ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ, ಮುಕ್ತ-ನ್ಯಾಯಸಮ್ಮತ ಚುನಾವಣೆ ನಡೆಸದೆ; ತನ್ನ ಕರ್ತವ್ಯ ನಿಭಾಯಿಸದೆ ವಿಫಲಗೊಂಡಿದೆ. ಆಳುವ ಪಕ್ಷದ ಕೈಗೊಂಬೆಯಾಗಿ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತಂದಿದೆ. ಜನರ ವಿಶ್ವಾಸಾರ್ಹತೆ ಕಳೆದುಕೊಂಡಿದೆ...
‘ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಪರಾಮರ್ಶೆ ಎನ್ನುವುದು ನಿಚ್ಚಳವಾಗಿ ಬಡವರ ಮತದಾನದ ಹಕ್ಕನ್ನು ಕಸಿಯುವ ಕೃತ್ಯ. ಕಳ್ಳತನ. ಯಾರದೋ ಚಿತಾವಣೆಗೊಳಗಾಗಿ ಆಯೋಗ ಈ ಕೃತ್ಯಕ್ಕೆ ಕೈಹಾಕಿದೆ’ ಎಂದು ಕಾಂಗ್ರೆಸ್ ಮುಖಂಡ ಪವರ್ ಖೇರಾ, ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಕೇವಲ ಐದಾರು ತಿಂಗಳಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗ, ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)ಗೆ ಮುಂದಾಗಿದೆ. ಅಷ್ಟೇ ಅಲ್ಲ, ಮತದಾರರು 2025ರ ಜುಲೈ 25ರ ಒಳಗೆ ದಾಖಲೆಗಳನ್ನು ಒದಗಿಸಬೇಕು. ಸಲ್ಲಿಸದವರಿಗೆ ಆಕ್ಷೇಪಣೆ ಮತ್ತು ಹೊಸ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮತದಾರರಲ್ಲಿ ಗೊಂದಲ ಉಂಟುಮಾಡಿದೆ.
ಬಿಹಾರ ರಾಜ್ಯದ ಜನ ಆಗಾಗ್ಗೆ ವಲಸೆ ಹೋಗುವುದು, ವಿದೇಶಿ ಅಕ್ರಮ ವಲಸಿಗರ ಹೆಸರುಗಳನ್ನು ಸೇರಿಸುವುದು, ಯುವ ನಾಗರಿಕರು ಮತ ಚಲಾಯಿಸಲು ಅರ್ಹರಾಗುವುದು, ಮತಪಟ್ಟಿಯಲ್ಲಿರುವವರು ಸಾವನ್ನಪ್ಪುವುದು- ಹೀಗೆ ಮೊದಲಾದ ಕಾರಣಗಳಿಂದಾಗಿ ಪರಿಷ್ಕರಣೆ ಮಾಡುವುದು ಅಗತ್ಯ ಎಂಬುದು ಚುನಾವಣಾ ಆಯೋಗದ ವಾದ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಎಂ.ಬಿ.ಪಾಟೀಲರ ಹೇಳಿಕೆ ಉದ್ಧಟತನದ ಪರಮಾವಧಿ
ಚುನಾವಣಾ ಆಯೋಗದ ಈ ವಾದಕ್ಕೆ ವಿರೋಧ ಪಕ್ಷಗಳು, ರಾಜಕೀಯ ನಾಯಕರು, ಚಿಂತಕರು, ವಕೀಲರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಚುನಾವಣಾ ಆಯುಕ್ತ(ಇಸಿ) ಅಶೋಕ್ ಲವಾಸಾ ‘ಮತದಾರರಿಗೆ ಪೌರತ್ವ ಪ್ರಮಾಣಪತ್ರವನ್ನು ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಅದು ಚುನಾವಣಾ ಆಯೋಗದ ಕೆಲಸವಲ್ಲ. ಚುನಾವಣೆಯ ಮೇಲ್ವಿಚಾರಣೆ ಮಾಡುವುದು ಮಾತ್ರ ಅದರ ಕೆಲಸ’ ಎಂದು ಹೇಳುವ ಮೂಲಕ ಆಯೋಗದ ಕೆಲಸವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಅರ್ಹ ನಾಗರಿಕರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಮತ್ತು ಅನರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಪರಿಷ್ಕರಣೆ 2003ರಲ್ಲೇ ಆಗಿದೆ. ಆದರೆ ಈಗ ಬಿಹಾರಕ್ಕೆ ಮಾತ್ರ ಇದು ಅನ್ವಯವಾದುದು ಏಕೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕೂಡ ತೇಜಸ್ವಿ ಯಾದವ್ ಅವರ ಆಕ್ಷೇಪಣೆಗೆ ದನಿಗೂಡಿಸಿದ್ದಾರೆ.
ಹಟಕ್ಕೆ ಬಿದ್ದ ಮುಖ್ಯ ಚುನಾವಣಾಧಿಕಾರಿ, ‘ಆಯೋಗದ ಸೂಚನೆಯಂತೆ 2025ರ ಆಗಸ್ಟ್ 1ರಂದು ಮತದಾರರ ಕರಡು ಪಟ್ಟಿ ಪ್ರಕಟಿಸಲಾಗುವುದು. ಅದರಲ್ಲಿ ಸಂಪೂರ್ಣ ಮಾಹಿತಿ ನಮೂನೆಗಳನ್ನು ಒದಗಿಸಿದ ಹಾಲಿ ಮತದಾರರ ಹೆಸರುಗಳು ಇರಲಿವೆ’ ಎಂದಿದ್ದಾರೆ. ಇದು ಸಹಜವಾಗಿಯೇ, ಕೇವಲ ಒಂದು ತಿಂಗಳ ಅವಧಿಯಲ್ಲಿ 5 ಕೋಟಿ ಮತದಾರರ ಪರಿಷ್ಕರಣೆ ಸಾಧ್ಯವೇ ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಜೊತೆ ಜೊತೆಗೆ ಆಯೋಗದ ಕಾರ್ಯಕ್ಷಮತೆಯ ಬಗ್ಗೆ ಅನುಮಾನವನ್ನೂ ಉಂಟುಮಾಡುತ್ತದೆ.
ಬಿಹಾರದ ಒಟ್ಟು ಜನಸಂಖ್ಯೆ ಸುಮಾರು 13 ಕೋಟಿ. ಮತದಾರರ ಪಟ್ಟಿಯಲ್ಲಿರುವವರು ಸುಮಾರು 8 ಕೋಟಿ. ಇವರಲ್ಲಿ, ಕೇವಲ 3 ಕೋಟಿ ಜನರ ಹೆಸರುಗಳು 2003ರ ಮತದಾರರ ಪಟ್ಟಿಯಲ್ಲಿದ್ದವು. ಉಳಿದ 5 ಕೋಟಿ ಜನರು ತಮ್ಮ ಪೌರತ್ವದ ಪುರಾವೆಗಳನ್ನು ಈಗ ಒದಗಿಸಬೇಕಾಗಿದೆ. ಅವರಲ್ಲಿ ಬಹುಪಾಲು ಜನ ಅನಕ್ಷರಸ್ಥರು, ಬಡವರು, ವಲಸೆ ಕಾರ್ಮಿಕರು. ಚುನಾವಣಾ ಆಯೋಗ ಕೇಳುತ್ತಿರುವ ಪ್ರಮಾಣಪತ್ರಗಳನ್ನು ಹೊಂದಿದ್ದರೂ, ಸಕಾಲಕ್ಕೆ ಸಲ್ಲಿಸಲಾಗದವರು. ಅಂದರೆ, ಆಯೋಗದ ‘ಪರಿಷ್ಕರಣೆ’ಯಿಂದಾಗಿ, ಈ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ.
ಜೂನ್ 24ರಂದು ಆಯೋಗ ಹೊರಡಿಸಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆದೇಶ ಸಂವಿಧಾನದ 14, 19(1)(ಎ), 21, 325, 328ರ ವಿಧಿ ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ–1950, ಮತದಾರ ನೋಂದಣಿ ನಿಯಮ–1960ರ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಟಿಎಂಸಿ ಸಂಸದೆ ಮಹುವಾ ಮೊಹಿತ್ರ ಆದೇಶವನ್ನು ವಜಾ ಮಾಡುವಂತೆ ಸಾರ್ವಜನಿಕ ಹಿತಾಸಕ್ತಿಯಡಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಕೋರಿದ್ದಾರೆ.
ಇದನ್ನು ಓದಿದ್ದೀರಾ?: ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ: ಜುಲೈ 10 ರಂದು ಸುಪ್ರೀಂನಿಂದ ಚುನಾವಣಾ ಆಯೋಗ ನಿರ್ಧಾರ ಪ್ರಶ್ನಿಸುವ ಅರ್ಜಿಗಳ ವಿಚಾರಣೆ
ಮಹುವಾ ಅವರಷ್ಟೇ ಅಲ್ಲದೆ ಸ್ವಯಂ ಸೇವಾ ಸಂಸ್ಥೆಗಳಾದ ಎಡಿಆರ್, ಪಿಯುಸಿಎಲ್, ಸಾಮಾಜಿಕ ಹೋರಾಟಗಾರರಾದ ಯೋಗೇಂದ್ರ ಯಾದವ್ ಸೇರಿ ಹಲವರು ಆಯೋಗದ ಕ್ರಮವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಲಕ್ಷಾಂತರ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಪ್ರಯತ್ನ ಇದು ಎನ್ನುವುದು ಎಲ್ಲರ ಒಕ್ಕೊರಲಿನ ವಿರೋಧವಾಗಿದೆ.
ಏನತ್ಮಧ್ಯೆ ಜುಲೈ 9ರಂದು ಎಡಪಕ್ಷಗಳ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್ ಸಂದರ್ಭದಲ್ಲಿ ಬಿಹಾರದಲ್ಲಿ ಈ ವಿಚಾರವನ್ನೂ ಮುಂದಿಡಲು ಇಂಡಿಯಾ ಒಕ್ಕೂಟದ ಪಕ್ಷಗಳು ನಿರ್ಧರಿಸಿವೆ.
ಮಹತ್ವದ ಬೆಳವಣಿಗೆ ಎಂದರೆ, ಸೋಮವಾರ ಸುಪ್ರೀಂ ಕೋರ್ಟ್, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮಾಡುವ ಕೇಂದ್ರ ಚುನಾವಣಾ ಆಯೋಗದ ಕ್ರಮದ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಸಮ್ಮತಿಸಿದೆ. ಜುಲೈ 10ರ ಗುರುವಾರದಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಪೀಠ ಹೇಳಿದೆ.
ಬಿಹಾರದ ಮತದಾರ ಪಟ್ಟಿ ಪರಿಷ್ಕರಣೆಯ ಹಿಂದೆ ಕೇಂದ್ರ ಸರ್ಕಾರದ ಒತ್ತಡವಿದೆ. ಆ ಒತ್ತಡದ ಹಿಂದೆ ಬಿಜೆಪಿಯ ಮುಸ್ಲಿಮರ ವಿರುದ್ಧದ ಷಡ್ಯಂತ್ರವಿದೆ. ಅದನ್ನವರು ಮರೆಮಾಚಲು ಬಾಂಗ್ಲಾದೇಶಿಯರ ನುಸುಳುವಿಕೆಯನ್ನು ಮುಂದು ಮಾಡುತ್ತಿದ್ದಾರೆ. ಅಷ್ಟಕ್ಕೂ ಬಿಹಾರದಲ್ಲಿ ಅಕ್ರಮ ವಿದೇಶಿ ನುಸುಳುಕೋರರ ಸಮಸ್ಯೆ ಇದ್ದರೆ, ಅದು ಬಾಂಗ್ಲಾದೇಶದಿಂದ ಬರುವ ಮುಸ್ಲಿಮರಲ್ಲ, ಬದಲಾಗಿ ನೇಪಾಳಿ ಹಿಂದೂಗಳದು. ಈ ಸತ್ಯ ಗೊತ್ತಿದ್ದೂ ಬಿಜೆಪಿ, ಪರಿಷ್ಕರಣೆಯ ನೆಪದಲ್ಲಿ ಮುಸ್ಲಿಮರ ಮತದಾನದ ಹಕ್ಕನ್ನು ಮೊಟಕುಗೊಳಿಸಲು, ತಮ್ಮನುಕೂಲಕ್ಕೆ ಒದಗಿಬರುವ ಮತದಾರರನ್ನು ಸೇರ್ಪಡೆಗೊಳಿಸಲು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ದುರದೃಷ್ಟಕರ ಸಂಗತಿ ಎಂದರೆ, ಆಯೋಗವು ಸಂವಿಧಾನದ ಅಡಿಯಲ್ಲಿ ಸನ್ನಿವೇಶವನ್ನು ನಿಭಾಯಿಸಲು ಕೆಲವು ಅಧಿಕಾರವನ್ನು ಹೊಂದಿದೆ ಎಂಬುದನ್ನೇ ಮರೆತಿದೆ. ಆಳುವ ಸರ್ಕಾರದ ಆಜ್ಞೆ-ಆದೇಶಗಳಿಗೆ ತಲೆಬಾಗಿದೆ.
ಟಿ.ಎನ್. ಶೇಷನ್ ಅವರು ಚುನಾವಣಾ ಆಯುಕ್ತರಾಗಿದ್ದಾಗ, ಆಯೋಗಕ್ಕೊಂದು ಘನತೆ, ಗೌರವವಿತ್ತು. ಆದರೆ, 2014ರ ನಂತರ, ನರೇಂದ್ರ ಮೋದಿಯವರು ಪ್ರಧಾನಿಗಳಾದ ಮೇಲೆ, ಸಾಂವಿಧಾನಿಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಿದಂತೆ ಚುನಾವಣಾ ಆಯೋಗವನ್ನೂ ಹಳ್ಳ ಹಿಡಿಸಿದರು. ತಮಗೆ ಬೇಕಾದ, ಹೇಳಿದಂತೆ ಕೇಳುವ ವ್ಯಕ್ತಿಗಳನ್ನು ಆಯುಕ್ತರನ್ನಾಗಿ ನೇಮಕ ಮಾಡಿ, ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಪೌರತ್ವ ಪ್ರಮಾಣಪತ್ರ ನೀಡುವುದು ಚುನಾವಣಾ ಆಯೋಗದ ಕೆಲಸವಲ್ಲ; ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಹೀಗಂದಿದ್ದೇಕೆ?
2024ರ ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಬಳಿಕ, ಮತದಾರರ ಪಟ್ಟಿಯಲ್ಲಾದ ಏರುಪೇರಿನಿಂದ ಚುನಾವಣಾ ಆಯೋಗ ವಿಶ್ವಾಸಾರ್ಹತೆ ಕಳೆದುಕೊಂಡಿತ್ತು. ಈಗ ಬಿಹಾರದಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಆಯೋಗ ಅಂತಹುದೇ ಕೃತ್ಯವೆಸಗುತ್ತಿದೆ. ಇದು ಬಿಹಾರಕ್ಕಷ್ಟೇ ಸೀಮಿತವಾಗದೆ, ಮುಂದೆ ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು ವಿಧಾನಸಭಾ ಚುನಾವಣೆಗಳ ಮೇಲೂ ಪರಿಣಾಮ ಬೀರಬಹುದೆಂಬ ಆತಂಕ ಶುರುವಾಗಿದೆ.
ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ, ಮುಕ್ತ-ನ್ಯಾಯಸಮ್ಮತ ಚುನಾವಣೆ ನಡೆಸದೆ; ತನ್ನ ಕರ್ತವ್ಯ ನಿಭಾಯಿಸದೆ ವಿಫಲಗೊಂಡಿದೆ. ಆಳುವ ಪಕ್ಷದ ಕೈಗೊಂಬೆಯಾಗಿ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತಂದಿದೆ. ಆಯೋಗದ ಈ ನಡೆ ದೇಶದ ಜನರಲ್ಲಿ ಅನುಮಾನಗಳನ್ನು ಹುಟ್ಟಿಸಿದೆ; ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದೆ. ಇದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿ, ಆಯೋಗದ ಅವಶ್ಯಕತೆಯ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಬೇಕಾಗಿದೆ.
