ಸಾಂಪ್ರದಾಯಿಕ ಕುರಿಗಾಹಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಸಮಿತಿ ಮುಖಂಡ ಯಲ್ಲಪ್ಪ ಹೆಗಡೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ತಃಶೀಲ್ದಾರರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಈ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಇತ್ತೀಚೆಗೆ ನಡೆದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಶರಣಪ್ಪ ಜಮ್ಮನಕಟ್ಟಿ ಹಾಗೂ ಬಸವ ಕಲ್ಯಾಣ ತಾಲೂಕಿನ ಪ್ರಭು ಮೇತ್ರಿ ಅವರನ್ನು ಕುರಿಗಳ್ಳರು ಕೊಲೆ ಮಾಡಿದ್ದರು. ಧಾರವಾಡದ ಕುಂದಗೋಳ ತಾಲೂಕಿನ ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಅವರನ್ನು ಕೂಡಾ ಕೊಲೆ ಮಾಡಲಾಗಿದೆ. ಹೀಗೆ ಕುರಿಗಾಹಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮುಂದುವರೆಯುತ್ತಲೇ ಇದೆ. ಹಾಗಾಗಿ ರಾಜ್ಯ ಸರ್ಕಾರ ಶೀಘ್ರ ಈ ಸಂಬಂಧ ಕ್ರಮ ಕೈಗೊಳ್ಳಬೇಕು. ಸಾಂಪ್ರದಾಯಿಕ ಕುರಿಗಾಹಿಗಳ ಹಿತಕ್ಷಣ ಕಾಯ್ದೆಯನ್ನು ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.

ಸಮಿತಿಯ ಮುಖಂಡ ರಂಗನಗೌಡ ಪಾಟೀಲ ಮಾತನಾಡಿ, “ರಾಜ್ಯದಲ್ಲಿರುವ ಕುರಿಗಾಹಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಸರ್ಕಾರವು ಎಲ್ಲ ವರ್ಗದ ಮಹಿಳೆಯರ, ಮಕ್ಕಳ ಮತ್ತು ಶೋಷಿತ ವರ್ಗಗಳ ಪರ ಹಾಗೂ ವಿವಿಧ ವೃತ್ತಿಪರರ ಹಿತರಕ್ಷಣೆಗೆ ವಿಶೇಷ ಕಾಯ್ದೆಗಳನ್ನು ಮಾಡುತ್ತಿದೆ. ಅದೇ ರೀತಿ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು” ಎಂದರು.
ಇದನ್ನೂ ಓದಿ: ಬಾಗಲಕೋಟೆ | ಸಿಬ್ಬಂದಿಗಳಿಲ್ಲದ ಬಲಕುಂದಿ ಗ್ರಾಮ ಪಂಚಾಯಿತಿಗೆ ಬೀಗ
ಪ್ರಭು ಮುಧೋಳ ಹಾಗೂ ಗಂಗಾಧರ ಮೇಟಿ ಮಾತನಾಡಿ, “ಆಡು, ಕುರಿಗಳಿಗೆ ನೀಡುತ್ತಿರುವ ಲಸಿಕೆಯನ್ನು ಸರ್ಕಾರ ಬಂದ್ ಮಾಡಿದೆ. ಇದರಿಂದಾಗಿ ಕುರಿಗಳಿಗೆ ಮತ್ತು ಕುರಿಗಾಹಿಗಳಿಗೆ ಬಹಳಷ್ಟು ತೊಂದರೆಯಾಗಿದೆ. ಈ ಕ್ರಮವನ್ನು ಕೂಡಲೇ ಹಿಂಪಡೆಯಬೇಕು. ಕುರಿಗಾರರಿಗೆ ರಕ್ಷಣೆ ಒದಗಿಸಬೇಕು” ಎಂದರು.
ಪ್ರತಿಭಟನೆಯಲ್ಲಿ ಮಾಳು ಹಿಪ್ಪರಗಿ, ಮಲ್ಲಪ್ಪ ಸಿಂಗಾಡಿ, ಗಜಪ್ಪ ಕರಿಗಾರ, ಶಿವಗೊಂಡ ಸನದಿ, ಪರಪ್ಪ ಪ್ರಜಾರಿ, ಮಹಾದೇವ ಆಲಕನೂರ, ಹೊನ್ನಪ್ಪ ಬಿರಡಿ, ಮಾಲಿಂಗ ಮಾಯನ್ನವರ, ಪ್ರಭು ವಗ್ಗ, ಅರ್ಜುನ ಜಿಡ್ಡಿಮನಿ, ಮಲ್ಲೇಶ ತುಂಗಳ ಸೇರಿದಂತೆ ತೇರದಾಳದ ನೂರಾರು ಕುರಿಗಾಹಿಗಳು ಇದ್ದರು.