ನಾಡಿನ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಖಾಸಗಿ ಮತ್ತು ಸರ್ಕಾರಿ ಹಾಗೂ ಎಲ್ಲ ಅನುದಾನಿತ ಶಾಲೆಗಳಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಬೇಕು. ಇದರಿಂದ ನಾಡಿನ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇ ಗೌಡ ಬಣದ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ರಾಜ್ಯದ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದರು.
ಕರವೇ ಕಾರ್ಯಕರ್ತರೊಂದಿಗೆ ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗ ಪ್ರತಿಭಟನೆ ಮಾಡುವ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಅವರು ಮಾತನಾಡಿದರು.
ಕ ರ ವೇ ರಾಜ್ಯ ವಕ್ತಾರ ಬಿ.ಎಂ.ಪಾಟೀಲ ಮಾತನಾಡಿ, ಜಾಗತಿಕವಾಗಿ ವಿದ್ಯೆ ಉದ್ಯೋಗವನ್ನು ಪಡೆಯಲು ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದೆ. ಕೌಶಲ್ಯ ಮತ್ತು ಇತರ ವೃತ್ತಿಪರ ತರಬೇತಿ ಗಳನ್ನು ಪಡೆಯಲು ಆಂಗ್ಲಭಾಷೆ ಬೇಕೇ ಬೇಕಾಗುತ್ತದೆ. ಆಂಗ್ಲಭಾಷೆಯನ್ನು ಕೇವಲ ವ್ಯವಹಾರಿಕವಾಗಿ ಮಾತ್ರ ಬಳಸಲು ಕಲಿಯಬೇಕಾಗಿದೆ ಎಂದರು.
ಕನ್ನಡವನ್ನು ಅನ್ನದ ಭಾಷೆಯಾಗಿ ತಪ್ಪದೇ ಎಲ್ಲ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಬಳಸುವಂತೆ ರಾಜ್ಯ ಸರ್ಕಾರ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರತಿಯೊಬ್ಬ ವಿದ್ಯಾವಂತ ಮಕ್ಕಳಿಗೆ ಉದ್ಯೋಗದ ಅವಶ್ಯಕತೆ ಇದ್ದು ಕನ್ನಡ ಭಾಷೆಯಲ್ಲಿ ಉದ್ಯೋಗ ಪಡೆಯುವುದು ಕಷ್ಟದ ಕೆಲಸವಲ್ಲ. ಅನ್ಯ ಭಾಷೆಯ ಮೋಹಕ್ಕೆ ಬಲಿಯಾಗುವ ಅವಶ್ಯಕತೆ ನಮ್ಮ ನಾಡಿನ ಮಕ್ಕಳಿಗೆ ಬೇಕಾಗಿಲ್ಲ. ಆದ್ದರಿಂದ ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಬರಬೇಕು ಎಂದು ಹೇಳುವ ಮೂಲಕ ಅನ್ಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಹೋರಾಟಗಾರರ ಒತ್ತಾಯಕ್ಕೆ ಮಣಿದು ಅಲ್ಲಿನ ಸರ್ಕಾರಗಳು ದ್ವಿಭಾಷಾ ನೀತಿ ಅನುಸರಿಸಲು ಮುಂದಾಗಿದ್ದು, ನಮ್ಮನ್ನಾಳುವ ಕರ್ನಾಟಕ ಸರ್ಕಾರ ಈ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಚಿಂತಾಮಣಿ | ಅಧಿಕಾರಿಗಳ ಕಣ್ತಪ್ಪಿಸಿ ಮುನಗನಹಳ್ಳಿ ಕೆರೆಯ ಮಣ್ಣು ಅಕ್ರಮ ಸಾಗಣೆ: ಕ್ರಮಕ್ಕೆ ಒತ್ತಾಯ
ಪ್ರತಿಭಟನೆಯಲ್ಲಿ ಸಂತೋಷ ಚಿನಿವಾಲ, ಶರಣು ಗಾಣಿಗೇರ ಗಣೇಶ ನಾಯಕ, ಸಂಜು ಗೌಡರ, ವಿಷ್ಣು ಬಾರಕೇರ ಸಾದೀಕ್ ತಾಳಿಕೋಟಿ, ಮಂಜುಳಾ ಅಂಗಡಿ, ಕಸ್ತೂರಿ ಮೆಹರವಾಡೆ, ಶಬಾನಾ ಲಿಂಗಸೂರ, ಶ್ರೀನಿವಾಸ ಮಾರಾ, ಸೋಹೈಲ್ ಸುತಾರ, ಶಂಕರ ಕುರಿ, ನಿಂಬಯ್ಯ ಕುಲಕರ್ಣಿ, ಗುರುನಾಥ ಜಾವಡಗಿ, ಅಭಿಷೇಕ ಮಾದರ, ಪವನ್ ಶಿವಯೋಗಿ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
