯ ಮೇಲಿಟ್ಟುಕೊಂಡಳು. ಮೈಮೇಲೆ ತಿಳಿ ನೀಲಿಬಣ್ಣದ ಫ್ರಾಕ್ ತೊಟ್ಟಿದ್ದಳು. ಕುತ್ತಿಗೆಯಲ್ಲಿ ನವುರಾದ ಚಿನ್ನದ ಸರ ಇತ್ತು. ಉತ್ತರ ಕೊಡಲು ಏನೂ ತೋಚದ ಹುಡುಗಿ ಸರದೊಡನೆ ತನ್ನ ಕೈಬೆರಳುಗಳಿಂದ ಆಡತೊಡಗಿದಳು. ಹುಡುಗಿಯ ಆ ವಿಶಾಲವಾದ ಕಣ್ಣುಗಳಲ್ಲಿ ಚಂಚಲತೆ ಚಪಲತೆ ಕಾಣಬರಲಿಲ್ಲ. ಅವಳ ಸುಂದರವಾದ ಕೈಯೂ ಬೆರಳುಗಳೂ ಮುಂದೆ ಬೆಳೆಯಬಹುದಾದ ಕಲಾನೈಪುಣ್ಯದ ಸೂಚಕಗಳಾಗಿದ್ದುವು. ಹುಡುಗಿ ಒಂದು ಸಲ ತಲೆಯೆತ್ತಿ ಅನಸೂಯೆಯನ್ನು ನೋಡಿ ‘ಪುಣ್ಯಕಥೆಯಲ್ಲವೆ?’ ಎಂದು ಹೇಳಿ ಸುಮ್ಮನಾದಳು.

ಅನಸೂಯೆ ಕೇಳಿದ ಎಲ್ಲ ಪ್ರಶ್ನೆಗಳಿಗೂ ಇದು ಸೂಕ್ತವಾದ ಒಂದೇ ಉತ್ತರವಾಗಿತ್ತು. ಹುಡುಗಿಗೆ ಒಂದು ಪೆಪ್ಸರ್‌ಮಿಂಟ್ ಕೊಟ್ಟು ‘ನಿನ್ನ ಹೆಸರೇನೆ?’ ಕೇಳಿದಳು ಅನುಸೂಯೆ.

‘ಅನಸೂಯೆ.’

‘ಆಶ್ಚರ್ಯ ಇದು. ನಿನ್ನ ಹೆಸರೂ ಅನಸೂಯೆಯೆ!… ನನ್ನ ಹೆಸರೂ ಅನಸೂಯೆ. ಇನ್ನು ಮುಂದಿನ ಹೆಸರು ಅನಸೂಯೆ ಟಿ. ಚಂದ್ರಶೇಖರ ಅಲ್ಲ ತಾನೆ!’

‘ಬರೀ ಅನಸೂಯೆ.’

‘ಅಂತೂ ಇದು ಆಶ್ಚರ್ಯವೆ!’

‘ಸಾಧಾರಣಮಟ್ಟಿಗೆ’ ಎಂದು ಹುಡುಗಿ ಬಾಯಲ್ಲಿದ್ದ ಪೆಪ್ಪರ್‌ಮಿಂಟನ್ನು ನಾಲಗೆಯಿಂದ ತಿರುವುತ್ತ ಹೇಳಿದಳು.

‘ಈ ವಯಸ್ಸಿಗೆ ನಿನ್ನ ಈ ಭಾಷಾಸಂಪತ್ತಿ ಅಪರೂಪ.’

‘ಹೌದೆ?’

‘ಹೌದೆಂದೇ ಕಾಣುತ್ತೆ… ಇರಲಿ. ನೀನು ಸಿನೆಮಾಗಳನ್ನು ಹೆಚ್ಚು ನೋಡುತ್ತೀಯಾ?’

‘ಇಲ್ಲ, ಇದೇ ಮೊದಲು, ನನ್ನ ಹೆಸರು ಅನಸೂಯೆ… ನಿಮ್ಮ ಹೆಸರೂ ಅನಸೂಯೆ. ಈವತ್ತಿನ ಚಿತ್ರದ ಹೆಸರೂ ಸತೀ ಅನಸೂಯೆ. ಇದು ಇನ್ನೂ ಆಶ್ಚರ್ಯವಲ್ಲವೆ!’

ಇದನ್ನು ಓದಿದ್ದೀರಾ?: ಮೇವುಂಡಿ ಮಲ್ಲಾರಿ ಅವರ ಕತೆ | ಸುರಸುಂದರಿ

ಅಷ್ಟು ಹೊತ್ತಿಗೆ ಮಧ್ಯಾಹ್ನದ ‘ಷೋ’ ಮುಗಿದು, ಒಳಗಿದ್ದ ಜನ ಹೊರಕ್ಕೆ ಬಂದರು. ಇವರಿಬ್ಬರೂ ಒಳಕ್ಕೆ ಹೋಗಿ ತಮ್ಮ ತಮ್ಮ ಸ್ಥಾನಗಳನ್ನು ಆರಿಸಿ ಕುಳಿತುಕೊಂಡರು. ಚಿಕ್ಕ ಅನಸೂಯೆ ಸ್ವಲ್ಪ ಮುಂದಿನ ಸೀಟಿನಲ್ಲಿ ಕುಳಿತಳು. ಹತ್ತು ನಿಮಿಷಗಳ ಅನಂತರ ‘ಷೋ’ ಪುನಃ ಮೊದಲಾಯ್ತು.

‘ಷೋ’ ಮುಗಿದಾಗ ಇಬ್ಬರೂ ಬೇರೆ ಬೇರೆಯಾದರು. ಚಿಕ್ಕವಳು ಮನೆಗೆ ಹೋದಳೆಂದುಕೊಂಡು ಅನಸೂಯೆ ತನ್ನ ಮನೆಯ ಕಡೆ ನಡೆದಳು.

ಮುಂದಿನ ನಾಲ್ಕಾರು ದಿನ, ಬಂಗಾಳ ಕೊಲ್ಲಿಯಲ್ಲಿ ಅತೀವ ವಾಯುಮಾನ ಭಿನ್ನತೆಯಿಂದುಂಟಾದ ಜಡಿಮಳೆ, ಕುಳಿರ್ಗಾಳಿ, ಅಹರ್ನಿಶಿ ಬಿಡುವಿಲ್ಲದೆ ನಡೆದಿತ್ತು. ಇದರ ಮುನ್ಸೂಚನೆ ದಿನಪತ್ರಿಕೆಗಳಲ್ಲೂ ಬಂದಿತ್ತು. ಶಾಲಾ ಕಾಲೇಜುಗಳನ್ನೂ ಮುಚ್ಚಬೇಕಾಗಿ ಬಂದಿತು. ಮುಂದಾಲೋಚನೆಯಿದ್ದ ಅನಸೂಯೆ ಭಾನುವಾರದ ದಿನ ಬೆಳಗ್ಗೆಯೇ ವಾಡಿಕೆಯ ದಿನಸಿ ಅಂಗಡಿಗೆ, ಕಾಯಿಪಲ್ಲೆಯದ ಅಂಗಡಿಗೆ, ಹೋಗಿ, ಒಂದು ವಾರಕ್ಕೆ ಆಗುವಷ್ಟು ಅಗತ್ಯಗಳನ್ನು ತಂದುಕೊಂಡಿದ್ದಳು.

ಐದನೆಯ ದಿನ ಆಕಾಶವನ್ನು ದಟ್ಟವಾಗಿ ಕವೆದಿದ್ದ ಮೋಡಗಳು ಸ್ವಲ್ಪ ತೆಳುವಾದುವು. ಅಲ್ಪ ಸ್ವಲ್ಪ ಸೂರ್ಯರಶ್ಮಿಯನ್ನು ಕಂಡು ಜನ ಪ್ರಫುಲ್ಲಚಿತ್ತರಾದರು. ಅಂದು ಸಂಜೆ ಅನಸೂಯೆ ಮಾರ್ಕೆಟ್‌ಗೆ ಹೋಗಿ ತನಗೆ ಬೇಕಾದ್ದನ್ನು ಕೊಂಡು ತಂದು, ಅಡುಗೆ ಮಾಡಿ, ಊಟ ಮುಗಿಸಿ, ರಾಮನಿಗೂ ಹಣ್ಣು ಮೇವುಗಳನ್ನು ಇಟ್ಟು, ಪಂಜರದೊಳಕ್ಕೆ ಸೇರಿಸಿ, ರಾತ್ರಿ ಹತ್ತು ಗಂಟೆಯ ತನಕ ಓದುತ್ತಿದ್ದು, ಅನಂತರ ಹಾಸುಗೆ ಬಿಡಿಸಿ, ದೀಪವಾರಿಸಿ, ಮಲಗಿದಳು.

ಆಗ ಹೊರಬಾಗಿಲನ್ನು ಯಾರೋ ಬಲವಾಗಿ ತಟ್ಟಿದಂತೆ ಸದ್ದಾಯಿತು. ಯಾರೂ ಕೂಗಿ ಕರೆದ ಶಬ್ದ ಕೇಳಿಬರಲಿಲ್ಲ. ಪರಿಚಿತರು ಬಾಗಿಲನ್ನು ತಟ್ಟಿದ್ದರೆ ಆಕೆಯ ಹೆಸರನ್ನು ಕೂಗುತ್ತಿದ್ದರು. ಆಗ ಯಾರೂ ಬಾಯಿ ಬಿಟ್ಟು ಕರೆಯಲಿಲ್ಲ. ಮತ್ತೆ ಬಾಗಿಲನ್ನು ತಟ್ಟಿದ ಶಬ್ದವಾಯಿತು. ಈಗಲೂ ಕರೆದ ಶಬ್ದವಿಲ್ಲ. ‘ಕೂಗಿ ಕರೆದಾರು’ ಎಂದು ಅನಸೂಯೆ ಹಾಸಿಗೆಯಲ್ಲಿ ಎದ್ದು ಕುಳಿತಳು. ಬರೀ ಬಾಗಿಲು ತಟ್ಟಿದ ಶಬ್ದ ಒಂದು ವಿನಾ, ಕರೆದ ಶಬ್ದವಿಲ್ಲ. ಪರಿಚಿತರು, ದಿನಸಿ ಅಂಗಡಿಯ ಆಳುಗಳು, ಹಾಲಿನವನು, ಕಟ್ಟಿಗೆ ಇದ್ದಿಲು ಅಂಗಡಿಯವರು, ಹೀಗೆ ಬಂದು ಬಾಗಿಲು ತಟ್ಟುವುದುಂಟು. ‘ಅಮ್ಮಾ… ಅಮಾವ್ರೇ’ ಎಂದು ಕೂಗಿ ಕರೆಯುವುದೂ ವಾಡಿಕೆ.

ಅನಸೂಯೆಗೆ ಸ್ವಲ್ಪ ಆಶ್ಚರ್ಯವಾಯಿತು. ಸ್ವಲ್ಪ ಭಯವೂ ಆಯಿತೇನೊ! ಇಷ್ಟುಹೊತ್ತಿಗೆ ಕೆಳಗಿನ ಮಾಲಿಕರ ಮನೆಯಲ್ಲಿ ದೊಡ್ಡವರು ಯಾರೂ ಮಲಗಿ ನಿದ್ದೆ ಹೋಗುತ್ತಿರಲಿಲ್ಲ. ಅದು ಅನಸೂಯೆಗೆ ಸ್ವಲ್ಪ ಧೈರ್ಯ ಕೊಟ್ಟಿತು… ಬಾಗಿಲನ್ನು ತಟ್ಟುವ ಶಬ್ದ ಮಾತ್ರ ನಿಲ್ಲಲಿಲ್ಲ. ‘ಕಳ್ಳನೋ ಸುಳ್ಳನೋ ಆಗಿದ್ದರೆ ಹೀಗೆ ಗದ್ದಲ ಮಾಡುತ್ತಿರಲಿಲ್ಲ’ ಎಂಬುದಾಗಿ ತರ್ಕಿಸಿ ಅನಸೂಯೆ ಎದ್ದು ‘ಯಾರು?’ ಎಂದು ಕೂಗಿ ಕೇಳಿದಳು. ಬಾಗಿಲು ತಟ್ಟುವುದನ್ನು ನಿಲ್ಲಿಸಿದ್ದರೆ, ತಟ್ಟುತ್ತಿದ್ದವರಿಗೆ ಅನಸೂಯೆ ‘ಯಾರು?’ ಎಂದು ಕೂಗಿದ್ದುದು ಕೇಳಿಬರುತ್ತಿತ್ತು.

ಇದನ್ನು ಓದಿದ್ದೀರಾ?: ‘ಹೊಯಿಸಳ’ ಅವರ ಕತೆ | ಭಯನಿವಾರಣೆ

ಅನಸೂಯೆ ಸ್ವಲ್ಪ ಧೈರ್ಯ ತಂದುಕೊಂಡು, ಸರ್ವಸಮಯಕ್ಕೂ ನಚ್ಚಿನ ಬಂಟನೆನ್ನಬಹುದಾದ ಕೈಬೆತ್ತ ಒಂದನ್ನು ಬೆನ್ನ ಹಿಂದೆ ಮರೆಸಿಟ್ಟುಕೊಂಡು, ‘ಬಂದೆ…ಬಂದೆ’ ಎನ್ನುತ್ತ ಹೊರಬಾಗಿಲ ಬಳಿಗೆ ಬಂದು, ಮುಂದಿನ ಕೈಸಾಲೆಯ ದೀಪವನ್ನು ‘ಸ್ವಿಚ್ ಆನ್’ ಮಾಡಿ ಅಗಳಿಯನ್ನು ಸಡಿಲಿಸಿ ಎಳೆದು, ತೆರೆದ ಕದದ ಹಿಂದೆ ಅರ್ಧಮರೆಯಾಗುವಂತೆ ನಿಂತು ‘ಯಾರು?’ ಎಂದಳು.

ಕೈಸಾಲೆಯ ದೀಪದ ಪ್ರಕಾಶದಲ್ಲಿ ಬಾಗಿಲನ್ನು ಅಷ್ಟು ಹೊತ್ತು ತಟ್ಟುತ್ತಿದ್ದವರನ್ನು ಅನಸೂಯೆ ನೋಡಿದಳು. ಆಕೆಗೆ ಗುಕ್ಕು ಹಿಡಿದಂತಾಯಿತು. ಮೆಲುದನಿಯಲ್ಲಿ ಮಂದಹಾಸದಿಂದ ‘ನಾನು’ ಎಂದಳು ಕಿಶೋರಿ.

‘ನೀನೇ! ಅನಸೂಯೆ! ಇಷ್ಟು ಹೊತ್ತೂ ಬಾಗಿಲು ತಟ್ಟುತ್ತಿದ್ದವಳು?’

‘ಹೌದು. ತಟ್ಟುತ್ತಲೇ ಇದ್ದೆ… ಬಾಗಿಲು ತೆರೆಯಿರೆಂದು… ನೀವು ಒಳಗೆ ಇದ್ದೀರೆಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ನನ್ನನ್ನು ನೋಡಿ ಈಗ ನಿಮಗೆ ಸಂತೋಷವಾಗುವುದಿಲ್ಲವೆ?’

ಅನಸೂಯೆಗೆ ಏನೆನ್ನುವುದಕ್ಕೂ ಆಗಲಿಲ್ಲ. ಹುಡುಗಿ ತೊಟ್ಟಿದ್ದ ಉಡುಗೆ ಇಂದು ಬೇರೆ ಆಗಿತ್ತು. ತಲೆಯ ಎರಡು ಜಡೆಗಳೂ ಇರ್ಕಡೆಗಳಲ್ಲಿ ಸುರುಳಿ ಸುತ್ತಿಕೊಂಡು ಅಂದವಾಗಿ ಕುಳಿತಿದ್ದುವು. ಬೈತಲೆ ನೆಟ್ಟಗಿತ್ತು. ಮೈಮೇಲೆ ಹಿಂದಿನ ವೆಲ್ವೆಟೀನ್ ಕೋಟೇ ಇದ್ದಿತಾದರೂ, ಕುತ್ತಿಗೆಯ ಸುತ್ತ ಒಂದು ಬಿಳಿಯ ಉಣ್ಣೆಯ ಮಫ್ಲ‌ರ್ ಇತ್ತು.

‘ಇಷ್ಟು ಹೊತ್ತೂ ಹೊರಗೆ ಈ ಚಳಿಯಲ್ಲೇ ನಿಂತಿದ್ದೆ. ನನ್ನನ್ನು ಒಳಕ್ಕೆ ಕರೆದುಕೊಳ್ಳುವುದಿಲ್ಲವೆ!’

‘ಇಷ್ಟು ರಾತ್ರಿಯಲ್ಲಿ!’

‘ಆದರೇನಾಯ್ತು? ನನಗೆ ನಿಮ್ಮನ್ನು ಕಾಣಬೇಕೆಂಬ ಆಶೆ ಆಯ್ತು, ಬಂದೆ. ಮೂರುನಾಲ್ಕು ದಿನ ಮಳೆಬಿಡಲೇ ಇಲ್ಲವಲ್ಲ, ನನ್ನನ್ನು ಒಳಕ್ಕೆ ‘ಬಾ’ ಎನ್ನಿರಿ. ಇಲ್ಲಿ ಚಳಿಯಿಂದ ಸೆಟೆದುಹೋಗುತ್ತಿದ್ದೇನೆ. ನಾನು ತೊಟ್ಟಿರುವ ಬಟ್ಟೆ ಎಲ್ಲ ನೂಲಿನದು…ಬರೀ ನೂಲು’-

ಎನ್ನುತ್ತ ಹುಡುಗಿ ತಾನೇ ಒಳಕ್ಕೆ ಬಂದಳು. ಮುಂದೆ ದೊಡ್ಡ ಕೋಣೆಯೊಳಕ್ಕೆ ನಡೆದು, ‘ಅಬ್ಬ! ಇಲ್ಲಿ ಚೆನ್ನಾಗಿದೆ… ಬೆಚ್ಚಗಿದೆ’ ಎನ್ನುತ್ತ ಕೋಟು ಮಫ್ಲರ್‍‌ಗಳನ್ನು ಬಿಚ್ಚಿ ಚೆನ್ನಾಗಿ ಮಡಿಚಿ ಕುರ್ಚಿಯೊಂದರಲ್ಲಿಟ್ಟಳು. ಅವಳು ಒಳಗೆ ತೊಟ್ಟಿದ್ದ ನೂಲಿನ ಫ್ರಾಕ್, ಮೈಯ ಬಣ್ಣಕ್ಕೆ ಮೆರಗು ಕೊಟ್ಟಂತೆ, ತುಸು ಕೆಂಪು ಬಣ್ಣದ್ದಿತ್ತು. ಚೆಂದವಾಗಿ ಹೊಲೆಯಲ್ಪಟ್ಟಿತ್ತು. ಹುಡುಗಿ ಅತ್ತ ಇತ್ತ ಕಣ್ಣು ಹೊರಳಿಸಿ ನೋಡಿ ಎದ್ದು ನಡೆಯುತ್ತಾ ‘ಹುಂ! ಈ ಮನೆ ನನಗೆ ಹಿಡಿಸಿತು. ಇಲ್ಲಿ ಎಲ್ಲವೂ ಚೆನ್ನಾಗಿವೆ. ನೆಲಕ್ಕೆ ಹಾಸಿರುವ ರತ್ನಕಂಬಳಿ ಕಾಲಿಗೆ ಬೆಚ್ಚಿಗೆ ಹಿತವಾಗಿದೆ. ಅದರ ಹಸಿರು ಬಣ್ಣ ನನಗೆ ಇಷ್ಟ’ ಎಂದೆಲ್ಲ ಮಾತಾಡುತ್ತ, ಮುಂದಕ್ಕೆ ಮೂಲೆಯೊಂದರಲ್ಲಿಟ್ಟಿದ್ದ ಹೂದಾನಿಯ ಬಳಿಗೆ ನಡೆದು ಹೂದಾನಿಯಲ್ಲಿ ಜೋಡಿಸಿಟ್ಟಿದ್ದ ಕಾಗದದ ಹೂಗಳನ್ನು ಮುಟ್ಟಿ ನೋಡಿದಳು. ವಿವೇಚನೆಯ ನ್ಯೂನತೆಯನ್ನು ಆಕ್ಷೇಪಿಸುವ ತೆರದಲ್ಲಿ ‘ಕಾಗದದ ಹೂಗಳು ಯಾವ ತೃಪ್ತಿ! ಮುಟ್ಟುವುದಕ್ಕೂ ಹಿತವಿಲ್ಲ… ಮೂಸುವುದಕ್ಕೂ ಹಿತವಿಲ್ಲ. ಈ ಕೃತ್ರಿಮ ವಸ್ತುಗಳು ಏನೂ ಉತ್ಸಾಹ ಕೊಡುವುವಲ್ಲ!’ ಎಂದು ಹೇಳಿ, ಹಿಂದಕ್ಕೆ ಬಂದು ಅಲ್ಲಿದ್ದ ಮೆತ್ತನೆಯ, ಸೋಫ ಕುರ್ಚಿಯಲ್ಲಿ ಉಟ್ಟಿದ್ದ ಫ್ರಾಕನ್ನು ಅಂದವಾಗಿ ಕೈಗಳಿಂದ ಹರವಿಕೊಂಡು ಕುಳಿತಳು.

‘ನಿನಗೆ ಏನು ಬೇಕು, ಅನಸೂಯೆ? ಇಷ್ಟು ಹೊತ್ತಿನಲ್ಲಿ ಬಂದೆಯಲ್ಲಾ?’ ತಾನು ನಿಂತಿದ್ದ ಸ್ಥಳದಿಂದಲೆ ಬೆಪ್ಪಾಗಿ ಎಲ್ಲವನ್ನೂ ನೋಡುತ್ತಿದ್ದ ಅನಸೂಯೆ ಕೇಳಿದಳು.

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

‘ಕುಳಿತುಕೊಳ್ಳಿ. ನೀವು ನಿಂತೇ ಕೇಳುತ್ತಿರುವುದನ್ನು ನೋಡಿದರೆ, ನನ್ನನ್ನು ಈ ಚಳಿಯಲ್ಲಿ ಈಗಲೆ ಹೊರಗೆ ಅಟ್ಟುವಿರೆಂದು ಭಯವಾಗುತ್ತಿದೆ.’

ಅನಸೂಯೆ ವಿಧಿಯಿಲ್ಲದೆ ಒಂದು ಬೆತ್ತದ ಕುರ್ಚಿಯಲ್ಲಿ ಕುಳಿತುಕೊಂಡು, ಮತ್ತೆ ಚಿಕ್ಕವಳನ್ನು ಕೇಳಿದಳು: ‘ನಿನಗೆ ಏನಾದರೂ ಬೇಕೇನು?’

‘ನಾನು ನಿಮ್ಮನ್ನು ಕಾಣಲು ಬಂದದ್ದು ನಿಮಗೆ ಏನೂ ಉತ್ಸಾಹವಿಲ್ಲವೆಂದೇ ಕಾಣುತ್ತಿದೆ.’

ಹುಡುಗಿ ಮತ್ತೆ ಕೇಳಿದ ಈ ಪ್ರಶ್ನೆಗೆ ಅನಸೂಯೆ ಉತ್ತರವೀಯಲು ಆಗಲಿಲ್ಲ. ಮನಸ್ಸಿನಲ್ಲಿ ಒಂದು ಇರುತ್ತ, ಬಾಯಲ್ಲಿ ಬೇರೊಂದನ್ನು ಹೇಳಲು ಅವಳಿಗೆ ಸಾಧ್ಯವಾಗಲಿಲ್ಲ. ಅವಳ ಕೈಯೇನೊ ಒಂದು ಮೂಕ ಅಭಿನಯವನ್ನು ತೋರಿತು. ಚಿಕ್ಕವಳು ಅದನ್ನು ಕಂಡು ‘ಕಿಲಕಿಲ’ ನಕ್ಕು, ಸೋಫದ ಬೆನ್ನಿಗೆ ಚೆನ್ನಾಗಿ ಒರಗಿ ಕುಳಿತಳು. ಆಗ ಸೂರಿನಿಂದ ತೂಗುಬಿಟ್ಟಿದ್ದ ಪ್ರಕಾಶವಾದ ಎಲೆಕ್ಟ್ರಿಕ್ ದೀಪದ ಬೆಳಕು ಚಿಕ್ಕವಳ ಮುಖದ ಮೇಲೆ ಚೆನ್ನಾಗಿ ಪ್ರಸರಿಸಿತು. ಹಿಂದೆ ಸಿನಿಮದ ದಿನ ಅನಸೂಯೆ ಚಿಕ್ಕವಳ ಮುಖದಲ್ಲಿ ಕಂಡಿದ್ದ ರಕ್ತಹೀನತೆ ಈಗ ಇರಲಿಲ್ಲ. ಈಗ ಮುಖ ತುಂಬಿತ್ತು, ಕಾಂತಿಯಿಂದಿತ್ತು. ಹಿರಿಯ ಅನಸೂಯೆ ಕೇಳಿದಳು:

‘ನಾನಿರುವ ಮನೆಯನ್ನು ನೀನು ಹೇಗೆ ಪತ್ತೆ ಮಾಡಿದೆ?’

‘ಪ್ರಶ್ನೆಯ ಆವಶ್ಯಕತೆಯೇ ಇಲ್ಲ. ನನ್ನ ಹೆಸರನ್ನು ನಾನೇ ಮರೆಯುವುದು ಸಾಧ್ಯವಿಲ್ಲ. ಬೇರೆಯಾಗಿದ್ದರೆ ಮರೆತುಬಿಡುತ್ತಿದ್ದೆನೇನೊ!’

‘ಒಳ್ಳೇ ಚೂಟಿ ಹುಡುಗಿ ನೀನು! ನಿಮ್ಮಮ್ಮ ನಿನ್ನನ್ನು ಈ ಅವೇಳೆಯಲ್ಲಿ ಬೀದಿ ಅಲೆಯಲು ಬಿಟ್ಟಳೆ? ಈ ಚಳಿಯಲ್ಲಿ ಈ ಸೊಳ್ಳೆಪರದೆ ಬಟ್ಟೆಗಳನ್ನು ನಿನಗೆ ಉಡಿಸಿ ಕಳಿಸಿರಬೇಕಾದರೆ, ಆಕೆಗೆ ತಲೆ ಕೆಟ್ಟಿರಬೇಕು?’

ಚಿಕ್ಕವಳು ಎದ್ದು, ಒಂದುಕಡೆ ತೂಗುಹಾಕಿದ್ದ ಗಿಳಿಯ ಪಂಜರದ ಕೆಳಕ್ಕೆ ನಡೆದು, ಕತ್ತೆತ್ತಿ ನೋಡಿ, ‘ಓ! ಗಿಳಿ! ಪಂಚವರ್ಣದ ಗಿಳಿ ನಿದ್ದೆ ಮಾಡುತ್ತಿದೆ. ನಾನದನ್ನು ಎಬ್ಬಿಸಿದರೆ ನೀವೇನಾದರೂ ಅಂದುಕೊಳ್ಳುತ್ತೀರಾ? ಮಾತನಾಡುತ್ತದೆಯೆ?’ ಎಂದು ಕೇಳಿದಳು.

‘ರಾಮನನ್ನು ನಿದ್ದೆ ಮಾಡಲು ಬಿಡು. ಸುಮ್ಮನಿರು, ನೀನೀಗ ಅದನ್ನು ಎಚ್ಚರಗೊಳಿಸಲು ಪ್ರಯತ್ನಿಸಬೇಡ.’

‘ಹಾಗೆಯೆ ಆಗಲಿ, ಗಿಳಿಯ ಮಾತುಗಳು ಕೇಳುವುದಕ್ಕೆ ಚೆನ್ನು… ಹೋಗಲಿ, ಈಗ ನಾನು ಬಹಳ ಹಸಿದಿದ್ದೇನೆ; ತಿನ್ನುವುದಕ್ಕೆ ಏನಾದರೂ ಕೊಡಿ. ಕಡೆಗೆ ಒಂದು ಬಾಳೆಯ ಹಣ್ಣು, ಒಂದು ಬಟ್ಟಲು ಹಾಲು ಇದ್ದರೂ ಸಾಕು.’

‘ಏನಿದೆಯೋ ನೋಡುತ್ತೇನೆ. ಹಾಲಂತೂ ಕೊಡುತ್ತೇನೆ. ಕುಡಿದು ಬಿಟ್ಟು ಜಾಣೆಯಂತೆ ಮನೆಗೆ ಹೋಗುತ್ತೀಯಲ್ಲವೆ? ನೋಡು, ನಡುರಾತ್ರಿಯಾಗುತ್ತ ಬಂತು?’

‘ಹೊರಗೆ ತುಂಬ ಕತ್ತಲು, ಬಲು ಚಳಿ.’

‘ಇಷ್ಟು ಅವೇಳೆಯಲ್ಲಿ ನೀನಿಲ್ಲಿಗೆ ಬರಲೇಬಾರದಿತ್ತು.’ ಹೀಗೆಂದಾಗ ಅನಸೂಯೆಗೆ ಗುಕ್ಕು ಹಿಡಿದಂತಾಯಿತು. ‘ಹೊರಗೆ ಚಳಿಯಾದರೆ ನಾನೇನು ಮಾಡಲಿ? ನೆಟ್ಟಗೆ ಮನೆಗೆ ಓಡಿಬಿಡು. ನೀನೆಲ್ಲಿಗೆ ಹೋದೆಯೆಂದು ನಿನ್ನ ತಾಯಿ ನಿನಗಾಗಿ ಊರೆಲ್ಲ ಹುಡುಕುತ್ತಿರುವರೋ ಏನೋ! ತಿನ್ನುವುದಕ್ಕೆ ಕೊಟ್ಟರೆ ಖಂಡಿತ ಹೊರಟುಹೋಗುತ್ತೇನೆಂದು ಹೇಳು.’

ಚಿಕ್ಕವಳಿಗೆ ಇದಕ್ಕೇನು ಉತ್ತರ ಕೊಡಬೇಕೆಂದು ಹೊಳೆಯಲಿಲ್ಲ. ಒಂದರ್ಧನಿಮಿಷ ತಲೆಯ ಹಿಂಭಾಗವನ್ನು ಆಲೋಚನೆಗಾಗಿ ಕೆರೆದುಕೊಂಡಳು. ಹೊಳೆಯಲಿಲ್ಲ. ಅನಂತರ ಮುಖವನ್ನು ಗಿಳಿಯ ಪಂಜರದ ಕಡೆಗೆ ತಿರುಗಿಸಿಕೊಂಡು ‘ಹೂಂ’ ಎಂದಳು.

ಅನಸೂಯೆ ಅಡುಗೆಮನೆಗೆ ಹೋಗಿ ಗ್ಯಾಸ್ ಸ್ಟೋವ್ ಹೊತ್ತಿಸಿದಳು. ಥಂಡಿಯ ಹೊತ್ತು ತಣ್ಣನೆ ಹಾಲನ್ನು ಚಿಕ್ಕವಳಿಗೆ ಕೊಡಲು ಅವಳಿಗೆ ಮನಸ್ಸು ಬರಲಿಲ್ಲ. ಸದ್ಯ ಆ ಮಗು ಬೇಗನೆ ಮನೆ ಸೇರಿಕೊಂಡರೆ, ನೆಮ್ಮದಿಯಾಗಿ ನಿದ್ದೆಹೋಗಬಹುದೆಂದಿದ್ದ ಆಕೆಗೆ ಸ್ಟೋವ್ ಹೊತ್ತಿಸುವುದು ಏನೂ ಶ್ರಮವಾಗಲಿಲ್ಲ. ತಂತಿಯ ಅಲ್ಮೆರಾದಲ್ಲಿಟ್ಟಿದ್ದ ಹಾಲಿನಲ್ಲಿ ಒಂದು ಲೋಟದಷ್ಟು ಕಾಯಿಸುವ ಪಾತ್ರೆಗೆ ಸುರಿದುಕೊಂಡು ಅದನ್ನು ಬಿಸಿ ಮಾಡಲು ಇಟ್ಟಳು… ‘ಏನಿರಬಹುದು ಈ ಹುಡುಗಿಯ ವಯಸ್ಸು? ಹತ್ತೆ? ಹನ್ನೊಂದೆ? ಅಥವಾ ಹನ್ನೆರಡೆ? ಅಬ್ಬ ಎಷ್ಟೆಲ್ಲ ಮಾತನಾಡುತ್ತಾಳೆ!… ಇಷ್ಟು ಅವೇಳೆಯಲ್ಲಿ ಇವಳೊಬ್ಬಳೆ ಇಲ್ಲಿಗೆ ಬಂದಳೆ? ಮನೆಯನ್ನು ಇಷ್ಟು ಹೊತ್ತಿನಲ್ಲಿ ಹೇಗೆ ಪತ್ತೆ ಮಾಡಿಕೊಂಡು ಬಂದಳು?… ಅಲ್ಲ, ಈಗ ಇವಳಿಗೆ ಹಸಿವಿದೆಯೆ!’ ಎಂದೆಲ್ಲ ಯೋಚನೆ ಮಾಡುತ್ತಿದ್ದಾಗ ಹಾಲು ಕುಡಿಯಬಹುದಾದಷ್ಟು ಬಿಸಿಯಾಯಿತು. ಹೊರಗೆ ರಾಮ, ‘ಓ ಬೆಳಗಾಯಿತು… ಬೆಳಗಾಯಿತು… ಬೆಳಗಾಯಿತು-ರಾಮ…ರಾಮ’ ಎಂದಿತು.

‘ಅನಸೂಯೆ, ರಾಮನನ್ನು ಎಬ್ಬಿಸಬೇಡವೆಂದು ನಿನಗೆ ಹೇಳಿದ್ದೆ… ಆದರೂ ನೀನು…’

ಉತ್ತರ ಬರಲಿಲ್ಲ. ಹಿರಿಯ ಅನಸೂಯೆ ಇನ್ನೊಂದು ಸಲ ಹೇಳಿದನ್ನೆ ಕೂಗಿ ಹೇಳಿದಳು. ಅದಕ್ಕೂ ಉತ್ತರ ಬರಲಿಲ್ಲ… ಪಿಂಗಾಣಿ ತಟ್ಟೆಯೊಂದರಲ್ಲಿ ಎರಡು ಕೋಡುಬಳೆ, ಒಂದು ರಸಬಾಳೆಹಣ್ಣು, ಒಂದು ಗ್ಲಾಸಿನಲ್ಲಿ ಹಾಲು ಹಿಡಿದು ತಂದು ಅದನ್ನು ಕೋಣೆಯ ಚಿಕ್ಕ ಮೇಜೊಂದರ ಮೇಲಿಟ್ಟಳು.

ಇದನ್ನು ಓದಿದ್ದೀರಾ?: ‘ಕ್ಷೀರಸಾಗರ’ ಅವರ ಕತೆ | ನಮ್ಮೂರಿನ ಪಶ್ಚಿಮಕ್ಕೆ

ಕೋಣೆಯಲ್ಲಿ ಚಿಕ್ಕವಳು ಇರಲಿಲ್ಲ. ರಾಮನ ಪಂಜರದ ನವುರು ಬುರುಕಿ ಮೇಲಕ್ಕೆತ್ತಲ್ಪಟ್ಟಿತ್ತು. ರಾಮ ಮತ್ತೆ ಅಂದಿತು! ‘ಓ ಬೆಳಗಾಯಿತು… ಬೆಳಗಾಯಿತು. ರಾಮ…ರಾಮ.’

ಇಷ್ಟರಲ್ಲಿ ಚಿಕ್ಕವಳು ಎಲ್ಲಿಗೆ ಹೋದಳೆಂದು ಅನಸೂಯೆಗೆ ಆಶ್ಚರ್ಯವಾಯಿತು. ಪಕ್ಕದ ಕೋಣೆಯನ್ನು ಹೊಕ್ಕು ನೋಡಿದಳು. ಆ ಕೋಣೆಯಲ್ಲಿ ಹಿರಿಯ ಅನಸೂಯೆ ಅನೇಕ ಸುಂದರ ಆಕರ್ಷಣೀಯ ವಸ್ತುಗಳನ್ನು ಅಲಂಕಾರವಾಗಿ ಜೋಡಿಸಿಟ್ಟಿದ್ದಳು. ಒಂದು ದೊಡ್ಡ ಗಾಜಿನ ಬೀರುವಿನಲ್ಲಿ ಪುಸ್ತಕಗಳಿದ್ದುವು. ಪಕ್ಕದಲ್ಲಿ ಓದುವುದಕ್ಕೆ, ಬರೆಯುವುದಕ್ಕೆ ಅಂದವಾದ ಮೇಜು. ಮೇಲೊಂದು ವಿದ್ಯುತ್ ದೀಪದ ಸ್ಟ್ಯಾಂಡ್. ಒಂದು ಮೂಲೆಯಲ್ಲಿ ಅಂತಸ್ತುಗಳಿದ್ದ ಮೇಜು. ಒಂದೊಂದು ಅಂತಸ್ತಿನಲ್ಲಿಯೂ ಚಿಕ್ಕ ಚಿಕ್ಕ, ಬೆಳ್ಳಿಯ, ಮತ್ತು ಮಣ್ಣಿನ ಬಣ್ಣದ ಗೊಂಬೆಗಳು. ಮೇಲಿನ ಅಂತಸ್ತಿನಲ್ಲಿ, ಸಣ್ಣ ಮಗುವಿನ ನಿಜ ಆಕಾರದಷ್ಟೆ ಗಾತ್ರದ ಒಂದು ಸೆಲುಲಾಯ್ಡ್‌ನಲ್ಲಿ ಎರಕ ಹುಯ್ದಿದ್ದ ಮುದ್ದಾದ ಒಂದು ಹೆಣ್ಣು ಗೊಂಬೆ. ಅದಕ್ಕೆ ಸುಂದರವಾದ ರೇಷ್ಮೆಯ ಫ್ರಾಕ್ ಹಾಕಿತ್ತು. ತಲೆಗೆ ಒಂದು ಬಣ್ಣದ ರಿಬ್ಬನ್ ಇತ್ತು. ಅದರ ಕೊರಳಲ್ಲಿ ಚಿನ್ನದ ರೇಖಿನ ಪದಕದ ಸರ ‘ಫಳಫಳನೆ’ ಹೊಳೆಯುತ್ತಿತ್ತು.

ಚಿಕ್ಕವಳು ಆ ಕೋಣೆಯಲ್ಲಿ ನಿಂತು ಬೊಂಬೆಯನ್ನೇ ನೋಡುತ್ತಿದ್ದಳು.

‘ಇಲ್ಲಿ ಏನು ಮಾಡುತ್ತಿದ್ದೀಯೆ ನೀನು!’

ಚಿಕ್ಕವಳು ಕತ್ತೆತ್ತಿ ಅನಸೂಯೆಯನ್ನು ನೋಡಿದಳು. ಅವಳ ಕಣ್ಣುಗಳಲ್ಲಿ ಪುನಃ ಅದೇ ಆಳವಾದ ನಿಗೂಢ ದೃಷ್ಟಿ ಇತ್ತು.

‘ಏನನ್ನೂ ಮಾಡುತ್ತಿಲ್ಲ. ಸುಮ್ಮನೆ ನೋಡುತ್ತಿದ್ದೆ. ಎಲ್ಲವೂ ಚೆನ್ನಾಗಿದೆ. ಕಾಗದದ ಹೂವಿನಂತೆಯೆ… ಅದೂ ಒಂದು ಗೊಂಬೆ. ಅದರ ಕತ್ತಿನಲ್ಲಿರುವ ಸರ ಬಲು ಚೆನ್ನಾಗಿದೆ’ ಎನ್ನುತ್ತ ಆ ಸರವನ್ನು ತನ್ನ ಕೈಗೆ ಎತ್ತಿಕೊಂಡಳು.

ಅನಸೂಯೆಗೆ ಗುಕ್ಕು ಹಿಡಿದಂತಾಯಿತು. ತಲೆ ಸುತ್ತು ಬಂದಂತೆ ಆಯಿತು. ಎದೆ ಡವಡವ ಬಡಿದುಕೊಳ್ಳಲಾರಂಭಿಸಿತು. ಆಸರೆಗಾಗಿ ಗೋಡೆಗೆ ಒರಗಿ ನಿಂತುಕೊಂಡು- ‘ಆ ಸರವನ್ನು ಅಲ್ಲಿಯೆ ಇಟ್ಟುಬಿಡು, ಮಗು. ಅದು ನನ್ನ ಯಜಮಾನರು ನನಗೆ ಕೊಟ್ಟಿದ್ದು… ನೆನಪಿನ ವಸ್ತುವದು’ ಎಂದು ಕಂಪಿಸುತ್ತಿದ್ದ ಧ್ವನಿಯಲ್ಲಿ ಅಂದಳು.

‘ಇದು ತುಂಬ ಚೆನ್ನಾಗಿದೆ. ನೀವು ನನಗೆ ಕೊಡಿ. ನಾನು ಹಾಕಿಕೊಳ್ಳುತ್ತೇನೆ’

ಅನಸೂಯೆಗೆ ಅದು ಅಭಿಜ್ಞಾನಾಭರಣ. ಅದನ್ನು ಚಿಕ್ಕವಳ ಕೈಯಿಂದ ರಕ್ಷಿಸಿಕೊಳ್ಳುವ ಬಗೆಯಾಗಲಿ, ಅದಕ್ಕೆ ತಕ್ಕ ಮಾತಿನ ಚಾತುರ್ಯವಾಗಲಿ ಅವಳಿಗೆ ಹೊಳೆಯಲಿಲ್ಲ. ಇದನ್ನು ಯಾರೊಡನೆ ಹೇಳಿಕೊಳ್ಳುವುದು? ಕೇಳುವವರಾರು? ಅಲ್ಲಿ, ಅಂತಹ ತುಂಬುಪಟ್ಟಣದಲ್ಲಿ, ಅಕಸ್ಮಾತ್ ಒದಗಬಹುದಾದ ಇಂತಹ ಸಂದರ್ಭಗಳಲ್ಲಿ ನಾನು ಒಬ್ಬೊಂಟಿಗಳೂ ನಿಸ್ಸಹಾಯಕಳೂ ಆಗಿರುವೆನೆಂದು ಅಷ್ಟು ವರ್ಷಗಳನಂತರ ಆಕೆಗೆ ಥಟ್ಟನೆ ಎಚ್ಚರಿಸಿದಂತಾಯಿತು.

*

ಚಿಕ್ಕವಳು ದೊಡ್ಡ ಕೋಣೆಗೆ ಸಂತೋಷದಿಂದ ಹಿಂದಿರುಗಿ, ಸೋಫದಲ್ಲಿ ಕುಳಿತು, ಕೋಡುಬಳೆ, ಬಾಳೆಹಣ್ಣುಗಳನ್ನು ತಿಂದಳು. ಹಾಲನ್ನು ಕುಡಿದಳು. ಈಗ ಅವಳ ಕುತ್ತಿಗೆಯಲ್ಲಿ ಆ ಪದಕಸರ, ಗೊಂಬೆಯ ಎದೆಯ ಮೇಲಿದ್ದಂತೆ ನಿಶ್ಚಲವಾಗಿರದೆ ಜೀವದಿಂದ ಕೂಡಿ ನಲಿನಲಿದು ನಿಗಿನಿಗಿ ಹೊಳೆಯುತ್ತಿತ್ತು. ‘ಕೋಡುಬಳೆ ಚೆನ್ನಾಗಿದೆ, ಹಾಲಿಗೆ ಒಂದು ಚಿಟಿಕೆ ಸಕ್ಕರೆ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಏಕೆ, ಮನೆಯಲ್ಲಿ ಏನೂ ಸಿಹಿತಿಂಡಿ ಇಲ್ಲವೆ? ನನಗೆ ಸಿಹಿ ಇಷ್ಟ’ ಎಂದಳು.

ಇದನ್ನು ಓದಿದ್ದೀರಾ?: ಟೇಂಗ್ಸೆ ಗೋವಿಂದರಾವ್ ಅವರ ಕತೆ | ಗಂಗೆಯ ಗುತ್ತಿಗೆ

ಅನಸೂಯೆ ಬೆಪ್ಪು ಹಿಡಿದವಳಂತೆ ಕುಳಿತುಕೊಂಡು, ಚಿಕ್ಕವಳು ತಿನ್ನುತ್ತಿದ್ದುದನ್ನೇ ನೋಡುತ್ತಿದ್ದಳು… ಮಾತನಾಡಲಿಲ್ಲ. ಮಾತನಾಡುವುದಕ್ಕೆ ಆಗಲಿಲ್ಲ.

‘ಸಿಹಿ ಏನೂ ಇಲ್ಲವೆ ಮನೆಯಲ್ಲಿ?’ ಇನ್ನೊಮ್ಮೆ ಕೇಳಿದಳು ಚಿಕ್ಕವಳು.

ಅನಸೂಯೆಗೆ ಈಗ ನೆಲಕ್ಕೇ ಕುಸಿದಂತಾಯಿತು. ಒಂದು ಬಗೆಯಲ್ಲ, ನಾನಾ ಬಗೆಯ ಯೋಚನೆಗಳೂ ಸಂಕಟಗಳೂ ಏಕಕಾಲದಲ್ಲಿ ಆಕೆಯ ಎದೆಯಲ್ಲಿ ತಳಮಳಿಸತೊಡಗಿದ್ದುವು. ಆಕೆ ತನಗಿದ್ದ ಚೈತನ್ಯವನ್ನೆಲ್ಲ ಹೇಗೋ ಒಟ್ಟುಗೂಡಿಸಿಕೊಂಡು ‘ತಿನ್ನಲು ಕೊಟ್ಟರೆ ಹೋಗುತ್ತೇನೆಂದು ಮಾತು ಕೊಟ್ಟಿದ್ದೆಯಲ್ಲವೆ ನೀನು… ಈಗ ತಿಂದು ಆಯಿತಲ್ಲ’ -ಎಂದು ಕೇಳಿಯೇಬಿಟ್ಟಳು.

‘ಹೌದೆ… ಹಾಗೆಂದೆನೆ!’

‘ಹೌದು. ಆ ಭರವಸೆಯ ಮಾತಿನ ಮೇಲೆಯೆ ನಿನಗೆ ತಿನ್ನಲು ಕೊಟ್ಟೆ… ಹಾಲು ಕಾಯಿಸಿಕೊಟ್ಟೆ. ನನಗೆ ಯಾಕೋ ಈಗ ಬಲು ಆಯಾಸವಾಗುತ್ತಿದೆ. ನಾನು ನಿದ್ದೆ ಮಾಡಬೇಕು. ನೀನು ಬೇಗ ಮನೆಗೆ ಹೋಗು, ಜಾಣೆ.’

‘ಸಿಡಿಮಿಡಿಗೊಳ್ಳಬಾರದು. ನಾನು ಕಾಡಿಸಿದೆನೆಂದೇ ಎಣಿಕೆಯಾಗುತ್ತದೆ.’

ಚಿಕ್ಕವಳು ಎದ್ದು ನಿಂತು ತನ್ನ ಕೋಟನ್ನು ತೊಟ್ಟುಕೊಂಡಳು. ಮಫ್ಲರನ್ನು ಕುತ್ತಿಗೆಗೆ ಎರಡು ಸುತ್ತು ಸುತ್ತಿ ಎರಡು ಕೊನೆಗಳನ್ನೂ ಸಮನಾಗಿ ಜೋತುಬಿಟ್ಟಳು. ಕನ್ನಡಿಯ ಮುಂದೆ ನಿಂತು, ಕೆದರಿದ್ದ ತಲೆಕೂದಲನ್ನು ನೇವರಿಸಿ ಅಣಗಿಸಿದಳು. ಅನಸೂಯೆಯ ಮುಂದೆ ಬಂದು ನಿಂತು ‘ನನ್ನನ್ನು ಒಂದು ಸಲ ಮುತ್ತಿಟ್ಟುಕೊಳ್ಳುವುದಿಲ್ಲವೆ?’ ಎಂದು ಕೇಳಿದಳು.

‘ಇಲ್ಲ. ಈಗ ನನ್ನ ಮೈಗೆ, ಮನಸ್ಸಿಗೆ ಯಾವುದಕ್ಕೂ ನೆಮ್ಮದಿಯಿಲ್ಲ.’

ಚಿಕ್ಕವಳು ನಿರಾಶಾಭಾವದಿಂದ ದೊಡ್ಡವರು ಮಾಡುವ ತೆರದಲ್ಲಿ ತನ್ನೆರಡು ಭುಜಗಳನ್ನು ಒಟ್ಟಿಗೆ ಮೇಲಕ್ಕೆತ್ತಿ ಇಳಿಸಿ ಮುಖವನ್ನು ಸಪ್ಪಗೆ ಮಾಡಿಕೊಂಡು ‘ನಿಮ್ಮ ಇಷ್ಟ’ ಎಂದಳು. ಕಾಗದದ ಹೂಗಳಿದ್ದ ಹೂದಾನಿಯ ಬಳಿಗೆ ನಡೆದು ಅದನ್ನು ತನ್ನ ಕೈಗಳಲ್ಲೆತ್ತಿಕೊಂಡು ‘ಇಂಥವುಗಳೇ ಆತ್ಮವಂಚನೆಗೆ ಕಾರಣಗಳು’ ಎನ್ನುತ್ತ, ತೆರೆದಿದ್ದ ಕಿಟಕಿಯ ಬಳಿಗೆ ನಡೆದು ಕಿಟಕಿಯಿಂದ ಹೊರಗೆ ತಲೆಹಾಕಿ ಕೆಳಗೆ ನೋಡಿ, ಏನೊಂದೂ ಅಡ್ಡಿ ಇಲ್ಲವೆಂಬುದನ್ನು ನಿರ್ಧರಿಸಿ ಆ ಹೂದಾನಿಯನ್ನು ಹೂಗಳೊಂದಿಗೆ ಕಿಟಕಿಯಿಂದ ಹೊರಕ್ಕೆ ಎಸೆದಳು. ಅದು ಕೆಳಗೆ ನೆಲದ ಮೇಲೆ ಬಿದ್ದು ನುಚ್ಚುನೂರಾಯಿತು. ಕುಳಿತು ಅವಾಕ್ಕಾಗಿ ಬಿಚ್ಚುಗಣ್ಣಿನಿಂದ ನೋಡುತ್ತಿದ್ದ ಅನಸೂಯೆ ಆ ಶಬ್ದಕ್ಕೆ ಪುಟಚೆಂಡಿನಂತೆ ಎಗರಿ ಕುಳಿತಳು.

ಅನಂತರ ಚಿಕ್ಕವಳು ಹೊರಬಾಗಿಲ ಕಡೆಗೆ ನಡೆದಳು. ಯಂತ್ರಚಾಲಿತ ಪ್ರತಿಮೆಯಂತೆ ಅನಸೂಯೆ ಬಾಗಿಲು ಮುಚ್ಚಿಕೊಳ್ಳಲು ಹಿಂದೆಯೆ ನಡೆದಳು. ಚಿಕ್ಕವಳು ಹೊರಕ್ಕೆ ಹೋಗಿ ತಾನಾಗಿ ಬಾಗಿಲನ್ನು ಎಳೆದು ಮುಚ್ಚಿಕೊಳ್ಳುತ್ತ ಒಂದು ಸಲ ಕತ್ತೆತ್ತಿ ಅನಸೂಯೆಯ ಮುಖವನ್ನು ನೋಡಿದಳು. ಅನಸೂಯೆಯ ಕಣ್ಣುಗಳಲ್ಲಿ ಮಹಾಭಯ ಮೂಡಿದಂತೆ ಇತ್ತು; ಆದರೆ ಚಿಕ್ಕವಳ ಕಣ್ಣುಗಳಲ್ಲಿ ನಿಷ್ಕಪಟತೆ ಇತ್ತು, ಹಾಸವಿತ್ತು.

ಮಾರನೆಯ ದಿನ ಬೆಳಗ್ಗೆ ಅನಸೂಯೆಗೆ ಹಾಸಿಗೆ ಬಿಟ್ಟು ಏಳಲಾಗಲಿಲ್ಲ. ಹಿಂದಿನ ರಾತ್ರಿ ಚಿಕ್ಕವಳು ಹೊರಟು ಹೋದಮೇಲೆ, ಬಾಗಿಲು ಹಾಕಿಕೊಂಡವಳು ದೀಪಗಳೊಂದನ್ನೂ ಆರಿಸಿರಲಿಲ್ಲ. ಹಾಸಿಗೆಯಲ್ಲಿ ಮಲಗಿ ಬಹಳ ಹೊತ್ತಿನ ತನಕ ಸೂರನ್ನೇ ನೋಡುತ್ತ ಚಿಂತಾಮಗ್ನಳಾಗಿದ್ದಳು. ಚಿಕ್ಕವಳ ಧೈರ್ಯ, ನಡೆ, ಚಮತ್ಕಾರದ ನುಡಿ, ಬಲಾತ್ಕಾರದಿಂದ ಅವಳು ಪದಕಸರವನ್ನು ಪಡೆದುಕೊಂಡ ರೀತಿ, ಅವಳು ಆಡಿಹೋದ ಮಾತುಗಳು, “ಕಾಗದದ್ದ ಹೂ ಮುಟ್ಟುವುದಕ್ಕೆ ಹಿತವಿಲ್ಲ, ಮೂಸುವುದಕ್ಕೆ ಹಿತವಿಲ್ಲ.. ಸೆಲ್ಯುಲಾಯ್ಡ್ ಗೊಂಬೆ, ಆತ್ಮವಂಚನೆಗೆ ಕಾರಣಗಳು” ಎಂದದ್ದೂ, ಹೋಗುವುದಕ್ಕೆ ಮುನ್ನ ಅವಳು ಹೂದಾನಿಯನ್ನು ಕಿಟಕಿಯಿಂದ ಹೊರಕ್ಕೆ ಎಸೆದ ರೀತಿ… ಮುತ್ತಿಟ್ಟುಕೊಳ್ಳಿರೆಂದು ಕೇಳಿದ ರೀತಿ… ಈ ಎಲ್ಲ ವಿವರಗಳೂ ಆಕೆಯ ನಿದ್ದೆಯನ್ನು ದೂರ ದೂಡಿ ಮನಸ್ಸಿನಲ್ಲಿ ಒಂದು ಮಹಾ ತುಮುಲವನ್ನು ಎಬ್ಬಿಸಿದ್ದುವು. ಬೆಳಗಿನ ಜಾವದಲ್ಲಿ ನಿದ್ದೆ ಬಂದಿತಾದರೂ, ಏನೇನೋ ವಿಕಾರ ಸ್ವಪ್ನಗಳು, ಒಂದರೊಡನೆ ಒಂದು ಕೋದುಕೊಂಡಿದ್ದಂತೆ ಇದ್ದುವು, ಭಿನ್ನ ಭಿನ್ನವಾಗಿಯೂ ಇದ್ದುವು.

ಅಂತೂ ಆ ರಾತ್ರಿ ಅನಸೂಯೆಗೆ ನೆಮ್ಮದಿಯ ನಿದ್ರೆ ದೊರೆಯಲಿಲ್ಲ. ಬೆಳಗ್ಗೆ ಎಚ್ಚರವಾದಾಗ ಜ್ವರವೇನೂ ಇರಲಿಲ್ಲ. ಹಾಲಿನವನು ಬಂದು ಹೊರಬಾಗಿಲನ್ನು ತಟ್ಟಿ ಕರೆದಾಗ, ಹೋಗಿ ಬಾಗಿಲನ್ನು ತೆರೆದು ಹಾಲು ತೆಗೆದಿರಿಸಿಕೊಂಡು ಮತ್ತೆ ಬಾಗಿಲನ್ನು ಮುಚ್ಚಿಕೊಂಡಳು. ಪ್ರಾತರ್ವಿಧಿಗಳನ್ನು ಪೂರೈಸಿಕೊಂಡಾದ ಮೇಲೆ, ರಾಮನ ಪಂಜರದ ಬುರಕಿಯನ್ನು ಮೇಲಕ್ಕೆತ್ತಿ ಸರಿಸಿದಳು. ರಾಮ ಅಂದಿತು: ‘ಓ ಬೆಳಗಾಯಿತು… ಬೆಳಗಾಯಿತು- ರಾಮ… ರಾಮ.’

ಇದನ್ನು ಓದಿದ್ದೀರಾ?: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕತೆ | ಜೋಗ್ಯೋರ ಅಂಜಪ್ಪನ ಕೋಳಿ ಕತೆ

ಅನಸೂಯೆ ರಾಮನಿಗೆ ಹಾಲು, ರೊಟ್ಟಿ, ಬಾಳೆಯಹಣ್ಣು ಕೊಟ್ಟು ತಾನೂ ಕಾಫಿ ಮಾಡಿಕೊಂಡು ಕುಡಿದು ಪುನಃ ಹಾಸಿಗೆಯಲ್ಲಿ ಬಿದ್ದುಕೊಂಡಳು. ಎದ್ದು ಓಡಾಡಿ ಕೆಲಸಕಾರ್ಯಗಳನ್ನು ಮಾಡಿಕೊಳ್ಳುವುದಕ್ಕೆ ಅಂದು ಆಕೆಗೆ ಚೈತನ್ಯವೇ ಇರಲಿಲ್ಲ. ಮಧ್ಯಾಹ್ನವಾದನಂತರ ಎದ್ದು ಸ್ನಾನ ಮಾಡಿದ ಮೇಲೆ ದೇಹ ಸ್ವಲ್ಪ ಲಘು ಕಂಡಿತು. ಮತ್ತೆ ಹಾಸಿಗೆ ಬಿಡಿಸಿ ಮಲಗಿದವಳು ಪುನಃ ಎದ್ದದ್ದು ಮಾರನೆಯ ಪ್ರಾತಃಕಾಲವೆ. ಹಾಲಿನವನು ಬಂದು ಕೂಗಿ ಬಾಗಿಲು ತಟ್ಟಿದಾಗಲೆ. ರಾಮನಿಗೂ ದಿನವೆಲ್ಲ ಪಂಜರವಾಸ. ಅಂದು ಅದಕ್ಕೆ ಯಾವಾಗ ಬೆಳಗಾಯಿತೆಂಬುದೂ ತಿಳಿಯಲಿಲ್ಲ. ಪಂಜರಕ್ಕೆ ಬುರುಕಿ ಹಾಕಿದಾಗ ಅದಕ್ಕೆ ರಾತ್ರಿ, ಬುರುಕಿ ತೆಗೆದಾಗ ಅದಕ್ಕೆ ಬೆಳಗು ಆಗುತ್ತಿತ್ತು.

ಅಂದು ಬೆಳಗ್ಗೆ ಅನಸೂಯೆ, ದಿನದ ಪತ್ರಿಕೆಗಳನ್ನು ಹಂಚುವವನು ಹೊರಬಾಗಿಲ ಕೆಳಗೆ ಸಂದಿನಲ್ಲಿ ತಳ್ಳಿದ್ದ ದಿನದ ಪತ್ರಿಕೆಯನ್ನು ತೆಗೆದುಕೊಂಡು ನೋಡಿದಾಗ ಆ ದಿನ ಭಾನುವಾರವೆಂದು ತಿಳಿದುಬಂತು. ಆಕೆ ಹೊರಗಿನ ಗಾಳಿಬೆಳಕುಗಳನ್ನು ಕಂಡೇ ಆರು ದಿನಗಳಾಗಿದ್ದುವು. ಎದ್ದು ಕೆಲಸಕಾರ್‍ಯಗಳೆಲ್ಲವನ್ನೂ ಮುಗಿಸಿ, ಉಪಾಹಾರಮಾಡಿ, ರಾಮನಿಗೂ ಇಟ್ಟು, ಮನೆಗೆ ಬೇಕಾದ ಸಾಮಾನುಗಳನ್ನು ತರಲು ಮಾಮೂಲ್ ಆಗಿದ್ದ ದಿನಸಿ ಅಂಗಡಿಗೆ ಹೊರಟಳು. ಅದೇನೂ ಮನೆಯಿಂದ ದೂರವಿರಲಿಲ್ಲ. ಆಕೆ ಇತ್ತ ಪಟ್ಟಿಯ ಪ್ರಕಾರ, ಅಂಗಡಿಯವನು ಆ ಸಾಮಾನುಗಳೆಲ್ಲವನ್ನೂ ಶುದ್ಧ ಮಾಡಿಸಿ, ಆಳಿನ ಸಂಗಡ ಮಧ್ಯಾಹ್ನದ ವೇಳೆಗೆ ಆಕೆಯ ಮನೆಗೆ ಕಳಿಸಿಕೊಡುತ್ತಿದ್ದುದು ವಾಡಿಕೆ.

ಅನಸೂಯೆ ಪಟ್ಟಿಯನ್ನು ಕೊಟ್ಟಳು. ಅಂಗಡಿಯವನು ಲೆಕ್ಕಮಾಡಿ ಮೊತ್ತವನ್ನು ಹೇಳಿದ. ಅನಸೂಯೆ ದುಡ್ಡು ಕೊಟ್ಟಾದ ಮೇಲೆ, ‘ಏನೋ ಮರೆತೆನಲ್ಲಾ!’ ಎಂದು ಜ್ಞಾಪಿಸಿಕೊಳ್ಳುತ್ತ ರಸ್ತೆಗೆ ಬಂದಳು. ಮನೆಯಿಂದ ಹೊರಡುವಾಗ್ಗೆ ಇನ್ನೂ ಏನೇನನ್ನೋ ಕೊಳ್ಳಬೇಕೆಂದು ಬಂದಿದ್ದಳು. ಇಷ್ಟರಲ್ಲಿ ಮರೆತಿದ್ದಳು. ರಸ್ತೆಯಲ್ಲಿ ನಾಲ್ಕಾರು ಹೆಜ್ಜೆ ಮುಂದೆ ನಡೆದಾಗ, ಯಾರೋ ತನ್ನ ಬೆನ್ನ ಹಿಂದೆ ನಡೆದು ಬರುತ್ತಿದ್ದಂತೆ ಆಕೆಗೆ ಭಾಸವಾಯಿತು. ಸಂಕಲ್ಪಾಧೀನವಲ್ಲದ ನಿರಿಚ್ಛಾಪ್ರತಿಕ್ರಿಯೆಗೆ ಒಳಗಾಗಿ ಆಕೆ ಯಾರೆಂದು ತಿರುಗಿ ನೋಡಿದಳು. ವೃದ್ಧ ವೈದಿಕನೊಬ್ಬ ಹಸನ್ಮುಖಿಯಾಗಿ ಕೈಜೋಡಿಸಿ ಸ್ವಲ್ಪ ಹೆಚ್ಚಾದ ರೀತಿಯಲ್ಲಿ ತಲೆಬಾಗಿದ. ಗಾಢವಾಗಿ ಯೋಚಿಸುತ್ತಿದ್ದ ಅನಸೂಯೆ ಅಷ್ಟೇ ಪ್ರತಿಕ್ರಿಯೆಗೆ ಒಳಗಾದಳು. ಮುಂದೆ ನಡೆದಳು. ಎಂಟು ಹತ್ತು ಹೆಜ್ಜೆ ನಡೆದಮೇಲೆ ಆಕೆಗೆ ಅನಿಸಿತು: ‘ಎಲಾ! ಯಾರು ಈತ! ನನಗೆ ಪರಿಚಿತ ಮನುಷ್ಯನಲ್ಲ, ನಾನೇಕೆ ಈತನಿಗೆ ಸೂತ್ರದ ಗೊಂಬೆಯಂತೆ ನಮಸ್ಕರಿಸಿದೆ! ಪ್ರತಿನಮನ ಔಚಿತ್ಯವೇನೋ ಹೌದು. ಆತ ಏಕೆ ಚಿರಪರಿಚಿತನಂತೆ ನನ್ನ ಮುಖನೋಡಿ ನಸುನಕ್ಕ? ಆ ವೃದ್ಧನ ವ್ಯಕ್ತಿಪರಿಚಯ ನನಗಿಲ್ಲ! ಆದರೂ ಆತನ ಮುಖವನ್ನು ಎಲ್ಲಿಯೋ ಯಾವಾಗಲೋ ಕಂಡಂತೆ ಇದೆಯಲ್ಲ! ಆತ ಈ ಊರಿನವನೆ ಇರಬೇಕು. ಆಗೊಮ್ಮೆ ಈಗೊಮ್ಮೆ ರಸ್ತೆಯಲ್ಲೋ ಗುಡಿಯಲ್ಲೋ ದೇವರ ಉತ್ಸವದಲ್ಲಿಯೋ ನೋಡಿದುದರ ಮಬ್ಬು!… ಆತ ನಾನು ದಿನಸಿ ಅಂಗಡಿಯಲ್ಲಿ ನಿಂತಿದ್ದಾಗಲೂ ನನ್ನ ಹಿಂದೆಯೇ ದೂರದಲ್ಲಿ ನಿಂತಿದ್ದ. ಎಲಾ! ಈಗಲೂ ಹಿಂದೆಯೇ ನಡೆದುಬರುತ್ತಿದ್ದಾನೆ! ಇವನೇನು ಯಾಚಕನೆ? ಯಾಚಕರಿಗೆ ಬಲು ಧೈರ್ಯ! ಎದುರಿಗೇ ಬಂದು ನಿಲ್ಲಿಸಿ ಯಾಚಿಸುತ್ತಾರೆ… ಪೀಡಿಸುತ್ತಾರೆ’ ಎಂದು ನಾನಾ ಬಗೆಯ ತರ್ಕಕ್ಕೆ ಒಳಗಾಯಿತು, ಭಯಕ್ಕೆ ಒಳಗಾಯಿತು ಆಕೆಯ ಮನಸ್ಸು.

ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ

ಅನಸೂಯೆ ಈಗ ಬೇಗ ಬೇಗ ನಡೆದಳು. ಅಷ್ಟೇ ವೇಗದಿಂದ ಆತನ ಹೆಜ್ಜೆಗಳೂ ಆಕೆಯನ್ನು ಹಿಂಬಾಲಿಸಿದುವು. ಈಗ ಆಕೆಯ ಧೈರ್ಯ ತೀರ ಕುಗ್ಗಿತು. ರಸ್ತೆಯ ಪಕ್ಕದಲ್ಲಿ ಒಂದು ಬಟ್ಟೆಯ ಅಂಗಡಿಯನ್ನು ಕಂಡಳು. ಆಕೆ ಸರ್‍ರನೆ ಆ ಅಂಗಡಿಯೊಳಕ್ಕೆ ಹೋಗಿ ಆಶ್ರಯ ಕಲ್ಪಿಸಿಕೊಂಡು, ತಿರುಗಿ ರಸ್ತೆಯನ್ನು ನೋಡುತ್ತ ನಿಂತಳು. ಆಗ ಅದೇ ವೃದ್ಧ, ಅನಸೂಯೆಯನ್ನು ನೋಡದೆ, ಅಲ್ಲಿ ಆಕೆಯ ಎದುರಿನಲ್ಲಿ ಒಂದು ಹೆಜ್ಜೆ ನಿಂತು, ಮುಖ ತಿರುಗಿ ನೋಡದೆ ಮತ್ತೊಮ್ಮೆ ಬಾಗಿ ನಮಿಸಿ ಮುಂದಕ್ಕೆ ಹೊರಟುಹೋದ. ಅವನು ಮರೆಯಾಗುವವರೆಗೂ ಅನಸೂಯೆ ಆ ವೃದ್ಧನನ್ನೇ ನೋಡುತ್ತಿದ್ದಳು.

ಇಷ್ಟು ವರ್ಷಗಳ ಪಟ್ಟಣವಾಸದಲ್ಲಿ ಅನಸೂಯೆ ಹಿಂದೆಂದೂ ಇಂದಿನಂತಹ ಭಯದ ಅನುಭವವನ್ನು ಕಂಡಿರಲಿಲ್ಲ.

ಒಂದೆರಡು ನಿಮಿಷಗಳ ಕಾಲ ಆ ಅಂಗಡಿಯಲ್ಲಿ ‘ಷೋ’ ಮಾಡಿದ್ದ ಬಟ್ಟೆಗಳನ್ನು ನೋಡುತ್ತ ತಾನೂ ವ್ಯಾಪಾರಕ್ಕೆ ಬಂದವಳಂತೆ ನಟಿಸಿದಳು. ಚೇತರಿಸಿಕೊಂಡು ಅಂಗಡಿಯೊಳಕ್ಕೆ ಬಂದ ನೆಪಕ್ಕಾಗಿ ಒಂದು ಅಂದವಾದ ಟೇಬಲ್ ಕ್ಲಾತನ್ನು ಕೊಂಡು, ಕೈಚೀಲದಲ್ಲಿಟ್ಟುಕೊಂಡು, ಅಂಗಡಿಯನ್ನು ಬಿಟ್ಟು ರಸ್ತೆಯಲ್ಲಿ ಮುಂದಕ್ಕೆ ನಡೆದಳು. ಮತ್ತೆ ಅವನು ಬಂದನೇನೊ ಎಂದು ಎಲ್ಲ ಕಡೆಗೂ ಕಣ್ಣು ಹಾಯಿಸಿ, ಇಲ್ಲವೆಂದು ದೃಢಪಟ್ಟಮೇಲೆ ಮುಂದೆ ನಡೆದು ಮಾರ್ಕೆಟ್ ಒಳಗಡೆ, ಗಾಜು, ಪಿಂಗಾಣಿ ಸಾಮಾನುಗಳನ್ನು ಮಾರುವ ಅಂಗಡಿಯೊಳಕ್ಕೆ ಹೋಗಿ, ಅಂದವಾದ ಹೂದಾನಿಯೊಂದನ್ನು ಆರಿಸಿ ಹೆಚ್ಚು ಬೆಲೆಕೊಟ್ಟು ಕೊಂಡಳು. ಹತ್ತಾರು ಹೆಜ್ಜೆ ನಡೆದು ಹೂ ಮಾರುವವರಿದ್ದ ಠಾವಿಗೆ ಬಂದಳು. ಆಗ ಕ್ರಿಸ್‌ಮಸ್ ಹಬ್ಬದ ದಿನಗಳಾದ್ದರಿಂದ ಹೂದಾನಿಯಲ್ಲಿ ಅಲಂಕರಿಸಿ ಇಡಬಹುದಾದ ‘ಕಟ್‌ಫ್ಲವ‌ರ್’ಗಳು ಇದ್ದುವು.

ಅನಸೂಯೆ ಆರು ಸೊಗಸಾದ ಬಿಳಿಯ ರೋಜಾ ಹೂಗಳನ್ನೂ ಒಂದು ಡಜನ್ ‘ಟ್ಯೂಬ್ ರೋಸ್ ಸ್ಟಾಕ್’ (ಸುಗಂಧರಾಜ ಪುಷ್ಪಕಾಂಡ)ಗಳನ್ನೂ ಕೊಂಡು ಬಾಳೆಎಲೆಯಲ್ಲಿ ಸುತ್ತಿ ಇಟ್ಟುಕೊಂಡಳು. ಅನಸೂಯೆಗೆ ಅಂದು ಕೊಳ್ಳುವ ಉಮೇದು ಹತ್ತಿತ್ತು. ಇನ್ನೊಂದು ಫರ್ಲಾಂಗ್ ದೂರ ನಡೆದು ರೊಟ್ಟಿ ಬಿಸ್ಕತ್‌ಗಳನ್ನು ಮಾರುವ ಅಂಗಡಿಗೆ ಹೋಗಿ, ಆರು ಬಟರ್ ಬೀನ್ಸ್‌ಗಳನ್ನೂ, ನಾಲ್ಕು ಔನ್ಸ್‌ಗಳಷ್ಟು ಆಲ್‌ಮಂಡ್ ಕೇಕನ್ನೂ ಕೊಂಡು ಕೊಂಡು ನೆಟ್ಟಗೆ ಮನೆಗೆ ಹಿಂದಿರುಗಿದಳು,

ಮನೆಯನ್ನು ಸೇರಿದಾಗ ಮಧ್ಯಾಹ್ನವಾಗಿತ್ತು. ರಾಮನನ್ನು ಪಂಜರದೊಳಕ್ಕೆ ಸೇರಿಸಿ, ತಿನ್ನುವುದಕ್ಕೆ ಇಟ್ಟು, ಬಟ್ಟೆ ಬದಲಾಯಿಸಿ, ಮಡಿಯುಟ್ಟು ಅಡುಗೆ ಮಾಡಿ, ಊಟ ಮುಗಿಸಿ, ಅಂದು ಕೊಂಡುತಂದಿದ್ದ ಸಾಮಾನುಗಳನ್ನು ಒಪ್ಪವಾಗಿಡಲು ತೊಡಗಿದಳು.

ಹೂದಾನಿ ಇಡುತ್ತಿದ್ದ ಮೇಜಿಗೆ ಹೊಸ ಟೇಬಲ್ ಕ್ಲಾತನ್ನು ಹಾಸಿ, ಹೂದಾನಿಯಲ್ಲಿ ಅರ್ಧಕ್ಕೆ ಮೇಲೆ ಸೀನೀರು ತುಂಬಿ, ಅದರಲ್ಲಿ ಒಂದು ಚಿಟಕಿಯಷ್ಟು ಉಪ್ಪನ್ನು ಬೆರೆಸಿ ಕಾಣುವಂತೆ ಜೋಡಿಸಿಟ್ಟಳು. ಪಿಂಗಾಣಿ ತಟ್ಟೆಯೊಂದರಲ್ಲಿ ಒಂದೆರಡು ಬಗೆಯ ಹಣ್ಣುಗಳನ್ನೂ ‘ಬಟ‌ರ್ ಬೀನ್ ಆಲ್ಮಂಡ್’ ಕೇಕ್‌ಗಳನ್ನೂ ಜೋಡಿಸಿಟ್ಟಳು. ಒಳಗಣಿಂದ ಸೆಲ್ಯುಲಾಯ್ಡ್ ಗೊಂಬೆಯನ್ನು ತಂದು, ಅದಕ್ಕಾಗಿಯೇ ಹೊಲಿಸಿಟ್ಟುಕೊಂಡಿದ್ದ ಪಿಂಕ್ ಫ್ರಾಕನ್ನೂ ಬರಿದಾಗಿದ್ದ ಕುತ್ತಿಗೆಗೆ ಒಂದು ಬಣ್ಣ ಬಣ್ಣಗಳ ಮಣಿಸರವನ್ನೂ ಉಡಿಸಿ ತೊಡಿಸಿ ಎತ್ತರದ ಮೇಜೊಂದರ ಮೇಲೆ ಕೂಡಿಸಿ ಅದರ ಮುಂದೆ ಹಣ್ಣು ಮಿಠಾಯಿಗಳ ತಟ್ಟೆಯನ್ನಿಟ್ಟಳು. ಒಂದು ಸಲ ಅಭಿಮಾನದಿಂದ, ಎಲ್ಲವನ್ನೂ ಚೆನ್ನಾಗಿ ಮಾಡಿದೆನೆಂಬ ಹಿಗ್ಗಿನಿಂದ ನೋಡಿ ತೃಪ್ತಿಪಡೆದಳು.

ರಾಮನನ್ನು ‘ಆಡಿಕೊಂಡಿರು’ ಎಂದು ಪಂಜರದಿಂದ ಹೊರಕ್ಕೆ ಬಿಟ್ಟು ಅದಕ್ಕೊಂದು ಸಿಹಿ ಬಿಸ್ಕತ್ತನ್ನು ಕೊಟ್ಟು, ಇನ್ನೇನೂ ಮುಟ್ಟಬಾರದೆಂದು ಅದಕ್ಕೆ ಎಚ್ಚರಿಸಿ, ಯಾವುದೊ ಒಂದು ‘ಮ್ಯಾಗಸೈನನ್ನು’ ಓದುತ್ತ ಹಾಗೆಯೇ ನಿದ್ದೆ ಮಾಡಿದಳು. ಇನ್ನೂ ನಿದ್ದೆ ಮಾಡುತ್ತಿದ್ದಳೇನೋ! ಆದರೆ ಯಾರೋ ಬಾಗಿಲನ್ನು ತಟ್ಟಿ ಆಕೆಗೆ ನಿದ್ರಾಭಂಗ ಮಾಡಿದರು. ರಾಮ ಹಾರಿಹೋಗಿ ತನ್ನ ಪಂಜರದೊಳಗೆ ಅಡಗಿ ಕುಳಿತುಕೊಂಡಿತು.

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ಬಾಗಿಲನ್ನು ತಟ್ಟಿದವರು ಕೂಗಿ ಕರೆಯಲಿಲ್ಲ. ಮತ್ತೆ ಮತ್ತೆ ಬಾಗಿಲನ್ನು ತಟ್ಟಿದರು. ‘ಪುನಃ ಆ ಹುಡುಗಿಯೆ ಇರಬೇಕು’ ಎಂದುಕೊಂಡಳು ಅನಸೂಯೆ.

ಹಿರಿಯ ಅನಸೂಯೆ ಕೂಗಿ ಕೇಳಿದಳು: ‘ಯಾರು ಅನಸೂಯೆಯೆ?’

‘ನಾನೇ… ಬೇರೆ ಯಾರೂ ಅಲ್ಲ, ಬಾಗಿಲು ತೆಗೆಯಿರಿ.’

‘ಹೋಗು. ಮನೆಗೆ ಹೋಗು.’

‘ದಯವಿಟ್ಟು ತೆಗೆಯಿರಿ. ಕೈಯಲ್ಲಿ ಭಾರವಾದ ಹೊರೆಯೊಂದನ್ನು ಹೊತ್ತಿದ್ದೇನೆ.’

‘ಹೊರಟುಹೋಗು.’

ಅನಸೂಯೆಗೆ ಸಿಟ್ಟು ಬಂದು ಹಾಸಿಗೆಯಲ್ಲಿ ಎದ್ದು ಕುಳಿತಳು.

‘ಹೊರಟುಹೋಗು, ಬಾಗಿಲು ತೆರೆಯುವುದಿಲ್ಲ, ನಿನ್ನನ್ನು ಒಳಕ್ಕೆ ಬಿಡುವುದಿಲ್ಲ.’

ಮತ್ತೊಮ್ಮೆ ಬಾಗಿಲು ತಟ್ಟಿದ ಶಬ್ದ. ಅನಸೂಯೆಗೆ ಸಿಟ್ಟು ಹೆಚ್ಚಿತು. ‘ತಟ್ಟಲಿ… ತಟ್ಟಲಿ… ಎಷ್ಟು ಬೇಕಾದರೂ ತಟ್ಟಲಿ. ನಾನು ಅವಳಿಗೆ ಬಾಗಿಲು ತೆಗೆಯುವುದಿಲ್ಲ’ ಎಂದು ನಿರ್ಧರಿಸಿ ಹಾಸಿಗೆಯಲ್ಲಿ ಕುಳಿತಳು. ಸ್ವಲ್ಪ ಹೊತ್ತಾದ ಮೇಲೆ ತಟ್ಟುವ ಶಬ್ದ ನಿಂತಿತು. ಅನಸೂಯೆಗೆ ನಂಬಿಕೆ ಬರಲಿಲ್ಲ. ಮೂರು ನಿಮಿಷಗಳು ಕರೆದುವು… ಆರು… ಎಂಟು… ಹತ್ತು ನಿಮಿಷಗಳು ಕಳೆದುವು. ಮತ್ತೆ ಬಾಗಿಲು ತಟ್ಟಿದ ಶಬ್ದವಾಗಲಿಲ್ಲ. ‘ಹೋಯಿತು ಪೋರಿ’ ಎಂದು ನಿರ್ಧರಿಸಿಕೊಂಡ ಮೇಲೆ ಅನಸೂಯೆ ಎದ್ದು ಹೋಗಿ ಬಾಗಿಲನ್ನು ತೆರೆದಳು.

ಆ ಹುಡುಗಿ ಅಲ್ಲಿಯೆ ಇದ್ದಳು. ಮೆಟ್ಟಲುಗಳ ಮೇಲೆ ದಪ್ಪನೆ ರಟ್ಟಿನ ಪೆಟ್ಟಿಗೆಯೊಂದನ್ನು ಇಟ್ಟು, ಅದರ ಮೇಲೆ ಕುಳಿತುಕೊಂಡು, ತಲೆಗೆ ಬಾಗಿಲ ಚೌಕಟ್ಟಿನ ಪಕ್ಕದ ಗೋಡೆಯನ್ನು ಆಸರೆ ಕೊಟ್ಟುಕೊಂಡು ನಿದ್ದೆ ಮಾಡಿದ್ದಳು. ಬಾಗಿಲು ತೆರೆದ ಶಬ್ದಕ್ಕೆ ಹುಡುಗಿಗೆ ಎಚ್ಚರವಾಯಿತು.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

‘ನೀವು ಬಾಗಿಲು ತೆರೆಯುತ್ತೀರಿ ಎಂದೇ ಇಲ್ಲಿ ಕಾದು ಕುಳಿತೆ. ಇದನ್ನು ಸ್ವಲ್ಪ ಕೈಗೆ ತೆಗೆದುಕೊಳ್ಳಿರಿ. ನನಗೆ ಭಾರವಾಗಿದೆ’ ಎನ್ನುತ್ತ ಆ ದಪ್ಪ ರಟ್ಟಿನ ಪೆಟ್ಟಿಗೆಯನ್ನು ಅನಸೂಯೆ ಕೈಗೆ ಎತ್ತಿಕೊಟ್ಟಳು. ಮಂತ್ರಮುಗ್ಧೆಯಂತೆ ಅನಸೂಯೆ ಅದನ್ನು ಇಸುಕೊಂಡಳು. ಚಿಕ್ಕವಳು ತಾನಾಗಿಯೆ ಒಳಕ್ಕೆ ನಡೆದು, ಅಚ್ಚುಕಟ್ಟಾಗಿ ಯಥಾಪ್ರಕಾರ ಸೋಫದಲ್ಲಿ ಕುಳಿತುಕೊಂಡಳು.

ಅನಸೂಯೆ ರಟ್ಟಿನ ಪೆಟ್ಟಿಗೆಯನ್ನು ಸೋಫದ ಪಕ್ಕದಲ್ಲಿ ಇಟ್ಟು, ಕಾಲುಗಳಲ್ಲಿ ನಡುಕ ಬಂದಂತಾಗಿ ಆಲ್ಮೆರದ ಆಸರೆ ಪಡೆದು ಒರಗಿ ನಿಂತಳು. ಕೃತ್ರಿಮ ಮನೋಭಾವವಿಲ್ಲದ ಕಣ್ಣುಗಳಿಂದ ಚಿಕ್ಕವಳು ಅನಸೂಯೆಯನ್ನು ನೋಡಿ, ‘ಪೆಟ್ಟಿಗೆಯಲ್ಲಿ ನಿಮಗಾಗಿ ಒಂದು ವಸ್ತುವನ್ನು ತಂದಿದ್ದೇನೆ’ ಎಂದಳು.

ಅನಸೂಯೆ ಕಷ್ಟದಿಂದ ಆಸರೆಯನ್ನುಳಿದು ಬಂದು ಮೊಣಕಾಲ್ಗಳ ಮೇಲೆ ಕುಳಿತುಕೊಂಡು, ರಟ್ಟಿನ ಪೆಟ್ಟಿಗೆಯ ಮೇಲ್ಮುಚ್ಚಳವನ್ನು ಬಿಚ್ಚಿ, ಒಳಗಡೆ ಹರಳುಗಿಡದ ಎಲೆಗಳಲ್ಲಿ ಸುತ್ತಿದ್ದ ವಸ್ತುವನ್ನು ಕೈಗೆ ತೆಗೆದುಕೊಂಡಳು. ಒಳಗೆ ಆರು ಬಿಳಿಯ ರೋಜಾ ಹೂಗಳೂ, ಹನ್ನೆರಡು ಸುಗಂಧರಾಜ ಹೂವಿನ ಉದ್ದನೆಯ ಕಾಂಡಗಳೂ ಇದ್ದುವು. ಅನಸೂಯೆ ಅಂದು ಪೂರ್ವಾಹ್ನ ಹೂವಿನ ಅಂಗಡಿಯಿಂದ ತಂದೂವೂ ಅವೇ. ಸಂಖ್ಯೆಯೂ ಅಷ್ಟೆ. ‘ಇದು ಅತಿ ಆಶ್ಚರ್ಯ’ ಎಂದು ಅನಸೂಯೆಯ ಮನಸ್ಸು ಅನ್ನುತ್ತಿರುವಾಗಲೇ ಅವಳ ಕೈಗಳಲ್ಲಿ ನಡುಕ ಕಾಣಿಸಿಕೊಂಡಿತು. ಅನಸೂಯೆ ಹೂಗಳನ್ನು ಪಕ್ಕದ ಟೀಪಾಯ್ ಮೇಲಿಟ್ಟು, ಮತ್ತೆ ಪೆಟ್ಟಿಗೆಯೊಳಗೆ- ಭಾರವಾಗಿರಬೇಕಾದರೆ- ಏನಿದೆಯೆಂದು ತಡವಿ ನೋಡಿದಳು, ಅಲ್ಲಿದ್ದುದು ಎಲ್ಲಾ ತೊಡುವ ಬಟ್ಟೆಗಳೇ!

‘ಇವು ಏಕೆ?’ ಎಂದು ಕೇಳಿದಳು ಹಿರಿಯ ಅನಸೂಯೆ.

ಅಷ್ಟರಲ್ಲಿ ಚಿಕ್ಕವಳ ಚುರುಕು ಕಣ್ಣುಗಳು ಕೋಣೆಯಲ್ಲಿದ್ದ ವಸ್ತುಗಳನ್ನು ಪರೀಕ್ಷಿಸುತ್ತಿದ್ದುವು… ಹೊಸ ಹೂದಾನಿ… ಅದರಲ್ಲಿ ತನಗೆ ಪ್ರಿಯವಾದ ಹೂಗಳೂ, ಅದರ ಪಕ್ಕದಲ್ಲಿ ಅಂತಸ್ತು ಮೇಜಿನ ಮೇಲೆ ಪಿಂಗಾಣಿ ತಟ್ಟೆಯೊಂದರಲ್ಲಿ ತನಗೆ ಅತ್ಯಂತ ಪ್ರಿಯವಾದ ಮಿಠಾಯಿಗಳೂ ಇದ್ದುದನ್ನು ಚಿಕ್ಕವಳು ನೋಡಿದಳು. ಒಡನೆ ಆ ತಟ್ಟೆಯ ಬಳಿಗೆ ಹೋಗಿ ಬಟರ್‌ಬೀನ್ಸ್ ಒಂದನ್ನು ಎತ್ತಿ ಬಾಯಲ್ಲಿ ತುರುಕಿಕೊಂಡು ಉಲ್ಲಾಸದಿಂದ ಮೆಲಕುತ್ತ ಅನಸೂಯೆ ಕೇಳಿದ ಪ್ರಶ್ನೆಗೆ ಹೀಗೆಂದು ಉತ್ತರವಿತ್ತಳು:

‘ಏಕೆ! ಇನ್ನು ನಾನು ನಿಮ್ಮೊಡನೆಯೆ ಇರುವುದಕ್ಕೆ ಬಂದಿದ್ದೇನೆ. ನೀವು ಬಲು ಒಳ್ಳೆಯವರು. ಆ ಹೂಗಳನ್ನೂ ಮಿಠಾಯಿಗಳನ್ನೂ ನನಗಾಗಿಯೆ ತಂದಿರುವಿರಲ್ಲವೆ?’

”ಅದು ಬೇಡ… ಅದು ಆಗುವುದಿಲ್ಲ… ಆಗುವುದಿಲ್ಲ. ನೀನೀಗ ಹೊರಟಹೋಗು. ಈಗಾಗಲೆ ನೀನು ನನ್ನನ್ನು ಕಾಡಿಸಿರುವುದು ಸಾಕು.’

‘ನೀವೂ ಅದೇ ಹೂಗಳನ್ನು ತಂದಿದ್ದೀರಿ. ಆಲ್ಮಂಡ್ ಕೇಕ್ ಎಂದರೆ ನನಗೆ ಪಂಚಪ್ರಾಣ. ನಾನಿದುವರೆಗೆ ಇದ್ದುದು ಪುರೋಹಿತರೊಬ್ಬರ ಮನೆಯಲ್ಲಿ. ಅವರು ಮುದುಕರು, ಬಡವರು. ಆದರೂ ನನ್ನನ್ನು ಚೆನ್ನಾಗಿಯೆ ನೋಡಿಕೊಂಡರು. ಅದಕ್ಕೆ ಮೊದಲು ನಾನು ಎಲ್ಲಿದ್ದೆನೋ ತಿಳಿಯದು. ಇಲ್ಲಿ ಸುಖವಾಗಿರಬಹುದೆಂದು ಬಂದಿದ್ದೇನೆ. ನನ್ನ ಬಟ್ಟೆಗಳ ಪೆಟ್ಟಿಗೆಯನ್ನು ಎಲ್ಲಿ ಇಡಲಿ?’

ಅನಸೂಯೆಗೆ ಈಗ ಇನ್ನೂ ಭಯವಾಯಿತು. ಸಿಟ್ಟೂ ಹೆಚ್ಚಿತು. ಮನಸ್ಸಿನಲ್ಲಿ ಆಗುತ್ತಿದ್ದ ವೇದನೆಗಳೆಲ್ಲವೂ ಆಕೆಯ ಮುಖದಲ್ಲಿ ಪ್ರತಿಬಿಂಬಿಸಿದುವು. ಅಳು ಬಂದಿತು. ಆಕೆ ಅತ್ತೇ ಎಷ್ಟೋ ವರ್ಷಗಳಾಗಿ ಹೋಗಿದ್ದುವು. ಆಕೆ ಹಿಂದುಹಿಂದಕ್ಕೆ ಸರಿಯುತ್ತ ಹೊರಬಾಗಿಲಿಗೆ ಓಡಿ ಮೆಟ್ಟಲುಗಳನ್ನು ದಡದಡನೆ ಇಳಿದು, ಕೆಳಗೆ ಮಾಲೀಕರ ಮನೆಯ ಬಾಗಿಲಿಗೆ ಬಂದು, ಕದವನ್ನು ಬಲವಾಗಿ ತಟ್ಟುತ್ತ, “ಲ್ರೀ… ಭಾಗೀರಥಮ್ಮ… ಲ್ರೀ… ಭಾಗೀರಥಮ್ಮಾ… ಬಾಗಿಲು ತೆಗೀರಿ… ಬಾಗಿಲು” ಎಂದು ಕೂಗಿಕೊಂಡಳು.

ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’

ಒಳಗೆ ಕೆಲಸದಲ್ಲಿದ್ದ ಮನೆಯ ಒಡತಿ, ಕೂಗುತ್ತಿದ್ದವರ ಧ್ವನಿಯನ್ನು ಗುರುತಿಸಿ, ಇದೇನಾಯಿತೆಂದು ಗಾಬರಿಪಟ್ಟು… ‘ಬಂದೆ ಬಂದೆ’ ಎಂದು ಕೂಗುತ್ತ ಓಡಿ ಬಂದು ಬಾಗಿಲು ತೆರೆದರು. ಅನಸೂಯೆ ಭಯದಿಂದ ವಿವರ್ಣಳಾಗಿ, ಉಸಿರೆಳೆದುಕೊಳ್ಳುತ್ತ ನಿಂತಿರುವುದನ್ನು ಕಂಡು ಅನುಕಂಪದಿಂದ ‘ಯಾಕ್ರೀ ಅನಸೂಯಮ್ಮ? ಏನಾಯಿತಿರಿ? ಇಷ್ಟೊಂದು ಗಾಬರಿಪಟ್ಟಿದೀರ! ಹೇಳಿ…ಹೇಳಿ’ ಎಂದು ಕೇಳಿದಳು.

ಅನಸೂಯೆಯ ಮೈ ನಡುಗುತ್ತಿತ್ತು. ಧ್ವನಿಯೂ ನಡುಗುತ್ತಿತ್ತು. ಆಕೆ ತನ್ನೆರಡು ಕೈಗಳಿಂದ ಮುಖಮುಚ್ಚಿಕೊಂಡು, ಬಿಕ್ಕುತ್ತ… “ಅಲ್ಲಿ ಮೇಲೆ… ಮಹಡಿಯಲ್ಲಿ ಹುಡುಗಿಯೊಬ್ಬಳು ಬಂದಿದ್ದಾಳೆ, ಕೆಟ್ಟವಳು… ನನಗೆ ಬಲು ಭಯವಾಗಿದೆ… ಹೋಗೆಂದರೆ ಹೋಗುವುದಿಲ್ಲ, ಏನೋ ದುರುದ್ದೇಶದಿಂದ ಬಂದಿದ್ದಾಳೆ. ನಾಲ್ಕು ದಿನಗಳ ಹಿಂದೆ ಒಮ್ಮೆ ಬಂದಿದ್ದಳು, ಬೊಂಬೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ನಾನು ಕೊಡುವುದಿಲ್ಲವೆಂದರೂ ಕಿತ್ತುಕೊಂಡು ಹೋದಳು. ಈಗ ಇನ್ನೇನನ್ನಾದರೂ ತೆಗೆದುಕೊಂಡು ಹೋಗುವುದಕ್ಕೆ ಬಂದಿದ್ದಾಳೆ… ‘ಹೊರಟು ಹೋಗು’ ಎಂದು ಹೇಳಿದರೆ, ‘ನಾನು ಇಲ್ಲಿಯೆ ಇರುವುದಕ್ಕೆ ಬಂದಿದ್ದೇನೆ’ ಎನ್ನುತ್ತಾಳೆ. ಅಯ್ಯೋ! ಇನ್ನೇನು ಮಾಡುತ್ತಾಳೆ ಕಾಣೆನಲ್ಲ…” ಎಂದು ಮೊರೆಯಿಟ್ಟಳು.

‘ಅಯ್ಯೋ ಇನ್ನೇನು ಗತಿ! ನಮ್ಮ ಮನೆಯವರೂ ಇಲ್ಲವಲ್ಲ!… ತಾಳಿ… ಬಟ್ಟೆಯೊಗೆಯುತ್ತಿದ್ದಾನೆ ಅಳು ಮಾದ. ಕರೆಯುತ್ತೇನೆ… ಮಾದಾ… ಲೋ ಮಾದಾ… ಬೇಗ ಬಾರೋ’ ಎಂದು ಕೂಗಿದರು ಭಾಗೀರಥಮ್ಮ ಕಟ್ಟುಮಸ್ತಾದ ಆಳು ಮಾದ ‘ಯಾಕ್ರಮ್ಮಾ!’ ಎನ್ನುತ್ತ ಬಂದ.

‘ಲೊ, ಹೋಗಿ ನೋಡೊ, ಮಹಡಿ ಮೇಲೆ ಅನಸೂಯಮ್ಮನವರ ಮನೆಗೆ ಯಾವುದೋ ಕೆಟ್ಟ ಹುಡುಗಿ ನುಗ್ಗಿ ಏನೇನೊ ಕದೀತಾ ಇದ್ದಾಳಂತೆ. ಬೇಗ… ಒಂದು ಕೋಲು ತಗೊಂಡೋಗು, ಹಿಡ್ಕೊಂಡೋಗಿ ಪೊಲೀಸಿಗೆ ಕೊಟ್ಟುಬಾ… ಒಳ್ಳೆಯ ಮಾತಿನಲ್ಲಿ ಹೇಳು… ಕೇಳದಿದ್ರೆ ಕೂದಲು ಹಿಡಿದುಕೊಂಡು ಎಳಕೊಂಡು ಬಾ ಇಲ್ಲಿಗೆ ನಾಲ್ಕು ಜನ ನೋಡಿ ‘ಥೂ’ ಅಂತ ಉಗುಳಲಿ ಮುಖಕ್ಕೆ. ಪೊಲೀಸ್ಗೂ ಕೊಟ್ಬಿಡು ಬೇವಾರ್‍ಸೀನ’ ಎಂದಳು ಭಾಗೀರಥಮ್ಮ

ಮಾದ ಕೈಗೆ ಸಿಕ್ಕಿದ ಒಂದು ಕಟ್ಟಿಗೆಯ ತುಂಡನ್ನು ತೆಗೆದುಕೊಂಡು ‘ಮ್ಯಾಗಡೆ ಬಾಕ್ಲು ಅಚ್ಚೈತಾ?’ ಎಂದು ಕೇಳಿದ.

‘ಇಲ್ಲ, ಮುಚ್ಚಿಕೊಂಡು ಬರಲಿಲ್ಲ. ತೆರದೇ ಬಂದಿದ್ದೇನೆ.’

‘ಅಯ್ಯೋ! ಅಚ್ಕೊಂಡ್ಬಂದಿದ್ರೆ ಸಂದಾಗಿತ್ತೆ. ಓಗಿ ಒಳ್ಗಿದ್ರೆ ಎಳ್ಕೊಂಡ್ಬತ್ತೀನಿ ಅವಳ್ನ.’

ಮಾದ ಮೆಟ್ಟಲುಗಳನ್ನು ಹತ್ತಿಹೋದ.

‘ಅಯ್ಯೋ ಅನಸೂಯಮ್ಮ! ಇದಕ್ಕಾಕಿಷ್ಟು ಭಯಪಟ್ಟುಕೊಳ್ತೀರಿ? ಮುಖವೆಲ್ಲ ಬೆವತುಕೊಂಡಿದೆಯಲ್ರೀ! ಅದು ಹುಚ್ಚು ಹುಡ್ಗಿ ಇರ್‍ಬೇಕು. ಇಲ್ಲಿದ್ರೆ ಇಷ್ಟು ಹೊತ್ತಿನಲ್ಲಿ ಮನೆಯೊಳಕ್ಯಾಕೆ ನುಗ್ತಾ ಇದ್ಲು? ಒಳಕ್ಬನ್ನಿ. ಒಂದಿಷ್ಟು ಕಾಫಿ ಕುಡಿದು ಸ್ವಲ್ಪ ಕೂತುಕೊಂಡು ಸುಧಾರಿಸಿಕೊಳ್ಳಿ. ಎಳ್ಕೊಂಡ್ಬರ್‍ತಾನೆ ಮಾದ. ಪೊಲೀಸಿಗೇ ಕೊಟ್ಟುಬಿಡೋಣ. ಅವರೇ ನಾಲ್ಕು ಬಿಗೀತಾರೆ.’

‘ಬಹಳ ಉಪಕಾರವಾಯ್ತಮ್ಮ ನಿಮ್ಮಿಂದ. ಸದ್ಯ ನಿಮ್ಮ ಮಾದಾನೂ ಮನೇಲಿಲ್ಲದೆ ಹೋಗಿದ್ದರೆ ಏನು ಗತಿಯಾಗುತ್ತಿತ್ತೋ? ಭಾಗೀರಥಮ್ಮ ನನಗೆ ಬಹಳ ಭಯ ಆಗಿಹೋಯಿತು. ನಾನೂ ಹುಚ್ಚಿಯ ಹಾಗೆ ಆಡಿಬಿಟ್ಟೆನೇನ್ರಿ!…ಈ ಕೆಟ್ಟ ಹುಡುಗಿ…’

ಅನಸೂಯೆ ಬಾಗಿಲ ಚೌಕಟ್ಟನ್ನು ದಾಟಿ ಮಾದನ ಬರುವಿಕೆಯನ್ನು ಕಾಯುತ್ತ ಅಲ್ಲಿಯೆ ಇದ್ದ ಒಂದು ಬೆಂಚಿನ ಮೇಲೆ ಕುಳಿತುಕೊಂಡಳು. ಭಾಗೀರಥಮ್ಮ ಬಿಸಿ ಕಾಫಿ ತಂದುಕೊಟ್ಟರು. ಅನಸೂಯೆ ಕುಡಿದು ಎರಡು ನಿಮಿಷ ಸುಧಾರಿಸಿಕೊಂಡ ನಂತರ, ಭಾಗೀರಥಮ್ಮ ‘ಏನ್ರಿ, ನಾವೂ ಮಹಡಿಗೆ ಹೋಗಿ ನೋಡೋಣವೇ?’ ಎಂದು ಕೇಳಿದಳು.

ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು

‘ನಾನು ಪುನಃ ಅವಳನ್ನು ನೋಡುವುದಿಲ್ಲ. ಮಾದ ಅವಳನ್ನು ಹಾಗೇ ಎಳೆದುಕೊಂಡು ಹೋಗಿ ಪೊಲೀಸಿಗೆ ಒಪ್ಪಿಸಿ ಬರಲಿ. ನೀವಾದರೂ ಆ ಕೆಟ್ಟವಳನ್ನು ಏಕೆ ನೋಡಬೇಕು? ಅದು ಬೀದಿಯ ರಂಪ ಏಕಾಗಬೇಕು?’

ಮಹಡಿಗೆ ಹೋಗಿದ್ದ ಮಾದ ಬರಿಗೈಯಲ್ಲಿ ಹಿಂದಿರುಗಿದ. “ಅಲ್ಲಿ ಯಾರೂ ಇಲ್ಲ! ಮೂಲೆಮೂಲೇನೂ ಉಡಕಿ ಬಂದೆ, ಬಾಕಿಲುಗಳ ಇಂದೆ, ಕುರ್ಚಿ ಮೇಜುಗಳ ಕೆಳಗೆ, ಮ್ಯಾಗೆ, ಒಂದು ಬಿಲಾನೂ ಬಿಡ್ಡೆ ಉಡ್ಕಿಬಿಟ್ಟೆ. ಪಂಜರದಾಗ ಗಿಣಿಯೊಂದು ಬಿಟ್ರೆ ಬೇರೆ ಯಾವ್ದೂ ಜೀವ ಇಲ್ಲ ಅಲ್ಲಿ, ಬೋಶಾ, ನೀವು ಇಲ್ಲಿಗೆ ಇಳ್ದು ಓಡಿ ಬಂದ್ರಲ್ಲಾ ಆಗ್ಲೆ ಅವ್ಳೂ ನಿಮ್ಮಿಂದೇನೆ ಇಳ್ದು ಓಡೋಗಿರ್‍ಬೇಕು” ಎಂದ ಮಾದ.

‘ಲೊ, ಅನಸೂಯಮ್ಮೋರೂ, ನಾನೂ ಇದೇ ಬೆಂಚಿನ ಮೇಲೆ ಕುಳಿತು ಬಾಗಿಲು ಕಡೇನೇ ನೋಡ್ತಾ ಇದ್ದೆವಲ್ಲೋ, ಅವಳು ಇಳಿದು ಹೋಗಿದ್ರೆ ನನ್ನ ಕಣ್ಣನ್ನ ಹೇಗೆ ತಪ್ಪಿಸಿಕೊಳ್ತ ಇದ್ದಳೊ?’

‘ನಾನು ಒಂದಂಗ್ಲ ಜಾಗಾನೂ ಬಿಡ್ಡೆ ಸೋದ್ಸಿ ನೋಡಿ ಬಂದಿದ್ದೀನಿ ಈಗ. ವರಾಂಡ, ಎಳ್ಡುಕೋಣೆ, ಅಡಿಗೆಮನೆ, ಬಚ್ಚಲಮನೆ, ಕಡೆಗೆ ಕಕ್ಸಾನೂ ಎಳ್ಡೆಲ್ಡು ಸಲ ಉಡ್ಕಿ ಬಂದಿದ್ದೀನಿ. ಅವ್ಳು ಅಲ್ಲಿಂದ ಅಂಗೇ ಮಂಗಮಾಯ ಆಗೋಗ್ಬಿಟ್ಲಾ! ನಾ ಬರೋವಾಗ ಬಾಕು ಅಚ್ಕೊಂಡು ಬಂದಿದೀನಿ. ಬರ್‍ರಿ ಮ್ಯಾಕೆ ನೀವಿಬ್ರೂನೂವೆ. ನೀವೇ ನೋಡ್ಬುಟ್ಟು ನನ್ಮಾತು ಸುಳ್ಳೋ ನಿಲ್ಲೋ ಪೈಸಲ್ ಮಾಡಿಬುಡಿ.’

‘ಮುಂದಿನ ದೊಡ್ಡ ಕೋಣೆಯಲ್ಲಿ ಕೂತುಕೊಳ್ಳುವ ಸೋಫದ ಪಕ್ಕದಲ್ಲಿ ಒಂದು ದಪ್ಪ ರಟ್ಟಿನ ಪೆಟ್ಟಿಗೆ ಇರಲಿಲ್ವೇನೊ ಮಾದ?’ ಕೇಳಿದಳು ಅನಸೂಯೆ.

‘ಉಹೂಂರವ್ವಾ. ನೆಲದ ಮ್ಯಾಕೆ ಯಾವ್ದೂ ರಟ್ಟಿನ ಪೆಟ್ಟಿ ಇರಲಿಲ್ಲ. ಎಲ್ಲ ಸಾಮಾನ್ಗೋಳೂ ನಾಜೂಕಾಗಿ ಇಟ್ಟಂಗೇ ಇತ್ತು. ಏನೂ ಚಲ್ಲಾ ಪಿಲ್ಲಿ ಆಗಿಲ್ಲ. ನೋಡಿ ಅವ್ವಾ. ಉಡ್ಗಿ ಬಂದಿರಬೈದು. ಇಲ್ದಿದ್ರೆ ನೀವ್ಯಾಕ್ತಾನೆ ಇಲ್ಲಿಗೆ ಬರ್‍ತಿದ್ರಿ ಇಂಗ್ಹೆದರ್‍ಕೊಂ ಡು! ನಿಮ್ಜೊತೇಲೆ ಅವಳೂ ಇಳ್ದು ಬಂದು, ನೀವಿಲ್ಲಿ ಬಾಕ್ಲ ತಟ್ಟಿ ಗದ್ಲ ಮಾಡ್ತಿದ್ದಾಗ ನಿಮ್ಮ ಬೆನ್ನು ಇಂದೇನೇ ಓಡೋಗಿರ್‍ಬೇಕು. ಅದು ತಿರ್‍ಗಿ ಬಂದ್ರೆ ಗಾಶಾರ ಬಿಡ್ಸಿಬಿಡೋಣ ಅದ್ಕೆ.’

‘ಮಾದಾ, ನೀನೂ ನನ್ನೊಡನೆ ಬಾ ಮೇಲಕ್ಕೆ. ನಾನೂ ನೀನೂ ಇನ್ನೊಂದು ಸಲ ಚೆನ್ನಾಗಿ ನೋಡಿಬಿಡೋಣ… ಅಲ್ಲಾ! ಹೇಗೆ ಇಳಿದು ಓಡಿಹೋದ್ಳು ಅವಳ ರಟ್ಟಿನ ಪೆಟ್ಗೇನೂ ಹೊತ್ಕೊಂಡು! ಒಂದುವೇಳೆ ನೀನು ಹೇಳೋ ಹಾಗೇ ನಾನಿಲ್ಲಿ ಬಾಗಿಲು ತಟ್ಟುತಾ ಭಾಗೀರಥಮ್ಮನವರನ್ನ ಕೂಗುತ್ತ ಇದ್ದಾಗ ಓಡಿಬಿಟ್ಟಳೋ ಏನೊ!’

ಅನಸೂಯೆಯೊಡನೆ ಆಳು ಮಾದ ಇನ್ನೊಮ್ಮೆ ಮಹಡಿಗೆ ಹತ್ತಿಹೋಗಿ ಎಲ್ಲವನ್ನೂ ಪರಿಷ್ಕಾರವಾಗಿ ಶೋಧಿಸಿಬಿಟ್ಟ. ಈಗ ಅನಸೂಯೆಗೆ ದೃಢವಾಯಿತು, ಅವಳೂ ತನ್ನ ಹಿಂದೆಯೇ ಇಳಿದು ತಾನು ಕೆಳಗಿನ ಮನೆಯ ಕದ ತಟ್ಟಿ ಕೂಗುತ್ತಿರುವಾಗಲೆ ಓಡಿ ಹೋಗಿರಬೇಕೆಂದು.

‘ಕದ ಅಚ್ಕೊಳ್ಳಿ, ತಾಯಿ, ಇನ್ಮೇಗೆ ಯಾರು ಬಾಕಲ್ತಟ್ಟಿದ್ರೂ ಎಸ್ರು ಕೇಳಿ, ಆಮ್ಯಾಕೆ ಬಾಕಲ್ತೆಗೀರ.’

‘ಆಗ್ಲಪ್ಪ, ಸದ್ಯ ಈಗ ನೀನು ಮನೇಲಿದ್ದಿದ್ದು ನನ್ನ ಪುಣ್ಯ.’

ಮಾದ ಕೆಳಗಿಳಿದು ಹೋದನಂತರ, ಅನಸೂಯೆ ಬಾಗಿಲು ಮುಚ್ಚಿಕೊಂಡು ಒಳಕ್ಕೆ ಬಂದು ದೀಪಗಳನ್ನು ಹೊತ್ತಿಸಿ, ಮಾದ ಕದಲಿಸಿಹೋಗಿದ್ದ ಸಾಮಾನುಗಳನ್ನು ಹಿಂದಿನ ಕ್ರಮದಲ್ಲೇ ಇಟ್ಟು, ಒಮ್ಮೆ ಆ ಕೋಣೆಯನ್ನು ತಾನು ಹಿಂದೆಂದೂ ನೋಡದ ರೀತಿಯಲ್ಲಿ, ಹೊಸತಾಗಿ ಮನೆಗೆ ಬಂದವರು ನೋಡುವ ರೀತಿಯಲ್ಲಿ ನೋಡತೊಡಗಿದಳು. ಇತ್ತೀಚೆಗೆ, ಅವಳಿಗಾಗಿದ್ದ ಅನುಭವಗಳ ಭಯ, ದುಃಖ, ದಿಕ್ಕಿಲ್ಲದೆ ತಾನು ಒಬ್ಬಳೇ ಇರುವ ಸ್ಥಿತಿ, ಎಲ್ಲವೂ ಸೇರಿ ಆಕೆಯ ಮನಸ್ಸಿನಲ್ಲಿ ದಾರುಣವಾದ ವ್ಯಸನವನ್ನು ತಂದೊಡ್ಡಿದ್ದುವು. ಅಷ್ಟು ವರ್ಷ ಒಂಟಿ ಜೀವನವನ್ನು ಭಯವಿಲ್ಲದೆ, ಬೇಸರವಿಲ್ಲದೆ ನಡೆಸಿದ್ದ ಆಕೆಗೆ ‘ಇನ್ನು ಇಂತಹ ಜೀವನವು ಸಾಧ್ಯವೆ?’ ಎಂಬ ಶಂಕೆ ತಲೆದೋರಿತ್ತು.

ಇದನ್ನು ಓದಿದ್ದೀರಾ?: ವಿ.ಜಿ. ಶ್ಯಾನಭಾಗರ ಕತೆ | ದೇವದಾಸಿ

ಈಗ ಕೋಣೆಯ ಸಾಮಾನುಗಳೆಲ್ಲ, ವಸ್ತುಗಳೆಲ್ಲ ಅವವುಗಳ ಸ್ಥಾನದಲ್ಲಿ ಇದ್ದುವಾದರೂ, ಅಲ್ಲಿ ಯಾವುದೋ ಒಂದು ಬಗೆಯ ಶೂನ್ಯತೆ ಹೊಸತಾಗಿ ಎದ್ದು ಹರಡಿ ನಿಂತಿತ್ತು. ಅದು ಈಗ ಮಹಡಿಯೆಲ್ಲವನ್ನೂ ಆಕ್ರಮಿಸಿತ್ತು. ಮನೆಯಲ್ಲಿ ತುಂಬು ಗದ್ದಲಮಾಡುತ್ತ, ನಗುತ್ತ, ಅಳುತ್ತ, ಆಡುತ್ತ ನಲಿಯುತ್ತಿದ್ದ ಮಗು ಒಂದು ಅಳಿದು ಹೋದಾಗ ಮನೆಯಲ್ಲಿ ಉಂಟಾಗುವ ಶೂನ್ಯಸ್ಥಿತಿ ಅಲ್ಲಿ ಈಗ ತುಂಬಿತ್ತು. ಅರ್ಧ ಗಂಟೆಯ ಹಿಂದೆ ಅಲ್ಲಿದ್ದ ಸೋಫದ ಮೇಲೆ ವಯ್ಯಾರದಿಂದ ಕುಳಿದು ‘ನಿಮ್ಮೊಡನೆ ಇರುವುದಕ್ಕೆ ಬಂದಿದ್ದೇನೆ’ ಎಂದುಸಿರಿದ ಚಿಕ್ಕವಳು ಈಗ ಅಲ್ಲಿ ಇಲ್ಲ. ಬರಿಯ ಸೋಫ ಮಾತ್ರವಿದೆ. ತಾನು ತಂದಿದ್ದ ಹೂಗಳನ್ನು ಮುಟ್ಟಿ ಮೂಸುವವರು ಇರಲಿಲ್ಲ. ತಂದಿದ್ದ ಮಿಠಾಯಿಗಳನ್ನು ಆನಂದದಿಂದ ಮೆಲಕು ಮಾಡುವವರು ಇರಲಿಲ್ಲ. ಆ ಚಿಕ್ಕವಳು ಅಷ್ಟು ಕಾಲವೂ ಅಲ್ಲಿದ್ದ ಶಾಂತಿ, ತುಷ್ಟಿಗಳನ್ನು ತನ್ನೊಡನೆಯೆ ಕೊಂಡುಹೋಗಿಬಿಟ್ಟಿದ್ದಳು. ತಾನೇಕೆ ಅಷ್ಟು ಹುಚ್ಚೆದ್ದು ಆತುರಪಟ್ಟೆನೆಂಬ ಪಶ್ಚಾತ್ತಾಪ ಈಗ ಅನಸೂಯೆಯ ಮನವನ್ನು ಬಲು ಯಾತನೆಗೆ ಗುರಿ ಪಡಿಸಿತ್ತು.

ಮಂಕು ಕವಿದಂತಾಗಿ ಅನಸೂಯೆ ಅಲ್ಲಿದ್ದ ಕುರ್ಚಿಯೊಂದರಲ್ಲಿ ನಾಲೈದು ನಿಮಿಷ ಸ್ತಬ್ಧಳಾಗಿ ಕುಳಿತುಬಿಟ್ಟಳು. ನಿಶ್ಯಬ್ದತೆಯ ಘೋರ, ನಿಮಿಷ ನಿಮಿಷಕ್ಕೂ ಹೆಚ್ಚುತ್ತಲೇ ಇತ್ತು.

ಈ ನಡುವೆ ಅಲ್ಲಿದ್ದ ದೊಡ್ಡ ಆಲ್ಮೆರದ ಬಾಗಿಲು ಮೆಲ್ಲನೆ ತೆರೆದ ಶಬ್ದವಾಯಿತು. ಅನಸೂಯೆ ಅದೇನೆಂದು ತಲೆಯೆತ್ತಿ ಅತ್ತ ನೋಡಿದಳು. ಒಳಗಣಿಂದ “ಅಮ್ಮಾ ನನ್ನನ್ನು ಇಳಿಸಿಕೊ” ಎಂದ ಧ್ವನಿ ಕೇಳಿಸಿತು. ಅನಸೂಯೆಗೆ ಈಗ ಎದೆಯುಬ್ಬಿ ಬಿಗಿಯಿತು. ಆನಂದ ಪುಳಕಾಂಕಿತಳಾಗಿ, ‘ಅಯ್ಯೋ ನನ್ನ ಕಂದಾ’ ಎನ್ನುತ್ತ ಚಿಕ್ಕವಳನ್ನು ಬಾಚಿ ಎದೆಗೆ ಅಪ್ಪಿಕೊಂಡಳು. ಮುತ್ತಿಟ್ಟಳು. ಹೆತ್ತ ತಾಯಿ ಮಾತ್ರ ಸವಿಯಬಹುದಾದ ಮಹದಾನಂದವನ್ನು ಸವಿದಳು.

(1965), (ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಕೆ.ವಿ. ಅಯ್ಯರ್ ಅನಾಥೆ ಅನಸೂಯೆ
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿರಂಜನ ಅವರ ಕತೆ | ಕೊನೆಯ ಗಿರಾಕಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ತರಾಸು ಅವರ ಕತೆ | ಇನ್ನೊಂದು ಮುಖ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

Download Eedina App Android / iOS

X