ಮೋದಿ ಸರ್ಕಾರವು 11 ವರ್ಷಗಳಲ್ಲಿ ಮಾಡಿದ 126 ಲಕ್ಷ ಕೋಟಿ ರೂ. ಸಾಲ ಏನಾಯಿತು, ಸರ್ಕಾರ ಯಾವುದಕ್ಕಾಗಿ ಬಳಸಿತು? ಭಾರತೀಯರು ಎಚ್ಚೆತ್ತು ಪ್ರಶ್ನೆ ಕೇಳದಿದ್ದರೆ, ಈಗ ಶೇ.90ರಷ್ಟು ಭಾರತೀಯರ ಬಳಿ ಇರುವ ಶೇ.10ರಷ್ಟು ಸಂಪತ್ತನ್ನೂ ಸರ್ಕಾರಗಳು ಕಿತ್ತುಕೊಂಡು ಬಂಡವಾಳಿಗರ ಕೈಗಿಡುತ್ತವೆ.
ಕಳೆದ 11 ವರ್ಷಗಳಲ್ಲಿ ಭಾರತವು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿದೆ. ಮೋದಿ ಆಡಳಿತದಲ್ಲಿ ಭಾರತದ ಆರ್ಥಿಕತೆಯು 5 ಟ್ರಿಲಿಯನ್ ಡಾಲರ್‌ಗೆ ಏರುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಮೋದಿ ಅವರು ಅಚ್ಛೇ ದಿನಗಳು ಬರುತ್ತಿವೆ. ಅಮೃತಕಾಲ ಸೃಷ್ಟಿಸುತ್ತೇವೆ ಎಂದಿದ್ದಾರೆ. ಇಷ್ಟೆಲ್ಲ ಭ್ರಮೆಗಳ ನಡುವೆ ಭಾರತೀಯರ ಮೇಲಿನ ಸಾಲದ ಹೊರೆ ಗಣನೀಯವಾಗಿ ಏರಿಕೆಯಾಗಿದೆ. ಭಾರತೀಯರ ತಲಾ ಸಾಲವು 4.8 ಲಕ್ಷ ರೂ.ಗೆ ಏರಿದೆ.
ಇತ್ತೀಚೆಗೆ, ಆರ್‌ಬಿಐ ಬಿಡುಗಡೆ ಮಾಡಿದ ವರದಿಯಲ್ಲಿ 2025ರ ವೇಳೆಗೆ ಭಾರತದ ಸಾಲವು 181.68 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂಬುದನ್ನು ತಿಳಿಸಿದೆ. ಅದರಲ್ಲೂ, 2023ರಲ್ಲಿ ಭಾರತದ ಸಾಲ 155.6 ಲಕ್ಷ ಕೋಟಿ ರೂ. ಇತ್ತು. ಎರಡೇ ವರ್ಷಗಳಲ್ಲಿ ಸಾಲದ ಮೊತ್ತವು 26 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಅಂತೆಯೇ, ಭಾರತೀಯರ ತಲಾ ಸಾಲವು 2023ರಲ್ಲಿ 3.9 ಲಕ್ಷ ರೂ. ಇದ್ದದ್ದು, 2025ರ ವೇಳೆಗೆ 4.8 ಲಕ್ಷ ರೂ.ಗೆ ಏರಿದೆ. ಎರಡು ವರ್ಷಗಳಲ್ಲಿ 90 ಸಾವಿರ ರೂಪಾಯಿ ತಲಾ ಸಾಲ ಹೆಚ್ಚಾಗಿದೆ.
ಗಮನಾರ್ಹವೆಂದರೆ, ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ 2014ರಲ್ಲಿ ಭಾರತದ ಸಾಲವು 55.87 ಲಕ್ಷ ಕೋಟಿ ರೂ. ಇತ್ತು. ಅಂದು ಭಾರತೀಯರ ತಲಾ ಸಾಲವು 43,124 ರೂಪಾಯಿ ಮಾತ್ರವೇ ಇತ್ತು. 2014ಕ್ಕೂ ಹಿಂದಿನ 60 ವರ್ಷಗಳ ಆಡಳಿತದಲ್ಲಿ ಭಾರತವು ಕೇವಲ 55 ಲಕ್ಷ ಕೋಟಿ ರೂ.ಗಳಷ್ಟು ಮಾತ್ರವೇ ಸಾಲ ಮಾಡಿತ್ತು. ಈ ಸಾಲದ ಹೊರೆಯೊಂದಿಗೆ ಭಾರತ ಹಲವು ದಾಪುಗಾಲುಗಳನ್ನು ಇಟ್ಟಿದೆ. ಮನರೇಗಾ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಧ್ಯಾಹ್ನದ ಊಟ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್, ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ ಹಾಗೂ ಇಂದಿರಾ ಆವಾಸ್ ಯೋಜನೆಯಂತಹ ಜನಕಲ್ಯಾಣ ಯೋಜನೆಗಳನ್ನು ಸರ್ಕಾರಗಳು ಜಾರಿಗೆ ತಂದಿವೆ.
ಅಂತೆಯೇ, ಜಾಗತೀಕರಣ, ಉದಾರೀಕರಣ, ಖಾಸಗೀಕರಣ (ಎಲ್‌ಪಿಜಿ) ನೀತಿಗಳನ್ನು ತಂದು ಬಂಡವಾಳಶಾಹಿಗಳಿಗೆ ಭಾರತವನ್ನು ತೆರೆದೂ ಇಟ್ಟಿವೆ. ಜನರನ್ನು ಶೋಷಿಸಲು ಬಂಡವಾಳಿಗರಿಗೆ ಅನುಕೂಲವನ್ನೂ ಮಾಡಿಕೊಟ್ಟಿವೆ. ಆದರೆ, ಮೋದಿ ಸರ್ಕಾರವು ಭಾರತದ ಸಾಲದ ಹೊರೆಯನ್ನು ಬರೋಬ್ಬರಿ 181.68 ಲಕ್ಷ ಕೋಟಿ ರೂ.ಗೆ ಏರಿಸಿದೆ. ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರವು 126 ಲಕ್ಷ ಕೋಟಿ ರೂ. ಮಾಡಿದೆ. ಭಾರತೀಯರಿಗೆ ಬೃಹತ್ ಸಾಲದ ಹೊರೆಯ ಜೊತೆಗೆ ಬಡತನ, ನಿರುದ್ಯೋಗ, ಬೆಲೆ ಏರಿಕೆಯನ್ನೂ ಉಡುಗೊರೆಯಾಗಿ ನೀಡಿದೆ.
ಭಾರತದಲ್ಲಿ ಪ್ರಸ್ತುತ ಜನಸಂಖ್ಯೆ 140 ಕೋಟಿ ಎಂದು ಅಂದಾಜಿಸಲಾಗಿದೆ. ಈ ಪೈಕಿ, ಇನ್ನೂ 100 ಕೋಟಿಗೂ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಚಿಲ್ಲರೆ ಹಣದುಬ್ಬರ ದರವು ಶೇ.7.8ಕ್ಕೆ ಏರಿದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಶೇ.8.4 ಮತ್ತು ನಗರ ಪ್ರದೇಶಗಳಲ್ಲಿ ಶೇ.7.1ಕ್ಕೆ ಏರಿಕೆ ಕಂಡಿದೆ. ಇಂಧನ, ಆಹಾರ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಜನರ ಖರ್ಚಿನ ವೆಚ್ಚವು ಶೇ.20ರಷ್ಟು ಹೆಚ್ಚಾಗಿದೆ. ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯೂ ಹೆಚ್ಚಾಗಿದೆ.
ಈ ಲೇಖನ ಓದಿದ್ದೀರಾ?: ನಾಗರಹೊಳೆ ಬುಡಕಟ್ಟು ಜನಾಂಗಕ್ಕೆ ಸಿಗಲಿ ನ್ಯಾಯ
ನಿರುದ್ಯೋಗ ಸಮಸ್ಯೆಯಂತೂ ಯುವಜನರ ಹಿಂಡುತ್ತಿದೆ. ಮೋದಿ ಅವರ ಸರ್ಕಾರವು ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್-ಅಪ್ ಇಂಡಿಯಾದಂತಹ ಯೋಜನೆಗಳನ್ನು ಜಾರಿಗೆ ತಂದರೂ, ಉದ್ಯೋಗ ಸೃಷ್ಟಿ ದೂರದ ಬೆಟ್ಟವಾಗಿದೆ. 2014ರಲ್ಲಿ ಮೋದಿ ಅವರು ತಮ್ಮ ಸರ್ಕಾರವು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತದೆ ಎಂದು ಹೇಳಿದ್ದರು. ಆದರೆ, ಕೇಂದ್ರ ಸರ್ಕಾರವೇ ಹೇಳಿಕೊಂಡಂತೆ, ಮೋದಿ ಸರ್ಕಾರವು 2014-2022ರವರೆಗಿನ 9 ವರ್ಷಗಳಲ್ಲಿ 1.5 ಕೋಟಿ ಉದ್ಯೋಗಗಳನ್ನು ಮಾತ್ರವೇ ಸೃಷ್ಟಿಸಿದೆ. ಸಾಲದಂಬಂತೆ, ಪ್ರಧಾನಿ ಮೋದಿ ಅವರು 2018ರಲ್ಲಿ ʼಪಕೋಡ ಮಾರುವುದು ಕೂಡ ಉದ್ಯೋಗವೇ, ಯುನಜನರಲ್ಲಿ ಕೌಶಲ್ಯವಿಲ್ಲʼ ಎನ್ನುವ ಮೂಲಕ ಯುವಜನರನ್ನು ಅವಮಾನಿಸಿದ್ದರು. ಕೇಂದ್ರ ಸರ್ಕಾರದ ವೈಫಲ್ಯದಿಂದಾಗಿ, ಭಾರತದಲ್ಲಿನ ನಿರುದ್ಯೋಗ ದರವು ಪ್ರಸ್ತುತ 8%ಗೆ ಏರಿಕೆಯಾಗಿದೆ.
ಅಂದರೆ, ಮೋದಿ ಸರ್ಕಾರವು 11 ವರ್ಷಗಳಲ್ಲಿ ಮಾಡಿದ 126 ಲಕ್ಷ ಕೋಟಿ ರೂ. ಸಾಲ ಏನಾಯಿತು. ಯಾವುದಕ್ಕಾಗಿ ಸರ್ಕಾರ ಬಳಸಿತು? ಮೋದಿ ಅವರು ಈ ಹಣ ಸಂಪತ್ತನ್ನು ತಮ್ಮ ಮಿತ್ರರಾದ ಅದಾನಿ-ಅಂಬಾನಿ ಹಾಗೂ ಬಂಡವಾಳಶಾಹಿಗಳಿಗಾಗಿ ವ್ಯಯಿಸಿದ್ದಾರೆ ಎಂಬ ಗಂಭೀರ ಆರೋಪಗಳಿವೆ. ಅದಕ್ಕೆ ಸಾಕ್ಷಿ ಎಂಬಂತೆ, ಭಾರತದ ಶೇ.1ರಷ್ಟು ಶ್ರೀಮಂತರ ಕೈಯಲ್ಲಿ ಶೇ.40ರಷ್ಟು ಸಂಪತ್ತು ಕೇಂದ್ರೀಕೃತವಾಗಿದೆ. ಶೇ.10ರಷ್ಟು ಶ್ರೀಮಂತರ ಕೈಯಲ್ಲಿ ಶೇ.90ರಷ್ಟು ಸಂಪತ್ತು ಸೇರಿಕೊಂಡಿದೆ. ಶೇ.90ರಷ್ಟು ಭಾರತೀಯರ ಬಳಿ ಕೇವಲ ಶೇ.10ರಷ್ಟು ಸಂಪತ್ತು ಮಾತ್ರವೇ ಇದೆ. ಈ ಆರ್ಥಿಕ ಮತ್ತು ಸಂಪತ್ತಿನ ಅಸಮಾನತೆಯಿಂದಾಗಿ 100 ಕೋಟಿ ಭಾರತೀಯರು ಬಡವರಾಗಿಯೇ ಉಳಿದಿದ್ದಾರೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಭಾರತೀಯರು ಎಚ್ಚೆತ್ತುಕೊಳ್ಳದಿದ್ದರೆ, ಈಗ ಶೇ.90ರಷ್ಟು ಭಾರತೀಯರ ಬಳಿ ಇರುವ ಶೇ.10ರಷ್ಟು ಸಂಪತ್ತನ್ನೂ ಸರ್ಕಾರಗಳು ಕಿತ್ತುಕೊಂಡು ಬಂಡವಾಳಿಗರ ಕೈಗಿಡುತ್ತವೆ. ಅದಕ್ಕೂ ಮುನ್ನ ಭಾರತೀಯ ನಾಗರಿಕರು ಎಚ್ಚೆತ್ತುಕೊಳ್ಳಬೇಕಿದೆ. ಜನಪರ ಆರ್ಥಿಕ ಸುಧಾರಣೆಗಳು, ಉದ್ಯೋಗ ಸೃಷ್ಟಿ, ಹಣದುಬ್ಬರ ನಿಯಂತ್ರಣ, ಸಂಪತ್ತಿನ ಮರುಹಂಚಿಕೆ, ಕೃಷಿ ಕ್ಷೇತ್ರಕ್ಕೆ ಪ್ರೋತ್ಸಾಹ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು, ಗ್ರಾಮೀಣಾಭಿವೃದ್ಧಿಯಂತಹ ಕ್ರಮಗಳನ್ನು ಸರ್ಕಾರಗಳು ಜಾರಿಗೆ ತರುವಂತೆ ಒತ್ತಾಯಿಸಬೇಕಿದೆ.