ರಾಷ್ಟ್ರೀಯ ಹೆದ್ದಾರಿ 169ಎ ಮಣಿಪಾಲದಿಂದ ಪರ್ಕಳ ಸಂಪರ್ಕಿಸುವ ನಡುವೆ ಈಶ್ವರನಗರ ಕೆಳಪರ್ಕಳ ಭಾಗದಲ್ಲಿ ಕಾಮಗಾರಿ ಮೊಟಕುಗೊಂಡು ಹಲವು ವರ್ಷಗಳೇ ಕಳೆದಿವೆ. ತಾಂತ್ರಿಕ ಮತ್ತು ಕಾನೂನು ಕಾರಣಗಳಿಂದ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಮರು ಆರಂಭಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಜನರು ಆಕ್ರೋಶಿತರಾಗಿದ್ದಾರೆ.
ಈ ನಡುವೆ, ಪರ್ಯಾಯ ರಸ್ತೆಯು ವಾಹನ ಸಂಚರಿಸಲಾಗದಷ್ಟು ಹದಗೆಟ್ಟು ಹೋಗಿದೆ. ಇದರಿಂದ ರೋಸಿ ಹೋಗಿರುವ ಸ್ಥಳೀಯರು, ನಿತ್ಯ ವಾಹನ ಸವಾರರು ಇದೀಗ ಪ್ರತಿಭಟನೆಗೆ ಮುಂದಾಗಿದ್ದಾರೆ. ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವ ವಿಚಾರವನ್ನು ಸಂಬಂಧ ಜಿಲ್ಲಾಡಳಿತ, ಅಧಿಕಾರಿಗಳು, ಜನಪ್ರತಿನಿಧಿಗಳು ಗಂಭೀರ ವಾಗಿ ಪರಿಗಣಿಸಿಲ್ಲ ಮತ್ತು ಪರ್ಯಾಯ ರಸ್ತೆಯಲ್ಲಿ ನಿತ್ಯ ಸಂಚಾರ ಸಮಸ್ಯೆಯಾಗುತ್ತಿದ್ದರೂ ನಗರಸಭೆ, ರಾ.ಹೆ. ಪ್ರಾಧಿಕಾರ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಸ್ಥಳೀಯವಾಗಿ ಕೇಳಿ ಬರುತ್ತಿದೆ.

ಹೆದ್ದಾರಿ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳ್ಳಬೇಕು ಮತ್ತು ಅಲ್ಲಿಯ ವರೆಗೂ ಪರ್ಯಾಯ ರಸ್ತೆಯನ್ನು ಡಾಮರೀಕರಣ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿ ಮಂಜುನಾಥ ನಗರದ ನಿವಾಸಿಗಳು ಹಾಗೂ ಸ್ಥಳೀಯರು ಸೇರಿ ಪರ್ಕಳದ ನಾರಾಯಣ ಗುರು ಮಂದಿರ ತಿರುವಿನ ಬಳಿ ಮೊದಲ ಹಂತದ ಪ್ರತಿಭಟನೆ ನಡೆಸಿದ್ದಾರೆ.
ಕೆಳ ಪರ್ಕಳದಿಂದ ಪರ್ಕಳದ ವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಸಹಿತ ಕೆಲವು ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದೆ. ರಸ್ತೆ ನಿರ್ಮಾಣಕ್ಕಾಗಿ ಸುಮಾರು 2000ಕ್ಕೂ ಅಧಿಕ ಲೋಡ್ ಮಣ್ಣನ್ನು ತಗ್ಗು ಪ್ರದೇಶಕ್ಕೆ ತುಂಬಿಸಿ ಸಮತಟ್ಟು ಮಾಡಲಾಗಿದೆ. ಈ ಭಾಗದಲ್ಲಿ ಇದೀಗ ದೊಡ್ಡದೊಡ್ಡ ಗಿಡಮರ ಹಾಗೂ ಪೊದೆ ಬೆಳೆದಿದೆ.
ಮಣಿಪಾಲ, ಉಡುಪಿ ಸಂಪರ್ಕಿಸುವ ಅತಿಮುಖ್ಯ ರಸ್ತೆ ಇದಾಗಿದ್ದರೂ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಬಗ್ಗೆ ಸಾಮಾಜಿಕ ಹೋರಾಟಗಾರರಾದ ಡಾ| ಪಿ.ವಿ. ಭಂಡಾರಿ ಪ್ರತಿಕ್ರಿಯಿಸಿದ್ದು ಈಗಾಗಲೇ ಸ್ಥಳಿಯರನ್ನು ಒಳಗಂಡ ಮೊದಲ ಹಂತದ ಪ್ರತಿಭಟನೆ ನಡೆಸಿದ್ದೇವೆ, ಇದಕ್ಕೆ ಸ್ಪಂದನೆ ಸಿಗದೇ ಇದ್ದರೆ ಮುಂದಿನ ಹಂತವಾಗಿ ಕಾಲ್ನಡಿಗೆ, ರಸ್ತೆ ತಡೆ ಇತ್ಯಾದಿಗಳನ್ನು ನಡೆಸಲಿದ್ದೇವೆ. ಹೊಸ ಹೆದ್ದಾರಿ ರಸ್ತೆ ನಿರ್ಮಾಣ ಆಗದೇ ಇರುವುದರಿಂದ ಈ ಹಿಂದೆ ವಾಹನ ಸಂಚಾರ ಮಾಡುತ್ತಿದ್ದ ಹಳೇ ರಸ್ತೆಯಲ್ಲೇ ಈಗಲೂ ವಾಹನಗಳು ಸಂಚರಿಸುತ್ತಿವೆ. ಕೆಳಪರ್ಕಳ ಹಾಗೂ ಪರ್ಕಳದ ಸಮೀಪದಲ್ಲಿ ರಸ್ತೆಯಲ್ಲಿ ದೊಡ್ಡದೊಡ್ಡ ಹೊಂಡ ಎದ್ದಿದೆ. ಡಾಮರು ಹಾಕಿ ಸುಸಜ್ಜಿತ ರಸ್ತೆ ಮಾಡಿಕೊಡುವಂತೆ ಸ್ಥಳೀಯರು ಈ ಹಿಂದೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಯಾರೂ ಕೂಡ ಇದನ್ನು ಈವರೆಗೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆ ವೆಟ್‌ಮಿಕ್ಸ್ ಹಾಕುವ ಪ್ರಸಹನ ಅಷ್ಟೆ ಮಾಡುತ್ತಿದ್ದಾರೆ. ಕರಾವಳಿ ಮಳೆಗೆ ಇಳಿಜಾರು ರಸ್ತೆಯಲ್ಲಿ ವೆಟ್‌ಮಿಕ್ಸ್ ಹಾಕಿ ಗುಂಡಿ ಮುಚ್ಚಲು ಸಾಧ್ಯವೇ ಇಲ್ಲ ಎಂಬ ಸತ್ಯ ಅಧಿಕಾರಿಗಳಿಗೆ ಗೊತ್ತಿದ್ದರೂ ಅದನ್ನೇ ಮಾಡುತ್ತಿದ್ದಾರೆ ಎಂದು ಹೇಳಿದರು.
ಪರ್ಕಳ ರಸ್ತೆ ಎಂದರೆ ದಿನನಿತ್ಯದ ಅಪಘದ ವಲಯವಾಗಿ ಮಾರ್ಪಟ್ಟಿದೆ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ರಸ್ತೆ ವ್ಯವಸ್ಥೆಯನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಕೊಡಬೇಕಾಗಿದೆ.
