ಬಿಬಿಎಂಪಿ ವ್ಯಾಪ್ತಿಯಲ್ಲಿ ರೇಬೀಸ್ ನಿರ್ಮೂಲನೆಗಾಗಿ ಬೆಂಗಳೂರು ನಗರದಾದ್ಯಂತ ಮೀಸಲು ವಾಹನದ ಮೂಲಕ ಸಾಮೂಹಿಕ ರೇಬಿಸ್ ಜಾಗೃತಿ ಮೂಡಿಸಲಾಗುವುದೆಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಶ್ವ ಝೂನೋಸಿಸ್ ದಿನದ ಭಾಗವಾಗಿ ರೇಬಿಸ್ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಜಾಗೃತಿ ಮೂಡಿಸುವ ವಾಹನಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
“ಪ್ರಾಣಿಗಳಿಂದ ವಿವಿಧ ರೀತಿಯ ರೋಗಗಳು ಮನುಷ್ಯರಿಗೆ ಹರಡುತ್ತವೆ. ಮನುಷ್ಯರು ನಾಯಿಗಳ ಜೊತೆ ಹೆಚ್ಚು ಸಂಪರ್ಕದಲ್ಲಿದ್ದು, ನಾಯಿಗಳು ಕಚ್ಚಿದಾಗ ಹೆಚ್ಚು ಸಮಸ್ಯೆಗಳಾಗುವ ಸಂಭವವಿದೆ. ಆ ಕಾರಣ ಪ್ರಾಣಿಗಳಿಗೆ ನಿರಂತರವಾಗಿ ರೇಬಿಸ್ ಲಸಿಕೆ ಹಾಕಿಸಬೇಕು. ರೇಬಿಸ್ ಕುರಿತು ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸಬೇಕು. ರೋಗ ನಿತಂತ್ರಣ ಮಾಡುವ ಉದ್ದೇಶದಿಂದ ಪಾಲಿಕೆ ಎಲ್ಲಾ ವಾರ್ಡ್‌ಗಳಲ್ಲಿ ಎಲ್.ಇ.ಡಿ ವಾಹನದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ನಗರದಾದ್ಯಂತ ತೆರಳಿ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದೆಂದು” ಹೇಳಿದರು.

ಪಾಲಿಕೆಯ ಎಲ್ಲಾ ವಾರ್ಡ್‌ಗಳಿಗೆ ವಾಹನ ಸಂಚರಿಸುವುದರ ಜೊತೆಗೆ ಪಾಲಿಕೆ, ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಗೆ ತೆರಳಿ, ರೇಬಿಸ್ ರೋಗ ನಿಯಂತ್ರಣದ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ವಿಶ್ವ ಝೂನೋಸಸ್ ದಿನದ ಕುರಿತು:
ಝೂನೋಸಸ್ ಎಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳು. ಪ್ರಾಣಿಗಳಲ್ಲಿರುವ ವೈರಸ್, ಬ್ಯಾಕ್ಟೀರಿಯಾ ಮತ್ತು ಇತರೆ ಸೂಕ್ಷ್ಮಾಣುಗಳಿಂದ ನೇರ ಸಂಪರ್ಕ, ಗಾಳಿ, ನೀರು, ಆಹಾರ, ಪ್ರಾಣಿಗಳ ಜೊಲ್ಲಿನ ಮೂಲಕ ಮನುಷ್ಯರಿಗೆ ಸೋಂಕು ತಗಲುತ್ತದೆ. ಈ ಕುರಿತು ವಿಶ್ವ ಝೂನೋಸಸ್ ದಿನದಂದು ಜಾಗೃತಿ ಮೂಡಿಸಲಗುತ್ತದೆ. ಮನುಷ್ಯರಿಗೆ ಗೊತ್ತಿರುವ ಶೇ. 60ಕ್ಕೂ ಹೆಚ್ಚು ರೋಗಗಳು ಪ್ರಾಣಿಜನ್ಯವಾಗಿವೆ. ಈ ದಿನವು ಮನುಷ್ಯರು ಮತ್ತು ಪ್ರಾಣಿಗಳ ರೋಗಗಳು ಮತ್ತು ಅವುಗಳ ಆರೋಗ್ಯದ ಅಂತರ್-ಸಂಬಂಧದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಈ ದಿನವು ಏಕೀಕೃತ ಆರೋಗ್ಯದ ಮೂಲಕ ಪ್ರಾಣಿಜನ್ಯ ರೋಗಗಳ ನಿಯಂತ್ರಣದ ಮಹತ್ವವನ್ನು ಎತ್ತಿ ಹಿಡಿಯುತ್ತದೆ.
ರೇಬಿಸ್ ರೋಗದ ಕುರಿತು:
ರೇಬಿಸ್ ರೋಗವು ಒಂದು ವೈರಾಣುವಿನಿಂದ ಹರಡುವ ಝೂನೋಟಿಕ್ ರೋಗವಾಗಿದ್ದು, ಲಸಿಕಾಕರಣದಿಂದ ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ. ಈ ರೋಗವು ಪ್ರಾಣಿಗಳ ಜೊಲ್ಲಿನಿಂದ ಕಚ್ಚುವುದು, ನೆಕ್ಕುವುದು ಮತ್ತು ತರಚುಗಾಯಗಳಿಂದ ಹರಡುತ್ತದೆ. ರೇಬಿಸ್ ರೋಗದಿಂದ ಪ್ರಪಂಚದಾದ್ಯಂತ ವಾರ್ಷಿಕ ಅಂದಾಜು 59,000ಕ್ಕೂ ಹೆಚ್ಚು ಮರಣಗಳು ಸಂಭವಿಸುತ್ತಿದ್ದು, ಶೇ. 97ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನಾಯಿಗಳು ಕಾರಣವಾಗಿವೆ. ರೇಬಿಸ್ ರೋಗಕ್ಕೆ ಪ್ರತೀ 9 ನಿಮಿಷಕ್ಕೆ ಒಂದು ಮರಣ ಸಂಭವಿಸುತ್ತಿದ್ದು, ಅದರಲ್ಲಿ ಶೇ. 40 ರಷ್ಟು 15 ವರ್ಷಕ್ಕಿಂತ ಕೆಳಗಿನ ಮಕ್ಕಳ ಪ್ರಕರಣಗಳಾಗಿವೆ.
2030 ಕ್ಕೆ ರೇಬೀಸ್ ಮುಕ್ತಗೊಳಿಸುವ ಗುರಿ:
ಬಿಬಿಎಂಪಿಯ ಪಶುವೈದ್ಯಕೀಯ ಮಹಾವಿದ್ಯಾಲಯ- WOAH ರೆಫೆರೆನ್ಸ್ ರೇಬಿಸ್ ರೋಗನಿರ್ಣಯ ಪ್ರಯೋಗಾಲಯ, ಚಾರ್ಲೀʼಸ್ ಮತ್ತು ಡಬ್ಲ್ಯೂವಿಎಸ್- ಮಿಷನ್ ರೇಬಿಸ್ ಸಂಸ್ಥೆಗಳ ಜೊತೆಯಲ್ಲಿ 2030ರ ವೇಳೆಗೆ ರೇಬಿಸ್ ನಿರ್ಮೂಲನೆ ಮಾಡಲು ಮತ್ತು ಬೆಂಗಳೂರು ನಗರವನ್ನು ರೇಬಿಸ್ ಮುಕ್ತಗೊಳಿಸಲು ಕೆಲಸ ಮಾಡುತ್ತಿದೆ ಮತ್ತು ಇದಕ್ಕಾಗಿ ನಾಯಿಗಳ ಸಾಮೂಹಿಕ ಲಸಿಕಾಕರಣ ಮತ್ತು ಅತ್ಯಾಧುನಿಕ ಹಾಗೂ ಸುಸಜ್ಜಿತ ರೇಬಿಸ್ ಸರ್ವೇಕ್ಷಣೆಯನ್ನು ಅಳವಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಬೆಂಗಳೂರು | ಪತ್ನಿಗೆ ಕಿರುಕುಳ; ಡಿವೈಎಸ್‌ಪಿ ವಿರುದ್ಧ ಎಫ್‌ಐಆರ್
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮಗಳು:
- ಭಾರತೀಯ ವಿಜ್ಞಾನ ಸಂಸ್ಥೆಯ ಜೊತೆ “ಬೆಂಗಳೂರು ಸೈನ್ಸ್ ಅಂಡ್ ಟೆಕ್ನಾಲಜಿ ಕ್ಲಸ್ಟರ್” ಸ್ಥಾಪನೆ
- “ಐ ಆಮ್ ಒನ್ ಹೆಲ್ತ್” ಕಾರ್ಯಕ್ರಮ: ವಿಶ್ವೇಶ್ವರಯ್ಯ ತಾಂತ್ರಿಕ ಮ್ಯೂಸಿಯಮ್ ನಲ್ಲಿ ಡೆಂಗ್ಯೂ, ನಾಯಿ ಕಡಿತ, ರೇಬೀಸ್ ಮತ್ತು ಇತರೆ ಪ್ರಾಣಿಜನ್ಯ ರೋಗಗಳ ಬಗ್ಗೆ ಅರಿವು ಮೂಡಿಸಲಾಗಿದೆ.
- ನಾಯಿಗಳ ಸಾಮೂಹಿಕ ಸಂತಾನಹರಣ, ಲಸಿಕಾಕರಣ ಮತ್ತು ರಕ್ಷಣಾ ಕಾರ್ಯಕ್ರಮಗಳು: ಈ ಕಾರ್ಯಕ್ರಮಗಳು ನಾಯಿಗಳಿಂದ ಹರಡುವ ಪ್ರಾಣಿಜನ್ಯ ರೋಗಗಳ ನಿಯಂತ್ರಣದಲ್ಲಿ ಯಶಸ್ವಿಯಾಗಿವೆ.
- 5-ಇನ್-1 ಕಂಬೈನ್ಡ್ ಲಸಿಕೆ: ನಾಯಿಗಳಲ್ಲಿ ಸಾಂಕ್ರಾಮಿಕ ರೋಗಗಳು ಮತ್ತು ಲೆಪ್ಟೋಸ್ಪೈರೋಸಿಸ್ ನಂತಹ ಪ್ರಾಣಿಜನ್ಯ ರೋಗಗಳ ನಿಯಂತ್ರಣಕ್ಕಾಗಿ ಅನುಷ್ಠಾನಗೊಳಿಸಲಾಗಿದೆ.
- ನಾಯಿಗಳಿಗೆ ಓರಲ್ ರೇಬೀಸ್ ನಿರೋಧಕ ಲಸಿಕೆ: ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಆರೋಗ್ಯ ಮಂತ್ರಾಲಯ, ಬಾರತ ಸರ್ಕಾರದ ಅಡಿಯಲ್ಲಿನ ರಾಷ್ಟ್ರೀಯ ಏಕೀಕೃತ ಆರೋಗ್ಯ ಮಿಷನ್ ಅಡಿಯಲ್ಲಿ ಓರಲ್ ರೇಬೀಸ್ ನಿರೋಧಕ ಲಸಿಕೆ ಅಭಿವದ್ಧಿ ಪಡಿಸಲು ಸಹಕಾರ ನೀಡಲಾಗುತ್ತಿದೆ. ಇದರಿಂದ ಸಾಮೂಹಿಕ ಲಸಿಕಾಕರಣದ ಸಂಖ್ಯೆಯನ್ನು ಹೆಚ್ಚಿಸಬಹುದಾಗಿದೆ.
ಈ ವೇಳೆ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕಡಾ. ಚಂದ್ರಯ್ಯ, ಮುಖ್ಯ ಆರೋಗ್ಯಾಧಿಕಾರಿ ಡಾ. ಎಸ್.ಎಸ್ ಮದನಿ, ಚಾರ್ಲೀʼಸ್ ರೆಸ್ಕ್ಯೂ ಸಂಸ್ಥೆಯ ಸ್ಥಾಪಕ ಟ್ರಸ್ಟೀ ಸುಧಾ ನಾರಾಯಣನ್, ಮಿಷನ್ ರೇಬಿಸ್ ಸಂಸ್ಥೆಯ ನಿರ್ದೇಶಕ ಡಾ. ಬಾಲಾಜಿ ಚಂದ್ರಶೇಖರ್, ವಲಯ ಆರೋಗ್ಯಾಧಿಕಾರಿಗಳು, ಪಶುಪಾಲನಾ ವಿಭಾಗದ ಸಹಾಯ ನಿರ್ದೇಶಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.