ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ2025 ಜುಲೈ 9 ರಂದು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ (ಬಂದ್) ಭಾಗವಾಗಿ ಎಐಯುಟಿಯುಸಿ ಸಂಯೋಜಿತ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜು ‘ಸಿ’ & ‘ಡಿ’ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘದಿಂದ ಇಂದು ಕಾಲೇಜು ಆವರಣದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಪ್ರಚಾರ ಸಭೆಯನ್ನು ನಡೆಸಲಾಯಿತು.
ಈ ಸಭೆಯನ್ನು ಉದ್ದೇಶಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ಜಿಲ್ಲಾ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ ಮಾತನಾಡಿ, “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೊಡ್ಡ ದೊಡ್ಡ ಏಕಸ್ವಾಮ್ಯ ಬಂಡವಾಳಶಾಹಿಗಳ ಹಿತಕ್ಕಾಗಿ ದುಡಿಯುವ ಜನರ ಜೀವನ ಮತ್ತು ಜೀವನೋಪಾಯದ ಮೇಲೆ ನಿರಂತರ ಪ್ಯಾಸಿಸ್ಟ್ ದಾಳಿ ಮಾಡುತ್ತಿದೆ. ಇದರ ವಿರುದ್ಧ ಜುಲೈ 9 ಇಡೀ ದೇಶದಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕಾರ್ಪೊರೇಟ್ ಗಳ ಹಿತಾಸಕ್ತಿಗಾಗಿ ಅವರಿಗೆ ಅನುಕೂಲವಾಗುವಂತೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುವಂತಹ (Ease of Doing Business) ನೀತಿಗೆ ಅನುಗುಣವಾಗಿ ಹಾಗೂ ದುಡಿಯುವ ಜನರ ಮೇಲೆ ಗುಲಾಮಗಿರಿ ಷರತ್ತುಗಳನ್ನು ಹೇರುವ ಉದ್ದೇಶದಿಂದ ಅದಕ್ಕೆ ಬೇಕಾಗಿರುವ ಸಮಗ್ರ ನೀಲ ನಕ್ಷೆ ರೂಪಿಸಿ ಸರ್ಕಾರ ಕೆಲಸ ಮಾಡುತ್ತಿದೆ” ಆಕ್ರೋಶ ವ್ಯಕ್ತಪಡಿಸಿದರು.

“ಸತತ ಹೋರಾಟ, ತ್ಯಾಗ, ಬಲಿದಾನಗಳಿಂದ ಗಳಿಸಿದ 29 ಕಾರ್ಮಿಕ ಕಾನೂನುಗಳ ಆಶಯಗಳನ್ನು ಗಾಳಿಗೆ ತೂರಿ 4 ಕಾರ್ಮಿಕ ಸಂಹಿತೆ (ಲೇಬರ್ ಕೋಡ್) ಗಳನ್ನು ಜಾರಿಗೊಳಿಸಲು ಸರ್ಕಾರವು ತುದಿಗಾಲಿನಲ್ಲಿ ನಿಂತಿದೆ. ಉದ್ಯೋಗಗಳನ್ನು ಕಡಿತಗೊಳಿಸಿ, ಖಾಯಂ ಉದ್ಯೋಗಗಳನ್ನು ಶಾಶ್ವತವಾಗಿ ರದ್ದುಮಾಡುತ್ತಾ ಗುತ್ತಿಗೆ, ಹೊರಗುತ್ತಿಗೆ, ಹೊಸದಾಗಿ ಜಾರಿಗೊಳಿಸಲಾಗುವ ನಿಗದಿತ ಅವಧಿ ಉದ್ಯೋಗ (FTE- Fixed Term Employment) ಇತ್ಯಾದಿಗಳು ಆಳುವ ಬಂಡವಾಳಶಾಹಿ ವರ್ಗ ಮತ್ತು ಅದರ ಅಧೀನ ಸರ್ಕಾರಗಳು ತಮ್ಮ ಇಚ್ಛೆಯಂತೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮತ್ತು ವಜಾ ಮಾಡಲು ಕೈಗೊಂಡ ಕರಾಳ ವಿನ್ಯಾಸವಾಗಿದೆ” ಎಂದು ವಿಶ್ಲೇಷಿಸಿ ಅಸಮಾಧಾನ ವ್ಯಕ್ತಪಡಿಸಿದರು.
“ಕಾರ್ಮಿಕರು ಕೆಲಸ ಮಾಡುವ ಅವಧಿ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಇತ್ಯಾದಿ ಸೇರಿದಂತೆ ವ್ಯಾಖ್ಯಾನಿಸಲಾದ ಕೆಲಸದ ಪರಿಸ್ಥಿತಿಗಳಿಗೆ ಸಂಬಂಧಿಸಿದ ಎಲ್ಲಾ ಮೂಲಭೂತ ಹಕ್ಕುಗಳಿಗೂ ಹಾಗೂ ಯೂನಿಯನ್ (ಕಾರ್ಮಿಕ ಸಂಘಟನೆ) ಮಾಡುವ ಹಕ್ಕು, ಮನ್ನಣೆ, ಸಾಮೂಹಿಕ ಚೌಕಾಸಿ, ಆಂದೋಲನಗಳು ಮತ್ತು ಮುಷ್ಕರದ ಹಕ್ಕು ಸೇರಿದಂತೆ ಯಾವುದೇ ರೀತಿಯ ಸಾಮೂಹಿಕ ಪ್ರತಿಭಟನೆಯ ಹಕ್ಕುಗಳನ್ನು ಪ್ರತಿಪಾದಿಸಲು ಇದು ಗಂಭೀರ ಸವಾಲಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಮತ್ತು ರದ್ದುಗೊಳಿಸಲು, ಕಡು ಕಾರ್ಮಿಕ ವಿರೋಧಿ ಸಂಹಿತೆಗಳ ವಿರುದ್ಧ ಪ್ರಬಲವಾದ ಹೋರಾಟವನ್ನು ಸಂಘಟಿಸುವ ಉದ್ದೇಶದಿಂದ ಜುಲೈ 9ರ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ” ಎಂದು ತಿಳಿಸಿದರು.
“ಭಾರತೀಯ ರೈಲ್ವೆ, ರಸ್ತೆ ಸಾರಿಗೆ, ವಿದ್ಯುತ್, ಉಕ್ಕು, ಪೆಟ್ರೋಲಿಯಂ, ಅಂಚೆ, ಟೆಲಿಕಾಂ, ಬ್ಯಾಂಕುಗಳು ಮತ್ತು ವಿಮಾ ಕ್ಷೇತ್ರಗಳಂತಹ ಇತರ ಸಾರ್ವತ್ರಿಕ ಕ್ಷೇತ್ರಗಳ ಹಣವನ್ನು ವಿನಿಯೋಗಿಸಿ ಕಟ್ಟಿ ಬೆಳೆಸಿದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಧಾರೆ ಎರೆಯುವ ದುರುದ್ದೇಶದಿಂದ ‘ರಾಷ್ಟ್ರೀಯ ನಗದೀಕರಣ ಪೈಪ್ ಲೈನ್’ ನಾಮಾಂಕಿತದೊಂದಿಗೆ ಕೇಂದ್ರ ಬಿಜೆಪಿ ಸರ್ಕಾರ ಖಾಸಗಿಕರಣ ಮಾಡಹೊರಟಿದೆ” ಎಂದು ಆರೋಪಿಸಿದರು.
ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಸಿ ಮತ್ತು ಡಿ ನೌಕರರ ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ ಅಣಬೇರು ಮಾತನಾಡಿ, “ಕಳೆದ ಶತಮಾನದ 90ರ ದಶಕದ ಆರಂಭದಲ್ಲಿ ಕಾಂಗ್ರೆಸ್ ಸರ್ಕಾರವು ಜಾಗತೀಕರಣದ ಸಮಗ್ರ ನೀತಿಯ ಒಂದು ಭಾಗವಾಗಿ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಟ್ಟಿತ್ತು ಎಂಬುದನ್ನು ನಾವು ಮರೆಯಬಾರದು. ನಂತರ ಬಂದಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇವನ್ನೇ ಮುಂದುವರಿಸಿ, ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಯನ್ನು ಅನುಸರಿಸಿದವು. ಇವೆಲ್ಲವೂ ಬಂಡವಾಳಶಾಹಿ ಪರ, ಕಾರ್ಮಿಕ ವಿರೋಧಿ ನೀತಿಗಳು” ಎಂದು ಪರಾಮರ್ಶಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಗಿಲ್ ಕಂಪೆನಿ ಹಸ್ತಾಂತರ ನಿಲ್ಲಿಸಿ ಹಕ್ಕುಗಳನ್ನು ರಕ್ಷಿಸಲು ರೈತ ಸಂಘ ಹಾಗೂ ಕೃಷಿ ಕಾರ್ಮಿಕರ ಸಂಘಟನೆ ಒತ್ತಾಯ
“ಹೊಸ ಪಿಂಚಣಿ ಯೋಜನೆಯಿಂದ ಪಿಂಚಣಿ ಪರಿಕಲ್ಪನೆಯನ್ನೇ ಸಮಾಧಿ ಮಾಡುವ ಬದಲಾಗಿ ಹಿಂದೆ ಇದ್ದ ಹಳೆಯ ಪಿಂಚಣಿ ಯೋಜನೆಯನ್ನೇ (OPS) ಖಾತ್ರಿಪಡಿಸಿ ಎಂದು ಈ ಸಂದರ್ಭದಲ್ಲಿ ಆಗ್ರಹಿಸಲಾಗುವುದು” ಎಂದು ತಿಳಿಸಿದರು.
‘ಇಂದು ಕಾರ್ಮಿಕ ವಿರೋಧಿ ಬಂಡವಾಳಶಾಹಿ ನೀತಿಗಳನ್ನು ಸೋಲಿಸಲು ಪ್ರಬಲ ಜಂಟಿ ಕಾರ್ಮಿಕ ಹೋರಾಟದ ಅತ್ಯವಶ್ಯಕತೆ ಇದೆ. ಆದ್ದರಿಂದ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಕರೆಯ ಮೇರೆಗೆ ‘ಕಾರ್ಮಿಕ ಹಕ್ಕುಗಳ ಮೇಲಿನ ದಾಳಿ ವಿರೋಧಿಸಿ ಲೇಬರ್ ಕೋಡ್ ರದ್ದುಗೊಳಿಸಿ ಹಾಗೂ ಪ್ರತಿರೋಧಿಸಿ’ ಎಂಬ ಘೋಷಣೆಗಳೊಂದಿಗೆ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಲು ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರು ಒಕ್ಕೊರಲಿನಿಂದ ಮುಂಬರಬೇಕು’ ಎಂದು ಈ ಸಭೆಯಲ್ಲಿ ಕರೆ ನೀಡಲಾಯಿತು.
ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ಆನ್ಲೈನ್ ಗೇಮಿಂಗ್ ಗೆ ಯುವಕ ಬಲಿ; ಕ್ರಮಕ್ಕೆ ಡೆತ್ ನೋಟಿನಲ್ಲಿ ಸಿಎಂ, ಡಿಸಿಎಂ, ಸಂಸದೆ, ನ್ಯಾಯಾಧೀಶರಿಗೆ ಮನವಿ
ಈ ಸಭೆಯಲ್ಲಿ ತಿಪ್ಪೇಸ್ವಾಮಿ ಅಣಬೇರು, ವಿರೂಪಾಕ್ಷಪ್ಪ ದೊಡ್ಡಮನಿ, ಪರಮೇಶ್ವರಪ್ಪ, ಕರಿಬಸಪ್ಪ,ರವಿಕುಮಾರ್, ಬಸವರಾಜ್ ಶ್ಯಾವಿ, ಮರುಳಸಿದ್ದಪ್ಪ, ಗಂಗಮ್ಮ, ಲತಾ, ಮಲ್ಲಣ್ಣ, ಬಸವರಾಜ್, ವಿಜಯ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.